ಧೃಢತೆ ಮತ್ತು ಸಧೃಢತೆ

ಕೆಲ ದಿನಗಳ ಹಿಂದೆ ವಾರ ಅಪರೂಪ ಎನ್ನುವಂತೆ ಶಂಕರ ಮನೆಯ ಎಲ್ಲಾ ಸದಸ್ಯರೂ ಒಂದೇ ಸಮಯದಲ್ಲಿ ಮನೆಯಲ್ಲಿದ್ದು ಎಲ್ಲರೂ ಒಟ್ಟಿಗೆ ಮಾತಾನಾಡುವ ಮನಸ್ಥಿತಿಯಲ್ಲಿದ್ದರು. ನಿಜ ಹೇಳಬೇಕೆಂದರೆ ಅದು ಮಾತು ಎನ್ನುವುದಕ್ಕಿಂತ ಬಿಸಿ ಬಿಸಿಯಾದ ಚರ್ಚೆ ಆರಂಭವಾಗಿತ್ತು. ಚಿಕ್ಕವಯಸ್ಸಿನಿಂದಲೂ ಶಂಕರ ಮತ್ತು ಆತನ ಮಡದಿ ಅವರ ಮಕ್ಕಳಿಗೆ ಹೇಳಿಕೊಟ್ಟ ಸಂಸ್ಕಾರ ಮತ್ತು ಮನೆಯಲ್ಲಿ ನಡೆದುಕೊಳ್ಳುತ್ತಿದ್ದ ರೀತಿಗಳ ಬಗ್ಗೆ ಅವರ ಮಕ್ಕಳಿಗೆ ಆಕ್ಷೇಪವಿತ್ತು. ಚಿಕ್ಕಂದಿನಿಂದಲೂ ನೀವು ನಮಗೆ ಸ್ವಾತ್ರಂತ್ಯವೇ ನೀಡಲಿಲ್ಲ. ನಾವು ಏನೇ ಮಾಡಬೇಕೆಂದರೂ, ಎಲ್ಲಿಗೆ ಹೋಗಬೇಕಾದರೂ ನಿಮಗೆ ತಿಳಿಸಿ ನಿಮ್ಮ ಅನುಮತಿ ಕೇಳಿಯೇ ಹೋಗಬೇಕಿತ್ತು. ಹಾಗೆ ಕಳುಹಿಸಲು ಅನುಮತಿ ಕೊಡುವ ಮುನ್ನಾ ಪ್ರತಿಯೊಂದು ಬಾರಿಯೂ ನೀವು ನಾವು ಗಳಿಸುತ್ತಿದ್ದ ಅಂಕ ಮತ್ತು ಇತರೇ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಳೆ ಹಾಕಿ, ನೀವು ಅದನ್ನು ಮಾಡಿಲ್ಲಾ! ಇದನ್ನು ಮಾಡಿಲ್ಲಾ! ಎಂದು ಏನಾದರೂ ಒಂದು ಸಬೂಬು ಹೇಳಿ ನಮ್ಮೆಲ್ಲಾ ಆಸೆಗಳಿಗೆ ತಣ್ಣಿರು ಎರೆಚಿದ್ದೀರಿ. ಅದೆಷ್ಟೋ ಬಾರಿ ನಾವುಗಳು ಒಬ್ಬೊಬ್ಬರೇ ಸುಮ್ಮನೆ ಕುಳಿತುಕೊಂಡು ದುಃಖಿಸಿದ್ದೇವೆ ಎಂದು ಪುಂಖಾನು ಪುಂಖವಾಗಿ ಅಪ್ಪಾ ಅಮ್ಮನ ಮೇಲೆ ಆರೋಪಗಳ ಸುರಿಮಳೆಯನ್ನು ಸುರಿಸಿದರು.

kidsಇವೆಲ್ಲವನ್ನೂ ತಾಳ್ಮೆಯಿಂದ ಮತ್ತು ತದೇಕ ಚಿತ್ತದಿಂದ ಆಲಿಸಿದ ಶಂಕರ, ನಾವು ಸಣ್ಣ ವಯಸ್ಸಿನಲ್ಲಿದ್ದಾಗಲೂ ಹೀಗೆಯೇ ನಮ್ಮ ತಂದೆ ತಾಯಿಯವರ ಬಳಿ ಹೇಳುತ್ತಿದ್ದೆವು. ನಿಜ ಹೇಳ ಬೇಕೆಂದರೆ, ಇಂದು ನಿಮಗಿರುವಷ್ಟು ಐಶಾರಾಮಿ ಜೀವನ ನಮಗೆ ಇರಲಿಲ್ಲ, ನಾವುಗಳು ಇದ್ದದ್ದು ಸಣ್ಣದಾಗ ಒಂದು ಕೊಠಡಿಯ ಬಾಡಿಗೆ ಮನೆ. ಮನೆಗೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚು. ಇಂದು ನಿಮಗೆ ಇರುವಂತೆ ಪ್ರತ್ಯೇಕ ಕೊಠಡಿಗಳು ನಮಗಿರಲಿಲ್ಲ. ಪ್ರತ್ಯೇಕ ಕೊಠಡಿ ಬಿಡಿ, ನಮ್ಮ ಮನೆಗೆಂದೇ ಪ್ರತ್ಯೇಕ ಶೌಚಾಲವೂ ಇರಲಿಲ್ಲ. ಇಡೀ ವಠಾರಕ್ಕೆಲ್ಲಾ ಕೇವಲ ಎರಡು ಶೌಚಾಲಯವಿದ್ದು ಅದನ್ನು ಸರದಿಯ ಸಾಲಿನಲ್ಲಿ ಬಳಸುವಂತಹ ಪರಿಸ್ಥಿತಿ ಇತ್ತು. ಮನೆಯಿಂದ ಶಾಲೆಗೆ ಸುಮಾರು 2-3 ಕಿ.ಮೀ ದೂರವಿದ್ದು, ಚಳಿ, ಮಳೆ ಗಾಳಿ ಇದಾವುದನ್ನು ಲೆಖ್ಖಿಸದೇ, ಭಾರವಾದ ಶಾಲಾ ಚೀಲವನ್ನು ಬೆನ್ನ ಮೇಲೆ ಹೇರಿಕೊಂಡು ನಡೆದುಕೊಂಡೇ ಹೋಗಬೇಕಿತ್ತು. 7ನೇ ತರಗತಿಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿದ ನಂತರವಷ್ಟೇ ಅಪ್ಪಾ ಕೊಡಿಸಿದ ಸೈಕಲ್ ಮುಂದೇ ಪದವಿ ಪಡೆಯುವವರೆಗೂ ಇತ್ತು. ವರ್ಷಕ್ಕೊಮ್ಮೆ ಬರುವ ಬೇಸಿಗೆ ರಜೆಯಲ್ಲೊಮ್ಮೆ ಬಿಟಿಎಸ್ ದಿನದ ಟಿಕೆಟ್ ತೆಗೆದುಕೊಂಡು ಲಾಲ್ ಬಾಗ್, ಕಬ್ಬನ್ ಪಾರ್ಕ್, ವಿಧಾನ ಸೌಧ ತೋರಿಸಿಕೊಂಡು ಹೋಟೆಲ್ಲಿನಲ್ಲಿ ಊಟ ತಿಂಡಿ ಮಾಡಿಸಿಕೊಂಡು ಬರುವುದೇ ನಮಗೆ ದೊಡ್ಡ ಆನಂದವನ್ನು ತರುತ್ತಿತ್ತು ಎಂದೆಲ್ಲಾ ವಿವರಿಸಿದ.

ಅಪ್ಪನ ಮಾತನ್ನು ಕೇಳುವ ಮನಸ್ಥಿತಿಯಲ್ಲಿರದಿದ್ದ ಮಕ್ಕಳು ಅದೆಲ್ಲಾ ನಿಮ್ಮ ಕಾಲ. ಈಗ ಕಾಲ ಬದಲಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಸೈಕಲ್ ಕೊಡಿಸಿದರೆ, ನಂತರ ಕಾಲೇಜಿಗೆ ಬರುವಷ್ಟರಲ್ಲಿ ಬೈಕ್ ಮತ್ತು ಇಂಜೀನಿಯರಿಂಗ್/ಪದವಿಗೆ ಹೋಗುವಷ್ಟರಲ್ಲಿ ಆಧುನಿಕ ಕಾರ್ ತೆಗೆಸಿ ಕೊಡುತ್ತಾರೆ. ಅದೇ ರೀತಿಯಾಗಿ ತಿಂಗಳಿಗೆ ಸಾವಿರಾರು ರೂಪಾಯಿಗಳಷ್ಟು ಪಾಕೆಟ್ ಮನಿ ಕೊಡುವುದಲ್ಲದೇ, ಆವರು ಮಾಡುವ ಖರ್ಚಿಗೆ ಲೆಖ್ಖವನ್ನೂ ಕೇಳುವುದಿಲ್ಲಾ. ನೀವು ಮಾತ್ರಾ ನಮಗೆ ಪ್ರತಿಯೊಂದಕ್ಕೂ ಲೆಖ್ಖಾ ಕೇಳುತ್ತೀರಾ! ಮಕ್ಕಳ ಮೇಲೆ ನಿಮಗೆ ನಂಬಿಕೆಯೇ ಇಲ್ಲಾ! ಎಂದು ಹೇಳಿದರು

ಈ ಮಾತುಗಳನ್ನು ಕೇಳಿದ ಶಂಕರನಿಗೆ ಸುಮ್ಮನೇ ಹೀಗೇ ಹೇಳಿದರೆ ಅವರಿಗೆ ಸರಿ ಹೋಗುವುದಿಲ್ಲ ಅದಕ್ಕೊಂದು ಸುಂದರವಾದ ಕಥೆಯ ಮೂಲಕ ಹೇಳಿದರೆ ಒಳ್ಳೆಯದಾದೀತು ಎಂದು ಯೋಚಿಸಿ, ಈಗೊಂದು ಕಥೆ ಹೇಳುವುದರೊಂದಿಗೆ ನನ್ನ ಅನುಭವವನ್ನು ಹಂಚಿಕೊಳ್ತೀನಿ ನಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಹೇಳಿ ನಾವು ಚಿಕ್ಕವರಿದ್ದಾಗ ನಮ್ಮ ಮನೆಯ ಮುಂದೆ ದೊಡ್ಡದಾದ ಕೈ ತೋಟವಿತ್ತು. ಅದೇ ರೀತಿ ನಮ್ಮ ಮನೆಯ ಅಕ್ಕ ಪಕ್ಕದವರ ಮನೆಯಲ್ಲಿಯೂ ಸುಂದರವಾದ ಕೈತೋಟಗಳು ಇತ್ತು. ಅಂದೆಲ್ಲಾ, ನಿವೇಷನದ ಒಂದು ಮೂಲೆಯಲ್ಲಿ ಅಗತ್ಯಕ್ಕೆ ಅವಶ್ಯಕವಾದಷ್ಟು ಮನೆಯನ್ನು ಕಟ್ಟಿ ಉಳಿದ ಜಾಗದಲ್ಲಿ ತೆಂಗಿನ ಮರ, ಬಾಳೆ ಗಿಡ, ಕರಿಬೇವಿನ ಸೊಪ್ಪಿನ ಮರವಲ್ಲದೇ< ದೈನಂದಿನ ಪೂಜೆಗೆ ಬೇಕಾಗುವಷ್ಟು ಹೂವಿನ ಗಿಡಗಳ ಜೊತೆ ಮನೆಗೆ ಅವಶ್ಯಕವಾದ ಸಣ್ಣ ಪುಟ್ಟ ತರಕಾರಿಗಳನ್ನು ಬೆಳೆದುಕೊಳ್ಳುವ ಸತ್ ಸಂಪ್ರದಾಯವಿತ್ತು.

kaiTotaನಿಮೆಗಲ್ಲಾ ಗೊತ್ತಿರುವಂತೆ ನಮ್ಮ ಅಪ್ಪಾ ಅರ್ಥಾತ್ ನಿಮ್ಮ ತಾತ ಹಳ್ಳಿಯಿಂದ ಬಂದವರು. ಹಾಗಾಗಿ ಅವರು ತೋಟದಲ್ಲಿ ಏನೇ ಬೆಳೆದರೂ ಸಾಂಪ್ರದಾಯಿಕವಾಗಿ ಸಾವಯವವಾಗಿ ಬೆಳೆಯುತ್ತಿದ್ದರು. ಅಡುಗೆ ಮನೆಯಲ್ಲಿ ಪ್ರತಿದಿನವೂ ಬಳಸುತ್ತಿದ್ದ ತರಕಾರಿಗಳ ಸಿಪ್ಪೆ, ಹಣ್ಣುಗಳ ಸಿಪ್ಪೆಯನ್ನು ಹೊರಗೆ ಬಿಸಾಡದೇ ನಮ್ಮ ಕೈತೋಟದ ಮೂಲೆಯೊಂದರಲ್ಲಿ ಒಟ್ಟು ಮಾಡಿ ಮನೆಯ ಮುಂದೆ ಬೀಡಾಡಿ ದನಕರುಗಳು ಹಾಕುತ್ತಿದ್ದ ಸಗಣಿಯನ್ನು ಬೇಸರವಿಲ್ಲದೇ ಬಾಚಿಕೊಂಡು ಬಂದು ಅ ತಿಪ್ಪೆಗೆ ಹಾಕುತ್ತಿದ್ದದ್ದಲ್ಲದೇ ಮನೆಯ ಮುಂದಿನ ಹೊಂಗೆ ಗಿಡದ ಹೂ ಮತ್ತು ಎಲೆಗಳನ್ನೂ ಸಹಾ ಹಾಕಿ ಹದವಾದ ಗೊಬ್ಬರವನ್ನು ತಯಾರಿಸಿ ತಮ್ಮ ಕೈತೋಟದ ಗಿಡ ಮರಗಳಿಗೆ ಹಾಕುತ್ತಿದ್ದರು. ಮನೆಯಲ್ಲಿ ಅಳುದುಳಿದ ಹುಳಿಯಾದ ಮಜ್ಜಿಗೆ/ಮೊಸರನ್ನು, ಕರಿಬೇವಿನ ಗಿಡಗಳಿಗೆ ಹಾಕಿದರೆ, ಮನೆಯಲ್ಲಿ ಕಾಫಿ/ಟೀ ತಯಾರಿಸಿ ಉಳಿದ ಚರಟ ಮತ್ತು ಅಕ್ಕಿ ತೊಳೆದ ನೀರನ್ನು ಸುಮ್ಮನೇ ಬೀಸಾಡದೇ ಅವೆಲ್ಲವನ್ನೂ ಸಂಗ್ರಹಿಸಿ ಕೈತೋಟದ ಗಿಡಗಳಿಗೇ ಹಾಕುತ್ತಿದ್ದರು.

ಅದೇ ಪಕ್ಕದ ಮನೆಯವರಿಗೆ ಹಳ್ಳಿಯಲ್ಲಿ ಬೆಳೆದ ಅನುಭವ ಇರಲಿಲ್ಲ. ಅವರದ್ದೇನಿದ್ದರೂ ಪಟ್ಟಣದಲ್ಲೇ ವಾಸ. ಹಾಗಾಗಿ ಅವರಿಗೆ ಈ ತಿಪ್ಪೆ ಮತ್ತು ಗೊಬ್ಬರವೆಲ್ಲಾ ಅಸಹ್ಯ ಹುಟ್ಟಿಸುತ್ತಿತ್ತು. ಅದರ ವಾಸನೆ ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಹಾಗಾಗಿ ಅವರು ತಮ್ಮ ಹೂ ತೋಟದ ಗಿಡ ಮರಗಳಿಗೆ ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದರು. ಹಾಗಾಗಿ ಸಹಜವಾಗಿ ಅವರ ತೋಟದ ಗಿಡ ಮರಗಳು ನಮ್ಮ ಮನೆಯ ತೋಟಕ್ಕಿಂತಲೂ ಎತ್ತರವಾಗಿ ಮತ್ತು ಹೆಚ್ಚಿನ ಇಳುವರಿಯನ್ನು ಕೊಡುತ್ತಿದ್ದ ಕಾರಣ ಅವರಿಗೆ ಅದರ ಬಗ್ಗೆ ಹೆಮ್ಮೆ ಇತ್ತು ಮತ್ತು ಕೆಲವೊಮ್ಮೆ ನಮ್ಮ ತಂದೆಯವರನ್ನೂ ಈ ಕುರಿತಂತೆ ಗೇಲಿ ಸಹಾ ಮಾಡುತ್ತಿದ್ದರು.

tree1ಅದೊಂದು ದಿನ ನೆನ್ನೆ ಬಂದಂತಹ ವಿಪರೀತ ಗಾಳಿಯ ಜೊತೆ ಕುಂಭದ್ರೋಣ ಮಳೆ ಸುರಿದ ಕಾರಣ ಎಲ್ಲರ ಮನೆಯಲ್ಲಿದ್ದ ಮರಗಳೂ ಗಾಳಿಯ ರಭಸ ಮತ್ತು ಸುರಿಯುತ್ತಿದ್ದ ಮಳೆಯ ಧಾಳಿಯನ್ನು ತಡೆಯಲಾರದೇ ಅತ್ತಿಂದಿತ್ತಾ ಅಲ್ಲಾಡುತ್ತಾ ಅಂತಿಮವಾಗಿ ಪಕ್ಕದ ಮನೆಯ ಗಿಡ ಮರಗಳು ಗಾಳಿಯ ರಭಸವನ್ನು ತಡೆಯಲಾಗದೇ ಬುಡಮೇಲಾಗಿ ನೆಲಕಚ್ಚಿದ್ದವು. ಅದೇ ನಮ್ಮ ಮನೆಯ ಗಿಡ ಮರಗಳ ಒಂದೆರಡು ಕೊಂಬೆಗಳು ಮುರಿದು ಬಿದ್ದವಾದರೂ ಗಿಡ/ಮರಕ್ಕೇನೂ ಹಾಳಾಗದೇ ಹೋದದ್ದನ್ನು ಕಂಡು ನೆರೆಮನೆಯವರಿಗೆ ಅಚ್ಚರಿಯಾಗಿ ನಾವಿಬ್ಬರೂ ಒಟ್ಟಿಗಾಗಿಯೇ ಗಿಡಮರಗಳನ್ನು ನೆಟ್ಟಿದ್ದೇವೆ. ನಿಜ ಹೇಳಬೇಕೆಂದರೆ, ನಾವು ನಮ್ಮ ಗಿಡ/ಮರಗಳಿಗೆ ನಿಮಗಿಂತಲೂ ಹೆಚ್ಚಾದ ನೀರು ಮತ್ತು ರಾಸಾಯನಿಕ ಗೊಬ್ಬರವನ್ನು ಹಾಕಿದ ಪರಿಣಾಮ ನಮ್ಮ ಗಿಡ/ಮರಗಳು ನಿಮಗಿಂತಲೂ ಎತ್ತರವಾಗಿ ಬೆಳೆದಿರುವುದಲ್ಲದೇ, ಉತ್ತಮವಾದ ಫಸಲನ್ನೂ ನೀಡುತ್ತಿದ್ದರೂ, ಇಂದೇಕೆ ಏಕಾಏಕಿ ಬಿದ್ದು ಹೋದರೆ, ನಿಮ್ಮ ಮನೆಯ ಗಿಡ/ಮರಗಳು ಮಾತ್ರಾ ಸಧೃಢವಾಗಿ ನಿಂತಿವೆ ಇದರ ಹಿಂದಿರುವ ರಹಸ್ಯವೇನು? ಎಂದು ಕೇಳಿದರು.

ನಿಮ್ಮ ತಾತನವರು ಅವರು ಕೇಳಿದ ಪ್ರಶ್ನೆಗೆ ಸಣ್ಣದಾಗಿ ಮುಗುಳ್ನಗುತ್ತಾ, ನೋಡಿ ರಾಯರೇ, ನೀವು ನಿಮ್ಮ ಗಿಡಮರಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ನೀರು ಗೊಬ್ಬರಗಳನ್ನು ಹಾಕಿದ ಪರಿಣಾಮ ಅವುಗಳು ಹೆಚ್ಚಿನ ಪರಿಶ್ರಮ ಪಡದೇ ನೀವು ಹಾಕಿದ ಗೊಬ್ಬರ ಮತ್ತು ನೀರನ್ನು ಬಳಸಿಕೊಂಡು ಎತ್ತರೆತ್ತರ ಧೃಢವಾಗಿ ಬೆಳೆದು ಉತ್ತಮ ಫಸಲನ್ನು ನೀಡಿದವು. ಆದರೆ ಅದೇ ನಾವು, ಮನೆಯಲ್ಲೇ ತಯಾರಿಸಿದ ಕೊಟ್ಟಿಗೆ ಗೊಬ್ಬರ ಮತ್ತು ಅಗತ್ಯವಿದ್ದಷ್ಟು ನೀರನ್ನು ಮಾತ್ರಾ ಹಾಕುತ್ತಿದ್ದೆವು. ನಮ್ಮ ಗಿಡ/ಮರಗಳು ಹೆಚ್ಚಿನ ನೀರಿನ ಅವಶ್ಯಕತೆಗಾಗಿ ಹುಡುಕಾಟ ಆರಂಭಿಸಿ, ಆಳವಾಗಿ ಮತ್ತು ಅಗಲವಾಗಿ ಬೇರುಗಳನ್ನು ಬೆಳೆಸಿಕೊಂಡು ತಮಗೆ ಅವಶ್ಯಕವಿದ್ದ ನೀರನ್ನು ಗಳಿಸಿಕೊಂಡಿದ್ದಲ್ಲದೇ, ಹೆಚ್ಚಿನ ಮಟ್ಟಿನ ಸಧೃಢತೆಯನ್ನು ಪಡೆದುಕೊಂಡವು. ಬುಡ ಮಟ್ಟದಲ್ಲಿ ಭಧ್ರವಾದ ಕಾರಣ, ನೆನ್ನೆಯ ಕುಂಭದ್ರೋಣ ಮಳೆ ಮತ್ತು ಬಿರುಗಾಳಿಗೆ ನಮ್ಮ ಮರಗಳು ಜಗ್ಗದೇ ಸಧೃಢವಾಗಿ ನಿಂತಿವೆ ಎಂದು ಹೇಳಿದಾಗ ಹೌದು ನಿಜ ಎಂದು ಮೂಗಿನ ಮೇಲೆ ಬೆರಳಿಟ್ಟು ಕೊಂಡು ತಲೆದೂಗಿಸಿ ಸುಮ್ಮನಾದರು.

paperಮುಂದೇ ನಾವುಗಳು ಹೈಸ್ಕೂಲ್ ಮತ್ತು ಕಾಲೇಜಿಗೆ ಹೋಗುವಾಗಲೂ ನಮ್ಮ ತಂದೆಯವರಿಂದ ಶಾಲಾ ಕಾಲೇಜಿಗೆ ಅಗತ್ಯವಿದ್ದಷ್ಟು ಹಣವನ್ನು ಮಾತ್ರ ಪಡೆದುಕೊಂಡು ಉಳಿದ ನಮ್ಮ ಖರ್ಚಿಗೆ, ಬೆಳಿಗ್ಗೆ ಎದ್ದು ಹಾಲು/ಪೇಪರ್ ಹಾಕುವುದೋ ಇಲ್ಲವೇ ರಜೆ ಇದ್ದಾಗ ಸಭೆ ಸಮಾರಂಭಗಳಲ್ಲಿ ಅಡುಗೆ ಬಡಿಸಲು ಹೋಗುವ ಮೂಲಕ ಅಲ್ಪಸ್ವಲ್ಪ ಹಣವನ್ನು ಗಳಿಸಿ ಅದರಲ್ಲೂ ಹೆಚ್ಚಿನ ಮಟ್ಟಿನ ಹಣವನ್ನು ಉಳಿಳುತ್ತಿದ್ದದ್ದಲ್ಲದೇ ಮನೆಗೆ ಅವಶ್ಯಕತೆ ಇದ್ದಾಗ ಅಮ್ಮನಿಗೆ ಕೊಟ್ಟು ಭೇಷ್ ಎನಿಸಿಕೊಳ್ಳುತ್ತಿದ್ದೆವು. ಈ ರೀತಿಯಾಗಿ ಮಾಡುವುದರ ಹಿಂದೆ ಹಣ ಸಂಪಾದನೆಗಿಂತಲೂ, ನಮಗೆ ಸ್ವಾಲಂಭನೆಯ ಕಲ್ಪನೆ ದೊರೆಯಿತಲ್ಲದೇ, ಸಮಾಜದ ಪರಿಚಯವಾಯಿತು. ಎಂತಹ ಕಠಿಣ ಪರಿಸ್ಥಿಯನ್ನೂ ನಿಭಾಯಿಸುವ ಛಾತಿ ನಮಗೆ ದೊರೆತ ಕಾರಣ, ಉತ್ತಮವಾದ ಶಿಕ್ಷಣವನ್ನು ಪಡೆದು, ಒಳ್ಳೆಯ ಉದ್ಯೋಗದ ಜೊತೆ ಸಮಾಜದಲ್ಲಿಯೂ ಉತ್ತಮವಾದ ಗೌರವನ್ನು ಹೊಂದುವಂತಾಗಿದೆಯಲ್ಲದೇ, ನಿಮ್ಮನ್ನೂ ಸಹಾ ಉತ್ತಮ ರೀತಿಯಲ್ಲಿ ಸಾಕುವಂತಾಗಿದೆ ಎಂದು ಶಂಕರ ಮಕ್ಕಳಿಗೆ ಹೇಳಿದ.

ಹಾಗೆಯೇ ಮಾತನ್ನು ಮುಂದುವರೆಸಿದ ಶಂಕರ, ಮಕ್ಕಳೇ ನೀವಿನ್ನೂ ಸಣ್ಣವರು ನಿಮಗಿನ್ನೂ ಲೋಕ ಜ್ಞಾನದ ಅರಿವಿಲ್ಲ. ಹಾಗಾಗಿ ಈ ಕಥೆಯಲ್ಲಿ ಹೇಳಿದ ಹಾಗೆ ನೀವೂ ಸಹಾ ಗಿಡಮರಗಳ ಹಾಗೆಯೇ ಬಹಳ ಸೂಕ್ಷ್ಮಜೀವಿಗಳು, ಎಲ್ಲವನ್ನೂ  ಸುಲಭವಾಗಿ ನೀಡುತ್ತಲೇ ಹೋದಲ್ಲಿ ಅವರಿಗೆ ಪರಿಶ್ರಮದ ಬೆಲೆಯೇ ಗೊತ್ತಾಗುವುದಿಲ್ಲ. ಕೇಳಿದ್ದೆಲ್ಲವೂ ಅವರಿಗೆ ಸುಲಭವಾಗಿ ಸಿಕ್ಕಲ್ಲಿ ಅವರಿಗೆ ತಮ್ಮ ಶಕ್ತಿ ಸಾಮರ್ಥ್ಯದ ಅರಿವಾಗದೇ ಒಂದು ರೀತಿಯ ಆಲಸ್ಯಕ್ಕೆ ಒಳಗಾಗಿ ಸೋಮಾರಿಗಳಾಗುವ ಸಂಭವವೂ ಹೆಚ್ಚಾಗಿರುತ್ತದೆ. ಮುಂದೆ ಜೀವನದಲ್ಲಿ ಕಷ್ಟಗಳನ್ನು ಎದುರಿಸುವಾಗ ವಿಪರೀತವಾದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಸಮಸ್ಯೆಯನ್ನು ಎದುರಿಸಲಾಗದೇ ಖಿನ್ನತೆಗೆ ಒಳಗಾಗುವ ಅನೇಕ ವಿಧ್ಯಾರ್ಥಿಗಳು ಸಣ್ಣ ಸಣ್ಣ ವಯಸ್ಸಿನಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿಯನ್ನು ಪ್ರತಿದಿನ ಕೇಳುತ್ತಲೇ ಇರುತ್ತೇವೆ. ಅದಕ್ಕಾಗಿಯೇ ನಿಮ್ಮಲ್ಲಿ ಆತ್ಮಸ್ಥೈರ್ಯ ಮತ್ತು ಸಧೃಢತೆಯನ್ನು ತರುವ ಸಲುವಾಗಿಯೇ ಈ ರೀತಿಯಾಗಿ ನಿಮ್ಮನ್ನು ಬೆಳಸುತ್ತಿದ್ದೇವೆ. ನಾವುಗಳು ತೊಂದರೆಯಲ್ಲಿದ್ದಾಗ ಮಾತ್ರವೇ, ಹೆಚ್ಚಿನ ರೀತಿಯಲ್ಲಿ ನಮ್ಮ ಬುದ್ಧಿ ಶಕ್ತಿ ಮತ್ತು ಶ್ರಮವನ್ನು ಹಾಕಿ ಸಮಸ್ಯೆಯಿಂದ ಹೊರಬರುತ್ತೇವೆ. ಇದೇ ಜಗದ ನಿಯಮ ಇದನ್ನು ಅರಿತುಕೊಳ್ಳುವುದೇ ನಿಜವಾದ ಆಯಾಮ. ಎಂದು ಹೇಳಿದಾಗ, ಅದುವರೆವಿಗೂ ಅಬ್ಬರಿಸಿ ಬೊಬ್ಬಿರಿದ್ದ ಮಕ್ಕಳಿಬ್ಬರೂ ಶಂಕರನನ್ನು ಒಮ್ಮೆ ಅಪ್ಪಿಕೊಂಡು, ಅಪ್ಪಾ, ನಮ್ಮನ್ನು ದಯವಿಟ್ಟು ಕ್ಷಮಿಸಿ ಬಿಡಿ. ನಮಗೆ ನಮ್ಮ ತಪ್ಪಿನ ಅರಿವಾಗಿದೆ ಮತ್ತು ನಿಮ್ಮ ಮೌಲ್ಯಗಳ ಅರಿವಾಗಿದೆ. ಖಂಡಿತವಾಗಿಯೂ ನಾವುಗಳು ನಿಮ್ಮಂತೆಯೇ ಸಾವಲಂಭಿಗಳಾಗಿ ಸಧೃಢರಾಗುತ್ತೇವೆ ಎಂದು ಹೇಳಿದಾಗ, ಅದುವರೆವಿಗೂ ಬಿಗಿಯಾದ ವಾತಾವರಣವಿದ್ದ ಮನೆಯಲ್ಲಿ ಒಂದು ರೀತಿಯ ಸಂಭ್ರಮದ ಕಳೆ ಕಟ್ಟಿತ್ತು ಎಂದು ಹೇಳಬೇಕಿಲ್ಲ.

ಮಕ್ಕಳಿಗೆ ಎಲ್ಲವನ್ನು ಸುಲಭವಾಗಿ ಸಿಗುವಂತೆ ಮಾಡುವ ಬದಲು ಅವರಿಗೆ ಸಮಯಕ್ಕೆ ಅನುಗುಣವಾಗಿ ಸೂಕ್ತವಾದ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸ್ವಾವಲಂಭಿ ಮತ್ತು ಸಧೃಢರನ್ನಾಗಿಸುವ ಜವಾಬ್ಧಾರಿ ಕೇವಲ ಶಂಕರನಿಗಷ್ಟೇ ಅಲ್ಲದೇ ನಮ್ಮ ನಿಮ್ಮಂತಹ ಪೋಷಕರ ಮೇಲೆಯೂ ಇದೇ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

2 thoughts on “ಧೃಢತೆ ಮತ್ತು ಸಧೃಢತೆ

Leave a comment