ಹೇಳಿ ಕೇಳಿ ಕರ್ನಾಟಕ ಶಿಲ್ಪಕಲೆ, ಸಾಹಿತ್ಯ, ಸಂಗೀತಗಳ ತವರೂರು. ಕರ್ನಾಟಕ ಸಂಗೀತದ ಜೊತೆಗೆ ಹಿಂದೂಸ್ಥಾನಿ ಸಂಗೀತಕ್ಕೂ ಕರ್ನಾಟಕದ ಕೊಡುಗೆ ಹಿಂದಿನಿಂದಲೂ ಅಪಾರ. ಇನ್ನು ಆಧುನಿಕ ಯುಗದಲ್ಲಿ ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಮತ್ತು ಚಲನ ಚಿತ್ರರಂಗದಲ್ಲೂ ಸಹಾ ಕರ್ನಾಟಕದ ಕೊಡುಗೆ ಆಪಾರವಾಗಿದ್ದು. ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕನಾಗಿ ಮಿಂಚಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಶ್ರೀ ಬಿ. ವಿ. ಕಾರಂತರ ಹೆಸರು ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರುವಂತದ್ದು. ಇಂತಹ ಅಸಾಮಾನ್ಯ ಪ್ರತಿಭಾವಂತರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಬಿ. ವಿ. ಕಾರಾಂತ್ ಅವರ ಪೂರ್ಣ ಹೆಸರು ಬಾಬುಕೋಡಿ ವೆಂಕಟರಮಣ ಕಾರಂತ್ ಎಂಬುದಾಗಿದ್ದು ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಮಂಚಿ ಎಂಬ ಹಳ್ಳಿಯಲ್ಲಿ ಅಡಿಕೆ ಮಂಡಿಯಲ್ಲಿ ಲೆಖ್ಖ ಬರೆಯುತ್ತಲೇ ಮನೆಪಾಠ ಕಲಿಸಿಕೊಡುತ್ತಿದ್ದ ಮಾಸ್ತರಾಗಿದ್ದ ಶ್ರೀ ಬಾಬುಕೋಡಿ ನಾರಾಣಪ್ಪಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯವರಾಗಿ 1929ರ ಸೆಪ್ಟೆಂಬರ್ 19ರಂದು ಜನಿಸಿದರು. ಚೊಚ್ಚಲು ಮಗುವಾದ ವೆಂಕಟರಮಣನನ್ನು ತಾಯಿ ಲಕ್ಷ್ಮಮ್ಮನವರು ಪ್ರೀತಿಯಿಂದ ಬೋಯಣ್ಣ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದ ಕಾರಣ ಎಲ್ಲರಿಗೂ ಅದೇ ಹೆಸರು ಅಪ್ಯಾಯಮಾನವೆನಿಸಿತು. ಕರಾವಳಿ ದೈವ ಮತ್ತು ಭೂತಾರಾಧನೆಯ ತವರೂರು ಹಾಗಾಗಿ ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು, ಭಜನೆಯಯಷ್ಟೇ ಅಲ್ಲದೇ, ಊರಿನ ದೇವಾಲಯಗಳಲ್ಲಿ ಆಗ್ಗಾಗ್ಗೆ ನಡೆಯುತ್ತಿದ್ದ ಹರಿಕಥೆ, ಯಕ್ಷಗಾನ, ಬಯಲಾಟಗಳು ಮತ್ತು ಅಕ್ಕ ಪಕ್ಕದ ಊರಿನ ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, ಪಾತ್ರಿಯ ದರ್ಶನ ಮುಂದಾದವುಗಳನ್ನು ನೋಡುತ್ತಲೇ ಬೆಳೆದ ವೆಂಕಟರಮಣನಿಗೆ ಬಾಲ್ಯದಲ್ಲೇ ಕಲೆಯ ಮೇಲೆ ಅಪಾರವಾದ ಮಮಕಾರ.
ಇದಕ್ಕೆ ಪೂರಕ ಎನ್ನುವಂತೆ ಕುಕ್ಕಾಜೆಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವಾಗ ಅಧ್ಯಾಪಕ ಕಳವಾರು ರಾಮರಾಯರು ನಿರ್ದೇಶಿಸಿದ ಸುಕ್ರುಂಡೆ ಐತಾಳರು – ಕುಂಬಳಕಾಯಿ ಭಾಗವತರು ಎಂಬ ನಾಟಕದಲ್ಲಿ ಭಾಗವತನಾಗ ಬಯಸಿದ್ದ ಪುರೋಹಿತ ಸಂಗೀತವನ್ನೂ ಮಂತ್ರದ ಧಾಟಿಯಲ್ಲಿ ಹೇಳುವಂತಹ ಪಾತ್ರದ ಮೂಲಕ ಬೋಯಣ್ಣನ ಅಧಿಕೃತ ರಂಗಪ್ರವೇಶ ಆಗುತ್ತದೆ. ನಂತರ 5ನೇ ತರಗತಿಗೆ ಬಂದಾಗ, ಶಿಕ್ಷಕರಾಗಿದ್ದ ಪಿ.ಕೆ. ನಾರಾಯಣರು ನಿರ್ದೇಶಿಸಿದ ನನ್ನ ಗೋಪಾಲದಲ್ಲಿ ಗೋಪಾಲ ಪಾತ್ರದಲ್ಲಿ ತಾಯಿಯಿಂದ ಕಲಿತ ಸಂಗೀತದಿಂದ ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದನ್ನು ಕೇಳಿ ಮೆಚ್ಚಿದ ಆ ಊರಿನ ಪಟೇಲರು ಅಂದಿನ ಕಾಲಕ್ಕೇ ಎರಡು ರೂಪಾಯಿ ಬಹುಮಾನ ಕೊಟ್ಟು ಪ್ರೋತ್ಸಾಹಿಸಿದ ನಂತರವಂತೂ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ರಂಗಭೂಮಿಯೇ ತನ್ನ ಕರ್ಮಸ್ಥಾನ ಎಂಬುದನ್ನು ಮನದಟ್ಟು ಮಾಡಿಕೊಳ್ಳುತ್ತಾರೆ. ನಂತರ 8ನೇ ತರಗತಿ ಮುಸಿದ ನಂತರ ಕೆಲಕಾಲ ಪುತ್ತೂರಿನ ಕುಕ್ರಬೈಲು ಕೃಷ್ಣಭಟ್ಟರ ಮನೆಯಲ್ಲಿ ಮನೆಪಾಠ ಹೇಳಿಕೊಡುತ್ತಲೇ ಮಹಾಬಲ ಭಟ್ಟರ ತ್ಯಾಗರಾಜ ಸಂಗೀತಶಾಲೆಯಲ್ಲಿ ಆರಂಭಿಕ ಸಂಗೀತಾಭ್ಯಾಸ ಮಾಡಿ ನಂತರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ಸಂಗೀತದ ಕಲಿಕೆ ಮುಂದುವರೆಸುತ್ತಲೇ, ಸಮಯ ಸಿಕ್ಕಾಗಲೆಲ್ಲಾ, ಶಿವರಾಮ ಕಾರಂತರ ಬಾಲವನಕ್ಕೆ ಹೋಗಿ ಬರುತ್ತಾ ಸಂಗೀತ ಮತ್ತು ನಾಟಕದತ್ತ ಹರಿಸುತ್ತಾರೆ ತಮ್ಮ ಚಿತ್ತ.
ಅದೇ ಸಮಯದಲ್ಲೇ ಗುಬ್ಬಿ ಕಂಪನಿಯ ಕೃಷ್ಣಲೀಲಾ ನಾಟಕ ಮಂಗಳೂರಿನಲ್ಲಿ ಪ್ರದರ್ಶನವಾಗುತ್ತಿದ್ದದ್ದನ್ನು ಕೇಳಿ ಪಾಣೆ ಮಂಗಳೂರಿನಿಂದ ಮಂಗಳೂರಿಗೆ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ, ಬಿದ್ದು ಭಾರಿ ಮಟ್ಟದಲ್ಲಿ ಪೆಟ್ಟನ್ನು ತಿಂದಿದ್ದರೂ, ಗುಬ್ಬಿ ಕಂಪನಿ ನಾಟಕದ ರೋಮಾಂಚನ ವಿಪರೀತವಾಗಿ ಸೆಳೆಯುತ್ತಿದ್ದ ಕಾರಣ, ಮೈಸೂರಿನ ಮಹಾರಾಜರ ಆಶ್ರಯದಲ್ಲಿ ಸಂಗೀತವನ್ನು ಕಲಿಯ ಬೇಕೆಂಬ ಇಚ್ಚೆಯಿಂದ, 1944ರ ನವೆಂಬರ್ 5ರಂದು ಮನೆಯವರಿಗೂ ತಿಳಿಸದೇ ಪುತ್ತೂರಿನಿಂದ ಮೈಸೂರಿಗೆ ಓಡಿ ಹೋಗುತ್ತಾರೆ. ಸಾಮಾನ್ಯ ಮನುಷ್ಯರು . ಮಹಾರಾಜರನ್ನು ಭೇಟಿ ಮಾಡುವುದು ಅಷ್ಟು ಸುಲಭವಾಗಿರಲಿಲ್ಲವಾದರೂ ಅದೇ ಪ್ರಯತ್ನದಲ್ಲಿದ್ದ ವೆಂಕಟರಮಣರಿಗೆ,ಗುಬ್ಬಿ ಕಂಪನಿ ಮ್ಯಾನೇಜರ್ ಮಹದೇವ ಸ್ವಾಮಿಯವರ ಪರಿಚಯವಾಗಿ ಅವರ ಮೂಲಕ ಗುಬ್ಬಿ ಕಂಪನಿಯ ಸಂಗೀತದ ಮಾಸ್ಟರ್ ಆಗಿದ್ದ ಎಂ.ಬಿ. ಮುನಿಯಪ್ಪನವರ ಪರಿಚಯವಾಗಿ ಆವರು ವೆಂಕಟರಮಣನ ಸಂಗೀತ ಅಭ್ಯಾಸವನ್ನು ಪರೀಕ್ಷಿಸಿ, ಪರವಾಗಿಲ್ಲಾ, ಶಾರೀರ ಚೆನ್ನಾಗಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭ್ಯಾಸ ಮಾಡಿದಲ್ಲಿ ಉತ್ತಮ ಸಂಗೀತಗಾರನಾಗಬಹುದು ಎಂಬ ಶಿಫಾರಸ್ಸಿನ ಮೇಲಿಯೇ ಅಧಿಕೃತವಾಗಿ ಗುಬ್ಬಿ ಕಂಪನಿಗೆ ಸೇರ್ಪಡೆಯಾಗುತ್ತಾರೆ.
ಆರಂಭದಲ್ಲಿ ಗುಬ್ಬಿ ಕಂಪನಿ ನಾಟಕಗಳಲ್ಲಿ ಬಾಲಕೃಷ್ಣ, ಮಾರ್ಕಾಂಡೇಯ ಮೊದಲಾದ ಸಣ್ಣ ಸಣ್ಣ ಪಾತ್ರಗಳ ಮೂಲಕ ಗಮನ ಸೆಳೆದಿದ್ದರಿಂದ, ಗುಬ್ಬಿ ವೀರಣ್ಣ ಮತ್ತು ಕಂಪನಿಯ ನಾಟಕಕಾರಾಗಿದ್ದ ನಿರ್ದೇಶಕ ಬಿ. ಪುಟ್ಟಸ್ವಾಮಯ್ಯನವರ ವಿಶೇಷ ಪ್ರೋತ್ಸಾಹದಿಂದ ಕಾರಂತರು ಗುಬ್ಬಿ ಕಂಪನಿಯಲ್ಲಿ ಕಾಯಮ್ಮಾಗಿ ಸ್ತ್ರೀ ಪಾತ್ರಗಳನ್ನು ಮಾಡುತ್ತಲೇ, ಸಂಗೀತ, ನಟನೆಯ ಜೊತೆಗೆ ಕಂಪನಿ ನಾಟಕದ ಒಳ ಹೊರವುಗಳನ್ನು ಕಲಿಯುತ್ತಲೇ, ಗುಬ್ಬಿ ಚನ್ನಬಸವೇಶ್ವರ ನಾಟಕ ಸಂಘದಲ್ಲಿ ಸುಮಾರು 6 ವರ್ಷಗಳ ಕಳೆದದ್ದು ಗೊತ್ತಾಗಲೇ ಇಲ್ಲ.
ಗುಬ್ಬಿ ಕಂಪನಿಯಲ್ಲಿದ್ದಾಗಲೇ ಕಾರಂತರಿಗೆ ಗಾಂಧೀಜಿಯವರ ಹರಿಜನ ಪತ್ರಿಕೆಯನ್ನು ಓದುವ ಅಭ್ಯಾಸ ಬೆಳೆಸಿ ಕೊಂಡಿದ್ದರಿಂದ ಹಿಂದಿ ಭಾಷೆಯ ಮೇಲೆ ವಿಶೇಷ ಒಲವು ಮೂಡಿದ್ದರಿಂದಾಗಿ, ಖಾಸಗಿಯಾಗಿ ಹಿಂದಿ ಪರೀಕ್ಷೆಗಳನ್ನು ಮುಗಿಸಿ ಹಿಂದಿಯಲ್ಲಿ ಬಿ.ಎ. ಪದವಿ ಪಡೆಯುತ್ತಾರೆ. ಕಾರಾಂತರಿಗೆ ಓದಿನಲ್ಲಿ ವಿಶೇಷ ಒಲವಿದ್ದದ್ದನ್ನು ಗಮನಿಸಿದ ವೀರಣ್ಣನವರು ಆರ್ಥಿಕ ಸಹಾಯ ಮಾಡಿ ಬೆಂಗಳೂರಿನ ಹಿಂದಿ ಪ್ರಚಾರಕ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ ನಂತರ ಸ್ನಾತಕೋತ್ತರ ಅಧ್ಯಯನಕ್ಕಾಗಿ 1956-58ರ ವರೆಗೆ ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಕಳಿಸಿಕೊಡುತ್ತಾರೆ. ಕಾರಾಂತರು ಅಲ್ಲಿ ಹಿಂದಿ ಎಂ.ಎ. ಮಾಡುತ್ತಿರುವಾಗಲೇ ಪಂಡಿತ ಓಂಕಾರನಾಥ ಠಾಕೂರರ ಪರಿಚಯವಾಗಿ ಅವರಿಂದ ಹಿಂದೂಸ್ಠಾನಿ ಸಂಗೀತವನ್ನೂ ಅಭ್ಯಾಸ ಮಾಡುತ್ತಾರೆ.
ಹೀಗೆ ಹಿಂದಿ ಭಾಷೆಯ ಮೇಲೆ ಪ್ರೌಢಿಮೆಯನ್ನು ಗಳಿಸಿ ಕೊಂಡ ಕಾರಂತರು 1960ರಲ್ಲಿ ಅಭಿನಯ ಕಲೆಯನ್ನು ಕರಗತಮಾಡಿಕೊಳ್ಳಲು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ(ಎನ್.ಎಸ್.ಡಿ) ವಿದ್ಯಾರ್ಥಿಯಾಗಿರುವಾಗಲೇ ಭಾಸನ ಸ್ವಪ್ನ ವಾಸವದತ್ತ ಮತ್ತು ಕಾರ್ನಾಡರ ತುಘಲಕ್ ನಾಟಕಗಳನ್ನು ಹಿಂದಿಗೆ ಅನುವಾದಿಸಿದ್ದಲ್ಲದೇ, ಅದೇ ನಾಟಕಗಳನ್ನು ರಂಗದ ಮೇಲೆ ತಂದು ಅಲ್ಲಿನ ನಿರ್ದೇಶಕರಾಗಿದ್ದ ಅಲ್ಕಾಜಿಯವರ ವಿಶೇಷ ಗಮನಕ್ಕೆ ಪಾತ್ರರಾಗುತ್ತಾರೆ. ಎನ್.ಎಸ್.ಡಿ.ಯ ಪದವಿ ಪಡೆದ ನಂತರ ಕಾರಂತರು ಕೆಲ ಕಾಲ ದೆಹಲಿಯ ಪಟೇಲ್ ಸ್ಕೂಲಿನಲ್ಲಿ ನಾಟಕದ ಶಿಕ್ಷಕರಾಗಿದ್ದಂತಹ ಸಮಯದಲ್ಲೇ ತಮ್ಮ ಕನ್ನಡ ಮಿತ್ರರ ಜೊತೆ ಕನ್ನಡ ಭಾರತಿ ಆರಂಭಿಸಿ ಅದರ ಮೂಲಕ ತುಘಲಕ್, ದಾರಿಯಾವುದಯ್ಯ ವೈಕುಂಠಕ್ಕೆ ಮೊದಲಾದ ನಾಟಕಗಳನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಿ ಅಲ್ಲಿನ ರಂಗಭೂಮಿ ವಲಯಗಳಲ್ಲಿಯೂ ಪ್ರಖ್ಯಾತರಾಗುತ್ತಾರೆ.
70ರ ದಶಕದಲ್ಲಿ ಕಾರಾಂತರು ಬೆಂಗಳೂರಿಗೆ ಹಿಂದಿರುಗಿದ ವೇಳೆಗೆ ಕರ್ನಾಟಕದಲ್ಲಿ ವೃತ್ತಿ ರಂಗಭೂಮಿ ಅವಸಾನದ ಅಂಚಿಗೆ ಬಂದಿದ್ದರೆ, ಹವ್ಯಾಸಿ ರಂಗಭೂಮಿ ಅಲ್ಲಿಲ್ಲಿ ಇಣುಕಿತ್ತಾ ಒಬ್ಬ ಸಮರ್ಥ ನಿರ್ದೇಶಕನನ್ನು ಅರೆಸುತ್ತಿತ್ತು. ಇದನ್ನು ಸದ್ಬಳಕೆ ಮಾಡಿಕೊಂಡ ಕಾರಾಂತರು ಬೆನಕ ತಂಡವನ್ನು ಕಟ್ಟುತ್ತಾರೆ. ಬೆನಕ ಎಂದ ತಕ್ಷಣ ವಿಘ್ನನಿವಾರಕ ವಿಘ್ನೇಶನನ್ನು ನೆನಪಿಸುತ್ತದಾದರೂ, ಬೆಂಗಳೂರು ನಗರದ ಕಲಾವಿದರು ಸಂಕ್ಷಿಪ್ತ ರೂಪವೇ ಬೆನಕ ಎಂಬುದಾಗಿರುತ್ತದೆ.
ಇದೇ ವೇಳೆಗೆ ಭದ್ರಾವತಿ ಮೂಲದ ಶಿಕ್ಷಕಿಯಾಗಿದ್ದ ಪ್ರೇಮಾರ ಭೇಟಿಯಾಗಿ ಮೊದಲ ನೋಟವೇ ಪ್ರೀತಿಯಾಗಿ ನಂತರ ಅವರ ಪ್ರೀತಿ ಮದುವೆಯವರೆಗೂ ಮುಂದುವರೆಯುತ್ತದೆ. ಹೀಗೆ ಬಿ,ವಿ.ಕಾರಾಂತರು ಮತ್ತು ಪ್ರೇಮಾ ಕಾರಂತ್ ದಂಪತಿಗಳಿಬ್ಬರೂ ಬೆನಕ ತಂಡಕ್ಕೆ ಸರ್ವಸ್ವವನ್ನು ಧಾರೆ ಎರೆಯುತ್ತಾರೆ. ಹಯವದನ ನಾಟಕದಿಂದ ಆರಂಭಿಸಿ ಹಲವಾರು ಜನಪ್ರಿಯ ನಾಟಕಗಳನ್ನು ಕರ್ನಾಟಕದವಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ಯಶಸ್ವಿಯಾಗಿದ್ದಲ್ಲೇ, ಪತ್ನಿ ಪ್ರೇಮಾ ಅವರ ಆಸ್ಥೆಯ ಮೇರೆಗೆ ಮಕ್ಕಳ ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ವಹಿಸಿ,ಮಕ್ಕಳೊಂದಿಗೆ ಹಲವಾರು ನಾಟಕಗಳನ್ನು ನಿರ್ದೇಶಿಸಿದರು.
1977ರಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಲು ಕರೆ ಬಂದಾಗ ಎರಡೂ ಕೈಗಳಿಂದ ಅಪ್ಪಿಕೊಂಡ ಕಾರಾಂತರು ರಂಗಭೂಮಿಯನ್ನು ದೇಶದ ಮೂಲೆಮೂಲೆಗೆ ಕೊಂಡೊಯ್ದರು. ತಮಿಳುನಾಡಿನ ಮದುರೈಯಂತಹ ದೂರ ದೂರದ ಸ್ಥಳಗಳಲ್ಲಿ ಕೂಡಾ ಅನೇಕ ಕಮ್ಮಟಗಳನ್ನು ನಡೆಸಿದರು.ಇದೇ ಸಂಧರ್ಭಲ್ಲಿ ಮಧ್ಯಪ್ರದೇಶ ಸರ್ಕಾರವು ಭಾರತಭವನದ ಆಶ್ರಯದಲ್ಲಿ ಭೂಪಾಲ್ ನಲ್ಲಿ ರಂಗಮಂಡಲ ಎಂಬ ನಾಟಕ ಕಲಿಕಾ ಕೇಂದ್ರ ಮುಖ್ಯಸ್ಥರಾಗಿರಲು ಅವರನ್ನು ಆಹ್ವಾನಿಸಿದ್ದನ್ನು ಒಪ್ಪಿಕೊಂಡು 1981ರಿಂದ 1986ರ ವರೆಗೆ ಅಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ನಟಿ ವಿಭಾ ಆಕಸ್ಮಿಕವಾಗಿ ಸುಟ್ಟು ಕೊಂಡ ಪ್ರಕರಣದಲ್ಲಿ ಕಾರಂತರನ್ನು ಆರೋಪಿಯನ್ನಾಗಿ ಕೆಲ ಕಾಲ ಬಂಧನದಲ್ಲಿದ್ದು ವಿಚಾರಣೆ ನಡೆದು ಅವರು ನಿರ್ದೋಷಿ ಎಂದು ಹೊರಬರುವಷ್ಟರಲ್ಲಿ ಹೈರಾಣಾಗಿ ಹೋಗುತ್ತಾರೆ.
ಅದೇ ಸಮಯದಲ್ಲಿ ಕಲೆಯ ಆರಾಧಕರು ಮತ್ತು ಪ್ರೋತ್ಸಾಕರಾಗಿದ್ದ ಶ್ರೀ ರಾಮಕೃಷ್ಣ ಹೆಗಡೆಯವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದು ಅವರಿಗೆ ಭೋಪಾಲ್ ಮಾದರಿಯಲ್ಲಿಯೇ ರಂಗಮಂಡಲ ಒಂದನ್ನು ಕಟ್ಟುವ ಆಲೋಚನೆ ಬಂದ ಪರಿಣಾಮವಾಗಿಯೇ, 1989ರಲ್ಲಿ ಮೈಸೂರಿನಲ್ಲಿ ರಂಗಾಯಣ ರಂಗಶಾಲೆ ಆರಂಭವಾಗಿ ಕಾರಂತರನ್ನೇ ರಂಗಾಯಣದ ಮೊದಲ ನಿರ್ದೇಶಕರನ್ನಾಗಿಸುತ್ತಾರೆ. ಅಂದಿನಿಂದ 1995ರವರೆಗೆ ಅಲ್ಲಿದ್ದ ಕಾರಂತರು ತಮ್ಮ ಕನಸಿನ ರಂಗಾಯಣವನ್ನು ಹತ್ತು ಹಲವಾರು ಆಯಾಮಗಳೊಂದಿಗೆ ಕಟ್ಟಿ ಬೆಳೆಸಿದ್ದಲ್ಲದೇ ಅದರ ಮೂಲಕ ಅನೇಕ ಉದಯೋನ್ಮುಖ ನಟ ನಟಿಯರಿಗೆ ತರಬೇತಿ ನೀಡಿದ್ದಲ್ಲದೇ ಹೊಸ ಹೊಸ ನಾಟಕಗಳ ರಂಗ ಪ್ರಯೋಗ, ರಂಗ ಸಂಗೀತ, ರಂಗ ಸಜ್ಜಿಕೆ, ವಸ್ತ್ರ ವಿನ್ಯಾಸ, ಆಧುನಿಕ ರಂಗ ಸ್ಥಳಗಳ ನಿರ್ಮಾಣ ಹೀಗೆ ಹಲವಾರು ನಿಟ್ಟುಗಳಲ್ಲಿ ರಂಗಾಯಣವನ್ನು ಕಟ್ಟಿ ಬೆಳೆಸಿದ ಕೀರ್ತಿಗೆ ಕಾರಂತರದು ಭಾಜನರಾಗುತ್ತಾರೆ.
ನಾಟಕಗಳ ನಿರ್ದೇಶನದ ಜೊತೆ ಜೊತೆಯಲ್ಲೇ ನಾಟಕಗಳಿಗೆ ಜಾನಪದ ಮತ್ತು ಯಕ್ಷಗಾನ ಶೈಲಿಯ ಸಂಗೀತವನ್ನೂ ಮೋಹಕವಾಗಿ ಬಳಸಿಕೊಳ್ಳುತ್ತಿದ್ದದ್ದು ಕಾರಾಂತರ ವಿಶೇಷತೆಯಾಗಿತ್ತು. ಹಯವದನ, ಈಡಿಪಸ್, ಸತ್ತವರ ನೆರಳು, ಕತ್ತಲೆ ಬೆಳಕು, ಹುಚ್ಚು ಕುದುರೆ, ಏವಂ ಇಂದ್ರಜಿತ್, ಸಂಕ್ರಾಂತಿ, ಜೋಕುಮಾರಸ್ವಾಮಿ, ಹುತ್ತವ ಬಡಿದರೆ, ಗೋಕುಲ ನಿರ್ಗಮನ ಮುಂತಾದ ನಾಟಕಗಳಲ್ಲದೇ ಮಕ್ಕಳ ನಾಟಕಗಳಾದ ಪಂಜರ ಶಾಲೆ, ಅಳಿಲು ರಾಮಾಯಣ, ನೀಲಿ ಕುದುರೆ, ಹೆಡ್ಡಾಯಣ, ಡಿ ಗ್ರೇಟ್ಫುಲ್ ಮ್ಯಾನ್ ಮುಂತಾದವುಗಳನ್ನು ನಿರ್ದೇಶಿಸುವ ಮೂಲಕ ಭಾರೀ ಮೆಚ್ಚುಗೆಯನ್ನು ಗಳಿಸಿದ್ದಲ್ಲದೇ, ಹಿಂದಿಯಲ್ಲಿ ಅಂಧೇರ್ ನಾಗರಿ ಚೌಪಟ್ ರಾಜಾ, ಕಿಂಗ್ ಲಿಯರ್, ಸ್ಕಂದಗುಪ್ತ, ಚಂದ್ರಹಾಸ, ಘಾಶೀರಾಂ ಕೊತ್ವಾಲ್ ಆಷ್ಟೇ ಅಲ್ಲದೇ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಪಂಜಾಬಿ, ಉರ್ದು ಕಡೆಗೆ ಸಂಸ್ಕೃತ ಭಾಷೆಯಲ್ಲಿಯೂ ನಾಟಕಗಳನ್ನು ನಿರ್ದೇಶನ ಮಾಡುವ ಮೂಲಕ ಅವರ ಭಾಷಾ ಪಾಂಡಿತ್ಯ ಮತ್ತು ನಾಟಕಗಳ ಮೇಲಿನ ಹಿಡಿತವನ್ನು ಪ್ರಚುರಪಡಿಸುತ್ತಾರೆ.
ಕಾರಾಂತರು ಕೇವಲ ನಾಟಕಕಷ್ಟೇ ಸೀಮಿತವಾಗಿರದೇ, ಸಮಯ ಸಿಕ್ಕಾಗಲೆಲ್ಲಾ ಸಿನಿಮಾ ರಂಗದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಶಿವರಾಮ ಕಾರಾಂತರ ಜನಪ್ರಿಯ ಕಾದಂಬರಿ ಚೋಮನದುಡಿ ಬಿ.ವಿ. ಕಾರಂತರು ನಿರ್ದೇಶಿಸಿದ ಮೊದಲ ಚಿತ್ರವಾಗಿದ್ದು ಆ ಸಿನಿಮಾ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿ ರಾಷ್ಟ್ರ ಪ್ರಶಸ್ತಿ ಪಡೆದರೆ ಚೋಮನ ಪಾತ್ರದಲ್ಲಿ ನಟಿಸಿದ್ದ ಹಿರಿಯ ಕಲಾವಿದರಾಗಿದ್ದ ಶ್ರೀ ವಾಸುದೇವ ರಾವ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯೂ ಸಹಾ ಲಭಿಸಿತ್ತು. ನಂತರ ಗಿರೀಶ್ ಕಾರ್ನಾಡರ ಜೊತೆಗೂಡಿ ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ಚಿತ್ರಗಳನ್ನು ನಿರ್ದೇಶಿಸಿದರೆ ಮಕ್ಕಳಿಗಾಗಿ ಚೋರ್ ಚೋರ್ ಛಿಪ್ ಛಿಪ್ ಜಾ, ಶಿವರಾಮ ಕಾರಂತರು ಮತ್ತು ದಕ್ಷಿಣ ಕನ್ನಡದ ಭೂತಾರಾಧನೆ ಕುರಿತಾದ ಸಾಕ್ಷ ಚಿತ್ರಗಳನ್ನು ಕಾರಂತರು ನಿರ್ದೇಶಿಸಿದರು.
ಸಿನಿಮಾ ರಂಗದಲ್ಲಿ, ನಿರ್ದೇಶನಕ್ಕಿಂತಲೂ ಸಂಗೀತದಲ್ಲೇ ಕಾರಂತರು ಮಿಂಚಿದರು ಎಂದರೂ ತಪ್ಪಾಗದು. ಮೃಣಾಲ್ ಸೇನ್ ಅವರ ಪರಶುರಾಮ್, ಖಾರಿಜ್, ಏಕ್ ದಿನ್ ಪ್ರತಿದಿನ್, ಎಂ.ಎಸ್.ಸತ್ಯು ಅವರ ಕನ್ನೇಶ್ವರ ರಾಮ, ಜಿ.ವಿ. ಅಯ್ಯರ್ ಅವರ ಹಂಸಗೀತೆ, ಕುದುರೆ ಮೊಟ್ಟೆ, ಶಂಕರಾಚಾರ್ಯ, ಭಗವದ್ಗೀತೆ, ಕಾರ್ನಾಡರ ಕಾಡು ಮತ್ತು ಆ ಮನಿ, ಗಿರೀಶ್ ಕಾಸರವಳ್ಳಿಯವರ ಘಟಶ್ರಾದ್ಧ ಆಕ್ರಮಣ ಮತ್ತು ಮೂರುದಾರಿಗಳು, ಬರಗೂರರ ಬೆಂಕಿ, ಪ್ರೇಮಾಕಾರಂತರ ಫಣಿಯಮ್ಮ ಮತ್ತು ನಕ್ಕಳಾ ರಾಜಕುಮಾರಿ ಮಂತಾದ ಯಶಸ್ವೀ ಕಲಾತ್ಮಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ವಿ.ಆರ್.ಕೆ ಪ್ರಸಾದರ ಋಷ್ಯಶೃಂಗ ಮತ್ತು ಕಾಸರವಳ್ಳಿಯವರ ಘಟಶ್ರಾದ್ಧ ಚಿತ್ರದ ಸಂಗೀತ ನಿದೇಶನಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದರೆ, ಹಂಸಗೀತೆ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿ ಕಾರಂತರಿಗೆ ಲಭಿಸಿವೆ.
ಕಾರಂತರಿಗೆ 6 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಒಮ್ಮೆ ರಾಜ್ಯ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕಾಳಿದಾಸ ಸಮ್ಮಾನದಂತಹ ಮಹಾನ್ ಗೌರವಗಳು ಅರಸಿ ಬಂದರೂ,ಅವಮಾನಕ್ಕೆ ಕುಗ್ಗದೇ ಸನ್ಮಾನಕ್ಕೆ ಹಿಗ್ಗದೇ, ಚರೈವೇತಿ ಚರೀವೇತಿ ಎಂದು ತಮ್ಮ ಪಾಡಿಗೆ ತಾವು ನಾಟಕ ಮತ್ತು ಸಂಗೀತಗಳಲ್ಲಿ ನಿರಂತವಾಗಿ ತೊಡಗಿಸಿಕೊಂಡಿದ್ದ ಕಾರಾಂತರು ವಯೋಸಹಜವಾಗಿ 2002ರ ಸೆಪ್ಟೆಂಬರ್ 1ರಂದು ನಿಧನರಾದರು.
ಕರಾವಳಿಯ ಮಂಚಿ ಎಂಬ ಸಣ್ಣ ಹಳ್ಳಿಯ ಪ್ರತಿಭೆ, ದೇಶ ವಿದೇಶಗಳಲ್ಲಿ ರಂಗಭೂಮಿ, ಸಿನಿಮಾ, ಸಂಗೀತ ಕ್ಷೇತ್ರಗಳಲ್ಲಿ ಮಹಾನ್ ಸಾಧನೆ ಗೈದು ನಾಟಕದಲ್ಲಿ ಮಾತ್ರ ಮನುಷ್ಯ ಹೇಗಿದ್ನೋ ಹಾಗೆ ಜೀವಂತವಾಗಿ ಕಾಣಿಸುತ್ತಾನೆ ಎಂಬುದಕ್ಕೆ ಅನ್ವರ್ಥವಾಗಿದ್ದ ಶ್ರೀ ಬಿ.ವಿ. ಕಾರಂತರು ನಮ್ಮ ಹೆಮ್ಮಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ