ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ

ರಾಮೇಶ್ವರ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದೇ ಶ್ರೀರಾಮಚಂದ್ರನಿಂದ ಮರಳಿನಿಂದ ನಿರ್ಮಿಸಲ್ಪಟ್ಟ ಶಿವನ ಲಿಂಗ ಮತ್ತು ನಳ ಮತ್ತು ನೀಲರ ಜೊತೆಯಲ್ಲಿ ತನ್ನ ಕಪಿಸೇನೆಯ ಸಹಾಯದೊಂದಿಗೆ ಧನುಷ್ಕೋಟಿಯಿಂದ ಲಂಕೆಯ ನಡುವಿನ ಸಮುದ್ರಕ್ಕೆ ಕಟ್ಟಿದ ರಾಮಸೇತು. ನಿಜ ಹೇಳಬೇಕೆಂದರೆ ಈ ಎರಡೂ ಪವಿತ್ರ ಕ್ಷೇತ್ರಗಳ ಹೊರತಾಗಿ ಇನ್ನೂ ಹತ್ತು ಹಲವಾರು ಕುತೂಹಲಕಾರಿ ಸ್ಥಳಗಳಿದ್ದು, ಅಂತಹವುಗಳಲ್ಲಿ ಒಂದಾದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.

WhatsApp Image 2024-04-14 at 00.15.29ಶ್ರೀ ರಾಮಚಂದ್ರ ಪ್ರಭು ತನ್ನ ಚಿಕ್ಕಮ್ಮ ಕೈಕೇಯಿಗೆ ಕೊಟ್ಟ ಭಾಷೆಯಂತೆ, 14ವರ್ಷ ಅರಣ್ಯವಾಸವನ್ನು ಅನುಭವಿಸುತ್ತಿರುವ ಸಂಧರ್ಭದಲ್ಲಿ ಸೀತಾದೇವಿ ಕಾಡಿನಲ್ಲಿ ಅಪಹರಣವಾದಾಗ ಆಕೆಯನ್ನು ಹುಡುಕಿಕೊಂಡು ಕಾಡು ಮೇಡುಗಳನ್ನು ಅಲೆಯುತ್ತಿರುವಾಗ, ಜಟಾಯುವಿನ ಮೂಲಕ ರಾವಣನು ಸೀತಾದೇವಿಯನ್ನು ಅಪಹರಿಸಿಕೊಂಡು ತನ್ನ ಲಂಕಾ ಪಟ್ಟಣದಲ್ಲಿಟ್ಟಿರುವ ವಿಷಯವನ್ನು ತಿಳಿದ ನಂತರ ಹನುಮಂತ ಮತ್ತು ಸುಗ್ರೀವರಾದಿಯಾಗಿ ಕಪಿಸೇನೆಯೊಂದಿಗೆ ರಾವಣನೊಡನೆ ಯುದ್ಧ ಮಾಡುವುದಕ್ಕಾಗಿ ದನುಷ್ಕೋಟಿಯ ಬಳಿ ಲಂಕೆಗೆ ಸೇತುವೆ ಕಟ್ಟುವ ಮೊದಲು ಶಿವನನ್ನು ಪೂಜಿಸಲು ಇಚ್ಚಿಸಿ, ಆಂಜನೆಯನಿಗೆ ಲಿಂಗವೊಂದನ್ನು ತರಲು ಹೇಳಿದಾಗ, ಆತ ಲಿಂಗವನ್ನು ತರಲು ಕೈಲಾಸಕ್ಕೆ ಹೋಗಿ ಎಷ್ಟು ಹೊತ್ತಾದರೂ ಬಾರದೇ ಇದ್ದ ಸಂಧರ್ಭದಲ್ಲಿ, ತನ್ನ ಪೂಜೆಗೆ ತಡವಾಗುತ್ತದೆಂದು ಶ್ರೀರಾಮನು ಮರಳಿನಿಂದಲೇ ಲಿಂಗ ನಿರ್ಮಿಸಿ ಪೂಜೆ ಮಾಡಿದ ಸ್ಥಳವೇ ರಾಮೇಶ್ವರ ಎಂದು ಪ್ರಸಿದ್ಧವಾಗಿ ಪ್ರಭು ಶ್ರೀರಾಮನಿಂದ ಪೂಜಿಸಲ್ಪಟ್ಟ ಲಿಂಗಕ್ಕೆ ಶ್ರೀ ರಾಮೇಶ್ವರ ಎಂದು ಹೆಸರು ಬಂದಿರುವ ವಿಷಯ ಎಲ್ಲರಿಗೂ ತಿಳಿದಿದೆ.

WhatsApp Image 2024-04-13 at 23.05.50ಹೀಗೆ ರಾಮೇಶ್ವರದಿಂದ ಧನುಷ್ಕೋಟಿಯ ಮಧ್ಯೆ ಸುಮಾರು 19 ಕಿ.ಮೀ. ಅಂತರವಿದ್ದು, ರಾಮೇಶ್ವರದಿಂದ ಧನುಷ್ಕೋಟಿಗೆ ಹೋಗುವ ಮಾರ್ಗದಲ್ಲಿ ಸುಮಾರು 13 ಕಿಮೀ ಕ್ರಮಿಸಿದ ನಂತರ ಎಡಗಡೆಗೆ ತಿರುಗಿ, ಬಂಗಾಳ ಕೊಲ್ಲಿ ಮತ್ತು ಮನ್ನಾರ್ ಕೊಲ್ಲಿಯಿಂದ ಆವೃತವಾಗಿರುವ ದ್ವೀಪದ ಇಕ್ಕೆಲಗಳಲ್ಲಿ ಸಮುದ್ರದ ಮಧ್ಯದ ಸುಂದರವಾದ ರಸ್ತೆಯಲ್ಲಿ ಸುಮಾರು 1 ಕಿಮೀ ದೂರ ಕ್ರಮಿಸಿದಲ್ಲಿ ಸಿಗುವುದೇ ಶ್ರೀ ಕೋದಂಡರಾಮ ದೇವಾಲಯ. ಹೆಸರಿಗಷ್ಟೇ ರಾಮನ ದೇವಾಲಯವಾದರೂ ಐತಿಹಾಸಿಕವಾಗಿ ಅದು ರಾವಣನ ತಮ್ಮ ವಿಭೀಷಣನಿಗೆ ಸಂಬಂಧ ಪಟ್ಟ ಅಪರೂಪದ ದೇವಾಲಯವಾಗಿದೆ.

WhatsApp Image 2024-04-13 at 23.06.41ಸುತ್ತಲೂ ಬಂಗಾಳಕೊಲ್ಲಿಯಿಂದ ಆವೃತವಾಗಿರುವ ಈ ವಿಭೀಷಣನ ದೇಗುಲ ಕಡಲಿನಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ. ಇಲ್ಲಿಂದಲೇ ಶ್ರೀಲಂಕಾಕ್ಕೆ ಹೋಗಲು ದಾರಿ ಇದೆ ಎಂದು ಹೇಳಲಾಗುತ್ತದೆಯಲ್ಲದೇ, ರಾಮ ಸೇತುವು ಸಹಾ ಇಲ್ಲಿಂದಲೇ ಪ್ರಾರಂಭವಾಯಿತು ಎಂದೂ ಸಹಾ ಕೆಲವರು ಹೇಳುತ್ತಾರೆ. ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನ 1964ರ ಚಂಡಮಾರುತದಲ್ಲಿ ದನುಷ್ಕೋಟಿ ಸುತ್ತಮುತ್ತಲಿನ ಬಹುತೇಕ ಪ್ರದೇಶಗಳೆಲ್ಲವೂ ಹಾಳಾದರೂ ಸ್ವಲ್ಪ ಮಟ್ಟಿನ ಹಾನಿಗಳಿಂದ ಅಲ್ಲಿ ಉಳಿದುಕೊಂಡಿರುವ ಏಕೈಕ ಐತಿಹಾಸಿಕ ರಚನೆಯಾಗಿದೆ. 1978ರಲ್ಲಿ ಶ್ರೀ ರಾಮೇಶ್ವರ ದೇಗುಲದ ಆಡಳಿತ ಮಂಡಳಿಯವರು ಈ ದೇವಾಲಯದ ಜೀರ್ಣೋಧ್ಧಾರವನ್ನು ಮಾಡಿಸಿ ವಿಶಿಷ್ಟ ಶೈಲಿಯ ವಾಸ್ತುಶಿಲ್ಪದಲ್ಲಿ ಪುನರ್ ನಿರ್ಮಿಸಿ ಕುಂಭಾಭಿಷೇಕವನ್ನು ನಡೆಸಿದ ನಂತರ ನಿತ್ಯಪೂಜೆಗಳು ಸಾಂಗೋಪಾಂಗವಾಗಿ ನಡೆಯುತ್ತಲಿದ್ದು, ಇತ್ತೀಚಿಗೆ ಭಕ್ತಾದಿಗಳೂ ಸಹಾ ಶ್ರೀಕ್ಷೇತ್ರಕ್ಕೆ ಹೆಚ್ಚಾಗಿ ಬಂದು ಹೋಗುತ್ತಿರುವುದು ಸಹಾ ಮೆಚ್ಚುಗೆಯ ಸಂಗತಿಯಾಗಿದೆ. ಈ ದೇವಾಲಯವು ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಒಂದಾಗಿರುವುದು ಮತ್ತೊಂದು ವಿಶೇಷವಾಗಿದೆ.

WhatsApp Image 2024-04-13 at 23.06.10ಇಲ್ಲಿನ ಮೂಲ ವಿಗ್ರಹ ಪ್ರಭು ಶ್ರೀರಾಮನಾಗಿದ್ದು ಆತ ಸೀತಾದೇವಿ ಮತ್ತು ಲಕ್ಷಣರೊಡನೆ ಬಿಲ್ಲನ್ನು ಹಿಡಿದುಕೊಂಡಿರುವ ಕಾರಣ, ಇದನ್ನು ಕೋದಂಡರಾಮ ದೇವಾಲಯ ಎಂದು ಕರೆಯಲಾಗುತ್ತದೆ. ಸಹಜವಾಗಿ ಎಲ್ಲೆಡೆಯಂತೆ, ರಾಮ ಸೀತಾ,ಲಕ್ಷಣರ ಜೊತೆಯಲ್ಲಿ ಆಂಜನೇಯರು ಇರುವುದು ಸಹಜವಾದರೇ ಇಲ್ಲಿ ಆಂಜನೇಯರ ಜೊತೆ ವಿಭೀಷಣರು ಸಹಾ ಇದ್ದು ಆವರಿಗೂ ನಿತ್ಯ ಪೂಜೆ ನಡೆಯುವುದರಿಂದ ಈ ದೇಗುಲ ವಿಭೀಷಣನ ದೇವಾಲಯ ಎಂದೇ ಸುಪ್ರಸಿದ್ಧವಾಗಿದೆ.

ಈ ದೇಗುಲದ ಗರ್ಭಗುಡಿಯಲ್ಲಿ ವಿಭೀಷಣನ ಪ್ರತಿಮೆ ಇಡುವುದಕ್ಕೂ ಸಹಾ ಒಂದು ಸುಂದರವಾದ ಪೌರಾಣಿಕ ಕಥೆಯಿದ್ದು, ರಾವಣನು ಸೀತಾದೇವಿಯನ್ನು ಕಾಡಿನಿಂದ ಅಪಹರಿಸಿ ಲಂಕೆಯ ಅಶೋಕವನದಲ್ಲಿಟ್ಟಿರುವ ಸಂಗತಿ ಆಂಜನೇಯನಿಂದ ತಿಳಿದು, ಸೀತಾದೇವಿಯನ್ನು ಅಲ್ಲಿಂದ ಕರೆ ತರಲು ರಾಮ ಮತ್ತು ಲಕ್ಷಣರು ಲಂಕೆಯತ್ತ ಬರಲು ರಾಮಸೇತುವನ್ನು ಕಟ್ಟುತ್ತಿರುವ ವಿಷಯ ತಿಳಿದ ರಾವಣನ ತಮ್ಮ ವಿಭೀಷಣನು, ತನ್ನ ಆಣ್ಣನಿಗೆ ಪ್ರಭು ಶ್ರೀರಾಮನ ವ್ಯಕ್ತಿ, ವ್ಯಕ್ತಿತ್ವ ಮತ್ತು ಶೌರ್ಯವನ್ನು ವಿವರಿಸಿದ್ದಲ್ಲದೇ ಚಿಕ್ಕವಯಸ್ಸಿನಲ್ಲೇ ತಮ್ಮ ಮಾವ ಸುಭಾಹು ಮತ್ತು ಸೀತೆಯ ಅಪಹರಣದ ಸಮಯದಲ್ಲಿ ಮಾಯಾ ಜಿಂಕೆಯ ಪ್ರಹಸನದಲ್ಲಿ ಮಾರೀಚನನ್ನು ಸಂಹರಿಸಿದ ವಿಷಯವನ್ನು ವಿಷಧವಾಗಿ ತಿಳಿಸಿ, ವೃಥಾ ಸಮಯವನ್ನು ಹಾಳು ಮಾಡದೇ, ಸೀತಾದೇವಿಯನ್ನು ಆತನಿಗೆ ಒಪ್ಪಿಸಬೇಕೆಂದು ಕೇಳಿಕೊಳ್ಳುತ್ತಾನೆ.

WhatsApp Image 2024-04-13 at 23.07.23ಆದರೆ ಪರಮ ಶಕ್ತಿಶಾಲಿಯಾದ ರಾವಣನಿಗೆ ತನ್ನ ಶಕ್ತಿಯ ಬಗ್ಗೆ ದುರಹಂಕಾರ ಮತ್ತು ತನ್ನ ತಂಗಿ ಶೂರ್ಪಣಕಿಗೆ ಕೊಟ್ಟ ಮಾತನ್ನು ಮೀರಲಾಗದೇ, ವಿಭೀಷಣನ ಮಾತುಗಳನ್ನು ಕೇಳಲು ಇಚ್ಚಿಸದೇ ಹೋದಾಗ, ವಿಧಿ ಇಲ್ಲದೇ, ವಿಭೀಷಣನು ತನ್ನ ಲಂಕೆಯನ್ನು ತೊರೆದು ಇದೇ ಪ್ರದೇಶದಲ್ಲಿ ಮೊದಲ ಬಾರಿ ಪ್ರಭು ಶ್ರೀರಾಮನ ಪಾಳಯವನ್ನು ಸೇರಲು ಬರುತ್ತಾನೆ. ಹಾಗೆ ಬಂದ ರಾವಣನ ತಮ್ಮ ವಿಭೀಷಣನನ್ನು ವಾನರ ಸೈನ್ಯವು ಆತ ರಾವಣನ ಗೂಢಚಾರ ಎಂದು ನಂಬಿ ಅವನನ್ನು ತಮ್ಮ ಕಡೆಗೆ ಸೇರಿಸಿಕೊಳ್ಳದಂತೆ ಒತ್ತಾಯಿಸಿದರೂ, ಆಂಜನೇಯನ ಸಹಾಯದಿಂದ ವಿಭೀಷಣನ ವ್ಯಕ್ತಿ ಮತ್ತು ವ್ಯಕ್ತಿತ್ವದ ಬಗ್ಗೆ ಅರಿತುಕೊಂಡ ರಾಮನು, ತನಗೆ ಶರಣಾದವರನ್ನು ರಕ್ಷಿಸುವುದು ತನ್ನ ಕರ್ತವ್ಯ ಎಂದು ತಿಳಿಸಿ ವಿಭೀಷಣನನ್ನು ತನ್ನ ಪಾಳಯಕ್ಕೆ ಸೇರಿಕೊಳ್ಳುತ್ತಾನೆ. ಮುಂದೆ ರಾಮ ರಾವಣರ ಮಧ್ಯೆ ಸುದೀರ್ಘವಾದ ಘನ ಘೋರವಾದ ಯುದ್ಧ ನಡೆದು ಅಂತಿಮವಾಗಿ ರಾವಣನ್ನು ರಾಮನು ಮಣಿಸಿದ ನಂತರ, ಇದೇ ಪವಿತ್ರ ಸ್ಥಳದಲ್ಲಿಯೇ ವಿಭೀಷಣನಿಗೆ ರಾಮನು ಪಟ್ಟಾಭಿಷೇಕ ನೆರವೇರಿಸುತ್ತಾನೆ. ಅದರ ದ್ಯೋತಕವಾಗಿಯೇ ಇಲ್ಲಿ ವಿಭೀಷಣನ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಈ ದೇವಾಲಯದ ಬಳಿ ಅತ್ಯಂತ ಹಳೆಯದಾದ ಅತ್ತಿ ಮರವಿದ್ದು ಅದೂ ಸಹಾ ಆ ದೇವಾಲಯವನ್ನು ಸಂದರ್ಶಿಸುವ ಎಲ್ಲಾ ಭಕ್ತಾದಿಗಳ ಗಮನವನ್ನು ಸೆಳೆಯುತ್ತದೆ. ಈ ದೇಗುಲದ ಪಕ್ಕದಲ್ಲೇ ನಂದನವನಂ ಎಂಬ ಸ್ಥಳವಿದ್ದು ರಾಮಾಯಣದ ಕಾಲದಲ್ಲಿ ಇಲ್ಲಿನ ಭೃಂಗಿ ಆಶ್ರಮದಲ್ಲಿ ಶ್ರೀ ರಾಮನು ಕೆಲ ಕಾಲ ತಂಗಿದ್ದರೆಂದು ಹೇಳಲಾಗುತ್ತದೆ. ಇಂದಿಗೂ ಸಹಾ ಇಲ್ಲಿ ಭೃಂಗಿ ತೀರ್ಥವನ್ನು ಕಾಣಬಹುದಾಗಿದೆ.

WhatsApp Image 2024-04-13 at 23.06.57ದೇವಾಲಯದ ಒಳಗಿನ ಗೋಡೆಗಳ ಮೇಲೆ ರಾಮಾಯಣದ ಕಥೆಯನ್ನು ಚಿತ್ರಿಸುವ ಅಧ್ಭುತವಾದ ವರ್ಣ ಚಿತ್ರಗಳು ಇದ್ದು, ಅದರಲ್ಲಿ ರಾವಣನು ಸೀತೆಯನ್ನು ಅಪಹರಿಸಿದ ನಂತರ ವಿಭೀಷಣನು ತನ್ನಣ್ಣ ರಾವಣನಿಗೆ ಪರಸ್ತ್ರೀಯನ್ನು ಅಪಹರಿಸಿ ಈ ರೀತಿ ಹಿಂಸಿಸುವುದು ಸರಿಯಲ್ಲ ಎಂದು ಅಣ್ಣನಿಗೆ ಬುದ್ದಿ ಹೇಳುತ್ತಾನೆ. ಇದರಿಂದ ಕೋಪಗೊಂಡ ರಾವಣನು ವಿಭೀಷಣನನ್ನು ಕಾಲಿನಿಂದ ಒದೆಯುವ ಸನ್ನಿವೇಶದ ಚಿತ್ರವನ್ನು ಸಹಾ ಇಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಅದೇ ರೀತಿ ಈ ದೇಗುಲದಲ್ಲಿ ಗರುಡ ಮತ್ತು ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರಿಗೂ ಸಣ್ಣ ಸಣ್ಣ ಗುಡಿಗಳಿವೆ. ಇನ್ನೂ ವಿಶೇಷವೆಂದರೆ, ಸ್ವಾಮಿ ವಿವೇಕಾನಂದರು ತಮ್ಮ ಅಮೆರಿಕದ ಸರ್ವಧರ್ಮ ಸಮ್ಮೇಳನವನ್ನು ಮುಗಿಸಿ ಸುಮಾರು ನಾಲ್ಕುವರ್ಷಗಳ ತರುವಾಯ ಭಾರತಕ್ಕೆ ಹಡಗಿನಲ್ಲಿ ಹಿಂದಿರುಗಿದಾಗ ಅವರು ಸಂದರ್ಶಿಸಿದ ಮೊದಲ ದೇಗುಲ ಇದಾಗಿದೆ ಎಂಬ ಪ್ರತೀತಿಯೂ ಇದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಸೇತುಸಮುದ್ರಂ ಶಿಪ್ಪಿಂಗ್ ಕಾಲುವೆ ಯೋಜನೆಯ ಅನುಷ್ಠಾನಕ್ಕೆ ಪ್ರಸ್ತಾಪಿಸಲಾಗಿದ್ದ ಆರು ಜೋಡಣೆಗಳಲ್ಲಿ ನಾಲ್ಕನೆಯ ಜೋಡಣೆಯು ಈ ಭಾಗಕ್ಕೆ ಸಂಬಂಧಪಟ್ಟಿತ್ತು. ಆದರೆ ಆ ಯೋಜನೆ ಜಾರಿಗೆಯಾದಲ್ಲಿ, ಈ ದೇವಾಲಯವನ್ನು ಒಳಗೊಂಡಂತೆ ರಾಮೇಶ್ವರಂ ದ್ವೀಪದ ಸುತ್ತಲಿನ ಅನೇಕ ದೊಡ್ಡ ಪ್ರದೇಶಗಳು ನಾಶವಾಗುತ್ತವೆ ಎಂಬುದನ್ನು ಗಮನಿಸಿ ಆ ಆರು ಪ್ರಸ್ತಾವಿತ ಜೋಡಣೆಗಳಲ್ಲಿ ನಾಲ್ಕನೆಯದನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾದ ಕಾರಣ ಇಂದಿಗೂ ಸಹಾ ಈ ಕೋದಂಡರಾಮಸ್ವಾಮಿ ದೇವಾಲಯ ಅರ್ಥಾತ್ ವಿಭೀಷಣ ದೇವಾಲಯ ಉಳಿದುಕೊಂಡಿದ್ದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.

ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ, ಮುಂದಿನ ಬಾರಿ ರಾಮೇಶ್ವರಕ್ಕೆ ಭೇಟಿ ನೀಡಿದಾಗ ತಪ್ಪದೇ ಈ ಕೋದಂಡರಾಮ/ವಿಭೀಷಣನ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment