ಇತ್ತೀಚಿನ ದಿನಗಳಲ್ಲಿ ಕೇವನ ನಮ್ಮ ದೇಶವಷ್ಟೇ ಅಲ್ಲದೇ, ಇಡೀ ವಿಶ್ವಾದ್ಯಂತ ಚರ್ಚಿತವಾಗುತ್ತಿರುವುದೇ ಪ್ರಯಾಗ್ ರಾಜ್ ನ ಮಹಾ ಕುಂಭ ಮೇಳದ ಬಗ್ಗೆಯೇ. ದೇಶ ವಿದೇಶಗಳಿಂದ ಕೋಟ್ಯಾಂತರ ಜನರು, ಧರ್ಮ ಜಾತಿ ಎಲ್ಲವನ್ನೂ ಮೀರಿ 144 ವರ್ಷಗಳ ನಂತರ ನಡೆಯುತ್ತಿರುವ ಈ ಮಹಾಕುಂಭವು 2025ರ ಜನವರಿ 13ರಂದು ಆರಂಭವಾಗಿ ಫೆಬ್ರವರಿ 26ರ ಶಿವರಾತ್ರಿಯವರೆಗೆ ಸುಮಾರು 45 ದಿನಗಳ ಕಾಲ ಗಂಗಾ, ಯಮುನಾ ಮತ್ತು ಗುಪ್ತನದಿ ಸರಸ್ವತಿಯ ಸಂಗಮದಲ್ಲಿ ನಡೆಯುತ್ತಲಿದೆ. ಈ ಕುಂಭ ಮೇಳಕ್ಕೆ ಭಕ್ತಾದಿಗಳು ಶ್ರದ್ಧೆಯಿಂದ ಬಂದು ಭಕ್ತಿಯಿಂದ ತ್ರಿವೇಣಿ ಸಂಗಮದಲ್ಲಿ ಮಿಂದು ಭಕ್ತಿ ಪರವಶರಾಗಿ ಹೋಗುತ್ತಿದ್ದಾರೆ. ಪ್ರಯಾಗಕ್ಕೆ ಬಂದು ಕೇವಲ ತ್ರಿವೇಣಿ ಸಂಗಮದಲ್ಲಿ ಮಿಯ್ಯುವದಷ್ಟೇ ಅಲ್ಲದೇ, ದಂಪತಿಗಳ ಸಮೇತ ವೇಣಿದಾನ ಎಂಬ ಪವಿತ್ರ ಧಾರ್ಮಿಕ ಆಚರಣೆಯ ಮಾಡುವ ಪ್ರತೀತಿ ಇದ್ದು ಅ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ತಿಳಿಯೋಣ ಬನ್ನಿ.
ಯತ್ರ ನಾರ್ಯಸ್ತು ಪೂಜ್ಯಂತೆ, ತತ್ರ ರಮಂತೆ ದೇವತಾಃ || ಅರ್ಥತ್ ಎಲ್ಲಿ ನಾರಿಯನ್ನು ಗೌರವದಿಂದ ಪೂಜಿಸಲಾಗುತ್ತದೆಯೂ ಅಲ್ಲಿ ದೇವತೆಗಳು ಶಾಶ್ವತವಾಗಿ ನೆಲೆಸಿರುತ್ತಾರೆ ಎನ್ನುತ್ತದೆ ನಮ್ಮ ಸನಾತನಧರ್ಮ ಅದಕ್ಕೆ ಪೂರಕ ಎನ್ನುವಂತೆ ನಮ್ಮ ದೇಶದಲ್ಲಿ ಹರಿಯುವ ಬಹುತೇಕ ಜೀವ ನದಿಗಳಿಗೆ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ, ಹೇಮಾವತಿ, ನೇತ್ರಾವತಿ ಶರಾವತಿ, ತುಂಗಭದ್ರೆ ಹೀಗೆ ಹೆಣ್ಣು ಮಕ್ಕಳ ಹೆಸರನ್ನಿಡುವ ಮೂಲಕ ಬಹಳ ಗೌರವಯುತವಾದ ಸ್ಥಾನವನ್ನು ನೀಡಿದ್ದೇವೆ.
ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮವಾದ ಪ್ರಯಾಗದ ಪುಣ್ಯ ಕ್ಷೇತ್ರದಲ್ಲಿ ಭಾರತದ ಉಳಿದ ತೀರ್ಥಕ್ಷೇತ್ರಗಳಲ್ಲಿ ಇರುವಂತೆ ಯಾವುದೇ ಕ್ಷೇತ್ರಪಾಲಕರು ಇಲ್ಲ. ಉದಾಹರಣೆಗೆ ಹೇಳಬೇಕೆಂದರೆ, ವಾರಾಣಾಸಿಯಲ್ಲಿ ಕಾಶೀ ವಿಶ್ವನಾಥ, ರಾಮೇಶ್ವರದಲ್ಲಿ ಶ್ರೀ ರಾಮೇಶ್ವರ, ಬದರಿಯಲ್ಲಿ ಶ್ರೀ ಬದರೀನಾಥನ ದರ್ಶನ ಪಡೆದು ಪಾವನರಾಗುವಂತೆ ಪ್ರಯಾಗದಲ್ಲಿ ಈ ರೀತಿಯ ಯಾವುದೇ ಕ್ಷೇತ್ರಪಾಲಕರ ದೇವಾಲಯವಿಲ್ಲ. ಮಹಾಶಿವನ ಶಂಕರ್ ವಿಮಾನ ಮಂಟಪ, ಶ್ರೀ ವೇಣಿ ಮಾಧವ ದೇವಸ್ಥಾನ, ಸಂಕಟ್ ಮೋಚನ್ ಮಂದಿರ, ಮಂಕಮೇಶ್ವರ ಮಂದಿರ, ಭಾರದ್ವಾಜ ಆಶ್ರಮ, ತಕ್ಷಕೇಶ್ವರ ನಾಥ್, ನಾಗ್ ವಾಸುಕಿ ದೇವಸ್ಥಾನ ಮುಂತಾದ ದೇವಾಲಯಗಳು ಇದ್ದರೂ, ಇಲ್ಲಿ ತ್ರಿವೇಣಿ ಸಂಗಮವೇ ಇಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು. ಹಾಗಾಗಿಯೇ ಇಲ್ಲಿನ ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನವನ್ನು ಮಾಡಲೆಂದೇ ಬರುತ್ತಾರೆ. ಹಾಗೆ ತ್ರಿವೇಣಿ ಸಂಗಮಕ್ಕೆ ದಂಪತಿಗಳ ಸಮೇತ ಬರುವವರು, ಕೇವಲ ತ್ರಿವೇಣಿ ಸಂಗಮದಲ್ಲಿ ಸ್ನಾನವನ್ನು ಮಾತ್ರಾ ಮಾಡದೇ, ವೇಣಿ ದಾನದಂತಹ ಪವಿತ್ರ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ವೇಣಿ ಎಂದರೆ ಜಡೆ ಎಂಬ ಅರ್ಥವಿದ್ದು, ಸನಾತನ ಹೆಣ್ಣು ಮಕ್ಕಳ ಸುಂದರವಾದ ಜೆಡೆಯು ಅವಳ ಘನತೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಹಾಗಾಗಿಯೇ ಉದ್ದ ಜಡೆ ಹೊಂದಿರುವವಳಿಗೆ ನೀಲವೇಣಿ ಎಂದೂ, ನಾಗರ ಹಾವಿನಂತೆ ಸೊಟ್ಟದಾದ ಸಣ್ಣ ಜಡೆಯುಳ್ಳವಳಿಗೆ ನಾಗವೇಣಿ ಎಂಬ ಅಡ್ಡ ಹೆಸರನ್ನಿಟ್ಟು ಕರೆಯುವ ರೂಢಿ ನಮ್ಮಲ್ಲಿ ಬಹಳ ಕಾಲದಿಂದಲೂ ಇದೆ. ಅಚ್ಚರಿಯ ವಿಷವೆಂದರೆ ಈ ವೇಣಿದಾನಕ್ಕೂ, ತ್ರಿವೇಣಿ ಸಂಗಮಕ್ಕೂ ಮತ್ತು ನಮ್ಮ ಭಾರತೀಯ ನಾರಿಯರು ಹಾಕಿಕೊಳ್ಳುವ ಜಡೆಗೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಸರಳವಾಗಿ ಜಡೆ ಹಾಕಿಕೊಳ್ಳುವಾಗ ತಮ್ಮ ಕೂದಲನ್ನು ಮೂರು ಭಾಗಗಳಾಗಿ ವಿಂಗಡಿಸಿ ಕೊಂಡು ಅದರಲ್ಲಿ ಒಂದು ಭಾಗವನ್ನು ಮಧ್ಯದಲ್ಲಿಟ್ಟುಕೊಂಡು ಅದರ ಸುತ್ತಲೂ ಉಳಿದ ಎರಡು ಭಾಗಗಳನ್ನು ಒಂದರ ಮೇಲೊಂದು ಹೆಣೆಯುತ್ತ ಹೋಗುತ್ತಾರೆ. ಹೀಗೆ ಹೆಣ್ಣು ಮಕ್ಕಳ ಕೂದಲಿನ ಆ ಮೂರು ಭಾಗಗಳು ಹಸಿರು (ಭಾಗಶಃ ಬಿಳಿ) ಬಣ್ಣದ ಗಂಗೆ, ಕೆಂಪು ಬಣ್ಣದ ಯಮುನೆ ಮತ್ತು ಮಧ್ಯ ಭಾದಲ್ಲಿ ನಮ್ಮ ಕಣ್ಣಿಗೆ ಗೋಚರಿಸದ ಗುಪ್ತಗಾಮಿನಿಯಾದ ಸರಸ್ವತಿ ನದಿಗೆ ಹೋಲಿಸಲಾಗುತ್ತದೆ.
ಈ ಪವಿತ್ರ ವೇಣಿದಾನ ಮಾಡುವ ದಂಪತಿಗಳು, ಶುಚಿರ್ಭೂತರಾಗಿ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿಕೊಂಡು ತ್ರಿವೇಣಿ ಸಂಗಮದಲ್ಲಿ ಅಲ್ಲಿನ ಅರ್ಚಕರ(ಪಂಡಾಗಳು) ಪೌರೋಹಿತ್ಯದಲ್ಲಿ ಸಾಂಗೋಪಾಂಗವಾಗಿ ಪೂಜೆ ಸಲ್ಲಿಸಿದ ನಂತರ ಪೂಜೆಯ ಅಂತಿಮ ವಿಧಿ ವಿಧಾನವಾಗಿ ಗಂಡನು ತನ್ನ ಪತ್ನಿಯನ್ನು ಬಲ ತೊಡೆಯ ಮೇಲೆ ಕುಳ್ಳರಿಕೊಂಡು ತನ್ನ ಪತ್ನಿಯ ಕೂದಲನ್ನು ಬಾಚಿ ಜಡೆಯನ್ನು ಹಾಕಿ ನಂತರ ಅಲ್ಲಿನ ಅರ್ಚಕರ ಆಜ್ಞಾನುಸಾರ ಸುಮಾರು ಒಂದು ಅಥವಾ ಒಂದೂವರೆ ಇಂಚಿನಷ್ಟು ಜಡೆಯ ತುದಿಯ ಕೂದಲನ್ನು ಕತ್ತರಿಯಿಂದ ಕತ್ತರಿಸಿ ಪೂಜಾ ದ್ರವ್ಯಗಳ ಜೊತೆಗೆ ಕತ್ತರಿಸಿದ ಕೂದಲನ್ನೂ ಇರಿಸಿ ಅದಕ್ಕೆ ಪೂಜೆ ಸಲ್ಲಿಸಿ ನಂತರ ಪತಿಯೇ ಪ್ರತ್ಯಕ್ಷ ದೇವರು ಎಂಬ ಭಾವನೆಯಿಂದ ಮಡದಿಯು ತಮ್ಮ ಮನೆಯವರ ಪಾದ ಪೂಜೆ ಮಾಡಿ ವೇಣಿದಾನಕ್ಕೆ ಅನುಮತಿ ಕೋರುತ್ತಾರೆ. ಹೀಗೆ ಸುಮಂಗಲಿಯರ ವೇಣಿದಾನ ಪೂಜೆ ಮುಗಿದ ನಂತರ ಗಂಡಸರು ತಮ್ಮ ಕುಟಂಬದಲ್ಲಿ ಅಗಲಿದ ಹಿರಿಯರಿಗಷ್ಟೇ ಅಲ್ಲದೇ, ತಮ್ಮ ಸಾಕು ಪ್ರಾಣಿ ಸಮೇತ, ಸಕಲ ಬಂಧು ಮಿತ್ರರನ್ನೂ ನೆನಸಿಕೊಂಡು ಅವರಿಗೆ ಶ್ರಾದ್ಧ ಕರ್ಮಗಳನ್ನು ಮಾಡಿ, ಆವರ ಪಿಂಡಗಳನ್ನು ಮತ್ತು ತಮ್ಮ ಪತ್ನಿಯರ ಜಡೆಯನ್ನು ಕತ್ತರಿಸಿದ ಕೂದಲನ್ನು ತ್ರಿವೇಣೆ ಸಂಗಮದಲ್ಲಿ ವಿಸರ್ಜಿಸಿ ನಂತರ ಸ್ನಾನವನ್ನು ಮಾಡಿ ಉಟ್ಟ ಬಟ್ಟೆಯನ್ನು ನದಿಯಲ್ಲೇ ಬಿಡುವ ಸಂಪ್ರದಾಯವಿತ್ತು. ಹೀಗೆ ಉಟ್ಟ ಬಟ್ಟೆಯನ್ನು ನದಿಯಲ್ಲಿ ಬಿಟ್ಟಾಗ ನದಿ ಮಲಿನವಾಗುತ್ತದೆ ಎಂಬ ಕಾರಣದಿಂದ ಅದನ್ನು ನಿಷೇಧಿಸಿದ ಪರಿಣಾಮ, ಈಗ ಅಲ್ಲಿನ ಅರ್ಚಕರಿಗೆ ವಸ್ತ್ರದಾನ ಮಾಡುವುದು ಅದೇ ರೀತಿ ಬ್ರಾಹ್ಮಣರಿಗೆ ಅನ್ನದಾನ ಮಾಡುವ ಪದ್ದತಿ ಇದ್ದು ಅದು ಸಾಧ್ಯವಾಗದೇ ಹೋದಾಗ ಅದರ ಬದಲಾಗಿ ಹಣದ ರೂಪದಲ್ಲಿ ದಾನ ಮಾಡುವ ಪದ್ಧತಿಯೂ ರೂಡಿಯಲ್ಲಿದೆ.
ಹೀಗೆ ವೇಣಿ ದಾನ ಆಚರಣೆಯ ರೂಪದಲ್ಲಿ ಭಾರತೀಯ ಸ್ರೀಯರು ತಮ್ಮ ಜಡೆಗಳನ್ನು ಪವಿತ್ರ ನದಿಗಳಿಗೆ ಅರ್ಪಣೆಯಾಗಿ ನೀಡುವುದು ಭಕ್ತಿ, ಶರಣಾಗತಿ ಮತ್ತು ಅವರ ವೈವಾಹಿಕ ಪ್ರಯಾಣದಲ್ಲಿ ಹೊಸದಾಗಿ ಪ್ರಾರಂಭಿಸುವ ಇಚ್ಛೆಯನ್ನು ಸಾಂಕೇತಿಕ ರೂಪದಲ್ಲಿ ಪ್ರತಿನಿಧಿಸುತ್ತದೆ. ಪಾಪ ಈ ಅರ್ಪಣೆಯಾದ ನಂತರ ದಂಪತಿಗಳು ಹೊಸಾ ಬಟ್ಟೆಯನ್ನು ಧರಿಸಿಕೊಂಡು ಮತ್ತೆ ಸಾಂಪ್ರದಾಯಿಕ ರೀತಿಯಲ್ಲಿ ಮರು ಮದುವೆಯನ್ನು ಮಾಡಿಕೊಳ್ಳುವ ಪದ್ದತಿಯಿದೆ. ತ್ರಿವೇಣಿ ಸಂಗಮದ ನದಿಗಳು ಮತ್ತು ಅಲ್ಲಿ ಪೂಜಿಸಲ್ಪಡುವ ದೇವರ ಸಮ್ಮುಖದಲ್ಲಿ, ದಂಪತಿಗಳು ಪರಸ್ಪರ ಪ್ರಬಲ ನಂಬಿಕೆಯ ಅಭಿವ್ಯಕ್ತಿಯಾಗಿ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಬಂಧನದ ಸಾಕ್ಷಿಯಾಗಿ, ತಮ್ಮ ವೈವಾಹಿಕ ಪ್ರತಿಜ್ಞೆಗಳನ್ನು ನವೀಕರಿಸುವ ಸಂಪ್ರದಾಯವಿದೆ. ಇದೇ ರೀತಿಯ ಮರು ಮದುವೆಯು 60 ನೇ ವರ್ಷದ ಹುಟ್ಟು ಹಬ್ಬದಂದು ಷಷ್ಠಿಪೂರ್ಣ ಶಾಂತಿ, 70 ನೇ ವರ್ಷದ ಹುಟ್ಟು ಹಬ್ಬದಂದು ಭೀಮರಥ ಶಾಂತಿ ಮತ್ತು 81 ವರ್ಷ 3 ತಿಂಗಳ ನಂತರ ಅಚರಿಸಲಾಗುವ ಸಹಸ್ರಪೂರ್ಣಚಂದ್ರ ಶಾಂತಿ ಮತ್ತು 90ನೇ ವರ್ಷದ ಹುಟ್ಟು ಹಬ್ಬದಂದು ವಿಶೇಷವಾಗಿ ಆಚರಿಸಲಾಗುವ ಕಾಲ ಸ್ವರೂಪ ಸೌರಿ ಶಾಂತಿಯಂದೂ ಸಹಾ ದಂಪತಿಗಳಿಗೆ ಪುನರ್ ವಿವಾಹವನ್ನು ಮಾಡಿಸಿ ಪತ್ನಿಗೆ ಹೆಚ್ಚುವರಿ ತಾಳಿಯನ್ನು ಕಟ್ಟಿಸುವ ಸಂಪ್ರದಾಯವನ್ನು ನೆನಪಿಸುವಂತಿದೆ. ಸುಮಂಗಲಿ ಮಹಿಳೆಯಅರು ಜೀವಮಾನದಲ್ಲಿ ಈ ರೀತಿಯಾಗಿ ವೇಣಿದಾನವನ್ನು ಕೇವಲ ಒಂದೇ ಒಂದು ಬಾರಿ ಮಾತ್ರ ಮಾಡಬೇಕು ಎನ್ನುವ ಸಂಪ್ರದಾಯವಿದೆ. ಈ ರೀತಿಯಾಗಿ ವೇಣಿದಾನ ಮಾಡುವುದರಿಂದ ಹೆಣ್ಣು ಮಕ್ಕಳು ಹುಟ್ಟಿದಾಗ, ಬೆಳೆದು ಋತುಮತಿಯಾದಾಗ, ಮದೆಯಾದ ನಂತರ ಶೋಭನದ ಸಮಯದಲ್ಲಿ ನಂತರ ಕೌಟುಂಬಿಕ ಜೀವನದಲ್ಲಿ ತಿಳಿದೋ ಇಲ್ಲವೇ ತಿಳಿಯದೋ ಮಾಡಿರಬಹುದಾದ ಸಪ್ತ ವಿಧವಾದ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದ್ದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪದ್ದತಿಯನ್ನು ಇಂದಿಗೂ ಸಹಾ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡುವ ದಂಪತಿಗಳು ಅನುಸರಿಸುತ್ತಾ ಬಂದಿದ್ದಾರೆ.
ಸಾಮಾನ್ಯವಾಗಿ ಪೂಜಾ ಕಾರ್ಯಗಳನ್ನು ಮಾಡುವವರು ಮತ್ತು ಮಾಡಿಸುವವರು ಮಂದಲಿಗೆ(ಚಾಪೆ) ಇಲ್ಲವೇ ಮಣೆಯ ಮೇಲೆ ಕುಳಿತು ಮಾಡುವ ಸಂಪ್ರದಾಯವಿದ್ದರೆ, ತ್ರಿವೇಣಿ ಸಂಗಮದ ತಡದಡಿಯಲ್ಲಿ ಶ್ರೀಚಕ್ರವಿದೆ ಎನ್ನುವ ಕಾರಣ ಬರೇ ನೆಲದ ಮೇಲೆಯೇ ಕುಳಿತು ಪೂಜೆ ಮಾಡುವುದು ಇಲ್ಲಿನ ವಿಶೇಷವಾಗಿದೆ. ಅದೇ ರೀತಿ ಸಾಮಾನ್ಯವಾಗಿ ಕೂದಲನ್ನು ನೀರಿನಲ್ಲಿ ಅಥವಾ ಉಳಿದ ನದಿಗಳಲ್ಲಿ ವಿಸರ್ಜನೆ ಮಾಡಿದರೆ ಅದು ನೀರಿನಲ್ಲಿ ಮುಳುಗದೇ ತೇಲುತ್ತದೆ. ಆದರೆ ಈ ತ್ರಿವೇಣಿ ಸಂಗಮದಲ್ಲಿ ವೇಣಿದಾನದ ಮೂಲಕ ವಿಸರ್ಜಿಸಿದ ಕೂದಲು ಮುಳುಗುವುದು ವಿಶೇಷವಾಗಿದೆ.
ಈ ವೇಣಿದಾನ ಎಂದ ಕೂಡಲೇ 80ರ ದಶಕದಲ್ಲಿ ನಮ್ಮ ತಾತಾ, ಅಜ್ಜಿ, ಅಪ್ಪಾ ಅಮ್ಮಂದಿರೊಂದಿಗೆ ಇದೇ ತ್ರಿವೇಣಿ ಸಂಗಮದಲ್ಲಿ ವೇಣಿದಾನದಲ್ಲಿ ಭಾಗಿಯಾಗಿದ್ದಾಗ ಅಲ್ಲಿನ ಪಾಂಡ ಮತ್ತು ನಮ್ಮ ತಂದೆಯವರ ನಡುವೆ ನಡೆದ ಜಿಜ್ಞಾಸೆಯ ನೆನಪಾಗುತ್ತದೆ. ಅಂದು 10 ವರ್ಷದ ಹುಡುಗನಾಗಿದ್ದರೂ, ಆಲ್ಲಿ ನಡೆದ ಸಂಭಾಷಣೆ ನನ್ನ ಮನದಲ್ಲಿ ಅಚ್ಚೊತ್ತಿದೆ. ಈ ವೇಣಿದಾನ ಪ್ರಕ್ರಿಯೆಯು ಸುಮಾರು 2-3 ಗಂಟೆಗಳ (ಅದು ಅಲ್ಲಿನ ಅರ್ಚಕರಮೇಲೆ ನಿರ್ಧಾರವಾಗುತ್ತದೆ) ಕಾರ್ಯಕ್ರಮವಾಗಿದ್ದು, ನಮ್ಮ ತಂದೆಯವರು ಇಡೀ ಪೂಜೆಯಲ್ಲಿ ಯಾವುದೇ ಮಂತ್ರ/ಶಾಸ್ತ್ರಗಳನ್ನು ಲೋಪ ಮಾಡದೇ ಇಲ್ಲವೇ ತುಂಡರಿಸದೇ, ನಿರ್ವಿಘ್ನವಾಗಿ ಸಾಂಗೋಪಾಂಗವಾಗಿ ಮಾಡಿಸಬೇಕು ಎಂದು ಹೇಳಿದ್ದ ಕಾರಣ ಮತ್ತು ನಮ್ಮ ತಂದೆ ಮತ್ತು ತಾನನವರಿಗೂ ಪೊರೋಹಿತ್ಯದ ಮಂತ್ರಗಳು ಬರುತ್ತಿದ್ದ ಕಾರಣ ಅಲ್ಲಿ ಪಾಂಡಾ ನಿಧಾನವಾಗಿ ಪೂಜೆ ಮಾಡಿಸುತ್ತಿದ್ದರು. ಹಾಗೆ ಪೂಜೆ ಮಾಡಿಸುವ ಮಧ್ಯೆ ಮಧ್ಯೆ ಕೈಗಳಲ್ಲಿ ಮಾವಾ (ಹೊಗೆಸೊಪ್ಪು) ಹೊಸಕಿಕೊಂಡು ತಮ್ಮ ತುಟಿಗಳ ಮಧ್ಯೆಯೋ ಇಲ್ಲವೇ ದವಡೆಗೆ ಸಿಕ್ಕಿಸಿಕೊಳ್ಳುತ್ತಿದ್ದದ್ದು ಪೂಜೆ ಭಂಗ ತರುತ್ತಿದ್ದದ್ದಲ್ಲದೇ ಒಂದು ರೀತಿಯ ಅಸಹ್ಯ/ಮುಜಗೊರವನ್ನುಂಟು ಮಾಡುತ್ತಿತ್ತು.
ಆರಂಭದಲ್ಲಿ ಇದನ್ನೆಲ್ಲವನ್ನು ಸಹಿಸಿಕೊಂಡು ಹೋದ ನಮ್ಮ ತಂದೆಯವರು ಸ್ವಲ್ಪ ಸಮಯದ ನಂತರ ಅವರ ಸಹನೆಯ ಕಟ್ಟೆಯೊಡೆದು, ಕ್ಯಾ ಪಂಡಿತ್ ಜೀ, ಐಸೇ ಪೂಜಾ ಪಾಠ್ ಕರ್ನೇ ವಕ್ತ್ ಈ ಸಭ್ ಖಾನೇ ಹೈ ಕ್ಯಾ? ಎಂದು ಕೇಳುತ್ತಿದ್ದಂತೆಯೇ ಆ ಅರ್ಚಕರಿಗೆ ಕೋಪವುಂಟಾಗಿ, ಆಪ್ ಇದರ್ ಕ್ಯೂಂ ಆಯೇ ಹುವೇ ಹೋ? ಎಂದು ಮರು ಪ್ರಶ್ನಿಸಿದ್ದಕ್ಕೆ ತಮ್ಮ ತಂದೆಯವರು ಹಮಾರಾ ಪಾಪ್ ಮಿಟಾನೇ ಕೇಲಿಯೆ ಆಯೇ ಹುವೇ ಹೈ ಎಂದಾಗ, ಆ ಪಾಂಡಾ, ಮೇರಾ ಪಾಪ್ ಪರ್ ಮತ್ ದೇಖೋ, ಅಪನೇ ಪಾಪ್ ಮಿಟಾನೇ ಕೇಲಿಯೇ ಶಾಂತಿ ಔರ್ ಭಕ್ತಿ ರೂಪ್ ಸೇ ಪೂಜಾ ಕರೋ ಎಂದು ತಾಕೀತು ಮಾಡಿದಾಗ, ವಿಧಿ ಇಲ್ಲದೇ ಒಲ್ಲದ ಮನಸ್ಸಿನಿಂದಲೇ, ಸಿಡಿಮಿಡಿಗೊಳ್ಳುತ್ತಲೇ ನಮ್ಮ ತಂದೆಯವರು ಪೂಜೆಯನ್ನು ಮುಂದುವರೆಸಿದರು.
ವೇಣಿದಾನದ ಸಂಪೂರ್ಣ ಪೂಜೆ ಎಲ್ಲವೂ ನಡೆದ ನಂತರ ಶಾಂತರಾಗಿದ್ದ ಆ ಪಾಂಡ ಮತ್ತೆ ನಮ್ಮ ತಂದೆಯವರನ್ನು ಕರೆದು ಎರಡೂ ಕೈಗಳನ್ನು ಮುಗಿದು, ಮುಜೇ ಕ್ಷಮಾ ಕರ್ ದೀಜೀಯೇ. ಮೇನೆ ಆಪ್ ಕೇ ಸಾಥ್ ಗಲತ್ ತರೀಖೆಮೇ ಬಾತ್ ಕೀಯಾ ಹೂಂ ಎಂದು ಹೇಳುತ್ತಾ, ನೋಡೀ ಸ್ವಾಮೀ, ನೀವು ದಕ್ಷಿಣ ಭಾರತದವರು ಅಲ್ಲಿ ಚಳಿ ಕಡಿಮೆ ಹಾಗಾಗಿ, ಪಂಚೆ ಶಲ್ಯ ಧರಿಸಿ ಪೂಜೆ ಮಾಡುತ್ತೀರಿ. ಇದು ಉತ್ತರ ಭಾರತ ಇಲ್ಲಿ ಚಳಿಗೆ ಮೈ ಎಲ್ಲವೂ ಪತರುಗುಟ್ಟುತ್ತದೆ ಹಾಗಾಗಿ ನಾವು ಈ ರೀತಿ ಧೋತಿ, ಜುಬ್ಬಾ ಅದರ ಮೇಲೊಂದು ಕೋಟ್ ಧರಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಅಂತಹ ಚಳಿಯಿಂದಾಗಿ ನಮ್ಮ ಬಾಯಿಯಿಂದ ಮಂತ್ರೋಚ್ಚಾರಣೆ ಮಾಡುವುದಕ್ಕೂ ಆಗದಂತಹ ಸಮಯದಲ್ಲಿ, ದೇಹ ಬಿಸಿಯಾಗಿಸಲೆಂದು ಈ ರೀತಿಯಾಗಿ ತಂಬಾಕು ಸೇವಿಸುವದನ್ನು ಇಲ್ಲಿನ ಬಹುತೇಕ ಪಾಂಡಾಗಳು ಮಾಡಿಕೊಂಡಿದ್ದು, ಅದೇ ರೂಡಿಯು ಹೀಗೆ ದುರಾಭ್ಯಾಸವಾಗಿದ್ದು, ಅದನ್ನು ಹಾಕಿಕೊಳ್ಳದೇ ಹೋದಲ್ಲಿ ಮಂತ್ರೋಚ್ಚಾರಣೆ ಮಾಡಲು ಅಗದಂತಹ ದೈನೇಸಿ ಸ್ಥಿತಿಗೆ ತಲುಪಿದ್ದೇವೆ. ಹಾಗಾಗಿ ನಿಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ದಯವಿಟ್ಟು ಕ್ಷಮಿಸಿ ಎಂದು ಕೈಮುಗಿದಾಗ, ನಮ್ಮ ತಂದೆಯವರೂ ಪ್ರತಿವಂದಿಸುವ ಮೂಲಕ ಪರಿಸ್ಥಿತಿ ತಣ್ಣಗಾಗಿತ್ತು. ಕ್ಷಮೆಗಿಂತ ದೊಡ್ಡ ಪಾಪ ಹರಿಹಾರವಿಲ್ಲ ಅಲ್ವೇ?
ಏನಂತೀರೀ?
ನಿಮ್ಮವನೇ ಮಂಜುಶ್ರೀ
ಫೋಟೋ ಕೃಪೆ: ಸಾಮಾಜಿಕ ಜಾಲತಾಣಗಳಿಂದ ಪಡೆದುಕೊಳ್ಳಲಾಗಿದ್ದು, ಆ ಫೋಟೋಗಳ ಸಂಪೂರ್ಣ ಹಕ್ಕು ಆ ಚಿತ್ರದಲ್ಲಿ ಇದ್ದವರದ್ದೇ ಆಗಿರುತ್ತದೆ.