ಅದು 1982ರ ಬೇಸಿಗೆಯ ರಜೆಯ ಸಮಯ ಪಾಣೇಮಂಗಳೂರಿನ ಬಳಿಯ ನರಿಕೊಂಬು ಎಂಬು ಗ್ರಾಮದಲ್ಲಿ ಸುಮಾರು 3 ವಾರಗಳ ಕಾಲ ಶ್ರೀ ಕೃಷ್ಣ ಸೋಮಯಾಜಿಗಳು ಆಯೋಜಿಸುತ್ತಿದ್ದ ವೇದ ಶಿಬಿರಕ್ಕೆ ಶಿಬಿರಾರ್ಥಿಯಾಗಿ ಹೋಗಿದ್ದಾಗ ಮಧ್ಯಾಹ್ನ 12:30ಕ್ಕೆ ಊಟ ಮುಗಿಸಿ ಮುಂದಿನ ಅವಧಿ 2:30ರ ನಡುವಿನ ಬಿಡುವಿನ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದಿತ್ತು ಇಲ್ಲವೇ ಅಲ್ಲಿಯೇ ಇದ್ದ ಸಣ್ಣ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಬಹುದಿತ್ತು. ಆಗ ನನಗೆ ಸಿಕ್ಕ ಪುಸ್ತಕವೇ ಆತ್ಮಾಹುತಿ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿನ ಬಹುತೇಕ ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಿಗಳಾಗಿದ್ದಂತಹ ವೀರ ಸಾವರ್ಕರ್ ಅವರ ಸಾಹಸಗಳನ್ನು ಓದುತ್ತಾ ಹೋದಂತೆ ಮೈಯೆಲ್ಲಾ ಪುಳಕಿತವಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ಆ ಶಿಬಿರದ ಗೀತೆಯಾಗಿ ಓ ದಾರಿಗನೇ ಪ್ರಿಯ ನೇಹಿಗನೇ, ಗೈಯುವ ಬಾ ನವಯುಗ ನಿರ್ಮಾಣ, ಸಮಾಜದೇವತೆಗರ್ಪಿತವಾಗಲಿ ನಮ್ಮೆಲ್ಲ ತನು ಮನ ಧನ ಪ್ರಾಣ|| ಹೇಳಿಕೊಡುತ್ತಿದ್ದರು. ಅದೇ ಶಿಬಿರದಲ್ಲಿ ಕೆಲ ದಿನಗಳ ನಂತರ ಮಧ್ಯಾಹ್ನ ಅವಧಿಯನ್ನು ತೆಗೆದುಕೊಳ್ಳಲು ಬಂದ ವಕ್ತಾರರಾಗಿ ಶ್ರೀಯುತ ಶಿವರಾಮು ಅವರು ಬಂದಿದ್ದು ಅವರೇ ಆತ್ಮಾಹುತಿ ಮತ್ತು ನಮ್ಮ ಶಿಬಿರ ಗೀತೆಯ ಲೇಖಕರು ಎಂದು ತಿಳಿದಾಗ ಆನಂದ ಹೇಳಾಲಾಗದು. ಮುಂದಿನ ಒಂದು ಗಂಟೆಗಳ ಕಾಲ ಸಾವರ್ಕರ್ ಆವರ ಯಶೋಗಾಥೆ, ಇಂಗ್ಲೇಂಡಿನಿಂದ ಬೈಬಲ್ ಪುಸ್ತಕದಲ್ಲಿ ಬಂದೂಕನ್ನು ಭಾರತಕ್ಕೆ ಕಳುಹಿಸುತ್ತಿದ್ದದ್ದು, ಹಡುಗಿನಿಂದ ಸಮುದ್ರಕ್ಕೆ ಹಾರಿ ಈಜಿ ದಡ ಸೇರಿದ್ದು, 50 ವರ್ಷಗಳ ಕಾಲ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸಿದ ಕರಾಳತೆಯನ್ನು ಕಣ್ಣಿಗೆ ಕಟ್ಟಿದಂತೆ ಶಿವರಾಮು ಅವರಿಂದಲೇ ಕೇಳುವ ಸೌಭಾಗ್ಯ ನಮಗೆ ದೊರೆತ ನಂತರ ಅವರ ಅಭಿಮಾನಿಯಾಗಿ ರಾಷ್ತ್ರೀಯ ಚಿಂತನೆಯ ಆವರ ಅನೇಕ ಕೃತಿಗಳನ್ನು ಓದುವ ಸೌಭಾಗ್ಯ ನನ್ನದಾಗಿತ್ತು. ಅಂತಹ ಮಹಾನ್ ಸಾಹಿತಿಯ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಕನಕಪುರ ಮೂಲದ ಸಂಪ್ರದಾಯಸ್ಥ ಕುಟುಂಬದವರಾಗಿದ್ದ ಶ್ರೀ ಸೀತಾರಾಮಯ್ಯ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳಿಗೆ 1934ರ ಜುಲೈ 8 ಮಳವಳ್ಳಿಯಲ್ಲಿ ಜನಿಸಿದ ಮುದ್ದಾದ ಮಗುವಿಗೆ ಶಿವರಾಮಯ್ಯ ಎಂದು ನಾಮಕರಣ ಮಾಡಿದರಾದರೂ, ಎಲ್ಲರಿಗೂ ಪ್ರೀತಿಯಿಂದ ಶಿವರಾಮು ಎಂದೇ ಚಿರಪರಿಚಿತರಾದರು. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಳವಳ್ಳಿಯಲ್ಲೇ ಮಾಡುವಾಗ ಪಠ್ಯಪುಸ್ತಕಗಳಿಗಿಂತಲೂ ಸ್ವಾತ್ರಂತ್ರ್ಯ ಹೋರಾಟದ ರಾಷ್ತ್ರೀಯ ಚಿಂತನೆಗಳುಳ್ಳ ವಿಚಾರಧಾರೆಯ ಪುಸ್ತಕಗಳನ್ನು ಓದುವ ಚಟವನ್ನು ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರಿಂದ ಬಳುವಳಿಯಾಗಿ ಪಡೆದ ಕಾರಣ ಸಣ್ಣ ವಯಸ್ಸಿನಲ್ಲೇ ಕಥೆ, ಕವನಗಳನ್ನು ಬರೆಯಲಾರಂಭಿಸಿದ ಶಿವರಾಮುವಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶಾಖೆಯ ಪರಿಚಯವಾದ ನಂತರ ಅವರ ಜೀವನದಲ್ಲಿ ಭಾರೀ ಬದಲಾವಣೆಯನ್ನು ತಂದಿತು.
1947ರಲ್ಲಿ ದೇಶಕ್ಕೆ ಸ್ವಾತ್ರಂತ್ರ ದೊರೆತು, 1948ರಲ್ಲಿ ಗಾಂಧಿಯವರ ಹತ್ಯೆಯ ಹಿನ್ನಲೆಯಲ್ಲಿ, ಅಂದಿನ ಸರ್ಕಾರ ಸಂಘದ ಮೇಲೆ ನಿರ್ಭಂಧ ಹೇರಿದ್ದರ ವಿರುದ್ಧ ಚನ್ನಪಟ್ಟಣದಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಕ್ಕೆ ಶಿವರಾಮುರವರು ಬಂಧಿತರಾದಾಗ ಅವರ ವಯಸ್ಸು ಕೇವಲ 14. ಚಿಕ್ಕ ಹುಡುಗನಾಗಿದ್ದ ಕಾರಣ, ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳಿಸಿದ ನಂತರ ಓದನ್ನು ಮುಂದುವರೆಸಿ ಉತ್ತಮ ಶ್ರೇಣಿಯಲ್ಲಿಯೇ ಎಸ್ಎಸ್ಎಲ್ಸಿ ಮುಗಿಸಿ 1949ರಲ್ಲಿ ಇಂಟರ್ವಿುಡಿಯಟ್ ಓದಲು ಬೆಂಗಳೂರಿನ ಬಸವನಗುಡಿಯಲ್ಲಿದ್ದ ಶ್ರೀ ನಾಗರಾಜ ಶಾಸ್ತ್ರೀಯವರ ಮನೆಯಲ್ಲಿ ವಾಸ್ತ್ಯವ ಹೂಡುತ್ತಾರೆ. ಓದಿನ ಜೊತೆಗೆ ಸಂಘದ ನಿತ್ಯ ಶಾಖೆ ಮತ್ತು ಸುತ್ತಮುತ್ತಲೂ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾರೆ.
ಉತ್ತಮ ಶ್ರೇಣಿಯಲ್ಲಿಯೇ ಇಂಟರ್ವಿುಡಿಯಟ್ ಮುಗಿಸಿ, ತಮ್ಮ ತಂದೆಯವರ ಆಶಯದಂತೆ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಲು ಸೇರಿಕೊಂಡರಾದರೂ, ರಾಷ್ಟ್ರೀಯ ಚಿಂತನೆಗಳು ಪ್ರಭಲವಾಗಿ ಅವರ ಮನಸ್ಸಿನಲ್ಲಿ ಬೇರೂರಿದ್ದರಿಂದ, ತಮ್ಮ ಓದನ್ನು ಅರ್ಧಕ್ಕೇ ಬಿಟ್ಟು, ಸಂಘದ ಪೂರ್ಣಾವಧಿ ಕಾರ್ಯಕರ್ತರಾಗುವ ತೀರ್ಮಾನ ಕೈಕೊಳ್ಳುತ್ತಾರೆ. ಸಂಘದ ಪ್ರಚಾರಕರಾಗಿ ಹೊಸಕೋಟೆಯಲ್ಲಿ ಸಂಘವನ್ನು ಸಂಘಟಿಸುವ ಕಾರ್ಯಕ್ಕೆ ನಿಯೋಜಿತಗೊಳ್ಳುತ್ತಾರೆ. ಇದೇ ಸಮಯದಲ್ಲಿ ಅವರ ಸಾಹಿತ್ಯಿಕ ಚಟುವಟಿಕೆಗಳ ಬಗ್ಗೆ ಅರಿವಿದ್ದ ಸಂಘದ ವಾರಪತ್ರಿಕೆ ವಿಕ್ರಮದ ಅಂದಿನ ಸಂಪಾದಕರಾಗಿದ್ದ ಶ್ರೀ ಬೆಸುನಾ ಮಲ್ಯರವರು ಶಿವರಾಮು ಅವರಿಂದ ಅನೇಕ ಲೇಖನಗಳನ್ನು ಬರೆಸಿ ವಿಕ್ರಮದಲ್ಲಿ ಪ್ರಕಟಿಸುವ ಮೂಲಕ ಅವರಲ್ಲಿದ್ದ ಸಾಹಿತಿಯನ್ನು ಬಡಿದೆಬ್ಬಿಸುವುದರಲ್ಲಿ ಸಫಲರಾಗುತ್ತಾರೆ.
1959ರಿಂದ 1962ರವರೆಗೆ ವಿಕ್ರಮದ ಜವಾಬ್ಧಾರಿಯ ಜೊತೆಗೆ ಸಂಘದ ಪ್ರಕಟಣಾ ವಿಭಾಗದ ಹೊಣೆಗಾರಿಕೆಯನ್ನೂ ನಿರ್ವಹಿಸಿದ ಶಿವರಾಮು, ಇದರ ಮಧ್ಯೆ ಸಂಘದ ಶಾಖೆಗಳಲ್ಲಿ ಪ್ರತಿನಿತ್ಯವೂ ಕಲಿಸಿ ಕೊಡಲಾಗುವ ಅನೇಕ ದೇಶ ಭಕ್ತಿಗೀತೆಗಳನ್ನೂ ಸಹಾ ರಚಿಸುತ್ತಾರೆ. 1962ರಲ್ಲಿ ಬೆಂಗಳೂರಿನ ಇಂದಿನ ಕೆಂಪೇಗೌಡ ಬಸ್ ನಿಲ್ದಾಣದ ಪ್ರದೇಶದಲ್ಲಿ ನಡೆದ ಸಂಘದ ರಾಜ್ಯ ಮಟ್ಟದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಾಗಿದ್ದ ಅಂದಿನ ಸರಸಂಘಚಾಲಕರಾಗಿದ್ದಂತಹ ಶ್ರೀ ಗುರೂಜಿಯರ ಸಮ್ಮುಖದಲ್ಲಿ ಭಾರತದ ಮೇಲೆ ಅಂದು ಚೀನಾ ಆಕ್ರಮಣ ಮಾಡಿದ್ದರ ವಿರುದ್ಧ ದೇಶಭಕ್ತರನ್ನು ಪ್ರೇರೇಪಿಸುವಂತಹ ಶಿವರಾಮು ವಿರಚಿತ ಗೀತೆ ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ ಎಲ್ಲರ ಮೆಚ್ಚುಗೆ ಗಳಿಸುತ್ತದೆ.
ಇಡೀ ರಾಷ್ಟ್ರದಲ್ಲಿ ರಾಷ್ಟ್ರೀಯತೆಯ ಆದರ್ಶಗಳು ಮತ್ತು ದೇಶಭಕ್ತಿಯ ಮನೋಭಾವದ ಕೊರತೆಯ ವಾತಾವರಣದಲ್ಲಿ, ಭಾರತೀಯ ಇತಿಹಾಸದಲ್ಲಿ ಜನರ ಹೃದಯ ಮತ್ತು ಮನಸ್ಸಿನಲ್ಲಿ ಹೆಮ್ಮೆಪಡುವ ಕನ್ನಡ ಭಾಷೆಯಲ್ಲಿ ಶ್ರೀಮಂತ ಸಾಹಿತ್ಯವನ್ನು ರಚಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ, ಪರಂಪರೆ, ಮಾನವತಾವಾದದ ಮೌಲ್ಯಗಳನ್ನು ಎತ್ತಿಹಿಡಿಯುವ ಸಲುವಾಗಿ 1965 ರಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವನ್ನು ಆರಂಭಿಸಿದ ನಂತರ 1965ರಿಂದ 1983ರವರೆಗೆ ಪ್ರಕಟಗೊಂಡ ಎಲ್ಲ ಪುಸ್ತಕಗಳ ಜವಾಬ್ದಾರಿಯನ್ನು ಅವರೇ ನಿರ್ವಹಿಸಿದರು. ಇದೇ ಸಮಯದಲ್ಲಿಯೇ ಎಲ್. ಎಸ್. ಶೇಷಗಿರಿರಾಯರ ಸಂಪಾದಕತ್ವದಲ್ಲಿ ಸಣ್ಣ ಮಕ್ಕಳಿಗಾಗಿಯೇ ಪ್ರಕಟಗೊಂಡ ಭಾರತ ಭಾರತೀ ಸಣ್ಣ ಸಣ್ಣ ಪುಸ್ತಕಗಳ ಸಂಕಲನದಲ್ಲಿಯೂ ಅನೇಕ ವೀರ ಪುರುಷರ ಸಾಹಸಗಾಥೆಗಳನ್ನು ಶಿವರಾಮುರವರು ಪರಿಚಯಿಸುತ್ತಾರೆ.
ವಿಕ್ರಮದ ನಂತರ ಸಂಘದ ಮಾಸಪತ್ರಿಕೆಯಾದ ಉತ್ಥಾನ ಪ್ರಕಟಣೆಯ ಜವಾಬ್ಧಾರಿಯನ್ನು ನಿಭಾಯಿಸುವುದರ ಜೊತೆಯಲ್ಲಿಯೇ ಚಂದ್ರಗುಪ್ತ ಮೌರ್ಯರ ಕುರಿತು ಪಂಡಿತ್ ದೀನದಯಾಳ್ ಉಪಾಧ್ಯಾಯರ ಪುಸ್ತಕವನ್ನು 1966ರಲ್ಲಿ ಯವನ ವಿಜೇತ ಚಂದ್ರಗುಪ್ತ ಎಂಬ ಹೆಸರಿನಲ್ಲಿ ಅನುವಾದಿಸಿದ ಶಿವರಾಮು, ಕರ್ನಾಟಕದ ಹೋರಾಟಗಾರರ ಕುರಿತ ಕನ್ನಡದ ಗಂಡುಗಲಿಗಳು, ವಂದೇ ಮಾತರಂ ಕುರಿತ ಒಂದು ಕಥೆ ಒಂದು ವ್ಯಥೆ, ಸಹೋದರಿ ನಿವೇದಿತಾ ಕುರಿತ ಅಕ್ಕ ನಿವೇದಿತಾ ಕೃತಿಗಳನ್ನು ರಚಿಸಿಯೂ ಎಲೆಮರೆ ಕಾಯಿಯಂತೆಯೇ ಇದ್ದ ಶಿವರಾಮು ಅವರಿಗೆ ಸಾಹಿತ್ಯ ಲೋಕದಲ್ಲಿ ವಿಶೇಷ ಗೌರವ ಮತ್ತು ಸ್ಥಾನಮಾನವನ್ನು ನೀಡಿದ್ದು ಸ್ವಾತಂತ್ರ್ಯ ವೀರ ಸಾರ್ವಕರ ಜೀವನಗಾಥೆಯ ಕುರಿತಾದ ಪುಸ್ತಕ ಆತ್ಮಾಹುತಿ ಎಂದರೂ ತಪ್ಪಾಗದು. ಇನ್ನೂ ವಿಶೇಷವೆಂದರೆ 1970ರಲ್ಲಿ ಬೆಂಗಳೂರಿನ ಸಮಾರಂಭಕ್ಕೆ ಆಗಮಿಸಿದ್ದ, ವೀರ ಸಾವರ್ಕರ್ ಅವರಿಂದ ಪ್ರೇರಿತನಾಗಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಂತಹ ಕ್ರಾಂತಿಕಾರಿ ಭಗತ್ ಸಿಂಗ್ ಅವರ ತಾಯಿ ಶ್ರೀಮತಿ ವಿದ್ಯಾವತಿ ಅವರಿಂದ ಈ ಪುಸ್ತಕ ಲೋಕಾರ್ಪಣೆ ಆಗಿತ್ತು.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶಾದ್ಯದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದಲ್ಲದೇ ಸಂಘವನ್ನು ಮತ್ತೊಮ್ಮೆ ನಿಷೇಧಿಸಿದ ಪರಿಣಾಮ ಶಿವರಾಮು ಸೇರಿದಂತೆ ಸಂಘದ ಅನೇಕ ಕಾರ್ಯಕರ್ತರುಗಳು ಭೂಗತರಾದರೂ, ರಹಸ್ಯವಾಗಿ ಪತ್ರಿಕೆಗಳನ್ನು ಪ್ರಕಟಿಸುವ ನಿರಂತರ ಕಾರ್ಯದಲ್ಲಿ ಶಿವರಾಮು ತೊಡಗಿಕೊಂಡರು. ಇವೆಲ್ಲದರ ಮಧ್ಯೆ ಸಣ್ಣ ವಯಸ್ಸಿನಿಂದಲೂ ಕಾಡುತ್ತಿದ್ದ ನರಗಳ ಸಂಬಂಧಿತ ವ್ಯಾಧಿಯು ಮತ್ತಷ್ಟು ಉಲ್ಪಣಗೊಂದ ಪರಿಣಾಮ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಮುಂದುವರೆಯುವುದು ಅಸಾಧ್ಯ ಎನಿಸಿದ ಕಾರಣ, ಅಂದಿನ ಸಂಘದ ಹಿರಿಯರ ಒತ್ತಾಸೆಯ ಮೇರೆಗೆ 1980ರ ಅಕ್ಟೋಬರ್ 10ರಂದು ಸಂಘದ ಪೂರ್ಣಾವಧಿ ಪ್ರಚಾರಕ ಕೆಲಸದಿಂದ ನಿವೃತ್ತರಾಗಿ ಲೌಕಿಕ ಬದುಕನ್ನು ನಡೆಸಲು ಮುಂದಾದರು.
ಕೊಯಮತ್ತೂರಿನ ಆರ್ಯವೈದ್ಯ ಚಿಕಿತ್ಸಾಲಯದಲ್ಲಿ ಸುಧೀರ್ಘವಾದ ಚಿಕಿತ್ಸೆಗೆೊಳಗಾಗಿ ಅವರ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಆದ ನಂತರ 1983ರ ಏಪ್ರಿಲ್ 18ರಂದು ಮಠಂಕುಬೆಟ್ಟು ಮಹಾಬಲ ಐತಾಳರ ಸೋದರಿ ಶಾರದಾ ಅವರನ್ನು ವರಿಸುವ ಮೂಲಕ ವೈವಾಹಿಕ ಜೀವನವನ್ನು ಆರಂಭಿಸಿ ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಶ್ರೀಧರ ಮತ್ತು ಶ್ರೀಕಲಾ ಎಂಬ ಮುದ್ದಾದ ಮಕ್ಕಳು ಜನಿಸುತ್ತಾರೆ. ಸಂಸಾರ ನಿರ್ವಹಣೆಗಾಗಿ ವಿವಿಧ ಪತ್ರಿಕೆಗಳಲ್ಲಿ ಅಂಕಣಗಾರರಾಗಿ ಗುರುತಿಸಿಕೊಂಡಿದ್ದಲ್ಲದೇ, ತಮ್ಮದೇ ಪುಸ್ತಕಗಳ ಪ್ರಕಟನೆಗೆ ಮುಂದಾಗುತ್ತಾರೆ. ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿ ಸ್ವಲ್ಪ ಕಡಿಮೆಯೇ. ಅದರಲ್ಲೂ ಪತ್ರಿಕೆ ಮತ್ತು ಪುಸ್ತಕಗಳನ್ನು ಕೊಂಡು ಓದುವರ ಸಂಖ್ನೆ ಅಂದಿಗೂ ಇಂದಿಗೂ ಇನ್ನೂ ಕಡಿಮೆಯೇ. ಈ ಸಂಗತಿಯನ್ನು ಅಂದೇ ಅರಿತಿದ್ದ ಗಳಗನಾಥರು ತಮ್ಮ ಕೃತಿಗಳನ್ನು ತಮ್ಮ ತಲೆಯ ಮೇಲೆ ಹೊತ್ತೋ ಇಲ್ಲವೇ ಅವರ ಜೋಳಿಗೆಯಲ್ಲಿಟ್ಟು ಕೊಂಡು ಊರು ಊರುಗಳಿಗೆ ಸುತ್ತಿ ಪುಸ್ತಕ ವ್ಯಾಪಾರ ಮಾಡುತ್ತಿದ್ದರೋ ಅದೇ ರೀತಿ ಶಿವರಾಮು ಅವರೂ ಸಹಾ ಅಕ್ಷರಶಃ ಜೋಳಿಗೆಯಲ್ಲಿ ಪುಸ್ತಕ ಹೊತ್ತುಕೊಂಡು ಮನೆಮನೆಗೆ ತೆರಳಿ ಮಾರುವ ಮೂಲಕ ರಾಷ್ಟ್ರೀಯ ಚಿಂತನೆಯ ಸಾಹಿತ್ಯ ಎಲ್ಲರಿಗೂ ತಲುಪಿಸಬೇಕೆಂಬ ಅವರ ಉತ್ಕಟ ಬಯಕೆ ಮೆಚ್ಚುಗೆಯಾದರೂ ಒಬ್ಬ ಲೇಖಕನ ಬವಣೆಯನ್ನು ಅದು ಎತ್ತಿ ತೋರಿದ್ದಂತೂ ಸುಳ್ಳಲ್ಲ. ಅವರ ಕೃತಿಗಳಿಂದ ಪ್ರೇರಿತರಾಗಿದ್ದ ಡಾ. ಪಳ್ಳತಡ್ಕ ಕೇಶವ ಭಟ್ಟರು ಪಳ್ಳತಡ್ಕದಲ್ಲಿ ಮನೆಯನ್ನು ನಿರ್ವಿುಸಿ ಶಿವರಾಮು ಅವರಿಗೆ ಕೆಲ ಕಾಲ ವಾಸಿಸಲು ಅನುವು ಮಾಡಿಕೊಟ್ಟರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಇತರರ ನೆರವಿನಿಂದ ಬಂಗಾಡಿಯ ಇಂದಬೆಟ್ಟು ಎಂಬಲ್ಲಿ ಸ್ವಂತ ಮನೆಯನ್ನು ಕಟ್ಟಿಸಿಕೊಂಡರು. ಇದೇ ಸಯದಲ್ಲೇ ಬೆಳ್ತಂಗಡಿ ತಾಲ್ಲೂಕಿನ ಐದನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದ್ದರು.
ಸಂಘದ ಪ್ರಚಾರಕರಾಗಿದ್ದಾಗ ರಾಷ್ಟೋತ್ಥಾನಕ್ಕೆ ಅನೇಕ ಪುಸ್ತಕಗಳನ್ನು ಬರೆದುಕೊಟ್ಟಿದ್ದರಾದರೂ, ಅವರು ಗೃಹಸ್ಥಾಶ್ರಮವನ್ನು ಶ್ವೀಕರಿಸಿ ಜೀವನೋಪಾಯಕ್ಕಾಗಿ ತಮ್ಮದೇ ಪುಸ್ತಕಗಳ ಪ್ರಕಟಣೆ ಮಾಡಲು ಅವಕಾಶ ಕೊಡಬೇಕೆಂದು ರಾಷ್ಟೋತ್ಥಾನವನ್ನು ಕೋರಿದಾಗ ಕೆಲವೊಂದು ಆಡ್ಡಿ ಆತಂಕಗಳು ಎದುರಾದದ್ದು ಅವರ ಮನಸ್ಸಿನ ಮೇಲೆ ಭಾರೀ ಪರಿಣಾಮವನ್ನು ಬೀರಿತ್ತು. ನಂತರ ಸಂಘದ ಕೆಲವು ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಆ ಸಮಸ್ಯೆಗಳು ಬಗೆ ಹರಿದು ಕೆಲವು ಪುಸ್ತಕಗಳ ಪ್ರಕಟಣೆಗೆ ಅನುಮತಿ ದೊರೆಯಿತು.
ಅದರಲ್ಲೂ ಅವರ ಪ್ರಸಿದ್ಧ ಕೃತಿ ಆತ್ಮಾಹುತಿಯನ್ನು ಮತ್ತೊಮ್ಮೆ 1996-97ರ ಸಮಯದಲ್ಲಿ ಪ್ರಕಟಿಸುವ ಸಂಧರ್ಭದಲ್ಲಿ ನಮ್ಮ ಕಛೇರಿಯಲ್ಲೇ ಅವರ ಹಿತೈಷಿಗಳೊಂದಿಗೆ ಮತ್ತೊಮ್ಮೆ ಅವರನ್ನು ಭೇಟಿ ಮಾಡುವ ಸುವರ್ಣಾವಕಾಶ ನನಗೆ ದೊರೆಕಿತು. ಅದಾಗಲೇ ಆನಾರೋಗ್ಯದಿಂದ ಜರ್ಜತರಾಗಿದ್ದ ಅವರನ್ನು ನೋಡಿದಾಗ ಬಹಳ ಬೇಸರವಾದದ್ದಂತೂ ಸುಳ್ಳಲ್ಲ. 1998ರ ಜೂನ್ನಲ್ಲಿ ತಮ್ಮ ಹುಟ್ಟೂರಾದ ಕನಕಪುರದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಸಿ ಅವರಿಗೆ ಭವ್ಯವಾಗಿ ಮೆರವಣಿಗೆ ಮಾಡಿದ್ದು ಅವರ ಜೀವನದ ಅವಿಸ್ಮರಣೀಯ ಘಟನೆಯಾಯಿತು. ದಿನೇ ದಿನೇ ಕ್ಷೀಣಿಸುತ್ತಿದ್ದ ಅನಾರೋಗ್ಯದಿಂದಾಗಿ 1999ರ ನವೆಂಬರ್ 14ರಂದು ಶಿವರಾಮುರವರು ಇಹಲೋಕ ತ್ಯಜಿಸಿದರೂ, ರಾಷ್ಟ್ರೀಯ ಚಿಂತನೆಯ ದೇಶಭಕ್ತಿ ಸಾರುವ ಕೃತಿಗಳು ಮತ್ತು ಇಂದಿಗೂ ಸಂಘದ ಶಾಖೆಗಳಲ್ಲಿ ಕಲಿಸಿಕೊಡಲಾಗುವ ನೂರಾರು ದೇಶಭಕ್ತಿ ಗೀತೆಗಳ ಮೂಲಕ ಲಕ್ಷಾಂತರ ಜನರ ಹೃನ್ಮಂದಿರದಲ್ಲಿ ಅಜರಾಮರರಾಗಿದ್ದಾರೆ ಎಂದರೂ ತಪ್ಪಾಗದು.
16-17ನೇ ವಯಸ್ಸಿನಿಂದಲೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಶಿವರಾಮುರವರು ಕವಿಯಾಗಿ, ಚರಿತ್ರಕಾರರಾಗಿ, ವಿಚಾರ ಸಾಹಿತ್ಯದ ನಿರ್ಮಾಪಕರಾಗಿ, ಹಾಸ್ಯ-ವಿಡಂಬನೆ-ಪ್ರಬಂಧಕಾರರಾಗಿ, ಹೀಗೆ ಎಲ್ಲಾ ಪ್ರಕಾರಗಳಲ್ಲೂ ಭಾರತೀಯ ಸಂಸ್ಕೃತಿಯನ್ನು ಎಲ್ಲರಿಗೂ ಪಸರಿಸುವ ಹರಿಕಾರರಾಗಿದ್ದರು. ರಣವೀಳ್ಯ (1965), ಯವನ ವಿಜೇತ ಚಂದ್ರಗುಪ್ತ (ಅನುವಾದ-1966), ಕನ್ನಡದ ಗಂಡುಗಲಿಗಳು (1967), ಒಂದು ಕಥೆ ಒಂದು ವ್ಯಥೆ (1968), ಅಕ್ಕ ನಿವೇದಿತಾ (1969), ಆತ್ಮಾಹುತಿ (1970), ನೆತ್ತರು ತಾವರೆ (1973), ಚಿನ್ನದ ಕತ್ತಿ (1982), ಐಎನ್ಎ ನೆನಪು (1987), ಪ್ರೇಮಧಾರೆ (1997), ಸ್ಫೂರ್ತಿ ಕಿರಣ (1997), ನನ್ನ ಜನ ನನ್ನ ಮನ (1980), ತಾಯೇ ವಂದಿಸುವೆ (1984) ಮುಂತಾದವುಗಳು ಅವರಿಂದ ರಚಿತವಾದ ಕೆಲವು ಪ್ರಮುಖ ಕೃತಿಗಳಾಗಿವೆ.
ಆಗಸ್ಟ್ 21, 2022ರಂದು ಬೆಂಗಳೂರಿನ ಸುಚಿತ್ರ ಸಭಾಂಗಣದಲ್ಲಿ ಡಾ. ಬಾಬು ಕೃಷ್ಣಮೂರ್ತಿ, ಕೆ.ಹರೀಶ್, ಡಾ. ಜಿ.ಬಿ.ಹರೀಶ, ಡಾ. ಎಸ್.ಆರ್.ಲೀಲಾ, ಹರ್ಷ ಸಮೃದ್ಧ ಮುಂತಾದವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ವೀರ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು 50 ವರ್ಷಗಳ ಹಿಂದೆಯೇ ಕನ್ನಡಿಗರಿಗೆ ಪರಿಚಯಿಸಿದ್ದ ಶಿವರಾಮು ಅವರಿಗೆ ಮರಣೋತ್ತರವಾಗಿ ವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಆ ಪ್ರಶಸ್ತಿಯನ್ನು ಶಿವರಾಮು ಅವರ ಪತ್ನಿ ಶಾರದಾ ಅವರು ಸ್ವೀಕರಿಸಿದರು.
ಇದೇ ಸಮಾರಂಭದಲ್ಲಿ, ಸಾಹಿತ್ಯದಲ್ಲಿ ಗೋಪಾಲಕೃಷ್ಣ ಅಡಿಗರ ನಂತರದ ಶ್ರೇಷ್ಠ ಮತ್ತು ದೊಡ್ಡ ಕವಿಗಳಲ್ಲಿ ಶಿವರಾಮು ಸಹಾ ಒಬ್ಬರು. ಆತ್ಮಾಹುತಿ ಕೃತಿಯ ಮೂಲಕ ಕನ್ನಡಕ್ಕೆ ಸಾವರ್ಕರರನ್ನು ಪರಿಚಯಿಸುವ ಜತೆಗೆ ಕನ್ನಡದಲ್ಲಿ ರಾಷ್ಟ್ರೀಯತೆಯ ಪ್ರವಾಹವನ್ನು ಹರಿಸಿದವರು ಎಂದು ಲೇಖಕ ಮತ್ತು ಸಾರ್ವಕರ್ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಿ.ಬಿ. ಹರೀಶ್ ತಿಳಿಸಿದರೆ, ರಾಜ್ಯದಲ್ಲಿ ಶಿವರಾಮು ಅವರು ದೇಶಭಕ್ತಿಯ ಕೃತಿಗಳನ್ನು ರಚಿಸಲು ತಮ್ಮ ಸರ್ವಸ್ವವನ್ನೂ ಅರ್ಪಿಸಿದ್ದಾರೆ. ಅವರು ಬರೆದ ಕವನಗಳನ್ನು ಹಾಡುತ್ತಿದ್ದರೆ ಭಾರತದ ಶ್ರೇಷ್ಠತೆ ಕಣ್ಣಮುಂದೆ ಬರುತ್ತದೆ. ಅವರು ಬರವಣಿಗೆಯ ಮೂಲಕ ಉಪದೇಶ ಮಾಡಲಿಲ್ಲ. ದೇಶದ ಲಕ್ಷಾಂತರ ಯುವಕರಲ್ಲಿ ದೇಶ ಭಕ್ತಿಯ ಚಿಲುಮೆ ಚಿಮ್ಮುವಂತೆ ಮಾಡಿದ್ದಾರೆ ಎಂದು ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಹೊಗಳಿರುವುದು ಶಿರರಾಮು ಅವರ ಕೀರ್ತಿಯನ್ನು ತೋರಿಸುತ್ತದೆ
ನಿಷ್ಕಳಂಕ ದೇಶಭಕ್ತ, ಪ್ರತಿಭಾಶಾಲಿ ಕವಿ, ಸಾಹಿತಿ. ಹೀಗೆ ಅನೇಕ ವಿಶೇಷಣಗಳಿಗೆ ಭಾಜನರಾಗುವಂತಹ ವ್ಯಕ್ತಿತ್ವವನ್ನು ಹೊಂದಿದ್ದ, ಸಮಾಜಕ್ಕಾಗಿಯೇ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದಂತಹ ಶ್ರೀ ಶಿವರಾಮುರವರು ನಿಜಕ್ಕೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ