ಕನ್ನಡ ಸಾಹಿತ್ಯ ಸಮ್ಮೇಳನವೋ? ಸವಿರುಚಿ ಮೇಳವೋ?

ss3ಸಕ್ಕರೆಯ ನಾಡು ಮಂಡ್ಯದಲ್ಲಿ ನುಡಿ ಅಕ್ಕರೆಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ  ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರ ಸಾರಥ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ ನಡೆಯುತ್ತಲಿದೆ. ಈ ಬಾರಿಯ ಕನ್ನಡದ ಸಾಹಿತ್ಯ ಸಮ್ಮೇಳನದಲ್ಲಿ ಮೂಗಿಗಿಂತ ಮೂಗುತಿಯೇ ಭಾರ ಎನ್ನುವಂತೆ,  ಕನ್ನಡ ಸಾಹಿತ್ಯ ಚಟುವಟಿಕೆಗಳ ಕುರಿತಾಗಿ ಸದ್ದು ಮಾಡುವುದುದಕ್ಕಿಂತಲೂ ಅಲ್ಲಿನ ಉಟೋಪಚಾರಗಳ ಬಗ್ಗೆಯೇ ಕಳೆದ ಒಂದು ತಿಂಗಳಿಂದಲೂ ಅನಾವಶ್ಯಕ ಚರ್ಚೆಗೆ ಗ್ರಾಸವಾಗಿರುವುದು ನಿಜಕ್ಕೂ ವಿಷಾಧನೀಯವಾಗಿದೆ.

ss6ಸ್ವಾತ್ರಂತ್ರ್ಯ ಪೂರ್ವದಲ್ಲಿ ಕನ್ನಡ ನಾಡು ಹರಿದು ಹಂಚಿ ಹೋಗಿದ್ದ ಸಮಯದಲ್ಲಿ ಭಾಷಾಧಾರಿತವಾಗಿ ಕರ್ನಾಟಕವನ್ನು ಏಕೀರಣವನ್ನು ಮಾಡುವ ಉದ್ದೇಶದಿಂದ 1915ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡನಾಡಿನಲ್ಲಿ ಕನ್ನಡ ಭಾಷೆಯ ಅಸ್ಮಿತೆ ಮತ್ತು ಅಸ್ತಿತ್ವವನ್ನು  ಎತ್ತಿಹಿಡಿಯುವುದರ ಜೊತೆಗೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಜನಜಾಗೃತಿಯನ್ನು ಸಕಲ ಕನ್ನಡಿಗರ ಮನೆ ಮತ್ತು ಮನಗಳಿಗೆ ತಲುಪಿಸುವ ಸಂಕಲ್ಪ ತೊಟ್ಟು ಈ ಮಹಾನ್ ಕಾರ್ಯದ ಹಿಂದೆ ಕನ್ನಡ ಸಾಹಿತ್ಯ ರಂಗದ ಅನೇಕ ದಿಗ್ಗಜರ ಪರಿಶ್ರಮವಿದೆ.

s2ಈ ಸಾಹಿತ್ಯ ಸಮ್ಮೆಳನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾಗಿ ಕನ್ನಡ ಭಾಷೆಯ ವ್ಯಾಕರಣ, ಚರಿತ್ರೆ, ನಿಘಂಟು ರಚಿಸುವುದು, ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹ ನೀಡುವುದಲ್ಲದೇ  ಅಂತಹ ಪುಸ್ತಕಗಳನ್ನು ಪ್ರಕಟಿಸುವುದು, ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳು, ಕನ್ನಡಿಗರ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅವುಗಳನ್ನು ಪರಿಷ್ಕರಿಸಿ ಪ್ರಕಟಿಸುವುದಲ್ಲದೇ, ಕನ್ನಡ ಭಾಷೆಗೆ ಕೊಡುಗೆ ನೀಡಿರುವ ವಿದ್ವಾಂಸರು ಮತ್ತು  ಮಹನೀಯರನ್ನು ಗುರುತಿಸಿ ಅವರಿಗೆ ಸೂಕ್ತವಾದ ರೀತಿಯಲ್ಲಿ ಸನ್ಮಾನಿಸುವ ಕಾರ್ಯಕ್ರವಾಗಿದೆ.

WhatsApp Image 2024-12-10 at 11.03.45ಇಂತಹ ಕಾರ್ಯಕ್ರಮದಲ್ಲಿ ಭಾಗಿಗಳಾಗಲು ದೇಶ ವಿದೇಶಗಳಿಂದ ಕನ್ನಡ ಸಾಹಿತ್ಯಾಸಕ್ತರು ಆಗಮಿಸುವ ಕಾರಣ,  ಅವರಿಗೆ ಊಟ ಮತ್ತು ವಸತಿಯನ್ನು ಒದಗಿಸುವುದು  ಮಾನವಿಯತೆ ಮತ್ತು ಅತಿಥಿಸತ್ಕಾರ ಮಾಡುವುದು ಕನ್ನಡಿಗರ ಔದಾರ್ಯ ಎಂದು ಭಾವಿಸಿದ್ದ ಕಾರಣ  ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಊಟೋಪಚಾರಗಳ ವ್ಯವಸ್ಥೆಯನ್ನು ಜಾರಿಗೊಳಿಸಿ. ಎಲ್ಲರಿಗೂ ಅನುಕೂಲವಾಗುವಂತಹ ಮತ್ತು ಎಲ್ಲರೂ ಸೇವಿಸಬಲ್ಲಂತಹ ಶುಚಿ ರುಚಿಯಾದ ಸಸ್ಯಾಹಾರಿ ಭೋಜನದ ಜೊತೆ ಸಮ್ಮೇಳನ ನಡೆಯುವ ಪ್ರದೇಶಗಳ ಸ್ಥಳೀಯರೂ ಸಹಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಅಲ್ಲಿನ ಸ್ಥಳೀಯ ಪದ್ದತಿಯ ಸಸ್ಯಹಾರ ಊಟೋಪಚಾರಗಳ ವ್ಯವಸ್ಥೆ ರೂಡಿಗೆ ಬಂದಿತು.

WhatsApp Image 2024-12-10 at 11.04.32ನಂತರದ ದಿನಗಳಲ್ಲಿ ಕಾರ್ಯಕ್ರಮದ ಸ್ವರೂಪವೇ ಬದಲಾಗುತ್ತಾ ಹೋಗಿ  ಒಂದೇ ಸಮಯದಲ್ಲಿ ನಾಲ್ಕೈದು ವೇದಿಗಳಲ್ಲಿ ವಿವಿಧ ರೀತಿಯ ಗೋಷ್ಟಿಗಳು, ಚರ್ಚೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಾರಂಭಿಸಿದ ಕಾರಣ,  ಇಂತಹ ದೊಡ್ಡ ಪ್ರಮಾಣದ ಸಾಹಿತ್ಯ ಸಮ್ಮೇಳನಕ್ಕೆ  ಸರ್ಕಾರದಿಂದಲೂ ಅನುದಾನ ಕೊಡುವ ಪದ್ದತಿ  ಜಾರಿಗೆ ಬಂದ ನಂತರ,  ಸಾಹಿತ್ಯ ಸಮ್ಮೇಳನಗಳ ಮೂಲ ಉದ್ದೇಶವೇ ಬದಲಾಗಿ ಸಾಹಿತ್ಯ ಸಮ್ಮೇಳನದ ಕಮ್ಮಟದಲ್ಲಿನ ಆಸನಗಳು ಖಾಲಿ ಖಾಲಿಯಾದರೂ ಊಟದ ಮನೆಯ ಮುಂದೆ ನೂಕು ನುಗ್ಗಲಿನ ವಾತಾವರಣ  ಏರ್ಪಟ್ಟು ಅನೇಕ ಕಡೆ  ಊಟಕ್ಕೆ ಪರಸ್ಪರ ಕೈ ಕೈ ಮಿಲಾಯಿಸಿದ  ಉದಾಹರಣೆಯೂ ಕಣ್ಣಮುಂದಿದೆ.

ಹೀಗೆ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ರೀತಿಯಲ್ಲಿ ಸರ್ಕಾರಿ ಕಾರ್ಯಕ್ರಮವಾಗಿ ಮಾರ್ಪಟ್ಟ ಪರಿಣಾಮ ಸಹಜವಾಗಿ ರಾಜಕಾರಣಿಗಳೂ ತಮ್ಮ ಸ್ವಹಿತಾಸಕ್ತಿಯಿಂದ ಅದರ ಲಾಭವನ್ನು ಪಡೆಯುವ ಸಲುವಾಗಿ ಅನೇಕ ಸಮಿತಿಗಳಲ್ಲಿ ತಾವು ಮತ್ತು ತಮ್ಮ ಹಿಂಬಾಲಕರನ್ನು ಸೇರಿಸಿಕೊಂಡ ನಂತರ ಹಣಕಾಸಿನ ಅವ್ಯವಹಾರದ ಘಾಟು ಸಹಾ ಬಡಿಯ ತೊಡಗಿತು.  ನಂತರದ ದಿನಗಳಲ್ಲಿ ಸಾಹಿತ್ಯ ಸಮ್ಮೇಳನದ ಯಶಸ್ಸು ಅಲ್ಲಿ ನಡೆದ ವಿಚಾರ ಸಂಕೀರ್ಣಗಳಿಗಿಂತಲೂ ಅತಿಥಿಗಳ ಊಟೋಪಚಾರಗಳನ್ನು ಮೇಲೆ ಅವಲಂಭಿತವಾಗಿ ಹೋದದ್ದು ನಿಜಕ್ಕೂ ದುರಾದೃಷ್ಟಕರ.

ss5ಇದಕ್ಕೆ ನಿದರ್ಶನ ಎನ್ನುವಂತೆ ಶಾಸಕರಾದ ಶ್ರೀ ರಮೇಶ್ ಬಾಬು ಬಂಡೀಸಿದ್ದೇಗೌಡ ಅವರು ಆಹಾರ ಸಮಿತಿ ಅಧ್ಯಕ್ಷರಾಗಿದ್ದು ಈ ಬಾರಿಯ ಡಿಸೆಂಬರ್ 20, 21, 22ರಂದು ಮೂರು ದಿನಗಳ ಕಾಲ ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಕಂಪಿನೊಂದಿಗೆ ನಾಲಿಗೆಗೂ ರುಚಿ ರುಚಿಯಾದ ಭೂರಿ ಭೋಜನದ ವ್ಯವಸ್ಥೆ ಮಾಡಲಾಗುತ್ತಿದ್ದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಶೈಲಿಯಲ್ಲಿ ವಿವಿಧ  ತಿಂಡಿ ತಿನಿಸುಗಳಿಂದ ಕೂಡಿದ ಶುಚಿ ಮತ್ತು ರುಚಿಗೆ ಆದ್ಯತೆಯನ್ನೂ ನೀಡಿದ ವಿಶೇಷವಾದ ಊಟದ ವ್ಯವಸ್ಥೆ ಮಾಡಲಾಗಿದ್ದು ಸಮ್ಮೇಳನಕ್ಕೆ ಆಗಮಿಸುವ ಗಣ್ಯವ್ಯಕ್ತಿಗಳು, ನೋಂದಾಯಿತ ಪ್ರತಿನಿಧಿಗಳು, ಸಾರ್ವಜನಿಕರು, ಸ್ವಯಂ ಸೇವಕರು, ಮಾಧ್ಯಮ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಅಂದಾಜು ಮೂರು ಲಕ್ಷಕ್ಕೂ ಅಧಿಕ ಜನರು ಯಾವುದೇ ತೊಂದರೆ ಇಲ್ಲದಂತೆ ಊಟ ಮಾಡುವ ಸಲುವಾಗಿ  ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಸುಮಾರು 300 ಕೌಂಟರ್ ಗಳ ವ್ಯವಸ್ಥೆ ಮಾಡಲಾದ್ದು  ಎಲ್ಲವೂ ಸುಗಮವಾಗಿ ನಡೆಯಲಿದೆ.

ಈ ಬಾರಿ  ಪ್ಲಾಸ್ಟಿಕ್ ಮುಕ್ತ ಸಾಹಿತ್ಯ ಸಮ್ಮೇಳನ ನೆಡೆಸುವಂತಹ ಮಹತ್ತರ  ತೀರ್ಮಾನ ಕೈಗೊಂಡಿದ್ದು, ಎಲ್ಲಿಯೂ ಪ್ಲಾಸ್ಟಿಕ್ ಬಾಟೆಲ್ಲುಗಳನ್ನು ಬಳಸದೇ, 5 ಕೌಂಟರ್ ಗಳ ಬಳಿ 20 ಲೀಟರ್ ಗಳ 5  ದೊಡ್ಡ ಕ್ಯಾನ್ ಗಳ ಜೊತೆ  ಪೇಪರ್ ಲೋಟಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಕ್ಯಾನ್ ಗಳಲ್ಲಿ ನೀರು ಮುಗಿಯುತ್ತಿದ್ದಂತೆಯೇ ಅದನ್ನು ಬದಲಿಸುವ ಸಲುವಾಗಿಯೇ  ಹಲವರನ್ನು ನಿಯೋಜಿಸಿರುವುದು ಶ್ಲಾಘನೀಯವಾಗಿದೆ.

bele_muleಈ ರೀತಿಯಾಗಿ ಕನ್ನಡದ ನುಡಿ ಸಿರಿ ನಿರ್ವಿಘ್ನವಾಗಿ ನಡೆಯಲಿದೆ ಎಂದು ಭಾವಿಸುತ್ತಿರುವಾಗಲೇ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರದ ವ್ಯವಸ್ಥೆಯನ್ನೂ ಮಾಡಬೇಕು  ಎಂದು ಕೆಲ ದಿನಗಳ ಹಿಂದೆ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯ ಎದುರು ಮೊಟ್ಟೆ ತಿನ್ನುವ ಮೂಲಕ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು  ಪ್ರತಿಭಟನೆ ನಡೆಸಿದ್ದಲ್ಲದೇ, ಬೇಳೆಯ ಜೊತೆ ಮೂಳೆಯೂ ಇರಲಿ, ಹಪ್ಪಳದ ಜೊತೆ ಕಬಾಬ್ ಇರಲಿ, ಕೋಸಂಬರಿ ಜೊತೆ ಎಗ್‌ಬುರ್ಜಿ ಇರಲಿ, ಮುದ್ದೆ ಜೊತೆ ಬೋಟಿ ಇರಲಿ ಎಂಬ ಘೋಷಣೆಗಳನ್ನು ಕೂಗುವ ಮೂಲಕ  ಮಂಡ್ಯದಲ್ಲಿ ನಡೆಯುತ್ತಿರುವುದು ಕನ್ನಡ ಸಾಹಿತ್ಯ ಸಮ್ಮೇಳನವೋ? ಇಲ್ಲವೇ ಬೀಗರ ಔತಣವೋ? ಎನ್ನುವ ಗೊಂದಲ ಹುಟ್ಟಿಸಿದ್ದು ಸುಳ್ಳಲ್ಲಾ.

bele_mule1ಇದಕ್ಕೂ ಒಂದು ಹೆಚ್ಚು ಮುಂದೆ ಹೋದ ಪ್ರತಿಭಟನೆಕಾರರು, ಆಹಾರ ಮತ್ತು ಆಯ್ಕೆ ನಾಗರೀಕರ ಹಕ್ಕು ಹಾಗಾಗಿ ಈ ವಿಚಾರದಲ್ಲಿ ರಾಜಿಯಾಗಲು ಸಾಧ್ಯವೇ ಇಲ್ಲ.  ಆಡಂಬರದ ಕೆಲವು ಸಸ್ಯಾಹಾರದ ತಿನಿಸುಗಳನ್ನು ಕೈಬಿಟ್ಟು, ಕೋಳಿ ಮಾಂಸದ ತುಂಡು ಮತ್ತು ಮೊಟ್ಟೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಹಾಗಾದೇ ಹೋದಲ್ಲಿ  ತಾವೇ ಸಾರ್ವಜನಿಕರಿಂದ ಕೋಳಿ, ಮೊಟ್ಟೆ ಮತ್ತು ಪಡಿತರವನ್ನು ಸಂಗ್ರಹಿಸಿ ಜನರಿಗೆ ಮಾಂಸಾಹಾರ ವಿತರಿಸುವ ಮೂಲಕ  ದೊಡ್ಡ ಪ್ರತಿಭಟನೆಯನ್ನು ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳುತ್ತೇವೆ ಎಂಬ ಬೆದರಿಕೆ ಹಾಕಿರುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸಿದೆ.

ಇಂದು ಬಾಡೂಟ ನಮ್ಮ ಹಕ್ಕು ಹಾಗಾಗಿ ಕುರಿ ಮತ್ತು ಕೋಳಿಯ ಮಾಂಸಾಹಾರ ನೀಡಲು ಒಪ್ಪಿಕೊಂಡರೆ, ಮುಂದಿನ ದಿನಗಳಲ್ಲಿ ನಮಗೆ ಮೀನಿನ ಖಾದ್ಯ ಬೇಕು ಎಂದು ಕೆಲವರು ಇನ್ನೂ ಕೆಲವರು ನಮಗೆ ದನದ ಮಾಂಸ ಬೇಕು ಎಂದೂ ಹೋರಾಟ ನಡೆಸಬಹುದು. ಇನ್ನೂ ಕೆಲವು ತಥಾಗಥಿತ ಜಾತ್ಯಾತೀತರು ಮತ್ತಾವುದೋ ಕೋಮಿನವರನ್ನು ಓಲೈಸುವ ಸಲುವಾಗಿ ನಮಗೆ ಹಲಾಲ್ ಮಾಂಸ ಬೇಕು ಎಂದೂ ಸಹಾ ಹೋರಾಟ ಮಾಡಬಹುದು. ಇನ್ಯಾರೋ ಮಹಾನುಭಾವರು, ಬೆಳಿಗ್ಗೆ ಕಾಫಿ ಚಹಾ, ಮಧ್ಯಾಹ್ನ ಮಜ್ಜಿಗೆ ಕೊಟ್ಟು ರಾತ್ರಿ ದಣಿವಾದ ದೇಹಕ್ಕೆ ಹೆಂಡ, ಸಾರಾಯಿ, ವಿಸ್ಕಿ ಸಹಾ ಕೇಳಿದರೂ  ಅಚ್ಚರಿ ಎನಿಸಿದು.  ಹೀಗೆ ಸಾಹಿತ್ಯ ಸಮ್ಮೇಳನದ ಆಯೋಜಕರು ಸಾಹಿತ್ಯಕ್ಕಿಂತಲೂ ಪ್ರತಿಯೊಬ್ಬರ ನಾಲಿಗೆ ಚಪಲಕ್ಕೆ ತಾಳ ಹಾಕಿದಲ್ಲಿ ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶವೇ ಬದಲಾಗಿ, ದಿಕ್ಕು ದೆಸೆ ಸಂಪೂರ್ಣವಾಗಿ ಬದಲಾಗುವ ಸಾಧ್ಯತೆಗಳೇ ಹೆಚ್ಚು ಎನ್ನುವುದೇ ಪ್ರತಿಯೊಬ್ಬ ಸಾಹಿತ್ಯಾಸಕ್ತರ ಚಿಂತೆ ಆಗಿದೆ.

ನಿಜವಾದ ಸಾಹಿತ್ಯಾಸಕ್ತರು ಜ್ಞಾನದಾಹವನ್ನು ನೀಗಿಸಿಕೊಳ್ಳಲು ಸಾಹಿತ್ಯ ಸಮ್ಮೇಳನಕ್ಕೆ ಬರುತ್ತಾರೆಯೇ ಹೊರತು, ತಮ್ಮ ನಾಲಿಗೆಯ ಚಪಲಕ್ಕಲ್ಲ. ಹಾಗಾಗಿಯೇ,  ಕನ್ನಡ ಸಾಹಿತ್ಯ ಸಮ್ಮೇಳವವನ್ನು ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ಕನ್ನಡಿಗರ ಅಸ್ತಿತ್ವ ಮತ್ತು ಅಸ್ಮಿತೆಗಳಿಗಷ್ಟೇ ಸೀಮಿತವಾಗಿರಿಸಬೇಕೇ ಹೊರತು, ಹಿಂದಿನ ಕಾಲದ ಚಾರ್ವಾಕರಂತೆ ಎಲ್ಲದ್ದಕ್ಕೂ ಮೂಗು ತೂರಿಸಿಕೊಂಡು ಬರಬಾರದು. ವಯಕ್ತಿಕವಾಗಿ ಹೇಳಬೇಕೆಂದರೆ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ, ಮಾಂಸಾಹಾರ  ಹೀಗೆ ಯಾವುದೇ ಆಹಾರವನ್ನೂ ನೀಡದೇ, ಅದರಿಂದ ಉಳಿಯುವ ಹಣವನ್ನು ಕನ್ನಡ ಸಾಹಿತ್ಯಕ್ಕೇ  ಮೀಸಲಿಡಬೇಕು ಎನ್ನುವುದಾಗಿದೆ. ಹಾಗಾಗದಿದ್ದಲ್ಲಿ,  ಈಗಾಗಲೇ ಕನ್ನಡಿಗರೆಂದರೆ, ಬಿಟ್ಟಿ ಭಾಗ್ಯಗಳಿಗೆ ಬಾಯಿ ಬಿಡುವವರು ಎಂದು  ಆಡಿಕೊಳ್ಳುವವರ ಮುಂದೆ,   ಕನ್ನಡಿಗರು ಸಾಹಿತ್ಯ ಸಮ್ಮೇಳನಕ್ಕೆ ಹೋಗುವುದೇ ಬಾಡೂಟ ತಿನ್ನುವುದಕ್ಕೆ ಎಂಬ ಅಪಾರ್ಥ ಮಾಡಿಕೊಳ್ಳುವ  ಅಪಾಯವೇ  ಹೆಚ್ಚಾಗಿದೆ.

ಜನರ ತೆರಿಗೆಯ ಹಣದಲ್ಲಿ ನಡೆಸಲಾಗುವ ಇಂತಹ ಸಾಹಿತ್ಯ ಸಮ್ಮೇಳನಗಳು ಕನ್ನಡ ಮತ್ತು ಕನ್ನಡಿಗರ  ಸಮಸ್ಯೆಗಳ‌ ಕುರಿತಾಗಿ ಬೆಳಕು ಚೆಲ್ಲುವ ಮತ್ತು  ಕನ್ನಡದ ಹೊಸಾ ಹೊಸಾ ವಿದ್ವಾಂಸರು ಕವಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ  ವೇದಿಕೆ ಆಗಬೇಕೇ ಹೊರತು ಊಟದ ಜಾತ್ರೆ ಆಗಬಾರದು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment