ನಾವು ಮಾಡುವ ಕಾರ್ಯದಲ್ಲಿ ಕೆಲವೊಮ್ಮೆ ಸೋಲು ಮತ್ತು ಅವಮಾನಳಿಂದಾಗ ನಮಗೇ ಅರಿವಿಲ್ಲದಂತೆಯೇ ನಮ್ಮಲ್ಲಿ ಒಂದು ರೀತಿಯ ಸಾತ್ವಿಕ ಕಿಚ್ಚು ಉಂಟಾಗಿ ಆ ಸೋಲನ್ನೇ ಮೆಟ್ಟಿಲು ಮಾಡಿಕೊಂಡು ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಗೆಲುವನ್ನು ಪಡೆದಂತಹ ಅನೇಕ ಉದಾಹರಣೆಗಳನ್ನು ನಾವು ಅನೇಕ ಕಡೆ ಓದಿದ್ದೇವೆ. ಆದರೆ ಇಂದು ಅಂತಹದ್ದೇ ಘಟನೆಯೊಂದು ನಮ್ಮ ಕಣ್ಣ ಮುಂದೆಯೇ ನಡೆದು ಅದಕ್ಕೆ ಸಾಕ್ಷೀಭೂತರಾದಂತಹ ಅಭೂತಪೂರ್ವ ಅನುಭವ ನಿಜಕ್ಕೂ ಅವರ್ಣನೀಯ.
ಖಗೋಳ ಶಾಸ್ತ್ರದಲ್ಲಿ ಭಾರತೀಯರ ಪ್ರಾಭಲ್ಯ ಇಂದು ನೆನ್ನೆಯದಲ್ಲಾ. ಆರ್ಯಭಟ ಮತ್ತು ಭಾಸ್ಕರಾಚಾರ್ಯರಂತಹ ವಿಜ್ಞಾನಿಗಳು ಇಂದಿನ ಯಾವುದೇ ರೀತಿಯ ಆಧುನಿಕ ತಂತ್ರಜ್ಞಾನವಾಗಲೀ, ಉಪಕರನವಾಗಲೀ ಇಲ್ಲದೇ ಇರುವಾಗಲೇ ಬರಿಗಣ್ಣಿನಿಂದಲೇ ಕರಾರುವಾಕ್ಕಾಗಿ ಖಗೋಳದಲ್ಲಿ ನಡೆಯುತ್ತಿದ್ದ ಮತ್ತು ಮುಂದೆ ನಡೆಯಬಹುದಾದ ವಿದ್ಯಮಾನಗಳನ್ನು ನಿಖರವಾಗಿ ದಾಖಲಿಸುತ್ತಿದ್ದರು. ಇಂದಿಗೂ ಸಹಾ ಪಂಚಾಂಗ ಕತೃಗಳು ಕೇವಲ ಲೆಖ್ಖಾಚಾರಗಳಿಂದಲೇ ನಭದಲ್ಲಿ ಆಗ ಬಹುದಾದ ಸೂರ್ಯಗ್ರಹಣ, ಚಂದ್ರ ಗ್ರಹಣ ಮತ್ತಿತರ ಗ್ರಹ ಮತ್ತು ಉಪಗ್ರಹಗಳ ಚಲನವಲಗಳನ್ನು ಆಧರಿಸಿಯೇ ಮಳೆ ಬೆಳೆಗಳ ಜೊತೆ ಶುಭ ಮತ್ತು ಲಶುಭಗಳನ್ನು ಪಂಚಾಂಗದಲ್ಲಿ ಬರೆಯುತ್ತಲೇ ಬಂದಿದ್ದಾರೆ.
ಸ್ವಾತ್ರಂತ್ರ್ಯಾ ನಂತರ ದೇಶದ ಪ್ರಗತಿಗಾಗಿ ಬಾಹ್ಯಾಕಾಶವನ್ನು ಬಳಸಿಕೊಳ್ಳುವ ಸಲುವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO 1969 ರಲ್ಲಿಅಧಿಕೃತವಾಗಿ ಆರಂಭಗೊಂಡು ಬಾಹ್ಯಾಕಾಶ-ಆಧಾರಿತ ಕಾರ್ಯಾಚರಣೆಗಳು, ಬಾಹ್ಯಾಕಾಶ ಪರಿಶೋಧನೆ, ಅಂತರಾಷ್ಟ್ರೀಯ ಬಾಹ್ಯಾಕಾಶ ಸಹಕಾರ ಮತ್ತು ಸಂಬಂಧಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಕೊಂಡು ಬಂದಿದೆ.

1975 ರಲ್ಲಿ ISRO ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ನಿರ್ಮಾಣ ಮಾಡಿ ಅದನ್ನು ಸೋವಿಯತ್ ಬಾಹ್ಯಾಕಾಶ ಸಂಸ್ಥೆ ಇಂಟರ್ಕೊಸ್ಮಾಸ್ ಮೂಲಕ ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶದಲ್ಲಿ ಭಾರತದ ಛಾಪನ್ನು ಪ್ರಪ್ರಥಮಬಾರಿಗೆ ಮೂಡಿಸಿದರೆ, ನಂತರ 1980 ರಲ್ಲಿ, ISRO ಉಪಗ್ರಹ RS-1 ಅನ್ನು SLV-3 ಆನ್‌ಬೋರ್ಡ್‌ನಲ್ಲಿ ಉಡಾವಣೆ ಮಾಡುವ ಮೂಲಕ ಕಕ್ಷೆಯ ಉಡಾವಣೆಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಏಳನೇ ರಾಷ್ಟ್ರವಾಗಿ ಭಾರತ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿತು.

3 ಏಪ್ರಿಲ್ 1984 ರಂದು ಇಸ್ರೋ ಮತ್ತು ಸೋವಿಯತ್ ಒಕ್ಕೂಟದ ಸಹಯೋಗದೊಂದಿಗೆ ಇಂಟರ್‌ಕೋಸ್ಮಾಸ್ ಕಾರ್ಯಕ್ರಮದ ಭಾಗವಾಗಿ ಸೋಯುಜ್ T-11 ನಲ್ಲಿ ಭಾರತೀಯ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಪ್ರಪ್ರಥಮ ಭಾರತೀಯರಾಗಿದ್ದರು. ರಾಕೇಶ್ ಶರ್ಮಾ ಆವರು ಬಾಹ್ಯಾಕಾಶದಲ್ಲಿ ಇರುವಾಗಲೇ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿ ಯವರೊಂದಿಗೆ ನೇರ ಸಂಪರ್ಕದಲ್ಲಿ ಮಾತಾನಾಡುವಾಗ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತಿದೆ ? ಎಂದು ಕೇಳಿದಾಗ ಸಾರಾ ಜಹಾಂಸೇ ಅಚ್ಚಾ ಹಿಂದೂ ಸಿತಾನ್ ಹಮಾರಾ ಎಂದು ರಾಕೇಶ್ ಶರ್ಮಾ ಅವರು ಹೇಳಿದ್ದದ್ದು ಇನ್ನೂ ಕೋಟ್ಯಾಂತರ ಭಾರತೀಯರ ಮನದಲ್ಲಿ ಹಚ್ಚ ಹಸಿರಾಗಿಯೇ ಇದೆ.

1990 ರ ದಶಕದಲ್ಲಿ PSLV ಆಗಮನವು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪ್ರಮುಖ ಉತ್ತೇಜನ ನೀಡಿದ್ದಲ್ಲದೇ, 1994 ರಲ್ಲಿ ಆರಂಭದಲ್ಲಿ ಒಂದೆರಡು ಭಾಗಶಃ ವೈಫಲ್ಯಗಳನ್ನು ಹೊರತುಪಡಿಸಿ, PSLV ಇದುವರೆವಿಗೂ ಸುಮಾರು 50 ಕ್ಕೂ ಹೆಚ್ಚು ಯಶಸ್ವಿ ಹಾರಾಟಗಳ ಸರಣಿಯನ್ನು ಹೊಂದಿರುವುದು ಗಮನಾರ್ಹವಾಗಿದೆ. ಈ ಮೂಲಕ PSLV ಮೂಲಕ ಭಾರತವು ತನ್ನ ಕಡಿಮೆ ಭೂಸಮೀಪ ಕಕ್ಷೆಯ ಉಪಗ್ರಹಗಳನ್ನು, GTO ಗೆ ಸಣ್ಣ ಪೇಲೋಡ್‌ಗಳನ್ನು ಮತ್ತು ನೂರಾರು ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲು ಅನುವು ಮಾಡಿಕೊಟ್ಟಿತು.

ಪಿಎಸ್‌ಎಲ್‌ವಿ ಹಾರಾಟದ ಜೊತೆಗೆ ಹೊಸ ರಾಕೆಟ್‌ನ ಅಭಿವೃದ್ಧಿ ಪಡಿಸುವ ಸಲುವಾಗಿ ರಷ್ಯಾದ ಗ್ಲಾವ್‌ಕೋಸ್ಮಾಸ್‌ನಿಂದ ಮೂಲಕ ಮುಂದಿನ ಹಂತದ ಕ್ರಯೋಜೆನಿಕ್ ಎಂಜಿನ್‌ಗಳನ್ನು ಪಡೆಯಲು ಪ್ರಯತ್ನಿಸಿದಾಗ ಅಮೇರಿಕಾ ದೇಶ ಅದಕ್ಕೆ ನಿರ್ಭಂಧವನ್ನು ಹೇರಿದ ಪರಿಣಾಮವಾಗಿ KVD-1 ಎಂಜಿನ್‌ಗಳನ್ನು ಹೊಸ ಒಪ್ಪಂದದ ಅಡಿಯಲ್ಲಿ ರಷ್ಯಾದಿಂದ ಆಮದು ಮಾಡಿಕೊಳ್ಳಲಾಯಿತಾದರೂ, ಸ್ವಾವಲಂಭನೆಯ ದೃಷ್ಟಿಯಿಂದ ಸ್ಥಳೀಯವಾಗಿ ನಮ್ಮದೇ ಆದ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು 1994 ರಲ್ಲಿ ಪ್ರಾರಂಭಿಸಿ ಸುಮಾರು ಎರಡು ದಶಕಗಳ ಕಾಲದ ಸತತ ಪರಿಶ್ರಮದ ನಂತರ ನಮ್ಮದೇ ಆದ ಸ್ವದೇಶೀ ತಂತ್ರಜ್ಞಾನದ ಮೂಲಕ ಇಂದು ನೂರಾರು ದೇಶೀಯ ಮತ್ತು ವಿದೇಶಿ ಉಪಗ್ರಹಗಳನ್ನು ಮತ್ತು ಬಾಹ್ಯಾಕಾಶ ಪರಿಶೋಧನೆಗಾಗಿ ವಿವಿಧ ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಇತ್ತೀಚೆಗಷ್ಟೇ ಸುಮಾರು ನೂರಕ್ಕೂ ಅಧಿಕ ಉಪಗ್ರಹಗಳನ್ನು ಏಕಕಾಲದಲ್ಲಿಯೇ ಅತ್ಯಂತ ಯಶಸ್ವಿಯಾಗಿ ಉಡವಾಣೆ ಮಾಡಿ ನಿಗಧಿತ ಕಕ್ಷೆಗೆ ಸೇರಿಸುವುದರಲ್ಲಿ ಸಫಲವಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅಮೇರಿಕಾ ದೇಶವು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳಲು ನಿರಾಕರಿಸಿದ ಪರಿಣಾಮ ಛಲಬಿಡದ ತ್ರಿವಿಕ್ರಮನಂತರ ಮತ್ತೇ ISRO ತನ್ನದೇ ಆದ ಉಪಗ್ರಹ ನ್ಯಾವಿಗೇಷನ್ ಸಿಸ್ಟಮ್ IRNSS ಅನ್ನು ಅಭಿವೃದ್ಧಿಪಡಿಸಿ ಅದರಲ್ಲೂ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
2003ರಲ್ಲಿ, ಚೀನಾ ಡೇಶವು ತನ್ನ ವಿಜ್ಞಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದಾಗ, ಅಂದಿನ ಪ್ರಧಾನ ಮಂತ್ರಿಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವೂ ಸಹಾ ಚಂದ್ರನ ಮೇಲೆ ಮಾನವರನ್ನು ಕಳುಹಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ನಮ್ಮ ಬಾಹ್ಯಕಾಶ ವಿಜ್ಞಾನಿಗಳನ್ನು ಕೋರಿಕೊಂಡಾಗ ಅದಕ್ಕೆ ಪೂರಕವಾಗಿ ಸ್ಪಂದಿಸಿದ ಇಸ್ರೋ ವಿಜ್ಞಾನಿಗಳು, 2008 ರಲ್ಲಿ ಚಂದ್ರಯಾನ-1 ಅನ್ನು ಉಡಾಯಿಸಿ, ಚಂದ್ರನ ಮೇಲೆ ನೀರಿನ ಉಪಸ್ಥಿತಿಯನ್ನು ಪರಿಶೀಲಿಸಿತು. 2013 ರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್, ಮಂಗಳದ ಕಕ್ಷೆಯನ್ನು ಪ್ರವೇಶಿಸಿದ ಮೊದಲ ಏಷ್ಯಾದ ಬಾಹ್ಯಾಕಾಶ ನೌಕೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೇ, ತನ್ನ GSLV ರಾಕೆಟ್ ಮತ್ತು ಕ್ರಯೋಜೆನಿಕ್ ಇಂಜಿನ್ ಮೂಲಕ ಸಂಪೂರ್ಣ ಉಡಾವಣಾ ಸಾಮರ್ಥ್ಯವನ್ನು ಹೊಂದಿರುವ ಆರನೇ ರಾಷ್ಟ್ರವಾಗಿ ಭಾರತ ವಿಶ್ವವಿಖ್ಯಾತವಾಯಿತು,

ಚಂದ್ರಯಾನದ ಮುಂದುವರಿದ ಭಾಗವಾಗಿ ಚಂದ್ರಯಾನ-2 ಮೂಲಕ ಎರಡನೇ ಬಾರಿ ಚಂದ್ರನ ಪರಿಶೋಧನಾ ಕಾರ್ಯಾಚರಣೆಯ ಭಾಗವಾಗಿ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಅನ್ನು ಸ್ಥಳೀಯ ತಂತ್ರಜ್ಞಾನದ ಮೂಲಕವೇ ಅಭಿವೃದ್ಧಿಪಡಿಸಿ ಚಂದ್ರನ ಮೇಲ್ಮೈ ಸಂಯೋಜನೆಯಲ್ಲಿನ ವ್ಯತ್ಯಾಸಗಳು, ಹಾಗೆಯೇ ಚಂದ್ರನ ನೀರಿನ ಸ್ಥಳ ಮತ್ತು ಸಮೃದ್ಧಿಯನ್ನು ನಕ್ಷೆ ಮಾಡುವುದು ಮತ್ತು ಅಧ್ಯಯನ ಮಾಡುವುದು ಇದರ ಮುಖ್ಯ ವೈಜ್ಞಾನಿಕ ಉದ್ದೇಶವಾಗಿತ್ತು. ಇದರ ಅಂಗವಾಗಿ, ಹಲವು ಬಾರಿ ಕಡೆಯ ಕ್ಷಣಗಳ ಉಡಾವಣೆಯ ಬದಲಾವಣೆ ನಂತರ ಅಂತಿಮವಾಗಿ ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕೇಂದ್ರದ ಮೂಲಕ ಉಡಾವಣೆ ಮಾಡಿ 20 ಆಗಸ್ಟ್ 2019 ರಂದು ಕ್ರಾಫ್ಟ್ ಚಂದ್ರನ ಕಕ್ಷೆಯನ್ನು ತಲುಪಿ ಲ್ಯಾಂಡರ್ ಮತ್ತು ರೋವರ್ಗಳನ್ನು ಸೆಪ್ಟೆಂಬರ್ 6 2019 ರಂದು ಸುಮಾರು 70 ° ದಕ್ಷಿಣ ಅಕ್ಷಾಂಶದಲ್ಲಿ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರನ ಸಮೀಪ ಭಾಗದಲ್ಲಿ ಇಳಿಸಲು ನಿರ್ಧರಿಸಿ ಅದೇ ಕಾರ್ಯದಲ್ಲೇ ನಿರತರಾಗಿರುವಾಗಲೇ, ಕೆಲವು ತಾಂತ್ರಿಕ ದೋಷದ ಪರಿಣಾಮ ಲ್ಯಾಂಡರ್ ತನ್ನ ಉದ್ದೇಶಿತ ಪಥದಿಂದ ವಿಚಲನಗೊಂಡು ಪತನಗೊಳ್ಳುವ ಮೂಲಕ ಚಂದ್ರಯಾನ-2 ವಿಫಲವಾದಾಗಾ ಅಂದಿನ ಇಸ್ರೋದ ಮುಖ್ಯಸ್ಥರಾಗಿದ್ದ 2019, ಸೆಪ್ಟೆಂಬರ್ 6 ರಂದು ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ ಅಂದಿನ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಕಣ್ಣೀರಿಟ್ಟಾಗ ಸ್ವತಃ ಪ್ರಧಾನ ಮಂತ್ರಿಗಳೇ ಈ ಬಾರಿ ಆದ ತಪ್ಪನ್ನು ಸರಿಪಡಿಸಿಕೊಂಡು ಆದಷ್ಟು ಬೇಗನೆ ಮುಂದಿನ ಬಾರಿ ಯಶಸ್ವಿಗೊಳಿಸಿ ಎಂದು ಶಿವನ್ ಅವರನ್ನು ಸಂತೈಸಿದ್ದ ಫೋಟೋ ಎಲ್ಲೆಡೆಯಲ್ಲಿಯೂ ವೈರಲ್ ಆಗಿತ್ತು.

ಜುಲೈ 14 2023 ರಂದು ಚಂದ್ರಯಾನ-3 ಮೂಲಕ ಚಂದ್ರನ ಲ್ಯಾಂಡಿಂಗ್ ಅನ್ನು ಮರು-ಪ್ರಯತ್ನಿಸುವ ಮುನ್ನಾ ಈ ಬಾರಿ ಯಾವುದೇ ರೀತಿಯ ವಿಘ್ನಗಳಾಗದೇ ಯಶಸ್ವಿಯಾಗಲಿ ಎಂದು ಆದರ ಪ್ರತಿಕೃತಿಯನ್ನು ಇಸ್ರೋ ಸಂಸ್ಥೆಯ ಕೆಲವು ಆಸ್ತಿಕ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಮುಂದೆ ಇಟ್ಟು ಪ್ರಾರ್ಥಿಸಿದ್ದೇ ತಡಾ,

ಕೆಲವು ಸ್ವಘೋಷಿತ ಬುದ್ದಿಜೀವಿಗಳು ಇಂದಿನ ಆಧುನಿಕ ಯುಗದಲ್ಲಿಯೂ ಬಾಹ್ಯಾಕಾಶ ವಿಜ್ಞಾನಿಗಳೇ ಈ ರೀತಿ ಮೌಢ್ಯವನ್ನು ಬಿತ್ತುವುದು ಎಷ್ಟು ಸರಿ? ಎಂದು ಆಕ್ರೋಶವ್ಯಕ್ತ ಪಡಿಸಿದರೆ, ಎಂದಿನಂತೆ ಪ್ರಧಾನಿ ಮೋದಿ ಮತ್ತು ಮತ್ತು ಬಿಜೆಪಿಯ ವಿರುದ್ಧ ಸೈದ್ಧಾಂತಿಕ ವಿರೋಧವನ್ನು ಹೊಂದಿರುವ ಕೆಲವು ಚಲನ ಚಿತ್ರ ನಟರುಗಳು ಕುಹಕ ವ್ಯಕ್ತಪಡಿಸಿದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಮೂಲದ ಸ್ವಘೋಷಿತ ಕವಿ, ಹೋರಾಟಗಾರ ಮತ್ತು ಸರ್ಕಾರಿ ಕಾಲೇಜಿನ ಉಪನ್ಯಾಸಕರಾದ ಹುಲಿಕುಂಟೆ ಮೂರ್ತಿ ಎನ್ನುವ ಮಹಾನುಭಾವ ಇಸ್ರೋ ವಿಜ್ಞಾನಿಗಳ ಸಾಮರ್ಥ್ಯವನ್ನು ಹೀಯಾಳಿಸಿದ್ದರ ವಿರುದ್ಧ ಸಾರ್ವಜನಿಕರಿಂದ ಬಾರೀ ಆಕ್ರೋಶ ವ್ಯಕ್ತವಾಯಿತು.

ಇಷ್ಟೆಲ್ಲಾ ವೈರುಧ್ಯಗಳ ನಡುವೆಯೂ, 14 ಜುಲೈ 2023 ರಂದು ಬೋರ್ಡ್ ಲಾಂಚ್ ವೆಹಿಕಲ್ MARK-III (LVM-3) ರಾಕೆಟ್‌ನ ಮೂಲಕ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಆಗಸ್ಟ್ 23 2023 ರ ಸಂಜೆ 6:04ನಿಮಿಷಕ್ಕೆ ಇದುವರೆವಿಗೂ ಯಾವುದೇ ದೇಶವೂ ತಲುಪದೇ ಇದ್ದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಪ್ರಯತ್ನಕ್ಕೆ ಮುಂದಾಯಿತು.

ಯಥಾಪ್ರಕಾರ ತನ್ನ #JustAsking ಮೂಲಕ ಖಳ ನಟ ಪ್ರಕಾಶ್ ರೈ ಚಂದ್ರಯಾನ-2ರ ರೂವಾರಿ ಕೆ. ಶಿವನ್ ಅವರನ್ನೇ ಹೋಲುವ ಒಂದು ವ್ಯಂಗ್ಯಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ತನ್ನ ವಿಕೃತಿಯನ್ನು ಮೆರೆದರೆ, ಇನ್ನು ಆತನ ಸಹಚರ ಮತ್ತು ತನ್ನ ಹೊಟ್ಟೇಪಾಡಿಗೆ ತನ್ನನ್ನೇ ಮಾರಿಕೊಂಡಿರುವ ಭಾಸ್ಕರ್ ಪ್ರಸಾದ್ ಮತ್ತು ವಿದೇಶೀ ಸಂಜಾತ ಚೇತನ್ ಅಹಿಂಸಾ ಕುಹಕಗಳೂ ಅವರ ವಿಕೃತ ಮನಸ್ಥಿತಿ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿ ಬಹಳಷ್ಟು ಜನರ ಆಕ್ರೋಶಕ್ಕೆ ತುತ್ತಾಗಿದ್ದದ್ದು ವಿಷಾಧನೀಯ..

ಹಿಂದಿನ ಬಾರಿಯಂತೆ ಲ್ಯಾಂಡಿಗ್ ಗಾಗಿ ಸಣ್ಣ ಪ್ರಮಾಣದ ಜಾಗವನ್ನು ನಿರ್ಧರಿಸದೇ, ಈ ಬಾಗಿ 2.4*4 ಕಿಲೋಮೀಟರ್ ವ್ಯಾಪ್ತಿಯ ಸಮದಟ್ಟಾದ ವಿಶಾಲವಾದ ಜಾಗವನ್ನು ಗುರುತಿಸಿ OHRC ಅರ್ಥಾತ್ ಆರ್ಬಿಟರ್ ಹೈ ರೆಸಲ್ಯೂಶನ್ ಕ್ಯಾಮೆರಾ ಸಹಾಯದಿಂದ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವಂತಹ ವ್ಯವಸ್ಥೆಯನ್ನು ಮಾಡಲಾಗಿತ್ತಲ್ಲದೇ, ಬಾರೀ ವೇಗದಿಂದ ಅಪ್ಪಳಿಸಿದರೂ ವಿಕ್ರಮ್ ನುಚ್ಚು ನೂರಾಗದಂತೆ ತಡೆಯುವಂತಹ ವ್ಯವಸ್ಥೆಯನ್ನೂ ಸಹಾ ಮಾಡಲಾಗಿದ್ದ ಪರಿಣಾಮ ನಿಗಧಿತ ಸಮಯಕ್ಕೆ ಸರಿಯಾಗಿ ನಿಗಧಿ ಪಡಿಸಿದ ಜಾಗದಲ್ಲಿ ಆಗಸ್ಟ್ 23 2023 ರ ಸಂಜೆ 6:04ನಿಮಿಷಕ್ಕೆ ಭಾರತ ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶವಾಗುವುದನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಇಸ್ರೋದ ಅಧಿಕೃತ YouTube Live ಮೂಲಕ ಸರಿ ಸುಮಾರು 6,86,59,531 ಜನರು ವೀಕ್ಷಣೆ ಮಾಡುವ ಮೂಲಕ ಮತ್ತೊಂದು ವಿಶ್ವ ದಾಖಲೆಯನ್ನು ಬರೆಯಿತು.
ಈ ಮೂಲಕ ಇಂದು ಭಾರತವು,
- ಮೊದಲ ಪ್ರಯತ್ನದಲ್ಲಿ ಮಂಗಳವನ್ನು ತಲುಪಿದ ಮೊದಲೇ ರಾಷ್ಟ್ರ.
- ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲನೇ ರಾಷ್ಟ್ರ
- ಮಂಗಳನನ್ನು ತಲುಪಿದ ನಾಲ್ಕನೆಯ ರಾಷ್ಟ್ರ.
- ಉಪಗ್ರಹ ವಿರೋಧಿ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ 4 ನೇ ರಾಷ್ಟ್ರ.
- ಚಂದ್ರನನ್ನು ತಲುಪಿದ ಐದನೆಯ ರಾಷ್ಟ್ರ
- ತನ್ನದೇ ಕ್ರಯೋಜೆನಿಕ್ ತಂತ್ರಜ್ಞಾನ ಹೊಂದಿದ ಆರನೆಯ ರಾಷ್ಟ್ರ
- ಒಂದೇ ಉಡಾವಣೆಯಲ್ಲಿ 104 ಉಪಗ್ರಹಗಳನ್ನಕಳುಹಿಸಿದ ಮಾಡಿದ ರಾಷ್ಟ್ರ .
- ಜುಲೈ 2023 ರ ಹೊತ್ತಿಗೆ 34 ದೇಶಗಳಿಗೆ 431 ಉಪಗ್ರಹಗಳನ್ನು ಉಡಾವಣೆ ಮಾಡಿದ ಹೆಗ್ಗಳಿಕೆ
ಹೀಗೆ ನಾಲ್ಕು ವರ್ಷಗಳ ಹಿಂದೆ ಎಲ್ಲಿ ಸೋತಿದ್ದೇವೋ ಈಗ ಅಲ್ಲೇ ಗೆಲ್ಲುವ ಮೂಲಕ ಸೋಲೇ ಗೆಲುವಿನ ಸೋಪಾನವನ್ನಾಗಿಸಿರುವುದು ನಿಜಕ್ಕೂ ಅದ್ಭುತ, ಅನನ್ಯ ಮತ್ತು ಅಭಿನಂದನಾರ್ಹವೇ ಸರಿ.

ಇಸ್ರೋದ ಈ ಎಲ್ಲಾ ಕಾರ್ಯಾಚರಣೆಗಳೂ ದೇಶದ ವಿಪತ್ತು ನಿರ್ವಹಣೆ, ಟೆಲಿಮೆಡಿಸಿನ್, ನ್ಯಾವಿಗೇಷನ್ ಮತ್ತು ವಿಚಕ್ಷಣ ಕಾರ್ಯಾಚರಣೆಗಳು ಸೇರಿದಂತೆ ವಿವಿಧ ಅಂಶಗಳಲ್ಲಿ ನಾಗರಿಕ ಮತ್ತು ಮಿಲಿಟರಿ ವ್ಯವಸ್ಥೆಗಳಿಗೆ ಪೂರಕ ಮಾಹಿತಿಗಳನ್ನು ಒದಗಿಸುವ ಮೂಲಕ ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವುದು ಶ್ಲಾಘನೀಯವಾಗಿದ್ದು, ಜಗತ್ತಿನಲ್ಲಿ ಭಾರತೀಯರೂ ಎದೆಯುಬ್ಬಿಸಿಕೊಂಡು ನಡೆಯುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಮತ್ತು ಅದಕ್ಕೆ ಪ್ರತ್ಯಕ್ಶವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ ಎಂದರೂ ತಪ್ಪಾಗದು.
ಈಗಾಗಲೇ ತಿಳಿಸಿದಂತ ಚಂದ್ರಯಾನದ ವಿಕ್ರಂ ಲ್ಯಾಂಡರ್ ನ ಒಳಗೆ ಪ್ರಜ್ಞಾನ್ ಎಂಬ ರೋವರ್ ಸಹಾ ಇದ್ದು, ಈ ಕಾರ್ಯಾಚರಣೆಗೆ ವಿಕ್ರಂ ಲ್ಯಾಂಡರ್ ಎಂದು ಹೆಸರನ್ನು ಇಡುವ ಹಿಂದೆಯೂ ರೋಜಕವಾದ ಹಿನ್ನಲೆಯಿದೆ. ಭಾರತದ ಬಾಹ್ಯಾಕಾಶದ ಪಿತಾಮಹ ಮತ್ತು ಇಸ್ರೋ ಸಂಸ್ಥಾಪಕ ಶ್ರೀ ವಿಕ್ರಂ ಸಾರಾಭಾಯಿ ಅವರ ನೆನಪಿನಾರ್ಥ, ಈ ಲ್ಯಾಂಡೆರ್ಗೆ ವಿಕ್ರಂ ಲ್ಯಾಂಡರ್ ಅನ್ನುವ ಹೆಸರು ಇಡಲಾಗಿದ್ದು, ಅದು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುತ್ತಿದ್ದಂತೆಯೇ ಅದರೊಳಗೆ ಇರುವ ಸುಮಾರು 27 ಕೆಜಿ ತೂಕದ ಪ್ರಜ್ಞಾನ್ ಎಂಬ ಹೆಸರಿನ ರೋವರ್ ಹೊರಬಂದು ಚಂದ್ರನ ಮೇಲೆ ಸುತ್ತಾಡಿ ಅಲ್ಲಿನ ವಾತಾವರಣವನ್ನು ಅಧ್ಯಯನ ನಡೆಸಿ ಅಲ್ಲಿಂದ ಮಾಹಿತಿಗಳನ್ನು ಇಸ್ರೋ ಇಲಾಖೆಗೆ ತಲುಪಿಸಲಿದೆ.

ಪ್ರಜ್ಞಾನ್ ಎನ್ನುವುದು ಸಂಸ್ಕೃತ ಪದವಾಗಿದ್ದು ಬುದ್ದಿವಂತಿಕೆ ಎಂಬ ಅರ್ಥ ಬರುತ್ತದೆ. ಅದು ಚಂದ್ರನ ಮೇಲೆ ತನ್ನ ಬುದ್ದಿವಂತಿಕೆಯಿಂದ ಅಧ್ಯಯನ ನಡೆಸಿ ಅಲ್ಲಿನ ವಿವರಗಳನ್ನು ಭೂಮಿಗೆ ಕಳುಹಿಸಲಿದೆ. ಇದರ ಜೊತೆ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಇದರ ಚಕ್ರಗಳಿಗೆ ನಾಲ್ಕು ಸಿಂಹಗಳಿರುವ ಅಶೋಕ ಚಿನ್ಹೆ ಮತ್ತು ಇಸ್ರೋ ಚಿನ್ಹೆಯನ್ನು ಅಳವಡಿಸಲಾಗಿದ್ದು, ಈ ರೋವರ್ ಚಂದ್ರನ ಮೇಲೆ ಚಲಿಸಿದಲ್ಲೆಲ್ಲಾ ಈ ಎರಡೂ ಚಿನ್ಹೆಗಳೂ ಚಂದ್ರನ ಭೂಭಾಗದ ಮೇಲೆ ಅಚ್ಚೊತ್ತುವ ಮೂಲಕ ಚಂದ್ರನ ದಕ್ಷಿಣ ಧೃವದ ಮೇಲೆ ಭಾರತದ ಸಾರ್ವಭೌಮತ್ವದ ಛಾಪನ್ನು ಮೂಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು ಇದು ಸತ್ಯವೇ ಆಗಿದ್ದಲ್ಲಿ ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.

ಈ ಎಲ್ಲಾ ಯಶಸ್ವಿಗಳ ಹೊರತಾಗಿ, ಇಸ್ರೋದ ಮುಂದಿನ ಗುರಿಗಳು ಉಪಗ್ರಹ ನೌಕಾಪಡೆಯನ್ನು ವಿಸ್ತರಿಸುವುದು, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು, ಅರೆ-ಕ್ರಯೋಜೆನಿಕ್ ಎಂಜಿನ್ ಗಳ ಅಭಿವೃದ್ಧಿ, ಚಂದ್ರ, ಮಂಗಳ, ಶುಕ್ರ ಮತ್ತು ಸೂರ್ಯನಿಗೆ ಹೆಚ್ಚು ಸಿಬ್ಬಂದಿಗಳಿಲ್ಲದ ಕಾರ್ಯಾಚರಣೆಗಳನ್ನು ಕಳುಹಿಸುವುದು ಮತ್ತು ವೀಕ್ಷಣಾ ಕಕ್ಷೆಯಲ್ಲಿ ಹೆಚ್ಚಿನ ಬಾಹ್ಯಾಕಾಶ ದೂರದರ್ಶಕಗಳನ್ನು ನಿಯೋಜಿಸುವುದು. ಸೌರವ್ಯೂಹವನ್ನು ಮೀರಿದ ಕಾಸ್ಮಿಕ್ ವಿದ್ಯಮಾನಗಳು ಮತ್ತು ಬಾಹ್ಯಾಕಾಶ. ಮರುಬಳಕೆ ಮಾಡಬಹುದಾದ ಲಾಂಚರ್‌ಗಳು, ಹೆವಿ ಮತ್ತು ಸೂಪರ್ ಹೆವಿ-ಲಿಫ್ಟ್ ಲಾಂಚ್ ವೆಹಿಕಲ್‌ಗಳ ಅಭಿವೃದ್ಧಿ, ಬಾಹ್ಯಾಕಾಶ ನಿಲ್ದಾಣವನ್ನು ನಿಯೋಜಿಸುವುದು, ಗುರು, ಯುರೇನಸ್, ನೆಪ್ಚೂನ್ ಮತ್ತು ಕ್ಷುದ್ರಗ್ರಹಗಳಂತಹ ಗ್ರಹಗಳಿಗೆ ಪರಿಶೋಧನಾ ಕಾರ್ಯಾಚರಣೆಗಳನ್ನು ಕಳುಹಿಸುವುದು ಮತ್ತು ಚಂದ್ರ ಮತ್ತು ಇತರೇ ಗ್ರಹಗಳಿಗೆ ಸಿಬ್ಬಂದಿ ಕಾರ್ಯಾಚರಣೆಗಳು ಇಸ್ರೋದ ದೀರ್ಘಾವಧಿಯ ಯೋಜನೆಗಳಾಗಿವೆ.

ಇಸ್ರೋದ ಪ್ರಸ್ತುತ ವಿಜ್ಞಾನಿಗಳು ಮತ್ತು ತಮ್ಮ ದೂರದೃಷ್ಟಿಯಿಂದ ದೇಶವನ್ನು ಸಧೃಢವಾಗಿ ವಿಶ್ವಗುರುವಾಗುವತ್ತ ಮುನ್ನಡೆಸುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರ ಸಹಕಾರದೊಂದಿಗೆ ಮತ್ತಷ್ಟು ಯುಶಸ್ಸನ್ನು ಸಾಧಿಸಲಿ ಎನ್ನುವುದೇ ಕೆಲವು ವಿಕೃತ ಮನಸ್ಥಿತಿಯ ಚಾರ್ವಾಕರ ಹೊರತಾಗಿ ಸಕಲ ಭಾರತೀಯರ ಆಶಯವಾಗಿದೆ ಎಂದರೂ ಅತಿಶಯವಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಈ ಲೇಖನದಕ್ಕೆ ಸೂಕ್ತ ಮಾಹಿತಿಗಳನ್ನು ಒದಗಿಸಿದ ಆತ್ಮೀಯರಾದ ಶ್ರೀ ಜಯಸಿಂಹ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
ಈ ಲೇಖನ ಸಂಪದ ಸಾಲು ಮಾಸ ಪತ್ರಿಕೆಯ ಸೆಪ್ಟಂಬರ್ 2023ರ ಸಂಚಿಕೆಯಲ್ಲಿ ಪ್ರಕಟವಾಗಿದೆ
