ಅಂತರಾಷ್ಟ್ರೀಯ ಮಾತೃ ಭಾಷಾ ದಿನ

ಪ್ರಸ್ತುತವಾಗಿ  ಜಗತ್ತಿನಲ್ಲಿ ಸುಮಾರು 7,000 ಪ್ರಮುಖ ಭಾಷೆಗಳಿದ್ದು ಲೆಖ್ಖವಿಲ್ಲದಷ್ಟು ಉಪಭಾಷೆಗಳಿದ್ದು ಅವರುಗಳ ಸಂಖ್ಯೆ ನಿಖರವಾಗಿ ತಿಳಿಯದಾಗಿದೆ.  ಮ್ಯಾಂಡರಿನ್ ಚೈನೀಸ್, ಇಂಗ್ಲಿಷ್, ಸ್ಪ್ಯಾನಿಷ್, ಹಿಂದಿ, ಅರೇಬಿಕ್, ಬೆಂಗಾಲಿ, ರಷ್ಯನ್, ಪೋರ್ಚುಗೀಸ್, ಜಪಾನೀಸ್, ಜರ್ಮನ್ ಮತ್ತು ಫ್ರೆಂಚ್ ಮುಂತಾದ ಭಾಷೆಗಳು ಹೆಚ್ಚು ವ್ಯಾಪಕವಾಗಿ ಮಾತನಾಡುವ ಭಾಷೆಗಳಾಗಿದ್ದರೆ, ಜಗತ್ತಿನ 90% ಭಾಷೆಗಳನ್ನು 100,000 ಕ್ಕಿಂತಲೂ ಕಡಿಮೆ ಜನರು ಮಾತನಾಡುವವರಿದ್ದರೆ, ಸುಮಾರು 46 ಭಾಷೆಗಳನ್ನು ಒಬ್ಬರೋ ಇಲ್ಲವೇ ಬೆರಳೆಣಿಕೆಯಷ್ಟು ಜನರು  ಮಾತನಾಡುವವರು ಇದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ,

ಇನ್ನು ಭಾರತದಲ್ಲಿ 2001ರ ಭಾರತದ ಜನಗಣತಿಯ ಪ್ರಕಾರ  122 ಪ್ರಮುಖ ಭಾಷೆಗಳು ಮತ್ತು 1599 ಇತರ ಭಾಷೆಗಳನ್ನು ಆಡುವ ಜನರು ಇದ್ದಾರೆ ಎನ್ನಲಾದರೆ, ಮತ್ತೊಂದು ಜನಗಣತಿಯ ವಿಶ್ಲೇಷಣೆಯ ಪ್ರಕಾರ  ಭಾರತದಲ್ಲೇ  19,500 ಕ್ಕೂ ಹೆಚ್ಚು ಭಾಷೆಗಳು ಅಥವಾ ಉಪಭಾಷೆಗಳನ್ನು ಮಾತೃಭಾಷೆಯಾಗಿ ಬಳಸುತ್ತಾರೆ ಎನ್ನಲಾಗಿದ್ದರೂ, ಭಾರತೀಯ ಸಂವಿಧಾನದ 8 ನೇ ಅನುಸೂಚಿಯ ಪ್ರಕಾರ 22 ಭಾಷೆಗಳನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಗುರುತಿಸಲಾಗಿದ್ದು ಅವುಗಳಲ್ಲಿ ೧೫ ಭಾಷೆಗಳನ್ನು ನಮ್ಮ ದೇಶದ ನೋಟುಗಳ ಮೇಲೆ ಮುದ್ರಿಸಲಾಗಿದ್ದು ಭಾರತ ಅನೇಕ ಸಂಸ್ಕೃತಿ, ಪರಂಪರೆ, ಸಂಪ್ರದಾಯ ಹಾಗೂ ಬಹು ಭಾಷೆಯನ್ನು ಹೊಂದಿರುವ ವಿದಿಧತೆಯಲ್ಲಿಯೂ ವೈವಿಧ್ಯತೆಯ ಏಕತೆಯನ್ನು ಹೊಂದಿರುವಂತನ ಶ್ರೀಮಂತ ಸಂಸ್ಕೃತಿಯ ತವರಾಗಿದ್ದರೂ,  ಇಂದು ಪಾಶ್ಚತ್ಯ ಅಂಧಾನುಕರಣೆ ಮತ್ತು ಬ್ರಿಟೀಷರ್ ಭಾರತವನ್ನು ವಸಹಾಹತು ಮಾಡಿಕೊಂಡು ಭಾರತದ ಸನಾತನ ಗುರುಕುಲ ಪದ್ದತಿಯನ್ನು ನಾಶ ಪಡಿಸಿ ಮೆಕಾಲೆ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದ ಪರಿಣಾಮ ಭಾರತೀಯರು ತಮ್ಮ ಮಾತೃ ಭಾಷೆಯ ಬದಲಾಗಿ ಅನವಶ್ಯಕ ಮತ್ತು ಅನಗತ್ಯವಾಗಿ ಇಂಗ್ಲೀಷ್ ಭಾಷೆಯನ್ನು ಎಗ್ಗಿಲ್ಲದೇ ಬಳಸುತ್ತಿರುವ ಪರಿಣಾಮ ಅದೆಷ್ಟೋ ಭಾಷೆಗಳು ಇಂದು ಅಳಿವಿನಂಚಿನಲ್ಲಿದೆ. ಭಾಷೆಗಳು ಆಯಾಯಾ ಪ್ರಾಂತ್ಯ ಇಲ್ಲವೇ ಆಯಾಯಾ ದೇಶಗಳ ಸಂಸ್ಕೃತಿಯ ಪ್ರತೀಕವಾಗಿರುವ ಕಾರಣವನ್ನು ಮನಗಂಡು ಪ್ರತೀವರ್ಶ ಫೆಬ್ರವರಿ 21  ರಂದು ವಿಶ್ವ ಮಾತೃ ಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಹೀಗೆ ಫೆಬ್ರವರಿ 21 ನ್ನು ಪ್ರಪಂಚಾದ್ಯಂತ ವಿಶ್ವ ಮಾತೃ ಭಾಷೆ ದಿನವಾಗಿ ಆಚರಿಸುವ ಮೂಲಕ ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸುವ ಸಲುವಾಗಿ 1999 ರಲ್ಲಿ ಮೊದಲ ಬಾರಿಗೆ ಯುನೆಸ್ಕೋ ಘೋಷಿಸಿತು. ಇದರ ಮುಂದುವರೆದ ಭಾಗವಾಗಿ ವಿಶ್ವಸಂಸ್ಥೆಯು 2008 ನ್ನು ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿದ್ದಲದೇ, ಅಂದಿನಿಂದ ಪ್ರತಿ ವರ್ಷ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲು ನಿರ್ಧರಿಸಲಾಯಿತು. ಈ ರೀತಿ ವಿಶ್ವ ಮಾತೃ ಭಾಷಾ ದಿನವನ್ನು ಅಚರಿಸುವ ಹಿಂದೆ ನಮ್ಮ ಭಾರತದ ಉಪಖಂಡ ಮತ್ತು ಬಂಗಾಲಿ ಭಾಷೆಯ ಪ್ರಭಾವವಿದೆ  ಎಂದರೆ ಬಹುತೇಕರು ಅಚ್ಚರಿ ಪಟ್ಟರೂ ಅದೇ ಸತ್ಯವಾದ ವಿಷಯವಾಗಿದೆ.

ನಮಗೆಲ್ಲರಿಗೂ ತಿಳಿದಿರುವಂತೆ  1947 ರಲ್ಲಿ  ಬ್ರೀಟೀಷರು ಭಾರತವನ್ನು ಬಿಟ್ಟು ಹೋಗುವ ಮುನ್ನಾ  ಭಾರತದೇಶವನ್ನು ಮೂರು ಭಾಗಗಳಾಗಿ ತುಂಡರಿಸಿ  ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ಎಂಬ  ಎರಡು ಮುಸಲ್ಮನ ಬಾಹುಳ್ಯದ ಪ್ರದೇಶಗಳನ್ನು ಭಾರತದ ಅಕ್ಕ ಪಕ್ಕದಲ್ಲಿರಿಸಿ ಹೋದರು. ಅಂದಿನ  ಪೂರ್ವ ಪಾಕಿಸ್ತಾನವೇ ಇಂದಿನ ಬಾಂಗ್ಲಾದೇಶವಾಗಿದ್ದು,  ಪಶ್ಚಿಮ ಪಾಕಿಸ್ತಾನವೆಂದರೆ ಈಗಿರುವ ಪಾಕಿಸ್ತಾನವಾಗಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಬ್ರಿಟೀಷರ ಒಡೆದು ಆಳುವ ನೀತಿಯಿಂದಾಗಿ  ಅಕ್ಟೋಬರ್ 16, 1905 ರಂದು ಬಂಗಾಳಿ ಭಾಷಿಕರೇ ಇದ್ದ  ಬಂಗಾಳವನ್ನು ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳ ಎಂದು ವಿಭಜಿಸಲಾದರೂ ಎರಡೂ ಪ್ರದೇಶದ  ಮಾತೃಭಾಷೆ ಬಂಗಾಳಿಯೇ ಆಗಿತ್ತು. ಸ್ವಾತಂತ್ರ್ಯಾ ನಂತರ ಹಿಂದೂ ಬಹುಸಂಖ್ಯಾತ ಪಶ್ಚಿಮ ಬಂಗಾಳ ಭಾರತದಲ್ಲೇ ಉಳಿದುಕೊಂಡರೆ, ಮುಸಲ್ಮಾನರೇ ಹೆಚ್ಚಿನ ಸಂಖ್ಯೆಯಲ್ಲಿದ್ದ  ಪೂರ್ವ ಬಂಗಾಳ ಪೂರ್ವ ಪಾಕಿಸ್ತಾನವಾಗಿ ಪಾಕೀಸ್ಥಾನದ ಭಾಗವಾಯಿತು.

ಹೀಗೆ ಪೂರ್ವ ಮತ್ತು  ಪಶ್ಚಿಮ ಪಾಕೀಸ್ಥಾನ ಮುಸ್ಲಿಂ ರಾಷ್ಟ್ರವಾಗಿ ಘೋಷಿಸಿಕೊಂಡರೂ, ಪಶ್ಚಿಮ ಪಾಕಿಸ್ಥಾನದ ಮಾತೃಭಾಷೆ ಉರ್ದು  ಆಗಿದ್ದು ಅಡಳಿತದಲ್ಲಿ ಅವರದ್ದೇ ಕೈ ಮೇಲಾದ್ದರಿಂದ ಅವರುಗಳು ಬಲವಂತವಾಗಿ ಪೂರ್ವ ಪಾಕೀಸ್ಥಾನದ ಮೇಲೆ  ಉರ್ದು ಭಾಷೆಯನ್ನು ಹೇರಲು ಹೋಗಿದ್ದನ್ನು ವಿರೋಧಿಸಿ 21. 02. 1952 ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿ, ಆ ಪ್ರತಿಭಟನೆ ತೀವ್ರ ಸ್ವರೂಪವನ್ನು  ಪಡೆದಾಗ, [ಪರಿಸ್ಥಿತಿಯನ್ನು ತಹಬದಿಗೆ ತರಲು ಹಲವಾರು ಮಾರ್ಗಗಳಿದ್ದರೂ ಉಧ್ಧಟತನದಿಂದ ಅಂದಿನ ಪಾಕ್ ಸರ್ಕಾರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಪರಿಣಾಮ, ಢಾಕಾ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಅಸುನೀಗಿದಾಗ, ಮಾತೃಭಾಷೆಯ ಕುರಿತಾಗಿ ಈ ರೀತಿಯ ಪ್ರತಿಭಟನೆ ನಡೆದು ಹಿಂಸಾಚಾರಕ್ಕೇ ತಿರುಗಬಹುದೇ ಎಂದು ಇಡೀ ವಿಶ್ವವೇ ಬೆಚ್ಚಿ ಬಿದ್ದ ಪರಿಣಾಮ ಮಾತೃ ಭಾಷೆಯ ಕುರಿತಾಗಿ ಎಲ್ಲರನ್ನೂ ಜಾತೃತಗೊಳಿಸಿತು. ಹೀಗೆ ಬಲವಂತದ ಉರ್ದು ಬದಲಾಗಿ ತಮ್ಮ ಬಂಗಾಲೀ  ಮಾತೃಭಾಷೆಯನ್ನೇ ಪೂರ್ವ ಪಾಕೀಸ್ಥಾನದ ಆಡಳಿತ ಭಾಷೆಯನ್ನಾಗಿ ಮಾಡಬೇಕೆಂದು ಪ್ರಾಣತೆತ್ತ ವಿದ್ಯಾರ್ಥಿಗಳ ನೆನಪಿಗಾಗಿ ಆ ದಿನವನ್ನು ವಿಶ್ವಸಂಸ್ಥೆಯ ಯುನೆಸ್ಕೊವು  ವಿಶ್ವ ಮಾತೃ ಭಾಷೆ ದಿವಸವನ್ನಾಗಿ ಆಚರಿಸುವಂತೆ ಘೋಷಿಸಿದ್ದು ಈಗ ಇತಿಹಾಸ.

ಮಕ್ಕಳಿಗೆ ತಮ್ಮ ಪೋಷಕರಿಂದ ಕಲಿತ ಮಾತೃ ಭಾಷೆಯ ಮಹತ್ವವನ್ನು ಅರಿತೇ ಕನ್ನಡದ ಕಣ್ವ ಶ್ರೀ ಬಿ.ಎಂ.ಶ್ರೀಕಂಠಯ್ಯನವರು ಈ ಪದ್ಯವನ್ನು ಬರೆದಿದ್ದು.

ಮೊದಲು ತಾಯ ಹಾಲ ಕುಡಿದು ನಲ್ಮೆಯಿಂದ ತೊದಲಿ ನುಡಿದು ಗೆಳೆಯರೊಡನೆ ಬೆಳೆದು ಬಂದ ಮಾತದಾವುದು
ಸವಿಯ ಹಾಡ ಕತೆಯ ಕಟ್ಟಿ, ಕಿವಿಯಲೆರದು ಕರುಳ ತಟ್ಟಿ ನಮ್ಮ ಜನರು ನಮ್ಮ ನಾಡು ಎನಿಸಿತಾವುದು ನಮ್ಮ ಕವಿಗಳೆಂಬ ಕೋಡು ತಲೆಗದಾವುದು
ಕನ್ನಡ ನುಡಿ ನಮ್ಮ ಹೆಣ್ಣು ನಮ್ಮ ತೋಟದಿನಿಯ ಹಣ್ಣು ಬಳಿಕ ಬೇರೆ ಬೆಳೆದ ಹೆಣ್ಣು ಬಳಿಗೆ ಸುಳಿದಳು ಹೊಸದು ರಸದ ಬಳ್ಳಿ ಹಣ್ಣು ಒಳಗೆ ಸುಳಿದಳು
ಬಲ್ಲವರಿಗೆ ಬೆರಗೆ ಇಲ್ಲಿ ಅರಿಯದವರು ನಾಲ್ವರಲ್ಲಿ ಕಳೆಯ ಬೆಳಕು ಹೊಳೆಯಲಂದು ದಣಿದು ಹೋದೆನು ಬಡವನಳಿಲು ಸೇವೆ ಎಂದು ಧನ್ಯನಾದೆನು

ಬಹುಶಃ ಈ ಪದ್ಯವನ್ನು ಕೇಳದ ಕನ್ನಡಿಗರೇ ಇಲ್ಲಾ ಎಂದರೂ ತಪ್ಪಾಗದು. ಭಾಷೆ ಆರಂಭವಾದದ್ದೇ, ಜನರ ಪರಸ್ಪರ ಸಂವಹನಕ್ಕೆ, ಒಬ್ಬರ ಭಾವನೆ ಮತ್ತು ಅನುಭವವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೇ ಎಂದರೂ ತಪ್ಪಾಗದು.

ಇನ್ನು ಮಕ್ಕಳ ಕವಿ ಎಂದೇ ಖ್ಯಾತವಾಗಿರುವ ಮತ್ತೊಬ್ಬ ಹಿರಿಯ ಸಾಹಿತಿಗಳಾದ ಶ್ರೀ ಜಿ.ಪಿ.ರಾಜರತ್ನಂ ಅವರು ಮಾತೃಭಾಷೆಯ ಕುರಿತಾಗಿ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ,

ನರಕಕ್ಕೆ ಇಳಿಸಿ.. ನಾಲಿಗೆ ಸೀಳ್ಸಿ.. ಬಾಯಿ ಹೊಲಿಸಿ ಹಾಕಿದ್ರೂನು..
ಮೂಗಿನಲ್ ಮಾತಾಡ್ತೀನ್ ಕನ್ನಡ ಪದವನ್ನ… ನನ್ ಮನಸನ್ ನೀ ಕಾಣೆ…! ಎಂದು ಕನ್ನಡದ ಬಗ್ಗೆ ತಮ್ಮ ಪ್ರೀತ್ಯಾದರಗಳನ್ನು ವ್ಯಕ್ತಿಪಡಿಸಿದ್ದಾರೆ.
,

ಒಂದು ಸಂಶೋಧನೆಯ ಪ್ರಕಾರ, 18 ತಿಂಗಳಿಂದ 6 ವರ್ಷದೊಳಗಿನ ಬಹುತೇಕ ಸಾಮಾನ್ಯ ಪುಟ್ಟ ಮಕ್ಕಳು ದಿನಕ್ಕೆ ಎಂಟರಿಂದ ಹತ್ತು ಹೊಸ ಪದಗಳನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ರೀತಿ ಕಲಿಯುವ ಪದಗಳು ತಮ್ಮ ಮನೆಯಲ್ಲಿ  ಅವರ ತಂದೆ ತಾಯಿ, ಆಕ್ಕ, ಅಣ್ಣಂದಿರು ಇಲ್ಲವೇ ಕುಟುಂಬ ವರ್ಗದವರು ಆಡುವ ಭಾಷೆಯ ಪದಗಳಾಗಿದ್ದು, ಅವುಗಳು ಬಹಳ ಸುಲಭವಾಗಿ ಮತ್ತು ಸಹಜವಾಗಿ ಆ ಮಕ್ಕಳ ಮಸ್ತಕದಲ್ಲಿ  ಅಚ್ಚಾಗಿ ಉಳಿಯುತ್ತದೆ.  ನಂತರದ  ಸಂಭಾಷಣೆಗಳಲ್ಲಿ ತಾವು ಕಲಿತ ಪದಗಳನ್ನು ಬಳಸಿ ವಾಕ್ಯ ರಚನೆ ಮಾಡಿ ಪ್ರಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಹಾಗೆ ಮಾತನಾಡುವಾಗ ತಪ್ಪಾದಲ್ಲಿ ಕೂಡಲೇ ಅವರ ಕುಟುಂಬದವರು  ಆ ತಪ್ಪನ್ನು ಸರಿಪಡಿಸಿದಾಗ, ಅದನ್ನು ಸ್ವೀಕರಿ ಒಪ್ಪಿಕೊಳ್ಳುವ ಮನೋಭಾವನೆಯೂ ಆ ವಯಸ್ಸಿನಲ್ಲಿ ಇರುತ್ತದೆ.

ಅದೇ ಮಕ್ಕಳಿಗೆ ವಯಸ್ಸಾದಂತೆ, ಅವರು ದಿನಕ್ಕೆ ಕಲಿಯುವ ಪದಗಳ ಸಂಖ್ಯೆಯು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ  ಅಲ್ಲದೇ ಅವರು ಬೇರೇ ಭಾಷೆಯಲ್ಲಿ ಕೇಳಿದ ಪದಗಳನ್ನು ಮೊದಲು ತಮ್ಮ ಭಾಷೆಗೆ ಮನಸ್ಸಿನಲ್ಲಿ ತರ್ಜುಮೆ ಮಾಡಿಕೊಂಡು ನಂತರ ವ್ಯವಹಿಸುತ್ತಾರೆ. ಈ ರೀತಿಯಾಗಿ ಇತರೇ ಭಾಷೆಗಳಲ್ಲಿ ಮಾತನಾಡುವಾಗ ಹೆಚ್ಚಿನ ಸಮಯ ತೆಗೆದುಕೊಳ್ಳುವುದಲ್ಲದೇ, ತಾವು ಬಳಸುತ್ತಿರುವ ಭಾಷೆ ಸರಿಯಾಗಿದೆಯೋ ಇಲ್ಲವೋ ಎಂಬ ಜಿಜ್ಞಾಸೆ ಸದಾ ಕಾಲಾವೂ ಆ ಮಕ್ಕಳನ್ನು ಕಾಡುವ ಪರಿಣಾಮ, ಮಾತೃಭಾಷೆಯಲ್ಲಿನ ಕಲಿಕೆ ಮತ್ತು ವ್ಯವಹಾರ ಬಹಳ ಉತ್ತಮ ಎನ್ನುವುದೇ ಹಲವರ ಅಭಿಪ್ರಾಯವಾಗಿದೆ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ, 1950ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳನ್ನು ವಿಂಗಡಿಸಿದಂತಹ ಸಂಧರ್ಭದಲ್ಲಿ ಕೆಲವು ರಾಜಕೀಯ ಧುರೀಣರ ನಿರ್ಲಕ್ಷತನದಿಂದಾಗಿ ಕನ್ನಡಿಗರೇ ಬಾಹುಳ್ಯವಿದ್ದ ಸೊಲ್ಲಾಪುರ, ಕೊಲ್ಹಾಪುರ ಮಹಾರಾಷ್ಟ್ರಕ್ಕೆ ಸೇರಿದ ಪರಿಣಾಮ ಇಂದಿಗೂ ಅಲ್ಲಿನ ಬಹುತೇಕ ಕನ್ನಡಿಗರು ತ್ರಿಶಂಕು ಸ್ಥಿತಿಯಲ್ಲಿಯೇ ಇದ್ದಾರೆ, ಬುಡಕಟ್ಟು ಜನರೇ ವಾಸಿಸುವಂತಹ ಹಳ್ಳಿಯೊಂದರ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆ ಇದ್ದು, ಅಲ್ಲಿಗೆ ಬರುತ್ತಿದ್ದ ಮಕ್ಕಳ ಸಂಖ್ಯೆಯೂ ಬೆರಳೆಣಿಕಷ್ಟಿತ್ತು. ಆ ಶಾಲೆಯ ಬಹುತೇಕ ಹೆಣ್ಣು ಮಕ್ಕಳಿಗೆ ಅಪ್ರಾಪ್ತ ವಯಸಿನಲ್ಲಿಯೇ ಬಾಲ್ಯವಿವಾಹವಾಗಿದ್ದಂತಹ ಶಾಲೆಗೆ 2009 ರಲ್ಲಿ  ರಂಜಿತ್ ಸಿಂಹ ಡಿಸ್ಲೆ ಎಂಬ ಮರಾಠಿ ಭಾಷಿಗರು  ಶಿಕ್ಷಕನಾಗಿ ಬಂದು ಅವರು ಎಷ್ಟೇ ಶ್ರಮವಹಿಸಿದರೂ ಆ ಮಕ್ಕಳಿಗೆ ಹೇಳಿಕೊಟ್ಟ ಪಾಠ ಆರ್ಥವಾಗುತ್ತಿರಲಿಲ್ಲ.

ಆಷ್ಟು ಅಸ್ಥೆ ವಹಿಸಿ ಹೇಳಿಕೊಡುತ್ತಿರುವ ಪಾಠಗಳು ಮಕ್ಕಳಿಗೆ  ಏಕೆ ಅರ್ಥವಾಗುತ್ತಿಲ್ಲಾ ಎಂದು ಬಹಳ ಯೋಚಿಸಿದ ನಂತರ ತಿಳಿದ ಬಂದ ವಿಷಯವೇನೆಂದರೆ,  ಅವರು ಕಲಿಸುತ್ತಿದ್ದ ಪಠ್ಯಪುಸ್ತಕಗಳೆಲ್ಲವೂ ಆ ಶಾಲೆಯ ವಿದ್ಯಾರ್ಥಿಗಳ ಮಾತೃಭಾಷೆಯಾದ ಕನ್ನಡದಲ್ಲಿ ಇರದೇ ಮರಾಠಿ ಭಾಷೆಯಲ್ಲಿದ್ದದ್ದರಿಂದ  ಆ ಮಕ್ಕಳಿಗೆ  ಅರ್ಥವಾಗುತ್ತಿಲ್ಲ, ಇದಕ್ಕೆ ಮಕ್ಕಳನ್ನು ದೂಷಿಸಲಾಗದು ಎಂಬುದನ್ನು ಅರಿತ ರಂಜಿತ್ ಸಿಂಹ ಆ ಮಕ್ಕಳ ಸಲುವಾಗಿ ತಾವೇ ಕನ್ನಡವನ್ನು ಓದಲು ಬರೆಯಲು ಕಲಿತುಕೊಂಡು ಮಕ್ಕಳೊಂದಿಗೆ ಕನ್ನಡಲ್ಲೇ ವ್ಯವಹರಿಸಲು ಆರಂಭಿಸಿದಾಗ ಮಕ್ಕಳ ಕಲಿಕಾಸಕ್ತಿ ಉತ್ತಮವಾದದ್ದನ್ನು ಮನಗೊಂಡು ಆರಂಭದಲ್ಲಿ ಮರಾಠಿ ಭಾಷೆಯಲ್ಲಿದ್ದ 1- 4 ನೇ ತರಗತಿಯಿಂದ ಪುಸ್ತಕಗಳನ್ನು ಕನ್ನಡದಲ್ಲಿ ಸ್ವತಃ ಮರು ವಿನ್ಯಾಸಗೊಳಿಸಿದರು. ಕೇವಲ ಓದುವ ಪುಸ್ತಕವಲ್ಲದೇ ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಕಥೆಗಳು ಮತ್ತು ಪದ್ಯಗಳನ್ನು ಆಡೀಯೋ, ವೀಡಿಯೋಗಳ ಮೂಲಕ ಕಲಿಸುವುದನ್ನು ಬಳಕೆಯನ್ನು ತಂದಿದ್ದಲ್ಲದೇ, ಆವುಗಳೆಲ್ಲವನ್ನೂ ಕ್ಯೂಆರ್ ಕೋಡ್ ಸಂಕೇತಗಳ ಒಳಗೆ ಸೇರಿಸಿ, ಪಠ್ಯಪುಸ್ತಕಗಳನ್ನು ಮರು ವಿನ್ಯಾಸಗೊಳಿಸಲು ಸಹಾಯ ಮಾಡಿದರು. ಈ ನವ ನಾವೀನ್ಯತೆಯ ಮೂಲಕ ಅವರು ವಿದ್ಯಾರ್ಥಿಗಳ ಕಲಿಕಾ, ಸಮಸ್ಯೆಗಳನ್ನು ಪರಿಹರಿಸಿದ್ದಲ್ಲದೇ ಅವರ ಕೌಶಲ್ಯ, ಸೃಜನಶೀಲತೆ ಮತ್ತು ಉತ್ತಮ ಸಂವಹನವನ್ನು ಜಾಗೃತಗೊಳಿಸಿದರು.

ರಂಜಿತ್ ಅವರ ಈ ಪ್ರಯೋಗ ಅಲ್ಲಿನ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರಿದ್ದಲ್ಲದೇ, ಅವರ ಶಾಲೆಯಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಸಂಖ್ಯೆಯೂ 100% ದಾಖಲಾಯಿತು. ಅಷ್ಟೇ ಅಲ್ಲದೇ ಈ ಶಾಲೆಯ ಅಭಿವೃದ್ಧಿಯಾಗಿ ಹೆಣ್ಣುಮಕ್ಕಳೂ ಕಲಿಯಲಾರಂಭಿಸಿದ ಪರಿಣಾಮ ಆ ಹಳ್ಳಿಯಲ್ಲಿ ಮುಂದೆ ಯಾವುದೇ ಹದಿಹರೆಯದ / ಅಪ್ರಾಪ್ತ ವಯಸ್ಸಿನ ವಿವಾಹಗಳು ನೆಡೆಯುಲಿಲ್ಲ ಎನ್ನುವುದು ಗಮನಾರ್ಹವಾದ ಅಂಶವಾಗಿದೆ.  ರಂಜಿತ್ ಅವರ ಯಶಸ್ವೀ ಪ್ರಯೋಗ ಮೈಕ್ರೋಸಾಫ್ಟ್‌ನ ಸಿಇಒ (ಸತ್ಯ ನಾಡೆಲ್ಲಾ) ಅವರಿಗೂ ತಲುಪಿ ಅವರ ಹಿಟ್ ರಿಫ್ರೆಶ್ ಪುಸ್ತಕದಲ್ಲಿ ರಂಜಿತ್ ಸಿಂಹ ಅವರ ಸಾಧನೆಯನ್ನು ನಮೂದಿಸುವ ಮೂಲಕ ಜಗತ್ತು ರಂಜಿತ್ ಅವರನ್ನು ಗುರುತಿಸುವಂತೆ ಮಾಡಿದ್ದಲ್ಲದೇ, ರಂಜಿತ್ ಅವರು ಈಗ ಕೇವಲ ಭಾರತವಲ್ಲದೇ, ಪಾಕಿಸ್ತಾನ, ಇಸ್ರೇಲ್, ಪ್ಯಾಲೆಸ್ಟೈನ್, ಯುಎಸ್, ಉತ್ತರ ಕೊರಿಯಾ, ಇರಾಕ್ ಮತ್ತು ಇರಾನ್ ಸೇರಿದಂತೆ ಎಂಟು ದೇಶಗಳ 19,000 ವಿದ್ಯಾರ್ಥಿಗಳನ್ನು ಸಂಪರ್ಕಿಸಿರುವ ‘ಲೆಟ್ಸ್ ಕ್ರಾಸ್ ದಿ ಬಾರ್ಡರ್ಸ್’ ಯೋಜನೆಯ ಒಂದು ಭಾಗವಾಗಿದ್ದಾರೆ.

ಹೀಗೆ ಮಾತೃಭಾಷೆ ಎಂಬುದು  ಹೇಗೆಲ್ಲಾ ಪರಿಣಾಮ ಬೀರಬಹುದು ಎಂಬುದನ್ನೇ ಮನದಲ್ಲಿಟ್ಟುಕೊಂಡು ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರೂ ಸಹಾ ತಮ್ಮ ಜೀವಮಾನವಿಡೀ ಕನ್ನಡ ಚಿತ್ರರಂಗಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡು ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಶ್ರೀಮಂತ ಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಅವರೇ ಹಾಡಿರುವಂತೆ,

ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ.. ಹಾಗಾಗಿ  ಕನ್ನಡವೇ ಸತ್ಯ ಕನ್ನಡವೇ ನಿತ್ಯ  ಎಂಬುದನ್ನು ಇಂದಿನ ವಿಶ್ವ ಮಾತೃ ಭಾಷಾ ದಿನದದಂದು ಮತ್ತೊಮ್ಮೆ ಮನಗಂಡು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಸಾಧ್ಯವಾದಷ್ಟು ನಮ್ಮ ಮಾತೃಭಾಷೆಯಲ್ಲೇ ಮಾಡೋಣ ಅಲ್ವೇ?  ಬದಲಾವಣೆ ಎಂಬುದು ಜಗದ ನಿಯಮವಾಗಿದ್ದು, ಆ ಬದಲಾವಣೆ ನಮ್ಮಿಂದಲೇ ಆಗಲೀ ಅಲ್ವೇ?

ಏನಂತೀರೀ?
ನಿಮ್ಮವನೇ ಮಂಜುಶ್ರೀ

Leave a comment