ಸಾಧಾರಣವಾಗಿ ಸುಗ್ಗಿಯ ಸಂಕ್ರಾಂತಿ ಕಳೆದು ಯುಗಾದಿ ಮುಗಿಯುವವರೆಗೂ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದವರಿಗೆ ಹೆಚ್ಚಿನ ಕೃಷಿ ಚಟುವಟಿಕೆಗಳು ಇಲ್ಲದಿರುವ ಸಂಧರ್ಭದಲ್ಲಿಯೇ ಊರ ಹಬ್ಬ, ಜಾತ್ರೆ, ರಥೋತ್ಸವಗಳನ್ನು ಕರ್ನಾಟಕಾದ್ಯಂತ ಕಾಣಬಹುದಾಗಿದ್ದು, ಮೈಸೂರು ಜಿಲ್ಲೆಯ ತಲಕಾಡಿನಿಂದ ಉತ್ತರಕ್ಕೆ ಸುಮಾರು 5 ಕಿ.ಮೀ ದೂರದಲ್ಲಿರುವ ಮುಡುಕುತೊರೆಯು ಶ್ರೀ ಮಲ್ಲಿಕಾರ್ಜುನಸ್ವಾಮಿಯ ರಥೋತ್ಸವ ಸುಮಾರು ಎರಡು ವಾರಗಳ ಕಾಲ ಬಹಳ ಅದ್ದೂರಿಯಿಂದ ನಡೆಯಲಿದ್ದು ಆ ಕ್ಷೇತ್ರ ಮಹಾತ್ಮೆ ಮತ್ತು ಜಾತ್ರೋತ್ಸವದ ವಿಶೇಷಗಳನ್ನು ತಿಳಿಯೋಣ ಬನ್ನಿ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಸುಮಾರು 45 ಕಿ.ಮೀ ದೂರದಲ್ಲಿ ಕಾವೇರಿ ನದಿಯ ದಡದಲ್ಲಿರುವ ತಲಕಾಡು ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಗಂಗರ ಕಾಲದಲ್ಲಿ ಕಟ್ಟಿಸಿದ ಪಂಚಲಿಂಗ ದೇವಾಲಯಗಳು ಅತ್ಯಂತ ಪ್ರಸಿದ್ಧಿಯಾಗಿದ್ದು, ಈ ಪಂಚಲಿಂಗಗಳಲ್ಲಿ ಕೆಲವು ದೇವಾಲಯಗಳು ಬಹುತೇಕ ಮರಳಿನಿಂದ ಮುಚ್ಚಿ ಹೋಗಿದ್ದು ಪ್ರತೀ 12 ಅಥವಾ 13 ವರ್ಷಗಳಿಗೊಮ್ಮೆ ಇಲ್ಲಿ ಐತಿಹಾಸಿಕ ಜಾತ್ರೆ ನಡೆದು ಪಂಚಲಿಂಗಗಳ ದರ್ಶನ ಇರುತ್ತದೆ. ಈ ಪವಿತ್ರವಾದ ತಲಕಾಡು ಕ್ಷೇತ್ರದಲ್ಲಿ ಪಂಚಲಿಂಗ ಸ್ವರೂಪಿಯಾಗಿ ಈಶ್ವರನು ನೆಲಸಿರುವ ಕಾರಣ ಇದು ದಕ್ಷಿಣಕಾಶಿ ಎಂದೂ ಸಹಾ ಹೆಸರುವಾಸಿಯಾಗಿದೆ. ವೈದ್ಯನಾಥೇಶ್ವರ, ಅರ್ಕನಾಥೇಶ್ವರ, ಪಾತಾಳೇಶ್ವರ, ಮರಳೇಶ್ವರ ಮತ್ತು ಮಲ್ಲಿಕಾರ್ಜುನೇಶ್ವರ ಸೇರಿ ಈ ಪಂಚಲಿಂಗಳ ಕ್ಷೇತ್ರವಾಗಿದ್ದು, ಈ ಪಂಚಲಿಂಗಗಳಲ್ಲಿ ಮೊದಲ ನಾಲ್ಕು ಲಿಂಗಗಳೂ ತಲಕಾಡಿನಲ್ಲಿಯೇ ಪ್ರತಿಷ್ಠಾಪನೆಯಾಗಿದ್ದರೆ, ಐದನೇಯದಾದ ಕಾಮಧೇನುವಿನಿಂದ ಪೂಜೆಗೊಳ್ಳುತ್ತಿದ್ದ ಶಿವಲಿಂಗವಾದ ಶ್ರೀ ಮಲ್ಲಿಕಾರ್ಜುನೇಶ್ವರ ತಲಕಾಡಿನಿಂದ ಸುಮಾರು ಐದು ಕಿಮೀ ದೂರದಲ್ಲಿಮುನ್ನೂರು ಅಡಿ ಎತ್ತರದ ಮುಡುಕುತೊರೆ ಬೆಟ್ಟದಲ್ಲಿ ನೆಲೆಸಿದ್ದು,ಭಕ್ತಿಯಿಂದ ಆತನನ್ನು ಬೇಡಿ ಕೊಂಡಲ್ಲಿ ಕೇಳಿದ ವರಗಳನ್ನು ಕೊಡುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಮೈಸೂರು ಜಿಲ್ಲೆಯ ತಿರುಮಕೂಡ್ಲು ನರಸೀಪುರದಿಂದ ಸುಮಾರು 19 ಕಿ.ಮೀ ದೂರದಲ್ಲಿ ಕಾವೇರಿ ನದಿಯ ತೀರದಲ್ಲಿರುವ ಈ ಮುಡುಕುತೊರೆಯ ಮೂಲ ಹೆಸರು ಸೋಮಗಿರಿ ಎಂಬುದಾಗಿದ್ದು, ಟಿ.ನರಸೀಪುರದಿಂದ ಕಾವೇರಿ ನದಿಯು ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಈ ಪ್ರದೇಶದಲ್ಲಿ ಪೂರ್ವಕ್ಕೆ ತಿರುಗಿ ಮತ್ತೆ ದಕ್ಷಿಣದ ಕಡೆ ಹರಿಯುವ ಕಾರಣ, ಈ ಪ್ರದೇಶಕ್ಕೆ ನಂತರದ ದಿನಗಳಲ್ಲಿ ಮುಡುಕುತೊರೆ ಎಂಬ ಹೆಸರು ಬಂದಿದೆ ಎನ್ನುವುದು ಇಲ್ಲಿನ ಪ್ರತೀತಿಯಾಗಿದ್ದು, ಮುಡುಕುತೊರೆ ಬೆಟ್ಟದ ಮೇಲಿಂದ ನಿಂತು ಗದ್ದೆಗಳು ಮತ್ತು ಕಾಡುಗಳನ್ನು ಹಾಯ್ದು ಹರಿದು ಒಂದು ರೀತಿಯ ಪುಟ್ಟ ದ್ವೀಪವನ್ನಾಗಿಸಿ ಹರಿವ ಕಾವೇರಿಯ ಆ ವಿಹಂಗಮ ನೋಟ ನಿಜಕ್ಕೂ ರಮಣೀಯವಾಗಿದ್ದು ಅದನ್ನು ವರ್ಣಿಸುವುದಕ್ಕಿಂತಲೂ ನೋಡಿ ಅನುಭವಿಸಿದರೆ ಬಹಳ ಮಜ ನೀಡುತ್ತದೆ.
ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಭ್ರಮರಾಂಬಿಕ ದೇವಾಲಯಗಳಿರುವ ಮುಡುಕುತೊರೆ ಕ್ಷೇತ್ರಕ್ಕೂ ಮತ್ತು ಮಹಾಭಾರತಕ್ಕೂ ಸಂಬಂಧವಿದ್ದು ಪಾಂಡವರು ಅಜ್ಞಾತವಾಸದಲ್ಲಿದ್ದ ಸಂದರ್ಭದಲ್ಲಿ ಅರ್ಜುನನು ಈ ಮಾರ್ಗವಾಗಿ ಸಂಚರಿಸುವಾಗ ಮಲ್ಲಿಕಾ ಎಂಬ ಪುಷ್ಪದಿಂದ ಇಲ್ಲಿನ ಶಿವಲಿಂಗಕ್ಕೆ ಅರ್ಚನೆ ಮಾಡಿದ್ದ ಕಾರಣದಿಂದಾಗಿಯೇ ಇಲ್ಲಿನ ದೇವರಿಗೆ ಮಲ್ಲಿಕಾರ್ಜುನ ಸ್ವಾಮಿ ಎಂದು ಹೆಸರಾಯಿತು ಎನ್ನಲಾಗುತ್ತದೆ. ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿಯ ಶಕ್ತಿ ಆಂಧ್ರಪದೇಶದ ಶ್ರೀ ಶೈಲ ಮಲ್ಲಿಕಾರ್ಜುನನಷ್ಟೇ ಇರುವ ಕಾರಣ, ಇದನ್ನು ಕರ್ನಾಟಕದ ಶ್ರೀಶೈಲ ಎಂದೂ ಸಹಾ ಕರೆಯಲಾಗುತ್ತದೆ.
ಇಲ್ಲಿನ ಪುರಾಣದ ಪ್ರಕಾರ ಗಂಗ ಅರಸರ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು ನಂತರ ನಂತರ ವಿಜಯನಗರದ ಅರಸರ ಕಾಲದಲ್ಲಿ ಅವರ ವಾಸ್ತು ಶೈಲಿಯಲ್ಲಿ ಜೀರ್ಣೋದ್ದಾರವಾಗಿದೆ. ವಿಜಯನಗರದ ಅರಸರಿಂದ ಈ ಪ್ರದೇಶ ಮೈಸೂರು ಸಂಸ್ಥಾನಕ್ಕೆ ಬಂದ ನಂತರ ದೇವಸ್ಥಾನದ ಪಶ್ಚಿಮದಲ್ಲಿರುವ ದ್ವಾರವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಿಸಲಾಗಿದೆ ಸುಮಾರು 300 ಅಡಿಯಷ್ಟು ಎತ್ತರದ ಬೆಟ್ಟದ ಮೇಲಿರುವ ಈ ದೇವಾಲಯವನ್ನೇರಲು ನೂರೊಂದು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆಯಲ್ಲದೇ ಬೆಟ್ಟದ ಮುಕ್ಕಾಲು ಭಾಗದ ವರೆಗೂ ಖಾಸಗೀ ವಾಹನಗಳಲ್ಲಿ ಹೋಗಬಹುದಾಗಿದೆ. ಸಾಮನ್ಯವಾಗಿ ಬಹುತೇಕ ದೇವಾಲಗಳು ಪೂರ್ವಾಭಿಮುಖವಾಗಿಯೋ ಇಲ್ಲವೇ ಉತ್ತರಾಭಿಮುಖವಾಗಿದ್ದರೆ, ಇಲ್ಲಿ ದೇವಾಲಯ ಪಶ್ಚಿಮಾಭಿಮುಖವಾಗಿರುವುದು ವಿಶೇಷವಾಗಿದ್ದು, ಉಳಿದ ಎಲ್ಲಾ ದೇವಾಲಯಗಳಂತೆ ಇಲ್ಲಿಯೂ ಸಹಾ ಗರ್ಭಗೃಹ, ಶುಕನಾಸಿ, ಅಂತರಾಳ, ನವರಂಗ ಮತ್ತು ದ್ವಾರಮಂಟಪಗಳನ್ನು ಹೊಂದಿದೆ. ನವರಂಗದಲ್ಲಿ ವರ್ತುಲಾಕೃತಿಯ ಸ್ತಂಭಗಳನ್ನು ಕಾಣಬಹುದಾಗಿದೆ.
ವರ್ಷದ 365 ದಿನಗಳು ಶೋಷಡಶೋಪಚಾರಳಿಂದ ಪೂಜೆ ಪುನಸ್ಕಾರಗಳು ನಡೆಯುತ್ತಲಾದರೂ, ಪ್ರತೀವರ್ಷ ಮಾಘಮಾಸದ ಸಮಯದಲ್ಲಿ ಸುಮಾರು 17 ದಿನಗಳ ಕಾಲ ನಡೆಯುವ ಮುಡುಕುತೊರೆ ಜಾತ್ರೆ ಅತ್ಯಂತ ಪ್ರಸಿದ್ಧವಾಗಿದ್ದು, ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯ, ಅಂತರ್ ರಾಜ್ಯ ಮತ್ತು ವಿದೇಶಗಳಿಂದಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಬಂದು ಭಗವಂತನ ಅನುಗ್ರಹಕ್ಕೆ ಪಾತ್ರರಾಗುವುದು ವಿಶೇಷವಾಗಿದೆ. ಜಾತ್ರೆಯಲ್ಲಿ ಅಂಕರಾರ್ಪಣೆ, ಧ್ವಜಾರೋಹಣ, ಚಂದ್ರ ಮಂಡಲಾರೋಹಣ, ಅನಂತಪೀಠಾರೋಪಣ, ಪುಷ್ಪ ಮಂಟಪಾರೋಹಣ, ವೃಷಭಾರೋಹಣ, ಗಿರಿಜಾಕಲ್ಯಾಣ, ಗಜಾರೋಹಣ, ಶ್ರೀಮದ್ದಿನ್ಮ ಬ್ರಹ್ಮರಥೋತ್ಸವ, ಚಿತ್ರರಥೋತ್ಸವ, ಶಯನೋತ್ಸವ, ಅವಭೃತ ತೀರ್ಥಸ್ನಾನ, ಪುಷ್ಪಪಲ್ಲಕಿ ಉತ್ಸವ, ತೆಪ್ಪೋತ್ಸವ, ಮರಿ ತೆಪ್ಪೋತ್ಸವ, ಕೈಲಾಸ ವಾಹನೋತ್ಸವ, ಮಂಟಪೋತ್ಸವ, ಗಿರಿಪ್ರದಕ್ಷಿಣೆ, ಪರ್ವತಪರಿಷೆ, ಬಸವಮಾಲೆ, ಮಹಾಭಿಷೇಕ ಮತ್ತು ಶೆಟ್ಟರ ಸೇವೆಗಳು ನಡೆದರೆ, ಬ್ರಹ್ಮರಥೋತ್ಸವಕ್ಕೆ ಒಂದು ವಾರಕ್ಕೆ ಮುಂಚೆ ಸುಮಾರು ಒಂದು ವಾರಗಳ ಕಾಲ ನಡೆಯುವ ದನಗಳ ಜಾತ್ರೆ ಅತ್ಯಂತ ಪ್ರಸಿದ್ಧವಾಗಿದ್ದು ಈ ಸಮಯದಲ್ಲಿ ಸುತ್ತಮುತ್ತಲಿನ ರೈತಾಪಿ ಜನರು ತಮಗೆ ಬೇಕಾದ ಯೋಗ್ಯ ಹಸುಗಳನ್ನು ಕೊಂಡು ತೆಗೆದುಕೊಳ್ಳುವ ವ್ಯವಹಾರವನ್ನು ನಡೆಸುವುದು ಗಮನಾರ್ಹವಾಗಿದೆ. ಹಾಗೆ ಕೊಂಡ ರಾಸುಗಳಿಗೆ ಅಲಂಕಾರ ಮಾಡಿ ಅವುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.
ಶ್ರೀ ಮಲ್ಲಿಕಾರ್ಜುನ ಬ್ರಹ್ಮ ರಥೋತ್ಸವದ ಸಮಯದಲ್ಲಿ ರಥದ ಮೇಲೆ ಸ್ವತಃ ಮಲ್ಲಿಕಾರ್ಜುನ ಸ್ವಾಮಿಯೇ ವಿರಾಜಮಾನರಾಗುತ್ತಾರೆ ಎಂಬ ನಂಬಿಕೆ ಇಲ್ಲಿನವರದ್ದಾಗಿದ್ದು, ಸಾಂಪ್ರದಾಯಿಕ ವಿಧಿವಿಧಾನದಂತೆ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಸ್ಥಳೀಯ ಜನಪದ ಕಲಾವಿದರುಗಳಿಂದ ಪ್ರದರ್ಶನ ಎನ್ನುವುದಕ್ಕಿಂತಲೂ ಭಗವಂತನ ಸೇವೆಯ ರೂಪದಲ್ಲಿ ನಡೆಯುವ ಗೊರವರ ಕುಣಿತ, ನಂದಿಕಂಬ, ಪೂಜಾಕುಣಿತ, ಕಂಸಾಳೆ, ಸೋಬಾನೆ, ಜಾಗಟೆ ಸೇವೆ, ತುತ್ತೂರಿ, ಕೊಂಬುಸೇವೆ ಮುಂತಾದ ಕಲಾ ಪ್ರದರ್ಶನಗಳು ರಥೋತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಮುಡುಕುತೊರೆ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಭಕ್ತಿಯಿಂದ ಹರಕೆಯನ್ನು ಹೊತ್ತರೆ ಅವೆಲ್ಲವೂ ಕಾರ್ಯ ಸಿದ್ಧಿಯಾಗುತ್ತದೆ ಎಂಬುದು ಈ ಜಾತ್ರೆಯ ವೈಶಿಷ್ಟ್ಯತೆಯಾಗಿದ್ದು, ಈ ಜಾತ್ರೆಯ ಅಂಗವಾಗಿ ಭಾಗವಾಗಿ ಬೆಳ್ಳಂ ಬೆಳಿಗ್ಗೆಯೇ ಬೆಳಗಿನ ಜಾವದಲ್ಲಿ ನಡೆಯುವ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ. ಈ ತೆಪ್ಪದ ದಿನ ಗೊರವರು ಗಿರಿಯ ಮೇಲೆ ಕುಣಿದರೆ, ಕಜ್ಜಾಯದ ಮಣೆ ಬಟ್ಟಲು ಉಡಿಸುತೀವಿ ಎಂದು ಹರಕೆ ಹೊತ್ತಿದ್ದವರು, ತಪ್ಪಿಲ್ಲದೇ ತಮ್ಮ ಹರಕೆಯನ್ನು ಒಪ್ಪಿಸುವ ಮೂಲಕ ಭವಂತನ ಆಶೀರ್ವಾದಕ್ಕೆ ಪಾತ್ರರಾಗುತ್ತಾರಲ್ಲದೇ, ಅದೇ ದಿನ ಪರ್ವತ ಪರಿಷೆಯ ದಿನಾಂಕವನ್ನು ಸಹಾ ನೆರೆದ ಹಿರಿಯರ ಸಮ್ಮುಖದಲ್ಲಿ ನಿಗದಿಪಡಿಸಲಾಗುತ್ತದೆ. ಈ ಪರ್ವತ ಪರಿಷೆ ಎಂಬುವುದು ಈ ಜಾತ್ರೆಯ ಮತ್ತೊಂದು ವೈಶಿಷ್ಟ್ಯತೆಗಳಲ್ಲಿ ಒಂದಾಗಿದೆ.

ಪುರಾಣ ಕಥೆಯೊಂದರ ಪ್ರಕಾರ ಪಾರ್ವತಿಯು ಶಿವನ ವಾಹನವಾದ ನಂದಿಯ ಮೇಲೆ ಕುಳಿತುಕೊಂಡು ತನ್ನ ತವರು ಮನೆಯಾದ ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಳೆಂಬ ನಂಬಿಕೆಯ ಕಾರಣ, ಮೈಸೂರಿನ ಒಡೆಯರಾಗಿದ್ದ, ಚಿಕ್ಕದೇವರಾಜರಿಗೆ ಈ ಮುಡುಕುತೊರೆ ಮಲ್ಲಿಕಾರ್ಜುನನ ಕೃಪೆಯಿಂದ ಒಳ್ಳೆಯದಾದ ಹಿನ್ನಲೆಯಲ್ಲಿ ಇಲ್ಲಿ ಪರಿಷೆ ಮಾಡಿಸಿದ ನಂತರ ಇಂದಿಗೂ ಸಹಾ ಶಿವರಾತ್ರಿ ಹಬ್ಬದ ನಂತರ ಮುಡುಕುತೊರೆ ಸುತ್ತಮುತ್ತಲಿನ ಊರಿನ ಭಕ್ತರಲ್ಲದೇ, ಮದ್ದೂರು, ಚನ್ನಪಟ್ಟಣ, ಬೆಂಗಳೂರಿನ ಭಕ್ತಾದಿಗಳೂ ಸಹಾ ತಮ್ಮ ತಮ್ಮ ಎತ್ತುಗಳೊಂದಿಗೆ ಕಾಲ್ನಡಿಗೆಯಲ್ಲಿಯೇ ನಂದ್ಯಾಲ ಮೂಲಕ ಶ್ರೀಶೈಲವನ್ನು ಯುಗಾದಿ ಹಬ್ಬದ ಹೊತ್ತಿಗೆ ತಲುಪಿ ಅಲ್ಲಿನ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಮತ್ತೆ ಕಾಲ್ನಡಿಗೆಯಲ್ಲಿಯೇ ಮುಡುಕುತೊರೆಗೆ ಹಿಂತಿರುಗಿ, ತಮ್ಮ ಪರಿಷೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಶ್ರೀ ಮಲ್ಲಿಕಾರ್ಜುನನಿಗೆ ಪೂಜೆ ಸಲ್ಲಿಸುತ್ತಾರೆ. ಇದನ್ನು ಇಲ್ಲಿ ಚಿಕ್ಕ ಜಾತ್ರೆ ಎಂದು ಕರೆಯಾಗುತ್ತಿದ್ದು ಅದಕ್ಕೂ ಸಹಾ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿ ಬಂದು ಸೇರುವುದು ಗಮನಾರ್ಹವಾಗಿದೆ.
ಸುಮಾರು 300 ವರ್ಷಗಳ ಇತಿಹಾಸವಿರುವ ಇಲ್ಲಿನ ದನಗಳ ಜಾತ್ರೆಯು ಎಲ್ಲೆಡೆಯಲ್ಲಿಯೂ ಪ್ರಸಿದ್ಧಿ ಪಡೆದಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 1500ಕ್ಕೂ ಹೆಚ್ಚಿನ ವಿವಿಧ ತಳಿಗಳ ಎತ್ತುಗಳು ಈ ಜಾತ್ರೆಗೆ ಆಗಮಿಸುತ್ತವೆ. ಇಲ್ಲಿನ ಕೆಲವೊಂದು ಜೋಡಿ ಎತ್ತುಗಳು ಸುಮಾರು 5 ಲಕ್ಷ ರೂಪಾಯಿ ವರೆಗೂ ಮಾರಾಟವಾಗಿರುವ ನಿದರ್ಶನಗಳಿವೆ ಎಂದು ಜಾತ್ರೆಯ ಆಯೋಜಕರು ತಿಳಿಸಿದ್ದಾರೆ. ಇದೇ ಸಂಧರ್ಭದಲ್ಲಿ ರಾಜ್ಯದ ಪಶುಸಂಗೋಪನಾ ಇಲಾಖೆ ವತಿಯಿಂದ ಆರೋಗ್ಯಕರವಾದ ಎತ್ತಿನ ಜೋಡಿಗಳಿಗೆ ಬಹುಮಾನ ನೀಡುವ ಸಂಪ್ರದಾಯವಿದ್ದು ಅದರ ಮೂಲಕ ರೈತಾಪಿ ವರ್ಗಕ್ಕೆ ಸ್ಪೂರ್ತಿ ದೊರೆತಂತಾಗುತ್ತದೆ. ಇದೇ ಸಂಧರ್ಭದಲ್ಲಿಯೇ ಬಸವನಮಾಲೆ ಎಂಬ ಎತ್ತುಗಳ ಓಟ ಸ್ಪರ್ಧೆ ನಡೆಸಿ ಅದರಲ್ಲಿ ವಿಜೇತವಾಗುವ ಎತ್ತಿಗೆ ದೇವರ ಮಾಲೆಯನ್ನು ಹಾಕಿ ಅದನ್ನು ಶ್ರೀಶೈಲದಲ್ಲಿ ನಡೆಯುವ ಜಾತ್ರೆಗೆ ಕಳುಹಿಸಿಕೊಡುವ ಪರಿಪಾಠವೂ ಇಲ್ಲಿರುವುದು ವಿಶೇಷವಾಗಿದೆ.
ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ಮೇಲೆ ಇನ್ನೇಕೆ ತಡಾ ಸದಾಕಾಲವೂ ಕಾಂಕ್ರೀಟ್ ಕಾಡಾಗಿರುವ ನಗರದಲ್ಲಿ ಇದ್ದು ಜಡ್ಡುಗಟ್ಟಿರುವ ದೇಹ ಮತ್ತು ಮನಸ್ಸಿಗೆ ಮತ್ತಷ್ಟು ಮುದವನ್ನು ನೀಡುವ ಸಲುವಾಗಿ ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಮುಡುಕುತೊರೆ ದನದ ಜಾತ್ರೆ ಮತ್ತು ಬ್ರಹ್ಮರಥೋತ್ಸವಕ್ಕೆ ಸ್ವಲ್ಪ ಸಮಯ ಮಾಡಿಕೊಂಡು ತಲಕಾಡಿನ ಲಿಂಗಗಳ ಜೊತೆ ಮುಡುಕುತೊರೆಗೂ ಹೋಗಿ ಶ್ರೀ ಮಲ್ಲಿಕಾರ್ಜುನ ಮತ್ತು ಭ್ರಮರಾಂಭಿಕೆಯ ದರ್ಶನ ಪಡೆದು ಅಲ್ಲಿನ ಜಾತ್ರೆಯ ಸಿಹಿ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ