ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವ ಸತ್ಯಾಸತ್ಯತೆ

election2

ಮಳೆ ನಿಂತು ಹೋದ ಮೇಲೇ ಮರದ ಎಲೆಗಳಿಂದ ನೀರ ಹನಿಯು ತೊಟ್ಟಿಕ್ಕುವಂತೆ, ಚುನಾವಣೆ ಮುಗಿದ ನಂತರ, ಎಲ್ಲೆಡೆಯೂ ಚುನಾವಣೆಯದ್ದೇ ಚರ್ಚೆ. ಎಲ್ಲೇ ಹೋಗಲಿ/ಬರಲಿ ಏನು ಸ್ವಾಮೀ ಓಟ್ ಮಾಡಿದ್ರಾ? ನಿಮ್ಮ ಕಡೆ ಎಷ್ಟು % ಓಟ್ ಆಯ್ತು? ಅಂತ ಮಾತು ಶುರು ಮಾಡಿ, ಥೂ!! ಈ ಬೆಂಗಳೂರಿಗರ ಹಣೇ ಬರಹಾನೇ ಇಷ್ಟು. ಮತದಾನ ಮಾಡಲು ರಜಾ ಕೊಟ್ರೇ, ಮತದಾನ ಮಾಡದೇ, ಮೋಜು ಮಸ್ತು ಮಾಡಿ ನಂತರ ಅದು ಸರಿ ಇಲ್ಲಾ ಇದು ಸರಿ ಇಲ್ಲಾ ಅಂತಾ ಗೋಣಗಾಡ್ತಾರೆ. ಇವರಿಗೆಲ್ಲಾ ಮತದಾನ ಮಾಡಿದರೇನೇ ಎಲ್ಲಾ ಸರ್ಕಾರಿ ಸೌಲಭ್ಯ ಸಿಗೋದು, ಇನ್ನು ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಹೋಗೋದಕ್ಕೂ ಮತದಾನ ಕಡ್ಡಾಯ ಮಾಡಿದ್ರೇನೇ ಸರಿ ಎಂದು ಮಾತನಾಡಿಕೊಳ್ಳುವಾಗ, ಬಹುತೇಕರಿಗೆ ಅರೇ ಹೌದಲ್ವಾ? ಗ್ರಾಮೀಣ ಪ್ರದೇಶ ಮತ್ತು ಕೆಲವೊಂದು ಸೌಲಭ್ಯ ವಂಚಿತ ಪ್ರದೇಶದ ಅವಿದ್ಯಾವಂತ ಜನರೇ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಾಗ, ಈ ಬುದ್ದಿವಂತರು ಎಂದು ಕರೆಸಿಕೊಳ್ಳುವ ನಗರ ಪ್ರದೇಶ ಅದರಲ್ಲೂ ಬೆಂಗಳೂರಿಗರು ಏಕೆ ಮತದಾನ ಮಾಡೋದಿಲ್ಲಾ? ಎಂದು ಎನ್ನಿಸುವುದು ಸಹಜವಾದರೂ, ಈ ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದೆ ದೊಡ್ಡದಾದ ಷಡ್ಯಂತ್ರವಿದ್ದು ಅದನ್ನು ತಿಳಿದುಕೊಳ್ಳೋಣ ಬನ್ನಿ.

ಚುನಾವಣೆ ಎಂದರೆ ಕಣದಲ್ಲಿರುವ ಆಭ್ಯರ್ಥಿಗಳನ್ನು ಅಳೆದು ತೂಗಿ ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಜನ ಸಾಮಾನ್ಯರು ಮತದಾನ ಮಾಡುವ ಪ್ರಕ್ರಿಯೆ. ಇದರಲ್ಲಿ ಯಾವುದೇ ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಇಲ್ಲದೇ ಕೇವಲ ಹೆಚ್ಚಿನ ಮತಗಳನ್ನು ಗಳಿಸುವವರು ಗೆಲ್ಲುತ್ತಾರೆ ಮತ್ತು ಉಳಿದವರು ಸೋಲುತ್ತಾರೆ. ಹಾಗಾಗಿಯೇ, ಚುನಾವಣೆಗಳು ಘೋಷಣೆ ಆಗುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಅದಕ್ಕಾಗಿಯೇ ಮನೆ ಮನೆಗೆ ಹೋಗುವುದೋ ಇಲ್ಲವೇ ರೋಡ್ ಶೋಗಳನ್ನು ನಡೆಸುವುದೋ ಇಲ್ಲವೇ ಬಾರೀ ಬಹಿರಂಗ ಸಭೆಗಳನ್ನು ನಡೆಸುವ ಪರಿಪಾಠವನ್ನು ಇಟ್ಟುಕೊಂಡಿರುತ್ತಾರೆ. ಹೀಗೆ ರಾಜಕೀಯ ಪ್ರಚಾರವನ್ನು ಮಾಡುವವರನ್ನು ಸೂಕ್ಶ್ಮವಾಗಿ ವಿಚಾರಿಸಿದಾಗ ಅವರಲ್ಲಿ ಬಹುತೇಕರು ಹೇಳುವಂತೆ ನಗರ ಪ್ರದೇಶದ ವಿದ್ಯಾವಂತರಿಗಿಂತಲೂ ಗ್ರಾಮೀಣ ಪ್ರದೇಶ ಮತ್ತು ನಗರಕ್ಕೇ ಹೊಂದಿಕೊಂಡು ಇರುವಂತಹ ಕೊಳಗೇರಿಗಳಲ್ಲಿ ಮತ್ತು ಕೆಲವೊಂದು ಕೋಮಿನವರೇ ಹೆಚ್ಚಾಗಿ ವಾಸಿಸುವಂತಹ ಪ್ರದೇಶಗಳಲ್ಲಿ ಮಾತ್ರವೇ ಅತ್ಯಂತ ಗರಿಷ್ಟ ಪ್ರಮಾಣದ ಮತದಾನ ಆಗುವುದರಿಂದ ಬಹುತೇಕ ರಾಜಕೀಯ ಪಕ್ಷಗಳ ಒಲವು ಇಂತಹ ಪ್ರದೇಶಗಳಿಗೇ ಸೀಮಿತವಾಗಿ ಇರುತ್ತದೆ ಎನ್ನುತ್ತಾರೆ.

election5

ಇನ್ನು ಮತದಾನ ನಡೆದು ಫಲಿತಾಂಶ ಬಂದ ನಂತರ ಸೂಕ್ಷ್ಮವಾಗಿ ಅವಲೋಕಿಸಿದ್ದಲ್ಲಿ, ಈ ರಾಜಕೀಯ ಪಂಡಿತರ ಅಭಿಪ್ರಾಯವು ಬಹುತೇಕ ಸತ್ಯ ಎನ್ನುವುದಕ್ಕೆ ತಾಜಾ ಉದಾಹರಣೆಯೆಂದರೆ ಕರ್ನಾಟಕದ ಲೋಕಸಭೆಯ ಮೊದಲ ಹಂತದ 14 ಕ್ಷೇತ್ರಗಳ ಚುನಾವಣೆ ಎಂದರೂ ತಪ್ಪಾಗದು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪದೇ ಪದೇ ತಮ್ಮ ರಾಜಕೀಯ ಭಾಷಣಗಳಲ್ಲಿ ಹೆಚ್ಚಿನ ಸಂಖ್ಯೆಯನ್ನು ಮತಗಟ್ಟೆಗಳಿಗೆ ಆಗಮಿಸಿ ನಿರ್ಭೀತಿಯಿಂದ ಮತ್ತು ಶಾಂತಿಯಿಂದ ಮತದಾನ ಮಾಡಿ ಎಂದು ಕೋರಿಕೊಂಡರೂ, ಬೆಂಗಳೂರು ನಗರದ ಉತ್ತರ, ದಕ್ಷಿಣ ಮತ್ತು ಕೇಂದ್ರದ ಸರಾಸರಿ ಮತದಾನ 52% ಇದ್ದರೆ, ಇಡೀ ರಾಜ್ಯದ ಸರಾಸರಿ 69% ಆಗಿದೆ. ಸಹಜವಾಗಿ ಗ್ರಾಮೀಣ ಪ್ರದೇಶಗಳಾದ ಕೋಲಾರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಮುಂತಾದ ಕ್ಷೇತ್ರಗಳ ಮತದಾನ ಶೇ70+ ಆಗಿರುವುದು ಪ್ರಜಾಪ್ರಭುತ್ವದ ಹಬ್ಬಕ್ಕೆ ಒಂದು ರೀತಿಯ ಮೆರುಗನ್ನು ತಂದಿದೆ ಎಂದರೂ ತಪ್ಪಾಗದು.

ಹಾಗಾದರೆ, ಬೆಂಗಳೂರು ಸೇರಿದಂತೆ ಉಳಿದ ನಗರ ಪ್ರದೇಶಗಳಲ್ಲಿ ಅತ್ಯಂತ ಗಣನೀಯ ಪ್ರಮಾಣದಲ್ಲಿ ನೀರಸವಾದ ಮತದಾನ ನಡೆಯಲು ಕಾರಣವೇನು? ಎಂದು ಕೇಳಿದರೆ, ಜನಸಾಮಾನ್ಯರೆಲ್ಲರೂ ಹೇಳುವುದೇನೆಂದರೆ, ಸಾಲು ಸಾಲು ರಜೆ ಬಂದಿತೆಂದು ಪ್ರವಾಸಕ್ಕೆ ಹೋಗುವವರೇ ಹೆಚ್ಚಾಗಿರುವ ಕಾರಣ, ಇಲ್ಲಿ ಮತದಾನ ಕಡಿಮೆ ಎಂದೋ, ಇಲ್ಲವೇ, ನಗರ ಪ್ರದೇಶದ ಜನರಿಗೆ ಯಾರು ಬಂದರೆ ನಮಗೇನು? ಎನ್ನುವ ನಿರ್ಲಿಪ್ತತೆಯ ಕಾರಣದಿಂದಾಗಿಯೋ, ಇಲ್ಲವೇ ಮತದಾನಕ್ಕೆ ಈ ಬಿಸಿಲಿನಲ್ಲಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಎನ್ನುವ ಉದಾಸೀನದಿಂದಲೋ ಮತದಾನದ ಪ್ರಮಾಣ ಕಡಿಮೆ ಆಗಿರಬಹುದು ಎನ್ನಲಾಗುತ್ತದೆ. ಹಾಗಾಗಿ ಸರ್ಕಾರ ಮತ್ತು ಚುನಾವಣಾ ಆಯೋಗ ಇದರ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ ಮತದಾನವನ್ನು ಕಡ್ಡಾಯಗೊಳಿಸಲೇ ಬೇಕು ಮತ್ತು ಮತದಾನ ಮಾಡಿದವರಿಗೆ ಮಾತ್ರವೇ ಎಲ್ಲಾ ಸೌಲಭ್ಯ ಎಂದು ಘೋಷಿಸಬೇಕು ಮತದಾನ ಮಾಡದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹ ಪಡಿಸುವವರೂ ಇದ್ದಾರೆ.

election6

ಹಾಗೆ ನೋಡಿದರೆ, ಚುನಾವಣಾ ದಿನ ಮತದಾನ ಬೆಳಿಗ್ಗೆ 7 ಗಂಟೆಗೆ ಆರಂಭವಾಗುತ್ತದೆ ಎಂದರೆ, ಬಹುತೇಕರು, ಬೆಳಿಗ್ಗೆ 6:30-7:00ಕ್ಕೆಲ್ಲಾ ತಮ್ಮ ತಮ್ಮ ಮತಗಟ್ಟೆಗಳಿಗೆ ಬಂದು ಗಂಟೆ ಗಟ್ಟಲೇ ಸರದಿಯ ಸಾಲಿನಲ್ಲಿ ನಿಂತು ಮತದಾನ ಮಾಡಿ ಅವುಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದರ ಮೂಲಕ ಸಂಭ್ರಮಿಸುವುದನ್ನು ಗಮನಿಸಿದಾಗ, ಬೆಂಗಳೂರಿಗರು ಮತ ಹಾಕುವುದಿಲ್ಲಾ ಎನ್ನುವ ಕೆಲವರ ಟೀಕೆಗಳನ್ನು ಒಪ್ಪಲಾಗದು. ಅದೇ ರೀತಿಯಲ್ಲಿ ಪ್ರತಿ ಮತಗಟ್ಟೆಯಲ್ಲೂ ಹನುಮಂತನ ಬಾಲದಂತೆ ಸರದಿ ಸಾಲು ಇದ್ದರೂ ಸಹಾ ಅಂತಿಮವಾಗಿ ಶೇ 50+% ಆಗಿದೆ ಎನ್ನುವುದರ ಹಿಂದೆ ಹಲವಾರು ತಾಂತ್ರಿಕ ಕಾರಣಗಳಿದ್ದು ಅವುಗಳನ್ನು ಸವಿಸ್ತಾರವಾಗಿ ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ನಗರ ಪಟ್ಟಣ ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ವಾಸಿಸುವ ಬಹುತೇಕರು ಹೊರ ಊರಿನರೇ ಆಗಿದ್ದು ಅದರಲ್ಲಿ ಬಹುತೇಕರು ಬಾಡಿಗೆದಾರರೇ ಆಗಿದ್ದು, ಅವರುಗಳ ಹೆಸರು ತಮ್ಮ ಹುಟ್ಟೂರಿನಲ್ಲಿಯೂ ಮತ್ತು ಇಲ್ಲಿಯೂ ಇದ್ದು, ಬಹುತೇಕರು ಚುನಾವಣೆಯ ದಿನ ತಮ್ಮ ಹುಟ್ಟೂರಿನಲ್ಲೇ ತಮ್ಮ ಆಪ್ತರಿಗೇ ಮತದಾನ ಮಾಡಲು ಹೋಗುವುದರಿಂದ ಇಲ್ಲಿನ ಮತದಾನ ಕಡಿಮೆ ಆಗುತ್ತದೆ.

ಅದೇ ರೀತಿಯಲ್ಲಿ ಇನ್ನೂ ಬಾಡಿಗೆ ಮನೆಗಳಲ್ಲಿ ಇರುವವರು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಇಲ್ಲಿನ ಮತದಾನ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಬೇರೊಂದು ಪ್ರದೇಶಕ್ಕೆ ವರ್ಗಾವಣೆ ಮಾಡಿಕೊಳ್ಳುವುದು ಬಹಳ ಕಷ್ಟ ಇಲ್ಲವೇ, ಕೆಲವೊಮ್ಮೆ ಹಾಗೆ ಮಾಡಿಸಿಕೊಳ್ಳುವಾಗ ಹಳೆಯ ಕಡೆಯಲ್ಲಿ ಮತದಾನ ಪಟ್ಟಿಯಲ್ಲಿ ಹೆಸರನ್ನು ತೆಗೆದು ಹಾಕಿ ಹೊಸ ಕಡೆಯಲ್ಲಿ ಸೇರಿಸದೇ ಹೋದಲ್ಲಿ, ಮತದಾನದ ಹಕ್ಕು ತಪ್ಪಿಹೋಗುತ್ತದೆ ಎನ್ನುವ ಕಾರಣದಿಂದ ಬಹುತೇಕರು, ತಮ್ಮ ಹಿಂದಿನ ಕಡೆಯಿಂದ ವರ್ಗಾವಣೆ ಮಾಡಿಸಿಕೊಳ್ಳದೇ, ನೇರವಾಗಿ ಹೊಸದಾಗಿ ಮತಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಿಕೊಳ್ಳುವ ಕಾರಣದಿಂದ ಎರೆಡೆರಡು ಕಡೆ ಅದೇ ಮತದಾರರು ಇರುವುದನ್ನು ಗಮನಿಸಬಹುದಾಗಿದೆ. ಹಾಗಾಗಿ ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲದ್ದಕ್ಕೂ ಆಧಾರ್ ಅನ್ನು ಆದಾರವಾಗಿಟ್ಟು ಕೊಂಡು ದೇಶಾದ್ಯಂತ ಮತಪಟ್ಟಿಯನ್ನು ಪರಿಷ್ಕರಿಸಿದಲ್ಲಿ‌ ಮಾತ್ರವೇ ಈ ರೀತಿಯಾಗಿ ಎರೆಡೆರಡು ಕಡೆಯಲ್ಲಿ ಇರುವವರನ್ನು ಪತ್ತೆ ಹಚ್ಚಿದಲ್ಲಿ ಕಡೆಯ ಪಕ್ಷ8-10% ನಕಲಿ/ಹೆಚ್ಚುವರಿ ಮತದಾರರನ್ನು ನಿರ್ಭಂಧಿಸಬಹುದಾಗಿದೆ.

ಇನ್ನು ಬಹಳಷ್ಟು ಕಡೆ ಮೃತರಾದವರ ಹೆಸರು ಸಹಾ ಹಾಗೆಯೇ ಮತಪಟ್ಟಿಯಲ್ಲಿ ಉಳಿದುಕೊಂಡಿರುವ ಕಾರಣ ಮತದಾನ ಕಡಿಮೆ ಆಗುವ ಸಾಧ್ಯತೆ ಇದ್ದು, ಇದಕ್ಕೆಲ್ಲವೂ ಪರಿಹಾರ ಎನ್ನುವಂತೆ ಸ್ಥಳೀಯ ನಗರ ಪಾಲಿಕೆ ಇಲ್ಲವೇ ಚುನಾವಣಾ ಆಯೋಗವು ಕಾಲ ಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದೇ ಪರಿಹಾರವಾಗಿದೆ. ಇನ್ನು ಮೃತರಾದವರು ಸ್ಥಳೀಯ ಪಾಲಿಕೆ ಇಲ್ಲವೇ ಪಂಚಾಯಿತಿಗಳಿಂದ ಮರಣ ಪ್ರಮಾಣ ಪತ್ರವನ್ನು ಪಡೆಯುವಂತಹ ಸಂಧರ್ಭದಲ್ಲಿಯೇ ಮರಣ ಪತ್ರ ನೀಡುವುದರ ಜೊತೆಯ ಮತದಾನ ಪಟ್ಟಿ ಮತ್ತು ಆಧಾರ್ ನಿಂದ ಹೆಸರುಗಳನ್ನು ತೆಗೆಯುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಂತಾಗುತ್ತದೆ.

ಹಾಗಾಗಿ ಹೊಸದಾಗಿ 18 ವರ್ಷ ಮೇಲ್ಪಟ್ಟವರನ್ನು ಹೇಗೆ ಹೊಸ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಾರೆಯೋ, ಅದೇ ರೀತಿಯಲ್ಲಿ ಮೃತರಾದವರನ್ನು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋದವರನ್ನು ಮತ್ತು ಶಾಶ್ವತವಾಗಿ ಬೆಂಗಳೂರನ್ನು ಬಿಟ್ಟು ಹೋದವರ ಹೆಸರುಗಳನ್ನು ತೆಗೆದು ಹಾಕುವ ಪದ್ದತಿಯನ್ನು ರೂಢಿಗೆ ತಂದಲ್ಲಿ ಕನಿಷ್ಟ ಪಕ್ಷ 10-15% ಮತದ ಪಟ್ಟಿಯು ಪರಿಷ್ಕೃತವಾಗುತ್ತದೆ.

ಸಾಮಾನ್ಯವಾಗಿ ನಗರಸಭೆ ಇಲ್ಲವೇ ಪಂಚಾಯಿತಿ ಚುನಾವಣೆಗೆ ಇನ್ನೇನು 4-5 ತಿಂಗಳುಗಳು ಇದೇ ಎನ್ನುವಾಗ ಬಹುತೇಕ ರಾಜಕೀಯ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷೆಯನ್ನು ಹೊಂದಿರುವ ಅಭ್ಯರ್ಥಿಗಳು ಹೊರ ಊರಿನವರನ್ನು ಹೆಚ್ಚು ಹೆಚ್ಚು ಜನರನ್ನು ತಮ್ಮ ಕ್ಷೇತ್ರದ ಮತ ಪಟ್ಟಿಗೆ ಸೇರಿಸಿಕೊಳ್ಳುವ ಕೆಟ್ಟ ಪದ್ದತಿ ರೂಢಿಯಲ್ಲಿರುವುದೂ ಸಹಾ ಆಘಾತಕಾರಿಯಾಗಿದ್ದು, ಈ ಮೊದಲೇ ಹೇಳಿದಂತೆ ಹೊಸಾ ಮತದಾರರನ್ನು ಸೇರಿಸಿಕೊಳ್ಳುವಾಗ ಆಧಾರ್ ಸಂಖ್ಯೆಯನ್ನೇ ಆಧಾರವಾಗಿಟ್ಟು ಕೊಂಡು ಸೇರಿಸಿದಲ್ಲಿ ಈ ರೀತಿಯ ಹೆಚ್ಚುವರಿ ಮತದಾರರನ್ನು ತಪ್ಪಿಸಬಹುದಾಗಿದೆ. ಇದಕ್ಕೆ ಹೈದರಾಬಾದಿನ ಜ್ವಲಂತ ಉದಾಹರಣೆ ಎಂದರೆ, ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಅಸಾದುದ್ದೀನ್ ಓವೈಸಿಯ ವಿರುದ್ಧ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿರುವ ಶ್ರೀಮತಿ ಮಾಧವಿ ಲತಾ ಅವರ ಪರಿಶ್ರಮದಿಂದಾಗಿಯೇ ಚುನಾವಣೆಗೂ ಮುನ್ನಾ ಹೈದರಾಬಾದ್ ಜಿಲ್ಲೆಯ ಸುಮಾರು 15 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮತದಾರರ ಪಟ್ಟಿಯಿಂದ ಮೃತಪಟ್ಟ ಇಲ್ಲವೇ ಸ್ಥಳಾಂತರಗೊಂಡ ಮತ್ತು ನಕಲಿ ಸೇರಿದಂತೆ 5.41 ಲಕ್ಷ ಮತದಾರರನ್ನು ಚುನಾವಣಾ ಆಯೋಗ ಅಳಿಸಿಹಾಕಿರುವುದು ಶ್ಲಾಘನೀಯವಾಗಿದ್ದು, ಇದೇ ಕೆಲಸವನ್ನು ಉಳಿದ ಅಭ್ಯರ್ಥಿಗಳು ಮತ್ತು ಸ್ಥಳೀಯ ಪಾಲಿಕೆಗಳು ನಡೆಸುವುದು ಅನುಕರಣೀಯವಾಗಿದೆ.

ಇಷ್ಟೆಲ್ಲಾ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡು ಮತಪಟ್ಟಿಯನ್ನು ಪರಿಷ್ಕರಣೆ ಮಾಡಿಯೂ, ಮತ ಪಟ್ಟಿಯಲ್ಲಿ ಹೆಸರು ಇದ್ದು ಸಹಾ, ಮತಗಟ್ಟೆಗೆ ಬಾರದೇ ಇರುವ ಸೋಮಾರಿಗಳಿಗೆ ದಂಡಂ ದಶಗುಣಂ ಎನ್ನುವಂತೆ ಅವರ ಎಲ್ಲಾ ಸೌಲಭ್ಯಗಳಿಗೆ ಕತ್ತರಿ ಹಾಕಿದರೆ ಖಂಡಿತವಾಗಿಯೂ 90-95% ರಷ್ಟು ಮತದಾನ ಮಾಡಿಸಬಹುದಾಗಿದೆ.

election4

ಹಿಂದಿನ ಕಾಲದಲ್ಲಿ ತಂತ್ರಜ್ಞಾನ ಇಲ್ಲದಿದ್ದಾಗ ಮತಪಟ್ಟಿಯಲ್ಲಿ ಮತದಾನ ಮಾಡಿಸಲಾಗುತ್ತಿತ್ತು. ನಂತರ ತಂತ್ರಜ್ಞಾನ ಬದಲಾದಂತೆ ಹೇಗೆ ಮತಪಟ್ಟಿಯಿಂದ EVM ಮತಯಂತ್ರಕ್ಕೆ ಬದಲಾಯಿತೋ ಹಾಗೆಯೇ, ಇಂದಿನ ಕಾಲದಲ್ಲಿ ಚಳಿ ಮಳೆ, ಗಾಳಿ, ಬಿಸಿಲುಗಳನ್ನು ಎದುರಿಸಿ ಮತಗಟ್ಟೆಗೆ ಬಂದು ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡುವ ಬದಲು, ಡಿಜಿಟಲ್ ಇಂಡಿಯ ಅಧಾರವಾಗಿಟ್ಟುಕೊಂಡು ಇಂದಿನ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಬಳಸಿಕೊಂಡು ಮತದಾನ ಮಾಡುವಂತಹ ಸೌಲಭ್ಯವನ್ನೂ ಸಹಾ ಸರ್ಕಾರ ಯೋಚಿಸಿದಲ್ಲಿ, ಏಕಕಾಲಕ್ಕೆ ಪ್ರಪಂಚದ ಮೂಲೆ ಮೂಲೆಯಿಂದಲೂ ಹೆಚ್ಚಿನ ಖರ್ಚಿಲ್ಲದೇ ಜನರ ಮತವನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿದ್ದು, ಈ ರೀತಿಯ ತಂತ್ರಜ್ಞಾನವನ್ನು ಅಳವಡಿಸಲು ಅಗತ್ಯವಾದ ಇಚ್ಛಾಶಕ್ತಿಯು ನಮ್ಮ ದೇಶದ ರಾಜಕಾರಣಿಗಳಿಗೆ ಬರಬೇಕಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment