ಅಂಶುಮಾನ್ ದತ್ತಾಜಿರಾವ್ ಗಾಯಕ್ವಾಡ್ ಭಾರತ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಲ್ಲದೇ, ಆಟದಿಂದ ನಿವೃತ್ತರಾದ ನಂತರವೂ ಕ್ರಿಕೆಟ್ ನೊಂದಿಗೆ ತರಭೇತುದಾರರಾಗಿ, ಆಯ್ಕೆದಾರರಾಗಿ ಮತ್ತು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಹೆಮ್ಮೆಯ ಆಟಗಾರತಾಗಿದ್ದವರು. ಕಳೆದ ಒಂದು ವರ್ಷಗಳಿಂದ ಕ್ಯಾನ್ಸರ್ ಮಹಾ ಮಾರಿಗೆ ತುತ್ತಾಗಿ, ಲಂಡನ್ನಿನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, 1983ರ ವಿಶ್ವಕಪ್ ಗೆದ್ದ ಕಪಿಲ್ ದೇವ್ ನಾಯಕತ್ವದ ಬಹುತೇಕ ಆಟಗಾರರು ಗಾಯಕ್ವಾಡ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹುರಿದುಂಬಿಸಿದ್ದಲ್ಲದೇ, ಅವರ ಚಿಕಿತ್ಸೆಗೆ ತಮ್ಮ ಕೈಯಲ್ಲಾದ ಮಟ್ಟಿಗೆ ಸಹಾಯ ಮಾಡಿದ್ದಲ್ಲದೇ, ಬಿಸಿಸಿಐ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಲು ಮನವಿ ಮಾಡಿ, ಸುಮಾರು ಒಂದು ಕೋಟಿ ರೂಪಾಯಿಗಳ ಸಹಾಯ ಹಸ್ತವನ್ನು ನೀಡಿದರೂ ಚಿಕಿತ್ಸೆಗೆ ಅವರ ದೇಹ ಸ್ಪಂದಿಸದೇ, ಬುಧವಾರ, 31 ಜುಲೈ 2024 ರಂದು ನಿಧನರಾಗಿರುವುದು ನಿಜಕ್ಕೂ ದುಃಖಕರವಾದ ವಿಷಯವಾಗಿದೆ.
23 ಸೆಪ್ಟೆಂಬರ್ 1952 ರಂದು ಮುಂಬೈನಲ್ಲಿ ಜನಿಸಿದ ಅಂಶುಮಾನ್ ಗಾಯಕ್ವಾಡ್ ಅವರ ಸಂಪೂರ್ಣ ಹೆಸರು ಅಂಶುಮಾನ್ ದತ್ತಾಜಿರಾವ್ ಗಾಯಕ್ವಾಡ್ ಅಗಿದ್ದು ಕುತೂಹಲಕಾರಿ ಆದ ವಿಷಯವೇನೆಂದರೆ ಅವರ ತಂದೆಯವರಾದ ಶ್ರೀ ದತ್ತಾಜಿರಾವ್ ಗಾಯಕ್ವಾಡ್ ಅವರೂ ಸಹಾ ಭಾರತದ ಪರವಾಗಿ 1952 ಮತ್ತು 1961 ರ ನಡುವೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದರಿಂದ ಸಹಜವಾಗಿ ಅಂಶುಮಾನ್ ಸಹಾ ಬಾಲ್ಯದಿಂದಲೇ ಕ್ರಿಕೆಟ್ ಆಟದ ಬಗ್ಗೆ ಒಲವನ್ನು ತೋರಿಸಿದ್ದಲ್ಲದೇ, ತಮ್ಮ ಕ್ರಿಕೆಟ್ ಜೀವನವನ್ನು ಬರೋಡ ತಂಡ ಮೂಲಕ ಆರಂಭಿಸಿದರು. ಗಾಯಕ್ವಾಡ್ ಅವರು ಆರಂಭಿಕ ಆಟಗಾರರಾಗಿಯೇ ಪ್ರಖ್ಯಾತವಾಗಿದ್ದರೂ, ಬಹುತೇಕರಿಗೆ ತಿಳಿಯದೇ ಇರುವ ವಿಷಯವೇನೆಂದರೆ, ಮೂಲತಃ ಅವರು ಬಲಗೈ ಆಫ್ ಸ್ಪಿನ್ನರ್ ಆಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಆರಂಭದಲ್ಲಿ ಕಡೆಯ ಕ್ರಮಾಂಕದ ಆಟಗಾರನಾಗಿ ಆಡಲು ಆರಂಭಿಸಿ ನಂತರದ ತಮ್ಮ ಜಿಗುಟುತನದ ಮತ್ತು ಜವಾಭ್ಧಾರಿಯುತ ತಾಳ್ಮೆಯ ಬ್ಯಾಟಿಂಗ್ ನಿಂದಾಗಿ ಭಾರತ ತಂಡ ಕಂಡ ಅತ್ಯಂತ ಶ್ರೇಷ್ಠ ಆರಂಭಿಕ ಆಟಗಾರರಾಗಿದ್ದ ಸುನೀಲ್ ಗವಾಸ್ಕರ್ ಅವರ ಜೊತೆ ಇನ್ನಿಂಗ್ಸ್ ಆರಂಭಿಸಿದ ಖ್ಯಾತಿ ಅಂಶುಮಾನ್ ಗಾಯಕ್ವಾಡ್ ಅವರ ಹೆಗ್ಗಳಿಕೆಯಾಗಿದೆ.
27 ಡಿಸೆಂಬರ್ 1974 ರಂದು ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡಲು ಆರಂಭಿಸಿದ ಗಾಯಕ್ವಾಡ್, 31 ಡಿಸೆಂಬರ್ 1984 ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಕ್ರಿಕೆಟ್ ಆಡುವುದರ ನಡುವೆ ಭಾರತದ ಪರ ಬಲಗೈ ಆಟಗಾರಾಗಿ 40 ಟೆಸ್ಟ್‌ಗಳಿಂದ 1985 ರನ್ ಗಳಿಸಿದ್ದರು. ಅದರಲ್ಲಿ 70 ಇನ್ನಿಂಗ್ಸ್‌ಗಳಲ್ಲಿ 30.07 ಸರಾಸರಿಯಲ್ಲಿ1 ದ್ವಿಶತಕ, 2 ಶತಕವೂ ಸೇರಿದಂತೆ 10 ಅರ್ಧ ಶತಕಗಳಿಸಿದ್ದರು. ಬಹಳ ಸುಧೀರ್ಘ ಕಾಲ ತಾಳ್ಮೆಯಿಂದ ಆಟವಾಡುವಂತಹ ಶಕ್ತಿಯನ್ನು ಹೊಂದಿದ್ದ ಕಾರಣ ಅಂದಿನ ಕಾಲದಲ್ಲಿ ಅವರಿಗೆ ದಿ ಗ್ರೇಟ್ ವಾಲ್ ಎಂಬ ಅಡ್ಡ ಹೆಸರನ್ನೂ ಇಡಲಾಗಿತ್ತು. ಗಾಯಕ್ವಾಡ್ ಅವರು ಭಾರತ ಟೆಸ್ಟ್ ಕ್ರಿಕೆಟ್ಟಿನಲ್ಲಿ ಆಟಗಾರರಾಗಿ ಎರಡು ಸಂಧರ್ಭದಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸಿದ್ದಾರೆ ಎಂದರೂ ತಪ್ಪಾಗದು.
ಮೊದಲನೆಯದು 1976 ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ಸಿನ ಪ್ರವಾಸ ಮಾಡ್ಡಿದ್ದ ತಂಡದಲ್ಲಿ ಕನ್ನಡಕಧಾರಿ ಅಂಶುಮಾನ್ ಅವರೂ ಸಹಾ ಇದ್ದರು. ಅದೇ ಪ್ರವಾಸದಲ್ಲಿಯೇ ಭಾರತ ತಂಡ 403 ರನ್‌ಗಳ ವಿಶ್ವ ದಾಖಲೆಯ ನಾಲ್ಕನೇ ಇನ್ನಿಂಗ್ಸ್ ಟೆಸ್ಟ್ ಗುರಿಯನ್ನು ಬೆನ್ನಟ್ಟುವ ಮೂಲಕ ಭಾರತವು ವೈಭವದಿಂದ ಮೆರೆದಿತ್ತು. ಸಹಜವಾಗಿ ಈ ಸೋಲಿನಿಂದ ಗಾಯಗೊಂಡ ಹುಲಿಯಂತಾಗಿದ್ದ ವಿಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಎಲ್ಲ ಸ್ಪಿನ್ನರ್ ಗಳನ್ನು ಕೈ ಬಿಟ್ಟು ಮೈಕಲ್ ಹೋಲ್ಡಿಂಗ್, ಮಾಲ್ಕಂ ಮಾರ್ಷಲ್, ವೇಯ್ನ್ ಡೇನಿಯಲ್, ಜೋಯಲ್ ಗಾರ್ನರ್ ನಂತಹ ಶರವೇಗಿಗಳನ್ನು ಹೊಂದಿದ್ದಂತಹ ಆಲ್-ಪೇಸ್ ದಾಳಿಯನ್ನು ನಡೆಸಲು ಮುಂದಾಗಿದ್ದಲ್ಲದೇ, ಮೈಕಲ್ ಹೋಲ್ಡಿಂಗ್ ನೇತೃತ್ವದ ತಂಡಕ್ಕೆ ಭಾರತದ ಆಟಗಾರರ ಮೇಲೆ ಕೇವಲ ಬೌನ್ಸರ್ ಗಳಷ್ಟೇ ಅಲ್ಲದೇ, 1932-33 ರಲ್ಲಿ ಆಸ್ಟ್ರೇಲಿಯಾದ ಆಶಸ್ ಪ್ರವಾಸದಲ್ಲಿ ಇಂಗ್ಲೆಂಡ್‌ನ ಬೊಲರ್ಗಳು ಮಾಡಿದ ಬಾಡಿಲೈನ್ ತಂತ್ರಗಳ ನೆನಪುಗಳನ್ನು ಪುನರುಜ್ಜೀವನಗೊಳಿಸುವಂತೆ ಭಾರತೀಯ ಆಟಗಾರ ಮೈಮೇಲೆ ಅತ್ಯಂತ ವೇಗವಾಗಿ ಚಂಡನ್ನು ಎಸೆಯತೊಡಗಿದರು.
ಲಾಯ್ಡ್‌ನ ಪ್ರತಿಕೂಲ ಬೌಲಿಂಗ್ ತಂತ್ರಗಳಿಗಾಗಿ ಜಮೈಕಾದಲ್ಲಿ ರಕ್ತಸ್ನಾನ ಎಂದೇ ಕರೆಯಲ್ಪಟ್ಟ ಆ ಟೆಸ್ಟ್‌ನಲ್ಲಿ, ಗಾಯಕ್ವಾಡ್ ತನ್ನ ಮೊದಲ ಸಾಗರೋತ್ತರ ಟೆಸ್ಟ್ ಪ್ರವಾಸದಲ್ಲಿ, ವೇಗದ ಬೌಲರ್‌ಗಳ ವಿರುದ್ಧ ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾಗಿದ್ದರು ಎಂಬುದಕ್ಕೆ ಉದಾಹರಣೆಯಾಗಿ ಸುಮಾರು 450 ನಿಮಿಷಗಳ ಇನ್ನಿಂಗ್ಸ್‌ನಲ್ಲಿ ಧೈರ್ಯದಿಂದ ತನ್ನ ದೇಹದ ಮೇಲೆ ಬೀಳುತ್ತಿದ್ದ ಹಲವಾರು ಹೊಡೆತಗಳನ್ನು ಲೆಕ್ಕಿಸದೇ, 81 ರನ್ ಗಳಿಸಿದ್ದಾಗ, ಹೋಲ್ಡಿಂಗ್ ಎಸೆದ ಒಂದು ಚಂಡು ಗಾಯಕ್ವಾಡ್ ಆವರ ನಿರೀಕ್ಷೆಗೂ ಮೀರಿ ವೇಗವಾಗಿ ಬಂದು ಕ್ಷಣಮಾತ್ರದಲ್ಲಿ ಆತನ ತಲೆಗೆ ಬಿದ್ದಾಗ ಒಂದು ಕ್ಷಣ ಆತನಿಗೆ ಏನಾಯಿತು ಎಂದೇ ತಿಳಿಯದೇ ಹೋಗಿದ್ದಲ್ಲದೇ, ಆ ಹೊಡೆತದಿಂದಾಗಿ ಗಾಯಕ್ವಾಡ್ ಅವರ ಕಿವಿ ಶಾಶ್ವತವಾಗಿ ಮುಚ್ಚಿ ಹೋಗಿದ್ದಲ್ಲದೇ, ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಗಾಯಕ್ವಾಡ್ ಗಾಯದಿಂದ ನಿವೃತ್ತಿ ಹೊಂದುವಂತೆ ಮಾಡಿದ್ದಲ್ಲದೇ, ಕೂಡಲೇ ಆತನಿಗೆ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿ, ಸುಮಾರು 48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ (ICU) ಇರುವಂತಾಗಿದ್ದಲ್ಲದೆ ಶಾಶ್ವತವಾಗಿ ಶ್ರವಣ ದೋಷಕ್ಕೆ ಒಳಗಾಗಿದ್ದನ್ನು ಎಂದಿಗೂ ಯಾರೂ ಸಜಾ ಸಹಾ ಮರೆಯಲಾಗದು. ಗಾಯಕ್ವಾಡ್ ಅವರು ಮೈದಾನದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ವೆಸ್ಟ್ ಇಂಡೀಸ್ ತಂಡದ ಸಮರ್ಥಕರು ಅವನನ್ನು ಕೊಲ್ಲು. ಅವನನ್ನು ಕೊಲ್ಲು ಎಂದು ಕೂಗುತ್ತಿದ್ದನ್ನು ಗಮನಿಸಿದ ಸುನೀಲ್ ಗವಾಸ್ಕರ್ ಇದು ಅನಾಗರಿಕತೆ ಎಂದು ಜರಿದರು. ಲಾಯ್ಡ್ ಅವರ ಈ ಕುತಂತ್ರಕ್ಕೆ ಕೆರಳಿದ ಭಾರತದ ನಾಯಕ ಬಿಶನ್ ಸಿಂಗ್ ಬೇಡಿ, ತಮ್ಮ ಕೆಳ ಕ್ರಮಾಂಕದ ಆಟಗಾರರನ್ನು ರಕ್ಷಿಸುವ ಸಲುವಾಗಿ ಮತ್ತು ಸಾತ್ವಿಕವಾದ ಪ್ರತಿಭಟನೆಯ ಸಂದೇಶವನ್ನು ತಲುಪಿಸುವ ಸಲುವಾಗಿ ತಮ್ಮ ಮೊದಲ ಇನ್ನಿಂಗ್ಸ್ ಅನ್ನು 306/6 ಕ್ಕೆ ಡಿಕ್ಲೇರ್ ಮಾಡಿಕೊಂಡಿದ್ದು ಗಮನಾರ್ಹ.
ಇನ್ನು ಎರಡನೆಯ ಸಂಧರ್ಭ 1982-83ರಲ್ಲಿ ಪಾಕೀಸ್ಥಾನ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದಾಗ ಜಲಂಧರ್ ಟೆಸ್ಟಿನಲ್ಲಿ ಗವಾಸ್ಕರ್ ಅವರ ಜೊತೆ ಆರಂಭಿಕ ಆಟಗಾರರಾಗಿ ಮೈದಾನಕ್ಕೆ ಇಳಿದ ಅಂಶುಮಾನ್ ಗಾಯಕ್ವಾಡ್ ಅತ್ಯಂತ ಧೈರ್ಯಶಾಲಿಯಾಗಿ ಮತ್ತು ಅಸಾಧಾರಣ ಮಟ್ಟದ ತಾಳ್ಮೆಯಿಂದ ಸುಮಾರು 671 ನಿಮಿಷಗಳ ಮೈದಾನದಲ್ಲಿ ಆಟವಾಡಿ ಔಟಾಗದೇ ತಮ್ಮ ಅತ್ಯಧಿಕ ಸ್ಕೋರ್ 201 ಓಟಗಳನ್ನು ಗಳಿಸಿದ್ದು ಅವರ ತಾಳ್ಮೆಯ ಆಟದ ಶೈಲಿ ಮತ್ತು ಏಕಾಗ್ರತೆಗೆ ಉದಾಹರಣೆಯಾದರೆ, ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ನಿಧಾನವಾದ ದ್ವಿಶತಕ ಎಂಬ ಖ್ಯಾತಿಯನ್ನೂ ಪಡೆದದ್ದು ವಿಶೇಷವಾಗಿತ್ತು.
1984ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಗುಜರಾತ್‌ನ ವಡೋದರಾದಲ್ಲಿ ನೆಲೆಸಿದ್ದರೂ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಅವರ ಒಡನಾಟ ಮುಂದುರೆಯಿತು. ಎರಡು ಬಾರಿ ಆವರು ಭಾರತ ತಂಡದ ಕೋಚ್ ಆಗಿ ಅಧಿಕಾರವನ್ನು ವಹಿಸಿಕೊಂಡಿದ್ದರು. ಕೇವಲ ತಂಡದ ತರೆಬೇತುದಾರರಲ್ಲದೇ, ರಾಷ್ಟ್ರೀಯ ಆಯ್ಕೆಗಾರರಾಗಿಯೂ ಕೆಲಸ ಮಾಡಿದ್ದರು. ಅಕ್ಟೋಬರ್ 1997 ರಿಂದ ಸೆಪ್ಟೆಂಬರ್ 1999 ರವರೆಗೆ ಎರಡು ವರ್ಷಗಳ ಕೋಚ್ ಆಗಿದ್ದ ಸಮಯದಲ್ಲಿ ಭಾರತದ ಕ್ರಿಕೆಟ್ ತಂಡವು ಅತ್ಯಂತ ಕಠಿಣ ಹಂತವನ್ನು ಎದುರಿಸಿತ್ತು. ಭಾರತ ತಂಡದ ತರಬೇತುದಾರರಾಗಿ ಅವರ ಸಾಧನೆ ಮಿಶ್ರ ಫಲವಾಗಿದ್ದು ಟೆಸ್ಟ್ ಗಳಿಗಿಂತಲೂ ODI ತಂಡದೊಂದಿಗೆ ಉತ್ತಮ ಕೆಲಸ ಮಾಡಿದರು. 1998 ರಲ್ಲಿ ಶಾರ್ಜಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಏರಡನೇ ಸ್ಥಾನವನ್ನು ಗಳಿಸಿತ್ತು. 1999 ರಲ್ಲಿ ಪಾಕಿಸ್ತಾನದ ವಿರುದ್ಧ ದೆಹಲಿಯ ಫಿರೋಜ್‌ಶಾ ಕೋಟ್ಲಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಅವರು ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಅದ್ಭುತ ಕ್ಷಣಗಳಿಗೆ ಗಾಯಕ್ವಾಡ್ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಆದರೆ 1999 ರಲ್ಲಿ ಆಸ್ಟ್ರೇಲಿಯಾದ ವಿನಾಶಕಾರಿ ಪ್ರವಾಸ ಮತ್ತು ಆದಾದ ನಂತರ ವಿಶ್ವಕಪ್ ಅಭಿಯಾನದಲ್ಲಿ ವಿಫಲರಾದ ನಂತರ ಅವರನ್ನು ತರಭೇತುದಾರರ ಸೇವೆಯಿಂದ ಮುಕ್ತ ಗೊಳಿಸಲಾಗಿತ್ತು. 2000 ರಲ್ಲಿ ಕಪಿಲ್ ದೇವ್ ಅವರು ಕೇವಲ ಒಂದು ವರ್ಷಗಳ ಸಮಯ ಭಾರತೀಯ ಕೋಚ್ ಆಗಿ ನಂತರ ಆ ಹುದ್ದೆಯನ್ನು ತ್ಯಜಿಸಿದ ನಂತರ, ಗಾಯಕ್ವಾಡ್ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ನ್ಯೂಜಿಲೆಂಡಿನ ಜಾನ್ ರೈಟ್ ಆಯ್ಕೆಯಾಗುವವರೆಗೂ ಮತ್ತೊಮ್ಮೆ ಸ್ವಲ್ಪ ಸಮಯದವರೆಗೆ ತರಭೇತುದಾರರಾಗಿ ಕೆಲಸವನ್ನು ವಹಿಸಿಕೊಂಡಿದ್ದರು. ಇದಾದ ನಂತರ ಕ್ರಿಕೆಟ್ ಸಂಬಂಧಿಸಿದ ಎಲ್ಲಾ ರೀತಿಯ ಹುದ್ದೆಗಳಿಂದಲೂ ಶಾಶ್ವತವಾಗಿ ನಿವೃತ್ತಿಯನ್ನು ಪಡೆದರು.
ಅಕ್ಟೋಬರ್ 05 2019ರಲ್ಲಿ ಅಂಶುಮಾನ್ ಗಾಯಕ್ವಾಡ್ ಅವರಿಗೆ ಗೆ BCCI ನೀಡುವ ಅತ್ಯುನ್ನತ ಗೌರವವಾದ CK ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಅವರಿಗೆ ನೀಡುವ ಮೂಲಕ ಭಾರತೀಯ ಕ್ರಿಕೆಟ್ಟಿಗೆ ಸಲ್ಲಿಸಿದ ಆವರು ಸಲ್ಲಿಸಿದ ಕೊಡುಗೆಗಳಿಗೆ ಗೌರವವನ್ನು ಸಲ್ಲಿಸಲಾಯಿತು.
ಬೆಂಕಿಯಂತೆ ಉಗುಳುವ ವೆಸ್ಟ್ ಇಂಡೀಸ್ ವೇಗದ ಬೋಲರ್ಗಳನ್ನು ಅತ್ಯಂತ ತಾಳ್ಮೆ ಮತ್ತು ಜವಾಬ್ಧಾರಿಯುತವಾಗಿ ಎದುರಿಸಿದ್ದ ಗಾಯಕ್ವಾಡ್ ನಿಜ ಜೀವನದಲ್ಲಿ ಅವರ ದೇಹಕ್ಕೆ ಆವರಿಸಿದ ಕ್ಯಾನ್ಸರ್ ವಿರುದ್ಧ ಸುದೀರ್ಘವಾಗಿ ಹೋರಾಡಲು ಸಾಧ್ಯವಾಗದೇ, ತಮ್ಮ 71 ನೇ ವಯಸ್ಸಿನಲ್ಲಿ ನಿಧನರಾಗುವ ಮೂಲಕ ಭಾರತ ಕ್ರಿಟೆಟ್ ಕಂಡ ಒಬ್ಬ ಅತ್ಯುನ್ನತ ಹೋರಾಟಗಾರರನ್ನು ಕಳೆದು ಕೊಳ್ಳುವಂತಾಗಿದೆ
ಅಂಶುಮಾನ್ ಗಾಯಕ್ವಾಡ್ ಅವರ ನಿಧನಕ್ಕೆ ದೇಶ ವಿದೇಶಗಳ ಕ್ರಿಕೆಟ್ ಆಟಗಾರರಲ್ಲದೇ, ನಮ್ಮ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೂ ಸಹಾ ಅಗಲಿದ ಕ್ರಿಕೆಟಿಗನಿಗೆ ಸಂತಾಪ ಸೂಚಿಸುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ಭೌತಿಕವಾಗಿ ಇನ್ನು ಮುಂದೆ ಅಂಶುಮಾನ್ ಗಾಯಕ್ವಾಡ್ ಅವರು ನಮ್ಮೊಂದಿಗೆ ಇರುವುದಿಲ್ಲವಾದರೂ ಭಾರತೀಯ ಕ್ರಿಕೆಟ್ ಜನತ್ತಿಗೆ ಅವರು ಮಾಡಿದ ಸಾಧನೆಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರ್ತಾರೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ