ಅತಿಯಾದ ಆತ್ಮ ವಿಶ್ವಾಸವೇ ನೀರಜ್‌ ಚೋಪ್ರಾಗೆ ಮುಳುವಾಯ್ತೇ?

2020ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಜಾವಲಿನ್ ಎಸೆತಗಾರ ನೀರಜ್‌ ಚೋಪ್ರಾ ಅವರು ಚಿನ್ನದ ಪದಕವನ್ನು ಪಡೆಯುವ ಮೂಲಕ ಭಾರತದ ಪರ  ಇಂತಹ  ಸಾಧನೆ ಮಾಡಿದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಪಾತ್ರರಾಗಿದ್ದಲ್ಲದೇ, ತದನಂತರದ ಹತ್ತು ಹಲವಾರು ವಿಶ್ವ ಮಟ್ಟದ ಪಂದ್ಯಾವಳಿಗಳಲ್ಲಿ  ಅದೇ ರೀತಿಯ ಉತ್ತಮ ಪ್ರದರ್ಶನಗಳನ್ನು ನೀಡುವ ಮೂಲಕ  ಸಹಜವಾಗಿಯೇ ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ  ಸಹಾ ಅವರಿಂದ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು.

ಅದಕ್ಕೆ ಪೂರಕ ಎನ್ನುವಂತೆ ಅರ್ಹತಾ ಸುತ್ತಿನ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ದೂರ ಜಾವೆಲಿನ್‌ ಎಸೆಯುವ ಮೂಲಕ ಮೊದಲ ಪ್ರಯತ್ನದಲ್ಲೇ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದಿದ್ದರು.  ಮೊದಲ ಪ್ರಯತ್ನದಲ್ಲಿಯೇ ಈ ಪರಿಯಾದ ಸಾಧನೆ ಮಾಡಿದರೆ ಖಂಡಿತವಾಗಿಯೂ ಈ ಬಾರಿಯ ಫೈನಲ್‌ನಲ್ಲಿ 90 ಮೀಟರ್‌ ಗಿಂತಲು ಅಧಿಕ ದೂರ ಎಸೆದು ಡಬಲ್‌ ಧಮಾಕಾ ಮಾಡುತ್ತಾರೆ ಎಂದೇ ಕೇವಲ ಭಾರತದ ಕ್ರೀಡಾಭಿಮಾನಿಗಳಲ್ಲದೇ ಇಡೀ ವಿಶ್ವದ ಕ್ರೀಡಾಭಿಮಾನಿಗಳ ನಿರೀಕ್ಷೆಯಾಗಿತ್ತು. ನೀರಜ್ ಅವರಿಗಿಂತಲೂ ಈ ಮುನ್ನಾ ಜೆಕ್‌ ಗಂರಾಜ್ಯದ ವಡ್ಲೆಜ್ ಜಾಕೂಬ್ 90.88 ಮೀ, ಜರ್ಮನಿಯ ಪೀಟರ್ಸ್ ಆಂಡರ್ಸನ್ 93.07 ಮೀ, ಟ್ರಿನಿಡಾಡ್ ಮತ್ತು ಟೊಬಾಗೊದ ವಾಲ್ಕಾಟ್ ಕೆಶೋರ್ನ್ 90.16 ಮೀ, ಪಾಕಿಸ್ತಾನದ ನದೀಮ್‌ ಅರ್ಷದ್ 90.18 ಮೀ, ಕೀನಾದ ಜೂಲಿಯಸ್‌ 92.72 ಮೀಟರ್ ದೂರ ಎಸೆದು ದಾಖಲೆ ನಿರ್ಮಿಸಿದ್ದರೂ, ನೀರಜ್ ಅವರು ಜಾವೆಲಿನ್‌ ಎಸೆಯುವಾಗಿನ ಆತ್ಮವಿಶ್ವಾಸ, ವೇಗ ಮತ್ತು ಅವರ ಟೆಕ್ನಿಕ್‌ ಉಳಿದವರಿಗಿಂತಲೂ ತುಂಬಾ ವಿಭಿನ್ನವಾಗಿದ್ದ ಕಾರಣ ಉಳಿದ ಪ್ರತಿಸ್ಪರ್ಧಿಗಳು ಎದೆಯಲ್ಲಿ ಖಂಡಿತವಾಗಿಯೂ ನಡುಕ ಹುಟ್ಟಿಸಿದ್ದರು ಎಂದರೂ ತಪ್ಪಾಗದು.  ಹಾಗಾಗಿಯೇ ಈ ಬಾರಿ ನಿಶ್ಚಿತವಾಗಿಯೂ ನೀರಜ್‌ ಚೋಪ್ರ ಅವರಿಂದ  90 ಮೀಟರ್‌ ಗಿಂತಲೂ ಅಧಿಕ ದೂರದ ಎಸೆತವನ್ನು ಪ್ರತಿಯೊಬ್ಬರೂ ನಿರೀಕ್ಷಿಸುತ್ತಿದ್ದರು,

ಈ ಬಾರಿಯ ಒಲಂಪಿಕ್ಸಿನಲ್ಲಿ ಭಾರತದ ಆಟಗಾರರ ಪ್ರದರ್ಶನ ಕಳೆದ ಬಾರಿಗಿಂತಲೂ ಅತ್ಯಂತ ಕಳೆಪೆಯಾಗಿತ್ತು. ಹೆಚ್ಚಿನ ಪದಗಳನ್ನು ನಿರೀಕ್ಷಿಸಿದ್ದ ಶೂಟಿಂಗ್ ನಲ್ಲಿ ಮನು ಭಾಕರ್ ಅವರು ಗಳಿಸಿದ 2 ಕಂಚು ಮತ್ತು ಸ್ವಪ್ನಿಲ್ ಕಸಾಲೆಯ 1 ಕಂಚು  ಪದಕಗಳಾದರೆ, ಹಾಕಿ, ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್, ಕುಸ್ತಿ ಹಾಗೂ ಭಾರ ಎತ್ತುವುದರಲ್ಲಿ ಈ ಬಾರಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗಿದ್ದರೂ, ತಾನೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ ದುರಾದೃಷ್ಠವಶಾತ್ ಎಲ್ಲವೂ ತಲೆಕೆಳಗಾಗಿತ್ತು.  ಅಮೋಘ ಪ್ರದರ್ಶನದ ಮೂಲಕ ಮಹಿಳಾ ಕುಸ್ತಿಯಲ್ಲಿ ಫೈನಲ್ ತಲುಪಿ ಇನ್ನೇನು ಪದಕಕ್ಕೆ ಒಂದೇ ರಾತ್ರಿ ಬಾಕಿ ಇದೇ ಎನ್ನುವಾಗಲೇ, ಸ್ವಯಂಕೃತಾಪರಾಧದಿಂದಾಗಿ ವಿನೇಶ್ ಪೋಗಟ್ ಫೈನಲ್ ಪಂದ್ಯದಿಂದ ಅನರ್ಹಗೊಂಡ ಬೇಸರವಿದ್ದರೂ, ಹಾಕಿಯಲ್ಲಿ ಸ್ಪೇನ್ ದೇಶದ ವಿರುದ್ದ  ಅಮೋಘವಾಗಿ ಆಟವಾಡಿ 2-1ರ ಅಂತದಿಂದ ಗೆದ್ದು 4ನೇ ಕಂಚಿನ ಪದಕವನ್ನು ಗಳಿಸಿದ ಸಂಭ್ರಮವಿದ್ದರೂ, ಎಲ್ಲರ ಮನಸ್ಸು  ಅದೇ ದಿನದ ತಡರಾತ್ರಿಯ ಫೈನಲ್ ನಲ್ಲಿ ಅರೇ ನಮ್ಮ ನೀರಜ್ ಚೋಪ್ರಾ ಇದ್ದಾನಲ್ಲಾ ಬಿಡಿ. ಈ ಬಾರಿ ಮತ್ತೊಮ್ಮೆ ಭಾರತದ ಪರ ಚಿನ್ನದ ಪದಕವನ್ನು ಗೆದ್ದೇ ಗೆಲ್ಲುತ್ತಾನೆ ಎಂಬ ಭರವಸೆ ಎಲ್ಲರಲ್ಲೂ ಮನೆ ಮಾಡಿತ್ತು.

ಇವೆಲ್ಲದರ ಮಧ್ಯೆ ಸದ್ದಿಲ್ಲದೇ ಪಾಕಿಸ್ತಾನದ ಅರ್ಶದ್ ನದೀಮ್‌ ತನಗೆ ಜಿದ್ದಾಜಿದ್ದಿನ ಟಕ್ಕರ್ ನೀಡಲು ಸಿದ್ದನಾಗಿದ್ದಾನೆ ಎಂಬುದನ್ನು ನೀರಜ್ ಮರೆತಂತೆ ಕಾಣುತ್ತಿತ್ತು. ಕಳೆದ ಬಾರಿಯ ಒಲಂಪಿಕ್ಸ್ ಮತ್ತು ವಿವಿಧ ಪಂದ್ಯಗಳಲ್ಲಿಯೂ ಇವರಿಬ್ಬರ ನಡುವೆಯೇ ಸ್ಪರ್ಧೆ ನಡೆದಿದ್ದು ಅದರಲ್ಲಿ ನೀರಜ್ ಸುಲಭವಾಗಿ ಗೆದ್ದಿದ್ದ ಕಾರಣ,  ನೀರಜ್‌ ಚೋಪ್ರಾ ಈ ಬಾರಿಯೂ ತಮ್ಮ ಬಂಗಾರವನ್ನು ಉಳಿಸಿಕೊಳ್ಳಲೆಂದೇ ಮೈದಾನಕ್ಕೆ ಅತ್ಯುತ್ಸಾಹದಿಂದ ಇಳಿದಿದ್ದರು.

neeraj4ಆದರೆ ಕೆಲವೊಮ್ಮೆ ಅತಿಯಾದ ಆತ್ಮ ವಿಶ್ವಾಸವೂ, ತಪ್ಪುಗಳಿಗೆ ಎಡೆಮಾಡಿಕೊಡುತ್ತದೆ ಎಂಬುದನ್ನು ಅರಿತೇ ನಮ್ಮ ಹಿರಿಯರು ಸದಾ ಕಾಲವೂ ತಗ್ಗಿ ಬಗ್ಗೀ ನಡೆಯಬೇಕು ಎಂದು ಹೇಳುತ್ತಾರೆ. ಆದರೆ ಫೈನಲ್‌ಗೆ ಅರ್ಹತೆ ಪಡೆದ 12 ಅಥ್ಲೀಟ್‌ಗಳಿಗೂ ತಲಾ ಮೂರು ಬಾರಿ ಜಾವೆಲಿನ್ ಎಸೆಯುವ ಅವಕಾಶ ಸಿಕ್ಕಿದಾಗ, ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ ಉಳಿದವರಿಗೆಲ್ಲರಿಗಿಂತಲೂ ದೂರವಾಗಿ 89.34 ಮೀಟರ್ ಎಸೆದಿದ್ದರೆ ಉಳಿದೆಲ್ಲಾ ಪ್ರತಿಸ್ಪರ್ಧಿಗಳು ಅದರ ಆಸುಪಾಸಿನಲ್ಲೂ ಇರದೇ ಇದ್ದದ್ದು ಸ್ಟಾರ್‌ ನೀರಜ್‌ ಚೋಪ್ರಾ ಅವರ ಅತಿಯಾದ ಆತ್ಮವಿಶ್ವಾಸ ಹೆಚ್ಚಿಸಿತ್ತು ಅದೇ ಅತ್ಯುತ್ಸಾಹದಿಂದಲೇ ಅವರ ಮೊದಲ ಪ್ರಯತ್ನದಲ್ಲಿ ಫೌಲ್ ಆಗುವಂತೆ ಮಾಡಿತ್ತು. ಬಹುಶಃ ಇದರ ಸಂಪೂರ್ಣ ಲಾಭಾವನ್ನು ಪಡೆದ ಪಾಕಿಸ್ತಾನದ 32 ವರ್ಷದ ಅರ್ಶದ್ ನದೀಮ್‌ ತಮ್ಮ ಎರಡನೇ ಪ್ರಯತ್ನದಲ್ಲಿ 92.97 ಮೀಟರ್‌ ದೂರ ಜಾವೆಲಿನ್‌ ಎಸೆಸುವ ಮೂಲಕ ತಮ್ಮದೇ ಹಿಂದಿನ ದಾಖಲೆಯನ್ನು ಅಳಸಿ ಹೊಸಾ ವಿಶ್ವದಾಖಲೆಯನ್ನು ಮಾಡುತ್ತಿದ್ದಂತೆಯೇ ಸಹಜವಾಗಿ ನೀರಜ್‌ ಚೋಪ್ರಾ ಅವರ ಮೇಲೆ ಒತ್ತಡ ಬಿದ್ದಿತಾದರೂ ತಮ್ಮ ಎರಡನೇ ಪ್ರಯತ್ನದಲ್ಲಿ 89.45 ಮೀಟರ್‌ ದೂರ ಎಸೆಯುವ ಮೂಲಕ ಚಿನ್ನದ ಪದಕದ ಆಸೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡರು.

WhatsApp Image 2024-08-09 at 19.12.16ಅಂತಿಮವಾಗಿ ಉತ್ತಮ ದೂರ ಎಸೆದ ಎಂಟು ಅಥ್ಲೀಟ್‌ಗಳಿಗೆ ಅಂತಿಮ ಅವಕಾಶ ನೀಡಿದರೂ, ಎಲ್ಲರ ದೃಷ್ಟಿ ಭಾರತ ಮತ್ತು ಪಾಕೀಸ್ಥಾನದ ಆಟಗಾರರ ಮೇಲೇ ಇದ್ದು ಉಳಿದ ಆರು ಅಥ್ಲೀಟ್‌ಗಳು ಒಂದು ರೀತಿಯ ಡಮ್ಮಿ ಆದರು ಎಂದರೂ ತಪ್ಪಾಗದು.  ನೀರಜ್ ಅವರ ಕಡೆಯ ಎಸೆತದಲ್ಲಿ ಅರ್ಶದ್ ಆವರ 92.97 ಮೀಟರ್‌ ಬಿಡಿ ಕನಿಷ್ಟ ಪಕ್ಷ 90 ಮೀಟರ್‌ ದೂರವನ್ನಾದರೂ ದಾಟಿಯೇ ತೀರುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದಾಗಲೇ, ಮತ್ತೊಮ್ಮೆ ನೀರಜ್‌ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಕೊಂಚ ಎಡವುದರ ಮೂಲಕ ಅಂತಿಮವಾಗಿ ಬೆಳ್ಳಿಯ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.54 ಮೀಟರ್ ಎಸೆದ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಕಂಚಿನ ಪದಕ ಗೆದ್ದರು.

ನೀರಜ್ ಚೋಪ್ರಾ ಬಂಗಾರ ಪದಕ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿಯೇ ಅಷ್ಟೊಂದು ತಡರಾತ್ರಿಯಲ್ಲೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡ ಅವರ ಪ್ರದರ್ಶನವನ್ನು ನೋಡುತ್ತಿದ್ದ ಕೋಟ್ಯಾಂತರ ಭಾರತೀಯರಿಗೆ ಅಬ್ಬಾ ಕನಿಷ್ಟ ಪಕ್ಷ ಬೆಳ್ಳಿಯ ಪದಕವಾದರೂ ಸಿಕ್ಕಿತಲ್ಲಾ ಎಂಬ ಸಮಾಧಾನವಾದರೂ, ಕ್ರೀಡೆಯಲ್ಲಿ ಯಾವುದೇ ರೀತಿಯ ದ್ವೇಷ ಇರಬಾರದೂ ಎಂದು ಎಷ್ಟೇ ಯೋಚಿಸಿದರೂ, ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಪೀಸ್ಥಾನದ ವಿರುದ್ಧ ಸೋಲಾಯಿತಲ್ಲಾ ಎನ್ನುವ ನಿರಾಶೆ ಮೂಡಿದ್ದಂತೂ ಸತ್ಯ. ತಮ್ಮ ಎರಡನೇ ಪ್ರಯತ್ನದಲ್ಲಿಯೇ 92.97 ಮೀಟರ್‌ ದೂರ ಜಾವೆಲಿನ್‌ ಎಸೆಯುವ ಮೂಲಕ ಮೊದಲ ಸ್ಥಾನವನ್ನು ಪಕ್ಕಾ ಮಾಡಿಕೊಂಡಿದ್ದಲ್ಲದೇ ಉಳಿದ ಎಲ್ಲಾ ಪ್ರತಿಸ್ಪರ್ಧಿಗಳ ಮೇಲೆ ಮಾನಸಿಕ ಒತ್ತಡವನ್ನು ಹೇರಿದ್ದ ಅರ್ಷದ್‌ ನದೀಮ್‌,  ಪಾಕೀಸ್ಥಾನದ ಪರ 1992ರಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ  32 ವರ್ಷಗಳ ನಂತರ ಬಂಗಾರ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಲ್ಲದೇ, ಆ ದೇಶದ ಪದಕದ ಬರ ನೀಗಿಸಿದ್ದಕ್ಕೆ ಖಂಡವಾಗಿಯೂ ಅವರು ಅಭಿನಂದನಾರ್ಹರೇ ಆದರೂ, ಮನಸ್ಸಿಗಂತೂ ನೆಮ್ಮದಿ ಇಲ್ಲಾ ಎನ್ನುವುದಂತೂ ಸತ್ಯ.

WhatsApp Image 2024-08-09 at 19.11.52ಮಧ್ಯರಾತ್ರಿ 1.15ರ ಸುಮಾರಿಗೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ನೀರಜ್ ಚೋಪ್ರಾರಿಂದ ಚಿನ್ನದ ಪದಕವನ್ನು ನಿರೀಕ್ಷಿಸುತಿದ್ದ  ಹರಿಯಾಣದ ಪಾಣಿಪತ್‌ನ ಖಂಡಾರಾದಲ್ಲಿರುವ ಅವರ ಕುಟುಂಬ ಮತ್ತು ನೆರೆ ಹೊರೆಯವರು ಖುಷಿಯಿಂದ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ ಎಂದು ತಿಳಿದು ಬಂದಿದೆ.  ನಮ್ಮ ಸನಾತನ ಧರ್ಮದ ಮೂಲಧಾರವಾದ ವಸುದೈವ ಕುಟುಂಬಕಂ ಎನ್ನುವ ಧ್ಯೇಯಕ್ಕೆ ರಾಯಬಾರಿಗಳಂತೆ ನೀರಜ್ ಚೋಪ್ರಾ ಅವರ ತಂದೆ ತಾಯಿಯರು, ಪ್ರತಿಯೊಬ್ಬರಿಗೂ ಒಂದು ದಿನವಿದೆ, ಇಂದು ಪಾಕಿಸ್ತಾನದ ದಿನವಾಗಿತ್ತು ಹಾಗಾಗಿ ಅವರು ಚಿನ್ನದ ಪದಕ ಗೆದ್ದಿದ್ದರೂ, ನಮ್ಮ ಮಗ ಬೆಳ್ಳಿ ಪದಕ ಗೆದ್ದಿರುವುದು ನಮಗೆ ಹೆಮ್ಮೆಯನ್ನು ತಂದಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಹಾಗೆ ಮಾತನ್ನು ಮುಂದುವರೆಸಿ, ನಮ್ಮ ಮಗನಿಗೆ ಮೊದಲೇ ಗಾಯವಾಗಿತ್ತು. ಅಂತಹ ಗಾಯದ ಸಮಸ್ಯೆಯಿಂದಾಗಿಯೇ ಚಿನ್ನದ ಪದಕ ಗೆಲ್ಲಲು ಹಿನ್ನಡೆ ಆಗಿರಬಹುದು ಎಂದು ನೀರಜ್ ಚೋಪ್ರಾ ಅವರ ತಂದೆ ಸತೀಶ್ ಕುಮಾರ್ ಚೋಪ್ರಾ ಅವರು ಹೇಳಿದರೆ, ನಮಗೆ ಬೆಳ್ಳಿಯೂ ಬಂಗಾರಕ್ಕೆ ಸಮಾನ. ಗಾಯಗೊಂಡಿದ್ದಾಗಲೂ ಇಂತಹ ಒಳ್ಳೆಯ ಪ್ರದರ್ಶನದಿಂದ ನಮಗೆ ಸಂತೋಷವಾಗಿದೆ ಎಂದು ತಾಯಿ ಸರೋಜ್ ದೇವಿಯವರು ತೃಪ್ತಿ ಪಟ್ಟುಕೊಂಡಿರುವುದು ಹೆತ್ತ ಕರುಳಿನ ವೇದನೆಯನ್ನು ಸೂಚಿಸುತ್ತದಾದರೂ, ಗಾಯದಿಂದ ಬಳಲುತ್ತಿರುವಾಗ ಇಂತಹ ಅಪಾಯಕ್ಕೆ ಕೈ ಹಾಕಿ ಕನಿಷ್ಠ ಪಕ್ಷ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ  140 ಕೋಟಿ ಭಾರತೀಯರ ಮಾನವನ್ನು ಉಳಿಸಿದ್ದಕ್ಕೆ ಅಭಿನಂದಿಸಲೇ ಬೇಕಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment