
ಸಾಮಾನ್ಯವಾಗಿ ಜಪಾನ್ ದೇಶದ ತಂತ್ರಜ್ಞಾನದ ಕರ್ನಾಟಕದ ಬಿಡದಿಯ ಟಯೋಟ ಕಂಪನಿಯಲ್ಲಿ ತಯಾರಾಗುವ ಇನ್ನೋವಾ ಕಾರುಗಳು ಯಾವುದೇ ಪ್ರಮುಖ ಸಮಸ್ಯೆಗಳಿಲ್ಲದೆ ಸುಮಾರು 10 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ಕ್ರಮಿಸಬಹುದಾಗಿದ್ದು ಈ ವಿಭಾಗದಲ್ಲಿನ ಇತರ ಕಾರುಗಳಿಗೆ ಹೋಲಿಸಿದರೆ ಟೊಯೊಟಾ ಇನ್ನೋವಾಗಳು ಅತ್ಯಂತ ಆರಾಮದಾಯಕ ಪ್ರಯಾಣಕ್ಕಾಗಿ ವಿಶ್ವಾಸಾರ್ಹವಾಗಿವೆ. ಹಾಗಾಗಿಯೇ ಸರ್ಕಾರಿ ಅಧಿಕಾರಿಗಳು ಅದರಲ್ಲೂ ರಾಜ್ಯದ ಸಚಿವ ಸಂಪುಟದ ಸಚಿವರುಗಳಿಗೆ ಸರ್ಕಾರದ ವತಿಯಿಂದ ಸರ್ಕಾರೀ ಅಧಿಕೃತ ಉಪಯೋಗಕ್ಕಾಗಿ ಇನ್ನೊವ ಕಾರುಗಳನ್ನೇ ಕೊಡಲಾಗುತ್ತದೆ. 10 ಲಕ್ಷ ಕಿಲೋಮೀಟರ್‌ಗಿಂತಲೂ ಅಧಿಕ ಬಳಕೆ ಮಾಡಬಹುದು ಎಂದರೆ ಜನಸಾಮಾನ್ಯರು 10-15 ವರ್ಷಗಳ ಕಾಲ ಈ ಕಾರುಗಳನ್ನು ಬಳಸಬಹುದಾಗಿದೆ.
ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವೇ ಇರುವ ಸರ್ಕಾರ. ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಪ್ರಜಾಸೇವೆಗೆಂದೇ ಇರುವವರು ನಾವುಗಳು ಎಂದು ಎಗ್ಗಿಲ್ಲದೇ ಪಕ್ಷಾತೀತವಾಗಿ ಭಾಷಣ ಬಿಗಿಯುವ ಮತ್ತು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಜನರಿಗೆ ವಿವಿಧ ರೀತಿಯ ಆಮಿಷಗಳನ್ನೊಡ್ಡಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ ಮತ್ತು ವಿವಿಧ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರುಗಳಾಗಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತಾವುಗಳು ಪ್ರಜಾಸೇವಕರು ಎಂಬುದನ್ನೇ ಮರೆತು ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದ್ದರೂ ಅದಕ್ಕೂ ತಮಗೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ತಮ್ಮ ವಯಕ್ತಿಕ ಸವಲತ್ತುಗಳನ್ನು ಪಡೆಯಲು ಮುಂದಾಗುವುದು ನಿಜಕ್ಕೂ ವಿಪರ್ಯಾಸವೇ ಸರಿ.
ವಿವಿಧ ಉಚಿತಗಳ ಆಮಿಷಯಗಳಿಂದ ಕನ್ನಡಿಗರನ್ನು ಮರಳು ಮಾಡಿದ ಪ್ರಸ್ತುತ ಸಿದ್ದರಾಮಯ್ಯನವವರ ಕಾಂಗ್ರೇಸ್ ಸರ್ಕಾರವೂ ಸಹಾ ಇದಕ್ಕೆ ಹೊರತಾಗಿರುವುದು ದುಃಖಕರವಾಗಿದೆ. ತಮ್ಮ ಅಧಿಕಾರದ ತೆವಲಿಗಾಗಿ ವಿವಿಧ ಉಚಿತಗಳ ಆಮಿಷಗಳನ್ನು ತೋರಿಸಿ ಅವುಗಳನ್ನು ಜಾರಿಗೆ ಮಾಡುವುದರಲ್ಲೇ ಹೈರಾಣಾಗಿರುವಾಗಲೇ, ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ, ಈ ಬಾರಿ ರಾಜ್ಯದಲ್ಲಿ ವಾಡಿಕೆಯಂತೆ ಮಳೆಯಾಗದೇ ಎಲ್ಲಾ ನದಿ ಕೊಳ್ಳಗಳು ಕೆರೆಗಟ್ಟೆಗಳಲ್ಲಿ ನೀರಿಲ್ಲದೇ ಬಾಯಿ ಬಿರಿದು ಕೊಂಡಿರುವ ಕಾರಣ, ಭೀಕರ ಬರಗಾಲ ಸೃಷ್ಠಿಯಾಗಿದೆ. ಉಪಮುಖ್ಯಮಂತ್ರಿಗಳಂತೂ ಸಾರ್ವಜನಿಕವಾಗಿಯೇ ಘೋಷಿಸಿರುವ ಉಚಿತ ಆಮಿಷಗಳನ್ನು ಈಡೇರಿಸುವುದಕ್ಕೇ ಹಣವಿಲ್ಲ. ಹಾಗಾಗಿ ಅಭಿವೃದ್ಧಿಯನ್ನು ಮಾತ್ರ ಕೇಳಬೇಡಿ ಎಂದು ಹೇಳಿಕೆ ನೀಡಿಯಾಗಿದೆ.

ಕಾವೇರಿ ನಿಗಮದ ಆದೇಶದಂತೆ ತಮಿಳುನಾಡಿಗೆ ಕನ್ನಂಬಾಡಿ ಕಟ್ಟೆಯಿಂದ ನೀರನ್ನು ಬಿಟ್ಟ ಪರಿಣಾಮ ನಮ್ಮ ರೈತರುಗಳ ಕೃಷಿಗೆ ಬಿಡಿ, ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿಗೆ ತಲುಪಿದನ್ನು ಪ್ರಶ್ನಿಸಿ ರಾಜ್ಯವಾಸಿಗಳು ಎರಡು ಬಾರಿ ಬಂದ್ ಸಹಾ ಆಚರಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದರೂ, ಎಮ್ಮೆ ಚರ್ಮದಂತೆ ದಪ್ಪ ಚರ್ಮದ ಈ ಸರ್ಕಾರ. ಇಂತಹ ಬರಗಾಲದಲ್ಲೂ ರಾಜ್ಯ ಸರ್ಕಾರ ಸಂಪುಟದ 33 ಸಚಿವರಿಗಾಗಿ ಬರೋಬ್ಬರಿ 9 ಕೋಟಿ 90 ಲಕ್ಷ ರೂ ಅರ್ಥಾತ್ ಹತ್ತು ಕೋಟಿಯ ವೆಚ್ಚದಲ್ಲಿ ಇನೋವಾ ಹೈಬ್ರೀಡ್ ಕಾರುಗಳನ್ನು ಖರೀದಿ ಮಾಡಿರುವುದು ರಾಜ್ಯದ ಜನರ ಹುಬ್ಬೇರುವಂತೆ ಮಾಡಿದೆ.
ಪ್ರಸ್ತುತ ಮಂತ್ರಿಗಳಾಗಿರುವ ಬಹುತೇಕರುಗಳು ಸ್ವತಃ ಘೋಷಸಿಕೊಂಡಿರುವಂತೆ ಬಹುತೇಕರುಗಳು ಕೋಟ್ಯಾಧಿಪತಿಗಳಾಗಿದ್ದು ತಮ್ಮದೇ ಆದ ಸ್ವಂತ ಕಾರುಗಳನ್ನು ಹೊಂದಿದ್ದಾರೆ. ಅದೂ ಅಲ್ಲದೇ ಕಳೆದ ಬಾರಿಯ ಮಂತ್ರಿಮಂಡಲದವರೂ ಹೊಸದಾಗಿ ಅಧಿಕಾರಕ್ಕೆ ಬಂದಾಗ, ಇದೇ ರೀತಿ ಹೊಸಾ ಕಾರುಗಳನ್ನು ಕೊಂಡು ಕೊಂಡಿದ್ದು, ಬಹುತೇಕ ಅವೆಲ್ಲವೂ ಬಳಸುವಂತಹ ಸುಸ್ಥಿತಿಯಲ್ಲಿ ಇದ್ದು, ಆ ಕಾರುಗಳನ್ನು ಬಳಸೇ ಮತ್ತೇ ಹೊಸಾ ಕಾರುಗಳನ್ನು ಕೊಳ್ಳುತ್ತಿರುವುದು ನಿಜಕ್ಕೂ ದುಃಖವನ್ನು ತರಿಸುತ್ತಿದೆ.
ಮಳೆ ಇಲ್ಲದ ಕಾರಣ ರೈತರುಗಳಿಗೆ ನಿರಂತರ ವಿದ್ಯುತ್ ನೀಡುವ ಮಾಡಲು ಜಲಪಾತಗಳು ಬರಿದಾಗಿವೆ. ಇನ್ನು ಹೊರಗಿನಿಂದ ವಿದ್ಯುತ ಖರೀಧಿಸಲು ಹಣವಿರದೇ ರಾಜ್ಯ ಅಕ್ಷರಶಃ ದೀವಾಳಿ ಸ್ಥಿತಿಯನ್ನು ತಲುಪಿರುವಾಗ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಗಿ ಆರ್ಥಿಕವಾಗಿ ಸುಧಾರಣೆಗಳನ್ನು ತರಬೇಕಾದವರೇ ಬೇಜವಾಬ್ಧಾರಿ ತನದಿಂದ ರಾಜ್ಯದಲ್ಲಿರುವ ತೀವ್ರ ಬರವನ್ನೂ ಲೆಕ್ಕಿಸದೆ 33 ಸಚಿವರಿಗೆ ಹೊಸ ಕಾರು ಭಾಗ್ಯ ನೀಡಿರುವುದು ನಿಜಕ್ಕೂ ಹೇಯಕಾರಿಯಾಗಿದೆ.
ಕಳೆದ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಜರಿಯುತ್ತಲೇ ಅಧಿಕಾರಕ್ಕೆ ಬಂದ ಈ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಇಲಾಖೆಗಳಲ್ಲಿಯೂ ವರ್ಗಾವಣೆ ಮಾಡುವ ಮೂಲಕ ನಿಧಾನವಾಗಿ ತಮ್ಮ ವಯಕ್ತಿಕ ಆಮಧಿನಿಯನ್ನು ವಿಸ್ತರಿಸಿಕೊಂಡ ಸಚಿವರುಗಳು ಈಗ ದೇಶದ ಮುಂದಿನ ತಿಂಗಳು ನಡೆಯಲಿರುವ ಪಂಚ ರಾಜ್ಯ ಚುನಾವಣೆಗೆಂದು ಮಾಜೀ ಕಾರ್ಪೋರೇಟರುಗಳು, ಗುತ್ತಿಗೆದಾರರು ಮತ್ತು ವಿವಿಧ ಇಲಾಖೆಯ ಸರ್ಕಾರೀ ಅಧಿಕಾರಿಗಳಿಂದ ಎಗ್ಗಿಲ್ಲದೇ ನಿಧಿ ಸಂಗ್ರಹಿಸುವ ಮೂಲಕ, ಪ್ರಸ್ತುತ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರ ನಮ್ಮ ರಾಜ್ಯವನ್ನು ATM ಅಗಿ ಮಾಡಿಕೊಂಡಿದ್ದಾರೆ ಎಂದು ಜನರುಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪುಷ್ಟಿಕೊಡುವಂತೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಮಾಡಿದ ಧಾಳಿಯಲ್ಲಿ ಮಾಜೀ ಕಾರ್ಪೋರೇಟರ್ ಮನೆಯಲ್ಲಿ ಕೋಟಿ ನಗದು ಮತ್ತು ಮತ್ತೊಬ್ಬ ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿರುವುದು ಪುಷ್ಟೀಕರಿಸುವಂತಿದೆ.

ರಾಜ್ಯದಲ್ಲಿ ವಾಡಿಕೆಯಂತೆ ಉತ್ತಮ ಮಳೆಯಾಗದೇ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಒಂದು ಕಡೆ ಮಳೆ,ಬೆಳೆಯಿಲ್ಲದೇ ರೈತರುಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದರೆ. ಮತ್ತೊಂದು ಕಡೆ ಆಡಳಿತ ಪಕ್ಷದ ಶಾಸಕರುಗಳೇ ತಮ್ಮ ಕ್ಷೇತ್ರದ ಅಭಿವೃದ್ದಿ ಕೆಲಸಗಳೆಲ್ಲಾ ಮಂದಗತಿಯಲ್ಲಿ ಸಾಗುತ್ತಿವೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದಾರೆ. ರಾಜರಾಜೇಶ್ವರಿ ನಗರದ ಶಾಸಕರಾದ ಶ್ರೀ ಮುನಿರತ್ನಂ ನಾಯ್ಡು ಅವರಂತೂ ಕಳೆದ ಬಾರಿ ಅವರ ಕ್ಷೇತ್ರಕ್ಕೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುದಾನವನ್ನು ಪ್ರಸ್ತುತ ಸರ್ಕಾರ ಕಡಿತ ಗೊಳಿಸಿ ಅದನ್ನು ಬ್ಯಾಟರಾಯನಪುರ ಮತ್ತು ಹೆಬ್ಬಾಳದಲ್ಲಿರುವ ಕಾಂಗ್ರೇಸ್ ಶಾಸಕರಿಗೆ ವರ್ಗಾಯಿಸಿದ್ದಾರೆ ಎಂದು ಗಾಂಧಿ ಪ್ರತಿಮೆಯ ಮುಂದೆ ಧರಣಿ ಮಾಡಿದ್ದೂ ಹಚ್ಚ ಹಸಿರಾಗಿರುವಾಗಲೇ, ಸಿದ್ದರಾಮಯ್ಯನವರ ಸರ್ಕಾರ, ದಸರಾ ಹಬ್ಬಕ್ಕೆ ತಮ್ಮ ಸಂಪುಟದ 33 ಸಚಿವರಿಗೆ ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ಇನೋವಾ ಹೈಬ್ರೀಡ್ ಭರ್ಜರಿ ಕಾರುಗಳನ್ನು ಖರೀದಿಸಿ ಉಡುಗೊರೆಯನ್ನು ನೀಡುವ ಮೂಲಕ ರೋಮ್ ನಗರ ಹೊತ್ತಿ ಉರಿಯುತ್ತಿದ್ದರೂ, ತನ್ನ ಪಾಡಿಗೆ ತಾನು ಪಿಟೀಲು ನುಡಿಸುತ್ತಿದ್ದ ಅಂದಿನ ರೋಮ್ ರಾಜನನ್ನು ನೆನಪಿಸುವಂತೆ ಮಾಡಿದ್ದಾರೆ ಎಂದರೂ ತಪ್ಪಾಗದು.

ಹಾಗಾದರೇ ಸಚಿವವರಿಗೆ ಹೊಸಾ ಕಾರ್ ನೀಡುವ ಸಂಪ್ರದಾಯ ಕೇವಲ ಕಾಂಗ್ರೇಸ್ ಸರ್ಕಾರದ್ದು ಮಾತ್ರವೇ ಎಂದರೆ ತಪ್ಪಾದೀತು. ವಿಧಾನ ಸೌಧದಲ್ಲಿ ಹೊಸಾ ಕಾರುಗಳ ಖರೀದಿ ಮತ್ತು ಹಳೆಯ ಕಾರುಗಳ ಮಾರಾಟವು ಒಂದು ದೊಡ್ಡ ಕಾಳ ದಂಧೆಯಂತಾಗಿದ್ದು ಇದ್ದು ಅದನ್ನು ಕೆಲವು ಪಟ್ಟಭಧ್ರ ಹಿತಾಸಕ್ತಿಯ ಕಾಣದ ಕೈಗಳು ನಿಯಂತ್ರಿಸುತ್ತಿವೆ. ಪ್ರತೀ ಬಾರಿ ಸರ್ಕಾರ ಬದಲಾದಾಗ ಬಿಡಿ, ಸಚಿವ ಸಂಪುಟ ಪುನರ್ ರಚನೆಯಾದಾಗಲೂ, ಕಾರುಗಳು ಉತ್ತಮ ಸ್ಥಿತಿಯಲ್ಲಿದ್ದರೂ, ಅವುಗಳನ್ನು ಬಳಸದೇ ಪ್ರತೀ ಸಚಿವರುಗಳಿಗೂ ಹೊಸಾ ಕಾರುಗಳನ್ನೇ ನೀಡುವ ಒಂದು ಅಲಿಖಿತ ನಿಯಮಗಳನ್ನು ರೂಢಿಗೆ ತಂದಿದ್ದಾರೆ. ಈ ಕುರಿತಂತೆ ಈ ಹಿಂದೆ ವಿಚಾರಿಸಿದಾಗ, ನಮ್ಮ ಸಮಾಜದಲ್ಲಿರುವ ಮೌಡ್ಯಗಳನ್ನು ತೊಡೆದು ಹಾಕಬೇಕು ಎಂದು ಸಭೆಗಳಲ್ಲಿ ಅಬ್ಬಿರಿದು ಬೊಬ್ಬಿರಿಯುವ ಸಚಿವರುಗಳೇ, ಕಾರಿನ ವಾಸ್ತು ದೋಷದಿಂದಾಗಿ ಅಧಿಕಾರ ಕಳೆದುಕೊಂಡ ಹಿಂದಿನ ಮಂತ್ರಿಗಳ ಕಾರುಗಳನ್ನು ತಾವು ಉಪಯೋಗಿಸುವುದಿಲ್ಲ ಎಂದು ರಚ್ಚೇ ಹಿಡಿಯುವ ಮೂಲಕ ಮೌಡ್ಯವನ್ನು ಎತ್ತಿ ಹಿಡಿಯುತ್ತಿರುವುದು ವಿಪರ್ಯಾಸ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇದಕ್ಕೆ ಪುರಾವೆ ಎನ್ನುವಂತೆ ಈ ಹಿಂದೆ ಮೊದಲ ಬಾರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ, ಅವರ ಕಾರಿನ ಮೇಲೆ ಅಚಾನಕ್ಕಾಗಿ ಕಾಗೆ ಕುಳಿತದ್ದನ್ನೇ ನೆಪ ಮಾಡಿಕೊಂಡು ಸುಸ್ಥಿತಿಯಲ್ಲಿದ್ದ ಕಾರಿನ ಬದಲಾಗಿ ಸರ್ಕಾರೀ ಖರ್ಚಿನಲ್ಲಿ ಹೊಸಾ ಕಾರನ್ನು ಖರೀಧಿಸಿದ್ದನ್ನು ನೆನಪು ಮಾಡಿಕೊಳ್ಳಬಹುದಾಗಿದೆ. ನಂತರ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯ ಅಧಿಕಾರವನ್ನು ಕಳೆದುಕೊಂಡು ವಿರೋಧ ಪಕ್ಷದ ನಾಯಕರಾದಾಗಲೂ, ಕೆಲವೇ ಕೆಲವು ತಿಂಗಳುಗಳ ಹಿಂದೆ ಖರೀಧಿಸಿದ್ದ ಕಾರನ್ನು ಬಳಸದೇ, ಸಂಪುಟ ದರ್ಜೆಯ ಸ್ಥಾನಮಾನವನ್ನೇ ಪಡೆಯುವ ವಿರೋಧ ಪಕ್ಷದ ನಾಯಕರಾಗಿ ಮತ್ತೊಂದು ಹೊಸಾ ಕಾರನ್ನು ಖರೀಧಿ ಮಾಡಿದ್ದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ.
ಕೆಲವೊಮ್ಮೆ ಸಚಿವರು ತಮ್ಮ ಸ್ವಂತ ಕಾರುಗಳನ್ನು ಇಲ್ಲವೇ ಸುಸ್ಥಿತಿಯಲ್ಲಿರುವ ಹಳೆಯ ಕಾರುಗಳನ್ಣೇ ಬಳಸಲು ಮುಂದಾದರೂ, ವಿಧಾನ ಸೌಧದಲ್ಲಿರುವ ಕಾರು ಕೊಳ್ಳು ಮಾರಾಟದ ಲಾಬಿ, ಪ್ರೋಟೋಕಾಲ್ ನೆಪವೊಡ್ಡಿ ಹೊಸಾ ಕಾರುಗಳನ್ನೇ ಖರೀಧಿಸುವಂತೆ ಸಚಿವರ ಮೇಲೆ ಒತ್ತಾಯ ಹೇರಿ, ನಂತರ ಈ ರೀತಿಯಲ್ಲಿ ಸುಸ್ಥಿತಿಯಲ್ಲಿರುವ ಸಚಿವರು ಬಳಸಿದ ಕಾರುಗಳನ್ನು ತಮ್ಮ ಅನುಕೂಲದರಿಗೆ ಮಾರುಕಟ್ಟೆಗಿಂತಲೂ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುವ ದಂಧೆ ನಡೆಸುತ್ತಿದ್ದು, ಈ ಕುರಿತಂತೆ ಸಂಬಂಧ ಪಟ್ಟ ಇಲಾಖೆಯವರುಗಳು ಸ್ವಲ್ಪ ನಿಗಾವಹಿಸಿದಲ್ಲಿ ಬೆವರು ಸುರಿಸಿ ಕಷ್ಟ ಪಟ್ಟು ದುಡಿದ ರಾಜ್ಯದ ಜನರು ಕಟ್ಟಿದ ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸಬಹುದಾಗಿದೆ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ