ಹಿಂದೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ನಂತರದ ದಿನಗಳಲ್ಲಿ ಕುದುರೆ, ಎತ್ತಿನಗಾಡಿಗಳ ಬಳಕೆ ಬಂದು ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮೋಟಾರು ವಾಹನಗಳ ಅನ್ವೇಷಣೆಯಾಗಿ ಸೈಕಲ್, ಮೋಟಾರ್ ಬೈಕ್, ಬಸ್ಸು, ಕಾರು, ರೈಲು ಮತ್ತು ವಿಮಾನಗಳನ್ನು ಬಳಸುವಂತಾಗಿದೆ.
ರಿಚರ್ಡ್ ಟ್ರೆವಿಥಿಕ್ ಎಂಬ ಬ್ರಿಟಿಷ್ ಮೆಕ್ಯಾನಿಕಲ್ ಮತ್ತು ಮೈನಿಂಗ್ ಇಂಜಿನಿಯರ್ ಎಂಬುವವರು 1803ರಲ್ಲಿ ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ನೀರನ್ನು ಕಾಯಿಸಿ ಅದರಿಂದ ಬರುವ ಹೊಗೆಯಿಂದ ಚಲಿಸುವಂತ ಸ್ಟೀಮ್ ಇಂಜಿನ್ ನಿರ್ಮಿಸಿದರೆ, ಇಂಗ್ಲೇಂಡಿನಲ್ಲಿ ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಸ್ಟೀಫನ್ಸನ್ ಎನ್ನುವವರು ಅದನ್ನು ಮತ್ತಷ್ಟು ಸುಧಾರಿಸಿ ಲೋಕೋಮೋಟೀವ್ ಇಂಜಿನ್ ಕಂಡು ಹಿಡಿದು ರೈಲ್ವೆಯ ಪಿತಾಮಹ ಎನಿಸಿಕೊಂಡರು. ಸ್ಟೀಫನ್ಸನ್ ಅವರ ಮಗ ರಾಬರ್ಟ್ 1825 ರಲ್ಲಿ ಸಾರ್ವಜನಿಕ ರೈಲುಮಾರ್ಗದಲ್ಲಿ ಪ್ರಯಾಣಿಕರನ್ನು ಸಾಗಿಸಲು ಮೊದಲ ಉಗಿ ಲೋಕೋಮೋಟಿವ್ ಅನ್ನು ನಿರ್ಮಿಸಿ ಸಾಕಷ್ಟು ಪರೀಕ್ಷಾರ್ಥ ಪ್ರಯಾಣಗಳನ್ನು ನಡೆಸಿದ ನಂತರ. 1830 ರಲ್ಲಿ ಮೊದಲ ಬಾರಿಗೆ ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್ ನಡುವೆ ಸಾರ್ವಜನಿಕ ಇಂಟರ್-ಸಿಟಿ ರೈಲ್ವೆ ರೈಲುಮಾರ್ಗವನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಸಾಕಷ್ಟು ಬೆಳವಣಿಗೆಯಾಗಿ ಡೀಸಲ್ ಚಾಲಿತ, ವಿದ್ಯುತ್ ಚಾಲಿತ ಇಂಜಿನ್ ಗಳು ಈಗ ಅತ್ಯಂತ ವೇಗವಾಗಿ ಚಲಿಸುವ ಬುಲೆಟ್ ರೈಲುಗಳು ಮತ್ತು ಹೈಪರ್ ಲೂಪ್ ಆಧಾರಿತ ರೈಲುಗಳ ಚಾಲ್ತಿಯಲ್ಲಿವೆ.
ಇಂದು ಪ್ರಯಾಣಿಕರ ಅನುಕೂಲಕ್ಕಾಗಿ ಹವಾ ನಿಯಂತ್ರಿತ ಬೋಗಿಗಳಿದ್ದು, ಪ್ರಯಾಣಿಕರಿಗೆ ಅತ್ಯಂತ ಸುಖಕರವಾದ ಮತ್ತು ಆರಾಮದಾಯಕ ಪ್ರಯಾಣದ ಜೊತೆ ಕುಳಿತಲ್ಲಿಯೇ ಶುಚಿ ರುಚಿಯಾದ ಊಟ ತಿಂಡಿಗಳ ವ್ಯವಸ್ಥೆಯೂ ಇದೆ. ಹೊಸ ಚಿಗುರು, ಹಳೆ ಬೇರು, ಕೂಡಿರಲು ಮರ ಸೊಬಗು ಎನ್ನುವಂತೆ ಇಂದಿನ ಹವಾನಿಯಂತ್ರಿತ ಭೋಗಿ ಮತ್ತು ಅಂದಿನ ಹಳೆಯ ಉಗಿಬಂಡಿ ಇಂಜಿನ್ ಜೊತೆ ಕಲ್ಪಿಸಿಕೊಳ್ಳುವುದು ಸಾಹಸವೇ ಸರಿ. ಆದರೇ ರೈಲ್ವೇ ಥೀಮ್ ಇಟ್ಕೊಂಡು ಹಳೇ ಲೋಕೋಮೋಟೀವ್ ಇಂಜಿನ್, ರೈಲ್ವೇ ಪ್ಲಾಟ್ ಫಾರಂ ಮೇಲೆ ಏಸಿ ಬೋಗಿಯಲ್ಲಿ ಶುಚಿ ರುಚಿಯಾದ ಬಿಸಿ ಬಿಸಿ ತಿಂಡಿ ಊಟ ಅದರ ಪಕ್ಕದಲ್ಲೇ, ಪಕ್ಕಾ ಹಳ್ಳಿಯ ವಾತಾವರಣ ವಿರುವ ಡಾಬಾದಲ್ಲಿಯೂ ಕುಳಿತುಕೊಂಡು ಊಟ ಸವಿದು ನಂತರ ಪೋಟೋ ಶೂಟ್ ಮಾಡಿಸಿಕೊಳ್ಳಲು ಪ್ರಶಾಂತವಾದ ಸ್ಥಳ ಎಲ್ಲದ್ದಕ್ಕಿಂತಲೂ ಅಚ್ಚರಿ ಎನ್ನುವಂತೆ, ಪೂರ್ಣ ಚಂದ್ರ ತೇಜಸ್ವಿಯವರ ಪೋಟೋ ಸರ್ವ ಧರ್ಮ ಸಮನ್ವಯತೆಯ ಪೂರಕವಾಗಿ ಭಗವಾನ್ ಬುದ್ಧನ ಪ್ರತಿಮೆ ಹೀಗೆ ಇವೆಲ್ಲವೂ ಒಂದೆಡೆ ಇರುವ ಜಾಗವೇ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಹೈವೆಯಲ್ಲಿ ಕುಣಿಗಲ್ಲಿನ ಬಿದನಗೆರೆ ಬೈಪಾಸ್ (ಜಾನ್ಸನ್ ಟೈಲ್ಸ್ ) ನಿಂದ ಸುಮಾರು 2 ಕಿಮೀ ಮುಂದೆ ಹೋಗುತ್ತಿದ್ದಂತೆಯೇ ಕಾಣಸಿಗುತ್ತದೆ ಎಂದರೆ ಅಚ್ಚರಿ ಎನಿಸುತ್ತದೆ ಅಲ್ವೇ? ಹೌದು ಅಚ್ಚರಿ ಆದರೂ ನಿಜವಾಗಿದ್ದು ಬನ್ನಿ ಕುಳಿತಲ್ಲಿಂದಲೇ ಆಲ್ಲಿನ ಎಲ್ಲಾ ವ್ಯಸ್ಥೆಗಳನ್ನು ಒಮ್ಮೆ ನೋಡಿಕೊಂಡು ಬರೋಣ.
ಕುಣಿಗಲ್ ಬೈಪಾಸ್ ನಿಂದ ಬೆಳ್ಳೂರು ಕಡೆಗೆ ಹೋಗುವಾಗ ಬಲಗಡೆ The Ugibandi Food Station ಎಂಬ ಬೋರ್ಡ್ ಅದರ ಮುಂದೆಯೇ ಹಳೇ ಕಾಲದ ಲೋಕೋಮೋಟಿವ್ ರೈಲ್ವೇ ಎಂಜಿನ್ ನೋಡುತ್ತಿದ್ದಂತೆಯೇ ನಮ್ಮ ವಾಹವನ್ನು ನಿಲ್ಲಿಸದೇ ಮುಂದೇ ಹೋಗಲು ಸಾಧ್ಯವೇ ಇಲ್ಲ ಎಂದರೂ ತಪ್ಪಾಗದು. ಹೈವೇ ಪಕ್ಕದಲ್ಲೇ ಸುಮಾರು ಕಾರುಗಳನ್ನು ನಿಲ್ಲಿಸುವಂತಹ ಸೌಲಭ್ಯವುಳ್ಳ ಈ ಉಗಿಬಂಡಿ ರೆಸ್ಟೋರೆಂಟ್ ಬಳಿ ಕಾರನ್ನು ನಿಲ್ಲಿಸಿ ನಿಧಾನವಾಗಿ ರೈಲ್ವೇ ಇಂಜಿನ್ ಹಾಯ್ದುಕೊಂಡೇ ಒಳಗೆ ಹೋಗುತ್ತಿದ್ದಂತೆಯೇ, ಪಕ್ಕಾ ರೈಲ್ವೇ ನಿಲ್ಡಾಣದ ಪ್ಲಾಟ್ ಫಾರಂ ಅದರ ಅದರ ಅಕ್ಕ ಪಕ್ಕದಲ್ಲೇ ಎರಡು ಏಸಿ ಬೋಗಿಗಳು, ಪಕ್ಕದಲ್ಲೇ ಟಿಕೇಟ್ ಕೌಂಟರ್, ಟಿಕೆಟ್ ಕಲೆಕ್ಟರ್, ರೈಲ್ವೇ ಪ್ಲಾಟ್ ಫಾರ್ಮ್ ನಲ್ಲಿರುವಂತೆಯೇ ಕುಳಿತುಕೊಳ್ಳಲು ಬೆಂಚುಗಳು ಎಲ್ಲವೂ ಒಂದು ಕ್ಷಣ ಅವಾಕ್ಕಾಗುವಂತೆ ಮಾಡುತ್ತದೆ. ಇವೆಲ್ಲವನ್ನೂ ಕೆಲ ಕ್ಷಣಗಳ ಕಾಲ ಕಣ್ತುಂಬಿಸಿಕೊಂಡು ಬಲಗಡೆ ಇದ್ದ ಬೋಗಿಯೊಳಗೆ ಹೋಗುತ್ತಿದ್ದಂತೆಯೇ ಅದರೊಳಗಿನ ತಣ್ಣನೆಯ ಏಸಿ ಗಾಳಿಯಿಂದಾಗಿ ಆದುವರೆವಿಗೂ ಪ್ರಯಾಣದಿಂದಾದ ಆಯಾಸವೆಲ್ಲಾ ಕ್ಷಣ ಮಾತ್ರದಲ್ಲಿ ಪರಿಹಾರವಾಗಿ ರೈಲಿನಲ್ಲಿರುವಂತೆಯೇ ಇರುವ ಆಸನಗಳಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ, ನಮಸ್ಕಾರ್ ಸರ್! ಎಂದು ಮೆನು ಕಾರ್ಡ್ ಮುಂದಿಸಿರಿ. ಸರ್ ಮಿನರಲ್ ವಾಟರ್ ಅಥಾವಾ ನಾರ್ಮಲ್ ವಾಟರ್ ಇಲ್ಲವೇ ಬಿಸಿ ನೀರು, ಯಾವುದು ಕೊಡಲಿ ಎಂದು ಸೌಜನ್ಯವಾಗಿ ಕೇಳುವ ಸಿಬ್ಬಂಧಿ ಬಲು ಬೇಗನೆ ಮನಸ್ಸನ್ನು ಗೆಲ್ಲುವುದರಲ್ಲಿ ಸಫಲರಾಗುತ್ತಾರೆ.
ಇನ್ನು ಮೆನು ಕಾರ್ಡ್ ಗಮನಿಸಿದರೆ, ಬಹುತೇಕ ದಕ್ಷಿಣ ಮತ್ತು ಉತ್ತರ ಭಾರತೀಯ ಎಲ್ಲಾ ಸಸ್ಯಾಹಾರಿ ಊಟ ತಿಂಡಿಗಳ ಜೊತೆಗೆ ಚೈನೀಸ್ ಖಾದ್ಯಗಳೂ ಕೈಗೆಟುಕುವ ಬೆಲೆಯಲ್ಲಿವೆ. ಆಹಾರ ಆರ್ಡರ್ ಮಾಡುತ್ತಿದ್ದಂತೆಯೇ, ಆಹಾರವನ್ನು ಸವಿಯಲು ಅಗತ್ಯವಿದ್ದ ತಟ್ಟೆ ಲೋಟಗಳನ್ನು ಅಣಿಮಾಡಿಸುವಷ್ಟರಲ್ಲಿ ಬಿಸಿ ಬಿಸಿಯಾದ ಮತ್ತು ಅಷ್ಟೇ ರುಚಿಯಾದ ತಿಂಡಿ ಮತ್ತು ಊಟವು ಕೆಲವೇ ನಿಮಿಷಗಳಲ್ಲಿ ನಮ್ಮ ಮುಂದೆ ಬಂದು, ಕೈ ಮತ್ತು ಬಾಯಿ ಮಜಭೂತಾಗಿ ತಮ್ಮ ಕೆಲಸವನ್ನು ಮುಗಿಸಿದ ನಂತರ ಡರ್ ಎಂದು ತೇಗಿ ಬಂದ ಬಿಲ್ ನೋಡಿದಾಗ, ಪ್ರತಿಯೊಬ್ಬರಿಗೂ ಸರಾಸರಿ ಸುಮಾರು 280-320ರೂಗಳಷ್ಟು ಇದ್ದು, ತಟ್ಟೆ ಲೋಟ, ಬಡಿಸಿದ ಆಹಾರ, ಸುತ್ತಮುತ್ತಲಿನ ವಾತಾವರಣ ಮತ್ತು ಅಲ್ಲಿನ ಸಿಬ್ಬಂಧಿಗಳು ತೋರಿದ ಪ್ರೀತಿ ವಿಶ್ವಾಸಗಳ ಮುಂದೆ ಆ ಹಣ ಹೆಚ್ಚೇನು ಎನಿಸುವುದಿಲ್ಲ. ಈ ಹೋಟೆಲ್ ಪ್ರತಿ ದಿನ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ ರಾತ್ರಿ 10 ಗಂಟೆಯವರೆಗೂ ನಿರಂತರವಾಗಿ ಬಾಯಿ ಚಪ್ಪರಿಸುವಂತಹ, ತಿಂಡಿ, ಊಟ, ಕಾಫೀ, ಟೀ, ಬಗೆ ಬಗೆಯ ಜ್ಯೂಸ್ ಅಲ್ಲದೇ ಸಂಜೆ ಚಾಟ್ಸ್ ಸಹಾ ಇಲ್ಲಿ ಲಭ್ಯವಿದೆ.
ಊಟ ಮುಗಿಸಿ ಕೈ ತೊಳೆಯಲು ಹೊರಗೆ ಬರುತ್ತಿದ್ದಂತೆಯೇ, ಹೆಗಲ ಮೇಲೆ ಕೋವಿ ಹಿಡಿದು, ಕುತ್ತಿಗೆಗೆ ಕ್ಯಾಮೆರಾ ನೇತಾಕಿಕೊಂಡ, ಮತ್ತೊಂದು ಕೈಯಲ್ಲಿ ಮೀನಿನ ಗಾಳ ಹಿಡಿದ ರಾಷ್ಟ್ರಕವಿ ಕುವೆಂಪು ಅವರ ಮಗ ತೇಜಸ್ವಿಯವರ ವರ್ಣ ಚಿತ್ರ ಮತ್ತು ಅದರ ಪಕ್ಕದಲ್ಳೇ ಧ್ಯಾನ ಮುದ್ರೆಯಲ್ಲಿದ್ದ ಬುದ್ಧನ ಚಿತ್ರ ಕಾಣ ಸಿಗುತ್ತದೆ, ಅದರ ಪಕ್ಕದಲ್ಲೇ ಪಕ್ಕಾ ಹಳ್ಳಿಯ ಸೊಗಡಿನ ಗುಡಿಸಲಿನ ಗುಡಾರಗಳು ಅದರ ಪಕ್ಕದಲ್ಲಿಂದಲೇ ಬರುವ ಬಿಸಿ ಬಿಸಿ ಕಾಫಿಯ ಘಮಲು ಜೊತೆಗೆ ಮರದ ಆಟಿಕೆಗಳು ಮತ್ತು ದೇಸೀ ವಸ್ತುಗಳಿದ್ದ ಹಳ್ಳಿ ಅಂಗಡಿ, ಹಾಗೇ ಎರಡು ಭೋಗಿಗಳ ಮೇಲೊಂದು ರೈಲ್ವೇ ಫ್ಲೈ ಓವರ್ ಇದೆಯಲ್ಲಾ ಏನಿದು ಎಂದು ಮೇಲೇ ಹತ್ತಿ ಇಣುಕಿನೋಡಿದರೆ ಅದೊಂದು ಪಾರ್ಟಿ ಹಾಲ್ ಆಗಿದ್ದು ಸುಮಾರು 70-80 ಜನರು ಕುಳಿತು ಕೊಳ್ಳಬಹುದಾಗಿದೆ ಹೀಗೆ ಒಂದು ವಿಶಿಷ್ಟವಾದ ಅನುಭವವನ್ನು ನೀಡುವ ಹೋಟೆಲ್ ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ.
ಈ ರೀತಿಯಾಗಿ ಹೊಸ ಮತ್ತು ಹಳೆಯ ಎರಡೂ ಶೈಲಿಯನ್ನು ಹೊಂದಿರುವ ಪಾರಂಪರಿಕ ವಿಭಿನ್ನ ಶೈಲಿಯನ್ನು ನೆನಪಿಸುವಂತಹ ಹೋಟೆಲ್ ನಿರ್ಮಿಸಿರುವ ವ್ಯಕ್ತಿ ಬಹಳ ವಯಸ್ಸಾದ ಮತ್ತು ಸೂಟು ಬೂಟು ಧರಿಸಿದರೇ ಆಗಿರಬೇಕು ಎಂದು ತಿಳಿದು, ಅವರ ಭೇಟಿಯಾಗಲು ಹೋದಾಗ, ಸಾಧಾರಣ ಪ್ಯಾಂಟ್ ಶರ್ಟ್ ಧರಿಸಿದ್ದ 25-30ರ ಆಸುಪಾಸಿನ ವಯಸ್ಸಿನ ತರುಣ, ನಮಸ್ಕಾರ ಸರ್ ನನ್ನ ಹೆಸರು ಧನಂಜಯ್, ನಾನೇ ಈ ಹೋಟೆಲ್ಲಿನ ಮಾಲಿಕ ಎಂದು ಪರಿಚಯಿಸಿಕೊಂಡಾಗ, ಈ ಅದ್ಭುತ ಹೋಟೆಲ್ಲಿನ ಕನಸುಗಾರ ಮತ್ತು ಮಾಲಿಕ ಇವರೇನಾ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಷ್ಟು ಅಚ್ಚರಿಯಾಗುವುದರಲ್ಲಿ ಅನುಮಾನವೇ ಇಲ್ಲಾ.
ಹೇಗೂ ಗೋಡಾ ಭೀ ಹೈ. ಗಾಡೀ ಭೀ ಹೈ. ಫಿರ್ ಚಲ್ನೇಮೇ ಕ್ಯಾ ಮುಷ್ಕಿಲ್ ಹೈ ಎನ್ನುವಂತೆ ಕಣ್ಣ ಮುಂದೆ ರೈಲು ಇದೆ, ಅದರ ಮಾಲಿಕರಾದ ಧನಂಜಯ್ ಅವರೂ ನಮ್ಮ ಜೊತೆ ಇದ್ದಾರೆ ಎಂದು ಅವರೊಂದಿಗೆ ಮಾತಿಗಿಳಿಯುತ್ತಿದ್ದಂತೆಯೇ, ಒಂದು ಒಳ್ಳೆಯ ಸರ್ಕಾರಿ ಕೆಲಸಕ್ಕೆ ಸೇರಿಕೊಂಡ್ರೇ ಲೈಫ್ ಸೆಟಲ್ಲಾಗಿ ಆರಾಮಗಿ ಮದುವೆ ಮಕ್ಕಳು ಮಾಡಿಕೊಂಡು ನೆಮ್ಮದಿಯಾಗಿ ಇರಬಹುದು ಎಂದು ಇಂದಿನ ಯುವಕರುಗಳು ಹೇಳುವಂತಹ ಕಾಲದಲ್ಲಿ, ಸರ್ಕಾರಿ ಸಾರಿಗೆ ಇಲಾಖೆಯಲ್ಲಿ ಒಂದೆರಡು ವರ್ಷಗಳ ಕಾಲ ಅಕೌಂಟೆಂಟ್ ಆಗಿ ಕೆಲಸ ಮಾಡಿ ಧನಂಜಯ್, ಅಲ್ಲಿಯ ಕೆಲಸದ ಏಕಾನತೆಯಿಂದ ಬೇಸರಕೊಂಡು, ಬೇರೆಯವರ ಕೈಗೆಳಗೆ ದುಡಿಯುವ ಬದಲು ತಾವೇ ಒಂದು ಒಳ್ಳೆಯ ವ್ಯಾಪಾರ ಮಾಡುತ್ತಾ, ಒಂದಷ್ಟು ಜನರಿಗೆ ಕೆಲಸ ಕೊಡುವಂತಾಗಬೇಕು ಎಂಬ ಆತ್ಮವಿಶ್ವಾಸದಿಂದ ಸ್ವಾವಲಂಭಿ (ಆತ್ಮನಿರ್ಭರ್) ಆಗಲು ಧನಂಜಯ್ ಅವರು ಕೈಗೊಂಡ ನಿರ್ಧಾರವೇ ಈ ಉಗಿಬಂಡಿ ಎಂದು ಹೇಳಿದಾಗ, ವಾವ್! ನಮ್ಮ ದೇಶಕ್ಕೆ ಇಂತಹ ನವ ತರುಣರೇ ಮಾದರಿ ಎಂದನಿದ್ದಂತೂ ಸುಳ್ಳಲ್ಲ.
ಸ್ಥಳೀಯವಾಗಿ ಚಿಕ್ಕ ತಮ್ಮಯ್ಯನ ಪಾಳ್ಯ ಎಂಬ ಹಳ್ಳಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿ ಕೊಂಡಿರುವ ಸಾಧಾರಣ ಮಧ್ಯಮ ವರ್ಗದ ರೈತರ ಮಗನಾಗಿರುವ ಧನಂಜಯ್ ಅವರ ಅಣ್ಣ ಇಂಜಿನೀಯರ್ ಅಗಿದ್ದಾರೆ. ಬಿಕಾಂ ಪದವೀಧರರಾದ ಧನಂಜಯ್ ಆವರಿಗೆ ಹೊಸದಾಗಿ ಏನಾದರೂ ಮಾಡ ಬೇಕೆಂಬ ಸ್ವಾಭೀಮಾನೀ ತುಡಿತ ಈ ಹೊಸ ಸಾಹಸಕ್ಕೆ ಇಳಿಯುವಂತೆ ಮಾಡಿದೆ. ಆರಂಭದಲ್ಲಿ ಬಾರ್ & ರೆಸ್ಟೋರೆಂಟ್ ಮಾದರಿಯಲ್ಲಿ ಮಾಡಬೇಕು ಎಂದು ಯೋಚಿಸುತ್ತಿದ್ದಾಗ, ಅವರ ಪೋಷಕರು ಅಯ್ಯೋ ಮತ್ತೊಬ್ಬರಿಗೆ ಕುಡಿಸಿ ಮನೆ ಹಾಳು ಮಾಡುವ ಬದಲು ಹೊಟ್ಟೆ ತುಂಬಾ ಉಣಿಸಿ ಮನಸ್ಸಂತೋಷ ಪಡಿಸುವುದೇ ಲೇಸು ಎಂದಾಗ, ಎಲ್ಲರೂ ಒಪ್ಪುವಂತಹ ಸಸ್ಯಾಹಾರೀ ಹೋಟೆಲ್ ಆರಂಭಿಸಬೇಕು ಎಂದು ನಿರ್ಧರಿಸಿದರು.
ಆದರೆ ಆ ಹೈವೇ ರಸ್ತೆಯಲ್ಲಿ ಅದಾಗಲೇ 60ಕ್ಕೂ ಹೆಚ್ಚಿನ ಅದೇ ರೀತಿಯ ಹೋಟೆಲ್ ಗಳು ಇದ್ದದ್ದನ್ನು ಗಮನಿಸಿ ಅವರೆಲ್ಲರಿಗಿಂತಲೂ ವಿಭಿನ್ನವಾಗಿ ಮತ್ತೇನಾದರೂ ಮಾಡಬೇಕು ಎಂದಾಗ ಹೊಳೆದದ್ದೇ ಈ ಉಗಿಬಂಡಿ ಆಲೋಚನೆ. ಕರ್ನಾಟಕ ಮತ್ತು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಆಶಯದಿಂದ ರೈಲ್ವೇ ಇಲಾಖೆಯು ಗೋಲ್ಡನ್ ಚಾರಿಯೇಟ್ ಎಂಬ ಹವಾನಿಯಂತ್ರಿತ ಐಶಾರಾಮಿ ರೈಲುಗಳನ್ನು ಕರ್ನಾಟಕ ಮತ್ತು ದಕ್ಷಿಣ ಭಾರತದ ಐತಿಹಾಸಿಕ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಂಚರಿಸುತ್ತವೆ. ಇದನ್ನೇ ಮಾದರಿಯಾಗಿಸಿಕೊಂಡು ಇಲ್ಲಿ ಹವಾನಿಯಂತ್ರಿತ ಭೋಗಿಗಳನ್ನು ಸಿದ್ಧಪಡಿಸಿದರೆ, ಇನ್ನು ಫ್ರಾನ್ಸ್ ದೇಶದ ಓರಿಯಂಟ್ ಎಕ್ಸ್ ಪ್ರೆಸ್ ನ ಮಾದರಿಯ ರೈಲ್ವೇ ಇಂಜಿನ್ ನನ್ನು ಸ್ಥಾಪಿಸಲಾಗಿದ್ದು ಒಟ್ಟಿನಲ್ಲಿ ಹಳೆಯ ಪಾರಂಪರಿಕ ಶೈಲಿಯನ್ನು ನೆನಪಿಸುವಂತಿದೆ.
ಇಂದಿನ ಕಾಲದಲ್ಲಿ ಅಯ್ಯೋ ನಮ್ಮ ಓದಿಗೆ ತಕ್ಕಂತೆ ಕೆಲಸವೇ ಸಿಗೋದಿಲ್ಲಾ ಎಂದು ವಿದೇಶಕ್ಕೆ ಪ್ರತಿಭಾ ಪಲಾಯನ ಮಾಡುವವರೇ ಹೆಚ್ಚಾಗಿರುವಾಗ, ಹಾಗೊಮ್ಮೆ ಇಲ್ಲೇ ಕೆಲಸ ಸಿಕ್ಕರೂ ಸಂಬಳ ಸಾಲುತ್ತಿಲ್ಲಾ, ಅದು ಸರಿ ಇಲ್ಲಾ ಇದು ಸರಿ ಇಲ್ಲಾ ಎಂದು ಕೊರಗುವವರೇ ಹೆಚ್ಚಾಗಿರುವಾಗ, ಸ್ವಾಭಿಮಾನಿಯಾಗಿ ಒಂದು ಐವತ್ತು ಜನರಿಗೆ ಉದ್ಯೋಗ ನೀಡುತ್ತಿರುವುದಲ್ಲದೇ, ಅತಿಥಿ ದೇವೋ ಭವ ಎಂದು ಅವರು ಕೊಟ್ಟ ಹಣಕ್ಕೆ ಮೋಸವಾಗದಂತೆ ಶುಚಿ ರುಚಿಯಾದ The Ugibandi Food Station ಎಂಬ ಹೋಸಾ ವಿಷಯದ ಪರಿಕಲ್ಪನೆಯ ಮೂಲಕ ಹೊಟ್ಟೆಯ ಜೊತೆಗೆ ಮನಸ್ಸಿಗೂ ಮುದ ನೀಡುತ್ತಿರುವಾಗ ಮತ್ತು ನಮ್ಮ ಇಂದಿನ ಯುವಜನತೆಗೆ ಮಾದರಿಯಾಗಿರುವ ಧನಂಜಯ್ ಅವರ ಈ ಉಗಿಬಂಡಿ ಹೋಟೆಲ್ಲಿಗೆ ಹಾಸನ, ಮಂಗಳೂರು, ಧರ್ಮಸ್ಥಳ, ಶ್ವಣಬೆಳಗೊಳದಿಂದ ಹಿಂದಿರುಗಿ ಬರುವಾಗ ಅಲ್ಲಿಗೆ ಹೋಗಿ ಅವರ ರುಚಿಯನ್ನು ಸವಿಯೋದನ್ನು ಮರೀಬೇಡಿ. ಹಾಗೆ ಈ ಉಗಿಬಂಡಿಯ ವಿಷಯ ನಮಗೆ ಏನಂತೀರೀ ಬ್ಲಾಗ್ ಮತ್ತು ಯೂಟ್ಯೂಬ್ ಛಾನೆಲ್ಲಿನ ಮೂಲಕ ತಿಳಿಯಿತು ಎಂದು ಹೇಳುವ ಮೂಲಕ ವಿಶೇಷ ಆತಿಥ್ಯವನ್ನೂ ಪಡೆಯಿರಿ. ಅಲ್ಲಿಂದ ಬಂದ ನಂತರ ಅಲ್ಲಿನ ನಿಮ್ಮ ಅನುಭವ ಹೇಗಿತ್ತು ಅನ್ನೋದನ್ನು ಮಾತ್ರಾ ನಮಗೆ ತಿಳಿಸುವುದನ್ನು ಬರೀ ಬೇಡೀ ಆಯ್ತಾ! ಇಂತಹ ಸ್ವಾಭಿಮಾನೀ ರೈತರ ಮಕ್ಕಳನ್ನು ಬೆಳೆಸುವ ಜವಾಬ್ಧಾರಿ ನಮ್ಮ ಮೇಲೆಯೇ ಇದೇ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ