ಕಾಫಿ ಪುಡಿ ಸಾಕಮ್ಮ

ಹೇಳಿ ಕೇಳೀ ಕರ್ನಾಟಕ ಕಾಫಿಯ ತವರೂರು. ವಿಶ್ವಾದ್ಯಂತ ಬಹುತೇಕರ ದಿನ ಆರಂಭವಾಗೋದೇ ಬಿಸಿ ಬಿಸಿ ಕಾಫಿಯಿಂದ ಎಂದರೂ ತಪ್ಪಾಗದು. ಭಾರತವು ವಿಶ್ವದ 6ನೇ ಅತಿದೊಡ್ಡ ಕಾಫಿ ಉತ್ಪಾದಕ ದೇಶವಾಗಿದೆ. ಭಾರತ ಅರೇಬಿಕಾ ಎಂಬ ಹೆಸರಿನ ಅತ್ಯುತ್ತಮ ಗುಣಮಟ್ಟದ ಕಾಫಿ ಬೀಜವು ವಿಶ್ವಾದ್ಯಂತ ಹೆಚ್ಚಿನ ಜನಪ್ರಿಯವಾಗಿದ್ದು ಅದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಇನ್ನು ಕರ್ನಾಟಕದಿಂದಲೇ  ದೇಶದ  72.5% ಕಾಫಿ ಕೊಡಗು, ಚಿಕ್ಕಮಗಳೂರು, ಹಾಸನ ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಉತ್ಪಾದನೆಯಾದರೂ ಬೆಂಗಳೂರಿನಲ್ಲಿ 19ನೇ ಶತಮಾನದವರೆಗೂ ಕಾಫೀ ಕ್ಯೂರಿಂಗ್ ಕಂಪನಿ ಇರಲಿಲ್ಲ ಎಂದರೆ  ಎಲ್ಲರಿಗೂ ಅಚ್ಚರಿ ಎನಿಸಬಹುದು.  ಬೆಂಗಳೂರಿಗರಿಗೆ ತಾಜಾ ತಾಜಾ ಕಾಫೀ ಪುಡಿಯನ್ನು ಪರಿಚಯಿಸಿದ ಅಸಾಧಾರಣ ಮಹಿಳೆ  ಕಾಫಿ ಪುಡಿ  ಸಾಕಮ್ಮನವರ ಬಗ್ಗೆ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

ತುಮಕೂರು ಜೆಲ್ಲೆಯ ಬಿದರೆ ಎಂಬ ಗ್ರಾಮದ ಕೆಳಮದ್ಯಮ ವರ್ಗದ ನೇಕಾರರ ಕುಟುಂಬದಲ್ಲಿ 1880ರಲ್ಲಿ ಜನಿಸಿದ ಸಾಕಮ್ಮನವರು ಚಿಕ್ಕವಯಸ್ಸಿನಲ್ಲೇ ಮುದ್ದಾಗಿ ಮತ್ತು  ಅಷ್ಟೇ ಚೂಟಿಯಾದ ಹುಡುಗಿಯಾಗಿದ್ದಳು. ಊರಿನಲ್ಲಿ ಮಳೆ ಬೆಳೆ ಸರಿಯಾಗಿ  ಆಗದೇ ಇದ್ದ ಕಾರಣ, ಆಕೆಯ ಪೋಷಕರು ಉತ್ತಮ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ವಲಸೆ ಬರುತ್ತಾರೆ.  ಹೆಣ್ಣು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿವುದು ಅಷ್ಟಾಗಿ ಇರದಿದ್ದ ಅಂದಿನ ಕಾಲದಲ್ಲೂ ಆಟ ಪಾಠಗಳಲ್ಲಿ ಚುರುಕಾಗಿದ್ದ ಕಾರಣ ಆವರ ಪೋಷಕರು ಆಕೆಯನ್ನು ಶಾಲೆಗೆ ಸೇರಿಸಿದಾಗ ಅಕ್ಕ ಪಕ್ಕದವರೆಲ್ಲಾ, ಅಯ್ಯೋ ಹೆಣ್ಣು ಮಕ್ಕಳು ಶಾಲೆಗೆ ಕಲಿತು ಏನು ಮಾಡಬೇಕು? ಎಷ್ಟೇ ಓದಿದರೂ ಅಂತಿಮವಾಗಿ ಮುಸುರೆ ತಿಕ್ಕಲೇ ಬೇಕು ಎಂಬ ಮೂದಲಿಸುತ್ತಾರೆ. ಅಂತಹ ಯಾವ ಕೊಂಕು ಮಾತಿಗೂ ಸೊಪ್ಪು ಹಾಕದ ಸಾಕಮ್ಮನವರು  ಆಡಿಕೊಂಡವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚ್ಚರಿ ಪಡುವಂತೆ ಅವರೆಲ್ಲರ  ನಿರೀಕ್ಷೆಗಳೂ ಮೀರುವಂತೆ ಅಂದಿನ ಮೈಸೂರು ಪ್ರಾಂತ್ಯದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೆಲವೇ ಕೆಲವು ಹುಡುಗಿಯರಲ್ಲಿ ಸಾಕಮ್ಮನವರೂ ಒಬ್ಬರಾಗಿರುತ್ತಾರೆ.

ಅದೊಮ್ಮೆ ಅವರ ಸ್ನೇಹಿತೆಯ ಮನೆಗೆ ಹಬ್ಬದ ದಿನ ಅರಿಶಿನ ಕುಂಕುಮಕ್ಕೆ ಹೋಗಿದ್ದ ಸಾಕಮ್ಮನವರು ದೇವರ ಮುಂದೆ ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಲ್ಲದೇ ಬಹಳು ಚುರುಕಾಗಿ ಓಡಾಡಿಕೊಂಡಿದ್ದನ್ನು ಗಮನಿಸಿದ  ಅವರ ಸ್ನೇಹಿತೆಯ ಮನೆಗೆ ಬಂದಿದ್ದ ನೆಂಟರಾದ ಕೊಡಗಿನ ಅತಿದೊಡ್ಡ ಕಾಫಿ ಪ್ಲಾಂಟರ್ ಮತ್ತು ಆಗರ್ಭ ಶ್ರೀಮಂತರಾಗಿದ್ದ  ದೊಡ್ಡಮನೆ ಚಿಕ್ಕಬಸಪ್ಪನವರು ಬಂದಿರುತ್ತಾರೆ.  ಚಿಕ್ಕಬಸಪ್ಪನವರಿಗೆ ಆದಾಗಲೇ ಎರಡು ಮದುವೆಯಾಗಿದ್ದರೂ ಮಕ್ಕಳಾಗದೇ ಇರದಿದ್ದರಿಂದ ಸಾಕಮ್ಮನವರನ್ನು ಮದುವೆಯಾಗಲು ಇಚ್ಚಿಸುತ್ತಾರೆ.  ವಯಸ್ಸಿನಲ್ಲಿ ಬಹಳ ಅಂತರವಿದ್ದರೂ ಸಾಕಮ್ಮನವರ ಮನೆಯ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿರದಿದ್ದ ಕಾರಣ ವಿಧಿ ಇಲ್ಲದೇ 16 ವರ್ಷದ ಸಾಕಮ್ಮನವರಿಗಿಂತಲೂ ಅತ್ಯಂತ ವಯಸ್ಸಾದ ಸೋಮವಾರಪೇಟೆಯ ಸಾಹುಕಾರ ದೊಡ್ಡಮನೆ ಬಸಪ್ಪನವರ ಮೂರನೇ ಹೆಂಡತಿಯಾಗಿ ಮದುವೆ ಮಾಡಿಕೊಡಲಾಗುತ್ತದೆ.

WhatsApp Image 2024-11-05 at 22.12.40ಹೀಗೆ ತಮ್ಮ 16ನೇ ವಯಸ್ಸಿನಲ್ಲೇ  ಚಿಕ್ಕಬಸಪ್ಪನವರ 3ನೇ ಪತ್ನಿಯಾಗಿ ಅನಿವಾರ್ಯವಾಗಿ ಸಾಕಮ್ಮ ಕೊಡಗಿಗೆ ಬಂದು  ಅಲ್ಲಿನ ಹವಾಮಾನಕ್ಕೆ ಒಗ್ಗುಕೊಳ್ಳುವಷ್ಟರಲ್ಲೇ ಅವರ ಪತಿಯು ನಿಧನರಾಗಿ ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾಗುತ್ತಾರೆ.   ಅವರ ಪತಿ ತೀರಿಕೊಂಡ ಕೆಲವೇ ವರ್ಷಗಳಲ್ಲಿ ಆವರ ಮೊದಲ ಮತ್ತು ಎರಡನೇ ಪತ್ನಿಯರೂ ನಿಧನರಾದ ಕಾರಣ, ಕುಟುಂಬದ ಕೃಷಿ ಚಟುವಟಿಕೆ ಮತ್ತು ವ್ಯಾಪಾರ ವಹಿವಾಟುಗಳು ಸಾಕಮ್ಮನವರ ಹೆಗಲ ಮೇಲೆ ಬೀಳುತ್ತದೆ ಅಂದಿನ ಕಾಲದಲ್ಲೇ ಅವರ ಬಳಿ ನೂರಾರು ಎಕರೆ ಕಾಫಿ ತೋಟವಿರುತ್ತದೆ. ವಿದ್ಯಾವಂತಳೂ ಮತ್ತು  ಬುದ್ಧಿವಂತಳೂ ಆಗಿದ್ದ ಸಾಕಮ್ಮನವರು ಅತ್ಯಂತ ಕಡಿಮೆ ಸಮಯದಲ್ಲೇ ವ್ಯವಹಾರವನ್ನೆಲ್ಲಾ ಕಲಿತು  ನೂರಾರು ಎಕರೆ ಕಾಫಿ ತೋಟದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಲ್ಲದೇ, ಅಂದಿನ ಕಾಲದ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಾಫಿ ಇಳುವರಿಯು ಹೆಚ್ಚಾಗುವಂತೆ ನೋಡಿಕೊಳ್ಳುತ್ತಾರೆ.

WhatsApp Image 2024-11-05 at 22.39.26ಹೀಗೆ ಹೆಚ್ಚಾಗಿ ಉತ್ಪನ್ನವಾದ ಕಾಫಿಬೀಜವನ್ನು ಸ್ಥಳೀಯವಾಗಿ ವಿಲೇವಾರಿ ಮಾಡಲು ಆಗದೇ ಹೋದಾಗ, ಅದಕ್ಕಾಗಿ ಹೊಸಾ ಯೋಜನೆಯನ್ನು ಮಾಡಲು ಕುಳಿತಾಗ ಹೊಳೆದದ್ದೇ ತಡಾ ಅದನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಬೆಂಗಳೂರಿನಲ್ಲಿ ಕಾಫೀ ಕ್ಯೂರಿಂಗ್ ಮತ್ತು ಕಾಫಿ ಪುಡಿ ತಯಾರಿಕಾ ಘಟಕವನ್ನು 1920ರಲ್ಲಿ ಬಸವನಗುಡಿಯ ದೊಡ್ಡ ಗಣಪತಿ ರಸ್ತೆಯಲ್ಲಿ  ಮೊತ್ತ ಮೊದಲ ಬಾರಿಗೆ ಆರಂಭಿಸುತ್ತಾರೆ. ಈ ಘಟಕಕ್ಕೆ  ಅಗತ್ಯವಿದ್ದ ಆಧುನಿಕ ಯಂತ್ರೋಪಕರಣಗಳು ಅಂದಿನ ಕಾಲದಲ್ಲಿ ಭಾರತದಲ್ಲಿ ಲಭ್ಯವಿರದಿದ್ದ ಕಾರಣ, ಇಂಗ್ಲೆಂಡ್‌ ನಿಂದ ಯಂತ್ರೋಪಕರಣಗಳನ್ನು ಆಮದು ಮಾಡಿಕೊಂಡು ಸಾಕಮ್ಮಾಸ್ ಕಾಫಿ ವರ್ಕ್ಸ್ ಸ್ಥಾಪನೆ ಮಾಡುವ ಮೂಲಕ ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

WhatsApp Image 2024-11-05 at 22.13.05ಅದುವರೆವಿಗೂ ಕೊಡಗು, ಚಿಕ್ಕಮಗಳೂರಿಂದ ಎಂದೋ ತಯಾರಾದ ಕಾಫಿಪುಡಿಯನ್ನು ಬಳಸುತ್ತಿದ್ದ ಬೆಂಗಳೂರಿಗರಿಗೆ, ಬೆಂಗಳೂರಿನಲ್ಲೇ ತಾಜವಾಗಿ ಹುರಿದ ಸಾಧಾರಣ ಮತ್ತು ಫಿಲ್ಟರ್ ಕಾಫೀ ಪುಡಿಯು ಲಭ್ಯವಾಗಿದ್ದನ್ನು ಕಂಡು ಹಿರಿ ಹಿರಿ ಹಿಗ್ಗಿದ ಬೆಂಗಳೂರಿಗರು ತುಂಬು ಹೃದಯದಿಂದ ಸಾಕಮ್ಮನವರ ಕಾಫಿ ಪುಡಿಯನ್ನು ಒಪ್ಪಿ ಅಪ್ಪಿಕೊಂಡ ಕಾರಣ, ಸಾಕಮ್ಮನವರೂ ಮತ್ತು ಅವರ ಕಾಫಿ ಪುಡಿಯೂ ಸಹಾ ಅತ್ಯಂತ ಜನಪ್ರಿಯವಾಗಿ, ಅವರಿಂದ ಸಗಟಾಗಿ ಖರೀಧಿಸಿ ನಗರಾದ್ಯಂತ ವಿವಿದೆಡೆಯಲ್ಲಿ ಚಿಲ್ಲರೆ ಮಾರಾಟ ಮಾಡುವ  ಕಾಫೀ ಪುಡಿ ಅಂಗಡಿಗಳು ಆರಂಭವಾಯಿತು. ಸಾಕಮ್ಮನವರ ಕಾಫಿಯನ್ನು ಕುಡಿದ ಸಂಭ್ರಮದಲ್ಲಿ ಕನ್ನಡದ ಜನಪ್ರಿಯ ಸಾಹಿತಿಗಳಾದ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಮತ್ತು ಅವರ ಆತ್ಮೀಯ ಸ್ನೇಹಿತರಾಗಿದ್ದ ಮತ್ತೊಬ್ಬ ಹಿರಿಯ ಸಾಹಿತಿಗಳಾದ ಶ್ರೀ ಡಿ ವಿ ಗುಂಡಪ್ಪನವರು ಈ ಕುರಿತಾಗಿ ತಮ್ಮ ಕಥೆಗಳಲ್ಲಿ ಅಂದಿನ ಕಾಲದಲ್ಲೇ ಉಲ್ಲೇಖಿಸಿರುವುದು ವಿಶೇಷವಾಗಿತ್ತು.

ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ,  ಕಾಫೀ ಪುಡಿ ತಯಾರಿಕಾ ಯಂತ್ರಗಳನ್ನು ಇಂಗ್ಲೇಂಡಿನಿಂದ ಆಮದು ಮಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕಾಫೀ ಪುಡಿಯನ್ನು ಉತ್ಪಾದನೆ ಮಾಡುತ್ತಿದ್ದರಿಂದ ತಮ್ಮ ಉದ್ಯಮವನ್ನು ವಿದೇಶಕ್ಕೂ ಸಹಾ ವಿಸ್ತರಿಸುವ ಸಲುವಾಗಿ ಅಂದಿನ ಕಾಲದಲ್ಲೇ ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡು ಹಡಗಿನಲ್ಲಿ ಕಾಫಿ ಬೀಜ ಮತ್ತು ಪುಡಿಗಳನ್ನು ಸಹಾ ರಪ್ತು ಮಾಡುವ ಮೂಲಕ  ಸಾಕಮ್ಮನವರು ಅಂದಿನ ಕಾಲಕ್ಕೇ ಅತ್ಯಂತ  ಯಶಸ್ವಿ ಮಹಿಳಾ ಉದ್ಯಮಿ ಎಂಬ ಕೀರ್ತಿಗೆ ಪಾತ್ರರಾಗಿದ್ದಲ್ಲದೇ ಕಾಫಿ ಪುಡಿ ಸಾಕಮ್ಮ ಎಂದೇ ಜನಪ್ರಿಯರಾದರು.

ಈ ರೀತಿಯಾಗಿ  ಕರ್ನಾಟಕದ ಕಾಫಿಗೆ ಅಂತರರಾಷ್ಟ್ರೀಯ ಮೌಲ್ಯ ತಂದುಕೊಟ್ಟ ಸಾಕಮ್ಮನವರು 1928ರಲ್ಲಿ ಮೈಸೂರು ಪ್ರತಿನಿಧಿ ಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಲ್ಲದೇ, ಉದ್ಯಮಿ ಸಾಕಮ್ಮನವರ ಪ್ರಗತಿಯನ್ನು ಗಮನಿಸಿ ಅಂದಿನ ಮೈಸೂರು ಸರ್ಕಾರ, ಕೈಗಾರಿಕಾ ಅಭಿವೃದ್ಧಿಗಾಗಿ ರಚಿಸಿದ ಸಮಿತಿಗೆ ಸಾಕಮ್ಮನವರನ್ನೇ ಮುಖ್ಯಸ್ಥೆಯನ್ನಾಗಿಸಿತು. ತಮ್ಮ ಅಧಿಕಾರಾವಧಿಯಲ್ಲಿ  ಹತ್ತು ಹಲವು ಕೈಗಾರಿಕಾ ಮತ್ತು ನೀರಾವರಿ ಯೋಜನೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಸಾಕಮ್ಮನವರು ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಿದರು.

WhatsApp Image 2024-11-05 at 22.11.57ಮದುವೆಯಾದ ಎರಡೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡಿದ್ದ ಸಾಕಮ್ಮನವರಿಗೆ ಮಕ್ಕಳಿರಲಿಲ್ಲವಾದರೂ ಅವರಿಗೆ ಮಕ್ಕಳನ್ನು ಕಂಡರೆ ಅತೀವ ಪ್ರೀತಿ ಹೊಂದಿದ್ದರಿಂದ ಹೊರ ಊರಿನಿಂದ ಬರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಬೆಂಗಳೂರಿನ ವಿಶ್ವೇಶ್ವರಪುರದಲ್ಲಿ ಸಾಕಮ್ಮ ಹಾಸ್ಟೆಲ್ ನಿರ್ಮಿಸಿದ್ದರು. ಆ ಹಾಸ್ಟೆಲ್  ಇಂದು  ಕುರುಹಿನಶೆಟ್ಟಿ ಸಂಘದ ಕೇಂದ್ರ ಕಚೇರಿಯಾಗಿದ್ದು ಅದರ ಪಕ್ಕದಲ್ಲೇ ಹೊರಊರಿನಿಂದ ಬರುವವರಿಗೆ ಉಳಿದುಕೊಳ್ಳಲು ಅನುಕೂಲವಾಗಲೆಂದು ಸಾಕಮ್ಮ ಭವನ ಎಂಬ ಕಲ್ಯಾಣ ಮಂಟಪವನ್ನು ಸ್ಥಾಪಿಸಿದರು. ಇವಿಷ್ಟೇ ಅಲ್ಲದೇ ಅವರ ಮನೆಗೆ ಬೇಡಿ ಬಂದವರಿಗೆ ಇಲ್ಲಾ ಎನ್ನದ ಸಾಕಮ್ಮನವರು ಅನೇಕ ದಾನ ಧರ್ಮ ಕಾರ್ಯಗಳನ್ನೂ ಮಾಡಿ ಧರ್ಮಬೀರುವಾಗಿದ್ದರು.

ಮಹಿಳಾ ಉದ್ಯಮಿಯಾಗಿದ್ದಲ್ಲದೇ, ಸಾಮಾಜಿಕ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆಯನ್ನು ಗುರುತಿಸಿ, ಮೈಸೂರು ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಅವರು ಸಾಕಮ್ಮನವರಿಗೆ ಲೋಕಸೇವಾ ಪಾರಾಯಣೆ ಎಂಬ ಪ್ರತಿಷ್ಠಿತ ಬಿರುದನ್ನು ನೀಡಿ ಗೌರವಿಸಿದ್ದರೆ, ಮಹಿಳೆಯರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಸೀಮಿತ ಅವಕಾಶಗಳನ್ನು ಹೊಂದಿದ್ದ ಕಾಲದಲ್ಲಿ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಯಾಗಿ ಇಂಗ್ಲೇಂಡಿಗೆ ತಮ್ಮ ಕಾಫಿಯನ್ನು ರಫ್ತು ಮಾಡುತ್ತಿದ್ದದ್ದನ್ನು ಗಮನಿಸಿದ ಅಂದಿನ  ಬ್ರಿಟಿಷರ ಸರ್ಕಾರ ಅವರಿಗೆ ಕೈಸರ್-ಐ-ಹಿಂದ್ (JEWEL OF INDIA) ಪದಕವನ್ನು ನೀಡಿ ಗೌರವಿಸಿತ್ತು.

WhatsApp Image 2024-11-05 at 22.36.36ಉದ್ಯಮದ ಜೊತೆ ಧಾರ್ಮಿಕತೆಯ ಬಗ್ಗೆಯೂ ಒಲವನ್ನು ಹೊಂದಿದ್ದ ಸಾಕಮ್ಮನವರಿಗೂ ಮತ್ತು ಪುಟ್ಟಪರ್ತಿ ಸಾಯಿಬಾಬನವರ ಮಧ್ಯೆ ತಾಯಿ ಮಗನ ಸಂಬಂಧವಿದ್ದ ಕಾರಣ ಆಕೆ ತಮ್ಮ ಜೀವನದ ಬಹುಪಾಲನ್ನು ಸಾಯಿಬಾಬಾ ಅವರ ಸೇವೆಗಾಗಿ ಮೀಸಲಿಟ್ಟಿದ್ದಲ್ಲದೇ, ಪುಟ್ಟಪರ್ತಿಯಲ್ಲಿನ ಪ್ರಶಾಂತಿ ನಿಲಯಂ ಆಶ್ರಮದ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ಸಾಯಿಬಾಬಾ ಅವರ ಬೆಂಗಳೂರಿನ ಆರಂಭಿಕ ಭಕ್ತರಲ್ಲಿ ಸಾಕಮ್ಮನವರೂ ಒಬ್ಬರಾಗಿದ್ದಲ್ಲದೇ ಆಗ್ಗಾಗೆ ಪುಟ್ಟಪರ್ತಿಗೆ ಭೇಟಿ ನೀಡಿ ತಿಂಗಳಾನುಗಟ್ಟಲೆ ಕಳೆಯುತ್ತಿದ್ದ ಕಾರಣ, ತೆಲುಗು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವಂತಾಗಿದ್ದರು. ಸಾಯಿ ಬಾಬಾನನ್ನು ತನ್ನ ಮಗುವಿನಂತೆ ಕಾಣುತ್ತಿದ್ದ ಸಾಕಮ್ಮನವರು ಅನೇಕ ಬಾರಿ ಬಾಬಾ ಅವರಿಗೆ ಸ್ವತಃ ಅಡುಗೆ ಮಾಡಿ ಬಡಿಸಿದ್ದರು. ಎಷ್ಟೇ ಜನಸಂದಣಿಯಲ್ಲಿ ಸಾಯಿ ಬಾಬಾರವರು ಎಲ್ಲರಿಗೂ ಸುಲಭವಾಗಿ ಕಾಣುಂತಾಗಲು ಕೇಸರಿ ಬಣ್ಣದ ನಿಲುವಂಗಿಯನ್ನು ಧರಿಸುವಂತೆ ಸಾಕಮ್ಮನವರು ಸೂಚಿಸಿದ್ದನ್ನು ಸಾಯಿಬಾಬಾರವರು ಜೀವನಪೂರ್ತಿ ಪಾಲಿಸಿದ್ದು ವಿಶೇಷವಾಗಿತ್ತು. ಸಾಕಮ್ಮನವರು ತಮ್ಮ ಅಂತಿಮ ದಿನಗಳಲ್ಲಿ ತೀರ್ವವಾದ ಅನಾರೋಗ್ಯಕ್ಕೆ ತುತ್ತಾಗಿ ಹಲವು ತಿಂಗಳುಗಳ ಕಾಲ ಮೈಸೂರಿನ ಆಸ್ಪತ್ರೆಯಲ್ಲಿದ್ದಾಗ ಅವರನ್ನು ನೋಡಲು ಬಾಬಾರವರು ಬಂದಿದ್ದರು.

WhatsApp Image 2024-11-05 at 22.40.171934ರಲ್ಲಿ ಮಹಾತ್ಮಾ ಗಾಂಧಿಯವರು ಕೊಡಗಿಗೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಅವರ ವಸತಿಯನ್ನು ಸಾಕಮ್ಮನವರ ಮನೆಯಲ್ಲಿ ಮಾಡಲು ನಿರ್ಧರಿಸಲಾದ ವಿಷಯವನ್ನು ತಿಳಿದ ಬ್ರಿಟಿಷರು,  ಗಾಂಧಿಯವರಿಗೆ ನಿಮ್ಮ ಮನೆಯಲ್ಲಿ ತಂಗಲು ಅವಕಾಶ ನೀಡಿದಲ್ಲಿ, ನಿಮ್ಮೊಂದಿಗೆ ವ್ಯಾಪಾರದ ವಹಿವಾಟಿನ ಸಂಬಂಧವನ್ನು ಕಡಿತಗೊಳಿಸಲಾಗುತ್ತದೆ ತತ್ಸಂಬಂಧಿತವಾಗಿ ನಾವು ನಿಮ್ಮ ಕಾಫಿಯನ್ನು‌ ಕೊಳ್ಳುವುದಿಲ್ಲ ಎಂಬ ಬೆದರಿಕೆಗೆ ಹೆದರಿ ಸಾಕಮ್ಮನವರು ತಮ್ಮ ಮನೆಯಲ್ಲಿ ಗಾಂಧೀಜಿವರಿಗೆ ಉಳಿದುಕೊಳ್ಳಲು ಅವಕಾಶ ನೀಡದೇ ಹೋದದ್ದು ಅವರ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಿತು.

sakammaಕೃಷಿಕರಾಗಿ, ಮಹಿಳಾ ಕಾಫಿ ಉದ್ಯಮಿಯಾಗಿ, ಸಮಾಜಸೇವಕಿಯಾಗಿ ಅಷ್ಟೆಲ್ಲಾ ಸಾಧನೆ ಮಾಡಿದ್ದ ಕಾಫಿ ಪುಡಿ ಸಾಕಮ್ಮನವರು 1950 ರಲ್ಲಿ ತಮ್ಮ 70 ನೇ ವಯಸ್ಸಿನಲ್ಲಿ ನಿಧನರಾದರಾದರೂ, ಬಸವನಗುಡಿಯಲ್ಲಿ ಅವರು ಕಾಫಿ ಕ್ಯೂರಿಂಗ್ ಘಟಕವನ್ನು ನಡೆಸುತ್ತಿದ್ದ ಪ್ರದೇಶವನ್ನು ಇಂದಿಗೂ ಸಾಕಮ್ಮ ಗಾರ್ಡನ್ ಎಂದು ಕರೆಯಲಾಗುವ ಮೂಲಕ ಅವರಿನ್ನೂ ಬೆಂಗಳೂರಿಗರ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಕಾರಣ ಅವರು ನಿಸ್ಸಂದೇಹವಾಗಿ ಕನ್ನಡದ ಕಲಿಗಳೇ ಸರಿ.

ಏನಂತೀರೀ? ಸೃಷ್ಟಿಕರ್ತ ಉಮಾಸುತ

2 thoughts on “ಕಾಫಿ ಪುಡಿ ಸಾಕಮ್ಮ

Leave a comment