ವ್ಯಾಪಾರಂ ದ್ರೋಹ ಚಿಂತನಂ ಎಂಬ ಮಾತಿದೆ. ಸರಳವಾಗಿ ಹೇಳಬೇಕೆಂದರೆ, ಒಮ್ಮೆ ವ್ಯಾಪಾರಕ್ಕೆಂದು ಇಳಿದರೆ, ಅದರಲ್ಲಿ ಧರ್ಮ ಕರ್ಮ ಎಂದು ನೋಡಲಾಗದೇ, ಲಾಭ ಮಾಡುವುದಷ್ಟೇ ಮುಖ್ಯ ಎಂದಾಗುತ್ತದೆ. ಹೀಗಿದ್ದರೂ ಸಹಾ ಈ ಹಿಂದಿನ ಅನೇಕ ವ್ಯಾಪಾರಿಗಳು ಧರ್ಮ ಕರ್ಮಕ್ಕೆ ಸ್ವಲ್ಪ ಒತ್ತು ನೀಡುತ್ತಾ, ಸಮಾಜ ಅಭಿವೃದ್ಧಿಗೆ ಕಾರಣರಾಗುತ್ತಿದ್ದರು. ಆದರೆ ಇತ್ತೀಚಿನ ವ್ಯಾಪಾರಿಗಳಿಗೆ ಅಂತಹ ಧರ್ಮ ಮತ್ತು ಕರ್ಮವನ್ನು ನೋಡಲು ಪುರುಸೊತ್ತು ಇಲ್ಲದೇ, ಸಮಾಜ ಹಾಳಾದರೂ ಪರವಾಗಿಲ್ಲಾ ತಮಗೆ ಲಾಭ ಆದರೆ ಸಾಕು ಎನ್ನುವಂತಾಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿ ಮಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ದೇರ್ ಬೈಲ್ ಪ್ರದೇಶದ ಪಬ್ ಮಾಲಿಕರು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದನ್ನೂ ಮರೆತು ವಿದ್ಯಾರ್ಥಿಗಳಿಗೆಂದೇ ನೈಟ್ ಪಾರ್ಟಿ ಆಯೋಜನೆ ಮಾಡಿ, ವಿಧ್ಯಾರ್ಥಿಗಳು ಶಾಲಾ/ಕಾಲೇಜಿನ ಗುರುತು ಚೀಟಿ ತಂದಲ್ಲಿ ಮತ್ತಷ್ಟೂ ಹೆಚ್ಚಿನ ರಿಯಾಯಿತಿ ನೀಡುವ ಜಾಹೀರಾತನ್ನು ರಾಜಾರೋಷವಾಗಿ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲೆಡೆಯಲ್ಲಿ ಎಗ್ಗಿಲ್ಲದೇ ಹಾಕಿದ್ದಕ್ಕಾಗಿ ಜನರ ಆಕ್ರೋಶದ ಮೇರೆಗೆ ಕಡೆಗೂ ಮಂಗಳೂರಿನ ಪೊಲೀಸರು ಪಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಬಡಾವಣೆಗಳ್ಳಲ್ಲಿ ಒಂದಾದ ದೇರೆಬೈಲ್ ಕೊಂಚಾಡಿಯಲ್ಲಿರುವ ಹೋಟೆಲ್ ಲಾಲ್‌ಬಾಗ್ ಇನ್ (ಲಿಕ್ಕರ್ ಲಾಂಜ್ ಬಾರ್) ಬಾರ್ ಮತ್ತು ಪಬ್ ಒಂದರಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಸ್ಟೂಡೆಂಟ್ಸ್ ವೆಡ್ನೆಸ್ ಡೇ ನೈಟ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಸಂಜೆ 7ಗಂಟೆಯಿಂದ ಮಧ್ಯರಾತ್ರಿವರೆಗೆ ಕಾರ್ಯಕ್ರಮವನ್ನು ನಡೆಸಲು ಮುಂದಾಗಿತ್ತು. ಆ ಕಾರ್ಯಕ್ರಮದಲ್ಲಿ ಆಹಾರ, ಸಂಗೀತ ರಸಸಂಜೆ ಮುಂತಾದ ಮನರಂಜನೆಗಳು ಇರುವುದಾಗಿ ತಿಳಿಸಿದ್ದರೂ, ಮದ್ಯದ ಮಾರಾಟವೇ ಮುಖ್ಯವಾಗಿತ್ತು. ಎಲ್ಲದ್ದಕ್ಕಿಂತಲೂ ವಿಶೇಷವಾಗಿ ಶಾಲಾ/ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಗುರುತು ಕಾರ್ಡ್ ತೋರಿಸಿದಲ್ಲಿ ಶೇ.15ರಷ್ಟು ರಿಯಾಯಿತಿಯನ್ನು ಕೊಡುವುದಾಗಿ ತಿಳಿಸಲಾಗಿತ್ತು,
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ !
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ !!
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ !!
ಅಂದರೆ ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೈವತ್ವವು ಅರಳುತ್ತದೆ. ಮತ್ತು ಎಲ್ಲಿ ಮಹಿಳೆಯರು ಅವಮಾನಿತರಾಗುತ್ತಾರೋ, ಅಲ್ಲಿ ಎಲ್ಲಾ ಕ್ರಿಯೆಗಳು ಫಲ ಪ್ರದವಾಗುವುದಿಲ್ಲ ಎಂದು ಹೇಳುತ್ತದೆ ನಮ್ಮ ಪುರಾಣಗಳು. ಒಟ್ಟಿನಲ್ಲಿ ಇದರ ಸಾರಾಂಶವೆಂದರೆ, ನಮ್ಮ ಸನಾತನ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಅತ್ಯಂತ ಗೌರವಯುತವಾದ ತಾಯಿಯ ಸ್ಥಾನವನ್ನು ಕೊಟ್ಟಿದ್ದಷ್ಟೇಲ್ಲದೇ ಆ ಹೆಣ್ಣು ಮಕ್ಕಳು ವ್ಯಸನಗಳಿಂದ ದೂರ ಇರಬೇಕು ಎಂದಾಗಿದ್ದರೆ, ಈ ರೀತಿಯ ಎಲ್ಲಾ ನಿಯಮಗಳನೂ ಗಾಳಿಗೆ ತೋರಿದ್ದ ಆ ಪಬ್ಬಿನವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶೂಟರ್ಸ್ ನೀಡುವ ವಿಶೇಷ ಸವಲತ್ತುಗಳನ್ನು ನೀಡುವ ಭರವಸೆಯನ್ನು ಕೊಡುವ ಮೂಲಕ ತಾಯಿಯಂತೆ ಕಾಣುವ ಹೆಣ್ಣುಮಕ್ಕಳನ್ನೂ ದಾರಿ ತಪ್ಪಿಸುವ ಹಾದಿಯಲ್ಲಿತ್ತು,
ಯಾವಾಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗಿ, ಅಲ್ಲಿ ಜನರು ಬಾಯಿಗೆ ಬಂದಂತೆ ಪಬ್ಬಿನ ಮಾಲಿಕರನ್ನೂ ಸ್ಥಳೀಯ ಆಡಳಿತ ಮಂಡಳಿ ಮತ್ತು ಸರ್ಕಾರದ ಮದ್ಯದ ಮಾರಾಟದ ನೀತಿ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮಂಗಳೂರು ನಗರದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತ್ತವರ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದ್ದ ಪಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರೆ, ಅಬಕಾರಿ ಇಲಾಖೆ ಅಧಿಕಾರಿಗಳು ಆ ಪಬ್ ವಿರುದ್ಧ ಕಠಿಣ ಕ್ರಮ ಜಾರಿಗೆ ತರಲು ಮುಂದಾಗಿದ್ದಾರೆ.
ಒಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಮತ್ತೊಂದು ಕಡೆ ಪೋಲೀಸರಿಗೆ ಮತ್ತು ಅಬಕಾರಿ ಇಲಾಖೆಗೆ ಇಂತಹ ಅಸಹ್ಯಕರವಾದ ಮತ್ತು ಮಕ್ಕಳನ್ನು ದಾರಿಗೆ ತಪ್ಪಿಸುವಂತಹ ಕಾರ್ಯಕ್ರಮವನ್ನು ರದ್ದುಗೊಳಿಸಿ, ಆ ಕಾರ್ಯಕ್ರಮದ ಆಯೋಜಕರ ವಿದುದ್ಧ ಕ್ರಮಕ್ಕೆ ತೆಗೆದುಕೊಳ್ಳಬೇಕೆಂದು ಕರೆ ಮಾಡಿದ್ದನ್ನು ಪರಿಗಣಿಸಿ, ಬಾರ್‌ನ ಮಾಲೀಕರಿಗೆ ಕಾವೂರು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಲ್ಲದೇ, ಜಿಲ್ಲಾನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್(ಎಪಿಪಿ)ಗೆ ಪತ್ರ ಬರೆದು ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸ ಬೇಕೆಂದು ಸೂಚಿಸಲು ಕೋರಿದ್ದಾರೆ. ಇನ್ನು ಅಬಕಾರಿ ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಿದ್ದಕ್ಕಾಗಿ ಪಬ್ ಮಾಲಿಕರಿಗೆ 7000/- ರೂ. ದಂಡ ವಿಧಿಸಿದೆಯಲ್ಲದೇ, ಈ ಕೂಡಲೇ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಸೂಚಿಸಿ, ಈ ಕಾರ್ಯಕ್ರಮದ ಆಯೋಜನೆ ಕರ್ನಾಟಕ ಅಬಕಾರಿ ಕಾಯ್ದೆ, 1965 ಮತ್ತು ಪರವಾನಗಿ ನಿಬಂಧನೆಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಉಲ್ಲಂಘಿಸಿರುವ ಕಾರಣ, ಅಬಕಾರಿ ಇಲಾಖೆಯು ಕರ್ನಾಟಕ ಅಬಕಾರಿ ಕಾಯಿದೆ, 1965 ರ u/s 36 ಸ್ಥಾಪನೆಯ ವಿರುದ್ಧ ಎಫ್‌ಐಆರ್ ಸಿಆರ್ ಸಂಖ್ಯೆ 5/2024-25/1503DySE/150309 ದಾಖಲಿಸಿ ತನಿಖೆ ನಡೆಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ.
ಹೇಳೀ ಕೇಳಿ ಅವಿಭಜಿತ ದಕ್ಷಿಣ ಕನ್ನಡ ಅದರಲ್ಲೂ ಮಂಗಳೂರು ನಗರ ಪ್ರಜ್ಞಾಂವಂತ ಹಿಂದೂಗಳ ಕಾರ್ಯಕ್ಷೇತ್ರವಾಗಿದ್ದು ಇಂತಹ ಸಮಾಜ ವಿರೋಧಿ ಕಾರ್ಯಕ್ರಮಗಳು ವಿರುದ್ಧ ಆಕ್ರೋಶಭರಿತವಾಗಿ ಪ್ರತಿಭಟಿಸುವ ಸ್ಥಳವಾಗಿದ್ದು, ಸೂಕ್ತ ಸಮಯದಲ್ಲಿ ಪೋಲೀಸರು ಮತ್ತು ಅಬಕಾರಿ ಇಲಾಖೆಯವರು ಕಾರ್ಯಕ್ರಮವನ್ನು ರದ್ದು ಗೊಳಿಸುವ ಮೂಲಕ ಮುಂದೆ ಆಗಬಹುದಾಗಿದ್ದಂತಹ ಯಾವುದೇ ಅಹಿತಕರ ಘಟನೆಗಳಿಗೆ ತಡೆ ಒಡ್ಡಿರುವುದು ಅಭಿನಂದನಾರ್ಹವಾಗಿದೆ. ಇದೇ ರೀತಿ ಸುಮಾರು ಹತ್ತು ವರ್ಷಗಳ ಹಿಂದೆ ಇದೇ ಮಂಗಳೂರಿನಲ್ಲಿ ನಡೆಯಿತು ಎನ್ನಲಾದ ರೇವ್ ಪಾರ್ಟಿಗೆ ಶ್ರೀರಾಮ ಸೇನೆ ಸಂಘಟನೆಯ ಹುಡುಗರು ಧಾಳಿ ನಡೆಸಿ ಪ್ರಕರಣ ಇನ್ನೂ ನ್ಯಾಯಾಂಗದಲ್ಲಿ ವಿಚಾರಣಾ ಹಂತದಲ್ಲೇ ಇರುವಾಗ ಮತ್ತೆ ಅದೇ ರೀತಿಯ ಕಾರ್ಯಕ್ರಮ ಏನಾದರೂ ನಡೆದಿದ್ದಲ್ಲಿ ನಿಸ್ಸಂದೇಹವಾಗಿ ಮತ್ತೊಂದು ಅಹಿತಕರ ಘಟನೆಗೆ ಆಸ್ಪದವಾಗುತ್ತಿತ್ತು ಎನ್ನುವುದೇ ಬಹುತೇಕರ ಅಭಿಪ್ರಾಯವಾಗಿದೆ.
ಹೌದು ನಿಜ. ಅಕ್ಕ ಸಾಲಿ ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ ಎನ್ನುವ ಗಾದೆಯಂತೆ ತಮ್ಮ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಹತ್ತು ಹಲವಾರು ವಿಧಾನಗಳು ಮತ್ತು ಆಮಿಷಗಳನ್ನು ನೀಡುವುದು ವ್ಯಾಪಾರಿಗಳ ತಂತ್ರವಾಗಿದೆ. ಹಾಗೆಂದ ಮಾತ್ರಕ್ಕೆ ವ್ಯಾಪಾರಂ ದ್ರೋಹ ಚಿಂತನಂ ಎನ್ನುವಂತೆ ಇನ್ನೂ ಓದುತ್ತಿರುವ ಮಕ್ಕಳನ್ನು ಎಲ್ಲಾ ರೀತಿಯ ವ್ಯಸನಗಳಿಂದ ದೂರ ಇರಬೇಕು ಎನ್ನುವುದನ್ನೂ ಮರೆತು ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನೇ ಗಮನದಲ್ಲಿಟ್ಟುಕೊಂಡು, ಅವರಿಗಾಗಿಯೇ ವಿಶೇಷ ರಿಯಾಯಿತಿಗಳ ಆಮೀಷ ಒಡ್ಡುತ್ತಿರುವುದು ನಿಜಕ್ಕೂ ಖಂಡನಾರ್ಹವಾದ ವಿಚಾರವಾಗಿದೆ.
ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಾನೂನು ಬಾಹಿರ ಎಂಬ ವಿಷಯ ಖಂಡಿತವಾಗಿಯೂ ಅಯೋಜಕರಿಗೆ ತಿಳಿದ ವಿಷಯವೇ ಆಗಿದ್ದರೂ, ಸ್ಥಳೀಯ ಆಡಳಿತಾಧಿಕಾರಿಗಳಿಗೆ, ಅಬ್ಕಾರಿ ಇಲಾಖೆಯ ಸಿಬ್ಬಂಧಿ ಮತ್ತು ಪೋಲೀಸರಿಗೆ ತಿಂಗಳು ತಿಂಗಳು ತಲುಪಿಸಬೇಕಾಗಿದ್ದದ್ದನ್ನು ಸರಿಯಾಗಿ ತಲುಪಿಸಿರುವ ಕಾರಣದಿಂದಲೇ ಇಂತಜ ಕುಕೃತ್ಯಕ್ಕೆ ಕೈಹಾಕಿರುತ್ತಾರೆ. ಅದೃಷ್ಟವಷಾತ್, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇನ್ನೂ ಹಲವರು ನೇರವಾಗಿ ಇಲಾಖೆಗೆ ಆಕ್ರೋಶ ವ್ಯಕ್ತ ಪಡಿಸಿದ ಕಾರಣ ಕಾರ್ಯಕ್ರಮ ರದ್ದಾಗಿದೆ.
ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಮುಖ ಆದಾಯವೆಂದರೆ ಒಂದು ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎರಡನೆಯದು ಮದ್ಯ, ಹಾಗಾಗಿ ದೇಶದ ಜನರು ಕುಡಿದು ಕುಡಿದು ಹಾಳಾದರೂ ಪರವಾಗಿಲ್ಲ. ನಮಗೆ ತೆರಿಗೆ ಬಂದರೆ ಸಾಕು ಎನ್ನುವ ಮನಸ್ಥಿತಿಯನ್ನು ಬದಿಗೊತ್ತಿ, ಅನೇಕ ಮನೆ ಮಠಗಳನ್ನು ಹಾಳು ಮಾಡುತ್ತಿದ್ದ ಎಲ್ಲಾ ರೀತಿಯ ಲಾಟರಿಯನ್ನು ನಿಷೇಧಿಸಿದಂತೆ ಮದ್ಯವನ್ನು ನಿಷೇಧಿಸುವುದರತ್ತ ಗಮನಿಸಿದರೆ ಒಳ್ಳೆಯದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ