ಹೆಣ್ಣಿಗೆ ತನ್ನ ರೂಪವೇ ವರ ಮತ್ತು ಶಾಪ

ಕುಂಭಮೇಳ ಎನ್ನುವುದು ಪ್ರಪಂಚದ ಅತಿದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ವೇದಿಕೆಯಾಗಿದ್ದು, ಪ್ರತಿ 12 ವರ್ಷಕ್ಕೊಮ್ಮೆ ಈ ಮೇಳ ನಡೆಯುತ್ತದೆ. ಈ ಆಚರಣೆಯ ಹಿಂದೆ ಸಮುದ್ರ ಮಂಥನಕ್ಕೆ ಸಂಬಂಧಿಸಿದ ಪೌರಾಣಿಕೆ ಹಿನ್ನಲೆಯಿದ್ದು, ಕ್ಷೀರ ಸಮುದ್ರದ ಮಧ್ಯೆ, ಕೂರ್ಮಾವತಾರದಲ್ಲಿದ್ದ ಭಗವನ್ ವಿಷ್ಣುವಿನ ಬೆನ್ನಿನ ಮೇಲೆ  ಕೈಲಾಸ ಪರ್ವತವನ್ನು ಕಡೆಗೋಲಾಗಿಸಿಕೊಂಡು ವಾಸುಕಿಯನ್ನು ಹಗ್ಗವನ್ನಾಗಿಸಿಕೊಂಡು ದೇವತೆಗಳು ಹಾಗೂ ಅಸುರರ ನಡುವೆ ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿ,  ಅಂತಿಮವಾಗಿ ಪಡೆದ ಅಮೃತವನ್ನು ಹಂಚಿಕೊಳ್ಳಲು ಅವರಿಬ್ಬರ ನಡುವೆ ನಡೆದ ಯುದ್ದದಲ್ಲಿ ಅಮೃತವಿದ್ದ ಕೊಡದಿಂದ ನಾಲ್ಕು ಹನಿಗಳು ಪ್ರಯಾಗ, ಹರಿದ್ವಾರ, ಉಜ್ಜಯನಿ ಹಾಗು ನಾಸಿಕ್ ಪ್ರದೇಶಗಳಲ್ಲಿ ಬಿದ್ದ ಕಾರಣ  ಆ ಕ್ಷೇತ್ರಗಳು ಪುಣ್ಯಕ್ಷೇತ್ರಗಳಾಗಿ, ಪ್ರತೀ ಹನ್ನೆರಡು ವರ್ಷಕೊಮ್ಮೆ ಅಲ್ಲಿ ಕುಂಭ ಮೇಳವನ್ನು ನಡೆಸುವ ಸಂಪ್ರದಾಯ ಸಾವಿರಾರು ವರ್ಷಗಳಿಂದಲೂ ರೂಢಿಯಲ್ಲಿದೆ.

ಆ ಕುಂಭಮೇಳದ ಶುಭ ಲಗ್ನದಲ್ಲಿ ಅಲ್ಲಿ ಹರಿಯುವ ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಮನುಷ್ಯರ ಎಲ್ಲಾ ಪಾಪಕರ್ಮಗಳೂ ಕಳೆದು ಶುದ್ಧಯಾಗುತ್ತಾರೆ ಮತ್ತು ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇರುವ ಕಾರಣ ಕುಂಭ ನಡೆಯುವ 45 ದಿನಗಳ ಕಾಲ  ದೇಶ ವಿದೇಶಗಳಿಂದ ಕೋಟ್ಯಾಂತರ ಭಕ್ತಾದಿಗಳಲ್ಲದೇ ಹಿಂದೂ ಧರ್ಮವನ್ನು  ಅನುಸರಿಸುವ ಸಾಧು ಸಂತರು ಅದರಲ್ಲೂ ವಿಶೇಷವಾಗಿ ಶಂಕರಾಚಾರ್ಯರಿಂದ ವಿಂಗಡಿಸಲ್ಪಟ್ಟ  ಸುಮಾರು 13 ಅಖಾಡಗಳಿಗೆ ಸೇರಿದ ಅಘೋರಿಗಳು, ನಾಗಾ ಸಾಧುಗಳು  ಹಠ ಯೋಗಿಗಳು  ಆ ಪುಣ್ಯಕ್ಷೇತ್ರಗಳಿಗೆ ಬಂದು ತಮ್ಮ ಭಕ್ತಿಯ  ಪರಾಕಾಷ್ಠೆಯನ್ನು ತೋರುವುದನ್ನು ನೋಡಲು ಸಹಾ ಲಕ್ಷಾಂತರ ಜನರು ಅಲ್ಲಿ ಸೇರುತ್ತಾರೆ. ಸಹಜವಾಗಿಯೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಕಡೆಯಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯಾಪಾರ ವಹಿವಾಟುಗಳು ಸಹಾ ನಡೆಯುತ್ತದೆ. ಈ ಬಾರಿಯ  ಪ್ರಯಾಗ ರಾಜ್ ನಲ್ಲಿ  144 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೂ ಸಹಾ ನಿರೀಕ್ಷೆಗೂ ಮೀರಿ ಭಕ್ತಾದಿಗಳು, ಸಾಧು ಸಂತರು ದೇಶ ವಿದೇಶಗಳಿಂದ ಬರುತ್ತಿರುವ ಕಾರಣ ಒಂದು ಆಂದಾಜಿನ ಪ್ರಕಾರ ಸುಮಾರು 30 ಸಾವಿರ ಕೋಟಿಗಳಿಗೂ ಹೆಚ್ಚಿನ  ಆರ್ಥಿಕ  ವ್ಯಾಪಾರ ವಹಿವಾಟುಗಳು ಅಲ್ಲಿ ನಡೆಯುತ್ತವೆ ಎಂದು ಹೇಳಲಾಗುತ್ತಿದೆ.

ಹೀಗೆ 2025ರ ಜನವರಿ 13ರಂದು ಆರಂಭವಾದ ಕುಂಭ ಮೇಳ ಫೆಬ್ರವರಿ 26ರ ಶಿವರಾತ್ರಿಯವರೆಗೆ ನಡೆಯಲಿದ್ದು, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ಆರಂಭವಾದ 7 ದಿನಗಳಲ್ಲಿಯೇ ದೇಶ ವಿದೇಶಗಳಿಂದ ಕೋಟ್ಯಾಂತರ ಸಂಖ್ಯೆಯಲ್ಲಿನ  ಭಕ್ತಾದಿಗಳು ಆಲ್ಲಿಗೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಸಹಜವಾಗಿಯೇ ಹಾಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಪೂಜಾ ಸಾಮನುಗಳು, ಧೋತಿ ವಸ್ತ್ರಗಳು ಮತ್ತು ಹಿಂದೂಗಳು ಭಕ್ತಿಯಿಂದ ಧರಿಸುವ ತುಳಸೀ/ರುದ್ರಾಕ್ಷಿ ಮಾಲೆಗಳು ವಿವಿಧ ಹರಳುಗಳುಳ್ಳ ಉಂಗುರಗಳನ್ನು ಮಾರುವ ವ್ಯಾಪಾರಿಗಳೂ ಸಹಾ ದೇಶ ವಿವಿಧ ಪ್ರದೇಶಗಳಿಂದ ತಮ್ಮ ಉದರ ಪೋಷಣೆಗಾಗಿ ಅಲ್ಲಿಗೆ ಆಗಮಿಸಿ ನಾಲ್ಕಾರು ಕಾಸನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ.

 

ಸಾಧುಗಳು, ಸಂತರು, ನಾಗಸಾಧುಗಳು, ಆಸ್ತಿಕರಿಂದಲೇ ತುಂಬಿ ತುಳುಕುತ್ತಿರುವ ಈ  ಮಹಾ ಕುಂಭ ಮೇಳದಂತಹ ಪವಿತ್ರ ಧಾರ್ಮಿಕ ಸ್ಥಳದಲ್ಲಿ  ರುದ್ರಾಕ್ಷಿ ಮತ್ತು ತುಳಸೀ ಹಾರವನ್ನು ಮಾರುವ ಮಧ್ಯಪ್ರದೇಶದ ಇಂದೋರಿನ  ಮಹೇಶ್ವರ್ ಎಂಬ ಗ್ರಾಮಕ್ಕೆ ಸೇರಿರುವ ಹದಿ ಹರೆಯದ ಸುಂದರವಾದ ಹುಡುಗಿ ಇದ್ದಕ್ಕಿದ್ದಂತೆಯೇ ವಿಶೇಷವಾದ ಆಕರ್ಷಣೆಯ ಕೇಂದ್ರ ಬಿಂದುವಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದ್ದು, ಕಳೆದ ಎರಡು ಮೂರು ದಿನಗಳಿಂದ  ಬಹುತೇಕ ಎಲ್ಲಾ ರೀತಿಯ  ಮಾಧ್ಯಮಗಳಲ್ಲಿಯೂ ಆಕೆಯ ಕುರಿತಾದ ಒಂದಲ್ಲಾ ಒಂದು ಸುದ್ದಿ ಪ್ರಸಾರವಾಗುತ್ತಿದ್ದರೆ ಇನ್ನು ಸಾಮಾಜಿಕ ಜಾಲತಾಣಗಳಲ್ಲಂತೂ ಆಕೆ ಸಾವಿರಾರು ವಿಡೀಯೋಗಳು ವೈರಲ್ ಆಗುತ್ತಿವೆ.

 

 

ಮಧ್ಯಪ್ರದೇಶದ  ಇಂದೋರಿನ ಮಹೇಶ್ವರ್ ನ ಝುಸಿ ಪ್ರದೇಶದಲ್ಲಿರುವ ಕೊಳಗೇರಿಯಲ್ಲಿ ಸರ್ಕಾರದಿಂದ ನಿರ್ಮಿಸಿಕೊಟ್ಟಿರುವ ಮನೆಯಲ್ಲಿ ವಾಸಿಸುತ್ತಿರುವ  ಮೊನಾಲಿಸಾ ಭೋಸ್ಲೆ ಎಂಬ ಸ್ನಿಗ್ಧ ಸೌಂದರ್ಯದ, ನಿರ್ಭಿಡೆಯಿಂದ ವ್ಯವಹರಿಸುವ, ಬೆಕ್ಕಿನ ಕಣ್ಣುಗಳುಳ್ಳ ಕಂದು ಸುಂದರಿ ತನ್ನ ಸಹೋದರಿಯರೊಂದಿಗೆ ರುದ್ರಾಕ್ಷಿಮಾಲೆಯನ್ನು ಮಾರುತ್ತಿರುವುದನ್ನು ಕಂಡು ಅಕೆಯ ಪೋಟೋ ಮತ್ತು ವೀಡೀಯೋಗಳನ್ನು ಯಾರೋ ಮಹಾನುಭಾವರೊಬ್ಬರು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಂತೆಯೇ, ಆಕೆಯ ವೀಡಿಯೊ 15 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ರೀತಿಯಾಗಿ ವಿಡಿಯೋ ವೈರಲ್ ಆಗಿರುವುದು, ಆಕೆಗೆ ವರ ಆಗುವ ಬದಲು ಶಾಪವಾಗಿ ಪರಣಮಿಸಿದ್ದು, ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಪ್ರಯಾಗ್ ರಾಜ್ ನಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಬಂದ ಭಕ್ತಾದಿಗಳು ಬಂದ ಕಾರ್ಯವನ್ನು ಮರೆತು ಕುಂಭಮೇಳದಲ್ಲಿ ಮೊನಾಲಿಸಾಳನ್ನು ಹುಡುಕಲು ಆರಂಭಿಸಿದ್ದಲ್ಲದೇ, ಆಕೆಯನ್ನು ಕಂಡ ತಕ್ಷಣ ಆಕೆಯೊಂದಿಗೆ ರುದ್ರಾಕ್ಷಿ/ತುಳಸೀ ಹಾರವನ್ನು ಖರೀಧಿಸುವ ಬದಲಾಗಿ ಅಕೆಯೊಂದಿಗೆ ಪೋಟೋ ತೆಗೆಸಿಕೊಳ್ಳುವುದು ರೀಲ್ಸ್ ಮಾಡುವುದಕ್ಕೆ ಮುಂದಾಗಿದ್ದಾರೆ.

 

 

 

ಆರಂಭದಲ್ಲಿ ಎಲ್ಲವೂ ಚೆನ್ನಾ ಎನಿಸಿದರೂ,  ಅತಿಯಾದರೇ ಅಮೃತವೂ ವಿಷ ಎನ್ನಿಸುವಂತೆ ತನ್ನ ಸೌಂದರ್ಯವೇ ತನ್ನ ವ್ಯಾಪಾರಕ್ಕೆ ಕುತ್ತಾಗಿ ಜನರು ಹತ್ತಾರು ರೀತಿಯಲ್ಲಿ ತೊಂದರೆ ಕೊಡಲು ಆರಂಭಿಸಿದಾಗ, ಅವರಿಂದ ತಪ್ಪಿಸಿಕೊಳ್ಳಲು ಆಕೆ ವಿಧಿ ಇಲ್ಲದೇ ನಾಗಾಸಾಧುಗಳ ಡೇರೆಗಳಲ್ಲಿ ಬಚ್ಚಿಟ್ಟುಕೊಳ್ಳುವಂತ ಮುಜುಗೊರದ ಪರಿಸ್ಥಿತಿ ಉಂಟಾಗಿದದ್ದು ನಿಜಕ್ಕೂ ಶೋಚನೀಯವಾಗಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಈ ಮಹಾಕುಂಭ ಮೇಳದಲ್ಲಿ ಈ ಪರಿಯಾಗಿ  ಭಾಗವಹಿಸುತ್ತಿರುವ ಕೋಟ್ಯಾಂತರ ಭಕ್ತ ಸಾಗರವನ್ನು ಪ್ರಪಂಚದ ಯಾವ ದೇಶದಲ್ಲೂ ಕಾಣಲು ಸಿಗದ ಕಾರಣ, ಇಡೀ ವಿಶ್ವವೇ ಬೆಚ್ಚಿ ಬೆರಗಾಗಿರುವ ಸಂಧರ್ಭದಲ್ಲಿ, ಅಲ್ಲಿನ ಪಾವಿತ್ರತೆಯನ್ನು ಕಾಪಾಡುವ ಬದಲು, ಸಾಟಿ ಇಲ್ಲದ ಸ್ಟೈಲು ನಿನ್ನದು ಮೊನಾಲೀಸಾ ಎಂದು  ಆ ಅಮಾಯಕ ರುದ್ರಾಕ್ಷಿ ಮಣಿಯನ್ನು ಮಾರುವ ಮೊನಾಲಿಸಾಳ ಸಹಜ ಸೌಂದರ್ಯ ಹಾಗೂ ಈಕೆಯ ಆಕರ್ಷಕ ಕಣ್ಣುಗಳಿಗೆ ಯುವಕರು ಹಿಂದೆ ಬೀಳುತ್ತಿರುವ ಸಂಗತಿ ಆಡಿಕೊಳ್ಳುವುವರಿಗೆ ಆಹಾರ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ.

ನಮ್ಮ ದೇಶ ಭಾರತದಲ್ಲಿ ಸ್ತ್ರೀ ಸಮಾನತೆಯ ವಿಚಾರಕ್ಕೆ ಬಹಳ ಹಿಂದಿನಿಂದಲೂ ಸ್ಪಷ್ಟವಾದ ನಿಲುವನ್ನು ಹೊಂದಿದ್ದು ಮಹಿಳೆಯರನ್ನು ಶಕ್ತಿ ರೂಪದಲ್ಲಿ ಅದರಲ್ಲೂ ವಿಶೇಷವಾಗಿ ತಾಯಿಯ ರೂಪದಲ್ಲಿ ನೋಡುವ ಸಂಪ್ರದಾಯವಿದ್ದು ಪರಸ್ತ್ರೀಯರನ್ನು ತಾಯಿ ಮತ್ತು ಸಹೋದರಿಯ ರೂಪದಲ್ಲಿ ಗೌರವಿಸುವ ಸಂಪ್ರದಾಯವಿದೆ.  ಇದಕ್ಕೆ ಪೂರಕ ಎನ್ನುವಂತೆ  ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ ಎನ್ನುವ ಸುಭಾಷಿತವಿದ್ದು, ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಎಲ್ಲಿ  ಸ್ತ್ರೀಯರನ್ನು  ಅವಮಾನಿಸಲಾಗುತ್ತದೆಯೋ  ಅಲ್ಲಿ ಮಾಡುವ ಸತ್ಕಾರ್ಯಗಳೆಲ್ಲವೂ ವ್ಯರ್ಥ ವಾಗುತ್ತದೆ ಎನ್ನುವುದು ಈ ಸುಭಾಷಿತದ ಅರ್ಥವಾಗಿದೆ.  ಹಾಗಾಗಿಯೇ ನಮ್ಮ ಸನಾತನ ಸಂಸ್ಕೃತಿಯಲ್ಲಿ  ಪ್ರಕೃತಿಯನ್ನು, ಭೂಮಿಯನ್ನು ಬಹುತೇಕ  ನದಿಗಳು ಮತ್ತು ಪರ್ವತಗಳಿಗೆ ಹೆಣ್ಣಿನ ಹೆಸರಲ್ಲಿ ಗುರುತಿಸಿ ಅವುಗಳಿಗೆ ಗೌರವಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಹೆಣ್ಣನ್ನು ಮಾತೃಸ್ವರೂಪಿಣಿಯಂತೆ ಕಾಣುವ  ಸಂಸ್ಕಾರವಂತ ನಾಡಾದ ನಮ್ಮ ಈ ಭರತಭೂಮಿಯಲ್ಲಿ ಹೆಣ್ಣು ಮಕ್ಕಳ ಮಾನ, ಪ್ರಾಣ ರಕ್ಷಣೆಗಾಗಿ ಉಸಿರಿನ ಕೊನೆವರೆಗೂ ಹೋರಾಡಿದ ಇತಿಹಾಸ ನಮ್ಮದಾಗಿದೆ. ಹೆಣ್ಣನ್ನು ತಾಯಿ, ತಂಗಿ, ಅಕ್ಕ, ಅತ್ತಿಗೆ ಹೀಗೆ ವಿವಿಧ ರೂಪಗಳಲ್ಲಿ ನಮ್ಮ ಕುಟುಂಬದಲ್ಲಿದ್ದು ಹೆಣ್ಣು ಕುಟುಂಬದ ಕಣ್ಣು ಎಂದೇ ಭಾವಿಸಿ ಆಕೆಗೆ ಕೇವಲ ಕುಟುಂಬವಷ್ಟೇ ಅಲ್ಲದೇ, ದೇಶವನ್ನು. ರಾಜ್ಯವನ್ನು ಆಳುವಂತಹ  ಸಕಲ ರೀತಿಯ ಅಧಿಕಾರವನ್ನು  ನೀಡಿದ ನೆಲ ನಮ್ಮದಾಗಿದೆ.  ಮಹಿಳಾ ಸಬಲೀಕರಣದ ಹೆಸರಿನಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿಯೂ  ಆಕೆ ಪುರುಷರಿಗೆ ಸರಿ ಸಮನಾಗಿ ನಿಲ್ಲುವಂತಹ ಪ್ರಗತಿಯ ಸ್ವಾತಂತ್ರ್ಯವನ್ನು ಪ್ರಗತಿಯ ಸಂಕೇತ ಎಂದೇ ಬಿಂಬಿಸಲಾಗುವ ನಮ್ಮ ದೇಶದಲ್ಲಿ ನಡೆಯುತ್ತಿರುವ ಕುಂಭಮೇಳದಂತಹ  ಆಧ್ಯಾತ್ಮಿಕ ಉತ್ಸವದಲ್ಲಿ ಪ್ರತಿ ದಿನವೂ ಬರುವ  ಲಕ್ಷಾಂತರ ಭಕ್ತರಿಂದಾಗಿ ತಮ್ಮ ಹೊಟ್ಟೆ ತುಂಬುತ್ತದೆ ಎಂದು ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾಳಿಗೆ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿ ಪುರುಷರಿಂದಲೇ ಆಗುತ್ತಿರುವ ತೊಂದರೆ ನಿಜಕ್ಕೂ  ಅಸಹನೀಯವಾಗಿದೆ.

ಮೊನಾಲಿಸಾಳ ವೀಡೀಯೋ ವೈರಲ್ ಆದ ನಂತರ ಮೊನಾಲಿಸಾ ಕುಂಭಮೇಳದಲ್ಲಿ ಮಾಲೆಗಳನ್ನು ಮಾರಾಟ ಮಾಡುವುದು ದುಸ್ತರವಾಗಿದ್ದು, ಕುಂಭ ಮೇಳದಲ್ಲಿ  ಆಕೆ ತನ್ನ ಮಾಲೆಗಳೊಂದಿಗೆ ಪ್ರತ್ಯಕ್ಷಳಾಗುತ್ತಿದ್ದಂತೆಯೇ, ಹತ್ತು ಹಲವಾರು ಯೂಟ್ಯೂಬರ್‌ಗಳು ಆಕೆಯೊಂದಿಗೆ ಸಂದರ್ಶನ ಮಾಡುವುದು, ಹಾಗೆ ಸಂದರ್ಶನದ ನೆಪದಲ್ಲಿ ಅಸಂಬದ್ದ ಪ್ರಶ್ನೆಗಳನ್ನು ಕೇಳುವುದು, ಆದರ ಮಧ್ಯದಲ್ಲಿ ದೇವರಿಗೆ ಅರ್ಪಿಸಲು ತಂದ ಹೂವನ್ನು ತೋರಿಸಿ, ಈ ಹೂವಿನ ಹಾರವನ್ನು ಧರಿಸಿ ನನ್ನೊಂದಿಗೆ ಮದುವೆಯಾಗುತ್ತೀಯಾ? ಎಂದು  ಕೇಳುವುದರಿಂದಾಗಿ  ಮೊನಾಲಿಸಾಗೆ ತನ್ನ ವ್ಯಾಪಾರವನ್ನು  ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಆಕೆ  ಜನರು ತನ್ನನ್ನು  ಸುಲಭವಾಗಿ ಗುರುತಿಸಲಾರದಂತೆ  ಮುಖವಾಡ ಮತ್ತು ಕಪ್ಪು ಕನ್ನಡಕಗಳನ್ನು ಧರಿಸಿದರೂ, ಕೆಲವು ಕಾಮಾಲೇ ಕಣ್ಗಳು ಆಕೆಯನ್ನು ಗುರುತಿಸಿ ಆಕೆಯೊಂದಿಗೆ ಸೆಲ್ಫಿ ತೆಗೆಯುವುದು ಮತ್ತು ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಆಕೆಯ ಪೋಷಕರು ಆಕೆಯನ್ನು   ಕುಂಭಮೇಳದಿಂದ  ಆಕೆಯ ಊರಿಗೆ ಕಳುಹಿಸಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ. ಸದ್ಯಕ್ಕೆ ದೊರೆತ ಮಾಹಿತಿಯ ಪ್ರಕಾರ, ಮೊನಾಲಿಸಾ ತನ್ನ ಹುಟ್ಟೂರಿಗೆ ಹಿಂದಿರುಗಿದ್ದು, ಆಕೆಯ ತಂದೆ ಮತ್ತು ಆಕೆಯ ಇಬ್ಬರು ಸಹೋದರಿಯರು ಕುಂಭ ಮೇಳದಲ್ಲಿ ರುದ್ರಾಕ್ಷಿ/ತುಳಸೀ ಮಾಲೆಗಳನ್ನು ಮಾರಾಟ ಮಾಡುತ್ತಿದ್ದು, ಕುಂಭಮೇಳಕ್ಕೆ ಬರುತ್ತಿರುವ ಕೆಲವು ಪಡ್ಡೇ ಹುಡುಗರು ಅವರಿಂದ ಮಾಲೆಗಳನ್ನು ಕೊಳ್ಳುವುದರ ಬದಲು ಮೊನಲೀಸಾಳ ಕುರಿತಾಗಿಯೇ ಪ್ರಶ್ನೆಗಳನ್ನು ಕೇಳುತ್ತಿರುವುದನ್ನು ಗಮನಿಸಿದಾಗ,  ಕಲ್ಪನ ನಟನೆಯ, ಮಣ್ಣಿನ ಮಗ ಚಿತ್ರದ, ಗೀತಪ್ರಿಯ ಅವರು ರಚಿಸಿ, ಜಿ.ಕೆ.ವೆಂಕಟೇಶ್ ಅವರ ಸಂಗೀತದಲ್ಲಿ  ಪಿ. ಸುಶೀಲಾ ಹಾಡಿರುವ

ಇದೇನ ಸಭ್ಯತೆ, ಇದೇನ ಸಂಸ್ಕೃತಿ, ಇದೇನ ನಮ್ಮ ಸತ್ಯತೆ, ಇದೇನ ನಮ್ಮ ಜಾಗ್ರತೆ,

ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ,

ಇದೇನ ಸಭ್ಯತೆ, ಇದೇನ ಸಂಸ್ಕೃತಿ… ||

ಎನಿತು ದೇಶ ಭಕ್ತರು, ಹರಿಸಿ ತಮ್ಮ ನೆತ್ತರು, ದಾಸ್ಯದಿಂದ ನಮ್ಮನು ಬಿಡಿಸಿ ಅಮರರಾದರು,

ಅಮರ ರಾಮ ರಾಜ್ಯದ ಕನಸು ಕಂಡೆವಂದು, ಬರಿಯ ಬೇಧ ಭಾವವ ಕಾಣುತಿಹೆವು ಇಂದು…

ಇದೇನ ಸಭ್ಯತೆ, ಇದೇನ ಸಂಸ್ಕೃತಿ… ||

ದೇಶವನ್ನು ಕಾಯುತಿಹರು ಗಡಿಗಳಲ್ಲಿ ಯೋಧರು, ನಮಗೆ ಅನ್ನ ನೀಡಲು ದುಡಿಯುತಿಹರು ರೈತರು,

ಅವರ ತ್ಯಾಗ ದುಡಿಮೆಯ ಪರಿವೆ ನಮಗೆ ಇಲ್ಲ, ಗಾಂಧಿ, ನೆಹರು ಶಾಸ್ತ್ರಿಯನ್ನು ನಾವು ಮರೆತೆವಲ್ಲ…

ಇದೇನ ಸಭ್ಯತೆ, ಇದೇನ ಸಂಸ್ಕೃತಿ… ||

ದೇಶದಾ ಸಮಸ್ಯೆಗಳು ಇರಲು ಕೋಟಿ ಕೋಟಿ, ಅದನು ಮರೆತು ಸಾಗಿದೆ ಫ್ಯಾಶೆನ್ನಿನ ಪೈಪೋಟಿ,

ಮಾನ ಮುಚ್ಚಿಕೊಳ್ಳಲು ಕೆಲವರಿಗೆ ಬಟ್ಟೆಯಿಲ್ಲ, ಪೂರ್ತಿ ಮೈ ಮುಚ್ಚಲು ಕೆಲವರಿಗೆ ಮನಸಿಲ್ಲ…

ಇದೇನ ಸಭ್ಯತೆ, ಇದೇನ ಸಂಸ್ಕೃತಿ,

ಇದೇನ ನಮ್ಮ ಸತ್ಯತೆ, ಇದೇನ ನಮ್ಮ ಜಾಗ್ರತೆ,  ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ … ಎಂಬ ಹಾಡು ನೆನಪಾಗುತ್ತಿದ್ದು, ಇನ್ನು ಮುಂದಿನ ದಿನಗಳಲ್ಲಾದರೂ, ಕುಂಭ ಮೇಳದಲ್ಲಿ ಭಾಗವಹಿಸುವ ನಮ್ಮವರರು ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು  ಎತ್ತಿ ಹಿಡಿಯುತ್ತಾರೆ ಎಂದು ಆಶಿಸೋಣ ಅಲ್ವೇ?

ಏನಂತೀರೀ?

ಸೃಷ್ಟಿಕರ್ತ ಉಮಾಸುತ

Leave a comment