ಏನಂತೀರೀ? 2025ರ ವಾರ್ಷಿಕ ವರದಿ

ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. ಮಹಾಶಿವನ ಅನುಗ್ರಹ ನಮ್ಮೆಲ್ಲರ ಮೇಲೆಯೂ ಇರಲಿ ಎಂದು ಹಾರೈಸುತ್ತೇನೆ. ಎಲ್ಲರ ಜೀವನದಲ್ಲಿಯೂ ಏಳು ಬೀಳು ಎನ್ನುವುದು ಸಾಮಾನ್ಯವಾದ ವಿಷಯ. ಅದೇ ರೀತಿ ಸಂಖ್ಯೆ 7ಕ್ಕೂ ಸಹಾ ವಿಶೇಷ ಮಹತ್ವವಿದ್ದು  ಸಾಧಾರಣವಾಗಿ  ಯಾವುದೇ ಕೆಲಸವನ್ನು ಸತವಾಗಿ ಏಳು ವರ್ಷಗಳ ಕಾಲ ಮಾಡಿದಲ್ಲಿ ಅಥವಾ ಏಳು ವರ್ಷಗಳ ಕಾಲ ದಾಂಪತ್ಯ ಜೀವನ ಇದ್ದಲ್ಲಿ (ಇತ್ತೀಚಿನ ಸೆಲೆಬ್ರೆಟಿಗಳನ್ನು ಹೊರತು ಪಡಿಸಿ)  ಅದು ಬಹಳ ಅನ್ಯೋನ್ಯವಾಗಿರುತ್ತದೆ  ಎನ್ನುವುದೇ ಎಲ್ಲರ ನಂಬಿಕೆಯಾಗಿದೆ. ಅದೇ ರೀತಿಯಲ್ಲಿ 2019ರ ಇದೇ ಶಿವರಾತ್ರಿಯಂದು ಆರಂಭಿಸಿದ ಏನಂತೀರಿ.ಕಾಂ https://enantheeri.com ಎಂಬ ಬ್ಲಾಗ್ ಮೂಲಕ  ನಮ್ಮ ನಿಮ್ಮ ಸಂಬಂಧ ಮತ್ತು ಅನುಬಂಧಕ್ಕೆ ಏಳು ವರ್ಷಗಳು ಕಳೆದು ಹೋದದ್ದೇ ತಿಳಿಯದಾಗಿದೆ. ಹಾಗಾಗಿ ಪ್ರತೀ ವರ್ಷದಂತೆ ಈ ವರ್ಷವೂ ನಮ್ಮ ಏನಂತೀರಿ? ಬ್ಲಾಗ್ ಮತ್ತು YouTube Channel  ಪ್ರಗತಿಯ ಕುರಿತಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ನಿಮ್ಮ ಶುಭ ಹಾರೈಕೆಗಳು ಮತ್ತು ಸಹಕಾರವನ್ನು ಕೋರುತ್ತಿದ್ದೇನೆ.

ನಿಮ್ಮೆಲ್ಲರಿಗೂ  ಈಗಾಗಲೇ ತಿಳಿದಿರುವಂತೆ, ನಮ್ಮ ತಾತನವರಾದ ಬಾಳಗಂಚಿ ದಿ. ಗಮಕಿ ಶ್ರೀ ನಂಜುಂಡಯ್ಯನವರು ಖ್ಯಾತ ಗಮಕಿಗಳು, ಹೆಸರಾಂತ ಹರಿಕಥಾ ದಾಸರು ಮತ್ತು ಪ್ರಖ್ಯಾತ ವಾಗ್ಗೇಯಕಾರರು. ಅದೇ ರೀತಿ ಕೀರ್ತಿಶೇಷರಾದ ನಮ್ಮ ತಂದೆಯವರಾದ ಶ್ರೀ ಶಿವಮೂರ್ತಿಗಳು ಸಹಾ ಗಮಕಿಗಳು, ಲೇಖಕರು ಮತ್ತು ಮೋರ್ಚಿಂಗ್ ಕಲಾವಿದರಾಗಿದ್ದ ಕಾರಣ, ಸಂಗೀತ ಮತ್ತು ಸಾಹಿತ್ಯ ನಮ್ಮ ಕುಟುಂಬದವರಿಗೆ ಅನುವಂಶೀಯವಾಗಿ ಬಂದ ಕೊಡುಗೆ ಎಂದರೂ ತಪ್ಪಾಗಲಾರದು. ಇನ್ನು ಅಪ್ಪಾ ಅಕ್ಕಿಯ ಮೇಲೆ ಓಂ ಕಾರ ಬರೆಸಿದರೆ, ಅಮ್ಮಾ ನನ್ನ ಪುಟ್ಟ ಪುಟ್ಟ ಕೈಗಳಲ್ಲಿ ಕೋಡುಬಳೆಯಲ್ಲಿ ಅ ಆ ಇ ಈ ಮಾಡಿಸುವ ಮೂಲಕ ಕನ್ನಡ ಕಲಿಸಿದ್ದಲ್ಲದೇ ಪ್ರಜಾವಾಣಿ, ಪ್ರಜಾಮತ, ಸುಧಾ, ಮಯೂರ, ಕಸ್ತೂರಿ, ವಿಕ್ರಮ, ತರಂಗ, ಬಾಲ ಮಂಗಳ ಅಷ್ಟೇ ಅಲ್ಲದೇ, ಸರ್ಕಾರಿ ಗ್ರಂಥಾಲಯಕ್ಕೂ ಕರೆದುಕೊಂಡು ಹೋಗಿ ನಾಡಿನ ಖ್ಯಾತನಾಮರ ಪುಸ್ತಕಗಳನ್ನು ಓದುವ ಚಟವನ್ನು ಹತ್ತಿಸಿದರು, ಬರವಣಿಗೆಗೆ ಮೂಲ ಪ್ರೇರಣೆಯೇ ನನ್ನ ತಂದೆಯವರು. ಪ್ರತಿ ದಿನಾ ರಾತ್ರಿ ಮಲಗುವ ಮುನ್ನಾ ರಾಮಾಯಣ, ಮಹಾಭಾರತ, ವೀರಪುರುಷರ ಯಶೋಗಾಥೆಯನ್ನು  ವರ್ಷಾನುಗಟ್ಟಲೇ ಹೇಳುತ್ತಿದ್ದದ್ದಲ್ಲದೇ  ಹಿಂದಿನ ದಿನ ಹೇಳಿದ ಕಥೆಯ ಸಾರಾಂಶವನ್ನು ನನ್ನಿಂದ ಬರೆಸಿ, ಮಾರನೇಯ ದಿನ ಕಥೆಯನ್ನು ಮುಂದುವರೆಸುವ ಮುನ್ನಾ ಅದನ್ನೊಮ್ಮೆ ಓದಿ ತಪ್ಪನ್ನು ತಿದ್ದುವ ಮೂಲಕ ಪ್ರೋತ್ಸಾಹಿಸಿದರು.

ನಂತರದ ದಿನಗಳಲ್ಲಿ ಶಾಲಾ ಕಾಲೇಜುಗಳ ಪತ್ರಿಕೆಗಳಲ್ಲಿ ಸಣ್ಣ ಪುಟ್ಟ ಕಥೆ, ವಾರ್ಷಿಕೋತ್ಸವದಲ್ಲಿನ ನಾಟಕಗಳಿಗಷ್ಟೇ ಸೀಮಿತವಾಗಿದ್ದ ನನ್ನ ಬರಹಕ್ಕೆ ಓಘ ಸಿಕ್ಕಿದ್ದೇ ಸಾಮಾಜಿಕ ಅಂತರ್ಜಾಲ ತಾಣದ ಕ್ರಾಂತಿಯ ಮೂಲಕ. ಅದರಲ್ಲೂ ಫೇಸ್ ಬುಕ್ ಮತ್ತು ವಾಟ್ಸಾಪ್ ಬಂದ ನಂತರವಂತೂ ಬೇಕೋ ಬೇಡವೋ ಜಿದ್ದಾ ಜಿದ್ದಿಗೆ ಇಳಿದು  ವಿತಂಡ ವಾದಗಳ  ಮೂಲಕ ನನ್ನಲ್ಲಿದ ಬರಹಗಾರ ಜಾಗೃತನಾಗಿದ್ದ.  ಅಲ್ಲಿ ಬರೆಯುತ್ತಿದ್ದ ಬರಹಗಳಿಂದಾಗುವ ವಿವಾದಗಳು ಅಲ್ಲಿಗೇ ಸೀಮಿತವಾಗದೇ ಮನೆಯವರೆಗೂ ತಲುಪಿ ವಿನಾಕಾರಣ ನಮ್ಮ ತಂದೆ ಮತ್ತು ಮಡದಿ ನನ್ನ ಪರವಾಗಿ ಕ್ಷಮೆಯಾಚಿಸ ಬೇಕಾದ ಪ್ರಸಂಗಗಳಿಂದಾಗಿ ಅಂದು ನಾನು ಬರೆಯುತ್ತಿದ್ದ ಲೇಖನಗಳಿಂದ ಗಳಿಸಿದ್ದು ಮಿತ್ರತ್ವಕ್ಕಿಂತ ಶತೃತ್ವವೇ ಹೆಚ್ಚು.

ಕಾಲ ಹೀಗೆಯೇ ಇರುವುದಿಲ್ಲಾ! ಎನ್ನುವ ಜಗದ ನಿಯಮದಂತೆ ಅನಿರೀಕ್ಷಿತವಾಗಿ ನಮ್ಮ ತಂದೆಯವರು ಅಕಾಲಿಕವಾಗಿ ನಿಧರರಾದಂತಹ  ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಬರೆದ ಲೇಖನವನ್ನು ಎಲ್ಲರೂ ಮೆಚ್ಚಿಕೊಂಡಾಗ, ಅರೇ ಇದೇ ರೀತಿಯ ಬರಹವನ್ನೇಕೆ ಮುಂದುವರಿಸಬಾರದು? ಎಂದೆನಿಸಿತಾದರೂ, ರಾಜಕೀಯ ಬರಹಗಳತ್ತವೇ ಹರಿಯುತ್ತಿತ್ತು ಚಿತ್ತ. ಮಡದಿ ಮಂಜುಳ ಮತ್ತು ಮೆಚ್ಚಿನ ಗುರುಗಳಾದ ಶ್ರೀ ಮಹಾಬಲೇಶ್ವರ ಅವಧಾನಿಗಳು ಬರವಣಿಗೆಯ ಶೈಲಿಯನ್ನು ಬದಲಿಸಿಕೊಳ್ಳಲು ಪದೇ ಪದೇ ಅಗ್ರಹ ಪಡಿಸಿದಾಗ, ಅವರಿಬ್ಬರಿಗೂ ಆಗದು ಎನ್ನಲಾಗದೇ, ನನ್ನದೇ ಅನುಭವಗಳನ್ನೇ ಬರೆದು ಸಾಮಾಜಿಕ ಅಂತರ್ಜಾಲದಲ್ಲಿ ಪ್ರಕಟಿಸುವ ಮೂಲಕ ನನ್ನ ಅಧಿಕೃತ ಬರಹಕ್ಕೆ ಮೂಲವಾಯಿತು.

ಹಾಗೆ ಬರೆದ ಲೇಖನಗಳಿಗೆ  ನಿಮ್ಮಂತಹ ಸಹೃದಯಿ ಓದುಗರ  ಪ್ರೋತ್ಸಾಹ ದೊರೆತ ಮೇಲೆಂತೂ ಬರವಣೆಗೆ ವೇಗ ಹೆಚ್ಚಾಗುತ್ತಾ ಹೋಗಿ ನೋಡ ನೋಡುತ್ತಿದ್ದಂತೆಯೇ 80-100 ಲೇಖನಗಳಾದಾಗ, ಗೆಳೆಯ ಮತ್ತು ನನ್ನ ಯೋಗ ಗುರು ಶ್ರೀ ವಾಸುದೇವ ಅವರು ಸುಮ್ಮನೆ ಎಲ್ಲೋ ನಿಮ್ಮ ಬರಹಗಳನ್ನು ಪ್ರಕಟಿಸುವ ಬದಲು ನಿಮ್ಮದೇ ಬ್ಲಾಗ್ ಆರಂಭಿಸಿದಲ್ಲಿ ನಿಮ್ಮ ಲೇಖನಗಳು ಸಮಗ್ರವಾಗಿ  ಒಂದೇ ಕಡೆಯಲ್ಲಿ ಲಭ್ಯವಾಗುತ್ತದೆ ಎಂದು ನೀಡಿದ ಸಲಹೆಯನ್ನು ಆರಂಭದಲ್ಲಿ ಗಂಭೀರವಾಗಿ ತೆಗೆದುಕೊಳ್ಳದೇ ಹೋದರೂ, 2019ರ ಮಾರ್ಚ್ 7 ಶಿವರಾತ್ರಿಯಂದು ಭಕ್ತಿಯಿಂದ ಮನೆ ದೇವರು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿಯನ್ನು ನೆನೆದು ಬ್ಲಾಗ್ ಒಂದನ್ನು ಆರಂಭಿಸಿ ಅದಕ್ಕೆ ಏನಂತೀರೀ? (ಹಿರೇಮಗಳೂರು ಕಣ್ಣನ್ ಅವರಿಂದ ಪ್ರಭಾವಿತನಾಗಿ) ಎಂಬ ವಿನೂತನ ಮತ್ತು ವೈಶಿಷ್ಟ್ಯವಾದ ಅದಾಗಲೇ ಬರೆದಿದ್ದ ಲೇಖನಗಳನ್ನು ಬ್ಲಾಗ್ ಒಳಗೆ  ಪ್ರಕಟಿಸಿದಾಗ, ನೀವೆಲ್ಲರೂ ನನ್ನ ನಿರೀಕ್ಷೆಗೂ ಮೀರಿ ನನ್ನೀ ಹೊಸಾ ಸಾಹಸವನ್ನು ಬೆಂಬಲಿಸಿದ ಪರಿಣಾಮವಾಗಿ  ನಮ್ಮೀ ಬ್ಲಾಗ್  ಓದುಗರು ಕೇವಲ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲದೇ, ದೇಶ ವಿದೇಶಗಳಲ್ಲಿಯೂ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ.

ಕೇವಲ ಒಂದೇ ಸಿದ್ಧಾಂತಕ್ಕೆ ಕಟ್ಟು ಬೀಳದೇ, ಕನ್ನಡ ನಾಡು, ಭಾಷೆ, ನುಡಿ, ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯ, ಕ್ರೀಡೆಗಳು, ಪ್ರಚಲಿತ ವಿದ್ಯಮಾನಗಳು, ರಾಜಕೀಯ ಹೀಗೆ  ಸುಮಾರು 30 ವಿಭಾಗಗಳಲ್ಲಿ ಎಂದಿಗೂ, ಯಾರಿಗೂ, ಬೇಸರವಾಗದಂತೆ ಓದಿಸಿಕೊಂಡು ಹೋಗುವ ಇಂದಿನವರೆಗೂ ಪ್ರಕಟವಾಗಿರುವ 1,341 ಲೇಖನಗಳನ್ನು ನಾನು ಬರೆದಿದ್ದೇನೆ ಎನ್ನುವುದಕ್ಕಿಂತಲೂ ನೀವು ಪ್ರೋತ್ಸಾಹಿಸಿ ಬರೆಸಿಕೊಂಡಿದ್ದೀರಿ ಎಂದರೆ ಸರಿಯಾಗುತ್ತದೆ. ಜನ ಮನ್ನಣೆ ಪಡೆದ ಸುಮಾರು 25 ಲೇಖನಗಳ ಏನಂತೀರಿ ಪುಸ್ತಕ ನಮ್ಮದೇ ಸೃಷ್ಟಿ ಪ್ರಕಾಶನದಲ್ಲಿ ಪ್ರಕಟವಾಗಿದ್ದರೆ,  ಪ್ರತೀವರ್ಷ ನವೆಂಬರ್ ಕನ್ನಡ ರಾಜ್ಯೋತ್ಸವದ ತಿಂಗಳ ಪೂರ್ತಿ ಅವಿಖ್ಯಾತ ಕನ್ನಡಿಗರ ಕುರಿತಾಗಿ ಬರೆಯುತ್ತಿರುವ ಕನ್ನಡದ ಕಲಿಗಳು ಮಾಲಿಕೆಯ ಆಯ್ದ 25 ಲೇಖನಗಳನ್ನು ಅಯೋಧ್ಯಾ ಪ್ರಕಾಶನ ಸಂಸ್ಥೆಯು ಅದೇ ಹೆಸರಿನಲ್ಲಿ  ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.

 

ಅದೇ ರೀತಿ ಬೆಂಗಳೂರಿನ ಪ್ರಮುಖ ಸ್ಥಳಗಳು, ವೃತ್ತಗಳು, ರಸ್ತೆಗಳು, ಆಟದ ಮೈದಾನ, ಹೀಗೆ ಹತ್ತು ಹಲವು ಕುತೂಹಲಕಾರಿ ಮಾಹಿತಿಗಳನ್ನೊಳಗೊಂಡ ಲೇಖನದ ಸರಣಿ ಬೆಂಗಳೂರಿನ ಇತಿಹಾಸ ಮತ್ತು ಕನ್ನಿಂಗ್ ಹ್ಯಾಮ್ ರಸ್ತೆಯ ಕುರಿತಾದ ವೀಡಿಯೋ ಬಹಳ ವೈರಲ್ ಆಗಿದ್ದನ್ನು ಗಮನಿಸಿದ ನಾಡಿನ ಪ್ರಖ್ಯಾತ ವಾರಪತ್ರಿಕೆ  ತರಂಗದ ಸಂಪಾದಕಿಯಾದ ಶ್ರೀಮತಿ ಯು. ಬಿ. ರಾಜಲಕ್ಷ್ಮಿಯವರು  ಎರಡು ಕವರ್ ಪೇಜ್ ಲೇಖನಗಳನ್ನು ಒಳಗೊಂಡಂತೆ ಸುಮಾರು 20-22 ವಾರಗಳ ಕಾಲ ಆ ಲೇಖನಗಳನ್ನು ಪ್ರಕಟಿಸಿದ್ದು. ಆ ಲೇಖನಗಳನ್ನು ಮೆಚ್ಚಿರುವ ಅಂಕಿತ ಪ್ರಕಾಶನ  ಮತ್ತಷ್ಟು ಲೇಖನಗಳೊಂದಿಗೆ ಪುಸ್ತಕ ರೂಪದಲ್ಲಿ  ಹೊರ ತರಲು ಇಚ್ಚಿಸಿದ್ದಾರೆ.

 

ಆರಂಭದ ದಿನಗಳಲ್ಲಿ ನನ್ನ ಲೇಖನಗಳು ಹೆಚ್ಚು ಜನರಿಗೆ ತಲುಪುತ್ತಿಲ್ಲ ಅಥವಾ ತಲುಪಿದರೂ ಜನರಿಗೆ ಓದುವಷ್ಟು ಮನಸ್ಥಿತಿ ಇಲ್ಲಾ ಎಂದು ಯೋಚಿಸುತ್ತಿರುವಾಗಲೇ, ಆಗಿನ್ನೂ ಪ್ರೌಢಶಾಲೆಯಲ್ಲಿದ್ದ ಮಗ ಸಾಗರ್ ಬಾಳಗಂಚಿ, ಅಪ್ಪಾ!, ಈಗೆಲ್ಲಾ ಯಾರೋ ಓದೋದಿಲ್ಲಾ ಎಲ್ಲರೂ YouTube ನೋಡ್ತಾರೆ, ನೀವೂ ಅದನ್ನೇ ಪ್ರಯತ್ನಿಸಿ ಎಂದು ಹೇಳಿದಾಗ, ಒಳ್ಳೆಯ ವಿಚಾರವನ್ನು ಯಾರು ಹೇಳಿದರೂ ಕೇಳಬೇಕು ಎಂಬ ಮನೋಭಾವನೆಯಂದ 2020ರ ಯುಗಾದಿ ಹಬ್ಬದಂದು ಆರಂಭಿಸಿದ ಏನಂತೀರೀ? YouTube Channel ಸಹಾ ಇಂದು 450+ ಅಧಿಕ ವಿಡೀಯೋಗಳ ಮೂಲಕ ಕನ್ನಡಿಗರ ಹೆಮ್ಮೆಯ ಛಾನೆಲ್ ಆಗಿರುವುದು ಸಂತಸದ ವಿಷಯವಾಗಿದೆ. ತಿಂಡಿಪೋತ, ಅನ್ನಪೂರ್ಣ, ಪ್ರವಾಸ, ದೇಗುಲ ದರ್ಶನ, ದೃಷ್ಟಾಂತ, ಅವಿಖ್ಯಾತ ಕಲಿಗಳು ಮಾಲಿಕೆಗಳ ವಿಡಿಯೂಗಳಲ್ಲಿ ಕೆಲವಂತೂ  ಪ್ರಪಂಚಾದ್ಯಂತ ವೈರಲ್ ಆಗಿ ಹೋದ ಬಂದ ಕಡೆಯಲೆಲ್ಲಾ ಸರ್ ನಿಮ್ಮ ವೀಡೀಯೋ ಚೆನ್ನಾಗಿತ್ತು. ಕನ್ನಡಿಗರಾಗಿ ನಮ್ಮ ಊರಿನ ದೇವಾಲಯ, ನಮ್ಮ ಊರಿನವರ ಇತಿಹಾಸವೇ ಅರಿಯದಿದ್ದ ನಮಗೆ ಈ ನಿಮ್ಮ ವೀಡಿಯೋ ಮೂಲಕ ತಿಳಿಯಿತು ಎಂದು ಹೇಳುವಾಗ ದೊರೆಯುವ ಆನಂದ ನಿಜಕ್ಕೂ ಕೋಟಿ ಹಣ ಸಂಪಾದಿಸಿದರೂ ಸಿಗದು.

ನನ್ನ ಲೇಖನಗಳು ಮತ್ತು ವೀಡೀಯೋಗಳನ್ನು ಗಮನಿಸಿದಲ್ಲಿ ಅದರ ಕಡೆಯಲ್ಲಿ  ಏನಂತೀರೀ?  Tagline ಇರುತ್ತಿತ್ತೇ ಹೊರತು ಎಲ್ಲಿಯೂ ನನ್ನ ಹೆಸರು ನೇರವಾಗಿ ಇಲ್ಲದಿದ್ದನ್ನು ನೀವೇಲ್ಲರೂ ಗಮನಿಸಿದ್ದೀರಿ. ನನ್ನ ಜೀವನಲ್ಲಿನ ಮೂರು ಅನರ್ಘ್ಯ ಮುತ್ತುಗಳೆಂದರೆ,  ನಮ್ಮ ಮನೆಯ ಮೂರು ಮಾತೆಯರು. ಮೊದಲು ನನ್ನ ಜನ್ಮದಾತೆ ಆಮ್ಮ, ನಂತರ ಮಡದಿ ಆನಂತರ ಮಗಳು.  ತೇನವಿನಾ ತೃಣಮಪಿ ನ ಚಲತಿ ಎನ್ನುವಂತೆ ಅವರ ಅಕ್ಕರೆ, ಪ್ರೋತ್ಸಾಹ ಮತ್ತು ಸಹಕಾರವಿಲ್ಲದೇ, ನನ್ನಿಂದ ಯಾವ ಕೆಲಸವನ್ನೂ ಮಾಡಲಾಗದು. ಹಾಗಾಗಿ  ಅವರನ್ನು ಜಗತ್ತಿಗೆ ಪರಿಚಯಿಸುವ ಹಂಬಲದಿಂದಾಗಿ, ನನ್ನ ಈ ಎಲ್ಲಾ ಬೆಳವಣಿಗೆಯಲ್ಲಿ ಅಪ್ಪನಷ್ಟೇ ಅಮ್ಮನದ್ದೂ ಜವಾಬ್ಧಾರಿ ಇರುವ ಕಾರಣ, ಅಮ್ಮನ ಹೆಸರು ಎಲ್ಲರಿಗೂ ತಿಳಿಸುವ ಆಸೆಯಿಂದಾಗಿ ನನ್ನ ಮೊದಲ ಅಂಕಿತನಾಮಮಾಗಿ  ಉಮಾಸುತ ಅರ್ಥಾತ್  ಉಮಾಳ ಮಗ ಎಂಬುದನ್ನು ಪರಿಚಯಿಸಿದಾಗ, ಪಾರ್ವತಿಯ ಪತಿ ಶ್ರೀಕಂಠ, ಉಮಾಸುತ ಹೇಗೆ ಆಗುತ್ತಾನೆ? ಎಂಬ ವಾದವನ್ನು ಮಾಡಿದವರಿಗೇನೂ ಕಡಿಮೆ ಇರಲಿಲ್ಲ,

ಹೀಗೆ ಉಮಾಸುತ  ಎಲ್ಲರಿಗೂ ಪರಿಚಯಿಸಿದ ಕೆಲವು ವರ್ಷಗಳ ನಂತರ ಲೇಖನದ ಅಂತ್ಯದಲ್ಲಿ ಸೃಷ್ಟಿಕರ್ತ ಉಮಾಸುತ ಎಂದು ಬರೆಯುವುದನ್ನು ರೂಡಿಸಿಕೊಂಡಾಗ, ಬಹುತೇಕರು ಲೇಖನವನ್ನು ನಾನೇ ಬರೆದ ಕಾರಣ ಸೃಷ್ಟಿಕರ್ತ ಎಂಬದನ್ನು ಬರೆಯುತ್ತಿದ್ದೇನೆ  ಎಂದೇ ಭಾವಿಸಿದ್ದರು. ನನ್ನ ಮಗಳ ಹೆಸರು ಸೃಷ್ಟಿ, ಹಾಗಾಗಿ  ಆ ಸೃಷ್ಟಿಯ ತಂದೆ ಸೃಷ್ಟಿಕರ್ತ ಮತ್ತು ನನ್ನ ಎಲ್ಲಾ ಚಟುವಟಿಕೆಗಳ ಮೊದಲ ವಿಮರ್ಶಕಿಯೂ ಸಹಾ ನನ್ನ ಮಗಳೇ. ಅಪ್ಪಾ! ನಿಮ್ಮ ಈ ಪದ ಪ್ರಯೋಗ ಸರಿ ಇಲ್ಲಾ, ನೀವು ಹೀಗೆ ಮಾತನಾಡುವ ಬದಲು ಈ ರೀತಿಯಾಗಿ ಮಾತನಾಡ ಬೇಕಿತ್ತು. ಈ ರೀತಿಯ ಉಡುಗೆ ತೊಡುಗೆಗಿಂತ,  ಇಂತಹ ಬಟ್ಟೆಗಳನ್ನು ಧರಿಸಿದರೆ ಚೆನ್ನಾಗಿರುತ್ತದೆ. ಕುರುಚಲು ಗಡ್ಡ ಬರಹಗಾರರಿಗೆ ಅಪ್ಯಾಯ ಮಾನ ಎಂದು ನನ್ನ ಪ್ರತಿಯೊಂದು ನಡೆಯಲ್ಲೂ ಮಗಳು ಪ್ರೀತಿ ಮತ್ತು ಗೌರವದಿಂದ ತಿದ್ದಿ ತೀಡುವ ಕಾರಣ ಸೃಷ್ಟಿಕರ್ತ ಎಂಬ ಅಂಕಿತನಾಮವನ್ನು ಬಳಸುತ್ತಿದ್ದೇನೆ ಎಂಬ ನೈಜ ಕಾರಣವನ್ನು  ವಿವರಿಸಿದಾಗ, ನೀವು ಬಿಡಿಯಪ್ಪಾ!, ಪದಗಳಲ್ಲಿ ಆಟವಾಡುವ ಪದ ಪ್ರಯೋಗ ಪ್ರವೀಣ ಎಂಬ ಬಿರುದನ್ನೂ ಸಹಾ ದಯಪಾಲಿಸಿದ್ದಕ್ಕಾಗಿ ನಾನು ಅವರೆಲ್ಲರಿಗೂ ಆಭಾರಿಯಾಗಿದ್ದೇನೆ

ಅಮ್ಮಾ ಮತ್ತು ಮಗಳನ್ನು ಪರಿಚಯಿಸಿ ಆಯಿತು. ಮನೆಯ ಮೂಲಾಧಾರ ಮಡದಿಯನ್ನು ಪರಿಚಯಿಸುವ ದೃಷ್ಟಿಯಿಂದ ಕೆಲವು ವಾರಗಳಿಂದ  ನಿಮ್ಮವನೇ ಉಮಾಸುತ ಎಂಬುದರ ಬದಲಾಗಿ ನಿಮ್ಮವನೇ ಮಂಜುಶ್ರೀ ಎಂದು ಬರೆಯಲು ಆರಂಭಿಸಿದಾಗ, ಅರೇ!  ಈ ಮಂಜುಶ್ರೀ ಯಾರು? ಉಮಾಸುತ ಎಲ್ಲಿ ಹೋದರು?  ಬರವಣಿಗೆಯ  ಶೈಲಿ ನಿಮ್ಮ ರೀತಿಯಲ್ಲೇ ಇದೆಯಲ್ಲಾ! ಎಂದು   ಕಕ್ಕುಲತೆಯಿಂದ ಕೇಳಿದವರ ಸಂಖ್ಯೆ ಅಗಣಿತ. ಒಂದು ಸಣ್ಣ ಬದಲಾವಣೆಯನ್ನು ಅಷ್ಟು ಸೂಕ್ಶ್ಮವಾಗಿ ಗಮನಿಸಿ ಅದನ್ನು ಪ್ರಶ್ನಿಸುವಾಗ, ಎಲ್ಲರ(ವ)ನ್ನೂ ಪ್ರಶ್ನಿಸಿ ಮತ್ತು ಪರಿಹರಿಸಿಕೊಳ್ಳಿ ಎಂಬ ನಮ್ಮ ಅಡಿ ಬರಹವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರುವುದು ಎದ್ದು ಕಾಣುತ್ತದೆ. 

ನಿಜ ಹೇಳಬೇಕೆಂದರೆ, ಅಮ್ಮನಿಂದ ನೇರವಾಗಿ ನಾನು ಮತ್ತು ನನ್ನಿಂದ ನೇರವಾಗಿ ಮಗಳು ಎಂದಾದರೂ ಇವರಿಬ್ಬರ ನಡುವಿನ ಕೊಂಡಿ ಮತ್ತು ನನ್ನ ಅರ್ಧಾಂಗಿ ಮಂಜುಳ ಶ್ರೀಕಂಠಳಿಗೂ ನನ್ನ ಲೇಖನದ ಶ್ರೇಯವನ್ನು ಕೊಡುವ ಸಲುವಾಗಿ ಮಂಜುಶ್ರೀ  ಅರ್ಥಾತ್ ಮಂಜುಳಳ ಗಂಡ ಶ್ರೀಕಂಠ (ಜ್ಯೋತಿಯ ಗಂಡ  ಹೆಸರಾಂತ ಲೇಖಕ ಗಿರೀಶ, ಜೋಗಿ ಆದ ಹಾಗೆ) ಹೀಗೆ  ಅಂಕಿತ ನಾಮಗಳ ಮೂಲಕ ನಮ್ಮ ಮನೆಯ ಮೂರು ಮುತ್ತುಗಳನ್ನು ಪರಿಚಯಿಸುವ ವಿನೂತನ ಪ್ರಯೋಗವನ್ನು ನೀವೆಲ್ಲರೂ ತುಂಬು ಹೃದಯದಿಂದ ಸ್ವೀಕರಿಸುತ್ತೀರಿ ಎಂಬ ಆಶಾಭಾವನೆ ನನ್ನದು.

ಸಾಮಾನ್ಯವಾಗಿ ವಯಕ್ತಿಕವಾಗಿ ನನ್ನನ್ನು ಮತ್ತೊಬ್ಬರಿಗೆ ಪರಿಚಯಿಸುವಾಗ ಇವರೊಬ್ಬರು ಅಂಕಣಕಾರರು. ಇವರದ್ದೇ ಆದ ಏನಂತೀರೀ? ಬ್ಲಾಗ್ ಮತ್ತು YouTube Channel ಇದೆ ಎಂದು ಹೇಳಿದ ತಕ್ಷಣ, ಬಹುತೇಕರು ಓಹೋ!! ಹಾಗಾದ್ರೇ ಬಹಳ ದುಡ್ಡು ಸಂಪಾದನೆ ಮಾಡಿರಬಹುದು ಅಲ್ವೇ? ಎನ್ನುವ ಉದ್ಗಾರ ತೆಗೆಯುತ್ತಾರೆ.  ನಿಜ ಹೇಳ ಬೇಕಂದರೆ, ಈ ಎಲ್ಲಾ ಬರಹ ಮತ್ತು ವೀಡಿಯೋಗಳು ಕೇವಲ ನನ್ನ ಆತ್ಮತೃಪ್ತಿಗಾಗಿ ಮಾಡುವ ಪ್ರವೃತ್ತಿಯಾಗಿದ್ದು  ನಾನೂ ಸಹಾ ಎಲ್ಲರಂತೆ ಹೊಟ್ಟೆಯ ಪಾಡಿಗಾಗಿ ರೇವಾ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತ್ರಂತ್ರಜ್ಞಾನ ವಿಭಾಗದ ನಿರ್ದೇಶಕನಾಗಿ(IT Director)  ವೃತ್ತಿ ಮಾಡುತ್ತಿದ್ದೇನೆ. ಸತ್ಯವಾಗಿಯೂ, ನನ್ನ ಪ್ರವೃತ್ತಿಯಿಂದ ನನ್ನ ಜ್ಞಾನ ಸಂಪತ್ತು ವೃದ್ಧಿಯಾಗಿದೆ ಮತ್ತು  ನಿಮ್ಮಂತಹ ಸಹಸ್ರಾರು ಸಜ್ಜನರ ಸ್ನೇಹ ಮತ್ತು ವಿಶ್ವಾಸ ದೊರೆತಿದ್ದು ಹೋದ ಬಂದ ಕಡೆಯಲೆಲ್ಲಾ, ಜನರು ನನ್ನನ್ನು ಗುರುತಿಸುವಂತೆಯೋ ಇಲ್ಲವೇ, ನನ್ನ ಬ್ಲಾಗ್ ಅಥವಾ YouTube Channel ಹೆಸರು ಹೇಳುತ್ತಿದ್ದಂತೆಯೇ, ಓ ಉಮಾಸುತ ಎಂದರೆ ನೀವೇನಾ? ನಿಮ್ಮ ಬರಹಗಳನ್ನು ಓದಿದ್ದೇನೆ. ನಿಮ್ಮ ವೀಡಿಯೋಗಳನ್ನು ನೋಡಿದ್ದೇನೆ ಎಂದು ಹೇಳುವಷ್ಟು ಚಿರಪರಿಚನಾಗಿದ್ದೇನೆಯೇ ಹೊರತು, ಅದರಿಂದ ಒಂದು ನಯಾ ಪೈಸೆಯನ್ನೂ ಇದುವರೆವಿಗೂ ಸಂಪಾದನೆ ಮಾಡಿಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲಾ.

ಒಟ್ಟಿನಲ್ಲಿ ಏನಂತೀರೀ? ಬ್ಲಾಗ್ ಮತ್ತು  YouTube Channel ಮೂಲಕ ಸಾವಿರಾರು ಸಾಹಿತ್ಯಾಸಕ್ತ ಗೆಳೆಯರು ಪರಿಚಯವಾಗಿ, ಅವರಿಂದ ಅನೇಕ ಉಪಯುಕ್ತ ಮಾಹಿತಿಗಳನ್ನೂ ತಿಳಿಯುವಂತಾಯಿತು ಮತ್ತು ತಿಳಿಸುವಂತಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲೇಖನಗಳನ್ನು ಓದಿದ್ದ ಅನೇಕ ಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಯ ಸಂಪಾದಕರು ತಮ್ಮ ಪತ್ರಿಕೆಗಳಲ್ಲಿ ನನ್ನ ಲೇಖನಗಳನ್ನು ಪ್ರಕಟಿಸಿದ್ದಲ್ಲದೇ ಕೆಲವೊಂದು ಸಂಪಾದಕರು ವಿಶೇಷವಾದ ಅಂಕಣವನ್ನೇ ನನಗಾಗಿ ಮೀಸಲಾಗಿರಿಸಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಇದೇ ಕಾರಣದಿಂದಾಗಿಯೇ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪರಿಚಯೂ ಆಗಿ ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎನ್ನುವಂತೆ ಆ ಸಂಘಟನೆಯಲ್ಲಿರುವ ದಿಗ್ಗಜರುಗಳ ಜೊತೆಯಲ್ಲಿ ಒಟ್ಟಿಗೆ ಕೂಡಿ ಕಲಿತುಕೊಳ್ಳುವ ಅವಕಾಶ ನನಗೆ ದೊರೆತಿದ್ದು, ಈ ಮೊದಲು ಅಭಾಸಾಪ ಬೆಂಗಳೂರು ಮಹಾನಗರದ ಕಾರ್ಯದರ್ಶಿಯಾಗಿ, ಪ್ರಸ್ತುತ ಮಹಾನಗರ ಸಂಪರ್ಕ ಪ್ರಮುಖ್ ಜವಾಬ್ಧಾರಿಯನ್ನು ನಿಭಾಯಿಸುವ ಹೊಣೆ ದೊರೆತಿದೆ.

ಕನ್ನಡದ ಬ್ಲಾಗ್ ಗಳನ್ನು ಓದುವವರೇ ಇಲ್ಲಾ ಎನ್ನುವ ಕೊರಗಿನ ನಡುವೆಯೂ ನಮ್ಮ ಏನಂತೀರೀ ಬ್ಲಾಗಿನಲ್ಲಿ  ಇದುವರೆಗೂ 3,141 ಲೇಖನಗಳು ಪ್ರಕಟವಾಗಿ ಅದನ್ನು 6,75,542 ವೀಕ್ಷಕರು 9,70,800 ಬಾರಿ ಓದಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಆರಂಭದಲ್ಲಿ ಮತ್ತು ಕೋವಿಡ್ ಸಮಯದಲ್ಲಿ ಹೆಚ್ಚಿನ ಸಮಯಾವಕಾಶವಿದ್ದ ಕಾರಣ, ದಿನಕ್ಕೆ ಎರಡು ಮೂರು ಲೇಖನಗಳನ್ನು ಬರೆದು ಬಿಡುವಿಲ್ಲದ ಬರಹಗಾರ ಎಂಬ ಬಿರುದಿಗೂ ಪಾತ್ರನಾಗಿದ್ದ ನನಗೆ,  ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬಿಡುವಿನ ಸಮಯ ಸಿಗದ ಕಾರಣ ಲೇಖನಗಳ ಸಂಖ್ಯೆ ಕಡೆಯಿಮಾದರೂ, ಲೇಖನಗಳ ವಿಷಯ ಮಂಡನೆ ಮತ್ತು ಗುಣಮಟ್ಟದಲ್ಲಿ ರಾಜಿಯಾಗದೇ ಇರುವ ಕಾರಣ ಲೇಖನ ಪ್ರಕಟವಾಗಲೀ, ಪ್ರಕಟವಾಗದೇ ಇದ್ದರೂ ಪ್ರತೀ ದಿನ ಸರಾಸರಿ 250+ ಕ್ಕೂಹೆಚ್ಚು ವೀಕ್ಷಣೆ ಇರುವುದು ನಮ್ಮ ಬ್ಲಾಗ್ ಬಗ್ಗೆ ನಿಮಗಿರುವ ಆಸ್ಥೆಯನ್ನು ತೋರಿಸುತ್ತದೆ. ಇತ್ತೀಚೆಗೆ  ಗೆಳೆಯರೊಬ್ಬರ ಮೂಲಕ ತಿಳಿದು ಬಂದ ವಿಚಾರವೆಂದರೆ, ಬೆಳಗಾಂ ಮೂಲದ ಐಎಸ್ ಪರೀಕ್ಷೆಗಳಿಗೆ ಪಾಠ ಹೇಳಿಕೊಡುವ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ  ನಾಡು, ನುಡಿ, ಕ್ರೀಡೆ, ರಾಜಕೀಯ ಮತ್ತು ಪ್ರಚಲಿತ ವಿದ್ಯಾಮಾನಗಳ ಕುರಿತಾಗಿ ವಸ್ತುನಿಷ್ಠವಾದ ಸಮಗ್ರ ವಿವರಗಳಿಗೆ ಏನಂತೀರೀ? ಬ್ಲಾಗ್ ಓದಿ ಎಂದು ತಿಳಿಸಿದ್ದಾರೆ ಎಂಬುದೇ  ನನ್ನ ಶ್ರಮಕ್ಕೆ ಸಿಕ್ಕ ಸಾರ್ಥಕತೆ.

ನಮ್ಮ ಏನಂತೀರೀ? ಬ್ಲಾಗ್ ಮತ್ತು YouTube Channel ಕುರಿತಾಗಿ  ನಿಮ್ಮ ಅಭಿಪ್ರಾಯ ಮತ್ತು ಅದನ್ನು ಮತ್ತಷ್ಟು ಹೇಗೆ ಉತ್ತಮ ಪಡಿಸ ಬಹುದು ಎಂಬುದರ ಕುರಿತಾಗಿ ನಿಮ್ಮ ಸೂಕ್ತ ಸಲಹೆಗಳನ್ನು ನಮಗೆ ನೀಡುವ ಮುಖಾಂತರ ನಿಮ್ಮೀ ಬ್ಲಾಗನ್ನು ಮತ್ತಷ್ಟು ಮಗದಷ್ಟು ಉತ್ತಮ ಗುಣಾತ್ಮಕ ಸಾಹಿತ್ಯತಾಣವನ್ನಾಗಿ ಮಾಡುವ ಸಂಪೂರ್ಣ ಜವಾಬ್ಧಾರಿ ನಿಮ್ಮ ಮೇಲೆಯೇ ಇದೆ. ಅಪ್ಪಾ ಅಮ್ಮ ಹೇಳಿಕೊಟ್ಟ ವಿಚಾರಗಳು ನನ್ನ ಮಸ್ತಕದಲ್ಲಿದ್ದದ್ದನ್ನು ಈಗ ಡಿಜಿಟಲ್ ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಯುವಂತೆ ಮಾಡುವುದರಲ್ಲಿ  ನಿಮ್ಮ ಸಲಹೆ ಮತ್ತು ಸಹಕಾರಗಳು  ಅತ್ಯಗತ್ಯವಾಗಿದ್ದು ನೀವೆಲ್ಲರೂ  ಹೀಗೆಯೇ ಸದಾಕಾಲವೂ ನಮ್ಮೊಂದಿಗೆ ಇದ್ದೇ ಇರುತ್ತದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ನಿಮ್ಮವನೇ ಮಂಜುಶ್ರೀ (ಉಮಾಸುತ)

2 thoughts on “ಏನಂತೀರೀ? 2025ರ ವಾರ್ಷಿಕ ವರದಿ

  1. ಬಹಳ ಚುರುಕಾದ ಬರಹ! ಎಲ್ಲೂ ನಿಲ್ಲದ ವಿಚಾರ ಗಳ ಓಘ! ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಸವಿಸ್ತಾರ ವರದಿ! ಏಳರ ಏಳಿಗೆ ದುಪ್ಪಟ್ಟಾಗಲಿ ಎಣಿಕೆ ಎಪ್ಪತ್ತಾಗಲಿ!

    Liked by 1 person

Leave a comment