ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆದ ಚುನಾವಣೆಯ ಫಲಿತಾಂಶದ ಬಗ್ಗೆ ಕೇವಲ ಭಾರತವಷ್ಟೇ ಅಲ್ಲದೇ ಇಡೀ ಪ್ರಪಂಚದ ವಿವಿಧ ರಾಷ್ಟ್ರಗಳು ಎದುರು ನೋಡುತ್ತಿತ್ತು. ಭಾರತದ INDI ಒಕ್ಕೂಟವಷ್ಟೇ ಅಲ್ಲದೇ ನೆರೆ ರಾಷ್ಟ್ರಗಳಾದ ಚೀನಾ, ಪಾಕೀಸ್ಥಾನವಲ್ಲದೇ, ಯೂರೋಪಿನ ಹತ್ತು ಹಲವಾರು ರಾಷ್ಟ್ರಗಳಲ್ಲದೇ ಅಮೇರಿಕಾ ಮತ್ತು ಅದರಲ್ಲೂ ಜಾರ್ಚ್ ಸೋರೆಸ್ ನಂತಹ ಸಮಾಜಘಾತಕರು ಹೇಗಾದರೂ ಮಾಡಿ ಈ ಬಾರಿ ಮೋದಿಯವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು ಎಂದು ಹರ ಸಾಹಸ ಪಟ್ಟಿದ್ದು ಈಗ ಗುಟ್ಟಾಗೇನೂ ಉಳಿದಿಲ್ಲ.
ಚುನಾವಣೆ ನಡೆದ ನಂತರ ಬಹುತೇಕ ಎಕ್ಸಿಟ್ ಪೋಲ್ ಗಳು ಮತ್ತೊಮ್ಮೆ ಬಿಜೆಪಿಯು ಕಳೆದ ಬಾರಿ ಗಳಿಸಿದ್ದಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗಳಿಸುತ್ತದೆ ಎಂದು ತಿಳಿಸಿದ ಮೇಲಂತೂ ಈ ಬಾರಿಯೂ ಚುನಾವಣೆಯಲ್ಲಿ ಬಿಜೆಪಿ ಇವಿಎಂ ಹ್ಯಾಕ್ ಮಾಡುವ ಮೂಲಕ ಚುನಾವಣೆಯನ್ನು ಗೆದ್ದಿದೆ ಎಂದು ಹೇಳಲು ಬಹುತೇಕ ವಿರೋಧ ಪಕ್ಷಗಳು ಸಿದ್ಧವಾಗಿದ್ದವು. ಭಾರತದ ಮತದಾರರಿಗೆ ದೇಶದ ಅಭಿವೃದ್ಧಿಗಿಂತಲೂ ವಿರೋಧ ಪಕ್ಷಗಳು ಒಡ್ಡಿದ ಬಗೆ ಬಗೆಯ ಬಿಟ್ಟಿ ಭಾಗ್ಯಗಳ ಆಮಿಷಕ್ಕೆ ಮನ್ನಣೆ ಹಾಕಿದ ಪರಿಣಾಮ, ಬಿಜೆಪಿ ಹೇಳಿಕೊಂಡಿದ್ದ 400 ಬಿಡಿ, ಬಹುಮತಗಳಿಸಲು ಅವಶ್ಯಕವಾಗಿದ್ದ 272 ಸ್ಥಾನಗಳನ್ನೂ ಸಹಾ ಗಳಿಸಲು ವಿಫಲವಾಗಿ 241 ಸ್ಥಾನಗಳನ್ನು ಗಳಿಸಿದರೆ, ಚುನಾವಣಾ ಪೂರ್ವದಲ್ಲೇ ಮಾಡಿಕೊಂಡಿದ್ದ ಎನ್‌ಡಿಎ ಒಕ್ಕೂಟ 291 ಸ್ಥಾನಗಳನ್ನು ಗಳಿಸುವ ಮೂಲಕ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಏರುವುದು ನಿಶ್ಚಿತ ಎಂದಾದಾಗ ಮೋದಿ ಪರಿವಾರದವರು ನಿಟ್ಟಿಸಿರು ಬಿಟ್ಟವಷ್ಟರಲ್ಲೇ, ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದ ಕಾಂಗ್ರೇಸ್ ಪಕ್ಷ ಟಿಡಿಪಿ ಮತ್ತು ಜೆಡಿಯು ಆವರಿಗೆ ನಾನಾ ಆಮಿಷಗಳನ್ನು ತೋರಿಸಿ ತಮ್ಮತ್ತ ಸೆಳೆದುಕೊಳ್ಳಲು ಪಟ್ಟ ಪ್ರಯತ್ನವೆಲ್ಲವೂ ವಿಫಲವಾಗಿ ಮೋದಿಯವರು ಜೂನ್ 9ರಂದು ಮೂರನೇ ಬಾರಿಗೆ ಪ್ರಮಾಣವಚನ ತೆಗೆದುಕೊಂಡು ಎಲ್ಲರ ನಿರೀಕ್ಷೆಯೂ ತಲೆಕೆಳಗಾಗುವಂತೆ 10ನೇ ತಾರೀಖಿನಂದೇ ಸುಭಧ್ರ ಮಂತ್ರಿಮಂಡಲವನ್ನು ರಚಿಸಿ, 2024ರ ಜೂನ್ 13-15 ರಂದು ಇಟಲಿಯ ಅಪುಲಿಯಾದಲ್ಲಿನ ಬೊರ್ಗೊ ಎಗ್ನಾಜಿಯಾ (ಫಾಸಾನೊ) ನಲ್ಲಿ ನಡೆದ G7 ಶೃಂಗಸಭೆಯಲ್ಲಿ ಅದ್ದೂರಿ ಸ್ವಾಗತದೊಂದಿಗೆ ಭಾಗವಹಿಸಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಹೊರಹೊಮ್ಮಿದ್ದು ಈಗ ಇತಿಹಾಸ.
ಧ್ರುವ್ ರಾಠಿ, ಜಿಜ್ಞೇಶ್, ತುಕ್ಡೇ ತುಕ್ಡೇ ಗ್ಯಾಂಗ್ ಕನ್ಹಯ್ಯನಿಂದ ಹಿಡಿದು ಕೃತಕ ಬುದ್ಧಿಮತ್ತೆ(ಎಐ) ಎಲ್ಲವನ್ನೂ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ಮಾಡಿದರೂ 100ನ್ನೂ ದಾಟಲಾಗದ ಕಾಂಗ್ರೇಸ್, ಅವರ ಇಡೀ INDI ಒಕ್ಕೂಟವೆಲ್ಲವೂ ಸೇರಿ 231 ಕ್ಕೇ ಸೀಮಿತಗೊಂಡು ಬಿಜೆಪಿ ಏಕಾಂಗಿಯಾಗಿ ಗಳಿಸಿದಷ್ಟು ಸ್ಥಾನವನ್ನೂ ಗಳಿಸದೇ ಹೋದರೂ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲಾ ಎಂದು ಮೆರೆಯುತ್ತಿರುವುದಲ್ಲದೇ, ಇತ್ತೀಚೆಗಷ್ಟೆ ರಚನೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು ಎಂದು ಕಾಂಗ್ರೆಸ್ ಅರಳು ಮರಳು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಭವಿಷ್ಯ ನುಡಿಯುವ ಮೂಲಕ ಮತ್ತೊಮ್ಮೆ ತಮ್ಮ ಗುಲಾಮಿ ತನವನ್ನು ಮೆರೆದಿರುವುದು ನಿಜಕ್ಕೂ ಈ ದೇಶದ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಮಾನ ಎಂದರೂ ತಪ್ಪಾಗದು.
ಬಿಜೆಪಿಯವರು ೪೦೦ ಸ್ಥಾನಗಳಲ್ಲಿ ಗಳಿಸಿದರೆ, ಈ ದೇಶದ ಸಂವಿಧಾನ ಬದಲಿ ಬಿಡುತ್ತಾರೆ ಎಂದು ಈ ದೇಶದ ಮತದಾರರನ್ನು ಹೆದರಿಸಿದ್ದ ಕಾಂಗ್ರೇಸ್, ಈಗ ಅದೇ ಸಂವಿಧಾನದ ಪ್ರಕಾರವಾಗಿಯೇ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಲ್ಲದೇ ಅದರ ಚುನಾವಣಾ ಪೂರ್ವ ಎನ್.ಡಿ.ಎ ಒಕ್ಕೂಟ ಸರಳ ಬಹುಮತ ಗಳಿಸಿದ ಆಧಾರವಾಗಿಯೇ ಸಹಜವಾಗಿ ಅಧಿಕಾರ ಗಳಿದ ಮೇಲೆ ಅದು ಹೇಗೆ ಎನ್‌ಡಿಎ ಅಲ್ಪಸಂಖ್ಯಾತ ಸರ್ಕಾರ ತಪ್ಪಾಗಿ ರಚನೆಯಾಗಿದೆ ಎಂದು ಕಾಂಗ್ರೇಸ್ ಅಧ್ಯಕ್ಷರು ಮತ್ತು ಜೈರಾಂ ರಮೇಶ್ ಪದೇ ಪದೇ ಹೋದ ಬಂದ ಕಡೆಯಲೆಲ್ಲಾ ಯಾವ ರೀತಿಯಲ್ಲಿ ಹೇಳುತ್ತಾರೆ ಭಾರತೀಯರಿಗೆ ತಿಳಿಸಲೇಬೇಕಾಗಿದೆ.
ಬದಲಾವಣೆ ಎಂಬುದು ಜಗದ ನಿಯಮ. ಕಳೆದ ಎರಡು ಬಾರಿ ಬಿಜೆಪಿಗೆ ಪೂರ್ಣಬಹುತ ಇದ್ದರೂ ಸಹಾ ಅವರು ತಮ್ಮ ಮಿತ್ರಪಕ್ಷಗಳ ಕೂಡಿಯೇ ಸರ್ಕಾರ ನಡೆಸಿದ್ದರು ಮತ್ತು ಈ ಬಾರಿಯೂ ಅದನ್ನೇ ಮುಂದುವರೆಸುತ್ತಿದ್ದಾರ ಎಂದ ಮೇಲೇ ಈ ಖಿಚಡಿ ಸರ್ಕಾರ ಉಳಿಯುವುದಿಲ್ಲ (ಉಳಿಸುವುದಿಲ್ಲ) ಎನ್ನುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಸರ್ಕಾರ ಬರುವ ಮೊದಲು ಇದ್ದ ಕಾಂಗ್ರೇಸ್ ನೇತೃತ್ವದ ಯುಪಿಎ-1&2 ಎರಡೂ ಬಾರಿಯೂ ಸಹಾ ಈ ಬಾರಿ ಬಿಜೆಪಿ ಗಳಿಸಿದಷ್ಟೂ ಸ್ಥಾನಗಳನ್ನು ಗಳಿಸದೇ 20ಕ್ಕೂ ಹೆಚ್ಚಿನ ಪಕ್ಷಗಳ ಖಿಚಡಿ ಸರ್ಕಾರವೇ ಆಗಿತ್ತು ಎಂಬುದನ್ನು ನೆನಪಿಸುವುದು ಅತ್ಯಗತ್ಯವಾಗಿದೆ. ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿದರೆ ತಿಂಗಳಿಗೆ ಖಟಾ ಖಟ್, ಖಟಾ ಖಟ್ ಎಂದು Rs, 8500/- ಕೊಡುತ್ತೇವೆ ಎಂದು ಖರ್ಗೆ ಮತ್ತು ರಾಹುಲ್ ಸಹಿ ಮಾಡಿರುವ ಬಾಂಡ್ ಗಳನ್ನು ಎಲ್ಲಾ ಕಡೆ ಹಂಚಿ, ಈಗ ಚುನಾವಣೆ ಮುಗಿಯುತ್ತಿದ್ದಂತೆಯೇ ದೇಶಾದ್ಯಂತ ಇರುವ ಕಾಂಗ್ರೇಸ್ ಕಛೇರಿಯ ಮುಂದೆ ಸಾಲು ಸಾಲಾಗಿ ಹೆಂಗಸರು ನಿಂತು, ಕಾಸು ಸಿಗುವುದಿಲ್ಲ ಎಂಬುದನ್ನು ಅರಿತು ಹಿಡಿ ಶಾಪ ಹಾಕುತ್ತಿರುವುದನ್ನು ಮರೆ ಮಾಚಲು ಈ ರೀತಿಯಾಗಿ ಚುನಾಯಿತ ಸರ್ಕಾರವನ್ನು ಬೀಳಿಸುವ ಮಾತುಗಳನ್ನು ಆಡುವ ಮೂಲಕ ದೇಶದಲ್ಲಿ ಅರಾಜಕತೆ ಮತ್ತು ಅವಿಶ್ವಾಸದ ಭಯದ ವಾತಾವರಣವನ್ನು ಸೃಷ್ಟಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.
ಈ ಬಾರಿಯ ಚುನಾವಣೆಯಲ್ಲಿ INDI ಮತ್ತು NDA ಒಕ್ಕೂಟ ಬಹುತೇಕ ಸರಿ ಸಮಾನವಾದ ಸ್ಥಾನಗಳನ್ನು ಪಡೆದ ಕಾರಣ ಈಗಾಗಲೇ ತಿಳಿಸಿದಂತೆ EVM ಮಷೀನ್‌ಗಳ ಬಗ್ಗೆ ಹೆಚ್ಚಿನ ಆರೋಪಗಳು ಭಾರತದ ರಾಜಕಾರಣಿಗಳಿಂದ ಕೇಳಿ ಬರಲಿಲ್ಲವಾದರೂ, ಹೋದ್ಯಾ ಪಿಚಾಚಿ ಅಂದ್ರೇ ಬಂದೇ ಗವಾಕ್ಷಿಲೀ ಎನ್ನುವ ಹಾಗೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಪೋರ್ಟೋ ರಿಕೋದಲ್ಲಿ ನಡೆದ ಚುನಾವಣಾ ಅಕ್ರಮ ಪ್ರಸ್ತಾಪಿಸುತ್ತಾ, ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುವ ಕಾರಣ, ಭಾರತದ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರ ಬಳಕೆ ಮಾಡದಂತೆ ಎಲಾನ್ ಮಸ್ಕ್ ಸಲಹೆ ನೀಡಿರುವುದು ಅಚ್ಚರಿಯನ್ನು ಮೂಡಿಸಿದೆ.
ಈ ಮೂಲಕ ಚುನಾವಣೆಯಲ್ಲಿ BJP EVM ಹ್ಯಾಕ್ ಮಾಡುವ ಮೂಲಕ ಅಧಿಕಾರಕ್ಕೆ ಬರುತ್ತಿದೆ ಎಂದು ಕಾಂಗ್ರೆಸ್ ನವರು ಮಾಡುತ್ತಿದ್ದ ಗಂಭೀರ ಆರೋಪಕ್ಕೆ ಭಾರತದಲ್ಲಿ ಇವಿಎಂ ಕುರಿತಂತೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದ ವೇಳೆಯಲ್ಲಿ ಎಲಾನ್ ಮಸ್ಕ್ ಅವರ ಈ ಹೇಳಿಕೆ ಭಾರತದ ಚುನಾವಣಾ ವ್ಯವಸ್ಥೆ ಬಗ್ಗೆ ಮರು ಚರ್ಚೆ ಹುಟ್ಟುಹಾಕುವಂತೆ ಮಾಡಿದೆ. ಮಸ್ಕ್ ಅವರು ಇವಿಎಂ ವಿರುದ್ಧ ಧನಿ ಎತ್ತುತ್ತಿದ್ದಂತೆಯೇ, ಈ ಬಾರಿಯ ಚುನಾವಣಾ ಸೋಲಿಗೆ ಕಾರಣ ಹುಡುಕುತ್ತಿದ್ದ ಕಾಂಗ್ರೇಸ್ಸಿನ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರೂ ಸಹಾ ಧ್ವನಿ ಗೂಡಿಸಿರುವುದು ಮತ್ತಷ್ಟು ಅಸಹ್ಯಕರವಾಗಿದೆ.
ಎಲಾನ್ ಮಸ್ಕ್ ಅವರು ತಮ್ಮ ಮಾತನ್ನು ಮುಂದುವರೆಸಿ ನಾವು ವಿದ್ಯುನ್ಮಾನ ಮತ ಯಂತ್ರಗಳನ್ನು ನಿರ್ಮೂಲನೆ ಮಾಡಬೇಕಿದೆ. ಮಾನವರು ಅಥವಾ ಕೃತಕ ಬುದ್ದಿಮತ್ತೆ ತಂತ್ರಜ್ಞಾನವು ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದಲ್ಲಿ ಈ ಸಾಧ್ಯತೆ ಇದ್ದರೂ ಕೂಡಾ, ಚುನಾವಣಾ ಫಲಿತಾಂಶದಲ್ಲಿ ಅದು ದೊಡ್ಡ ಪರಿಣಾಮ ಬೀರಬಲ್ಲದು ಎಂಬ ಹೇಳಿಕೆಗೆ ಭಾರತದಲ್ಲಿ ಬಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಎಲಾನ್ ಮಸ್ಕ್ ಅವರ ಸಲಹೆಗೆ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದು, ಮಸ್ಕ್ ವಾದದಲ್ಲಿ ಸತ್ಯಾಂಶ ಇಲ್ಲದಿರುವ ಕಾರಣ ಅವರ ಹೇಳಿಕೆಯನ್ನು ಒಪ್ಪಿಕೊಳ್ಳಲಾಗದು ಎಂದಿದ್ದಾರೆ
ಭಾರತದಲ್ಲಿ ಇವಿಎಂಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಅವುಗಳು ಸುರಕ್ಷಿತವಾಗಿದೆ ಸುಮಾರು ಮೂರು ದಶಕಗಳ ಕಾಲ ಭಾರತದ ವಿವಿಧ ಹಂತದ ಚುನಾವಣೆಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದೆ. ಭಾರತೀಯರ ಆವಿಷ್ಕಾರದ ಈ ಇವಿಎಂಗೆ ಬ್ಲೂ ಟೂತ್, ವೈಫೈ, ಇಂಟರ್‌ನೆಟ್ ರೀತಿಯಾಗಿ ಯಾವುದೇ ರೀತಿಯಲ್ಲಿ ಬಾಹ್ಯವಾಗಿ ಸಂಪರ್ಕಿಸಲು ಸಾಧ್ಯವಿಲ್ಲಾದ ಕಾರಣ ನಿರ್ಮಾಣ ಹಂತದ ಪ್ರೋಗ್ರಾಮಿಂಗ್ ನಿಯಂತ್ರಣಗಳನ್ನು ಯಾವುದೇ ರೀತಿಯಲ್ಲಿ ಬದಲಿಸಲು ಸಾಧ್ಯವೇ ಇಲ್ಲ. ಈ ಹಿಂದೆ ಭಾರತದ ವಿರೋಧ ಪಕ್ಷಗಳು ಮಾಡಿದ್ದ ಇದೇ ರೀತಿಯ ಆರೋಪವನ್ನು ಸಾಭೀತು ಪಡಿಸಲು ಚುನಾವಣಾ ಅಯೋಗವು ಹತ್ತು ಹಲವು ಬಾರೀ ವಿರೋಧ ಪಕ್ಷದವರನ್ನು ಬಹಿರಂಗವಾಗಿಯೇ ಕರೆದರೂ, ಯಾರೂ ಸಹಾ ಅದನ್ನು ಒಪ್ಪಿಕೊಳ್ಳಲು ಇಚ್ಚಿಸದೇ ಸುಖಾಸುಮ್ಮನೇ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿರುವುದಲ್ಲದೇ, ಭಾರತದ ಇವಿಎಂ ಯಂತ್ರಗಳು ಅತ್ಯಂತ ಸುರಕ್ಷಿತವಾಗಿ ನಿರ್ಮಿಸಲ್ಪಟ್ಟಿದ್ದು, ಅವಶ್ಯವಿದ್ದರೆ, ಎಲಾನ್ ಮಸ್ಕ್‌ಗೆ ಇದರ ಕುರಿತಾಗಿ ಹೆಚ್ಚಿನ ಮಾಹಿತಿ ಇಲ್ಲವೇ ತರಭೇತಿಯನ್ನೂ ಸಹಾ ನೀಡಲು ನಾವು ಸಿದ್ಧರಿದ್ದೇವೆ ಎಂದು ಎಲಾನ್ ಮಸ್ಕ್ ಮಾಡಿರುವ ಟ್ವೀಟ್ಗೆ ಭರ್ಜರಿಯಾದ ಉತ್ತರವನ್ನು ನೀಡಿದ್ದಾರೆ.
ಯಥಾಪ್ರಕಾರ ಮಸ್ಕ್ ಅವರ ಟ್ವೀಟನ್ನು ರೀಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಬಗ್ಗೆ ಗಂಭೀರವಾದ ಕಳವಳಗಳು ಉಂಟಾಗುತ್ತಿದೆ ಎಂದು ಮಸ್ಕ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸುವ ಮೂಲಕ ರಾಜಕೀಯದಲ್ಲಿ ತಾನೆಷ್ಟು ಅಪ್ರಬುದ್ಧ (ಪಪ್ಪೂ) ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರಾತು ಮಾಡಿಕೊಳ್ಳುವ ಮೂಲಕ ಹಾಸ್ಯಾಸ್ಪದವಾಗಿ ಕಾಣಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿಯವರ ಇಂಡೀ ಒಕ್ಕೂಟದ ಸದಸ್ಯರಾದ ಅಖಿಲೇಶ್ ಯಾದವ್ ಕೂಡಾ ಎಲನ್ ಮಸ್ಕ್ ಟ್ವೀಟ್ಗೆ ಬೆಂಬಲ ಸೂಚಿದಿರುವುದಲ್ಲದೇ, ಭಾರತದಲ್ಲಿ ಇವಿಎಂಗಳು ಕಪ್ಪು ಪೆಟ್ಟಿಗೆಯಾಗಿದೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶವಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಬಗ್ಗೆ ಗಂಭೀರವಾದ ಕಳವಳಗಳು ಉಂಟಾಗುತ್ತಿವೆ. ಸಂಸ್ಥೆಗಳು ಹೊಣೆಗಾರಿಕೆಯ ಕೊರತೆಯಿಂದ ಪ್ರಜಾಪ್ರಭುತ್ವವು ನೆಪವಾಗಿ ಪರಿಣಮಿಸುತ್ತದೆ ಎಂದಿದ್ದಾರೆ. ಇಷ್ಟೆಲ್ಲಾ ವಿರೋಧಗಳ ನಡುವೆಯೂ ಇವಿಎಂ ಪರ ಬೆಂಬಲಕ್ಕೆ ಬಿಜೆಪಿಯವರು ನಿಲ್ಲಲು ಕಾರಣವೇನು? ಎಂಬ ಅಪ್ರಬುದ್ಧ ಪ್ರಶ್ನೆಯನ್ನು ಎತ್ತುವ ಮೂಲಕ ರಾಹುಲ್ ಮತ್ತು ಅಖಿಲೇಶ್ ಅವರಿಬ್ಬರೂ ಬಲು ಅಪರೂಪ ನಮ್ ಜೋಡಿ ಎಂತಹ ಕುಚೋದ್ಯಕ್ಕೂ ನಾವ್ ರೆಡಿ ಎಂದು ಹೇಳಿಕೊಂಡಿರುವಂತಿದೆ.
ತಂತ್ರಜ್ಞಾನ ಎಂದರೆ ಸಮಸ್ಯೆಗಳನ್ನು ಪರಿಹರಿಸುವುದು. ಅದು ಸಮಸ್ಯೆಗಳಿಗೆ ಕಾರಣವಾದರೆ ಅದರ ಬಳಕೆಯನ್ನು ನಿಲ್ಲಿಸಬೇಕು. ಇಂದು ಜಗತ್ತಿನ ಹಲವು ಚುನಾವಣೆಗಳಲ್ಲಿ ಇವಿಎಂ ಟ್ಯಾಂಪರಿಂಗ್ ಆಗುವ ಆತಂಕ ವ್ಯಕ್ತವಾಗುತ್ತಿದ್ದು, ಇವಿಎಂ ಟ್ಯಾಂಪರಿಂಗ್ ಅಪಾಯದ ಬಗ್ಗೆ ವಿಶ್ವದ ಖ್ಯಾತ ತಂತ್ರಜ್ಞಾನ ತಜ್ಞರು ಬಹಿರಂಗವಾಗಿಯೇ ಬರೆಯುತ್ತಿರುವಾಗ ಇವಿಎಂ ಬಳಸಲೇಬೇಕೆಂಬ ಆಗ್ರಹಕ್ಕೆ ಕಾರಣವೇನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಮತ್ತು ಭವಿಷ್ಯದ ಎಲ್ಲಾ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಬಳಸಿ ನಡೆಸಬೇಕೆಂಬ ನಮ್ಮ ಬೇಡಿಕೆಯನ್ನು ನಾವು ಪುನರುಚ್ಚರಿಸುತ್ತೇವೆ ಎನ್ನುವ ವಿರೋಧ ಪಕ್ಷಗಳು ನಿಜವಾಗಿಯೂ ಇವಿಎಂಗಳನ್ನು ತಿರುಚಲು ಹೇಗೆ ಸಾಧ್ಯ ಮತ್ತು ಬಿಜೆಪಿ ಅದನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದೆ ಎಂಬುದನ್ನು ಸಾಕ್ಷಿಸಮೇತ ನಿರೂಪಿಸದೇ ಹೋದಲ್ಲಿ, ತೋಳ ಬಂತು ತೋಳ ಎನ್ನುವಂತೆ ಅವರ ಆರೋಪಗಳೆಲ್ಲವೂ ಕೇವಲ ಗಾಳಿಯಲ್ಲಿ ಗುಂಡು ಹೊಡೆದು ಪಲಾಯನ ಎನಿಸಿಕೊಂಡು ಜನರು ಅವರ ಮಾತುಗಳನ್ನು ನಂಬದ ಪರಿಸ್ಥಿತಿಗೆ ತಾವೇ ಕಾರಣೀಭೂತರಾಗುವುದಂತೂ ನಿಶ್ಚಿತ.
ಇವಿಎಂ ಹ್ಯಾಕಿಂಗ್ ಆಗುತ್ತದೆ ಎನ್ನುವುದಾದರೇ ಅದು ಪ್ರಜಾಪ್ರಭುತ್ವಕ್ಕೇ ಮಾರಕ ಎನ್ನೋದು ಸತ್ಯವಾದರೂ, ಪೇಪರ್ ಮತ ಪೆಟ್ಟಿಗೆ ಇರುವಾಗಲೂ ಸಹಾ ಅನೇಕ ರಾಜಕೀಯ ಪಕ್ಷಗಳು ಮತ್ತು ಕೆಲ ಪಟ್ಟ ಭಧ್ರ ಹಿತಾಸಕ್ತಿಗಳು ಮತ ಪೆಟ್ಟಿಗೆಗಳನ್ನು ಅದಲು ಬದಲು ಮಾಡುವ ಮೂಲಕ ಫಲಿತಾಂಶವನ್ನು ತಮ್ಮ ಪರವಾಗಿ ಮಾಡಿಕೊಂಡ ನೂರಾರು ಪ್ರಕರಣಗಳೂ ಸಹಾ ಈ ಹಿಂದೆ ಅನೇಕ ಬಾರಿ ನಡೆದಿದೆಯಲ್ಲದೇ, ಮತಪತ್ರಗಳ ಮುದ್ರಣ ಕೆಲಸವು ಬಹಳ ದುಬಾರಿಯಲ್ಲದೇ, ಮತಗಳ ಎಣೆಕೆ ಪ್ರಕ್ರಿಯೆಯೂ ಸಹಾ ಬಹಳ ವಿಳಂಬವಾಗಿ ಕೆಲವೊಮ್ಮೆ ಸತತ 24-48 ಗಂಟೆಗಳ ಕಾಲ ತೆಗೆದುಕೊಳ್ಳುತ್ತಿದ್ದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿಯೇ ವಿದ್ಯುನ್ಮಾನ ಮತಯಂತ್ರಗಳನ್ನು ಭಾರತದಲ್ಲಿ ಮೊದಲ ಬಾರಿಗೆ ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್) ಕಾರ್ಖಾನೆ ತಯಾರಿಸಿ ನಂತರ ಅದರ ಸುಧಾರಿತ ಮತಯಂತ್ರಗಳನ್ನು ಅನೇಕ ಕಂಪನಿಗಳು ತಯಾರು ಮಾಡುವ ಮೂಲಕ ಎಂತಹ ವಾತಾವರಣದಲ್ಲಿಯೂ ಸರಳವಾಗಿ ಸುರಕ್ಷಿತವಾಗಿ ಮತದಾನ ಮಾಡಿದ ನಂತರ ಕೆಲವೇ ಕಲವು ಗಂಟೆಗಳಲ್ಲಿ ನಿಖರವಾದ ಫಲಿತಾಂಶಗಳನ್ನು ಪ್ರಕಟಿಸುವ ಕ್ಷಮತೆಯನ್ನು ಹೊಂದಿರುವ ಮೂಲಕ ಸಮಯ ಮತ್ತು ಶಕ್ತಿ ಎರಡೂ ಸಹಾ ಉಳಿತಾಯವಾಗುತ್ತಿರುವುದನ್ನು ಯಾರೂ ಸಹಾ ಅಲ್ಲಗಳಿಯಲಾಗದು.
ಕತ್ತಲು ಎಂದರೆ ಅದು ಬೆಳಕಿನ ವಿರುದ್ಧವಲ್ಲ ಅದು ಬೆಳಕಿನ ಅನುಪಸ್ಥಿತಿಯಾಗಿದೆ. ಅಂತೆಯೇ, ಸಮಸ್ಯೆಯೆಂದರೆ ಅದು ಕಲ್ಪನೆಯ ಅನುಪಸ್ಥಿತಿ ಅದಕ್ಕೆ ಪರಿಹಾರದ ಕೊರತೆಯಲ್ಲ. ತಲೆ ನೋವು ಬಂದಾಗ, ಆದಕ್ಕೆ ಸೂಕ್ತವಾದ ಔಷಧಿಗಳನ್ನು ತೆಗೆದುಕೊಂಡು ಗುಣ ಪಡಿಸಿಕೊಳ್ಳುತ್ತೇವೆಯೇ ಹೊರತು ತಲೆಯನ್ನೇ ಕತ್ತರಿಸಿಕೊಳ್ಳುವುದಿಲ್ಲ ಎನ್ನುವ ಹಾಗೆ, ವಿದ್ಯುನ್ಮಾನ ಮತಯಂತ್ರದಲ್ಲಿ ಯಾವ ರೀತಿಯ ತಾಂತ್ರಿಕ ದೋಷವಿದೆ? ಮತ್ತು ಅದರಿಂದ ಹೇಗೆಲ್ಲಾ ಮೋಸ ಮಾಡಬಹುದು? ಎಂಬುದನ್ನು ಸೂಕ್ತ ಪುರಾವೆಗಳ ಮೂಲಕ ತೋರಿಸಿದಲ್ಲಿ, ಖಂಡಿತವಾಗಿಯೂ ಅದನ್ನು ಸರಿಪಡಿಸುವ ಶಕ್ತಿಯಂತೂ ಭಾರತೀಯರಿಗೆ ಇದ್ದೇ ಇದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ