ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ. ಜೈನ್

jain1ಅದು 90ರ ದಶಕದ ಸಮಯ. ದೂರದರ್ಶನದ ಚಂದನ ವಾಹಿನಿ ಬಿಟ್ಟರೆ ತಮಿಳುನಾಡಿನ ಸನ್ ಟಿವಿ ಸಾರಥ್ಯದ ಉದಯ ಟಿವಿಯೊಂದೇ ಖಾಸಗಿ ಕನ್ನಡ ವಾಹಿನಿ. ಸಹಜವಾಗಿ ದೂರದರ್ಶನದ ಏಕಾನತೆಯಿಂದ ಬೇಸರಗೊಂಡಿದ್ದವರಿಗೆ ಉದಯ ಟಿವಿಯೇ ಪ್ರಮುಖ ಆಕರ್ಷಣೆ. ಉದಯ ಟಿವಿಯವರೂ ಸಹಾ ಕನ್ನಡಿಗರ ಹೃದಯವನ್ನು ಗೆಲ್ಲಲು ಅನೇಕ ಹೊಸ ಹೊಸಾ ಕಾರ್ಯಕ್ರಮಗಳ ಮಾಲಿಕೆಯನ್ನು ಆರಂಭಿಸಿದ್ದರು. ಹಾಗೆ ಕನ್ನಡದ ಆಸ್ತಿಕರಿಗೆಂದೇ ಆರಂಭಿಸಿದ ಭಾನುವಾರದ ಕಾರ್ಯಕ್ರಮ ರಾಶಿ ಭವಿಷ್ಯ ಅರ್ಥಾತ್ ವಾರ ಭವಿಷ್ಯ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದ ಶ್ರೀ ಎಸ್. ಕೆ. ಜೈನ್. ಸುಮಾರು 40 ವರ್ಷಗಳ ಕಾಲ ಜ್ಯೋತಿಷಿಗಳಾಗಿ ಲಕ್ಷಾಂತರ ಜನರಿಗೆ ಗೋಚಾರ ಫಲಗಳನ್ನು ಹೇಳುವ ಮೂಲಕ ಜೀವನವನ್ನು ರೂಪಿಸಿದ್ದರು. ಇತ್ತೀಚೆಗೆ ಕೆಲ ದಿನಗಳಿಂದ ಅನಾರೋಗ್ಯರಾಗಿದ್ದು, ಶುಕ್ರವಾರ ಏಪ್ರಿಲ್ 12, 2024 ರಂದು ಖಾಸಗಿ ಅಸ್ಪತ್ರೆಯಲ್ಲಿ ನಿಧನ ಹೊಂದಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ.

ಡಾ. ಎಸ್ ಕೆ ಜೈನ್ ಎಂದೂ ಕರೆಯಲ್ಪಡುವ ಶ್ರೀ ಸುರೇಂದ್ರ ಕುಮಾರ್ ಜೈನ್ ಅವರು ಮೂಲತಃ ದಕ್ಷಿಣ ಕನ್ನಡದವರಾದ ಹೆಸರಾಂತ ಜ್ಯೋತಿಷಿಗಳಾಗಿದ್ದ ಶ್ರೀ ಶಶಿಕಾಂತ ಜೈನ್ ಅವರ ಸುಪುತ್ರರಾಗಿ 1957 ಅಕ್ಟೋಬರ್ 13ರಂದು ಜನಿಸಿದ್ದರು, ತಮ್ಮ ಬಾಲ್ಯ ಮತ್ತು ವಿದ್ಯಾಭ್ಯಾಸವನ್ನೆಲ್ಲಾ ಬೆಂಗಳೂರಿನಲ್ಲಿಯೇ ಪೂರ್ಣಗೊಳಿಸಿದ ಎಸ್. ಕೆ. ಜೈನ್, ತಮ್ಮ ತಂದೆಯವರಾದ ಶ್ರೀ ಬಿ. ಜಿ. ಶಶಿಕಾಂತ್ ಜೈನ್​ ಅವರಿಂದಲೇ ಶಾಶ್ತ್ರೋಕ್ತವಾಗಿ ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿ ಆರಂಭದಲ್ಲಿ ಪ್ರವೃತ್ತಿಯಾಗಿ ಆರಂಭಿಸಿಕೊಂಡ ಜ್ಯೋತಿಷ ನಂತರದ ದಿನಗಳಲ್ಲಿ ಅವರಿಂದ ಅನುಕೂಲ ಪಡೆದುಕೊಂಡ ಅನೇಕರ ಬಾಯಿ ಮಾತಿನಿಂದಲೇ ಪ್ರಚಾರ ಪಡೆದುಕೊಂಡು ಅದನ್ನೇ ವೃತ್ತಿಯನ್ನಾಗಿಸಿ ಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಗೆ ಅವರನ್ನು ದೂಡಿತ್ತು ಎಂದರೂ ತಪ್ಪಾಗದು.

jain4ಈಗಾಗಲೇ ತಿಳಿಸಿದಂತೆ 90ರ ದಶಕದಲ್ಲಿ ಪ್ರತೀ ಭಾನುವಾರದಂದು ಉದಯ ಟಿವಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆಯನ್ನು ಗಳಿಸುವ ಮೂಲಕ ಕೇವಲ ಕರ್ನಾಟಕ ಮತ್ತು ಭಾರತವಷ್ಟೇ ಅಲ್ಲದೇ ಪ್ರಪಂಚದಾದ್ಯಂತದ ನೆಲೆಸಿರುವ ಭಾರತೀಯರ ಹೃನ್ಮನಗಳನ್ನು ಗೆದ್ದದ್ದು ನಿಜಕ್ಕೂ ಅದ್ಭುತವೇ ಸರಿ. ಜ್ಯೋತಿಷ್ಯವನ್ನು ತಮ್ಮ ವಿಶಿಷ್ಯ್ತವಾದ ದಕ್ಷಿಣ ಕನ್ನಡ ಭಾಷೆಯ ಶೈಲಿಯಲ್ಲಿ ಅತ್ಯಂತ ಸರಳವಾಗಿ ವಿವರಿಸುತ್ತಿದ್ದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂದಿನ ಟಿವಿ ಜ್ಯೋತಿಷಿಗಳಷ್ಟು ಅಬ್ಬರ ಮತ್ತು ಆಡಂಬರಕ್ಕೆ ಒತ್ತು ನೀಡದೇ ಅತ್ಯಂತ ಸುಲಭ ಪರಿಹಾರದ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಡುವುದರಲ್ಲಿ ಎಸ್, ಕೆ. ಜೈನ್ ಅವರದ್ದು ಎತ್ತಿದ ಕೈ.

ಕೇವಲ ಉದಯ ಟಿವಿಯಲ್ಲಷ್ಟೇ ಅಲ್ಲದೇ, ಬೆಂಗಳೂರಿನ ಇಸ್ಕಾನ್ ದೇವಾಲಯದ ಬಳಿ ಇದ್ದ ಅವರ ಮನೆಗೆ ಬರುವ ಎಲ್ಲಾ ಅಸ್ತಿಕ ಬಂಧುಗಳಿಗೆ ಸರಳವಾಗಿ ಆದರೆ ಅಷ್ಟೇ ಕರಾರುವಾಕ್ಕಾಗಿ ಜ್ಯೋತಿಷ್ಯವನ್ನು ಹೇಳುವುದರಲ್ಲಿ ಸೈ ಎನಿಸಿಕೊಂಡರು. ಕಾಲಕ್ಕೆ ಅನುಗುಣವಾಗಿ ತಂತ್ರಜ್ಞಾನವನ್ನೂ ಸಹಾ ಬಳಸಿಕೊಳ್ಳುವುದರಲ್ಲಿ ಮುಂದಾಗಿದ್ದ ಶ್ರೀ ಜೈನ್ ರವರು ಜನ್ಮ ದಿನಾಂಕ, ಸಮಯ ಮತ್ತು ಹುಟ್ಟಿದ ಊರನ್ನು ಕೇಳಿಕೊಂಡು ಕಂಪ್ಯೂಟರ್ ಸಹಾಯದಿಂದ ಜಾತಕ ಮತ್ತು ಕುಂಡಲಿಗಳನ್ನು ಕ್ಷಣ ಮಾತ್ರದಲ್ಲಿ ತಯಾರಿಸಿಕೊಂಡು ಅವರ ಗೋಚಾರದ ಅನುಗುಣವಾಗಿ ವೈದೀಕ ಪರಂಪರಾಗತವಾಗಿ ಕರಾರುವಾಕ್ಕಾಗಿ ಭವಿಷ್ಯವನ್ನು ಹೇಳುತ್ತಿದ್ದದ್ದಲ್ಲದೇ, ಅವರ ಜಾತಕದಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಅದಕ್ಕೂ ಸಹಾ ಅತ್ಯಂತ ಸುಲಭ ರೂಪದಲ್ಲಿ ಪರಿಹಾರವನ್ನು ಸೂಚಿಸುತ್ತಿದ್ದರಿಂದ ಅತ್ಯಂತ ವೇಗವಾಗಿ ಜನಮನ್ನಣೆ ಗಳಿಸಿದ್ದರು.

ಅವರು ಹೇಳುತ್ತಿದ್ದ ಜ್ಯೋತಿಷ್ಯ ಎಷ್ಟು ಕರಾವಾಕ್ ಇರುತ್ತಿತ್ತು ಎನ್ನುವುದಕ್ಕೆ ಈ ಪ್ರಸಂಗವೇ ಜ್ವಲಂತ ಉದಾಹರಣೆಯಾಗಿದೆ. ನನ್ನ ಪ್ರಾಣ ಸ್ನೇಹಿತ ಅರ್ಥಾತ್ ಚಡ್ಡಿದೋಸ್ತ್ ಬಾಲ್ಯದಲ್ಲಿ ಅತ್ಯಂತ ಚುರುಕಿನವನಾಗಿದ್ದ. ಕೇವಲ ಆಟ ಪಾಠವಷ್ಟೇ ಅಲ್ಲದೇ  ರಾಮಾಯಣ, ಮಹಾಭಾರತ, ಭಾಗವತಗಳನ್ನೂ ಓದಿ ಅರ್ಥೈಸಿಕೊಂಡಿದ್ದ ಕಾರಣ ಸಜವಾಗಿಯೇ ಶಾಲೆಯಲ್ಲಿಯೂ ಅತ್ಯಂತ ಚುರುಕಿನ ಹುಡುಗನಾಗಿದ್ದ. ಅವನ ಸಹೋದರಿಯೂ ಅವನಷ್ಟೇ ತಿಳಿದು ಕೊಂಡಿದ್ದರೂ ಬಾಲ್ಯದಲ್ಲಿ ಆಕೆ ಓದಿನಲ್ಲಿ ಅಷ್ಟೇನೂ ಚುರುಕಾಗಿರದೇ, ಸಾಧಾರಣವಾಗಿ ಓದಿಕೊಂಡು ಹೋಗುತ್ತಿದ್ದರಿಂದ ಕಳವಳಗೊಂಡ ಅವರ ಪೋಷಕರು ಎಸ್. ಕೆ, ಜೈನ್ ಅವರ ಬಳಿ ಇದಕ್ಕೆ ಪರಿಹಾರ ಸೂಚಿಸಬೇಕೆಂದು ಕೋರಿಕೊಂಡರು.

ಇಬ್ಬರು ಮಕ್ಕಳ ಜಾತಕವನ್ನು ಕೂಲಂಕುಷವಾಗಿ ಪರಿಶೀಲಿಸಿದ ಶ್ರೀ ಜೈನ್ ಅವರು ನಿಮ್ಮ ಮಗಳ ಭವಿಷ್ಯ ಉಜ್ವಲವಾಗಿದೆ ಆಕೆ ಯಾವುದೇ ಅಡೆ ತಡೆಗಳಿಲ್ಲದೇ, ಉನ್ನತ ದರ್ಜೆಯಲ್ಲಿ ಪದವಿಯನ್ನು ಪದೆದು ಒಳ್ಳೆಯ ಮನೆಯ ಸೊಸೆಯಾಗಿ ಹೋಗುತ್ತಾಳೆ ನೀವು ನಿಶ್ಚಿಂತವಾಗಿರಿ ಎಂದು ಹೇಳಿದರೆ, ಅದೇ ನಿಮ್ಮ ಮಗನ ಜಾತಕದ ಪ್ರಕಾರ ಅತ ಓದಿನಲ್ಲಿ ಎಷ್ಟೇ ಚುರಾಕಾಗಿದ್ದರೂ, ಆತನ ವಿದ್ಯಾಭ್ಯಾಸ ಕುಂಠಿತವಾಗಿ ಪದವಿಯನ್ನೂ ಸಹಾ ಗಳಿಸಲಾರ ಎಂದು ಹೇಳಿದಾಗ ಮಗಳ ಭವಿಷ್ಯ ಕೇಳಿ ಅತ್ಯಂತ ಉತ್ಸುಕರಾಗಿದ್ದವರು ಮಗನ ಗುಣಕ್ಕೆ ತದ್ವಿರುದ್ದವಾದ ಭವಿಷ್ಯವನ್ನು ಕೇಳಿ ಅತ್ಯಂತ ಆಶ್ಚರ್ಯ ಚಕಿತರಾಗಿದ್ದಲ್ಲದೇ, ಖುದ್ದಾಗಿ ಜೈನ್ ಅವರ ಬಳಿ ನನಗೇನೋ ನೀವು ಹೇಳಿದ ಭವಿಷ್ಯದ ಬಗ್ಗೆ ಅನುಮಾನ ಇದೆ ಎಂದು ಹೇಳಿ ಬಂದಿದ್ದರಂತೆ.

ನನ್ನ ಸ್ನೇಹಿತನ ತಂದೆ ತಾಯಿಯರ ಅಳಲನ್ನು ಅತ್ಯಂತ ತಾಳ್ಮೆಯಿಂದಲೇ ಕೇಳಿಸಿಕೊಂಡ ಶ್ರೀ ಎಸ್. ಕೆ. ಜೈನ್ ಅವರು, ಸ್ವಾಮೀ, ಇದು ನಾನು ಹೇಳುತ್ತಿರುವುದಲ್ಲ, ಆತನ ಜನ್ಮ ಕುಂಡಲಿಯ ಅನುಗುಣವಾಗಿ ಹೇಗಿದೆಯೋ ಅದನ್ನು ಹಾಗೆಯೇ ಹೇಳುತ್ತಿದ್ದೇನೆ, ಬೇಕಿದ್ದಲ್ಲಿ ಅದಕ್ಕೆ ಸೂಕ್ತ ಪರಿಹಾರವನ್ನು ಸೂಚಿಸಿ ಆ ಸಮಸ್ಯೆಯನ್ನು ನೀವಾರಿಸಿಕೊಳ್ಳಲು ಸಹಾಯ ಮಾಡುತ್ತೇನೆ ಎಂದಾಗ, ಆ ಕ್ಷಣದಲ್ಲಿ ಕೇಳಲು ತಾಳ್ಮೆ ಇರದಿದ್ದ ನನ್ನ ಸ್ನೇಹಿತರ ತಂದೆ ತಾಯಿಯರು ಸುಮ್ಮನೇ ಎದ್ದು ಬಂದಿದ್ದನ್ನು 90ರ ದಶಕದಲ್ಲಿ ನನಗೆ ವಯಕ್ತಿಕವಾಗಿ ಹೇಳಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ನಂತರ ದಿನಗಳಲ್ಲಿ ಶ್ರೀ ಎಸ್. ಕೆ. ಜೈನ್ ಅವರ ಭವಿಷ್ಯವಾಣಿಯಂತೆಯೇ ನನ್ನ ಸ್ನೇಹಿತನ ಜೀವನದಲ್ಲಿ ನಡೆದು, ಆತ ಪಿಯೂಸಿ ಮುಗಿಸಿದ ನಂತರ ಇಂಜಿನಿಯರಿಂಗ್ ಮಾಡಲು ಆಗದೇ, ಪದವಿಗೆ ಸೇರಿಕೊಂಡು ಅದನ್ನೂ ಮುಗಿಸಲಾಗದೇ, ದಿಪ್ಲಮೋಗೆ ಸೇರಿಕೊಂಡು ನಂತರ ಆನಾರೋಗ್ಯದಿಂದ ಅದನ್ನೂ ಮುಗಿಸಲಾಗದೇ, ಕಂಪ್ಯೂಟರ್ ಟ್ರೈನಿಂಗ್ ಮುಗಿಸಿ ಕೆಲ ಕಾಲ ಹಾರ್ಡ್ವೇರ್ ಇಂಜಿನಿಯರ್ ಆಗಿ ನನ್ನ ಜೊತೆಯೇ ಕೆಲಸ ಮಾಡಿ ನಂತರ ದಿನಗಳಲ್ಲಿ ತನ್ನ ಮಾವನ ಸಹಾಯದಿಂದ ಪ್ರತಿಷ್ಠಿತ ಖಾಸಗೀ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಸೇರಿಕೊಂಡು ತನ್ನ ಬುದ್ಧಿಮತ್ತೆಯಿಂದ ಈಗ ಜನರಲ್ ಮ್ಯಾನೇಜರ್ ಆಗಿದ್ದರೂ ಆತನಿಗೆ ಪದವಿಯನ್ನು ಸಹಾ ಮುಗಿಸಲಿಲ್ಲವಲ್ಲಾ ಎಂಬ ಬೇಸರವಂತೂ ಇದ್ದೇ ಇದೆ. ಅದೇ ಅವನ ತಂಗಿ ಹತ್ತನೇ ತರಗತಿಯಲ್ಲಿ ಸಾಧಾರಣ ಅಂಕ ಗಳಿಸಿದ್ದವಳು, ಕಾಲೇಜ್ ಸೇರುತ್ತಿದ್ದಂತಯೇ ಅತ್ಯಂತ ಚುರುಕಿನವಳಾಗಿ ನೋಡ ನೋಡುತ್ತಿದ್ದಂತೆಯೇ ಅತ್ಯಂತ ಉನ್ನತ ಶ್ರೇಣಿಯಲ್ಲಿಯೇ ಬಿಕಾಂ ಮುಗಿಸಿ ಆಕೆಗೆ ಮದುವೆಯೂ ಆಗಿ ಹೋದದ್ದು ಈಗ ಇತಿಹಾಸ.

jain2ಹೀಗೆ ಕರ್ನಾಟಕದ ಟಿವಿ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ ಎಂದು ಖ್ಯಾತರಾಗಿದ್ದ ಜ್ಯೋತಿಷಿ ಎಸ್ ಕೆ ಜೈನ್ ಮಾಧ್ಯಮದ ಮೂಲಕ ಜ್ಯೋತಿಷಿ ಕಾರ್ಯಕ್ರಮ ನಡೆಸಿ ಕರ್ನಾಟಕದಲ್ಲಿ ಹೊಸ ಸಂಚಲನ ಸೃಷ್ಟಿಸಿ, ರಾಶಿ ಭವಿಷ್ಯ, ಶುಭ-ಅಶುಭ, ಫಲಾಫಲ ಸೇರಿದಂತೆ ಜ್ಯೋತಿಷ್ಯದ ಪರಿಕರಗಳಲ್ಲಿ ನಿಖರತೆಯನ್ನು ತಂದುಕೊಟ್ಟಿದ್ದರು. ವಿದ್ಯುನ್ಮಾನ ಮಾಧ್ಯಮದಲ್ಲಿ ಜ್ಯೋತಿಷ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಮತ್ತು ಆಷ್ಟೇ ನಿಖರವಾಗಿ ನಡೆಸಿಕೊಡುವ ಮೂಲಕ ಕರ್ನಾಟಕದಲ್ಲಿ ಹೊಸ ಪರಂಪರೆ ಹಾಗೂ ಜ್ಯೋತಿಷವನ್ನು ಮನೆ ಮನೆಗೆ ತಲುಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

jain5ಉದಯ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜ್ಯೋತಿಷ್ಯ ಕಾರ್ಯಕ್ರಮದ ಮೂಲಕ ನಾಡಿನ ಮನೆಮಾತಾಗುತ್ತಿದ್ದಂತೆಯೇ  ಅನೇಕ ರಾಜಕಾರಣಿಗಳು ಚಲನ ಚಿತ್ರ ನಟ ನಟಿಯರು ಎಸ್, ಕೆ, ಜೈನ್ ಅವರೊಂದಿಗೆ ವೈಯಕ್ತಿಕ ಬಾಂಧವ್ಯ ಹೊಂದಿದ್ದರು. ಅವರಲ್ಲಿ ಪ್ರಮುಖರಾದರೆಂದರೆ, ಮಾಜಿ ಪ್ರಧಾನಿಗಳಾದ ಶ್ರೀ ಎಚ್‌. ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್‌ಎಂ ಕೃಷ್ಣ ಶ್ರೀ ಬಿ.ಎಸ್ ಯಡಿಯೂರಪ್ಪನವರು, ಶ್ರೀ ಎನ್ ಧರಂ ಸಿಂಗ್ ಅಲ್ಲದೇ ಪ್ರಸ್ತುತ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಮತ್ತು ಸ್ವತಃ ಜೈನರೇ ಆಗಿರುವ ಶ್ರೀ ವೀರೇಂದ್ರ ಹೆಗ್ಗಡೆ ಅವರೂ ಸಹಾ ಇರುವುದು ಗಮನಾರ್ಹವಾಗಿದೆ. ವಿಶ್ವ ಪ್ರಸಿದ್ಧ ಕೆನಡಾದ ಸಂಗೀತಗಾರ, ಗಾಯಕ, ಗೀತರಚನೆಕಾರ, ರೆಕಾರ್ಡ್ ನಿರ್ಮಾಪಕರಾದ ಶ್ರೀ ಬ್ರಿಯಾನ್ ಆಡಮ್ಸ್ ಅವರಂತಹ ಅಂತರರಾಷ್ಟ್ರೀಯ ಪ್ರಸಿದ್ಧ ವ್ಯಕ್ತಿಗಳೂ ಸಹಾ ಶ್ರೀ ಜೈನ್ ಅವರನ್ನು ಖುದ್ದಾಗಿ ಅವರ ಮನೆಯಲ್ಲಿಯೇ ಭೇಟಿ ಮಾಡಿ ಅವರೊಂದಿಗೆ ಜ್ಯೋತಿಷ್ಯ ಸಮಾಲೋಚನೆಯನ್ನು ನಡೆಸಿದ್ದದ್ದನ್ನು ಗಮನಿಸಿದರೆ, ಅವರ ಸಾಧನೆ ಎಷ್ಟರ ಮಟ್ಟಿಗಿತ್ತು ಎನ್ನುವುದರ ಅರಿವಾಗುತ್ತದೆ.

jain6ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇವಾಲಯ ಮತ್ತು ವೈಯಾಲಿಕಾವಲ್‌ನ ಜಗನ್ನಾಥ ದೇವಾಲಯದ ಪ್ರಮುಖ ಸದಸ್ಯರಾಗಿದ್ದ ಶ್ರೀ ಎಸ್. ಕೆ. ಜೈನ್ ಅವರು, ಕೆಲವರ್ಷಗಳಿಂದ ಕೇವಲ ಜ್ಯೋತಿಷ್ಯ ಆಷ್ಟೇ ಅಲ್ಲದೇ ಭಗವದ್ಗೀತೆಯಲ್ಲಿ ಪ್ರತಿಪಾದಿಸಲಾದ ತತ್ವಗಳು ಮತ್ತು ವಿಚಾರಗಳಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದ ಕಾರಣ ಅತ್ಯಂತ ಸರಳವಾಗಿ ತಮ್ಮದೇ ಶೈಲಿಯಲ್ಲಿ ಭಗವದ್ಗೀತೆಯ ಸಾರವನ್ನೂ ಸಹಾ ಹೇಳುವ ಮೂಲಕ ಜನಮನ್ನಣೆಯನ್ನು ಗಳಿದಿದ್ದರು. ಇಷ್ಟೇಲ್ಲಾ ಸಾಧನೆಗಳನ್ನು ಗಮನಿಸಿದ ಕರ್ನಾಟಕ ಸರ್ಕಾರವೂ ಸಹಾ ಇತ್ತೀಚೆಗಷ್ಟೇ ವಿವಿಧ ಕ್ಷೇತ್ರಗಳಲ್ಲಿನ ಅವರ ಕೊಡುಗೆಗಾಗಿ ರಾಜೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಇಷ್ಟೇಲ್ಲಾ ಸಾಧನೆಯನ್ನು ಮಾಡಿದ್ದ ಎಸ್. ಕೆ. ಜೈನ್ ಅವರು ತಮ್ಮ 67ನೇ ವಯಸ್ಸಿನಲ್ಲಿ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ, ಅವರನ್ನು ಬೆಂಗಳೂರಿನ ಪ್ರತಿಷ್ಠಿತ ಮಹಾವೀರ್ ಜೈನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಮಾರ್ಚ್ 18 ರಂದು ದಾಖಲು ಮಾಡಲಾಗಿತ್ತು. ಏಪ್ರಿಲ್ ಎರಡನೇ ವಾರದಲ್ಲಿ ಆಸ್ಪತ್ರೆಯಿಂದ ಮನೆಗೆ ಬಂದರೂ ಹಿಂದೆನಂತೆಯೇ ಚೇತರಿಸಿಕೊಳ್ಳಲಾಗದೇ ಮತ್ತೇ ನಾಲ್ಕು ದಿನಗಳ ಹಿಂದೆ ಅಸ್ವಸ್ಥರಾದ ಕಾರಣ, ಪುನಃ ಅದೇ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ರೀತಿಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಏಪ್ರಿಲ್ 12, 2024ರ ಸಂಜೆ ನಿಧನರಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಎಸ್‌ ಕೆ ಜೈನ್ ಅವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

jain3ಅಷ್ಟೇಲ್ಲಾ ಸಾಧನೆ ಮಾಡಿದ್ದರೂ, ಅವರ ಜನಪ್ರಿಯತೆನ್ನು ಬಳಸಿಕೊಳ್ಳಲು ಅನೇಕ ಖಾಸಗಿ ಛಾನೆಲ್ ಗಳು ಅವರ ಹಿಂದೆ ಬಿದ್ದರೂ ಅದಕ್ಕೆಲ್ಲಾ ಸೊಪ್ಪು ಹಾಕದೇ ತಮ್ಮ ವೃತ್ತಿ ಬದುಕಿಗೊಂದು ಮಹತ್ತರ ತಿರುವನ್ನು ನೀಡಿದ್ದ ಉದಯ ಟಿವಿಯೊಂದಿಗೆ ನಿರಂತವಾಗಿ ಸುಮಾರು 20 ವರ್ಷಗಳ ಕಾಲ ಅವಿನಾಭಾವ ಸಂಬಂಧ ಹೊಂದಿದ್ದೂ ಸಹಾ ದಾಖಲೆ ಎನ್ನಲಾಗುತ್ತಿದೆ. ಪ್ರತಿ ಯುಗಾದಿ ಹಬ್ಬದ ದಿನದಂದು, ಜೈನ್ ನೈಸರ್ಗಿಕವಾಗಿ ಸಂಭವಿಸುವ ಖಗೋಳ ಘಟನೆಗಳು ಮತ್ತು ಶುಭ ಸಮಯಗಳ ಬಗ್ಗೆ ವಿವರಗಳನ್ನು ನೀಡುವ ಕಾಲ ಚಕ್ರ ಎಫಿಸರ್ಮಿಸ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ ಅನೇಕ ಜನರ ಜೀವನವನ್ನು ರೂಪಿಸಿದ್ದಲ್ಲದೇ ಜ್ಯೋತಿಷ್ಯ ಎಂದರೆ ಭಯ ಪಡುವವರಲ್ಲಿಯೂ ಸಹಾ ಜ್ಯೋತಿಷ್ಯದ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ಮೂಡುವಂತೆ ಮಾಡಿದ್ದ ಮಾರ್ಗದರ್ಶಕ ಶಕ್ತಿಯಾಗಿದ್ದ ಶ್ರೀ ಎಸ್. ಕೆ. ಜೈನ್ ಆವರು ಭೌತಿಕವಾಗಿ ನಮ್ಮೆಲ್ಲರನ್ನೂ ಅಗಲಿದ್ದರೂ, ಭಾವನಾತ್ಮಕವಾಗಿ ಅವರ ಕಾರ್ಯಗಳ ಮೂಲಕ ನಿರಂತರವಾಗಿ ನಮ್ಮೆಲ್ಲರೊಂದಿಗೆ ಆಚಂದ್ರಾರ್ಕವಾಗಿ ಇದ್ದೇ ಇರುತ್ತಾರೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment