
ನೆನ್ನೆ ರಾತ್ರಿ ಮುಗಿದು ಇವತ್ತು ಬೆಳಕು ಹರಿಯುತ್ತಿದ್ದಂತೆಯೇ, ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳು ಬಂದೇ ಬಿಟ್ಟಿತು. ಯಾಕೇ ಅಂದರೆ ಕಾಲ ಎಂದಿಗೂ ನಿಲ್ಲೋದಿಲ್ಲ. ಅದರ ಪಾಡಿಗೆ ಅದು ಹೋಗ್ತಾನೇ ಇರುತ್ತದೆ. ಇವತ್ತಿಗೆ ಮೂವತ್ತು ದಿನಗಳ ಹಿಂದೆ ಸರಿಯಾಗಿ ನವೆಂಬರ್ ಒಂದನೇ ತಾರೀಖು, ಸಮಸ್ತ ಕನ್ನಡಿಗರ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೇಳಲೂ ಸಾಧ್ಯವೇ ಇಲ್ಲಾ.ಇನ್ನು ನಮ್ಮ ಉಟ್ಟು ಖನ್ನಡ ಓಲಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುಲಿಲ್ಲ. ಎಲ್ಲೆಲ್ಲಿ ನೋಡಿದರೂ ಕನ್ನಡ ಬಾವುಟಗಳ ಭರಾಟೆ, ಉತ್ಸವಗಳು, ಮನೋರಂಜನಾ ಕಾರ್ಯಕ್ರಮಗಳು, ಒಂದೇ ಎರಡೇ ಅಬ್ಬಬ್ಬಾ ಹೇಳಲಾಗದು. ಕಲಾವಿದರು, ವಾದ್ಯಗೋಷ್ಟಿ ತಂಡಗಳು ಮಿಕ್ಕೆಲ್ಲಾ ಭಾಷೆಗಳು ಗೊತ್ತೇ ಇಲ್ಲವೇನೋ ಎನ್ನುವಂತೆ ಕೇವಲ ಕನ್ನಡ ಭಾಷೆಯನ್ನೂ ಮಾತ್ರವೇ ಆಡುವುದು ಮತ್ತು ಹಾಡುವುದನ್ನು ಕೇಳಲು ಆನಂದ. ನವೆಂಬರ್ 1 ರಂದು ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ (ಉಳಿದ 364 ದಿನ ಪರಭಾಷೆಗಳ ಚಿತ್ರಕ್ಕೇ ಮೀಸಲು) ಕಡ್ಡಾಯವಾಗಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸುವುದು ನೋಡಲು ಮಹದಾನಂದ. ಎಲ್ಲಿ ನೋಡಿದರೂ ಕನ್ನಡ ಉಳಿಸಿ, ಕನ್ನಡ ಬೆಳಸಿ ಎನ್ನುವ ಘೋಷವಾಕ್ಯಕ್ಕೆ ಮುಗಿಲು ಮುಟ್ಟುವಂತಹ ಚಪ್ಪಾಳೆ. ಅದೇ ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ಬಂದ ತಕ್ಷಣವೇ ಎಲ್ಲದಕ್ಕೂ ಬಂದ್. ಯಥಾ ಪ್ರಕಾರ ಮುಂದಿನ ವರ್ಷ ಅಕ್ಟೋಬರ್ 31 ರ ವರೆಗೆ ಕನ್ನಡದ ಬಗ್ಗೆ ಕನ್ನಡಿಗರ ಕುಂಭಕರ್ಣ ನಿದ್ದೆಯ ಧೋರಣೆ. ಇಂಗ್ಲೀಷ್, ಕಂಗ್ಲೀಷ್, ಇಲ್ಲವೇ ಇತರೇ ಭಾಷೆಗಳದ್ದೇ ಪ್ರಾಭಲ್ಯ.
ಭಾರತದ ಅತ್ಯಂತ ಪ್ರಾಚೀನ ಮೂರು ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯನ್ನು ಪ್ರಪಂಚಾದ್ಯಂತ ಸರಿ ಸುಮಾರು5-6 ಕೋಟಿ ಜನರು ಪ್ರಾಥಮಿಕ ಅಥವಾ ದ್ವಿತೀಯ ಭಾಷೆಯಾಗಿ ಮಾತನಾಡುತ್ತಾರೆ. ನಮ್ಮ ಕನ್ನಡ ಭಾಷೆ ಸುಮಾರು 2000 ವರ್ಷಕ್ಕೂ ಹಳೆಯ ಭಾಷೆ. ನುಡಿದಂತೆ ಬರೆಯಬಲ್ಲ ಮತ್ತು ಬರೆದಂತೆಯೇ ಓದಬಲ್ಲ ಕೆಲವೇ ಕೆಲವು ಬಾಷೆಗಳಲ್ಲಿ ಕನ್ನಡವೂ ಒಂದು. ಹಾಗಾಗಿಯೇ ಹಿರಿಯ ವಿದ್ವಾಂಸರೂ, ಭಾಷಾಶಾಸ್ತ್ರಜ್ಞರೂ ಮತ್ತು ಸಮಾಜ ಸುಧಾರಕರಾಗಿದ್ದಂತಹ ವಿನೋಬಾ ಭಾವೆಯವರೇ, ಕನ್ನಡ ಲಿಪಿಯನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆದಿದ್ದಾರೆ. 11 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹಿಂದಿ ಭಾಷೆ ಮೊದಲ ಸ್ಥಾನ ಪಡೆದಿದ್ದರೆ, 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಅತ್ಯಂತ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುವ ಮೂದಲ ಐದು ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ ಎಂದು ಅತ್ಯಂತ ಹೆಮ್ಮೆ ಪಡುವುದರಲ್ಲಿಯೇ ಕಾಲ ಕಳೆಯುವ ನಾವು, ಅತ್ಯಂತ ವೇಗವಾಗಿ ನಾಶವಾಗುತ್ತಿರುವ ಭಾಷೆಯಗಳ ಪಟ್ಟಿಯಲ್ಲಿ ಕನ್ನಡವೂ ಇದೇ ಎಂಬುದನ್ನು ಮಾತ್ರಾ ಹೇಳುವುದರಲ್ಲಿ ಜಾಣ ಮರೆವು ತೋರುತ್ತೇವೆ,

ದೇಶಕ್ಕೆ ಸ್ವಾತ್ರಂತ್ಯ ಬಂದ ನಂತರ ಭಾಷಾವಾರು ಪ್ರಾಂತದ ರೀತಿಯಲ್ಲಿ ರಾಜ್ಯಗಳ ವಿಂಗಡನೆಯಾದರೂ ಇಂದಿಗೂ ನಮ್ಮ ರಾಜ್ಯದ ಗಡಿ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಯ ಹಲವಾರು ಕಡೆ, ಬೆಳಗಾಂ, ಬಳ್ಳಾರಿ, ರಾಯಚೂರು, ಅಷ್ಟೇಕೆ ನಮ್ಮ ಬೆಂಗಳೂರಿನಲ್ಲೂ ಲೆಕ್ಕಕ್ಕೆ ಕನ್ನಡಿಗರು ಇದ್ದಾರಾದರೂ, ಕನ್ನಡ ಮಾತನಾಡುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವುದು ನಿಜಕ್ಕೂ ನಿಜಕ್ಕೂ ಆಘಾತಕಾರಿಯಾದ ಸಂಗತಿಯಾಗಿದ್ದು, ಎಚ್ಚರಿಕೆಯ ಗಂಟೆಯಾಗಿದೆ.
ಬಹುಶಃ ನಾವುಗಳು ಹಿಂದುತ್ವ ಮತ್ತು ಕನ್ನಡ ಭಾಷಾಭಿಮಾನ ಎರಡಕ್ಕೂ ಒಂದೇ ಧೋರಣೆಯನ್ನು ಹೊಂದಿದ್ದು ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂಗಳನ್ನೂ ಮತ್ತು ಕನ್ನಡ ಭಾಷೆಯನ್ನು ಯಾರಿಂದಲೂ ಅಳಿಸಲಾಗದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮಗೆ ಗೊತ್ತಿಲ್ಲದಂತೆ ನಾವೇ ನಮ್ಮ ಧರ್ಮ ಮತ್ತು ಭಾಷೆಯನ್ನು ಜಾಗತೀಕರಣ ಮತ್ತು ಆಧುನೀಕತೆಯ ಹೆಸರಿನಲ್ಲಿ ಸದ್ದಿಲ್ಲದೇ ಕೊಲ್ಲುತ್ತಿದ್ದೇವೆ ಎಂದು ಹೇಳಿದರೆ ಅಚ್ಚರಿ ಎನಿಸಬಹುದಾದರೂ ಅದುವೇ ಕಠಿಣ ವಾಸ್ತವ ಸಂಗತಿಯಾಗಿದೆ.
ಹಾಗಾದರೆ ಇಷ್ಟೆಲ್ಲಾ ಸಂಗತಿಯನ್ನು ತಿಳಿದ ನಂತರ ನಮ್ಮ ಕನ್ನಡ ಭಾಷೆಯನ್ನು ಅಳಿಸುತ್ತಿರುವವರು ಯಾರು? ಮತ್ತು ಅದನ್ನು ಉಳಿಸ ಬೇಕಾದರು ಯಾರು? ಮತ್ತು ಹೇಗೆ ಎಂಬ ಜಿಜ್ಞಾಸೆಗಳಿಗೆ ಉತ್ತರ ನಾವು ಎಂಬುದೇ ಸತ್ಯವಾಗಿದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಈ ಪ್ರಶ್ನೆ ಮತ್ತು ಉತ್ತರ ಎರಡೂ ಸಹಾ ಒಂದೇ ಅಗಿದ್ದು ಅದು ಭಾಷಾಭಿಮಾನವಿಲ್ಲದ ಕನ್ನಡಿಗರೇ ಎನ್ನುವುದು ಬೇಸರದ ಸಂಗತಿಯಾಗಿದೆ.
ಮನೆಯೇ ಮೊದಲ ಪಾಠಶಾಲೆ ತಂದೆ ತಾಯಿಯರೇ ಮೊದಲ ಗುರುಗಳು ಹಾಗಾಗಿ ಭಾಷೆ, ಸಂಸ್ಕಾರ ಮತ್ತು ಸಂಪ್ರದಾಯಗಳು ಮನೆಯಿಂದಲೇ ಆರಂಭವಾಗ ಬೇಕು. ದುರಾದೃಷ್ಟವಷಾತ್ ಇಂದು ನಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆಯ ಬದಲಾಗಿ ಅನಗತ್ಯವಾಗಿ. ಬೇರೆ ಬಾಷೆಯನ್ನು ಹೇರುವ ಕೆಲಸ ತಂದೆಯರಿಂದಲೇ ಆರಂಭವಾಗಿದೆ. ರಾಮ, ಸೀತಾ, ವೆಂಕಟೇಶ, ಗೋವಿಂದ, ಕಮಲ, ವಿಮಲ, ನಿರ್ಮಲ, ವಿಜಯ ಎಂಬೆಲ್ಲಾ ಅಚ್ಚ ಕನ್ನಡದ ಹೆಸರುಗಳೆಲ್ಲವೂ ಮಾಯವಾಗಿ, ಯಾರನ್ನೋ ಮೆಚ್ಚಿಸುವ ಸಲುವಾಗಿ ಉಚ್ಚಾರವೇ ಮಾಡಲಾಗದಂತಹ ಮಾಯ್ರಾ, ದಿವ್ಯಾಂಕ್ಷ್, ಅನೌಷ್ಕ ಮುಂತಾದ ಹೆಸರುಗಳೇ ತುಂಬಿ ತುಳುಕಾಡುತ್ತಿವೆ.
ಇನ್ನು ಮನಸ್ಸಿಗೆ ಮುದ ನೀಡುವ ಮತ್ತು ಅತ್ಯಂತ ಆಪ್ತತೆಯನ್ನು ಕೊಡುವ ಅಮ್ಮಾ ಅಪ್ಪಾ ಜಾಗದಲ್ಲಿ ಮಕ್ಕಳಿಗೆ ಬಲವಂತವಾಗಿ ಮಮ್ಮಿ ಡ್ಯಾಡಿ ಹೇರುತ್ತಿದ್ದೇವೆ. ಸಂಬಂಧಗಳನ್ನು ಸುಲಭವಾಗಿ ಗುರುತಿಸಲು ಅನುವಾಗುವಂತಿದ್ದ, ದೊಡ್ಡಮ್ಮ, ದೊಡ್ಡಪ್ಪ, ಚಿಕ್ಕಮ್ಮ ಚಿಕ್ಕಪ್ಪ, ಅತ್ತೇ ಮಾವ,ಅಜ್ಜಿ ತಾತ, ಅಜ್ಜಾ ಅಜ್ಜಿ, ಅಕ್ಕಾ ಭಾವಾ, ಎಲ್ಲವನ್ನೂ ಮೂಲೆಗೆ ಎಸೆದು ಎಲ್ಲರಿಗೂ ಆಂಟಿ ಅಂಕಲ್ ಪದ ಬಳಸುತ್ತಿರುವುದು ಬೇಸರದ ಸಂಗತಿಯಾಗಿದೆ.
ಮುಂಚೆ ಹೇಗೂ ಶಾಲೆಯಲ್ಲಿ ವಿವಿಧ ಭಾಷೆಯಲ್ಲಿ ವ್ಯಾಸಂಗ ಮಾಡುವುದು ಇದ್ದೇ ಇರುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಮನೆಯಲ್ಲಿಯೇ ಸ್ಪುಟವಾಗಿ ಕನ್ನಡ ಓದಲು ಬರೆಯಲು ಕಲಿಸುವ ಪ್ರಯತ್ನ ನಮ್ಮಿಂದಲೇ ಆಗಬೇಕು, ಅದಕ್ಕೆ ಪೂರಕವಾಗಿ, ನಮ್ಮೆಲ್ಲರ ಮನೆಗಳಲ್ಲಿಯೂ ಅತ್ಯಗತ್ಯವಾಗಿ ಇತರೇ ವೃತಪತ್ರಿಕೆಗಳೊಂದಿಗೆ ಕನ್ನಡ ಪತ್ರಿಕೆ ಮತ್ತು ವಾರಪತ್ರಿಕೆಗಳನ್ನೂ ತರಿಸಿ ಅದನ್ನು ನಮ್ಮ ಮಕ್ಕಳು ಓದುವಂತಾಗಬೇಕು.
ಇನ್ನು ಮನೆಯಲ್ಲಿ ರೈಸ್, ಸಾಂಬರ್, ಪಿಕ್ಕಲ್ ಮುಂತಾದ ಪದಗಳ ಬದಲಾಗಿ ಅನ್ನ, ಹುಳಿ, ಉಪ್ಪಿನ ಕಾಯಿ, ಇನ್ನು ಅಂಗಡಿಗಳಿಗೆ ಹೊದಾಗ, ರೈಸ್, ದಾಲ್, ಆಯಿಲ್ ಬದಲಾಗಿ ಅಕ್ಕಿ, ಬೇಳೆ, ಎಣ್ಣೆ ಇನ್ನು ತರಕಾರಿ ಅಂಗಡಿಗಳಿಗೆ ಹೋದಾಗ, ಬೀನ್ಸ್, ಕ್ಯಾಪ್ಸಿಕಾಂ, ಚಿಲ್ಲಿ ಬದಲಾಗಿ ಹುರಳಿಕಾಯಿ, ದೊಣ್ಣೆಮೆಣಸಿಕಾಯಿ, ಮೆಣಸಿನಕಾಯಿ, ಹಣ್ಣಿನ ಅಂಗಡಿಗಳಲ್ಲಿ ಆಪೆಲ್, ಆರೆಂಜ್, ಬನಾನ ಬದಲಾಗಿ, ಸೇಬು, ಕಿತ್ತಳೆ, ಬಾಳೇಹಣ್ಣು ಪದ ಬಳಕೆ ಮಾಡುವ ಮೂಲಕ ಕೇವಲ ನಮ್ಮ ಮಕ್ಕಳಿಗಷ್ಟೇ ಅಲ್ಲದೇ ಸಮಾಜದಲ್ಲಿಯೂ ಕನ್ನಡ ಪದಗಳನ್ನು ಹೆಚ್ಚೆಚ್ಚು ಪ್ರಚಲಿತ ಗೊಳಿಸಬಹುದು.
ಇತ್ತೀಚಿಗೆ ತರಕಾರಿ ಅಂಗಡಿಗೆ ಹೋಗಿ, ದೊಣ್ಣೆ ಮೆಣಸಿನ ಕಾಯಿ ಹೇಗಪ್ಪಾ? ಎಂದು ಕೇಳಿದ್ದಕ್ಕೇ ಆಂಗಡಿಯಾತ, ದೊಣ್ಣೆ ಮೆಣಸಿನಕಾಯಿ ಇಲ್ಲಾ ಸಾರ್ ಎಂದ. ಅರೇ ಅಲ್ಲೇ ಕಣ್ಣ ಮುಂದೆಯೇ ಅಷ್ಟೋಂದು ಇದೆಯಲ್ಲಾಪ್ಪಾ ಎಂದು ತೋರಿಸಿದಾಗ, ಏನ್ ಸರ್, ಕ್ಯಾಪ್ಸಿಕಾಂ ಅಂತಾ ಕನ್ನಡದಲ್ಲಿ ಕೇಳಿದ್ರೇ ಥಟ್ ಅಂತಾ ಹೇಳ್ತಿದ್ದೇ ಎಂದಾಗ, ದೊಣ್ಣೆ ಮೆಣಸಿನ ಕಾಯಿ ಕನ್ನಡವೋ? ಕ್ಯಾಪ್ಸಿಕಾಂ ಕನ್ನಡವೋ? ಎನ್ನುವ ಪ್ರಶ್ನೆ ನನ್ನ ತಲೆಗೆ ಹೊಕ್ಕು ಕೆಲಕಾಲ ಕಕ್ಕಾಬಿಕ್ಕಿ ಆಗಬೇಕಾದಂತಹ ವಿಚಿತ್ರ ಸನ್ನಿವೇಷಕ್ಕೆ ಸಾಕ್ಷಿಯಾದದ್ದು ಅಚ್ಚರಿ ಮತ್ತು ಆಘಾತಕಾರಿ ಎನಿಸಿದ್ದಂತೂ ಸುಳ್ಳಲ್ಲಾ.
ಬೇರೆ ಭಾಷೆಯ ಛಾನೆಲ್ಲುಗಳು ಮತ್ತು ಚಿತ್ರಗಳನ್ನು ನೋಡ ಬಾರದು ಎಂದು ಅಡ್ಡಿ ಪಡಿಸುವ ಬದಲು ನಮ್ಮ ಕನ್ನಡದ ಸೊಗಡಿರುವ ಕನ್ನಡ ಭಾಷೆಯ ಛಾನೆಲ್ಲುಗಳು, ಚಿತ್ರಗಳು ಮತ್ತು ಪತ್ರಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವ ಮೂಲಕವೂ ಕನ್ನಡವನ್ನು ಉಳಿಸಿ ಬೆಳಸಬಹುದಾಗಿದೆ.
ಇನ್ನು ಸಭೆ ಸಮಾರಂಭಗಳಲ್ಲಿ ಬಾಡಿ ಹೋಗುವ ಬೊಕ್ಕೆಗಳ ಬದಲಾಗಿ ಕನ್ನಡದ ಪುಸ್ತಕಗಳನ್ನೇ ಉಡುಗೊರೆ ರೂಪದಲ್ಲಿ ಕೊಡುವ ಸತ್ಸಂಪ್ರದಾಯ ಬೆಳಸಿ ಕೊಳ್ಳುವ ಮೂಲಕ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸ ಬಹುದಾಗಿದೆ.
ಇನ್ನು ನೆರೆಹೊರೆಯವರ ಜೊತೆ, ಶಾಲಾ ಕಾಲೇಜುಗಳಲ್ಲಿ ಮತ್ತು ಕಛೇರಿಗಳಲ್ಲಿ ಕನ್ನಡ ಗೊತ್ತಿರುವವರ ಬಳಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು ಮತ್ತು ಕನ್ನಡ ಗೊತ್ತಿಲ್ಲದೇ ಇರುವವರು ತಪ್ಪು ತಪ್ಪಾಗಿ ಮಾತನಾಡಿದಾಗ ಅವರ ತಪ್ಪುಗಳನ್ನು ಎತ್ತಿ ತೋರಿಸಿ ನಕ್ಕು ಆಡಿಕೊಂಡು ಅವರಿಗೆ ಮುಜುಗೊರವನ್ನುಂಟು ಮಾಡಿ ಅವರು ಶಾಶ್ವತವಾಗಿ ಕನ್ನಡ ಮಾತನಾಡುವುದನ್ನೇ ನಿಲ್ಲಿಸುವಂತೆ ಮಾಡುವ ಬದಲು ಅವರು ತಪ್ಪು ತಪ್ಪಾಗಿ ಮಾತನಾಡಿದಾಗ ಇಲ್ಲವೇ ಪದ ಬಳಕೆ ಮಾಡಿದಾಗ, ಪಕ್ಕಕ್ಕೆ ಕರೆದಿಕೊಂಡು ಹೋಗಿ ಸರಿಯಾದ ಪದ ಬಳಕೆ ಮತ್ತು ವಾಕ್ಯರಚನೆಯನ್ನು ತಿದ್ದುವ ಮೂಲಕವೂ ಕನ್ನಡವನ್ನು ಉಳಿಸಿ ಬೆಳೆಸಬಹುದಾಗಿದೆ.
ಇನ್ನು ನಮ್ಮ ಧರ್ಮ, ಸಂಸ್ಕೃತಿಗಳಿಗೆ ಅನುಗುಣವಾಗಿ ಸಾರ್ವಜನಿಕವಾಗಿ ಆಚರಿಸಲ್ಪಡುವ ಗಣೇಶೋತ್ಸವ, ಅಣ್ಣಮ್ಮ, ಊರ ಹಬ್ಬ, ನಾಡ ಹಬ್ಬವಾದ ರಾಜ್ಯೋತ್ಸವದ ಸಮಯದಲ್ಲಿ ಕನ್ನಡ ಕಲಾವಿದರುಗಳಿಗೇ ಆದ್ಯತೆ ಕೊಟ್ಟು, ನಮ್ಮ ಕನ್ನಡವನ್ನು ಉಳಿಸಿ ಬೆಳೆಸಬಹುದಾಗಿದೆ.
ನಮ್ಮ ಮನೆಯ ಮುಂದಿನ ಫಲಕ, ನಮ್ಮ ಅಂಗಡಿ, ಮುಗ್ಗಟ್ಟಿನ ಫಲಕಗಳು ಮತ್ತು ನಮ್ಮ ರಸ್ತೆಯ ನಾಮಫಲಕಗಳನ್ನು ಅನ್ಯ ಭಾಷೆಯ ಜೊತೆ ಕನ್ನಡದಲ್ಲಿಯೂ ಬರೆಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬಹುದಾಗಿದೆ.
ಖನ್ನಡಾ, ಖನ್ನಡಾ ಎಂದು ಬಸ್ಸು, ರೈಲು ಮೆಟ್ರೋಗಳ ನಿಲ್ಡಾಣಗಳಲ್ಲಿ ಹೋರಾಡುವ ಬದಲು, ಅನ್ಯ ಬಾಷಿಕರಿಗೆ ಕನ್ನಡ ಕಲಿಯಲೇ ಬೇಕೆಂದು ಬಲವಂತವಾಗಿ ಹೋರಾಟ ನಡೆಸುವ ಮೊದಲು ಕನ್ನಡಿಗರಾದ ನಾವುಗಳೇ ನಮ್ಮ ಮನೆಗಳಿಂದಲೇ ಕನ್ನಡ ಕಿಚ್ಚನ್ನು ಹಬ್ಬಿಸಿದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸೊಗಡನ್ನು ಬಳಸುವ ಮೂಲಕ ನಮ್ಮ ಮುಂದಿನ ಪೀಳಿಗೆಯವರೆಗೂ ಉಳಿಸಿ ಹೋಗಬಹುದಾಗಿದೆ
ಅಲ್ಲಿ ಯಾರೋ ಒಬ್ಬ ಮಹಾನುಭಾವರು ಕನ್ನಡದ ಶಾಲೆಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು ಜೀರ್ಣೋದ್ಧಾರ ಮಾಡುತ್ತಿದ್ದರೆ, ಅಲ್ಲಿ ಮತ್ತೊಬ್ಬರು ಕನ್ನಡದ ಸಾಂಸ್ಕೃತಿಕ ಪ್ರತೀಕವಾದ ದೇವಸ್ಥಾನದ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಪುನರುಜ್ಜೀವನಗೊಳಿಸುತ್ತಿದ್ದರೆ, ಅಲ್ಲೊಬ್ಬ ಹೆಣ್ಣು ಮಗಳೊಬ್ಬಳು ಊರೂರು ಅಲೆದು ತನ್ನ ಸ್ವಂತ ಖರ್ಚಿನಲ್ಲೋ ಇಲ್ಲವೇ ಯಾರಿಂದಲೋ ಕಾಡಿ ಬೇಡಿ ತಂದು ಕನ್ನಡ ಶಾಲೆಗಳಿಗೆ ಬಣ್ಣ ಬಳಿದು ಸ್ವಚ್ಚಗೊಳಿಸುತ್ತಿದ್ದರೆ, ಅಲ್ಲೊಬ್ಬ ಕಿತ್ತಳೆ ಮಾರುವ ಹಾಜಬ್ಬ, ಇಲ್ಲೊಬ್ಬ ವೃಕ್ಷಪ್ರೇಮಿ ಸಾಲುಮರ ತಿಮ್ಮಕ್ಕ, ತುಳಸಿಯಮ್ಮ, ಜನಪದವನ್ನು ಶ್ರೀಮಂತಗೊಳಿಸಿದ ಜೋಗಮ್ಮ ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಕನ್ನಡ ನಾಡು, ನುಡಿ, ಭಾಷೆಗೆ ಸಲ್ಲಿಸುತ್ತಿದ್ದರೆ ಅಂತಹವರ ಜೊತೆ ನಾವುಗಳೂ ನಮ್ಮ ಕೈಲಾದ ಮಟ್ಟಿಗೆ ಸೇರಿಕೊಳ್ಳುವ ಮೂಲಕ ಕನ್ನಡಕ್ಕೆ ಅಳಿಲು ಸೇವೆ ಸಲ್ಲಿಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬಹುದಾಗಿದೆ.
ಇಷ್ಟೆಲ್ಲಾ ಮಾಡಲು ಆಗದೇ ಹೋದರೂ ಪರವಾಗಿಲ್ಲಾ, ಕನ್ನಡಿಗನೇ ಆಗಿದ್ದರೂ ತಪ್ಪು ತಪ್ಪಾಗಿ ಕನ್ನಡವೇ ನಮ್ಮಮ್ಮ, ಇಂಗ್ಲೀಷೇ ನಮ್ಮಪ್ಪ, ತಮಿಳೇ ನಮ್ಮ ಚಿಕ್ಕಮ್ಮ, ಉರ್ದು ಚಿಕ್ಕಪ್ಪ ಎನ್ನುತ್ತಾ, ಎದ್ದ ತಕ್ಷಣ ಮಲೆಯಾಳಿ ಕಾಕಾ ಹೋಟೆಲ್ಲಿನ ಟೀ, ಬೆಳಿಗ್ಗೆ ಬೌ ಬೌ ಬಿರ್ಯಾನಿ, ಮಧ್ಯಾಹ್ನ ಆಂಧ್ರ ಭೋಜನ, ಸಂಜೆ ಸಿಂಧಿಯವನ ಹತ್ತಿರ ಸಿಗರೇಟ್ ಸೇದಿ, ರಾತ್ರಿ ಹಿಂದಿ ವಾಲಾ ಹತ್ರ ಪಾನಿಪುರಿ ತಿಂದು, ಬೆಂಗಾಲಿಯವನ ಹತ್ತಿರ ಬೀಡಾ ಹಾಕಿಸಿಕೊಂಡು, ಕನ್ನಡಿಗರಿಗೆ ಕೆಲ್ಸ ಇಲ್ಲ, ಕನ್ನಡ ಬೋರ್ಡ್ ಇಲ್ಲ, ಕನ್ನಡ ಹಾಡು ಹಾಕಲ್ಲ ಎಂದು ಬಾಯಿ ಬಡಿದುಕೊಂಡು ಕನ್ನಡದ ಹೆಸರಲ್ಲಿ ರೋಲ್ಕಾಲ್ ಮಾಡುವ ರಾಜಕೀಯ ನಾಯಕರುಗಳ ಛೇಲಾಗಳಿಂದ ಖಂಡಿತವಾಗಿಯೂ ಕನ್ನಡದ ಉದ್ಧಾರ ಆಗೋದಿಲ್ಲ ಹಾಗಾಗಿ ಅವರನ್ನೆಲ್ಲಾ ಪಕ್ಕಕ್ಕಿಟ್ಟು ಸಾಧ್ಯವಾದಷ್ಟು ಕನ್ನಡಲ್ಲೇ ಕನ್ನಡಿಗರೊಂದಿಗೇ ವ್ಯವಹಾರ ಮಾಡುವ ಮೂಲಕ ಕನ್ನದ ಉಳಿಸಿ ಬಳಸ ಬಹುದಾಗಿದೆ
ಈ ಎಲ್ಲಾ ಅಭಿಪ್ರಾಯಗಳು ಕೇವಲ ಕನ್ನಡದ ಬಗ್ಗೆಯ ಕಳಕಳಿಯಿಂದ ಸುದೀರ್ಘವಾಗಿ ನಿಮ್ಮೆಲ್ಲರ ಬಳಿ ಬಿಚ್ಚುಮನಸ್ಸಿನಿಂದ ತೋಡಿಕೊಂಡಿದ್ದೇನೆ. ಒಂದು ಭಾಷೆ ಅಳಿವಾದರೆ ಅದು ಕೇವಲ ಭಾಷೆಗಾಗುವ ನಷ್ಟವಲ್ಲ. ಅದು ಒಂದು ಸಂಸ್ಕಾರ, ಸಂಸ್ಕೃತಿಯ ಅವಸಾನವಾದಂತೆಯೇ ಹಾಗಾಗಿ ಕನ್ನಡ ಉಳಿಸುವಿಕೆಗೆ ನಾವುಗಳು ಸುಲಭವಾಗಿ ಹೇಗೆಲ್ಲಾ ತೊಡಗಿಕೊಳ್ಳಬಹುದೆಂದು ನನಗೆ ತೋಚಿದಂತೆ ವಿವರಿಸಿದ್ದೇನೆ. ನಾನು ತಿಳಿಸಿದ್ದಕ್ಕಿಂತಲೂ ಇನ್ನೂ ಅನೇಕ ರೀತಿಯಿಂದ, ನಿಮ್ಮ ನಿಮ್ಮಗಳ ಅಭಿಲಾಶೆಗಳಿಗೆ, ಆಸ್ತೆಗೆ ತಕ್ಕಂತೆ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಾಮರ್ಥ ನಮ್ಮ ನಿಮ್ಮೆಲ್ಲರ ಬಳಿ ಇದ್ದೇ ಇದೆ. ಆದರೆ ಅದಕ್ಕೆ ಮನಸ್ಸು ಮಾಡಬೇಕಷ್ಟೇ. ಕನ್ನಡ ಮತ್ತು ಕನ್ನಡತನ ಕೇವಲ ನವೆಂಬರ್ ಮಾಸಕಷ್ಟೇ ಸೀಮಿತವಾಗದೇ, ವರ್ಷಪೂರ್ತಿ ಕನ್ನಡವನ್ನು ಬಳಸುವ ಮೂಲಕ ನಂಬರ್ 1 ಕನ್ನಡಿಗರಾಗುವ ಪಯತ್ನ ಮಾಡೋಣ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ