ಸಾಧಾರಣವಾಗಿ ಹೊರ ಊರುಗಳಿಂದ ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಈ ಹಿಂದೆ ಬೆಂಗಳೂರು ರೈಲ್ವೇ ನಿಲ್ದಾಣ, ವಿಧಾನ ಸೌಧ, ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರೆ, 90ರ ದಶಕದಲ್ಲಿ ಬೆಂಗಳೂರಿನ ರಾಜಾಜಿನಗರದ ಆರಂಭದಲ್ಲಿ ಇಸ್ಕಾನ್ ದೇವಾಲಯ ನಿರ್ಮಾಣವಾದ ಕೂಡಲೇ, ಬೆಂಗಳೂರಿಗೆ ಬರುವ ಪ್ರವಾಸಿಗರ ಪಟ್ಟಿಯಲ್ಲೀ ಈ ದೇವಾಲಯವೂ ಸೇರಿಕೊಂಡಿದೆ ಏಂದರೂ ತಪ್ಪಾಗದು. ಬೆಂಗಳೂರಿಗೇ ಕಿರೀಟಪ್ರಾಯವಾದ ಅತ್ಯಂತ ಸುಂದರವಾದ ಇಸ್ಕಾನಿನ ಶ್ರೀ ರಾಧಾ ಕೃಷ್ಣ ದೇವಾಲಯದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
The International Society for Krishna Consciousness (ISKCON) ಅಥವಾ ಹರೇ ಕೃಷ್ಣ ಚಳುವಳಿ ಎಂದೂ ಕರೆಯಲ್ಪಡುವ ಈ ಸಂಸ್ಥೆಯನ್ನು ಪಶ್ಚಿಮ ಬಂಗಾಳದ ಮೂಲದ ಶ್ರೀ ಅಭಯ್ ಚರಣ್ ಡೇ (ಶ್ರೀ ಪ್ರಭುಪಾದ) ಅವರು ಭಕ್ತಿವೇದಾಂತದ ಮೇಲೆ ನಂಬಿಕೆಯಿಂದ ಗೌಡಿಯ-ವೈಷ್ಣವ ಸಂಪ್ರದಾಯವೊಂದಕ್ಕೆ ನಾಂದಿ ಹಾಡುವ ಮೂಲಕ ಕೃಷ್ಣಂ ವಂದೇ ಜಗದ್ಗುರುಂ ಎನ್ನುವ ಏಕದೇವತಾ ಸಂಪ್ರದಾಯದ ಪಂಥವನ್ನು ಆರಂಭಿಸಿ ಕೇವಲ 60 ರೂಪಾಯಿಯ ಜೊತೆಗೆ ಭಗವದ್ಗೀತೆ ಮತ್ತು ಒಂದೆರಡು ದೈನಂದಿನ ಬಟ್ಟೆಯೊಂದಿಗೆ ಕಲ್ಕತ್ತಾದಿಂದ 1966 ರಲ್ಲಿ ಅಮೇರಿಕಾದ ನ್ಯೂಯಾರ್ಕ್ ನಗರಕ್ಕೆ ಹೋಗಿ ಇಸ್ಕಾನ್ ಸ್ಥಾಪಿಸಿದ ಪರಿ ನಿಜಕ್ಕೂ ರೋಚಕವೆನಿಸುತ್ತದೆ.
ತಮ್ಮದಲ್ಲದ ಭಾಷೆ, ಸಂಸ್ಕಾರ ಮತ್ತು ಸಂಸ್ಕೃತಿಯ ನಾಡಿನಲ್ಲಿ, ಭಕ್ತಿ ಯೋಗ ಅಥವಾ ಕೃಷ್ಣ ಪ್ರಜ್ಞೆಯ ಅಭ್ಯಾಸವನ್ನು ಆರಂಭಿಸುವ ಮೂಲ ಉದ್ದೇಶದಿಂದ ಸ್ಥಾಪಿಸಲಾದ ಈ ಇಸ್ಕಾನ್ ಸಂಪ್ರದಾಯಕ್ಕೆ ಆರಂಭದಲ್ಲಿ ಸೇರಿಕೊಳ್ಳುವವರು ಯಾರೂ ಇರದಿದ್ದರೂ ಪ್ರತಿನಿತ್ಯವೂ ಸ್ವಾಮಿಗಳು ಶ್ರದ್ಧಾ ಭಕ್ತಿಯಿಂದ ಸ್ವತಃ ನೈವೇದ್ಯವನ್ನು ತಯಾರಿಸಿ ಭಕ್ತಿಯಿಂದ ಶ್ರೀಕೃಷ್ಣನ ಪೂಜೆ ಮಾಡಿ ನಂತರ ಅಷ್ಟೇ ಭಕ್ತಿಯಿಂದ ಹರೇ ಕೃಷ್ಣಾ, ಹರೇ ರಾಮ, ಕೃಷ್ಣ ಕೃಷ್ಣಾ ಹರೇ ಹರೇ ಎಂದು ತಾಳ ಮದ್ದಳೆಯೊಂದಿಗೆ ಭಜನೆ ಮಾಡಿ ಅಕ್ಕ ಪಕ್ಕದವರಿಗೆ ಪ್ರಸಾದವನ್ನು ಹಂಚುತ್ತಿದ್ದರಂತೆ.
ಇದೇ ಸಮಯದಲ್ಲಿ ಅಮೇರಿಕಾದ ಅನೇಕ ಯುವಕ ಯುವತಿಯರು ಸ್ವೇಚ್ಚಾಚಾರದ ಹಿಂದೆ ಬಿದ್ದು ತಮ್ಮ ತಮ್ಮ ಮನೆಗಳಿಂದ ಹೊರಬಂದು ಸಮಾನಮಸ್ಕರು ಒಟ್ಟಾಗಿ ನಿರ್ಜನ ಪ್ರದೇಶಗಳಿಗೆ ಹೋಗಿ ತಮ್ಮ ಪಾಡಿ ತಾವು ಹಾಡುಗಳನ್ನು ಹೇಳಿಕೊಳ್ಳುತ್ತಾ, ಮದ್ಯ, ಮಾದಕ ದ್ರವ್ಯಗಳನ್ನು ಸೇವಿಸುತ್ತಾ ತಮ್ಮ ತಮ್ಮೊಳಗೇ ವಿವಾಹೇತರ ಸಂಬಂಧಗಳನ್ನು ಹೊಂದಿರುವಂತಹ ಒಂದು ಹೊಸಾ ಸಂಪ್ರದಾಯವನ್ನು ಹುಟ್ಟು ಹಾಕಿ ಕ್ರಮೇಣ ಅದು ಹಿಪ್ಪಿ ಸಂಪ್ರದಾಯ ಎಂದೇ ಕುಖ್ಯಾತಿಪಡೆದಿತ್ತು. ಇಂತಹ ಹಿಪ್ಪಿಗಳನ್ನು ಅಲ್ಲಿನ ಸಮಾಜ ಭಹಿಷ್ಕರಿಸಿತ್ತು. ಪ್ರಭುಪಾದರುಗಳು ಈ ರೀತಿಯ ಹಿಪ್ಪಿಗಳಿರುವ ಪ್ರದೇಶಗಳಿಗೆ ಹೋಗಿ ಅತ್ಯಂತ ಸುಶ್ರಾವ್ಯದಿಂದ, ರಾಗ ಭರಿತವಾಗಿ ಹರೇ ಕೃಷ್ಣಾ, ಹರೇ ರಾಮಾ, ಕೃಷ್ಣ ಕೃಷ್ಣಾ ಹರೇ ಹರೇ, ಹರೇ ರಾಮಾ, ಹರೇ ಕೃಷ್ಣಾ, ಕೃಷ್ಣ ಕೃಷ್ಣಾ ಹರೇ ಹರೇ ಎಂದು ಹಾಡುತ್ತಾ ನರ್ತನ ಮಾಡುತ್ತಿದ್ದದ್ದು ಸಂಗೀತ ಪ್ರಿಯರಾದ ಹಿಪ್ಪಿಗಳಿಗೆ ಅಪ್ಯಾಯಮಾನವಾಗಿ ಅವರೆಲ್ಲರೂ ಪ್ರಭುಪಾದರೊಂದಿಗೆ ಸೇರಿ ಕೊಂಡು ಹಾಡುತ್ತಾ ನಲಿಯುತ್ತಾ ನಂತರ ಕೃಷ್ಣನ ಪೂಜೆ ಮಾಡಿ ಪ್ರಸಾದವನ್ನು ಸ್ವೀಕರಿಸುವ ಹಂತಕ್ಕೆ ಬಂದರು.
ನಂತರದ ದಿನಗಳಲ್ಲಿ ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ | ಯತ್ಕೃಪಾ ತಮಹಂ ವಂದೇ ಪರಾಮನಂದಂ ಮಾಧವಂ|| ಅರ್ಥಾಥ್, ಶ್ರೀಕೃಷ್ಣನ ಅನುಗ್ರಹವಿದ್ದಲ್ಲಿ, ಹೇಗೆ ಮೂಕನು ವಾಚಾಳಿಯಗಿಯೂ ಕುಂಟನು ಪರ್ವತವನ್ನು ದಾಟುವಂತಹವನಾಗುತ್ತಾನೆಯೋ ಹಾಗೆಯೇ, ಆ ಹಿಪ್ಪಿಗಳೂ ಕ್ರಮೇಣ ತಮ್ಮೆಲ್ಲಾ ದುಶ್ಚಟಗಳಿಂದ ದೂರವಾಗಿ ಭಕ್ತಿಪಂಥತ ಅನುಯಾಗಿಗಳಾಗಿ ಸನಾತನ ಹಿಂದೂ ಆಧ್ಯಾತ್ಮಿಕತೆಯ ಹೊಸ ಆವೃತ್ತಿಗೆ ಸೆಳೆಯಲ್ಪಟ್ಟರು. ನಂತರ ಇವರುಗಳೇ, ಅಮೇರಿಕಾದ್ಯಂತ 400 ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿ, ಹತ್ತಾರು ಗ್ರಾಮೀಣ ಸಮುದಾಯಗಳು ಮತ್ತು ಪರಿಸರ-ಸಮರ್ಥನೀಯ ಯೋಜನೆಗಳು ಮತ್ತು ಪ್ರಪಂಚದಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಸಾತ್ವಿಕ ಸಸ್ಯಾಹಾರಿ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಿದರು. ಇಸ್ಕಾನ್‌ನ ಹರೇ ಕೃಷ್ಣ ಫುಡ್ ಫಾರ್ ಲೈಫ್ ಕಾರ್ಯಕ್ರಮವು ವಿಶ್ವದ ಅತಿದೊಡ್ಡ ಸಸ್ಯಾಹಾರಿ ಆಹಾರ ಪರಿಹಾರ ಯೋಜನೆಯಾಗಿ ಬೆಳೆಸುವಷ್ಟರ ಮಟ್ಟಿಗೆ ಬೆಳೆದು ಬಿಟ್ಟರು.
ಒಂದು ಊಟ ಒಬ್ಬ ವ್ಯಕ್ತಿಯ ಒಂದು ಹೊತ್ತಿನ ಹಸಿವನ್ನು ಮಾತ್ರಾ ನಿವಾರಿಸುತ್ತದೆ. ಆದರೆ ಪುಸ್ತಕಗಳು ನಿರಂತರವಾಗಿ ವ್ಯಕ್ತಿಯ ಜ್ಣಾನದಾಹವನ್ನು ನಿವಾರಿಸುತ್ತದೆ ಎಂಬ ಕಲ್ಪನೆಯಡಿಯಲ್ಲಿ 1977 ರಲ್ಲಿ ಶ್ರೀ ಪ್ರಭುಪಾದರು ನಿಧನರಾಗುವ ಹೊತ್ತಿಗೆ ತಮ್ಮ ಸವಿಸ್ತಾರವಾದ ವ್ಯಾಖ್ಯಾನಗಳೊಂದಿಗೆ ವೈಷ್ಣವ ಸಾಹಿತ್ಯದ 60 ಸಂಪುಟಗಳನ್ನು ಅನುವಾದ ಕೃತಿಯಲ್ಲದೇ ನೂರಾರು ಪುಸ್ತಕಗಳನ್ನು ಬರೆದು ಅ ಪುಸ್ತಕಗಳು ಜಗತ್ತಿನಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವಂತಾಗಿದ್ದಲ್ಲದ್ದೇ, ಸುಮಾರು 100ಕ್ಕೂ ಹೆಚ್ಚಿನ ಭಾಷೆಗಳಿಗೆ ಅನುವಾದಗೊಂಡವು. ಅಷ್ಟೇ ಅಲ್ಲದೇ ಆರು ಖಂಡಗಳಲ್ಲಿ 100ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿ, 5,000ಕ್ಕೂ ಹೆಚ್ಚಿನ ಶಿಷ್ಯರಿಗೆ ದೀಕ್ಷೆಯನ್ನು ನೀಡುವ ಮೂಲಕ ತಮ್ಮ ಭಕ್ತಿಪಂಥವನ್ನು ಸುಸ್ಥಿರವಾಗಿ ಮುಂದುವರೆಸಿಕೊಂಡು ಹೋಗುವ ಮಟ್ಟಕ್ಕೆ ಬೆಳಸಿಬಿಟ್ಟಿದ್ದರು.
ನಂತರದ ದಿನಗಳಲ್ಲಿ ಭಾರತದ ಪ್ರಮುಖ ಪಟ್ಟಣಗಳಲ್ಲಿ ಇಸ್ಕಾನ್ ದೇವಾಲಯಗಳು ಸ್ಥಾಪಿಸಲ್ಪಟ್ಟು 60ರ ದಶಕದಲ್ಲಿ ಬೆಂಗಳೂರಿನಲ್ಲಿಯೂ ಅಂತಹದ್ದೇ ಒಂದು ದೇವಾಲಯವನ್ನು ಆರಂಭಿಸಲು ಯೋಚಿಸಿ ಅದಕ್ಕೆ ಸೂಕ್ತವಾದ ಜಾಗವನ್ನು ಹುಡುಕುತ್ತಿದ್ದಾಗ, ಯಶವಂತಪುರ, ಮಲ್ಲೇಶ್ವರ ಮತ್ತು ರಾಜಾಜಿನಗರದ ಸಂಗಮದಲ್ಲಿದ್ದ ದೋಭಿಘಾಟ್ ಪಕ್ಕದಲ್ಲೇ ಇದ್ದ ಒಂದು ಗುಡ್ಡವನ್ನು ಆಯ್ಕೆ ಮಾಡಿಕೊಂಡು ಆ ಪ್ರದೇಶವನ್ನು ಕೊಡಬೇಕೆಂದು ಇಸ್ಕಾನ್ ಕೋರಿಕೊಂಡಾಗ ಅನೇಕ ಸರ್ಕಾರಿ ಅಧಿಕಾರಿಗಳು ಈ ಪಾಳು ಬಿದ್ದ ಗುಡ್ಡದಲ್ಲಿ ಅದೆಂತಹ ದೇವಾಲಯ ಕಟ್ಟುತ್ತೀರೀ? ಎಂದು ಹಾಸ್ಯ ಮಾಡಿದ್ದರಂತೆ. ಆದರೆ ಕಸದಿಂದ ರಸವನ್ನು ತೆಗೆದಂತೆ, ಅಂತಹ ಪಾಳು ಬಿದ್ದ ಗುಡ್ಡದಲ್ಲೂ ಪ್ರತಿಯೊಂದು ಇಂಚು ಇಂಚು ಜಾಗವೂ ಪೋಲಾಗದಂತೆ ಅತ್ಯುತ್ತಮವಾದ ವಾಸ್ತು ಶಿಲ್ಪಿಗಳ ಸಹಾಯದಿಂದ ನೀಲನಕ್ಷೆಯನ್ನು ಸಿದ್ಧ ಪಡಿಸಿ ನೋಡ ನೋಡುತ್ತಿದ್ದಂತೆಯೇ 90ರ ದಶಕದಲ್ಲಿ ಅಲ್ಲೊಂದು ಭವ್ಯವಾದ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾದ ಈ ಶ್ರೀ ರಾಧಾ ಕೃಷ್ಣ ಮಂದಿರವನ್ನು ಕಟ್ಟಿರುವುದು ಈಗ ಇತಿಹಾಸ.
ಇಂತಹ ಭವ್ಯವಾದ ಶ್ರೀ ರಾಧಾ ಕೃಷ್ಣ ದೇವಸ್ಥಾನವನ್ನು 1997 ರಲ್ಲಿ ಅಂದಿನ ರಾಷ್ಟಪತಿಗಳಾಗಿದ್ದ ಶ್ರೀ ಶಂಕರದಯಾಳ್ ಶರ್ಮಾರವರು ಉದ್ಘಾಟಿಸಿದರು. ಗುಡ್ಡದ ಮೇಲೆ 17 ಮೀ (56 ಅಡಿ) ಎತ್ತರದ ಚಿನ್ನದ ಲೇಪಿತ ಧ್ವಜಸ್ತಂಭ ಮತ್ತು 8.5 ಮೀ (28 ಅಡಿ) ಎತ್ತರದ ಚಿನ್ನದ ಲೇಪಿತ ಕಲಶದ ಶಿಖರಹೊಂದಿರುವ ಈ ದೇವಾಲಯ ಸಹಜವಾಗಿಯೇ ಸುತ್ತಮುತ್ತಲ ಪ್ರದೇಶಗಳಿಂದ ಎದ್ದು ಕಾಣುವಂತಿದ್ದು ಗರ್ಭಗುಡಿಯೂ ಸೇರಿದಂತೆ ಇಲ್ಲಿ ಆರು ಮಂದಿರಗಳಿವೆ. ದೇವಾಲಯದ ತಪ್ಪಲಿನಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಚಪ್ಪಲಿಗಳನ್ನು ಇಡುವ ಕೌಂಟರ್ ಇದ್ದು ಅಲ್ಲಿಂದ ಮುಂದೆ ಸಾಗುತ್ತಿದ್ದಂತೆಯೇ, ನಯನ ಮನೋಹರವಾದ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಅಲ್ಲಿಂದ ಕೆಲವು ಮೆಟ್ಟಿಲುಗಳನ್ನು ಹತ್ತುದ್ದಿದ್ದಂತೆಯೇ ಉಗ್ರನರಸಿಂಹನ ದರ್ಶನದ ಜೊತೆಯಲ್ಲೇ ಭಕ್ತ ಹನುಮಾನ್, ಗರುಡದೇವರ ದರ್ಶನ ಮಾಡಿಕೊಂಡು ಮೆಟ್ಟಿಲು ಹತ್ತುತ್ತಿದ್ದಂತೆಯೇ ದೇವಾಲಯದ ವಿಶಾಲವಾದ ಪ್ರಾಂಗಣಕ್ಕೆ ತಲುಪುತ್ತೇವೆ. ಸಂಜೆಯ ಹೊತ್ತಿನಲ್ಲಂತೂ ಅಲ್ಲಿಂದ ಝಗಮಗಿಸುವ ಬೆಂಗಳೂರು ಕಾಣುವ ಪರಿ ನಿಜಕ್ಕೂ ಅವರ್ಣನೀಯ.
ಅಲ್ಲಿಂದ ಒಳಗೆ ವಿಶಾಲವಾದ ದೇವಾಲಯದ ಪ್ರಾಂಗಣ ತಲುಪುತ್ತಿದ್ದಂತೆಯೇ, ಕಿವಿಗಳಿಗೆ ಒಪ್ಪುವಂತಹ ಮೆಲು ಧನಿಯಲ್ಲಿ ಹರೇರಾಮಾ ಹರೇ ಕೃಷ್ಣ ಮಂತ್ರದ ಜಪದೊಂದಿಗೆ ಉತ್ತರಭಾರತೀಯ ಶೈಲಿಯಲ್ಲಿರುವ ಅಮೃತಶಿಲೆಯ ರಾಧಾ-ಕೃಷ್ಣಾ ಮತ್ತು ಕೃಷ್ಣ ಬಲರಾಮರು ಗರ್ಭಗುಡಿಯ ಪ್ರಮುಖ ದೇವರುಗಳಾದರೆ, ಆದರ ಅಕ್ಕ ಪಕ್ಕದಲ್ಲೇ ನಿತಾಯಿ ಗೌರಂಗಾ (ಚೈತನ್ಯ ಮಹಾಪ್ರಭು ಮತ್ತು ನಿತ್ಯಾನಂದರ ಪ್ರತಿಮೆಗಳು ನಿಜಕ್ಕೂ ಮನೋಹರವಾಗಿವೆ.
ಬೆಳಿಗ್ಗೆ 4:30 ರಿಂದ 5:00 ರವರೆಗೆ ತುಳಸಿ ದೇವಿ, ಶ್ರೀ ನರಸಿಂಹ ಆರತಿ ಮತ್ತು ಶ್ರೀ ಶ್ರೀನಿವಾಸ ಗೋವಿಂದನಿಗೆ ಸುಪ್ರಭಾತ ಸೇವೆ ಆರತಿಯೊಂದಿಗೆ ದೇವಾಲಯದ ದಿನಚರಿ ಅರಂಭವಾಗಿ, 5:15 ರಿಂದ 7:15 ರವರೆಗೆ ಜಪ ಧ್ಯಾನ ಅವಧಿ ಮುಗಿದ ನಂತರ 7:15 ಕ್ಕೆ ಶೃಂಗಾರ ದರ್ಶನ ಆರತಿ ಮುಗಿಸಿದ ನಂತರ ಮಧ್ಯಾಹ್ನ 1:00 ರವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುತ್ತದೆ. ಮತ್ತೆ ಸಂಜೆ 4:15 ರಿಂದ 8:15 ಸಕಲ ಭಕ್ತಾದಿಗಳಿಗೆ ಮುಕ್ತ ಅವಕಾಶವಿರುತ್ತದೆ, ವಾರಾಂತ್ಯಗಳಲ್ಲಿ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ದೇವಾಲಯದ ಸಮಯವು ಬೆಳಿಗ್ಗೆ 4:30 ರಿಂದ 5:00 ರವರೆಗೆ ಮತ್ತು 7:00 ರಿಂದ 8:30 ರವರೆಗೆ ಇರುತ್ತದೆ. ಮಧ್ಯಾಹ್ನ ಯಾವುದೇ ವಿರಾಮವಿಲ್ಲದೇ ಸಂಜೆ ಆರತಿಯು 7:00 ಗಂಟೆಗೆ ಪ್ರಾರಂಭವಾಗುತ್ತದೆ ಸಂಜೆಯ ಆರತಿ ವೇಳೆಯಲ್ಲಿ ನಡೆಯುವ ಭಕ್ತಿ ಕೀರ್ತನೆಗಳು ಮತ್ತು ಎಂತಹವರ ಮನಗಳಲ್ಲಿಯೂ ಉತ್ಸಾಹ ಮೂಡಿಸಿ ನಿಂತಕಡೆಯಲ್ಲೇ ಕುಣಿಯುವಂತೆ ಮಾಡಿಸುತ್ತದೆ ಎಂದರೂ ಅತಿಶಯವಾಗದು. ಇನ್ನು ಸಂಜೆಯ ಆರತಿಯ ಸಮಯದಲ್ಲಿ ಏಕ ಕಾಲಕ್ಕೇ ಮೂವರು ಅರ್ಚಕರು ಅಲ್ಲಿನ ಎಲ್ಲಾ ಮೂರ್ತಿಗಳಿಗೂ ಆರತಿಯನ್ನು ಬೆಳಗುತ್ತಿದ್ದರೆ, ಭಕ್ತರ ಹರೇ ಕೃಷ್ಣ ಹರೇ ರಾಮ ಸಂಕೀರ್ತನೆ ಮುಗಿಲು ಮುಟ್ಟುತ್ತಿರುತ್ತದೆ. ಬೆಳಿಗ್ಗೆಯಿಂದ ರಾತ್ರಿಯ ವರೆವಿಗೂ ದೇವರ ದರ್ಶನ ಪಡೆದ ಎಲ್ಲಾ ಭಕ್ತಾದಿಗಳಿಗೂ ಸಾತ್ವಿಕವಾದ ಅತ್ಯಂತ ಶುಚಿ ರುಚಿಕರವಾದ ಶ್ರೀ ಕೃಷ್ಣನ ಉಚಿತ ಪ್ರಸಾದ ದೇವಾಲಯದ ಮತ್ತೊಂದು ಆಕರ್ಷಣೆ ಎಂದರೂ ತಪ್ಪಾಗದು.
ಇಸ್ಕಾನ್ ದೇವಾಲಯ ಪ್ರಸಾದ ಹೇಗಿರುತ್ತದೆ ಎಂಬುದನ್ನು ಪ್ರಪಂಚದಲ್ಲೇ ಕಂಪ್ಯೂಟರ್ ತಯಾರಿಕೆಯ ದಿಗ್ಗಜರಾದ ಆಪಲ್ ಕಂಪನಿಯ ಸ್ಟೀವ್ ಜಾಬ್ಸ್ 2005 ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ, ಅವರು ಯುವಕರಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ವಾರಪೂರ್ತಿಯೂ ಸರಿಯಾದ ಊಟ ಸಿಗುತ್ತಿರಲಿಲ್ಲವಂತೆ. ಒಳ್ಳೆಯ ಊಟ (ಪ್ರಸಾದ) ಮಾಡುವ ಸಲುವಾಗಿಯೇ ಪ್ರತೀ ಭಾನುವಾರ ಸಂಜೆ ತಮ್ಮ ಮನೆಯಿಂದ ಸುಮಾರು 7 ಮೈಲಿ ನಡೆದು ಅಲ್ಲಿನ ಇಸ್ಕಾನ್ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಆರತಿಗಳಲ್ಲಿ ಪಾಲ್ಗೊಂಡು ನಂತರ ಕೊಡುತ್ತಿದ್ದ ಪ್ರಸಾದವನ್ನು ಹೊಟ್ಟೆ ಭರ್ತಿ ತಿನ್ನುತ್ತಿದ್ದನ್ನು ನೆನಪಿಸಿಕೊಂಡಿದ್ದಲ್ಲದೇ, ಹರೇ ಕೃಷ್ಣ ದೇವಸ್ಥಾನದ ವಾರಕ್ಕೆಮ್ಮೆಯ ಒಂದು ಉತ್ತಮವಾಅ ಊಟ ಮತ್ತು ಅಲಿನ ಸ್ಪೂರ್ತಿದಾಯಕ ಮತ್ತು ಚಿಂತನಶೀಲ ಭಾಷಣ ತನ್ನ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ ಎಂದು ಹೇಳುವ ಮೂಲಕ ನೆರೆದಿದ್ದವರೆಲ್ಲರನ್ನೂ ರೋಮಾಂಚನಗೊಳಿಸುವಂತೆ ಮಾಡಿದ್ದರು.
ಬೆಂಗಳೂರಿನ ಈ ಇಸ್ಕಾನ್ ದೇವಾಲಯದಲ್ಲಿ ಪ್ರತಿನಿತ್ಯದ ಪೂಜೆಗಳಲ್ಲದೇ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಸಲಾಗುತ್ತಿದ್ದು ಅವುಗಳಲ್ಲಿ, ಪ್ರಮುಖವಾಗಿ, ರಾಮ ನವಮಿ, ಬ್ರಹ್ಮೋತ್ಸವ, ನರಸಿಂಹ ಜಯಂತಿ, ಪಾನಿಹತಿ ಚಿದಾ-ದಹಿ ಉತ್ಸವ, ರಥ ಯಾತ್ರೆ, ಬಲರಾಮ್ ಜಯಂತಿ, ಜೂಲನ್ ಉತ್ಸವ,, ವ್ಯಾಸ ಪೂಜೆ, ಶ್ರೀ ರಾಧಾಷ್ಟಮಿ, ದೀಪೋತ್ಸವ, ಗೋವರ್ಧನ ಪೂಜೆ, ವೈಕುಂಠ ಏಕಾದಶಿ, ನಿತ್ಯಾನಂದ ತ್ರಯೋದಶಿ, ಗುರು ಪೂರ್ಣಿಮಾ ಎಲ್ಲ ಹಬ್ಬಗಳು ಒಂದು ರೀತಿಯಲ್ಲಾದರೆ, ಶ್ರೀ ಕೃಷ್ಣ ಜನ್ಮಾಷ್ಟಮಿಯಂತೂ ಬಹಳ ಅದ್ದೂರಿಯಿಂದ ಆಚರಿಸಲ್ಪಟ್ಟು ಆ ದಿನದಂದು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಶ್ರೀಕೃಷ್ಣ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.
ಕೇವಲ ಧಾರ್ಮಿಕ ಸೇವೆಗಳಷ್ಟೇ ಅಲ್ಲದೇ ಸಾಮಾಜಿಕ ಸೇವೆಗಳಲ್ಲಿಯೂ ತೊಡಗಿಸಿಕೊಂಡಿರುವ ಇಸ್ಕಾನ್ ಅಗತ್ಯವಿರುವವರಿಗೆ ಉಚಿತ ಆಹಾರವನ್ನೂ ಒದಗಿಸುತ್ತದೆ. ತನ್ನ ಅಕ್ಷಯ ಪಾತ್ರ ಫೌಂಡೇಶನ್ ಮುಖಾಂತರವಾಗಿ ಭಾರತದಾದ್ಯಂತ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಲಕ್ಷಾಂತರ ಮಕ್ಕಳಿಗೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುತ್ತಿರುವುದು ನಿಜಕ್ಕೂ ಅದ್ಭುತವಾದ ಕಾರ್ಯವಾಗಿದೆ. 2000 ರಲ್ಲಿ ಆರಂಭವಾದ ಈ ಸೇವೆ ಇಂದು ವಿಶ್ವದ ಅತಿದೊಡ್ಡ ಎನ್‌ಜಿಒ-ಚಾಲಿತ ಮಿಡ್-ಡೇ ಮೀಲ್ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅಕ್ಷಯ ಪಾತ್ರವು ಪ್ರಸ್ತುತ ಭಾರತದ 11 ರಾಜ್ಯಗಳಲ್ಲಿ 27 ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ 13,500 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪ್ರತಿದಿನ 1.6 ಮಿಲಿಯನ್ ಮಕ್ಕಳಿಗೆ ಆಹಾರವನ್ನು ಒದಗಿಸುತ್ತಿರುವುದು ಸಹಾ ದಾಖಲೆಯಾಗಿದೆ.
ಇದು ಉಳಿದ ದೇವಾಲಯಗಳಂತೆ ಕೇವಲ ದೇವಾಲಯವಾಗಿರದೇ ಒಂದು ರೀತಿಯ ವಾಣಿಜ್ಯ ಸಂಕೀರ್ಣದ ರೀತಿಯಲ್ಲಿ ಇದ್ದು ದೇವಾಲಯದ ಸುತ್ತಲಿನ ಅವರಣದಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳು, ಆಟಿಕೆಗಳು, ವಿವಿಧ ರೀತಿಯ ಉಡುಪುಗಳು, ಬಟ್ಟೆ ಬರೆಯ ಜೊತೆ ಜೊತೆಯಲ್ಲೇ ದೇವಾಲಯದಿಂದ ಪ್ರಕಟವಾಗುವ ವಿವಿಧ ಧಾರ್ಮಿಕ ಪುಸ್ತಗಳ ಮಾರಾಟದ ವ್ಯವಸ್ಥೆ ಇದೆ.
ಇನ್ನೂ ದೇವಾಲಯಕ್ಕೆ ಹೊರಭಾಗಗಳಿಂದ ಬರುವವರಿಗಾಗಿಯೇ, ಸುಸಜ್ಜಿಯತಾದ ಯಾವುದೇ ರೀತಿಯ ಐಶಾರಾಮೀ ಹೋಟೆಲ್ಲಿಗೂ ಕಡಿಮೆ ಇಲ್ಲದಂತಹ ಸುಮಾರು 70 ಕೊಠಡಿಗಳ ಡಬಲ್ಸ್, ಟ್ರಿಪಲ್ಸ್, ಫ್ಯಾಮಿಲಿ ಸೂಟ್‌ಗಳು, ಅರೆ-ಡಾರ್ಮಿಟರಿ ಮತ್ತು ಡಾರ್ಮಿಟರಿಗಳು ಅತಿಥಿಗಳಿಗೆ ಯಾತ್ರಿನಿವಾಸ್ ಲಭ್ಯವಿದ್ದು ದೇವಾಲಯದ ಆಧ್ಯಾತ್ಮಿಕ ವಾತಾವರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅತಿಥಿಗಳಿಗೆ ಅವಕಾಶವನ್ನು ನೀಡುತ್ತವೆ.
ಅಲ್ಲಿ ಉಳಿದುಕೊಳ್ಳುವ ಅತಿಥಿಗಳಿಗೆ ಉಣಬಡಿಸುವ ರುಚಿಕರವಾದ ಸಸ್ಯಾಹಾರಿ, ಸಾತ್ವಿಕ ಆಹಾರಗಳು ದೇಹದಲ್ಲಿ ಲಘುತೆ ಮತ್ತು ಮನಸ್ಸಿನ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ. ಇನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆಂದೇ, ಯಾತ್ರಿ ನಿವಾಸದ ಪಕ್ಕದಲ್ಲಿರುವ ದಿ ಹೈಯರ್ ಟೇಸ್ಟ್ ರೆಸ್ಟೋರೆಂಟ್‌ನಲ್ಲಿ ಉತ್ತಮವಾದ ಭೋಜನದ ಸಾತ್ವಿಕ ಭೋಜನದ ವ್ಯವಸ್ಥೆ ಇದ್ದರೇ ದೇವಾಲಯದ ಆವರಣದಲ್ಲಿಯೂ ಇನ್ನೂ ಎರಡು ಮೂರು ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಪಾಕಪದ್ಧತಿಯ ರೆಸ್ಟೂರೆಂಟುಗಳು ಸಹಾ ಭಕ್ತರ ಹಸಿವನ್ನು ನೀಗಿಸುತ್ತವೆ.
ಇನ್ನು ವರ್ಷದ 365 ದಿನಗಳಲ್ಲಿಯೂ ಒಂದಾಲ್ಲಾ ಒಂದು ಚಟುವಟಿಕೆಗಳು ದೇವಾಲಯದ ತೆರೆದ ರಂಗಸ್ಥಳಗಳಲ್ಲಿ ನಡೆಯುತ್ತಲೇ ಇದ್ದು, ಅದರಲ್ಲೂ ವಿಶೇಷವಾಗಿ ಶಾಲಾ ಕಾಲೇಜು ಮಕ್ಕಳಿಗೆ ನಡೆಸುವ ಭಗವದ್ಗೀತೆ ಕಂಠಪಾಠಸ್ಪರ್ಧೆ, ವಿವಿಧ ವೇಷ ಭೂಷಣಗಳ ಸ್ಪರ್ಧೆಯ ಜೊತೆ ವಿವಿಧ ಹಬ್ಬ ಹರಿದಿನಗಳಿಗೆ ಅನುವಾಗುವಂತೆ ನೂರಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೊಂಗೆ ಸದಾಕಾಲವೂ ಭಕ್ತಾದಿಗಳಿಂದ ತುಂಬಿ ತುಳುಕುತ್ತಿರುತ್ತದೆ.
ಇಷ್ಟೆಲ್ಲಾ ಮಾಹಿತಿಗಳು ದೇವಾಲಯದ ಬಗ್ಗೆ ಆದರೆ, ದೇವಾಲಯದ ನಿರ್ವಹಣೆಯಲ್ಲಿಿ ಇರುವ ಸಿಬ್ಬಂಧಿಗಳು ಮತ್ತು ಇಸ್ಕಾನ್ ಅನುಯಾಯಿಗಳದ್ದೇ ಒಂದು ವಿಶೇಷವಾದ ಅನುಭವವಾಗಿದೆ. ಇಲ್ಲಿನ ಸೇವಾ ಸಿಬ್ಬಂಧಿಗಳು ಉಳಿದ ಕಂಪನಿಗಳಂತೆಯೇ ಸಂಬಳಕ್ಕೆ ಕೆಲಸ ಮಾಡುತ್ತಿದ್ದರೂ, ಅವರಿಗೆ ಸಂಬಳಕ್ಕಿಂತಲೂ ಸೇವಾ ಮನೋಭಾವನೆ ಹೆಚ್ಚಾಗಿರುವ ಕಾರಣ ಕೇವಲ ೮ ಗಂಟೆಯ ಕೆಲಸಕ್ಕೆ ಮಾತ್ರವೇ ಸೀಮಿತವಾಗಿರದೇ, ತಮ್ಮ ನಿಗಧಿತ ಕೆಲಸ ಕಾರ್ಯಗಳಲ್ಲದೇ ಸಮಯ ಸಂದರ್ಭಕ್ಕೆ ಅನುಗುಣವಾಗಿ ದೇವಾಲಯಕ್ಕೆ ಸಂಬಂಧ ಪಟ್ಟ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ನಿಸ್ಸಂಕೋಚವಾಗಿ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುವ ಮನಸ್ಥಿತಿಯನ್ನು ಹೊಂದಿರುವುದು ಬಹಳ ವಿಶೇಷವಾಗಿದೆ,
ಇನ್ನು ಇಸ್ಕಾನ್ ಅನುಯಾಯಿಗಳಿಗಂತೂ ಅದು ಕೇವಲ ದೇವಾಲಯವಾಗಿರದೇ ಗುರುಕುಲವಾಗಿದೆ ಎಂದರೂ ತಪ್ಪಾಗದು. ದೇವಾಲಯದಲ್ಲಿ ಖಾವಿ ಧಾರಿಗಳಾಗಿ ಕೊರಳಿನಲ್ಲಿ ತುಳಸೀಮಾಲೆ ಧರಿಸಿರುವ ಹೆಜ್ಜೆ ಹೆಜ್ಜೆಗೂ ಕಾಣಸಿಗುವ ಇವರುಗಳನ್ನು ಸ್ವಲ್ಪ ಕೂಲಂಕುಶವಾಗಿ ಮಾತನಾಡಿಸಿದರೆ, ಬಹುತೇಕರು ಪ್ರತಿಷ್ಟಿತ ಐಐಟಿ, ಐಐಎಂ ಗಳಲ್ಲಿ ಇಂಜಿನೀಯರ್, ವಾಣಿಜ್ಯ ಶಿಕ್ಷಣ, ಡಾಕ್ಟರ್ಗಳಾಗಿದ್ದು, ಸಣ್ಣ ವಯಸ್ಸಿನಲ್ಲೇ ಲೌಕಿಕ ಜೀವನದಿಂದ ಜಿಗುಪ್ಸೆಗೊಂಡು ತಮ್ಮ ಜೀವನವನ್ನು ಭಗವಂತನಿಗೆ ಅರ್ಪಿಸಿರುತ್ತಾರೆ. ಅಂತಹ ಅನುಯಾಯಿಗಳಿಗೆ ಸಂಸ್ಕೃತ, ವೇದಾಧ್ಯಯನ, ಭಗವದ್ಗೀತೆ, ಭಾಗವತದಂತಹ ಪಾಠಗಳನ್ನು ಹೇಳಿಕೊಡುವ ಮೂಲಕ ಪ್ರತಿಯೊಬ್ಬರೂ ಅಪ್ರತಿಮ ಪ್ರಕಾಂಡ ಪಂಡಿತರಾಗಿರುತ್ತಾರೆ.
ಶಿಕ್ಷಣ ಮುಗಿಸಿದ ನಂತತ ಅವರುಗಳಲ್ಲಿರುವ ಅಹಂ ಹೋಗಲಾಡಿಸುವ ಸಲುವಾಗಿ ಅಲ್ಲಿ ದೊರೆತ ಶಿಕ್ಷಣಕ್ಕೆ ಗುರುಕಾಣಿಕೆಯನ್ನು ಮಧುಕರಿವೃತ್ತಿ (ಭಿಕ್ಷೆಯ) ಮೂಲಕ ಸ್ವೀಕರಿ ಕೊಡಬೇಕಾಗಿರುವ ಪದ್ದತಿ ನಿಜಕ್ಕೂ ಅದ್ಭುತ ಎನಿಸಿದೆ. ಅದೇ ರೀತಿ ದೇವಾಲಯದ ವಿವಿಧ ರೀತಿಯ ಪ್ರಕಾಶನಗಳನ್ನು ಮಾರುವುದರ ಮೂಲಕ ಜನ ಸಾಮಾನ್ಯರೊಂದಿಗಿನ ಆಗು ಹೋಗು ಮತ್ತು ವ್ಯವಹಾರವನ್ನು ಕಲಿತುಕೊಂಡು ನಂತರ ಅವರಿಗೆ ದೀಕ್ಷೆಯನ್ನು ನೀಡಿ ಅವರವರ ಅರ್ಹತೆಯ ಮೇರೆಗೆ ವಿವಿಧ ರೀತಿಯ ಸೇವಾ ಚಟುವಟುಕೆಗಳನ್ನು ಮುನ್ನಡೆಸುವಂತಹ ಜವಾಬ್ಧಾರಿಗಳನ್ನು ಅವರಿಗೆ ನೀಡಲಾಗುತ್ತದೆ.
ರಾಜಾಜಿನಗರದಲ್ಲಿರುವ ಈ ದೇವಾಲಯಕ್ಕೆ ಉತ್ತಮವಾದ ಬಸ್ ಸೌಕರ್ಯಗಳು ಇದ್ದು ಮೆಟ್ರೋ ನಿಲ್ದಾಣವೂ ಸಹಾ ದೇವಾಲಯದ ಕೂಗಳತೆಯ ದೂರದಲ್ಲಿದೆ. ಇನ್ನು ಖಾಸಗೀ ವಾಹನ ಮತ್ತು ದ್ವಿಚಕ್ರವಾಹನಗಳ ನಿಲ್ದಾಣಕ್ಕೆ ದೇವಾಲಯದ ನೆಲಮಾಳಿಗೆಯಲ್ಲಿ ವ್ಯವಸ್ಥೆಯೂ ಇದೆ.
ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೇ ಇನ್ನೇಕೆ ತಡಾ ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು, ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ, ಮೇಲೆ ತಿಳಿಸಿದ ಎಲ್ಲಾ ದೇವರುಗಳ ದರ್ಶನ ಮಾಡಿಕೊಂಡು ಶಾಪಿಂಗ್ ಮಾಡಿಕೊಂಡು, ದೇವರ ಪ್ರಸಾದದ ಜೊತೆ ಸಾತ್ವಿಕ ಆಹಾರದ ಸವಿಯನ್ನು ಸವಿದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ