ಕಾಟೇರ ಸಿನಿಮಾ ಮತ್ತು ವಾಸ್ತವತೆ

ಇತ್ತೀಚೆಗೆ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಚಾಲೆಂಗ್ ಸ್ಟಾರ್ ದರ್ಶನ್ ಅವರು ನಟಿಸಿದ ಕಾಟೇರ ಎಂಬ ಸಿನಿಮಾ ತೆರೆ ಕಂಡು ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಆ ಸಿನಿಮಾದಲ್ಲಿ 70ರ ದಶಕದಲ್ಲಿ ಕರ್ನಾಟಕ ರಾಜ್ಯದಲ್ಲಿ ಬಂದ ಭೂಸುಧಾರಣೆ ಕಾಯ್ದೆಯ ಅನ್ವಯ ಉಳುವವನೇ ಭೂಮಿಯ ಒಡೆಯ ಕಾನೂನಿನ ಹಿನ್ನಲೆಯ ಆಧಾರಿತವಾದ ಚಿತ್ರವಾಗಿದೆ.  ಸಮಾಜದ ಒಂದು ಜಾತಿ ಅಥವಾ ಪಂಗಡದ ವಿರುದ್ಧ ಪೂರ್ವಾಗ್ರಹ ಪೀಡಿತರಾದ ಕಥೆಗಾರ ನಿರ್ದೇಶಕ ಮತ್ತು ಚಿತ್ರತಂಡವು 50 ವರ್ಷಗಳ ನಂತರ ಸಮಾಜಕ್ಕೆ ಯಾವ ರೀತಿಯ ಕೆಟ್ಟ ಅಭಿಪ್ರಾಯ ಮತ್ತು ಕೆಟ್ಟ ಸಂದೇಶವನ್ನು ನೀಡಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದ್ದು ಆ ಕುರಿತಂತೆ ಒಂದು ವಸ್ತು ನಿಷ್ಠ ಲೇಖನ ಇದೋ ನಿಮಗಾಗಿ.

ನಮ್ಮ ದೇಶಕ್ಕೆ 1947ರಲ್ಲಿ ಸ್ವಾತ್ರಂತ್ರ್ಯ ಬಂದ ನಂತರ ಇಡೀ ದೇಶದಲ್ಲಿ ಜನರ ಮನಸ್ಸಿನಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಸ್ವಾತ್ರಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೇಸ್ ಎಂಬ ಹಸೀ ಸುಳ್ಳನ್ನು ಬಿತ್ತಿದ ಪರಿಣಾಮ, ಸ್ವಾತಂತ್ರ್ಯ ಬಂದ ಮೊದಲ 50 ವರ್ಷಗಳ ಕಾಲ ನಮ್ಮ ದೇಶದ ಆಡಳಿತ ನೆಹರು ಮತ್ತು ಅವರ ಕುಟುಂಬದರ ಪ್ರಾಭಲ್ಯವೇ ಮೆರೆಯಿತು. ಸ್ವಾತ್ರಂತ್ರ್ಯ ಬಂದ ಆರಂಭದಲ್ಲಿ ಕೃಷಿ ಮತ್ತು ಕೈಗಾರಿಕೆಗಳಲ್ಲಿ ಒಂದಷ್ಟು ಪ್ರಗತಿ ಕಂಡರೂ ನಂತರ ಪ್ರಗತಿಯ ಹೆಸರಿನಲ್ಲಿ ಖರ್ಚಾದ ಅಷ್ಟೂ ಹಣವೂ ಅಧಿಕಾರದಲ್ಲಿ ಇದ್ದ ಕಾಂಗ್ರೇಸ್ ನಾಯಕರ ಮನೆ ಸೇರಿದ್ದದ್ದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.

bhoomi160ರ ದಶಕದಲ್ಲಿ ದೇಶದ ಮೂಲೆ ಮೊಲೆಯಲ್ಲಿ ಸಣ್ಣದಾಗಿ ಕಾಂಗ್ರೇಸ್ ವಿರುದ್ಧ ಹೋರಾಟದ ಮನೋಭಾವನೆಯ ನಾಯಕರುಗಳು ಹುಟ್ಟಿಕೊಂಡಾಗ, 1971 ರ ಚುನಾವಣೆಯಲ್ಲಿ ಗೆಲ್ಲುವುದು ತುಸು ಕಷ್ಟವಾಗಬಹುದು ಎಂದು ಅಂದಿನ ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿ ಅವರಿಗೆ ಅನಿಸಿದ್ದೇ ತಡಾ, ಇದ್ದಕ್ಕಿದ್ದಂತೆಯೇ, ಗರೀಬಿ ಹಟಾವೋ ದೇಶ್ ಬಚಾವೋ (ಬಡತನ ತೊಲಗಿಸಿ, ದೇಶವನ್ನು ಉಳಿಸಿ) ಎಂಬ ಘೋಷ ವಾಕ್ಯವನ್ನು ತೇಲಿ ಬಿಟ್ಟು ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಮತ್ತು ನಗರದಲ್ಲಿರುವ ಬಡವರ ಜೀವನಾವಶ್ಯಕವಾದ ರೋಟಿ ಮಕಾನ್ ಕಪಡ ಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಅಂತೆಯೇ ನಗರ ವಾಣಿಜ್ಯ ವರ್ಗ. ಮತ್ತು, ಅವರ ಪಾಲಿಗೆ, ಹಿಂದೆ ಧ್ವನಿಯಿಲ್ಲದ ಬಡವರು ವಿಶೇಷವಾಗಿ ದಲಿತರು ಮತ್ತು ಆದಿವಾಸಿಗಳು ಅಂತಿಮವಾಗಿ ರಾಜಕೀಯ ಮೌಲ್ಯ ಮತ್ತು ರಾಜಕೀಯ ತೂಕ ಎರಡನ್ನೂ ಪಡೆಯುತ್ತಾರೆ ಎಂಬ ಭರವಸೆಯನ್ನು ನೀಡಿದ್ದನ್ನು ನಂಬಿ ಮತ್ತೆ ಆವರನ್ನೇ ಅಧಿಕಾರಕ್ಕೆ ತಂದರು. ಅದೇ ರೀತಿ ಕರ್ನಾಟಕದಲ್ಲಿಯೂ ದೇವರಾಜ ಅರಸ್ ಅವರ ನೇತೃತ್ವದ ಕಾಂಗ್ರೇಸ್ ಸರ್ಕಾರ ತಮ್ಮ ಸ್ವಾಮಿ ನಿಷ್ಟೆಯನ್ನು ತೋರಿಸಿಕೊಳ್ಳುವ ಸಲುವಾಗಿಯೇ ವಿನೋಭಾ ಭಾವೆಯವರ ನೇತೃತ್ವದಲ್ಲಿ ನಡೆದ ಭೂಧಾನ ಚಳುವಳಿಯಿಂದ ಸ್ವಲ್ಪ ಪ್ರೇರಿತವಾಗಿ ಇದ್ದಕ್ಕಿದ್ದಂತೆಯೇ,1974 ರಲ್ಲಿ ಕರ್ನಾಟಕದಲ್ಲಿ ಭೂಸುಧಾರಣೆ ಕಾಯ್ದೆಯನ್ನು ಏಕಾ ಏಕಿ ಜಾರಿಗೆ ಗೊಳಿಸುವ ಮೂಲಕ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಜಾರಿಗೆ ಮಾಡುವ ಮೂಲಕ ರಾಜ್ಯದ ಲಕ್ಷಾಂತರ ಜಮೀನ್ದಾರು, ಭೂ ಹಿಡುವಳಿದಾರರು ರಾತ್ರಿಯಿಂದ ಬೆಳಗಾಗುವಷ್ಟರರಲ್ಲಿ ಬೀದಿಗೆ ಬರುವಂತೆ ಮಾಡಿದ್ದದ್ದು ನಿಜಕ್ಕೂ ಅಕ್ಷ್ಮಮ್ಯ ಅಪರಾಧವೇ ಸರಿ.

ನಿಜ ಹೇಳಬೇಕೆಂದರೆ, ಈ ರೀತಿಯಾಗಿ ಅತಿ ಹೆಚ್ಚಿನ ಭೂಮಿಯನ್ನು ಕಳೆದುಕೊಂಡವರು ಊರ ಶಾನುಭೋಗರು ಅರ್ಥಾತ್ ಕುಲಕರ್ಣಿಗಳು. ಜನ್ಮತಃ ಬ್ರಾಹ್ಮಣರಾದ ಇವರುಗಳ ನೂರಾರು ಎಕರೆಯಷ್ಟು ಜಮೀನುಗಳು ತಮ್ಮ ಬುದ್ದಿ ಶಕ್ತಿ ಮತ್ತು ಚಾಕಚಕ್ಯತೆ, ಸ್ವಾಮಿ ನಿಷ್ಠೆಗಳಿಂದ ಅದೆಷ್ಟೋ ತಲೆಮಾರುಗಳ ಹಿಂದೆಯೇ ರಾಜಾಶ್ರಯವನ್ನು ಪಡೆದು ಅವರಿಂದ ಪಡೆದ ಉಂಬಳಿ ಪಡೆದಿದ್ದೇ ಹೊರತೂ, ಯಾರ ತಲೆಯನ್ನು ಹೊಡೆದು ಗಳಿಸಿದ ಆಸ್ತಿಯಾಗಿರಲಿಲ್ಲ. ಇನ್ನೂ ಕೆಲವು ಊರಿನ ಪುರೋಹಿತರು ಊರ ದೇವಾಲಯದ ಜಮೀನುಗಳನ್ನು ಹೊಂದಿದ್ದವರಾಗಿದ್ದರು. ಇವರೆಲ್ಲರೂ ತಮ್ಮ ಬೌಧ್ಧಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಕಾರಣ, ಆವರ ಜಮೀನುಗಳನ್ನು ಊರಿನ ಸಣ್ಣ ಸಣ್ಣ ರೈತರುಗಳಿಗೆ ಗೇಣಿ (ಗುತ್ತಿಗೆ) ರೀತಿಯಲ್ಲಿ ಕೊಟ್ಟು ಅದರಿಂದ ಬಂದ ಫಲದಲ್ಲಿ ಅರ್ಧ ಭಾಗವೋ ಇಲ್ಲವೇ ಹಲವಾರು ಬಾರಿ ರೈತರುಗಳು ಕೊಟ್ಟಷ್ಟೇ ಪಡೆದುಕೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರೇ ಹೊರತು ಅವರೆಂದೂ ಯಾರಿಗೂ ಶೋಷಣೆ ಮಾಡಿದ ಉದಾಹರಣೆಗಳು ಕಾಣಸಿಗುವುದಿಲ್ಲ.

ಯಾರನ್ನೋ ಮೆಚ್ಚಿಸುವ ಸಲುವಾಗಿ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವಂತೆ, ಸರ್ವಾಧಿಕಾರಿ ಕಾನೂನಿನ ಮೂಲಕ ಯಾರದ್ದೋ ಜಮೀನನ್ನು ಕಿತ್ತಿಕೊಂಡು ಮತ್ತಾರಿಗೋ ಹಂಚಿ ತಾವು ಸಮಾಜಸುಧಾರಕ ದಲಿತೋದ್ಧಾರಕ ಎಂಬ ಪಟ್ಟವನ್ನು ಮುಡಿಲಿಗೆ ಏರಿಸಿಕೊಂಡಿದ್ದು ಈ ರಾಜ್ಯದ ದುರಾದೃಷ್ಟವೇ ಸರಿ. ಅಸುರಕ್ಷಿತ ಭೂ ಹಿಡುವಳಿಗಳು ಮತ್ತು ಭೂರಹಿತ ರೈತರಂತಹರುಗಳಿಗೆ ಸರ್ಕಾರೀ ಜಮೀನುಗಳನ್ನು ಹಂಚುವ ಬದಲು, ಉಳುವವನೇ ರೈತ ಎಂಬ ಕಾನೂನಿಡಿಯಲ್ಲಿ ಉಳುವವನು ತಾನು ಸಾಗುವಳಿ ಮಾಡಿದ ಭೂಮಿಯ ಮೇಲೆ ಯಾವುದೇ ರೀತಿಯ ಖರ್ಚಿಲ್ಲದೇ ತನ್ನ ಹಕ್ಕನ್ನು ಸ್ಥಾಪಿಸಿಕೊಳ್ಳಬಹುದು ಮತ್ತು ಈ ಭೂಮಿಯ ಮೇಲೆ ಹಕ್ಕುಗಳನ್ನು ಸ್ಥಾಪಿಸಲು ಬಯಸುವವರು ಅಥವಾ ಪರಿಹಾರವನ್ನು ಪಡೆಯಲು ಇಚ್ಚಿಸುವವರು, ನ್ಯಾಯಾಲಯದ ಮೊರೆ ಹೋಗಬೇಕು ಎಂಬ ಆಜ್ಞೆಯ ವಿರುದ್ಧ ಪ್ರತಿಭಟಿಸಲು ಇಲ್ಲವೇ ಹೋರಾಡಲು ಸ್ವಭಾವತಃ ಸಾತ್ವಿಕ ಸ್ವಭಾವವ ಬ್ರಾಹ್ಮಣರು ಮುಂದಾಗದೇ ಏಕಾಏಕಿ ರಾತ್ರೋರಾತ್ರೀ ಬೀದಿಗೆ ಬಿದ್ದದ್ದು ದುರ್ದೈವವೇ ಸರಿ.

ಜಮೀನು ಕಳೆದುಕೊಂಡ ಕೆಲ ಧೈರ್ಯವಂತ ಬ್ರಾಹ್ಮಣರು ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ವರ್ಷಾನುಗಟ್ಟಲೆಗಳ ಕಾಲ ಹೋರಾಟ ನಡೆಸಿದರೂ ಅಂತಿಮವಾಗಿ ಅವರಿಗೆ ಸಿಕ್ಕ ಪರಿಹಾರದ ಮೊತ್ತ ಎಕರೆಗೆ 300-ರಿಂದ 400/- ಅಷ್ಟೇ. ಹಾಗೆ ಪಡೆದ ಹಣದಲ್ಲಿ ಬಹುಪಾಲು ವಕಾಲತ್ತು ನಡೆಸಿದ ವಕೀಲರಿಗೂ ಮತ್ತು ಸ್ಥಳೀಯ ತಹಸೀಲ್ದಾರ್ ಕಛೇರಿಯ ಸಿಬ್ಬಂದಿಯ ಕೈ ಬೆಚ್ಚಗೆ ಮಾಡಲು ಖರ್ಚಾಗಿ ಉಳಿದು ಹೊದದ್ದು ಕೆಲವೇ ಕೆಲವು ರೂಪಾಯಿಗಳು ಎನ್ನುವುದೂ ಸತ್ಯ. ಕುತೂಹಲಕಾರಿ ವಿಷಯವೆಂದರೆ, ದೇಶದ ಇತರೇ ಯಾವುದೇ ರಾಜ್ಯಗಳಲ್ಲಿಯೂ ಬ್ರಾಹ್ಮಣರು tenancy act ಅಡಿಯಲ್ಲಿ ಜಮೀನು ಕಳೆದು ಕೊಳ್ಳಲಿಲ್ಲ. ಕಳೆದುಕೊಂಡಿದ್ದೆಲ್ಲವೂ ಕರ್ನಾಟಕದಲ್ಲಿ ಎನ್ನುವುದೇ ವಿಪರ್ಯಾಸದ ಸಂಗತಿ.

poor_Bhrahminಹೀಗೆ ರಾತ್ರೋ ರಾತ್ರಿ ಇದ್ದ ಬದ್ದ ಜಮೀನುಗಳನ್ನೆಲ್ಲಾ ಕಳೆದು ಕೊಂಡರೂ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿ, ಯಾವುದೇ ರೀತಿಯ ಗಲಾಟೆಗಳಿಗೂ ಆಸ್ಪದ ಕೊಡದೇ ತಮ್ಮ ತಮ್ಮ ಊರುಗಳಿಗಳಿಂದ ಹತ್ತಿರದ ನಗರ/ಪಟ್ಟಣಗಳಿಗೆ ಬಂದು ತಮಗೆ ತಿಳಿದಿದ್ದ ದೇವರ ಪೂಜೆ, ಆಡುಗೆ ಕೆಲಸ, ಅನೇಕ ವ್ಯಾಪಾರಸ್ಥರ ಬಳಿ ಲೆಖ್ಖ ಬರೆಯುವ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡರೆ, ಇನ್ನೂ ಕೆಲವರು ಮನೆಯಲ್ಲೇ ಸಣ್ಣ ಮುಟ್ಟದ ಮೆಸ್ ರೀತಿಯ ಹೋಟೇಲ್ ಮಾಡಿಕೊಂಡು ಹತ್ತಾರು ಜನರಿಗೆ ಅನ್ನ ಹಾಕುತ್ತಾ ಅದರಲ್ಲಿ ಬರುವ ಸಣ್ಣ ಆದಾಯದಿಂದಲೇ ಜೀವನ ನಡೆಸುವಂತಾದರು. ಇನ್ನು ವಯಸ್ಸಾದವರು ಇಲ್ಲವೇ ಯಜಮಾನರನ್ನು ಕಳೆದುಕೊಂಡ ವಿಧವೆಯರು, ಬೆಳಗಿನ ಹೊತ್ತು ಇಡ್ಲಿಗಳನ್ನು ಮಾಡಿ ತಮ್ಮ ಮೊಮ್ಮಕ್ಕಳ ಮೂಲಕ ಬೀದಿ ಬೀದಿಯಲ್ಲಿ ಮಾರಿಸಿಯೋ ಇಲ್ಲವೇ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಪುರಿ ಉಂಡೆ, ಸಂಜೆ ಹೊತ್ತು ಬೋಂಡ ಬಜ್ಜಿ ಮಾರಿ ನಮ್ಮ ಸಂಸಾರ ಸಾಗಿಸಿದ ಹತ್ತಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ ಪ್ರಕಾರ, ಹಾಸನ ಜಿಲ್ಲೆಯ ಶ್ಯಾನುಭೋಗರು ತಮ್ಮ ಪಾಲಿನ 150 ಎಕರೆಯಷ್ಟು ಜಮೀನನ್ನು ಕಳೆದುಕೊಂಡು, ಮೈಸೂರಿಗೆ ಬಂದ ಆ ಹಿರಿಯರು ತಾವು ಭೂಮಿ ಕಳಕೊಂಡ ದಿನದಿಂದ ಸಾಯುವವರೆಗೂ ಕಾಲಿಗೆ ಚಪ್ಪಲಿ ಧರಿಸದಿರುವ ಶಪಥ ಮಾಡಿ, ಜೀವನೋಪಾಯಕ್ಕಾಗಿ, ಬ್ರಾಹ್ಮಣಾರ್ಥ ಮಾಡಿ ತಮ್ಮ ಜೀವನ ಸಾಗಿಸಿದರೇ ಹೊರತು, ಎಂದಿಗೂ ಯಾವುದೇ ರೀತಿಯ ಕೆಟ್ಟ ಕೆಲಸಗಳಿಗೆ ಕೈ ಹಾಕಲಿಲ್ಲ ಮತ್ತು ಯಾರನ್ನೂ ಆ ಕುರಿತಾಗಿ ಹಳಿಯಲಿಲ್ಲ.

ಹೀಗೆ ಭೂಮಿಯನ್ನು ಕಳೆದುಕೊಂಡ ಹೆಚ್ಚಿನವರು ಹಳೇ ಮೈಸೂರಿನ ಭಾಗದವರಾಗಿದ್ದು ನಂತರದ ದಿನಗಳಲ್ಲಿ ಅವರ ಮಕ್ಕಳು ಕಷ್ಟ ಪಟ್ಟು ಶ್ರಮವಹಿಸಿ, ವಾರಾನ್ನ ಮಾಡಿ ಯಾವುದೇ ರೀತಿಯ ಮೀಸಲಾತಿಯ ಭಾಗ್ಯವೂ ಇಲ್ಲದೇ, ಕೇವಲ ತಮ್ಮ ಇಚ್ಚಾಶಕ್ತಿಯಿಂದಾಗಿ ಚೆನ್ನಾಗಿ ಓದಿ ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಿದರೆ ಇನ್ನೂ ಕೆಲವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗಿ ಮತ್ತೆ ಅಲ್ಲಿ ತಮ್ಮ ಪಾಂಡಿತ್ಯಕ್ಕೆ ತಕ್ಕಂತೆ ಅರ್ಹತೆಯಾಧಾರಿತವಾಗಿ ಕೆಲಸಗಳನ್ನು ಗಿಟ್ಟಿಸಿಕೊಂಡು ಪ್ರಗತಿ ಸಾಧಿಸಿ, ದೇಶಕ್ಕೆ ಮಾದರಿಯಾದರೇ ಹೊರತೂ ಯಾರ ಮೇಲೆ ಧಾಳಿ ನಡೆಸಿದ ಉದಾಹರಣೆ ಅಂತೂ ಇಲ್ಲವೇ ಇಲ್ಲಾ ಎಂದರೂ ತಪ್ಪಾಗದು.

ಹೀಗೆ ಅನಾಯಾಸವಾಗಿ ಜಮೀನನ್ನು ಗಿಟ್ಟಿಸಿಕೊಂಡ ದಲಿತರು ಆರಂಭದ ಕೆಲ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರಾದರೂ, ನಂತರ ದಿನಗಳಲ್ಲಿಅವರ ಮಕ್ಕಳು ಕೇವಲ 35% ಅಂಕ ಗಳಿಸಿ ತೇರ್ಗಡೆ ಹೊಂದಿದ್ದರೂ, ಜಮೀನು ಕಳೆದುಕೊಂಡರೂ ಕಷ್ಟ ಪಟ್ಟು ಓದಿ 90+% ಅಂಕ ಗಳಿಸಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಬ್ರಾಹ್ಮಣರಿಗಿಂತಲೂ ಉನ್ನತ ಸರ್ಕಾರಿ ಹುದ್ದೆಗಳನ್ನು ಪಡೆದುಕೊಂಡು ಬ್ರಾಹ್ಮಣರ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಐಶಾರಾಮಿ ಜೀವನಕ್ಕೆ ವಾಲಿ ಕೆಟ್ಟು ಪಟ್ಟಣ ಸೇರು ಎಂದು ಪಟ್ಟಣಕ್ಕೆ ಸಂಪೂರ್ಣವಾಗಿ ಒಗ್ಗಿ ಹೋದ ಪರಿಣಾಮ, ಮಳೆ ಇಲ್ಲಾ, ಕೆಲಸ ಮಾಡಲು ಆಳು ಇಲ್ಲಾ, ಸರ್ಕಾರದಿಂದ ಸೂಕ್ತ ನೆರವು ಸಿಗುತ್ತಿಲ್ಲ ಎಂಬ ಸಬೂಬು ಹೇಳಿಕೊಂಡೇ ಬಹುತೇಕರು ಕೃಷಿ ಚಟುವಟಿಕೆಗಳಿಂದ ವಿಮುಖರಾಗಿ ಹೋಗಿರುವುದೇ ವಾಸ್ತವ ಸಂಗತಿಯಾಗಿದೆ.

ಅಂದಿನ ಸಿಎಂ ದೇವರಾಜ ಅರಸು ಅವರು ಬಡವರ ಏಳಿಗೆಯ ಹಿತದೃಷ್ಟಿಯಿಂದಲೋ ಇಲ್ಲವೇ ಇಂದಿರಾಗಾಂದಿಯ ಓಲೈಕೆಗಾಗಿಯೋ ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ತಂದು ಹೆಚ್ಚಿನ ಪಾಲಿನ ಬ್ರಾಹ್ಮಣರ ಜಮೀನನ್ನು ಬಲವಂತವಾಗಿ ಕಿತ್ತು ಕೊಂಡು ಸಣ್ಣ ಸಣ್ಣ ರೈತರುಗಳಿಗೆ ಹಂಚಿದ ಪರಿಣಾಮ ಬಹು ಪಾಲು ಮಂದಿ ಇದರ ಫಲಾನುಭವಿಗಳಾದರು. ಹಾಗೆ ಸುಲಭವಾಗಿ ಜಮೀನು ಪಡೆದ ಹೆಚ್ಚಿನವರು ಭೂ ಒಡೆಯರಾಗಿ, ನಂತರ ಕಲಿಬಾರದ್ದನ್ನು ಕಲಿತು, ತಮ್ಮ ತೆವಲಿಗಾಗಿ ಪುಕ್ಕಟ್ಟೆಯಾಗಿ ದೊರೆತ ಭೂಮಿಯನ್ನು ಕೈಗೆ ಸಿಕ್ಕ ಬೆಲಗೆ ಮಾರಿ ಬೀದಿ ಪಾಲಾದರೆ, ಉಳಿದವರು ಬಹುರಾಷ್ಟ್ರೀಯ ಕಂಪನಿಗಳಿಗೋ ಇಲ್ಲವೇ ಅಧಿಕ ಹಣದಾಸೆಗಾಗಿ ರಿಯಲ್ ಎಸ್ಟೇಟರಿಗೆ ತಮ್ಮ ಜಮೀನನ್ನು ಮಾರಿ ಬಂದ ಹಣವನ್ನು ಮಜಾ ಮಾಡಿ ಉಡಾಯಿಸಿ ಇಂದಿಗೂ ಶಿಕ್ಷಣವನ್ನೂ ಪಡೆಯದೆ ಬಿಟ್ಟಿ ಭಾಗ್ಯಗಳ ಆಸೆಗಾಗಿ ಬಾಯಿ ಬಿಡುತ್ತಿದ್ದರೆ, ಈ ಕಾಯ್ದೆ ಬಳಿಕ ಭೂಮಿ ಕಳೆದು ಕೊಂಡ ಬ್ರಾಹ್ಮಣರು ಆರಂಭದಲ್ಲಿ ಸಂಕಷ್ಟ ಎದುರಿಸಿದರೂ ಶಿಕ್ಷಣ ಮೂಲಕ ಪ್ರಗತಿ ಸಾಧಿಸಿ, ದೇಶ-ವಿದೇಶಗಳಲ್ಲಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದರೂ ತಮ್ಮ ಮೂಲ ಊರಿನ್ನು ಮರೆಯದೇ, ಅಲ್ಲಿನ ದೇವಾಲಯಗಳಿಗೆ, ಸರ್ಕಾರೀ ಶಾಲೆಗಳಿಗೆ ಮತ್ತು ಊರಿನ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಕೈಲಾದ ಮಟ್ಟಿಗಿನ ಸಹಾಯ ಮಾಡುತ್ತಿರುವುದಕ್ಕೆ ನೂರಾರು ಉದಾರಣೆಗಳಿವೆ.

ಹೀಗೆ ಬಿಟ್ಟಿಯಾಗಿ ಪಡೆದ ಭೂಮಿಯು ದಲಿತ ರೈತರ ಮೂಲಕ, ಭೂಗಳ್ಳರು ಮತ್ತು ದೊಡ್ಡ ದೊಡ್ಡ ಖದೀಮರು ಅಡ್ಡ ಮಾರ್ಗದಲ್ಲಿ ಸಂಪಾದಿಸಿದ ಕಪ್ಪು ಹಣದ ಚಲಾವಣೆ ಮಾಡಿಕೊಳ್ಳಲು ಬಳಕೆಯಾಗುತ್ತಿರುವುದು ನಿಜಕ್ಕೂ ಶಿಕ್ಷಾರ್ಹವಾದ ಅಪರಾಧವಾಗಿದೆ. ದಲಿತರಿಗೆ ಸೇರಿದ ಜಮೀನನ್ನು ಬಲಿತರು ಹಣ ಕೊಟ್ಟು ನ್ಯಾಯಯುತವಾಗಿ ಕೊಂಡು ಕೊಂಡಿದ್ದರೂ, ಎಷ್ಟೇ ವರ್ಷಗಳು ಕಳೆದ ನಂತರವೂ ಆ ದಲಿತ ಕುಟುಂಬಸ್ಥರು ನ್ಯಾಯಾಲಯದಲ್ಲಿ ದಾವೆ ಹೂಡಿ ಸುಲಭವಾಗಿ ತಮ್ಮ ಹಿಂದಿನ ಭೂಮಿಯನ್ನು ಉಚಿತವಾಗಿ ಪಡೆಯುವಂತಹ ಕಾನೂನು ಇರ ಬೇಕಾದರೆ,  ಕೇವಲ ಕೃಷಿ ಮಾಡುವ ಸಲುವಾಗಿ ದೊರೆತ ಜಮೀನನ್ನು ಅವರುಗಳು ಮಾರುವ ಹಕ್ಕನ್ನು ಹೇಗೆ ಪಡೆಯುತ್ತಾರೆ? ಕೃಷಿ ಮಾಡಲು ಸಾಧ್ಯವಿಲ್ಲದೇ ಹೋದಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ಕಳೆದುಕೊಂಡ ಬ್ರಾಹ್ಮಣರಿಗೆ ಆ ಜಮೀನು ಹಿಂದಿರುಗಿಸುವಂತಹ ಕಾನೂನು ಏಕಿಲ್ಲಾ? ಎನ್ನುವುದೇ ನಮ್ಮ ಪ್ರಶ್ನೆಯಾಗಿದೆ. ಕೇವಲ 30 ಲಕ್ಷ ಬೆಲೆ ಬಾಳುವ ಜಮೀನಿಗೆ ಮೂರು ಕೋಟಿ ನೀಡಿ ಕೊಂಡುಕೊಂಡು ತಮ್ಮ ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಿಕೊಳ್ಳುವುದಲ್ಲದೇ ತಮ್ಮ ಬೇನಾಮೀ ಅದಾಯಗಳನ್ನು ಇದೇ ಭೂಮಿಯಿಂದ ಗಳಿಸಿದ ಆದಾಯ ಎಂದು ತೋರಿಸಿ ತೆರಿಗೆ ವಂಚಿಸುವವರೇ ಹೆಚ್ಚಾಗಿದ್ದರೂ, ಈ ಕುರಿತಾದ ಎಲ್ಲಾ ವಿಷಯಗಳು ಎಲ್ಲಾ ಸರ್ಕಾರೀ ಅಧಿಕಾರಿಗಳಿಗೆ ತಿಳಿದಿದ್ದರೂ, ಈ ಕುರಿತಾಗಿ ಸಂಪೂರ್ಣ ದಾಖಲೆಗಳನ್ನು ನೀಡಿದರೂ ಈ ವರೆಗೂ ಒಬ್ಬನೇ ಇಬ್ಬ ಭೂಗಳ್ಳನ ವಿರುದ್ಧವೂ ಸರಕಾರ ಕ್ರಮ ಕೈಗೊಂಡಿಲ್ಲ ಎಂದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ.

katera270ರ ದಶಕದ ಭೂ ಸ್ವಾಧೀನ ಕಾಯ್ದೆಯ ಪರಿಣಾಮದ ಕುರಿತಾದ ವಾಸ್ತವ ಚಿತ್ರಣ ಇದಾಗಿದ್ದರೇ. ಪೂರ್ವಾಗ್ರಹ ಪೀಡಿತರಾದ ಕಾಟೇರ ಸಿನಿಮಾದ ಚಿತ್ರತಂಡ ಮೇಲು ಜಾತಿಗಳ ಮತ್ತು ಕೆಳ ಜಾತಿಗಳ ತಾರತಮ್ಯದ ಬಗ್ಗೆ, ಭೂ ಸ್ವಾಧೀನದ ಬಗ್ಗೆ, ಮರ್ಯಾದಾ ಹತ್ಯೆಯ ಬಗ್ಗೆ, ಅಸ್ಥಿಪಂಜರಗಳು ಸಿಕ್ಕಿದ್ದಕ್ಕೆ ಕಾರಣದ ಬಗ್ಗೆ ಈಗ ಚಿತ್ರ ಮಾಡುವ ಮೂಲಾ ಸಾಧಿಸಿದ್ದಾದರೂ ಏನೂ? 50 ವರ್ಷಗಳ ಹಿಂದಿದ್ದ ಜಾತಿ ಪದ್ದತಿ ಆಚರಣೆ ತಾರತಮ್ಯಗಳು ಪ್ರಸ್ತುತವಾಗಿ ಇಲ್ಲದಿರುವಾಗ, ಮೀಸಲಾತಿಯ ಮಧ್ಯೆ ಬ್ರಾಹ್ಮಣರೇ ನಲುಗುತ್ತಾ, ತಮ್ಮ ಪ್ರತಿಭೆಗೆ ನಮ್ಮ ದೇಶದಲ್ಲಿ ಪುರಸ್ಕಾರ ಇಲ್ಲಾ ಎಂದು ವಿದೇಶಗಳಿಗೆ ಪ್ರತಿಭಾ ಪಲಾಯನ ಮಾಡುತ್ತಿರುವಾಗ, ಈ ರೀತಿಯ ಚಿತ್ರದ ಅಗತ್ಯ ಏನಿತ್ತು?  ಹಿಂದುಗಳೆಲ್ಲರೂ ಒಗ್ಗಾಟ್ಟಾಗದೇ ಹೋದಲ್ಲಿ 2047ರಷ್ಟರಲ್ಲಿ ಇಡೀ ಹಿಂದೂಸ್ಥಾನವನ್ನೇ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿರುವ ಸಂಧರ್ಭದಲ್ಲಿ, ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂದು ಹೇಳುವುದನ್ನು ಬಿಟ್ಟು ಮತ್ತೆ ಅದೇ ಹಿಂದೂಗಳ ಮಧ್ಯೆ, ದಲಿತರು, ಹಿಂದುಳಿದವರು, ಜಾತಿ ಉಪಜಾತಿಗಳ ನಡುವೆಯೇ ಬಡಿದಾಡುವಂತೆ ಪ್ರೇರೇಪಿಸುವ ಇಂತಹ ಚಿತ್ರ ಬೇಕಿತ್ತೇ? ಧರ್ಮೋ ರಕ್ಷತಿ ರಕ್ಷಿತಃ ಹಾಗಾಗಿ ಜಾತಿ, ಉಪಜಾತಿಗಳ ನಡುವೆ ಹೋರಾಟ ಮಾಡುವ ಬದಲು ಧರ್ಮದ ಸಂರಕ್ಷಣೆ ಮಾಡುವುದು ಮೊದಲ ಕರ್ತವ್ಯ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

One thought on “ಕಾಟೇರ ಸಿನಿಮಾ ಮತ್ತು ವಾಸ್ತವತೆ

  1. ಅತೀ ಹೆಚ್ಚಿನ ಸಂಖ್ಯಯಲ್ಲಿ ಭೂಮಿ ಕಳೆದುಕೊಂಡು ಬೀದಿಗೆ ಬಿದ್ದವರು ಉತ್ತರ ಕರ್ನಾಟಕದ ಲಿಂಗಾಯತ ಜನಾಂಗ

    Like

Leave a comment