ಕರ್ನಾಟಕ ರಾಜ್ಯ ಸಾಂಸ್ಕೃತಿಕ ಬೀಡಾದರೇ, ಇಲ್ಲಿನ ಜನರು ಶಾಂತಿ ಪ್ರಿಯರು ನಾಡು. ಕುಡಿಯಲು ನೀರು ಕೇಳಿದರೆ ನೀರಿನ ಜೊತೆ ಬೆಲ್ಲವನ್ನು ಕೊಡುವಷ್ಟರ ಮಟ್ಟಿಗೆ ಔದಾರ್ಯವಂತರು ಎಂದೇ ವಿಶ್ವವಿಖ್ಯಾತರಾಗಿರುವವರು. ಹಾಗಾಗಿಯೇ ಪ್ರಪಂಚಾದ್ಯಂತ ಇರುವ ಜನರೆಲ್ಲಾ ಒಂದಲ್ಲಾ ಒಂದು ಬಾರಿ ಕರ್ನಾಟಕಕ್ಕೆ ಬಂದು ಹೋಗಲು ಇಚ್ಚಿಸುತ್ತಾರೆ. ಇನ್ನು ಬಹುರಾಷ್ಟ್ರೀಯ ಕಂಪನಿಗಳು ಕರ್ನಾಟಕದ ರಾಜಧಾನಿಯಾದ, ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ತಮ್ಮ ಕಛೇರಿಯ ಶಾಖೆಯನ್ನು ತೆರೆಯಲು ಇಚ್ಚಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಂತಿ ಎನ್ನುವುದೆಲ್ಲವೂ ಭ್ರಾಂತಿ ಎನ್ನುವಂತಾಗಿದ್ದು ಕ್ಷುಲ್ಲಕ ಕಾರಣಗಳಿಗಾಗಿ ಕೋಮು ಸೌಹಾರ್ಧತೆಯ ಭಂಗವಾಗಿ ಕೆಲವು ಸಮುದಾಯದವರು ಕಾನೂನನ್ನು ಕೈಗೆತ್ತಿಕೊಂಡು ನೈತಿಕ ಪೋಲೀಸ್ ಗಿರಿ ಮಾಡುವಷ್ಟು ಕುಖ್ಯಾತಿಯನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಮೈಸೂರಿನ ಈ ಗಲಭೆ ಮತ್ತೊಂದು ಸೇರ್ಪಡೆಯಾಗಿದೆ.
2025 ಫೆಬ್ರವರಿ 5ರಂದು ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಅಧಿಕಾರವನ್ನು ಸವಿದು ಮೂರನೇ ಬಾರಿಗೆ ಹ್ಯಾಟ್ರಿಕ್ ಸಾಧಿಸಲು ಮುನ್ನುಗ್ಗುತ್ತಿದ ಆಮ್ ಆದ್ಮೀ ಪಕ್ಷಕ್ಕೆ 27 ವರ್ಷಗಳ ನಂತರ ಅಭೂತಪೂರ್ವವಾಗಿ ಬಿಜೆಪಿ ಜನ ಮನ್ನಣೆಗಳಿಸುವ ಮೂಲಕ ಲಗಾಮು ಹಾಕಿದ್ದು, ಎಂದಿನಂತೆ ಉತ್ತರ ಪೌರುಷ ಒಲೆ ಮುಂದೆ ಎನ್ನುವಂತೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೇಸ್ ಸೊನ್ನೆ ಗಳಿಸುವುದರಲ್ಲಿ ಡಬಲ್ ಹ್ಯಾಟ್ರಿಕ್ ಗಳಿಸಿದೆ.
ಈ ಚುನಾವಣಾ ಫಲಿತಾಂಶದ ಕುರಿತಾಗಿ ದೇಶಾದ್ಯಂತ ಪರ ವಿರೋಧಗಳ ಚರ್ಚೆ, ನಡೆಯುತ್ತಿದ್ದು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿ ಕಲ್ಯಾಣಗಿರಿ ಬಡಾವಣೆಯ ಸುರೇಶ್ ಎಂಬ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಒಂದು ಇಡೀ ಸಾಮಾಜಿಕ ಸ್ವಾಸ್ಥ್ಯವನ್ನೇ ಕೆಡಿಸಿ ಹಾಕಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಚುನಾವಣಾ ಸಮಯದಲ್ಲಿ ತಮ್ಮ ತಮ್ಮ ಇಚ್ಚೆಯ ರಾಜಕೀಯ ಪಕ್ಷಗಳ ಪರ ವಿರೋಧ ಹೋರಾಟಗಳು ಆಗುವುದು ಸಹಜ ಪ್ರಕ್ರಿಯಾಗಿದ್ದು ಅದಕ್ಕೂ ಒಂದು ಮಿತಿ ಇರಬೇಕು. ದುರಾದೃಷ್ಟವಷಾತ್ ಇಂದು ಜನರಿಗೆ ಮಾದರಿಯಾಗಬೇಕಾಗಿರುವ ರಾಜಕಾರಣಿಗಳೇ ಅಭಿವ್ಯಕ್ತಿ ಸ್ವಾತ್ರಂತ್ರದ ಹೆಸರಿನಲ್ಲಿ ಬಾಯಿಗೆ ಬಂದನ್ನು ಹೇಳುತ್ತಾ ಮನಸ್ಸಿಗೆ ತೋಚಿದ್ದನ್ನು ಬರೆಯುತ್ತಾ, ಅಭಿವ್ಯಕ್ತಿ ಸ್ವಾತ್ರಂತ್ರವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಬಳಸುವುದಕ್ಕೆ ನಾಂದಿ ಹಾಕುತ್ತಿದ್ದಂತೆಯೇ, ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ಅವರ ಅಭಿಮಾನಿಗಳು ಎಂದು ಕರೆಸಿಕೊಳ್ಳುವ ಅನುಯಾಯಿಗಳು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ.
ಇದಕ್ಕೆ ಜ್ವಲಂತ ಉದಾಹರಣೆ ಎನ್ನುವಂತೆ ದೆಹಲಿ ಚುನಾವಣೆ ಫಲಿತಾಂಶದ ಬಳಿಕ ತ್ರೀ ಈಡಿಯೆಟ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ರಾಹುಲ್ ಗಾಂಧಿ, ಕೇಜ್ರಿವಾಲ್, ಅಖಿಲೇಶ್ ಯಾದವ್ ಅವರ ಅರೆನಗ್ನ ಫೋಟೊ ಸೃಷ್ಟಿಸಿ, ಅವರ ತೊಡೆಯಲ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುತ್ತಿರುವಂತೆ, ಬುರ್ಖಾ ಧರಿಸಿದ ಮಹಿಳೆಯಂತೆ ಚಿತ್ರಿಸಿ, ಮೈ ತುಂಬಾ ಅರೇಬಿಕ್ ಬರಹಗಳನ್ನು ಹಾಕಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದದ್ದನ್ನು ಗಮನಿಸಿದ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿದ ಆರೋಪದ ಮೇರೆಗೆ ಸುರೇಶ್ ಎಂಬಾತನನ್ನು ಬಂಧಿಸಿದ್ದಲ್ಲದೇ, ಆತನ ವಿರುದ್ಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ತಿಳಿಸಿದಂತೆ ಯಾರದ್ದೇ ಧಾರ್ಮಿಕ ಭಾವನೆಗಳ ವಿರುದ್ಧ ಅವಹೇಳನ ಮಾಡುವುದನ್ನು ನಮ್ಮ ಸಾಂವಿಧಾನಾತ್ಮಕ ಕಾನೂನು ಸಹಿಸುವುದಿಲ್ಲ. ಅಂತಹವರನ್ನು ಬಂಧಿಸಿ, ಸರಿಯಾದ ತನಿಖೆಯನ್ನು ನಡೆಸಿ ಸೂಕ್ತ ಶಿಕ್ಷೆಯನ್ನು ಕೊಡುವುದು ಪೋಲೀಸರ ಕರ್ತವ್ಯವಾಗಿದ್ದು, ಉದಯಗಿರಿ ಪೊಲೀಸರು ಅದನ್ನು ಸರಿಯಾಗಿ ಮಾಡಿದ್ದರು. ಇಷ್ಟೆಲ್ಲಾ ಆಗುವಷ್ಟರಲ್ಲೇ, ನೂರಾರು ಮುಸ್ಲಿಂ ಸಮುದಾಯದ ಯುವಕರುಗಳು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಲ್ಲದೇ ಆ ಪೋಸ್ಟ್ ನ ವಿರುದ್ಧವಾಗಿ ಘೋಷಣೆ ಕೂಗ ತೊಡಗಿದ್ದಲ್ಲದೇ, ಬಂಧಿತ ಆರೋಪಿಯನ್ನು ತಮ್ಮ ಕೈಗೊಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಹೀಗೆ ಉದ್ರಿಕ್ತ ಯುವಕರುಗಳು ಸೇರಿರುವಾಗ ಅವರನ್ನು ಸಮಾಧಾನ ಪಡಿಸದೇ. ಸ್ಥಳೀಯ ಮುಸ್ಲಿಂ ಮುಲ್ಲಾ ಅಥವಾ ಧಾರ್ಮಿಕ ಮುಖಂಡ ಮುಫ್ತಿ ಮುಶ್ತಾಕ್ ಎಂದು ಗುರುತಿಸಲಾದ ವ್ಯಕ್ತಿ ಸಂಯಮವನ್ನು ಕಳೆದುಕೊಂಡು ತನ್ನ ಸಾಮಾಜಿಕ ಕರ್ತವ್ಯವನ್ನೂ ಮರೆತು ಅನವಶ್ಯಕವಾಗಿ ಮೈಕ್ ಹಿಡಿದು ದೇಶದಲ್ಲಿ ಮುಸಲ್ಮಾನರ ಮೇಲೆ ಪದೇ ಪದೇ ಧಾಳಿಯಾಗುತ್ತಿದ್ದು ಸುರೇಶ್ ನನ್ನು ಬಂಧಿಸಿ, ಆವನನ್ನು ಗಲ್ಲಿಗೇರಿಸುವವರೆಗೂ ಅದರ ವಿರುದ್ಧ ನಾವೆಲ್ಲರೂ ಉಗ್ರ ರೀತಿಯಲ್ಲಿ ಹೋರಾಟ ನಡೆಸಬೇಕು ಪ್ರಾಣ ಕೊಡುವುದಕ್ಕೂ ಸಿದ್ದರಿರಬೇಕು ಎಂದು ಹೇಳುವ ಮೂಲಕ ಅಲ್ಲಿದ್ದ ಮುಸ್ಲಿಂ ಹುಡುಗರನ್ನು ಪ್ರಚೋದಿಸಿರುವ ವೀಡೀಯೋ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಗಮನಿಸಿದ ಆ ಸ್ಥಳದಲ್ಲಿದ್ದ ಧಾರ್ಮಿಕ ಮುಖಂಡರು ಹಾಗೂ ಕೆಲ ರಾಜಕೀಯ ಧುರೀಣರು ಆ ಆಕ್ರೋಶ ಭರಿತ ಹುಡುಗರಿಗೆ ಶಾಂತಿಯನ್ನು ಕಾಪಾಡಿಕೊಳ್ಳಲು ವಿನಂತಿಸಿದರಾದರೂ, ಅದನ್ನು ಕೆಳುವ ಮನಸ್ಥಿತಿ ಇಲ್ಲದಿದ್ದ ಆ ಪುಂಡರು ಏಕಾಏಕಿ ಮತ್ತಷ್ಟೂ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಇದ್ದಕ್ಕಿಂದಂತೆಯೇ ಠಾಣೆಯ ಮೇಲೆ ಧಾಳಿ ನಡೆಸಿದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ ಮತ್ತು ಸ್ವಯಂ ರಕ್ಷಣೆಗಾಗಿ ಉದಯಗಿರಿ ಠಾಣೆಯ ಪೊಲೀಸರು ಅಶ್ರುವಾಯು ಸಿಡಿಸುತ್ತಾ, ಲಾಠಿ ಪ್ರಹಾರ ಮಾಡುವ ಮೂಲಕ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರಾದರೂ, ಆ ಪುಂಡರು ನಡೆಸಿದ ಕಲ್ಲಿನ ದಾಳಿಯಿಂದಾಗಿ, ಎಸಿಪಿ ಶಾಂತ ಮಲ್ಲಪ್ಪ, ನಜರಬಾದ್ ಇನ್ಸ್ಪೆಕ್ಟರ್ ಮಹದೇವಸ್ವಾಮಿ ಸೇರಿ ಸುಮಾರು 14 ಕ್ಕೂ ಹೆಚ್ಚಿನ ಪೊಲೀಸರಿಗೆ ಗಾಯವಾಗಿರುವುದಲ್ಲದೇ, ಸುಮಾರು 10 ಕ್ಕೂ ಹೆಚ್ಚಿನ ಪೊಲೀಸ್ ವಾಹನಗಳು ಜಖಂ ಆಗಿವೆ. ಕಲ್ಲೇಟಿನಿಂದ ಗಾಯಗೊಂಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವುದು ಸ್ವಲ್ಪ ಮಟ್ಟಿಗಿನ ಸಮಾಧಾನ ತಂದಿದೆ. ಹೀಗೆ ಕಲ್ಲು ತೂರಾಟಗಾರರನ್ನು ಚದುರಿಸುತ್ತಿದ್ದಂತೆಯೇ ಪ್ರತಿಭಟನಾಕಾರರು ಶಾಂತಿನಗರದ ಮುಖ್ಯರಸ್ತೆ, ಮಹದೇವಪುರ ರಸ್ತೆ ಬಂದ್ ಮಾಡುವ ಮೂಲಕ ತಡರಾತ್ರಿ 1-2: ಗಂಟೆಯವರೆಗೂ ದಾಂಧಲೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪೋಲೀಸರು ಸ್ಥಳದ ಮಹಜರು ಮಾಡಿದಾಗ ಅಲ್ಲಿ ಕಲ್ಲುಗಳಿಂದ ತುಂಬಿದ್ದ ಹಲವಾರು ಚೀಲಗಳು ದೊರಕಿರುವುದನ್ನು ಗಮನಿಸಿದಲ್ಲಿ ಇದೊಂದು ವ್ಯವಸ್ಥತವಾಗಿ ಪೂರ್ವನಿರ್ಧಾರಿತವಾದ ದೊಂಬಿ ಎಂದೇ ಜನರು ಮಾತನಾಡಿಕೊಳ್ಳುತ್ತಿರುವುದರಲ್ಲಿ ಸತ್ಯವಿದೆ ಎನಿಸುತ್ತದೆ.
ಇನ್ನು ಸಿದ್ದರಾಮಯ್ಯನವರ ಸಚಿವ ಸಂಪುಟದ ಪ್ರಭಾವಿ ಮಂತ್ರಿ ರಾಜಣ್ಣನವರು ಥೂ.. ಇಡೀ ಪ್ರಕರಣವನ್ನು ಪೋಲಿಸರು ಸರಿಯಾಗಿ ನಿಭಾಯಿಸಿಲ್ಲಾ ಎಂದು ಪೋಲೀಸರ ನೈತಿಕ ಬಲವನ್ನು ಕುಗ್ಗಿಸಿದ್ದರೆ, ಕಾಂಗ್ರೇಸ್ ವಕ್ತಾರ ಲಕ್ಷಣ್ ಮುಸಲ್ಮಾನರ ತುಷ್ಟೀಕರಣದ ಪರಮಾವಧಿಯನ್ನು ತಲುಪಿ, ಸಂಘ ಪರಿವಾರದ ಸದಸ್ಯರು ಮುಸಲ್ಮಾನರ ವೇಷದಲ್ಲಿ ಬಂದು ಈ ಗಲಭೆಯಲ್ಲಿ ಕಲ್ಲು ತೂರಿದ್ದಾರೆ ಎಂದು ಆರೋಪಿಸಿರುವುದು ಅವರ ಸಾಮಾಜಿಕ ಕಾಳಜಿ ಮತ್ತು ಬೌದ್ಧಿಕ ದೀವಾಳಿತನವನ್ನು ಜಗಜ್ಜಾಹೀರಾತು ಮಾಡುತ್ತಿದೆ.
ಪ್ರಜಾಪ್ರಭುತ್ವದ ನಮ್ಮ ದೇಶದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದ್ದು ಅದು ಶಾಂತಿ ರೂಪದಲ್ಲಿ ಮತ್ತು ಕಾನೂನಾತ್ಮಕವಾಗಿ ನಡೆಸಬೇಕೆಂಬ ನಿಯಮವೂ ಇದೆ. ದುರಾದೃಷ್ಟವಷಾತ್ ತಮ್ಮ ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಎಗ್ಗಿಲ್ಲದೇ ಓಲೈಕೆ ಮಾಡುವ ತುಷ್ಟೀಕರಣ ರಾಜಕಾರಣವನ್ನು ಪಕ್ಷಾತೀತವಾಗಿ ಈ ದೇಶ/ರಾಜ್ಯವನ್ನು ಆಳಿರುವ/ಆಳುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು ನಡೆಸಿಕೊಂಡು ಬರುತ್ತಿರುವ ಕಾರಣದಿಂದಾಗಿಯೇ ಅಲ್ಪಸಂಖ್ಯಾತರಿಗೆ ಈ ದೇಶದ ಕಾನೂನಿನ ಮೇಲೆ ಕಿಂಚಿತ್ತೂ ಭಯವಿಲ್ಲದೇ, ಕೋತಿ ತಾನು ಕೆಡುವುದಲ್ಲದೇ ಇಡೀ ವನವನ್ನೇ ಕೆಡಿಸಿತು ಎನ್ನುವಂತೆ ಕ್ಷುಲ್ಲಕ ಕಾರಣಗಳಿಗೆ ಪ್ರಚೋಚನೆಗೆ ಒಳಗಾಗಿ ಕಾನೂನನ್ನು ಕೈಗೆತ್ತಿಕೊಂಡಿದ್ದಲ್ಲದೇ, ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಷ್ಟ ಮಾಡಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.
ಅಲ್ಪಸಂಖ್ಯಾತರ ಈ ರೀತಿಯ ಆರ್ಭಟಗಳು ನಮ್ಮ ರಾಜ್ಯದಲ್ಲಿ ಇದೇ ಮೊದಲಾಗಿರದೇ, ಕೆಲ ವರ್ಷಗಳ ಹಿಂದೆ ದೇವರ ಜೀವನ ಹಳ್ಳಿಯಲ್ಲಿಯೂ ಇದೇ ರೀತಿಯಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ವಿರುದ್ಧವಾಗಿ ಅಂದಿನ ಆಡಳಿತ ಪಕ್ಷದ ಶಾಸಕರ ಮನೆಯನ್ನೂ ಲೂಟಿ ಮಾಡಿ ಬೆಂಕಿ ಹಚ್ಚಿದ್ದಲ್ಲದೇ ಅಲ್ಲಿನ ಪೋಲೀಸ್ ಠಾಣೆಯ ಮೇಲೂ ಧಾಳಿ ನಡೆಸಿ, ಹತ್ತಾರು ಪೋಲೀಸ್ ವಾಹನಗಳನ್ನು ಹಾಳು ಗೆಡವಿದ್ದರು. ಅದೇ ರೀತಿ ಹುಬ್ಬಳ್ಳಿಯಲ್ಲೂ ಮತ್ತೊಂದು ಕ್ಷುಲ್ಲುಕ ವಿಷಯದಲ್ಲೂ ಪೋಲೀಸ್ ಠಾಣೆ ಮತ್ತು ಪೋಲೀಸ್ ವಾಹನಗಳ ಮೇಲೆ ಧಾಳಿ ನಡೆಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕಿದೆ.
ಈ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಲ್ಯಾಣಗಿರಿಯ ಸುರೇಶ್ ಎಂಬ ವ್ಯಕ್ತಿ ಹೇಗೆ ಅಪರಾಧಿಯಾಗುತ್ತಾನೋ ಅದೇ ರೀತಿಯಲ್ಲಿ ಕರ್ತವ್ಯದ ಮೇಲಿದ್ದ ಸರ್ಕಾರಿ ನೌಕರರ ಮೇಲೆ ಕೈ ಮಾಡಿದ ಆರೋಪದ ಮೇಲೆ ಆ ಧಾಳಿ ಕೋರರನ್ನು ಬಂಧಿಸಿ ಅವರೆಲ್ಲರೂಗೂ ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ಇನ್ನೆಂದೂ ಯಾರೂ ಸಹಾ ಯಾವುದೇ ಧರ್ಮವನ್ನು ಅವಹೇಳನ ಮಾಡುವುದಾಗಲೀ, ಕಾನೂನನ್ನು ಕೈಗೆತ್ತಿಕೊಂಡು ನೈತಿಕ ಪೋಲೀಸ್ ಗಿರಿಗೆ ಮುಂದಾಗುವುದಾಗಲೀ ಅಮಾಯಕ ಪೋಲೀಸರ ಮೇಲೆ ಧಾಳಿನಡೆಸುವುದನ್ನು ತಪ್ಪಿಸಲೇ ಬೇಕಾಗಿದೆ. ಈ ಹಿಂದೆ ನಡೆದ ಇದೇ ರೀತಿಯ ಅನೇಕ ಪ್ರಕರಣಗಳಲ್ಲಿ ಗೃಹಸಚಿವರೂ ಸೇರಿದಂತೆ ವಿವಿಧ ಪಕ್ಷದ ರಾಜಕೀಯ ಮುಖಂಡರುಗಳೇ ಮುಂದಾಗಿ ನಿಂತು ಆರೋಪಿಗಳೆಲ್ಲರೂ ಅಮಾಯಕರು, ಅನಕ್ಷರಸ್ಥರು, ಬುದ್ಧಿಮಾಂದ್ಯರು ಎಂಬ ನೆಪದಲ್ಲಿ ಬಿಡುಗಡೆ ಮಾಡಿಸಿರುವುದನ್ನು ಗಮನಿಸಿದಲ್ಲಿ ಈ ಪ್ರಕರಣದಲ್ಲೂ ಅದೇ ರೀತಿಯಾದಲ್ಲಿ , ಈ ಪ್ರಕರಣವೂ ಹಳ್ಳ ಹಿಡಿಯುವ ಸಾಧ್ಯತೆಯೇ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪುಂಡುಕೋರರಿಗೆ ಲಂಗು ಲಗಾಮು ಇಲ್ಲದೇ ಇಂತಹ ಪ್ರಕರಣಗಳು ಹೆಚ್ಚಾಗಲು ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರುಗಳೇ ಕಾರಣರಾಗುತ್ತಾರೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ