ಈ ಸಮಾಜದಲ್ಲಿ ಪ್ರಖ್ಯಾತರಾಗ ಬೇಕು ಎಂದರೆ ಜೀವನದಲ್ಲಿ ಏನಾದರೂ ಮಹತ್ತರವಾದದ್ದನ್ನು ಸಾಧಿಸಬೇಕು. ಇಲ್ಲವೇ ಬೇರೆಯವರ ಸಾಧನೆಗೆ ಪ್ರೇರಣೆ, ಪ್ರೋತ್ಸಾಹ ಇಲ್ಲವೇ ಮಾರ್ಗದರ್ಶಕರಾಗಿರ ಬೇಕು. ಅಥ್ಲೆಟಿಕ್ಗ್ಸ್ ನಲ್ಲಿ ಈ ದೇಶದ ಅನಭಿಷಕ್ತ ರಾಣಿ ಪಿ.ಟಿ. ಉಷಾ ಅವರು ಈ ದೇಶದಲ್ಲಿ ಎಷ್ಟು ಪ್ರಸಿದ್ಧರೋ ಅವಷ್ಟೇ ಅವರ ತರಭೇತುದಾರರಾದ ನಂಬಿಯಾರ್ ಅವರು ಪ್ರಸಿದ್ಧಿಯನ್ನು ಪಡೆದಿದ್ದರು. ಅದೇ ರೀತಿಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತ ಎಂದರೆ ಚಾರಣಿಗರಿಗೆ ಸ್ವರ್ಗ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಸುಮಾರು ಎರಡು ದಿನಗಳ ಕಾಲ ತೆಗೆದುಕೊಳ್ಳುವ ದುರ್ಗಮವಾದ ಪ್ರದೇಶದಲ್ಲಿ ಆ ಚಾರಣಿಗರಿಗೆ ಹತ್ತುವುದೇ ಕಷ್ಟ ಎನ್ನುವಂತಹ ಸಂಧರ್ಭದಲ್ಲಿ ರಾತ್ರಿಯ ಹೊತ್ತು ತಂಗಲು ವಸತಿ ಮತ್ತು ಊಟದ ವ್ಯವಸ್ಥೆಯನ್ನು ಜೊತೆಯಲ್ಲೇ ಕೊಂಡೊಯ್ಯುವುದು ದುಸ್ಸಾಹಸವೇ ಸರಿ. ಇಂತಹ ಸಂಧರ್ಭದಲ್ಲಿ ಥಟ್ ಅಂತಾ ಎಲ್ಲರ ಮನಸ್ಸಿನಲ್ಲಿ ಮೂಡುತ್ತಿದ್ದದ್ದೇ, ಭಟ್ರ ಮನೇ. ಅಂತಹ ದುರ್ಗಮ ಪ್ರದೇಶದಲ್ಲಿಯೂ ಸಹಾ ಚಾರಣಿಗರಿಗೆ ಅಚ್ಚುಕಟ್ಟಾದ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಲಕ್ಷಾಂತರ ಚಾರಣಿಗರ ಅಚ್ಚುಮೆಚ್ಚಾಗಿದ್ದ ಗಿರಿಗದ್ದೆಯ ಶ್ರೀ ಮಹಾಲಿಂಗ ಭಟ್ ಅವರು ನಿಧನರಾದ ಸಂದರ್ಭದಲ್ಲಿ ಅವರ ಸಾಹಸ ಮತ್ತು ಯಶೋಗಾಥೆಯ ಪರಿಚಯ ಇದೋ ನಿಮಗಾಗಿ.
ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ ಲೋಕದೊಳಗೆ ಹುಟ್ಟಿದ ಬಳಿಕ,
ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ಎಂಬ ವಚನವನ್ನು ಅಕ್ಕ ಮಹಾದೇವಿಯವರು ಬಹುಶಃ ಗಿರಿಗದ್ದೆಯ ಶ್ರೀ ಮಹಾಲಿಂಗ ಭಟ್ ಅವರ ಕುರಿತಾಗಿಯೇ ಬರದಿದ್ದರೇನೋ ಎಂದರು ತಪ್ಪಾಗದು.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗಿನ ಗಡಿಯಲ್ಲಿರುವ ಸಮುದ್ರ ಮಟ್ಟದಿಂದ 1712 ಮೀಟರ್ ಎತ್ತರದಲ್ಲಿರುವ ಪರ್ವತವೇ ಕುಮಾರ ಪರ್ವತ. ಪೌರಾಣಿಕವಾಗಿ ಪ್ರಸಿದ್ಧವಾದ ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಮಾರು 13 ಕಿ.ಮೀ. ದೂರದಲ್ಲಿ ಈ ಪರ್ವತವಿದ್ದು, ಸುಬ್ರಹ್ಮಣ್ಯದಿಂದ ಹೊರಟು ಸುಮಾರು 4-5 ಕಿ.ಮೀ ಕ್ರಮಿಸಿದಲ್ಲಿ ಒಂದು ದಟ್ಟವಾದ ಅರಣ್ಯ ಸಿಗುತ್ತದೆ. ಅಲ್ಲಿಂದ ಕೊಂಚ ಮುಂದೆ ತೆರಳಿ ಅಲ್ಲಿ ಸಿಗುವ ಅರಣ್ಯ ಇಲಾಖೆಯ ತಪಾಸಣಾ ಕೇಂದ್ರದಲ್ಲಿ ಹಣ ಪಾವತಿಸಿ ಅನುಮತಿ ಪಡೆದು ಮುಂದುವರೆದು ಅಲ್ಲಿರುವ ಕಲ್ಲಿನ ಮಂಟಪದ ಬಳಿಯಲ್ಲಿರುವ ವರ್ಷದ 365 ದಿನಗಳ ಕಾಲವೂ ನೀರು ಚಿಮ್ಮುವ ಸಣ್ಣ ಗುಂಡಿಯಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದು ಕಡಿದಾದ ಬಂಡೆಯನ್ನು ಹತ್ತಿ ಮುಂದುವರೆಯುತ್ತಿದ್ದಂತೆಯೇ, ಮನಸ್ಸಿಗೆ ಮುದ ನೀಡುವಂತಹ ಸೌಂದರ್ಯವನ್ನು ಹೊಂದಿರುವ ಕುಮಾರ ಪರ್ವತ ಚಾರಣಿಗರಿಗೆ ಎದುರಾಗುತ್ತದೆ.
ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಎಷ್ಟು ಚನ್ನಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದ್ದು, ಚಾರಣದ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗಿರುತ್ತದೆ, ಸ್ವಲ್ಪ ಅಪ್ಪಿ ತಪ್ಪಿದರೂ, ಹಲವಾರು ಅಪಾಯಗಳನ್ನು ಎದುರು ಹಾಕಿಕೊಳ್ಳಬೇಕಾದಂತಹ ಪರಿಸ್ಥಿತಿ ಇರುವುದಲ್ಲದೇ, ಆಳೆತ್ತರಕ್ಕೆ ಬೆಳೆದು ನಿಂತ ಆನೆ ಹುಲ್ಲಿನಿಂದ ಮಧ್ಯೆ ದಾರಿತಪ್ಪುವ ಸಂಭವವಲ್ಲದೇ, ಕಾಡುಪ್ರಾಣಿಗಳ ದಾಳಿಯ ಸಂಭವವೂ ಹೆಚ್ಚಿರುತ್ತದೆ. ಇನ್ನೂ ಕೆಲವು ಬಾರಿ ಆ ಹುಲ್ಲುಗಳು ಮೈ ಕೈ ತರಚಿ ಗಾಯಮಾಡಿಕೊಳ್ಳುವ ಅಪಾಯವೂ ಇದೆ. ತೀರಾ ಸುಲಭವಲ್ಲದ ಆದರೆ ಅಷ್ಟೊಂದು ಕಷ್ಟವೂ ಅಲ್ಲದ ಪುಷ್ಪಗಿರಿ ಚಾರಣ ಅರ್ಥಾತ್ ಕುಮಾರ ಪರ್ವತ ಚಾರಣವು ಕೆಳಗಿನಿಂದ ಶಿಖರದವರೆಗೆ ಸುಮಾರು 25-28 ಕಿ.ಮೀ ದೂರ ಕ್ರಮಿಸಬೇಕಾಗಿದ್ದು, ಹವ್ಯಾಸಿ ಚಾರಣಿಗರು ಇದನ್ನು ಪೂರೈಸಲು ಸುಮಾರು ಎರಡು ದಿನಗಳ ಕಾಲ ತೆಗೆದುಕೊಳ್ಳುತ್ತಾರೆ.
ಈ ರೀತಿಯ ಕುಮಾರ ಪರ್ವತ ಚಾರಣದ ಪ್ರಮುಖ ಆಕರ್ಷಣೆಗಳಲ್ಲಿ ಗಿರಿಗುಡ್ಡೆ ವ್ಯೂ ಪಾಯಿಂಟ್, ಕುಮಾರ ಪರ್ವತ ವ್ಯೂ ಪಾಯಿಂಟ್‌ಗಳು, ನಿತ್ಯಾನಂದ ಶ್ರೀ ಕೈಲಾಸ ದೇವಸ್ಥಾನ, ಪುಷ್ಪಗಿರಿ ಶಿಖರದ ಜೊತೆ ಮತ್ತೊಂದು ಆಕರ್ಷಣೆಯೇ ಗಿರಿಗದ್ದೆಯ ಭಟ್ಟರ ಮನೆ ಎಂದರೂ ತಪ್ಪಾಗದು. ಕಲ್ಲುಮಣ್ಣಿನ ಹಾದಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪೇಟೆಯಿಂದ ಗಿರಿಗದ್ದೆಗೆ ತಲುಪಲು ಸುಮಾರು ಎರಡೂವರೆ ಇಂದು ಮೂರು ಗಂಟೆಗಳ ಕಾಲ ಬೇಕಿದ್ದು, ನಗರದಲ್ಲಿ ಐಶಾರಾಮಿ ಜೀವನಕ್ಕೆ ಒಗ್ಗಿಹೋಗಿರುವ ಹವ್ಯಾಸಿ ಚಾರಣಿಗರಿಗೆ ಇಷ್ಟು ಹತ್ತುವಷ್ಟರಲ್ಲೇ ಅವರ ದೇಹ ಬಳಲಿ ಬೆಂಡಾಗುವುದಲ್ಲದೇ, ಹೊಟ್ಟೆಯೂ ಸಹಾ ಚುರುಕ್ ಎಂದೆನಿಸಿ, ಆರಾಮಕ್ಕಾಗಿ ಒಂದು ಪ್ರಶಾಂತ ಸ್ಥಳವನ್ನು ಅರಸುತ್ತಿರುತ್ತದೆ. ಈ ಹಂತದಲ್ಲಿ ಚಾರಣಿಗರಿಗೆ ಆಶ್ರಯ ನೀಡುವವರೇ ಗಿರಿಗದ್ದೆಯ ಭಟ್ಟರ ಮನೆಯವರು. ಮರದ ಬೇರುಗಳು, ಚರಳುಕಲ್ಲು, ಜಾರುವ ಬಂಡೆಗಳು, ಹೆಜ್ಜೆಯ ಮೇಲೆ ಹೆಜ್ಜೆಯೊಂದನ್ನು ಇಟ್ಟು ಕೊಂಡು ಅಬ್ಬಬ್ಬಾ ಇನ್ನು ಮುಂದೆ ನಡೆಯಲು ಆಗುವುದೇ ಇಲ್ಲಾ ಎಂದು ಆಯಾಸ ಪರಿಹಾರಕ್ಕಾಗಿ ಮನಸ್ಸು ಹಾತೊರೆಯುತ್ತಿರುವಾಘಲೇ ಧುತ್ ಎಂದು ಭಟ್ಟರ ಮನೆ ಎದುರಾಗುತ್ತದೆ. ತೋಟ ಮತ್ತು ಅರಣ್ಯದ ನಡುವಿನ ಕಣಿವೆಯಂಥ ಭಾಗದಲ್ಲಿರುವ ಮಂಗಳೂರು ಹೆಂಚು ಮತ್ತು ಶೀಟಿನ ಛಾವಣಿಯ ಭಟ್ಟರ ಮನೆ ಇದ್ದು ಅದರ ಪಕ್ಕದಲ್ಲಿ ರಾತ್ರಿ ಉಳಿದುಕೊಳ್ಳಲು ಪ್ರವಾಸಿಗರು ಟೆಂಟುಗಳನ್ನು ಹಾಕಿಕೊಳ್ಳುವ ಸೌಲಭ್ಯವೂ ಇದ್ದೂ, ಚಾರಣಿಗರಿರ ಅನುಕೂಲಕ್ಖಾಗಿ ತಾತ್ಕಾಲಿಕವಾದ ಶೌಚಾಲಯವನ್ನೂ ನಿರ್ಮಿಸಿದ್ದಾರೆ.
ದಣಿದು ಬಂದ ಚಾರಣಿಗರಿಗೆ ಸೌರಶಕ್ತಿ ವ್ಯವಸ್ಥೆಯಿಂದ ಕೈಕಾಲು ತೊಳೆದುಕೊಳ್ಳಲು ಬಿಸಿ ನೀರಿನ ವ್ಯವಸ್ಥೆ ಇದ್ದು, ಆ ಬಿಸಿ ಬಿಸಿ ನೀರು ಕೈ ಕಾಲುಗಳ ಮೇಲೆ ಬೀಳುತ್ತಿದ್ದಂತೆಯೇ ಸ್ವರ್ಗಕ್ಕೆ ಮೂರು ಗೇಣು ಎನಿಸುತ್ತದೆ ಎಂದರೂ ಅತಿಶಯವಾಗದು. ಸಾಧಾರಣವಾಗಿ ಚಾರಣಿಗರು ಮುಂಚೆಯೇ ಭಟ್ಟರ ಮನೆಗೆ ಇಂತಿಷ್ಟು ಜನರ ತಂಡ ಬರುತ್ತೇವೆ ಎಂದು ತಿಳಿಸಿರುವ ಕಾರಣ ಅವರಿಗಾಗಿಯೇ ಬಿಸಿ ಬಿಸಿ ಊಟದ ಸಿದ್ಧವಾಗಿರುತ್ತದೆ. ವಾರಾಂತ್ಯದಲ್ಲಿ ಅತಿ ಹೆಚ್ಚು ಜನರು ಬರುವ ಕಾರಣ ಕೆಲವೊಮ್ಮೆ ಮುಂಚೆ ಹೇಳದೇ ಬಂದರು ಸದಾ ಕಾಲವೂ ಸಿದ್ಧವಿರುವ ಅವರ ಅಡುಗೆ ಮನೆಯಲ್ಲಿ ಕೆಲವೇ ಕೆಲವು ನಿಮಿಷಗಳಲ್ಲಿ, ಬಿಸಿ ಬಿಸಿ ಅನ್ನ ಸಾರು, ಅಪರೂಕ್ಕೆ ಒಮ್ಮೊಮ್ಮೆ ಹುಳಿ ಮತ್ತು ನೀರು ಮಜ್ಜಿಗೆಯ ಜೊತೆಯಲ್ಲಿ ರುಚಿಯಾದ ಉಪ್ಪಿನ ಕಾಯಿ ಆಯಾಸಗೊಂಡಿರುತ್ತಿದ್ದ ಚಾರಣಿಗರ ನಾಲಿಗೆಯ ಮೇಲೆ ಬೀಳುತ್ತಿದ್ದಂತೆಯೇ ಅದುವೇ ಆ ಕ್ಷಣದಲ್ಲಿ ಪಂಚತಾರಾ ಹೋಟೆಲ್ಲಿನಂತೆ ಕಾಣುತ್ತಿತ್ತು ಎಂದರೂ ಸುಳ್ಳಲ್ಲ. ಕೇವಲ ಊಟವಲ್ಲದೇ, ಸಮಯಕ್ಕೆ ತಕ್ಕಂತೆ ಕಾಫೀ, ಟೀ, ಕಷಾಯ, ವಿವಿಧ ತಿಂಡಿಗಳೂ ಸಹಾ ಅಂತಹ ದುರ್ಗಮ ಪ್ರದೇಶದಲ್ಲಿ ಕೈಗೆಟುವ ಕಡಿಮೆ ಲಭ್ಯವಿದ್ದ ಕಾರಣ, ಭಟ್ಟರ ಮನೆ ಕುಮಾರ ಪರ್ವತ ಚಾರಣಿಗರಿಗೆ ಒಂದು ರೀತಿಯ ಮರಳು ಗಾಡಿನ ಓಯಸ್ಸಿಸ್ ನಂತೆ ಕಾಣುತ್ತಿತ್ತು.
ಚಾರಣಿಗರಿಗೆ ಈ ದುರ್ಗಮ ರಸ್ತೆ ಇದು ಹವ್ಯಾಸವಾದರೆ, ಭಟ್ಟರ ಮನೆಯವರಿಗೆ ಇದು ದೈನಂದಿನ ಕಾಯಕವಾಗಿದ್ದರಿಂದ practice makes man perfect ಎನ್ನುವಂತೆ, ಉಪ್ಪಿನಿಂದ ಹಿಡಿದು ಪ್ರತಿಯೊಂದು ವಸ್ತುವಿಗೂ ಅವರು ಕುಕ್ಕೆಗೆ ಬರಬೇಕಾಗುತ್ತಿದ್ದರಿಂದ ಭಟ್ಟರ ಮನೆಯವರು ಈ ಪ್ರದೇಶವನ್ನು ಸಾಮಾನು ಸರಂಜಾಮುಗಳ ಸಮೇತವಾಗಿ ಕೇವಲ ಒಂದೂವರೆ ಗಂಟೆಯಲ್ಲೇ ಕ್ರಮಿಸುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ. ವಾರಾಂತ್ಯದಲ್ಲಿ ಚಾರಣಿಗರ ಆದರಾತಿಥ್ಯವಲ್ಲದೇ ದೈನಂದಿನ ಜೀವನಕ್ಕಾಗಿ ಅಡಿಕೆ ಕೃಷಿಯ ಜೊತೆ ಸುಮಾರು 10-20 ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆಯನ್ನೂ ಸಹಾ ಮಾಡುತ್ತಿರುವುದರಿಂದ ಪ್ರತಿದಿನವೂ ಪಟ್ಟಣಕ್ಕೆ ಹಾಲನ್ನು ಮಾರಲು ಭಟ್ಟರ ಮನೆಯವರು ಪ್ರತಿದಿನವೂ ಎರಡು ಬಾರಿ ಸುಮಾರು 10 ಕಿಮೀನಷ್ಟು ನಡದುಕೊಂಡೇ ಬಂದು ಹಾಲನ್ನು ಮಾರಿ ಮನೆಗೆ ಹಿಂದಿರುಗುವಾಗ ಅವರ ಮನೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಸಹಾ ಜೊತೆಯಲ್ಲೇ ಕೊಂಡೊಯ್ಯುವುದು ಅವರ ನಿತ್ಯ ಕಾಯವಾಗಿದೆ.
1976ರಲ್ಲಿ ಕೃಷಿಯನ್ನು ಮಾಡುವ ಸಲುವಾಗಿ ಶ್ರೀ ಪರಮೇಶ್ವರ ಜೋಯಿಸರು ತಮ್ಮ ಮಕ್ಕಳಾದ ವೆಂಕಟರಮಣ ಜೋಯಿಸರು ಮಹಾಲಿಂಗ ಭಟ್ ಮತ್ತು ನಾರಾಯಣ ಭಟ್ ಅವರೊಂದಿಗೆ ಗಿರಿಗದ್ದೆಗೆ ವಲಸೆ ಬಂದು ನೆಲಸಿ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ದಿನಗಳಲ್ಲಿ ಚಾರಣಿಗರು ಕುಮಾರ ಪರ್ವತವನ್ನು ಏರುವ ಸಾಹಸವನ್ನು ಆರಂಭಿಸಿದಾಗ, ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಅವರ ಉಟೋಪಚಾರಗಳನ್ನು ನೋಡಿಕೊಳ್ಳುವ ಕಾಯವನ್ನು ಆರಂಭಿಸಿ, ನಂತರದ ದಿನಗಳಲ್ಲೇ ಅದುವೇ ಅವರ ಪ್ರಮುಖ ಕಾಯಕವಾಗಿ ಹೋಗಿತ್ತು. ಶ್ರೀ ಪರಮೇಶ್ವರ ಜೋಯಿಸರ ನಿಧನರಾದ ನಂತರ ಅವರ ಮಕ್ಕಳೇ ಸಂಪೂರ್ಣವಾಗಿ ಇಲ್ಲಿನ ಉಸ್ತುವಾರಿಯನ್ನು ಕೈಗೆತ್ತಿಕೊಂಡರು. ಅದರಲ್ಲೂ ಪಾಕ ಶಾಸ್ತ್ರ ಪ್ರವೀಣರಾದ ವೆಂಕಟರಮಣ ಭಟ್ಟರು ತಮ್ಮ ಸಹೋದರ ನಾರಾಯಣ ಭಟ್ಟರೊಂದಿಗೆ ಪ್ರತಿದಿನವೂ ತಮ್ಮ ಮನೆಗೆ ಬರುವ ನೂರಾರು ಮಂದಿಗೆ ಹತ್ತಿಸಿರುವ ಬೆಂಕಿಯೇ ಆರದ ಅವರ ತಮ್ಮ ಪಾಕಶಾಲೆಯಲ್ಲಿ ರುಚಿ ರುಚಿಯಾದ ಊಟ ತಿಂಡಿಗಳನ್ನು ಮಾಡಿ ಬಡಿಸುತ್ತಿದ್ದರೆ, ಅವರ ತಮ್ಮ ಶ್ರೀ ಮಹಾಲಿಂಗ ಭಟ್ಟರು ಉಳಿದೆಲ್ಲಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.
ಪಾಕಶಾಲೆಯ ಉಸ್ತುವಾರಿಗಳಾಗಿದ್ದ ಶ್ರೀ ವೆಂಕಟ್ರಮಣ ಭಟ್ಟರು ಕಳೆದ ಮೇ 17ರಂದು ನಿಧನರಾಗಿದ್ದನ್ನು ಮನಸ್ಸಿಗೆ ಬಹಳವಾಗಿ ಹಚ್ಚಿಕೊಂಡಿದ್ದ 67 ವರ್ಷದ ಶ್ರೀ ಮಹಾ ಲಿಂಗ ಭಟ್ಟರಿಗೆ ಕೆಲವರು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಮಂಗಳೂರಿನ ಅತ್ತಾವರ ಕೆಎಂಸಿಗೆ ದಾಖಲಾಗಿ ಗುಣಮುಖರಾಗಿದ ನಂತರ ಹೆಚ್ಚಿನ ವಿಶ್ರಾಂತಿಗಾಗಿ ಮಂಗಳೂರಿನಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ಇರುವಾಗಲೇ ಮತ್ತೆ ಎದೆನೋವು ಕಾಣಿಸಿ ಕೊಂಡು 2023 ಡಿಸೆಂಬರ್ 20 ರಂದು ತೀವ್ರವಾದ ಹೃದಯಸ್ಥಂಭನದಿಂದ ಕೊನೆಯುಸಿರೆದಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಮೃತರಿಗೆ ಮೂವರು ಸಹೋದರರು, ಇಬ್ಬರು ಸಹೋದರಿಯರು, ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರು ಇದ್ದಾರೆ.
ಕುಮಾರ ಪರ್ವತದ ಚಾರಣಿಗರ ಅನ್ನದಾತರಾಗಿದ್ದ ಗಿರಿಗದ್ದೆ ಮಹಾಲಿಂಗ ಭಟ್ ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳುತ್ತಿದ್ದಂತೆಯೇ ಕುಮಾರಪರ್ವತದ ಗಿರಿಗದ್ದೆಯ ಅವರ ಮನೆಯಲ್ಲಿ ವಿಶ್ರಾಂತಿಯನ್ನು ಪಡೆದು ಅವರ ಕಾಫಿ, ಊಟ, ತಿಂಡಿ, ಚಹಾದ ಆತಿಥ್ಯವನ್ನು ಪಡೆದಿದ್ದ ಲಕ್ಷಾಂತರ ಚಾರಣಿಗರು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ ಬೇಸರವನ್ನು ವ್ಯಕ್ತಪಡಿಸುತ್ತಿರುವುದು ಭಟ್ಟರ ಮನೆಯ ಪ್ರಖ್ಯಾತಿಯನ್ನು ಸೂಚಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಗಿರಿಗದ್ದೆಯಲ್ಲಿ ಆರು ತಿಂಗಳ ಹಿಂದೆಯಷ್ಟೇ ಆನಾರೋಗ್ಯದಿಂದ ಹಿರಿಯಣ್ಣ ಶ್ರೀ ವೆಂಕಟ್ರಮಣ ಜೋಯಿಸರು ನಿಧನರಾಗಿದ್ದರೇ, ಭಟ್ಟರ ಮನೆಯ ಸಂಪೂರ್ಣ ವ್ಯವಹಾರಗಳನ್ನು ನೋಡಿಕೊಂಡು ಆ ಮನೆಯ ಬೆನ್ನುಲುಬಾಗಿದ್ದ ಶ್ರೀ ಮಹಾಲಿಂಗ ಭಟ್ಟರು ಸಹಾ ಒಬ್ಬರ ಹಿಂದೆ ಮತ್ತೊಬ್ಬರು ಇದೀಗ ನಿಧನರಾಗಿರುವ ಮೂಲಕ ಗಿರಿಗದ್ದೆಯ ಭಟ್ರು ಮನೆಯಲ್ಲಿ ಅಕ್ಷರಶಃ ಅನಾಥಭಾವ ಮೂಡಿದ್ದು, ಈ ಸಹೋದರ ಅಗಲಿಕೆಯ ನೋವು ಮತ್ತು ನಷ್ಟ ಕೇವಲ ಅವರ ಕುಟುಂಬಕ್ಕಷ್ಟೇ ಸೀಮತವಾಗಿರದೇ ಅವರ ಆದರ ಆತಿಥ್ಯಗಳನ್ನು ಸ್ವೀಕರಿಸಿದ್ದ ಲಕ್ಷಾಂತರ ಚಾರಣಿಗರದ್ದೂ ಆಗಿದೆ ಎಂದರೂ ತಪ್ಪಾಗದು. ಭಗವಂತ ಅವರ ಕುಟುಂಬಕ್ಕೆ ಮೇಲಿಂದ ಮೇಲಾದ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಮತ್ತು ಇದರಿಂದ ಆದಷ್ಟು ಶೀಘ್ರವಾಗಿ ಹೊರಬಂದು ಕುಟುಂಬದ ಬೇರೊಬ್ಬರು ಈ ವ್ಯವಹಾರವನ್ನು ಕೈಗೆತ್ತಿಕೊಂಡು ಮತ್ತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ನಿಮ್ಮಂತಹ ಲಕ್ಷಾಂತರ ಚಾರಣಿಗರಿಗೆ ಆಶ್ರಯದಾತರು ಮತ್ತು ಅನ್ನದಾತರಾಗಲಿ ಎಂಬುದೇ ಎಲ್ಲರ ಆಶಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಗುಡ್ ಆರ್ಟಿಕಲ್
LikeLike