ಕನ್ನಡದ ಖುಶ್ವಂತ್ ಸಿಂಗ್, ಎಂ.ಎಸ್.‌ ನರಸಿಂಹಮೂರ್ತಿ

msn2ಶ್ರೀ ಎಂ.ಎಸ್.‌ ನರಸಿಂಹಮೂರ್ತಿ ಅಥವಾ ಎಲ್ಲರೂ ಪ್ರೀತಿಯಿಂದ ಕರೆಯುವ ಎಂ.ಎಸ್.‌ ಎನ್. ಎಂದಾಕ್ಷಣ ನಮ್ಮೆಲ್ಲರಿಗೂ ಥಟ್ ಅಂತಾ ನೆನಪಾಗೋದೇ ಅವರ ಹಾಸ್ಯ. ಅವರ ಹಾಸ್ಯ ಸಾಹಿತ್ಯವನ್ನು ನಾಡಿನ ಬಹುತೇಕ ಎಲ್ಲಾ ದೈನಿಕ,ವಾರ ಮತ್ತುಮಾಸ ಪತ್ರಿಕೆಗಳಲ್ಲಿ ಅಷ್ಟೇ ಅಲ್ಲದೇ ರೇಡೀಯೋ ಮತ್ತು ಟಿವಿಗಳಲ್ಲಿಯೂ ಓದಿದ್ದೇವೆ, ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆಚ್ಚರಿಯ ವಿಷಯವೆಂದರೆ, ತಮ್ಮ ಯೌವನದಿಂದಲೇ ರಾಷ್ಟ್ರೀಯ ವಿಚಾರಧಾರೆಯುಳ್ಳ ಅನೇಕ ಗಂಭೀರವಾದ ಸಾಹಿತ್ಯವನ್ನು ಬರೆಯತ್ತಿದ್ದ ಶ್ರೀ ನರಸಿಂಹ ಮೂರ್ತಿಗಳು ಪ್ರಸ್ತುತ ನಾಡಿಗೆ ಚಿರಪರಿಚಿತ ಹಾಸ್ಯ ಸಾಹಿತಿ ಆಗುವ ಹಿಂದೆಯೂ ಒಂದು ರೋಚಕವಾದ ತಿರುವಿದ್ದು ಅದನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಮೂಲಕ ತಿಳಿಯೋಣ ಬನ್ನಿ.

msn4ಅಂದಿನ ಅವಿಭಜಿತ ಕೋಲಾರ ಜಿಲ್ಲೆಯ ಮಾಲೂರಿನ ಸಂಪ್ರದಾಯಸ್ಥ ಕುಟುಂಬದ ಶ್ರೀ ಎಂ.ಎ.ಸೂರಪ್ಪ ಮತ್ತು ಸಾವಿತ್ರಮ್ಮ ದಂಪತಿಗಳಿಗೆ 1947ರ ಅಕ್ಟೋಬರ 20ರಂದು (ಕಳೆದ ವಾರವಷ್ಟೇ 75ವರ್ಷಗಳನ್ನು ಪೂರೈಸಿದ್ದಾರೆ) ಜನಿಸಿದ ಮಗು ನೋಡಲು ಮುದ್ದು ಮುದ್ದಾಗಿದ್ದ ಕಾರಣ, ಒಳ್ಳೆಯ ಕ್ಷಾತ್ರ ತೇಜವನ್ನು ಪಡೆಯಲಿ ಎಂಬ ಆಶಯದಿಂದ ಮನೆ ದೇವರಾದ ನರಸಿಂಹಸ್ವಾಮಿಯನ್ನು ನೆನೆದು  ನರಸಿಂಹಮೂರ್ತಿ ಎಂದು ಹೆಸರಿಡುತ್ತಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಾದ ಮಾಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿ ನಂತರ  ಪ್ರೌಢ ಶಿಕ್ಷಣವನ್ನು ಅದೇ ಊರಿನ ಮುನ್ಸಿಪಲ್ ಹೈಸ್ಕೂಲಿನಲ್ಲಿ  ಉತ್ತಮ ದರ್ಜೆಯಲ್ಲೇ ಮುಗಿಸುತ್ತಾರೆ. ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯರೇ ಮೊದಲ ಗುರುಗಳು ಎನ್ನುವಂತೆ ಶಾಲೆಯಲ್ಲಿ  ಅಕ್ಷರಾಭ್ಯಾಸವನ್ನು ಕಲಿತರೆ, ಮನೆಯಲ್ಲಿ ಅವರ ಪೋಷಕರಿಂದ. ಒಳ್ಳೆಯ ಸಂಸ್ಕಾರ, ಸಂಪ್ರದಾಯ ಮತ್ತು ರಾಷ್ಟ್ರಪ್ರೇಮವನ್ನು ಕಲಿಯುತ್ತಾರೆ.  ಆಟ ಪಾಠಗಳಲ್ಲಿ  ಅತ್ಯಂತ ಚುರುಕಾಗಿದ್ದ ನರಸಿಂಹ ಮೂರ್ತಿಗಳ ಬಹುಮುಖ ಪ್ರತಿಭೆಯನ್ನು ಗುರುತಿಸಿದ ಅವರ ಗುರುಗಳೂ ಸಹಾ ಅದಕ್ಕೆ ಪೂರಕವಾಗಿ ಸ್ಪಂದಿಸಿದಲ್ಲದೇ, ಚಿಕ್ಕವಯಸ್ಸಿನಲ್ಲೇ ಆವರಿಗೆ ಅನೇಕ ರಾಷ್ಟ್ರಭಕ್ತರ ಪುಸ್ತಕಗಳನ್ನು ಓದುವ ಚಟವನ್ನು ಹತ್ತಿಸುತ್ತಾರೆ. ಹೀಗೆ ಬಾಲ್ಯದಲ್ಲೇ ನೂರಾರು ಪುಸ್ತಕಗಳನ್ನು ಓದಿದ್ದರಿಂದ  ಹೈಸ್ಕೂಲಿನಲ್ಲಿ ಇರುವಾಗಲೇ ಅನೇಕ ಕವನಗಳು ಮತ್ತು  ಸಣ್ಣ ಕಥೆಗಳನ್ನು ಬರೆದು ಅವುಗಳಲ್ಲಿ ಒಂದೆರೆಡು ಸ್ಥಳೀಯ ಪತ್ರಿಕೆಗಳಲ್ಲಿಯೂ ಪ್ರಕಟವಾಗಿ ನರಸಿಂಹ ಮೂರ್ತಿಗಳು ಊರಿಗೆಲ್ಲಾ ಚಿರಪರಿಚಿತರಾಗುತ್ತಾರೆ.

bharata_Bharati_booksತಮ್ಮ ಹತ್ತನೇ ತರಗತಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜು ಸೇರಿದ ನಂತರ ಅವರ ಜೀವನದ ಎರಡನೇ ಮಜಲು ಆರಂಭವಾಗುತ್ತದೆ. ತರುಣ ಎಂ.ಎಸ್.ಎನ್ ಅವರ ರಾಷ್ಟ್ರೀಯತೆ ಮತ್ತು ಸಾಹಿತ್ಯದ ಅಭಿರುಚಿಯ ಅರಿವಿದ್ದ ಶ್ರೀ ಎಲ್. ಎಸ್. ಶೇಷಗಿರಿರಾಯರು ರಾಷ್ಟ್ರೋತ್ಥಾನ ಪುಸ್ತಕ ಪ್ರಕಾಶನಕ್ಕೆ ಮಕ್ಕಳಿಗಾಗಿಯೇ ತಾವು ಸಂಪಾದಿಸುತ್ತಿದ್ದ ನಾಡಿನ ಇತಿಹಾಸ ಪುರುಷರು ಮತ್ತು ಪುಣ್ಯಪುರುಷರ ಸಣ್ಣ ಸಣ್ಣ ಪುಸ್ತಕಗಳಾದ ಭಾರತ ಭಾರತಿ ಪುಸ್ತಕ ಸಂಪುಟದಲ್ಲಿ ಕೆಲವು ಪುಸ್ತಕಗಳನ್ನು  ಬರೆಯಲು ಎಂ.ಎಸ್.ಎನ್  ಅವರಿಗೆ ಪ್ರೋತ್ಸಾಹಿಸುತ್ತಾರೆ. ಆರಂಭದಲ್ಲಿ ಸ್ವಲ್ಪ ಹಿಂಜರಿದರಾದರೂ ನಂತರ ದಿನಗಳಲ್ಲಿ ನಾವೂ ನೀವು ಓದಿ ಅದರಿಂದ ನಮ್ಮ ಬೌದ್ಧಿಕ ಮಟ್ಟವನ್ನು ಎತ್ತರಿಸಿಕೊಂಡ ಭಾರತ ಭಾರತಿಯ ಹತ್ತಾರು ಪುಸ್ತಕಗಳ ಲೇಖಕರಾಗಿದ್ದಲ್ಲದೇ, ಉತ್ಥಾನ ಮಾಸಪತ್ರಿಕೆಯ ಐತಿಹಾಸಿಕ ಏಕಾಂಕ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ನಂತರ ಅವರ ಗುರುಗಳು ನೋಡಪ್ಪಾ ನರಸಿಂಹ ಮೂರ್ತಿ, ಗಂಭೀರವಾದ ಸಾಹಿತ್ಯವನ್ನು ಯಾರು ಬೇಕಾದರೂ ಬರೆಯುತ್ತಾರೆ. ಆದರೆ ಜನರ ದುಃಖವನ್ನು ಮರೆಸಿ, ಕೆಲ ಕಾಲ ಅವರ ಮುಖದಲ್ಲಿ ನಗುವನ್ನು ಅರಳಿಸುವ ಹಾಸ್ಯ ಸಾಹಿತ್ಯವನ್ನು ಬರೆಯುವವರು ಬಹಳ ವಿರಳ. ಹಾಗಾಗಿ ನೀನೇಕೆ ಹಾಸ್ಯ ಸಾಹಿತ್ಯವನ್ನು ಬರೆಯಬಾರದು? ಎಂದು ಹೇಳಿದ್ದನ್ನೇ ಶಿರಸಾವಹಿಸಿ  ಅವರ ಮೊದಲ ಹಾಸ್ಯ ಲೇಖನ  ಸುಧಾ ವಾರಪತ್ರಿಕೆಯಲ್ಲಿ ಪ್ರಕಟ ಆಗುತ್ತಿದ್ದಂತೆಯೇ,  ಅಂದಿನಿಂದ  ಇಂದಿನ ವರೆವಿಗೂ ತಿರುಗಿ ನೋಡುವ ಪ್ರಮೇಯವೇ ಬಾರದೇ, ಹಾಸ್ಯ ಎಂದರೆ ಎಂ.ಎಸ್.ಎನ್.  ಎಂ.ಎಸ್.ಎನ್ ಎಂದರೆ ಹಾಸ್ಯ ಎನ್ನುವಂತಾಗಿರುವುದು ಅವರ ಹೆಗ್ಗಳಿಕೆಯಾಗಿದೆ.

bhagat_singhಇದೇ ಸಮಯದಲ್ಲೇ ಭಗತ್ ಸಿಂಗ್ ಅವರ ತಾಯಿ ಶ್ರೀಮತಿ ವಿದ್ಯಾವತಿ ದೇವಿ ಅವರು 1970ರಲ್ಲಿ ಬೆಂಗಳೂರಿಗೆ ಭೇಟಿ ನೀಡಿ ಟೌನ್ ಹಾಲ್ ನಲ್ಲಿ ನೆರೆದಿದ್ದ ಭಾರೀ ಜನಸ್ಥೋಮವನ್ನು ಉದ್ದೇಶಿಸಿ ದೇಶಭಕ್ತಿಯನ್ನು ಅರಳಿಸುವಂತಹ ಉತ್ಸಾಹ ಭರಿತ ಮಾತುಗಳನ್ನು ಆಡಿ ಅಂತಿಮವಾಗಿ ನೆರೆದಿದ್ದವರೆಲ್ಲರೂ ಸೇರಿ ಒಕ್ಕೊರಲಿನಿಂದ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಮುಗಿಲು ಮುಟ್ಟುವಂತೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗಿದಂತಹ ನಭೂತೋ ನಭವಿಷ್ಯತಿ ಎನ್ನುವಂತಹ ಆ ಸುಂದರ ಕಾರ್ಯಕ್ರಮದ ಆಯೋಜಕರಲ್ಲಿ  ಎಂ.ಎಸ್.ಎನ್ ಸಹಾ ಒಬ್ಬರಾಗಿದ್ದು ಆ ಮಹಾನ್ ದೇಶಭಕ್ತನ ತಾಯಿಯನ್ನು ಹತ್ತಿರದಿಂದ ನೋಡುವಂತಹ ಸೌಭಾಗ್ಯವನ್ನು ಪಡೆದ  ಅವರೇ ಧನ್ಯರು.ಸುಂದರ ಕ್ಷಣಗಳನ್ನು ಎಂ.ಎಸ್.ಎನ್. ಇಂದಿಗೂ ಕಣ್ಣಿಗೆ ಕಟ್ಟುವ ಹಾಗೆ ಹೇಳುವುದನ್ನು ಕೇಳುವುದಕ್ಕೇ ಕರ್ಣಾನಂದ. 

WhatsApp Image 2024-10-28 at 21.09.27ಮುಂದೆ ಮೈಸೂರು ವಿಶ್ವವಿದ್ಯಾನಿಲಯದಿಂದ ತಮ್ಮ  ಎಂ.ಎ. ಪದವಿಯನ್ನು ಮುಗಿಸಿ ಆದಾಗಲೇ ಪರಿಚಯವಿದ್ದ ರಾಷ್ಟ್ರೋತ್ಥಾನ ವಾರ್ತಾ ಪತ್ರಿಕೆಯ ಸಂಪಾದಕರಾಗಿ ಅಧಿಕೃತವಾಗಿ ತಮ್ಮ ಕೆಲಸವನ್ನು ಆರಂಭಿಸಿ ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಕೆಲಸ ಸಿಕ್ಕಿ  ಗುಮಾಸ್ತರಿಂದ ಆರಂಭವಾಗಿ  ಮ್ಯಾನೇಜರ್ ವರೆಗಿನ  ಹುದ್ದೆಯನ್ನು ಏರಿದರೂ, ತಮ್ಮ ವೃತ್ತಿ ಮತ್ತು ಪ್ರವೃತ್ತಿ ಎರಡನ್ನೂ ಸಮ ಪ್ರಮಾಣದಲ್ಲಿ ಮುಂದುವರೆಸಿಕೊಂಡು ಹೋದಂತಹ ಕೀರ್ತಿ ಅವರದ್ದು.

WhatsApp Image 2024-10-28 at 21.30.20 (1)
1000 ಪುಟಗಳ ಸಮಗ್ರ ಹಾಸ್ಯ ಕೃತಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಬಿಡುಗಡೆ ಮಾಡಿದ ಸಂದರ್ಭ

ಬ್ಯಾಂಕಿನ ಕೆಲಸದ ನಿಮಿತ್ತ ಊರಿನಿಂದ ಊರಿಗೆ ವರ್ಗಾವಣೆ ಆದಾಗ, ತಮ್ಮ ದೈನಿಂದಿನ ಚಟುವಟಿಕೆಗಳಲ್ಲಿ ಆಗುತ್ತಿದ್ದ ಸನ್ನಿವೇಶಗಳನ್ನೇ ಹಾಸ್ಯಮಯವಾಗಿ ಅಕ್ಷರದಲ್ಲಿ ಪೋಣಿಸಿ ನಮ್ಮೆಲ್ಲರಿಗೂ ಉಣಬಡಿಸಿದವರು ಎಂ. ಎಸ್. ಎನ್.   ಹೀಗೆ  ಶ್ರಮದಾನ, ಕಾನಿಷ್ಕೋಪಾಖ್ಯಾನ, ಬಾಬ್ಬಿ, ಗೂಳಿಕಾಳಗ, ಬಾತ್‌ರೂಮಿನಲ್ಲಿ ಸರಸ, ವೈಕುಂಠಕ್ಕೆ ಬುಲಾವ್ ನಂತಹ ಲೇಖನಗಳಲ್ಲದೇ,  ಮಕ್ಕಳಿಗಾಗಿ ಮೇಡಂ ಕಾಮ, ಬಾಲಗಂಗಾಧರ ತಿಲಕ್, ಅಶುತೋಷಮುಖರ್ಜಿ, ವಿದ್ಯಾವತಿ ದೇವಿ ಮತ್ತು ಹಾಸ್ಯ ಕಾದಂಬರಿಯಾಗಿ ಮಂದಸ್ಮಿತ ಅಲ್ಲದೇ ಸನ್ಮಾನ ಸುಖ, ಲಾಕೌಟ್ ಅಲ್ಲ ನಾಕೌಟ್, ಪ್ರೇಮಚೂರ್ಣ, ಕಿವುಡು ಸಾರ್ ಕಿವುಡು ಮುಂತಾದ ಹಾಸ್ಯ ನಾಟಕಗಳೂ ಸೇರಿದಂತೆ ಅವರ ಅನೇಕ  ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಿಗೆಲ್ಲಾ ಪ್ರಕಟವಾಗಿ ಕನ್ನಡದ ಪ್ರಖ್ಯಾತ ಹಾಸ್ಯ ಸಾಹಿತಿಗಳು ಎನಿಸಿಕೊಂಡರು.

msn5ಇನ್ನು 90ರ ದಶಕದಲ್ಲಿ ದೂರದರ್ಶನದಲ್ಲಿ ಧಾರಾವಾಹಿಗಳು ಆರಂಭವಾಗುತ್ತಿದ್ದಂತೆಯೇ ರಮೇಶ್ ಭಟ್ ಮತ್ತು ಗಿರಿಜಾ ಲೋಕೇಶ್ ಅಭಿನಯಯದ ಕ್ರೇಜಿ ಕರ್ನಲ್ ಧಾರಾವಾಹಿಗೆ ಸಾಹಿತ್ಯ ಮತ್ತು ಸಂಭಾಷಣೆ ಬರೆಯುವುದರೊಂದಿಗೆ ಅವರು ಕೀರ್ತಿ ಶಿಖರದ ತುತ್ತ ತುದಿಯತ್ತ ಧಾಪುಗಾಲು ಹಾಕತೊಡಗಿದರು. ಎಂ.ಎಸ್.ಎನ್ ರಲ್ಲಿದ್ದ ದೈತ್ಯ ಹಾಸ್ಯ ಪ್ರಜ್ಞೆಯನ್ನು ಕನ್ನಡ ಮತ್ತೊಬ್ಬ ಹಾಸ್ಯ ನಟ, ಪ್ರತಿಭಾವಂತ ನಿರ್ದೇಶಕ ಮತ್ತು ನಿರ್ಮಾಪಕರಾದ ಶ್ರೀ ಸಿಹಿ ಕಹಿ ಚಂದ್ರು ಅವರು ಅತ್ಯುತ್ತಮವಾಗಿ ಸದ್ಭಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಫೈನಲ್ ಕಟ್ ಪ್ರೊಡಕ್ಷನ್ ಅಡಿಯಲ್ಲಿ  ಯದ್ವಾ ತದ್ವಾ ಆನಂತರ ಪಾತು-ಸಾತು, ಒಂದೇ ಸುಳ್ಳು ಹಾಸ್ಯ ಧಾರಾವಾಹಿಗಳು ಭಾರೀ ಜನಮನ್ನಣೆ ಪಡೆಯುತ್ತಿದ್ದಂತೆಯೇ,  ಅದೇ ತಂಡ ಆರಂಭಿಸಿದ   ಕನ್ನಡದ ಮೊಟ್ಟ ಮೊದಲ ದೈನಿಕ ಧಾರಾವಾಹಿ ಪಾ.ಪ. ಪಾಂಡು 1000ಕ್ಕೂ ಅಧಿಕ ಕಂತುಗಳಲ್ಲಿ ಪ್ರದರ್ಶನಗೊಂಡರೆ ಅವರ ಮತ್ತೊಂದು ಧಾರಾವಾಹಿ  ಸಿಲ್ಲಿ ಲಲ್ಲಿ ಸಹಾ 900 ಕಂತುಗಳಲ್ಲಿ ಪ್ರದರ್ಶಿತವಾಗಿ ಹೀಗೆ ಸುಮಾರು 3000ಕ್ಕೂ ಹೆಚ್ಚಿನ ಬಿಡಿ ಬಿಡಿ ಹಾಸ್ಯ ಕತೆಗಳನ್ನು  ವಿವಿಧ ಚಾನಲ್‌ಗಳಿಗೆ ಬರೆದು ದಾಖಲೆ ನಿರ್ಮಿಸಿದ ಏಕೈಕ ಹಾಸ್ಯ ಸಾಹಿತಿ ಎನ್ನುವ ಹೆಗ್ಗಳಿಕೆ ಎಂ.ಎಸ್. ಎನ್ ಅವರದ್ದು. ಅವರ ಹಾಸ್ಯ ರಸದೌತಣ ಕಿರುತೆರೆಗಷ್ಟೇ ಸೀಮಿತವಾಗಿರದೇ, ಅತಿಮಧುರ ಅನುರಾಗ, ಗಿಡ್ಡುದಾದ, ಯಮಲೋಕದಲ್ಲಿ ವೀರಪ್ಪನ್, ತಿಮ್ಮರಾಯ, ಕತ್ತೆಗಳು ಸಾರ್ ಕತ್ತೆಗಳು ಮುಂತಾದ ಚಲನಚಿತ್ರಗಳಿಗೂ ಸಂಭಾಷಣೆ-ಸಾಹಿತ್ಯ ಬರೆಯುವ ಮೂಲಕ ಎಲ್ಲ ಕಡೆಯಲ್ಲೂ ಸೈ  ಎನಿಸಿಕೊಂಡು ಆಡು ಮುಟ್ಟದ ಸೊಪ್ಪಿಲ್ಲ  ಎಂ.ಎಸ್.ಎನ್  ಹಾಸ್ಯಲೇಖನ ತಲುಪದ ಮಾಧ್ಯಮವಿಲ್ಲಾ ಎಂದು ಜನರು ಮಾತನಾಡುವಂತಾಯಿತು.

msn3ಹೀಗೆ ವೃತ್ತಿಗಿಂತ ಪ್ರವೃತ್ತಿಯಲ್ಲೇ ಹೆಚ್ಚಿನ ಕೆಲಸಗಳು ಲಭಿಸತೊಡಗಿದ ಕಾರಣ,  ಎರಡೂ ದೋಣಿಯಲ್ಲಿ ಪಯಣಿಸುವುದು ಬಹಳ ತ್ರಾಸದಾಯಕ ಎನಿಸಿಕೊಂಡಿದ್ದರಿಂದ ಒಲ್ಲದ ಮನಸ್ಸಿನಿಂದಲೇ 2001ರಲ್ಲಿ ಬ್ಯಾಂಕಿನ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಕಲೆಗಾಗಿಯೇ ತಮ್ಮ ಜೀವನವನ್ನು ಮೀಸಲಿಟ್ಟರು.

WhatsApp Image 2024-10-28 at 21.18.01
ಕನ್ನಡ ಪತ್ರಿಕೋದ್ಯಮದ PG Diplomaದಲ್ಲಿ First Rank

ಸಾಧನೆಯ ತುತ್ತತುದಿಯಲ್ಲಿದ್ದರೂ, ಆ ವಯಸ್ಸಿನಲ್ಲಿಯೂ ಅವರಲ್ಲಿ ಕಲಿಯುವ ಹಂಬಲ ಸ್ವಲ್ಪವೂ ಕಡಿಮೆ ಆಗಿರಲಿಲ್ಲ ಎನ್ನುವುದಕ್ಕೆ ಈ ಪ್ರಸಂಗ ನಿಜಕ್ಕೂ ಸ್ಪೂರ್ತಿದಾಯಕವೇ ಸರಿ.  2001ರಲ್ಲೇ ಭಾರತೀಯ ವಿದ್ಯಾಭವನದ HB college of communication ಮೊದಲಬಾರಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ವರ್ಷದ ಸ್ನಾತಕೋತ್ತರ ಕೋಸ್ ಆರಂಭಿಸಿ, ಅಲ್ಲಿ ನಾಡಿನ ಖ್ಯಾತ ಪತ್ರಿಕೆಗಳ ಹಿರಿಯ ಪತ್ರಕರ್ತರು ಉತ್ಸಾಹಿ ಯುವಕರಿಗೆ ಪತ್ರಿಕೋದ್ಯಮದ ಪಾಠವನ್ನು ಮಾಡುವವರಿದ್ದರು. ತರಗತಿಯ ಮೊದಲ ದಿನ  ಎಂ.ಎಸ್.ಎನ್ ಸಹಾ  ಅಲ್ಲಿ ಉಪಸ್ಥಿತರಿದ್ದದ್ದನ್ನು ಗಮನಿಸಿದ ವಿದ್ಯಾರ್ಥಿಗಳು ವಾರೆ ವಾಹ್! ಎಂ.ಎಸ್.ಎನ್. ಅವರಂತಹ ಹಾಸ್ಯ ಸಾಹಿತಿಗಳಿಂದಲೂ ಕಲಿಯುವಂತಾಯಿತು ಎಂದು ಸಂತಸ ಪಟ್ಟಿದ್ದರು. ಆದರೆ ಎಂ.ಎಸ್.ಎನ್ ಅವರು ವಿದ್ಯಾರ್ಥಿಯಾಗಿ ಅಲ್ಲಿಗೆ ಬಂದಿರುವುದನ್ನು ತಿಳಿದು ಅವರ ಸಂತಸವೆಲ್ಲಾ ಕೆಲವೇ ಕ್ಷಣಗಳಲ್ಲಿ ಠುಸ್ ಎಂದಾಗಿತ್ತು. ಅಂತಹ ತರುಣ ತರುಣಿಯರ ನಡುವೆಯೂ ವಿದ್ಯೆ ಕಲಿಯಲು ವಯಸ್ಸಿನ ಹಂಗಿಲ್ಲಾ ಎಂದು, ಒಂದು ದಿನವೂ ತರಗತಿಗೆ ತಪ್ಪಿಲ್ಲದೇ ಹೋಗಿ ಅಂತಿಮ ಫಲಿತಾಂಶ ಬಂದಾಗ ಮೊದಲನೇ ರ್ಯಾಂಕ್ ನಲ್ಲಿ ಎಂ.ಎಸ್.ಎನ್  ತೇರ್ಗಡೆಯಾಗಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು.

ಸಮಯ  ಪ್ರಜ್ಞೆ ಮತ್ತು ವೃತ್ತಿಪರತೆ ಎಂಬುದಕ್ಕೆ ಎಂ.ಎಸ್.ಎನ್ ಅವರು ಅನ್ವರ್ಥ ಪ್ರತೀಕ ಎಂದರೂ ತಪ್ಪಾಗದು.  ಪ್ರಸ್ತುತವಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬೆಂಗಳೂರಿನ  ಅಧ್ಯಕ್ಷರಾಗಿರುವ ಆವರ ಜೊತೆ ಬೆಂಗಳೂರು ಮಹಾನಗರ ಕಾರ್ಯದರ್ಶಿಯಾಗಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಯಾವುದೇ  ಕಾರ್ಯಕ್ರಮವಿರಲಿ, ಕನಿಷ್ಠ ಪಕ್ಷ 15 ನಿಮಿಷಗಳ ಮೊದಲೇ ಬಹಳ ಚಂದನೆಯ ಉಡುಗೆ ತೊಡುಗೆ ತೊಟ್ಟು ಬರುವುದು ಅವರಲ್ಲಿನ ಮತ್ತೊಂದು ಮೆಚ್ಚುವಂತಹ ಗುಣ. ಅನೇಕ ಬಾರಿ ನಾವುಗಳು ಅವರನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇವೆ ಎಂದರೂ ಅದಕ್ಕೊಪ್ಪದೇ, ಅವರ ಮಡದಿಯೊಂದಿಗೆ ಅವರ ಪಾಡಿಗೆ ಅವರೇ ಕಾರ್ಯಕ್ರಮಕ್ಕೆ ಬಂದು ತಮ್ಮ ಮಾತುಗಳ ಮೂಲಕ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸುವುದಲ್ಲದೇ, ಕಾರ್ಯಕ್ರಮ ಪೂರ್ಣವಾಗುತ್ತಿದ್ದಂತೆಯೇ, ಊಟೋಪಚಾರಗಳಿಗೂ ಕಾಯದೇ ತಮ್ಮ ಪಾಡಿಗೆ ತಾವು ಹೋಗುವ ಪರಿ ನಿಜಕ್ಕೂ ಅದ್ಭುತವೇ ಸರಿ. 

ಯಾರದ್ದೇ ಕವಿಗೋಷ್ಟಿ, ಚರ್ಚಾಸ್ಪರ್ಧೆ, ಭಾಷಣಗಳೇ ಇದ್ದರೂ ಎಲ್ಲವನ್ನೂ ತಾಳ್ಮೆಯಿಂದ ಆಲಿಸಿ  ಎಲ್ಲದರ ಟಿಪ್ಪಣಿಗಳನ್ನು ಮಾಡಿಕೊಂಡು  ನಂತರ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯಾರು ಯಾವ ರೀತಿ ಮಾತನಾಡಿದರು, ಅದರಲ್ಲಿ ಯಾವುದು ಮೆಚ್ಚಿಗೆಯಾಯಿತು, ಯಾವುದನ್ನು ಹೇಗೆ ಬರೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬುದೆಲ್ಲವನ್ನೂ ಸರಳವಾಗಿ ತಿಳಿಸುತ್ತಾ ಉದಯೋನ್ಮುಖ ಪ್ರತಿಭೆಗಳಿಗೆ ತಮ್ಮ ಅಪಾರ ಅನುಭವವದ ಧಾರೆ ಎರೆಯುವುದು ನಿಜಕ್ಕೂ ಅಭಿನಂದನಾರ್ಹ. ಮೊದಲ ಬಾರಿಗೆ ಅವರ ಮನೆಯಲ್ಲಿ ಅವರನ್ನು ಭೇಟಿಯಾದಾಗ  ಆಗ ತಾನೇ ಪ್ರಕಟವಾಗಿದ್ದ ನನ್ನ ಏನಂತೀರಿ? ಪುಸ್ತಕವನ್ನು ಅವರಿಗೆ ಕೊಟ್ಟು ನಂತರ ಕೆಲವು ದಿನಗಳ ನಂತರ ಅವರನ್ನು ಮತ್ತೊಂದು ಕಾರ್ಯಕ್ರಮದಲ್ಲಿ ಭೇಟಿಯಾದಾಗ, ನನ್ನ ಎಲ್ಲಾ ಲೇಖನಗಳನ್ನೂ ಓದಿ ಅದರಲ್ಲಿದ್ದ ಗುಣಾತ್ಮಕ ವಿಷಯಗಳನ್ನು ಎಲ್ಲರಿಗೂ ತಿಳಿಸಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿದ್ದಂತೂ ಸುಳ್ಳಲ್ಲಾ.

ಅದೇ ರೀತಿ ವಹಿಸಿಕೊಂಡ ಕೆಲಸವನ್ನು ಸಮಯಕ್ಕೆ ತಕ್ಕಂತೆ ಮುಗಿಸಿಕೊಡುವ ಅವರ ಕಾರ್ಯತತ್ಪರತೆ ನಿಜಕ್ಕೂ ಅನುಕರಣೀಯವೇ ಸರಿ. ನಾಡಿನ ಹೆಸರಾಂತ ಚುಟುಕು ಕವಿಗಳು ಮತ್ತು ಅವರ ಆತ್ಮೀಯರಾದ ಶ್ರೀ ಡುಂಡಿರಾಜರೇ ಇತ್ತೀಚೆಗೆ ಬರೆದಿರುವಂತೆ, 2018 ರಲ್ಲಿ ನೋಟ್‌ ಬ್ಯಾನ್‌ ಆದಾಗ  ಅವರ ಪರಿಚಯದ ಸಂಪಾದಕರೊಬ್ಬರು, ಬ್ಯಾಂಕಿನಲ್ಲಿ ಕೆಲಸ ಮಾಡಿದ ಅನುಭವ ಇರುವ ಕಾರಣ, ನೋಟ್‌ ಬ್ಯಾನ್‌ ಬಗ್ಗೆ ಒಂದು ಹಾಸ್ಯ ಲೇಖನ ನಾಳೆ ಸಂಜೆಯೊಳಗೆ ಬರೆದುಕೊಡಿ ಎಂದು ಕೇಳಿದ್ದರಂತೆ.  ಅಷ್ಟು ಕಡಿಮೆ ಸಮಯದಲ್ಲಿ ಬರೆಯಲು ಸಾಧ್ಯವಿಲ್ಲ ಎಂದು  ಅವರಿಗೆ ತಿಳಿಸಿದ್ದರೂ, ಮರುದಿನ ಬೆಳಿಗ್ಗೆ ಅದರ ಕುರಿತಾಗಿ ಲೇಖನ ಬರೆಯಬಹುದು ಎಂದೆನಿಸಿ, ಹಿಂದಿನ ದಿನ ಕರೆ ಮಾಡಿದ್ದ ಸಂಪಾದಕರಿಗೆ ನೀವು ಹೇಳಿದಂತೆ ಲೇಖನ ಬರೆದುಕೊಡುತ್ತೇನೆ ಎಂದು ತಿಳಿಸಿದ ಕೂಡಲೇ, ಸದ್ಯಕ್ಕೆ ಆದರ ಅವಶ್ಯತೆ ಇಲ್ಲಾ. ನೆನ್ನೆ ರಾತ್ರಿಯೇ ಎಂ.ಎಸ್.‌ಎನ್ ಬರೆದು ಕಳಿಸಿದ್ದಾರೆ ಎಂದರಂತೆ. ಹೀಗೆ ಪ್ರತಿ ದಿನವೂ ನಿರಂತರವಾಗಿ ಬರೆಯುತ್ತಾ, ಇದುವರೆವಿಗೂ ಸುಮಾರು 11,000ಕ್ಕೂ ಹೆಚ್ಚಿನ ಹಾಸ್ಯ ಕಂತುಗಳಿಗೆ ಸಂಭಾಷಣೆಗಳನ್ನು ಬರೆದು ದಾಖಲೆ ಸೃಷ್ಟಿಸಿದ್ದರೂ, ಅವುಗಳಲ್ಲಿ ಒಂದೂ ಸಹಾ ಅಶ್ಲೀಲ, ಅಸಭ್ಯ ಅಥವಾ ಯಾರಿಗೂ ಮುಜುಗೊರ ಆಗುವಂತಹ ಸನ್ನಿವೇಶಗಳು ಇಲ್ಲಾ ಮತ್ತು ಪ್ರತಿಯೊಂದು ಸಂಚಿಕೆಯನ್ನೂ ಒಂದು ಒಂದು ಉತ್ತಮ ಸಂದೇಶದೊಂದಿಗೆ ಮುಗಿಸುವುದು ಅವರ ಕಲಾತ್ಮಕ ಸಾಧನೆಯೇ ಸರಿ.

WhatsApp Image 2024-10-28 at 22.05.09
ಪತ್ರಿಕೆಯೊಂದಕ್ಕೆ ವರನಟ ಡಾ. ರಾಜಕುಮಾರ್ ಅವರ ಸಂದರ್ಶನ ಮಾಡಿದ ಸಂಧರ್ಭ

ಇವಿಷ್ಟೇ ಅಲ್ಲದೇ ಪ್ರತಿ ದಿನ ರಾತ್ರಿ ಆಕಾಶವಾಣಿಗೆ, ನಾಡಿನ ಮತ್ತೊಬ್ಬ ಹಾಸ್ಯ ಸಾಹಿತಿ ಮತ್ತವರ ಮತ್ತೊಬ್ಬ ಅತ್ಮೀಯ ಸ್ನೇಹಿತ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ  ವೈ. ವಿ. ಗುಂಡೂರಾವ್‌ ಅವರೊಂದಿಗೆ ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ದಿನದ 24 ಗಂಟೆಗಳ ಕಾಲವೂ ಈ ವಯಸ್ಸಿನಲ್ಲಿಯೂ ಚುರುಕಾಗಿರುವುದು ನಿಜಕ್ಕೂ ಎಲ್ಲರಿಗೂ ಪ್ರೇರಣಾದಾಯಿಯೇ ಸರಿ.

WhatsApp Image 2024-10-28 at 21.00.09ಕನ್ನಡ ಸಾರಸ್ವತ ಲೋಕದಲ್ಲಿ ಇಷ್ಟೇಲ್ಲಾ ಸಾಧನೆಗಳನ್ನು ಮಾಡಿರುವ ಶ್ರೀಯುತರಿಗೆ ಸ್ವಯಂವಧು, ವರ್ಗಾವರ್ಗಿ ಹಾಸ್ಯ ಸಂಕಲನಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಮಗ್ರ ಸಾಹಿತ್ಯಕ್ಕೆ ನವರತ್ನಾರಾಂ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ನಗೆಭಾಷಣಗಳಿಗೆ ಬೀಚಿ ಪ್ರಶಸ್ತಿ, ರಮಣಶ್ರೀ ನಗೆರಾಜ ಪ್ರಶಸ್ತಿ, ಪಾ.ಪ. ಪಾಂಡು ಧಾರಾವಾಹಿಗೆ ಆರ್ಯಭಟ ಪ್ರಶಸ್ತಿಗಳು ಲಭಿಸಿವೆ. ನರಸಿಂಹ ಮೂರ್ತಿಗಳ ಸಾಧನೆಯನ್ನು ಪರಿಗಣಿಸಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾದವರು (AKBMS) ಹಾಸ್ಯ ಸಾಹಿತ್ಯ ಕಲಾಭೂಷಣ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಅವರಿಗೆ ಲಭಿಸಿದೆ. ತಮ್ಮ ಗೆಳೆಯರೊಡನೆ ಅಬುಧಾಬಿಯ ವಿಶ್ವ ಕನ್ನಡ ಸಮ್ಮೇಳನ, ಇಂಗ್ಲೆಂಡ್ ಕನ್ನಡ ಬಳಗ, ಮುಂತಾದ ಕಡೆಯಲ್ಲಿ ಹಾಸ್ಯೋತ್ಸವದಲ್ಲಿ ಭಾಗಿಯಾಗಿರುವುದಲ್ಲದೇ, ಕೇವಲ ಎರಡು ತಿಂಗಳುಗಳ ಹಿಂದೆಯಷ್ಟೇ ಅಮೇರಿಕಾದ ಅಕ್ಕ ಸಮ್ಮೇಳನದಲ್ಲೂ ಭಾಗಿಗಳಾಗಿ ಹಿಂದುರಿಗಿ ಬರುವಾಗ ಕನ್ನಡ ಚಲನಚಿತ್ರದ ನಟ ಮತ್ತು ನಿರ್ದೇಶಕ ಪ್ರಥಮ್ ಅವರನ್ನು ನೋಡಿಕೊಂಡ ರೀತಿಯನ್ನು ಹೊಗಳಿ ಲೇಖನವನ್ನು ಬರೆಯುವ ಮೂಲಕ ತಮ್ಮ ದೊಡ್ಡ ತನವನ್ನು ಮೆರೆದಿದ್ದರು. 

WhatsApp Image 2024-10-28 at 21.11.40
First weeding anniversary

for every successful man there is a woman behind ಎನ್ನುವ ಆಂಗ್ಲ ನಾಣ್ಣುಡಿಯಂತೆ ಅವರ ಪ್ರತಿಯೊಂದು ಕಾರ್ಯದ ಹಿಂದೆಯೂ ಅವರ ಶ್ರೀಮತಿ ನಿರ್ಮಲಾ ಅವರ ಕೊಡುಗೆ ಅಪಾರವಾಗಿದೆ. ಅವರ ಎಲ್ಲಾ ಲೇಖನಗಳ ಕರಡು ತಿದ್ದುವಿಕೆಯಿಂದ ಹಿಡಿದು ಅದರ ಮೊದಲ ವಿಮರ್ಶಕಿಯಾಗಿ, ಅವರ ಬಹುತೇಕ ಕಾರ್ಯಕ್ರಮಗಳಲ್ಲಿ ಮುಂದಿನ ಸಾಲಿನ ಪ್ರೇಕ್ಷಕರಾಗಿ ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹ ನೀಡುತ್ತಿರುವುದೂ ಸಹಾ ಎಂ.ಎಸ್.ಎನ್ ಅವರ ಸಾಧನೆಗೆ ಪೂರಕವಾಗಿದೆ.

WhatsApp Image 2024-10-28 at 21.01.53ಅದೇ ರೀತಿಯಾಗಿ ಮಗ ಶ್ರೀಹರ್ಷ ಮತ್ತು ಸೊಸೆ ಅನುಷಾರವರ ಬೆಂಬಲವೂ ಇದೆ.  ದೇಶದ ಹೆಸರಾಂತ ಹಾಸ್ಯ ಲೇಖಕರಾದ ಶ್ರೀ ಖುಶ್ವಂತ್ ಸಿಂಗ್  ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುತ್ತಾ, ಎಲ್ಲರಲ್ಲೂ ತಿಳಿ ಹಾಸ್ಯ ಮೂಡಿಸುವಂತೆ ಶ್ರೀ ನರಸಿಂಹ ಮೂರ್ತಿಗಳೂ ಸಹಾ ಅವರಂತೆಯೇ ತಮ್ಮ ಜೀವನದ ಘಟನೆಗಳನ್ನೇ ನವಿರಾದ ಹಾಸ್ಯದ ಮೂಲಕ ಎಲ್ಲರಿಗೂ ಉಣ ಬಡಿಸುತ್ತಿರುವುದರಿಂದ ಅವರನ್ನು ಕನ್ನಡದ ಖುಶ್ವಂತ್ ಸಿಂಗ್ ಎಂದು ಕರೆದರು ತಪ್ಪಾಗದು ಎಂದು ನನ್ನ ವಯಕ್ತಿಕ ಅಭಿಪ್ರಾಯವಾದರೆ, ಅವರ ಸ್ನೇಹಿತರ ಅವರನ್ನು ನಗೆಸಿಂಹ ಎಂದು ಕರೆಯುವುದೇ ಅತ್ಯಂತ ಆಪ್ಯಾಯಮಾನ ಎಂದೆನಿಸುತ್ತದೆ.  ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಶ್ರೀ ನರಸಿಂಹ ಮೂರ್ತಿಗಳು ಖಂಡಿತವಾಗಿಯೂ ನಮ್ಮ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment