90ರ ದಶಕದ ಕರ್ನಾಟಕದ ಕ್ರಿಕೆಟ್ ಪಾಲಿಗೆ ಅತ್ಯಂತ ಸುವರ್ಣಯುಗ ಎಂದರೂ ತಪ್ಪಾಗದು. ಭಾರತ ತಂಡದಲ್ಲಿ ಸುಮಾರು 5-6 ಆಟಗಾರರು ಕನ್ನಡಿಗರೇ ಇದ್ದಂತಹ ಕಾಲ. ಹೀಗೆ ಕುಂಬ್ಲೆ, ಶ್ರೀನಾಥ್, ವೆಂಕಿ, ದ್ರಾವಿಡ್, ಜೋಷಿ ಮುಂತಾದವರು ದೇಶದ ಪರವಾಗಿ ಭಾರತ ಕ್ರಿಕೆಟ್ ಭಾಗವಾಗಿದ್ದಾಗ, ಕರ್ನಾಟಕದ ತಂಡದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಹಿಡಿದ ಕೆಲವು ಅಗ್ರಗಣ್ಯರಲ್ಲಿ ಇಂದಿನ ನಮ್ಮ ಕಥಾ ನಾಯಕ ವಿಜಯ್ ಭಾರದ್ವಾಜ್ ಸಹಾ ಒಬ್ಬರಾಗಿದ್ದು, ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

ಬೆಂಗಳೂರಿನ ಸಂಸ್ಕಾರವಂತ ಸಂಪ್ರದಾಯಸ್ಥರ ಕುಟುಂಬದಲ್ಲಿ 15 ಆಗಸ್ಟ್ 1975ರಂದು ಜನಿಸಿದ ಮಗುವಿಗೆ, ಸ್ವಾತ್ರಂತ್ಯ ದಿನಾಚರಣೆಯ ವಿಜಯೋತ್ಸವದ ದಿನದಂದು ಹುಟ್ಟಿದ ಎನ್ನುವ ಕಾರಣದಿಂದಲೋ ಏನೋ ಅವರ ತಂದೆಯವರಾದ ಶ್ರೀ ರಾಘವೇಂದ್ರರಾವ್ ಅವರು ತಮ್ಮ ಮಗನಿಗೆ ವಿಜಯ್ ಎಂದು ನಾಮಕರಣ ಮಾಡಿರಬಹುದು. ಎನ್. ಆರ್. ಕಾಲೋನಿ ಬಳಿಯ ಸಾಧಾರಣ ವಠಾರದ ಮನೆಯಲ್ಲಿ ವಾಸವಾಗಿದ್ದಂತಹ ಮಧ್ಯಮ ವರ್ಗದ ಕುಟುಂಬ, ದುಡಿಯುವ ಕೈಗಳು ಒಂದಾದರೆ ತಿನ್ನುವ ಕೈಗಳು ಹತ್ತಾರು ಎನ್ನುವಂತಹ ಕುಟುಂಬದಲ್ಲಿ ವಿಜಯ್ ಆವರ ಹಿರಿಯ ಸಹೋದರ ಮತ್ತು ಸಹೋದರಿಯರು ಓದಿನಲ್ಲಿ ಅತ್ಯಂತ ಚುರುಕಾಗಿದ್ದು ತರಗತಿಯಲ್ಲಿ ಮೊದಲ ಸ್ಥಾನ ಕಟ್ಟಿಟ್ಟ ಬುತ್ತಿಯಾದರೆ, ಹುಡುಗು ಬುದ್ದಿಯ ವಿಜಯ್ ಕೇವಲ ಓದಿನಲ್ಲಷ್ಟೇ ಚುರುಕಾಗಿರದೇ, ಆಟ ಪಾಠಗಳಲ್ಲಿಯೂ ಅತ್ಯಂತ ಚುರುಕಾಗಿದ್ದರು. ಅಜ್ಜಿಯ ಮನೆ ಗಾಂಧಿ ಬಜಾರ್ ನಲ್ಲೇ ಇದ್ದ ಇದ್ದ ಕಾರಣ, ಅನೇಕ ಕ್ರಿಕಟಿಗರ ತವರು ಮನೆ ಎನ್ನಬಹುದಾದ National College play groundನಲ್ಲಿ ಬೆಳಗಿನಿಂದ ಸಂಜೆವರೆಗೂ ದಣಿವಿಲ್ಲದೇ ಕ್ರಿಕೆಟ್ ಆಡುವುದು ವಿಜಯ್ ಅವರಿಗೆ ರೂಢಿಯಾಗಿತ್ತು. ಅದೇ ಸಮಯದಲ್ಲಿ ಅವರ ಚಡ್ಡಿ ದೋಸ್ತ್, ಶ್ರೀನಿವಾಸ ಮೂರ್ತಿ ( ಮತ್ತೊಬ್ಬ ರಣಜಿ ಆಟಗಾರ) ಎಲ್ಲರ ಪ್ರೀತಿಯ ಜಾನಿ ಅವರೊಂದಿಗೆ ಟೆನಿಸ್ ಬಾಲ್ ನಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದರು.

ಕನ್ನಡಕಧಾರಿಯಾದರೂ ಇಡೀ ದಿನ ಪೂರ್ತಿ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಮಾಡಬಲ್ಲಂತಹ ಕ್ಷಮತೆಯನ್ನು ಬಾಲ್ಯದಿಂದಲೇ ರೂಢಿ ಮಾಡಿಕೊಂಡಿದ್ದ ವಿಜಯ್ ಅವರನ್ನು ಔಟ್ ಮಾಡಲು ಆಗದೇ ಶಪಿಸಿಕೊಂಡ ಬೌಲರ್ ಗಳ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ನೋಡಲು ಸಣಕಲು ಶರೀರದ ಪೀಚು ಹುಡುಗನಾಗಿದ್ದರೂ, ಕೇವಲ ರಕ್ಷಣಾತ್ಮಕ ಆಟವಲ್ಲದೇ, ಆಕ್ರಮಣಕಾರಿಯಾಗಿ ಮುನ್ನುಗ್ಗಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುವ ಛಾತಿಯನ್ನು ಹೊಂದಿದ್ದಲ್ಲದೇ, ತಂಡಕ್ಕೆ ಅವಶ್ಯಕತೆ ಇದ್ದಾಗ, ಬಲಗೈ ಆಫ್ ಬ್ರೇಕ್ ಬೌಲಿಂಗ್ ಕೂಡಾ ಮಾಡಬಲ್ಲಂತಹ ಆಟಗಾರನಾಗಿದ್ದರಿಂದ ಬಸವನಗುಡಿ, ಎನ್. ಆರ್. ಕಾಲೋನಿ, ಶ್ರೀನಿವಾಸನಗರ ಸುತ್ತಮುತ್ತಲಿನ ಬಹುತೇಕ ತಂಡಗಳ ಪರವಾಗಿ ಟೆನಿಸ್ ಬಾಲ್ ಟೂರ್ನಮೆಂಟ್ಗಳಲ್ಲಿ ಆಡುತ್ತಿದ್ದಲ್ಲದೇ, ವಾರಾಂತ್ಯದಲ್ಲಿ ರಾಜ್ಯಾದ್ಯಂತ ನಡೆಯುತ್ತಿದ್ದ ವಿವಿಧ ಟಿನಿಸ್ ಬಾಲ್ ಟೂರ್ನಿಗಳಲ್ಲಿ ಆಡುವ ಮೂಲಕ ಪ್ರಸಿದ್ಧಿಯನ್ನು ಪಡೆಯುತ್ತಿದ್ದಂತೆಯೇ, ನಿಧಾನವಾಗಿ ಟೆನಿಸ್ ಬಾಲ್ ನಿಂದ ಲೆದರ್ ಬಾಲ್ ಕ್ರಿಕೆಟ್ಟಿಗೆ ಭಡ್ತಿ ಪಡೆದು ಅಲ್ಲಿಯೂ ಸಹಾ ಉತ್ತಮವಾಗಿ ಅಡ ತೊಡಗಿದರು. ಅವರ ಆದೃಷ್ಟವೆಂದರೆ ಅವರು ಅಭ್ಯಾಸ ಮಾಡುತ್ತಿದ್ದ ನ್ಯಾಷಿನಲ್ ಕಾಲೇಜ್ ಮೈದಾನದಲ್ಲೇ ಕರ್ನಾಟಕ ಕಂಡ ಶ್ರೇಷ್ಠ ಆಲೌಂಡರ್ ಆಗಿದ್ದಂತಹ ವಿಜಯ ಕೃಷ್ಣ ಅವರೂ ಸಹಾ ಆಡುತ್ತಿದ್ದು ಅವರನ್ನು ನೋಡುತ್ತಲೇ ವಿಜಯ್ ಸಹಾ ಅವರಂತೆಯೇ ಪ್ರಬುದ್ಧ ಆಲೌಂಡರ್ ಆಟಗಾರರಾಗಿ ರೂಪುಗೊಂಡರು.

ಹಂತ ಹಂತವಾಗಿ ಉತ್ತಮ ಆಟಗಾರನಾಗಿ ರೂಪುಗೊಂಡ ವಿಜಯ್ ಕರ್ನಾಟಕದ ತಂಡದ ದಿಗ್ಗಜ ಆಟಗಾರರು ಭಾರತ ತಂಡದ ಪರವಾಗಿ ಆಡಲು ಹೋದಾಗ, 1994-95ರ ಋತುವಿನಲ್ಲಿ ಕರ್ನಾಟಕದ ಪರ ರಣಜಿ ತಂಡಕ್ಕೆ ಮಧ್ಯಮ ಕ್ರಮಾಂಕದ ಆಟಗಾರನಾಗಿ ಆರ್ ವಿಜಯ್ ಎಂಬ ಹೆಸರಿನಲ್ಲಿ ಪಾದಾರ್ಪಣೆ ಮಾಡಿದ ಮೊದಲ ಋತುವಿನಲ್ಲಿ ಅಷ್ಟೇನೂ ಸಾಧನೆ ಮಾಡದೇ ಹೊದರೂ ಜಾವಗಲ್ ಶ್ರೀನಾಥ್ ಪ್ರೀತಿಯಿಂದ ಇಟ್ಟ ಪಿಂಗ ಎಂಬ ಅಡ್ಡ ಹೆಸರು ಪಡೆದದ್ದು ವಿಶೇಷವಾಗಿತ್ತು. ಮುಂದಿನ ಋತುವಿನಲ್ಲಿ ತನ್ನ ಹೆಸರನ್ನು ವಿಜಯ್ ಆರ್ ಭಾರದ್ವಾಜ್ ಎಂದು ಹೆಸರು ಬದಲಿಸಿಕೊಂಡ ನಂತರ ಹಂತ ಹಂತವಾಗಿ ಆಟದಲ್ಲಿ ಸುಧಾರಣೆ ಪಡೆದುಕೊಂಡು ಕರ್ನಾಟಕದ ಪ್ರಮುಖ ಆಧಾರ ಸ್ಥಂಭವಾದದ್ದು ಈಗ ಇತಿಹಾಸ. 1998-99ರ ಋತುವಂತೂ ಅವರ ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೆ ತಲುಪಿ, ಆ ಋತುವಿನಲ್ಲಿ 1463 ರನ್ ಜೊತೆಗೆ 21 ವಿಕೆಟ್ ಪಡೆದರು. ಈ ಋತುವಿನಲ್ಲಿ ಅವರು ಔಟಾಗದೆ 200, 175, 171 ಮತ್ತು 124 ರನ್ ಗಳಂತಹ ದೊಡ್ಡ ಇನ್ನಿಂಗ್ಸ್ ಆಡಿದರು.
ವಿಜಯ್ ಭಾರದ್ವಾಜ್ ಎಂದ ತಕ್ಷಣವೇ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ನೆನಪಾಗೋದೇ ಅವರು ಆಡುತ್ತಿದ್ದ ಸಮಯದಲ್ಲಿ 3 ರಣಜಿ ಟ್ರೋಫಿ, 2 ಇರಾನಿ ಕಪ್ (1996, 1998) ಗೆದ್ದ ಕರ್ನಾಟಕ ತಂಡ ಬೆನ್ನೆಲುಬಾಗಿದ್ದವರು. ಆಡಿದ ಮೂರು ರಣಜಿ ಫೈನಲ್ಗಳಲ್ಲಿ, 1996ರ ಫೈನಲ್ ನಲ್ಲಿ 146 ರನ್, 1998ರ ಫೈನಲ್ ನಲ್ಲಿ122 ರನ್ ಹೀಗೆ 2 ಶತಕಗಳನ್ನು ಗಳಿಸಿದರೆ, 1999ರ ಫೈನಲ್ ನಲ್ಲಿ 86 ಮತ್ತು 75 ರನ್ ಹೀಗೆ 2 ಅರ್ಧಶತಕಗಳನ್ನು ಗಳಿಸಿದ್ದರೂ ಕೈಮೀರಿ ಹೋಗಿದ್ದ ಪಂದ್ಯವನ್ನು ಮತ್ತೆ ತಮ್ಮ ಅದ್ಭುತ ಬೌಲಿಂಗ್ ಕೈಚಳಕದಿಂದ ಗೆಲ್ಲಿಸಿದ ಪಂದ್ಯವನ್ನು ನೆನಪಿಸಿಕೊಳ್ಳದೇ ಹೋದಲ್ಲಿ ತಪ್ಪಾದೀತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆ ಫೈನಲ್ ಪಂದ್ಯದಲ್ಲಿ ಮೊದಲು ಆಡಿದ ಕರ್ನಾಟಕ ವಿಜಯ್ ಭಾರದ್ವಾಜ್ ಅವರ 86 ರನ್ನುಗಳ ನೆರವಿನಿಂದ 304 ರನ್ನುಗಳಿಸಿದರೆ, ಮಧ್ಯಪ್ರದೇಶದ ಪರ ಸಂತೋಷ್ ಸಾಹು ಬಾರಿಸಿದ ಭರ್ಜರಿ 130 ರನ್ನುಗಳಿಂದಾಗಿ 379 ರನ್ನುಗಳನ್ನು ಗಳಿಸಿ ಅಮೂಲ್ಯವಾದ 75 ರನ್ನುಗಳ ಮುನ್ನಡೆಯನ್ನು ಗಳಿಸಿತು. ಎರಡನೇ ಇನ್ನಿಂಗ್ಸಿನಲ್ಲಿ ಆರಂಭಿಕ ಆಟಗಾರ ಜೆ. ಅರುಣ್‌ಕುಮಾರ್ 147 ಮತ್ತು ವಿಜಯ್ ಬಾರಿಸಿದ 75 ರನ್ನುಗಳಿಂದ 321/7 ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಮಧ್ಯಪ್ರದೇಶಕ್ಕೆ ಅಂತಿಮ ದಿನದಲ್ಲಿ ಗೆಲ್ಲಲು 247 ರನ್ ಗಳ ಆವಶ್ಯಕತೆ ಇತ್ತು. ಗೆಲ್ಲುವುದು ಬಿಡಿ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರೂ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಟ್ರೋಫಿ ಮಧ್ಯಪ್ರದೇಶದ್ದಾಗಿರುತ್ತಿತ್ತು.

ಆ ಫೈನಲ್ ಪಂದ್ಯದ ಕಡೆಯ ದಿನ ಮಧ್ಯಪ್ರದೇಶದ ತಂಡ ಧನಾತ್ಮಕವಾಗಿ ಸುಲಭವಾಗಿ ಪಂದ್ಯವನ್ನು ಗೆಲ್ಲುವುದರ ಬದಲು ನಿಧಾನವಾಗಿ ಎಚ್ಚರಿಕೆಯಿಂದ ಆಡುತ್ತಾ ಡ್ರಾ ಮಾಡಿಕೊಳ್ಳುವತ್ತ ಹರಿಸಿತ್ತು ತನ್ನ ಚಿತ್ತ. ಆ ದಿನ ಭೌತಿಕವಾಗಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರೂ, ಮನಸ್ಸೆಲ್ಲಾ ರಣಜಿ ಫೈನಲ್ ಪಂದ್ಯದತ್ತವೇ ಇದ್ದು ಗಳಿಗೆ ಗಳಿಗೆಗೂ Cricinfo ನೋಡುತ್ತಲೇ ಇದ್ದ ನನಗೆ ಟೀ ಸಮಯಕ್ಕೆ ಸರಿಯಾಗಿ ಮಧ್ಯಪ್ರದೇಶ 66 ಓವರ್ ಗಳಲ್ಲಿ 130/4 ರನ್ನುಗಳನ್ನು ಗಳಿಸಿದ್ದನ್ನು ನೋಡಿ, ಅವರು ಸುಲಭವಾಗಿ ಅಂತಿಮ ಹಂತದ 24 ಓವರ್ ಗಳನ್ನು ರಕ್ಷಣಾತ್ಮಕವಾಗಿ ಅಡಿ, ರಣಜಿ ಟ್ರೋಫಿ ಗೆಲ್ಲುತ್ತಾರೆ ಪಂದ್ಯ ನಮ್ಮ ಕೈ ಬಿಟ್ಟಿತು ಎಂದೇ ಭಾವಿಸಿ ಕೆಲ ಕಾಲ ಸ್ಕೋರ್ ನೋಡುವುದನ್ನು ಬಿಟ್ಟಿದ್ದೆ.
ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ 200ಕ್ಕೂ ಹೆಚ್ಚು ಎಸೆತಗಳನ್ನೆದುರಿಸಿ ಒಂದು ತುದಿಯಲ್ಲಿ ಬಂಡೆಯಂತೆ ಆಡುತ್ತಿದ್ದ ಅಬ್ಬಾಸ್ ಅಲಿಯನ್ನು ಹೇಗಾದರೂ ಮಾಡಿ ಔಟ್ ಮಾಡಲೇ ಬೇಕೆಂದು ನಿರ್ಧರಿಸಿದ ನಾಯಕ ಸುನೀಲ್ ಜೋಶಿ, ಅದಾಗಲೇ ದೇವೇಂದ್ರ ಬುಂದೇಲಾ ವಿಕೆಟ್ ಪಡೆದಿದ್ದ ವಿಜಯ್ ಕೈಗೆ ಚೆಂಡನ್ನು ನೀಡಿದ ನಂತರ ನಡೆದದ್ದೆಲ್ಲವೂ ಇತಿಹಾಸ. ಪಂದ್ಯ ಗೆಲ್ಲಲು ಅವಶ್ಯಕವಿದ್ದ 6 ವಿಕೆಟ್ ಗಳ ಪೈಕಿ ಅಬ್ಬಾಸ್ ಅಲಿಯ ವಿಕೆಟ್ ಜೋಷಿ ಪಾಲಾದರೆ, ಮಧ್ಯಪ್ರದೇಶದ ಉಳಿದ 5 ಬಾಲಂಗೋಚಿಗಳು ವಿಜಯ್ ಭಾರದ್ವಾಜ್ ಅವರ ಸ್ಪಿನ್ ಬೌಲಿಂಗ್ ಗೆ ತತ್ತರಿಸಿ 150ಕ್ಕೆ ಆಲೌಟ್ ಆಗುವ ಮೂಲಕ 96 ರನ್ ಗಳ ಅಭೂತ ಪೂರ್ವ ವಿಜಯವನ್ನು ಗಳಿಸಿದ್ದದ್ದನ್ನು ನೋಡಿ ಸಂತೋಷದಿಂದ ಗೆಳೆಯರಿಗೆಲ್ಲಾ ಟ್ರೀಟ್ ಕೊಡಿಸಿದ್ದ ನೆನಪು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ.

ವಿಜಯ್ ಭಾರದ್ವಾಜ್ ಅವರ ಈ ಪರಿಯಾದ ಆಲ್ರೌಂಡ್ ಅಟ ಸಹಜವಾಗಿಯೇ ಭಾರತದ ಆಯ್ಕೆಗಾರರ ಗಮನ ಸೆಳೆದ ಕಾರಣ, 1999 ರಲ್ಲಿ ಕೀನ್ಯಾದಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಕೀನ್ಯಾ ಮತ್ತು ಜಿಂಬಾಬ್ವೆ ನಡುವಿನ LG ಕಪ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಒಂದು ವಿಕೆಟ್ ಪಡೆದು ಅಜೇಯರಾಗಿ 18 ರನ್ ಗಳಿಸುವ ಮೂಲಕ ಪಂದ್ಯದ ಗೆಲುವಿಗೆ ಸಹಕಾರಿಯಾದರು. ಇಡೀ ಪಂದ್ಯಾವಳಿಯಲ್ಲಿ ಅಜೇಯರಾಗಿ ಒಟ್ಟು 89 ರನ್ ಗಳಿಸಿದ್ದಲ್ಲದೇ, ಬೌಲಿಂಗ್ ನಲ್ಲಿ ಒಟ್ಟು 10 ವಿಕೆಟ್ ಪಡೆಯುವ ಮೂಲಕ ಭಾರತ ನೈರೋಬಿಯ ಫೈನಲ್‌ನಲ್ಲಿ ಸೋಲುಂಡರೂ, ಭಾರದ್ವಾಜ್ ಅವರ ಆಲೌಂಡರ್ ಆಟವನ್ನು ಪರಿಗಣಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನರಾಗುವ ಮೂಲಕ ಭಾರತದ ಭವಿಷ್ಯದ ಆಟಗಾರ ಎಂಬ ಕೀರ್ತಿಗೆ ಪಾತ್ರದಾದರು.
ಆದಾದ ನಂತರ ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಮತ್ತು ಏಕದಿನ ಸರಣಿಗೆ ಆಯ್ಕೆಯಾದ ವಿಜಯ್ ನಿರೀಕ್ಷಿಸಿದ ಮಟ್ಟದ ಆಟವನ್ನು ಆಡಲು ವಿಫಲರಾಗಿ ಐದು ಏಕದಿನ ಪಂದ್ಯಗಳಲ್ಲಿ ಕೇವಲ 47 ರನ್ ಗಳಿಸಿದರೆ ಬೌಲಿಂಗ್‌ನಲ್ಲಿ ಐದು ವಿಕೆಟ್ ಗಳಿಸಿದರು.ಇನ್ನು ಆಡಿದ ಎರಡು ಟೆಸ್ಟ್‌ಗಳಲ್ಲಿ ಕೇವಲ 22 ರನ್ ಗಳಿಸಿ, ಒಂದು ವಿಕೆಟ್ ಪಡೆಯುವ ಮೂಲಕ ಎಲ್ಲರನ್ನೂ ನಿರಾಶೆಗೊಳಿಸಿದರು.
ಇವೆಲ್ಲದರ ಮಧ್ಯೆ ಪದೇ ಪದೇ ಬೆನ್ನು ನೋವಿನಿಂದ ಬಳಲುತ್ತಿದ್ದ ಭಾರದ್ವಾಜ್ ಸ್ಲಿಪ್-ಡಿಸ್ಕ್ ಸಮಸ್ಯೆಯಿಂದ ಒಂದೂವರೆ ವರ್ಷಗಳ ಕಾಲ ಹಾಸಿಗೆಯಲ್ಲಿ ಕಳೆದ ನಂತರದ ಮತ್ತೆ ಅವರ ಮೇಲೆ ನಂಬಿಕೆ ಇರಿಸಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿದ ನಂತರ ಸಿಡ್ನಿ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸಿನಲ್ಲಿ ಕೇವಲ 6 ರನ್ನುಗಳನ್ನು ಗಳಿಸಿದರೆ, ಗಾಯಗೊಂಡ ಪರಿಣಾಮ ಎರಡನೇ ಇನ್ನಿಂಗ್ಸ್ ಆಡಲು ಆಗದೇ ಕೈಗೆ ಸಿಕ್ಕ ಸುವರ್ಣಾವಕಾಶವನ್ನು ಹಾಳು ಮಾಡಿಕೊಳ್ಳುವ ಮೂಲಕ ಶಾಶ್ವತವಾಗಿ ಅವರ ಟೆಸ್ಟ್ ವೃತ್ತಿಜೀವನ ಕೊನೆಗೊಂಡಿತು.
ಮರಳಿ ಯತ್ವವ ಮಾಡು ಎಂಬಂತೆ ಮತ್ತೆ ಕರ್ನಾಟಕದ ಪರ ದೇಸೀ ಕ್ರಿಕೆಟ್ಟಿನಲ್ಲಿ ಭರ್ಜರಿಯಾದ ಪ್ರದರ್ಶನಗಳನ್ನು ನೀಡಿದ್ದನ್ನು ಗಮನಿಸಿ 2002 ರಲ್ಲಿ ಜಿಂಬಾಬ್ವೆ ವಿರುದ್ಧ ಗುವಾಹಟಿಯ ಏಕದಿನ ಪಂದ್ಯಕ್ಕೆ ಆಯ್ಕೆಯಾದರೂ ಮೊದಲ ಎಸೆತದಲ್ಲೇ ರನೌಟ್ ಆಗುವ ಮೂಲಕ ವಿಜಯ್ ಭಾರದ್ವಾಜ್ ಅವರ ಅಂತರಾಷ್ಟ್ರೀಯ ಕ್ರಿಕೆಟ್ ಕೊನೆಗೊಂಡಿತು. ಮತ್ತೆ ಇಂಗ್ಲೆಂಡ್ ವಿರುದ್ಧ ಭಾರತ A ತಂಡದೊಂದಿಗೆ 2003 ರ ಪ್ರವಾಸಕ್ಕೆ ಆಯ್ಕೆಯಾದರೂ ಮುಂದೆ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.

ಕರ್ನಾಟಕದ ಮತ್ತೊಬ್ಬ ಮಹಾನ್ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಲೆಯಂತೆಯೇ ಕನ್ನಡಕವನ್ನು ಧರಿಸಿ ಆಡುತ್ತಿದ್ದ ವಿಜಯ್ ಭಾರದ್ವಾಜ್, ಆನಂತರ ಅನಿಲ್ ಕುಂಬ್ಲೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಕನ್ನಡಕವಿಲ್ಲದೇ ಆಡುತ್ತಿದ್ದದ್ದರಿಂದ ಪ್ರಭಾವಿತರಾಗಿಯೋ ಏನೋ, ಅವರೂ ಸಹಾ ಕನ್ನಡಕದಿಂದ ಶಾಶ್ವತವಾಗಿ ಹೊರ ಬರುವ ಸಲುವಾಗಿ ಕಣ್ಣಿನ ಚಿಕಿತ್ಸೆಗೆ ಒಳಗಾದರು. ದುರಾದೃಷ್ಟವಷಾತ್ ಕಣ್ಣಿನ ಶಸ್ತ್ರಚಿಕ್ತಿತ್ಸೆ ಫಲಕಾರಿಯಾಗದೇ ಕಣ್ಣಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿ ಅವರ ದೃಷ್ಟಿ ಮತ್ತಷ್ಟೂ ಕಡಿಮೆಯಾಯಿತು. ಇದರಿಂದಾಗಿ ಫೀಲ್ಡಿಂಗ್ ಮಾಡುವಾಗ ಚೆಂಡನ್ನು ಸರಿಯಾಗಿ ಹಿಡಿಯಲು ಆಗುತ್ತಿರಲಿಲ್ಲ. ಬ್ಯಾಟಿಂಗ್ ಮಾಡುವುದು ಸಹಾ ಕಷ್ಟಕರವಾಗಿತ್ತಾದರೂ ಕರ್ನಾಟಕದ ಪರ ಕಡೆಯದಾಗಿ 2004–05ರ ಋತುವಿನಲ್ಲಿ ಆಡಿದ ನಂತರ ಕರ್ನಾಟಕ ತಂಡದಲ್ಲಿ ಸ್ಥಾನ ದೊರಕದ ಕಾರಣ 2005ರಲ್ಲಿ ಜಾರ್ಖಂಡ್ ಪರವಾಗಿ ರಣಜಿ ಆಟವಾಡಿದ ನಂತರ ಟ್ರೋಫಿ ಪ್ಲೇಟ್ ಲೀಗ್‌ಗಾಗಿ ಆಡಿದ ನಂತರ 2006ರ ನವೆಂಬರ್ 4 ರಂದು ಕ್ರಿಕೆಟ್ಟಿನ ಎಲ್ಲಾ ಪ್ರಕಾರಗಳಿಂದ ನಿವೃತ್ತರಾದರು. 10 ವರ್ಷಗಳ ದೇಶೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ 96 ಪ್ರಥಮ ದರ್ಜೆ ಪಂದ್ಯಗಳಲ್ಲಿ 5553 ರನ್ ಮತ್ತು 59 ವಿಕೆಟ್, 1707 ರನ್ ಮತ್ತು 72 ಪಟ್ಟಿ ಎ ಪಂದ್ಯಗಳಲ್ಲಿ 46 ವಿಕೆಟ್ ಪಡೆದರು. ಭಾರತದ ಪರ 10 ಏಕದಿನ ಪಂದ್ಯ ಮತ್ತು ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 1998-99ರ ರಣಜಿ ಟ್ರೋಫಿ ಟೂರ್ನಿಯಲ್ಲಿ ವಿಜಯ್ ಭಾರದ್ವಾಜ್ ಗಳಿಸಿದ್ದ 1260 ರನ್’ಗಳು ಕರ್ನಾಟಕದ ಮಟ್ಚಿಗೆ ಇವತ್ತಿಗೂ ದಾಖಲೆಯಾಗಿಯೇ ಉಳಿದಿರುವುದು ಗಮನಾರ್ಹವಾಗಿದೆ.

ಕ್ರಿಕೆಟ್ ಆಟಗಾರರಾಗಿ ನಿವೃತ್ತಿಯನ್ನು ಹೊಂದಿದ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಇರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಪ್ರಮಾಣೀಕರಿಸಿದ ಮೂರನೇ ಹಂತದ ತರಬೇತುದಾರರಾದ ಪರಿಣಾಮ, IPLನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರವಾಗಿ ಮೊದಲ 3 ಸೀಸನ್‌ಗಳಲ್ಲಿ ಸಹಾಯಕ ತರಬೇತುದಾರರಾಗಿ ಕಾರ್ಯನಿರ್ವಹಿಸಿದ ನಂತರ ವಿವಿಧ ಛಾನೆಲ್ಲುಗಳಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿದ್ದಲ್ಲದೇ,

19 ವರ್ಷದೊಳಗಿನವರ ಕರ್ನಾಟಕ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಅವರು 2016 ಐಸಿಸಿ ವಿಶ್ವ ಟ್ವೆಂಟಿ 20 ಗಾಗಿ ಓಮನ್‌ನ ಫೀಲ್ಡಿಂಗ್ ಕೋಚ್ ಆಗಿದ್ದರು. ಅನಿಲ್ ಕುಂಬ್ಲೆ ಮತ್ತು ಜಾವಗಲ್ ಶ್ರೀನಾಥ್ ಅವರ ನೇತೃತ್ವದಲ್ಲಿ ಕ್ರಿಕೆಟಿಗರೇ ಕರ್ನಾಟಕ ಕ್ರಿಕೆಟ್ ಮಂಡಳಿಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಅವಧಿಯಲ್ಲಿ ಅವರು KSCAಯ ವ್ಯವಸ್ಥಾಪಕ ಸಮಿತಿಯ ಸದಸ್ಯರಾಗಿದ್ದರು.

Star Sports ಕನ್ನಡ ಛಾನೆಲ್ ಆರಂಭಿಸಿದ ನಂತರ ಅದರ ಭಾಗವಾಗಿ ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಕನ್ನಡದಲ್ಲಿ ವೀಕ್ಷಕ ವಿವರಣೆಯನ್ನು ನೀಡುವ ಮೂಲಕ ಎಲ್ಲ ಕನ್ನಡಿಗರ ಮನಸೆಳಿದ ವಿಜಯ್ ನಂತರದ ದಿನಗಳಲ್ಲಿ ತಮ್ಮ ಬಾಲ್ಯದ ಸ್ನೇಹಿತ ಶ್ರೀನಿವಾಸ ಮೂರ್ತಿ (ಜಾನಿ) ಅವರೊಂದಿಗೆ DRS ಎಂಬ YouTube Channel ಆರಂಭಿಸಿ ಅದರ ಮೂಲಕ ಪ್ರಪಂಚಾದ್ಯಂತ ಕ್ರಿಕೆಟ್ ಲೋಕದಲ್ಲಿ ನಡೆಯುತ್ತಿರುವ ಆಗು ಹೋಗುಗಳನ್ನು ಕನ್ನಡಿಗರಿಗೆ ಉಣಬಡಿಸುತ್ತಿದ್ದಾರೆ. ಪ್ರಸ್ತುತವಾಗಿ ವಿಜಯ್ ಭಾರದ್ವಾಜ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಟ್ಯಾಲೆಂಟ್ ಸ್ಕೌಟ್ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ವಿಜಯ್ ಭಾರದ್ವಾಜ್ ಅವರ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ, ಈಗಾಗಾಲೇ ತಿಳಿಸಿದಂತೆ ಬಹಳ ಆಚಾರ ವಿಚಾರಗಳ ಕುಟುಂಬದಿಂದ ಬಂದಿರುವ ಕಾರಣ, ಅದೆಷ್ಟೂ ಬಾರಿ ಇಡೀ ದಿನ ಏಕಾದಶಿಯ ಉಪವಾಸ ಮಾಡಿಕೊಂಡೇ ಕ್ರಿಕೆಟ್ ಪಂದ್ಯವನ್ನು ಆಡಿರುವ ಉದಾಹರಣೆಗಳು ಇದೆ. ಅಷ್ಟೇ ಅಲ್ಲದೇ, ಅವರಿಗೆ ಸುಮಾರು 1500 ರಿಂದ 2000 ದಾಸರ ಪದಗಳು ಕಂಠಪಾಠವಾಗಿದ್ದು, ಗಂಟೆಗಟ್ಟಲೆ ಸುಶ್ರಾವ್ಯವಾಗಿ ಹಾಡಬಲ್ಲರು. ಧಾರ್ಮಿಕ ವಿಷಯಗಳ ಬಗ್ಗೆಯೂ ಉತ್ತಮ ಆಭಿರುಚಿಯನ್ನು ಹೊಂದಿರುವ ವಿಜಯ್ ಕೇವಲ್ ಕ್ರಿಕೆಟ್ ವಿಶ್ಲೇಷಣೆಯಲ್ಲದೇ ಉತ್ಕೃಷ್ಟವಾದ ಧಾರ್ಮಿಕ ಉಪನ್ಯಾಸಗಳನ್ನೂ ನೀಡಬಲ್ಲರು ಎನ್ನುವುದು ಅಭಿನಂದನಾರ್ಹವಾಗಿದೆ,

ಕರ್ನಾಟಕದ Batsman ವಿಜಯ್ ಭಾರದ್ವಾಜ್ ಒಬ್ಬ Batting allrounder ಆಗಿದ್ದರೆ, Bowler ಸುನೀಲ್ ಜೋಷಿಯವರು bolwling allrounder ಆಗಿದ್ದರು. ದುರಾದೃಷ್ಟವೆಂದರೆ, ಭಾರತದ ಕ್ರಿಕೆಟ್ ಆಯ್ಕೆದಾರರು ವಿಜಯ್ ಭಾರದ್ವಾಜ್ ಅವರಿಂದ ಉತೃಷ್ಟ ಮಟ್ಟದ ಬೋಲಿಂಗ್ ಮತ್ತು ಸುನೀಲ್ ಜೋಷಿಯವರಿಂದ ಶ್ರೇಷ್ಠ ಮಟ್ಟದ ಬ್ಯಾಟಿಂಗ್ ನಿರೀಕ್ಷೆ ಮಾಡಿದ್ದ ಪರಿಣಾಮ ಅವರಿಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಆಗಲಿಲ್ಲ ಎನ್ನುವುದೇ ನನ್ನ ವಯಕ್ತಿಯ ಆಭಿಪ್ರಾಯವಾದರೂ, ಕರ್ನಾಟಕದ ಪರವಾಗಿ ಹತ್ತು ವರ್ಷಗಳ ಕಾಲ ಆಪತ್ಭಾಂಧವರಾಗಿದ್ದ ವಿಜಯ್ ಆರ್ ಭಾರದ್ವಾಜ್ , ಎಲ್ಲರ ಪ್ರೀತಿಯ ಪಿಂಗ ನಿಜವಾಗಿಯೂ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ