ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ

ಮಲೆನಾಡಿನ ಜಿಲ್ಲೆಗಳಲ್ಲಿ ಒಂದಾದ ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಸುಂದರವಾದ  ಕಾನನಗಳ ನಡುಗೆ ಜುಳು ಜುಳು ಎಂದು ಹರಿಯುವ ತುಂಗಾ ನದಿಯ ತಡದಲ್ಲಿರುವ ಊರೇ ಕುಡುಮಲ್ಲಿಗೆ. ಅಪ್ಪಟ್ಟ ಮಲೆನಾಡಿನ ಸೊಬಗಿನ ಸಿರಿಯನ್ನು ಹೊದ್ದಿರುವ ಈ ಗ್ರಾಮದಲ್ಲಿ 2011ರ ಜನಗಣತಿಯ ಪ್ರಕಾರ ಈ ಕುಡುಮಲ್ಲಿಗೆ ಗ್ರಾಮದ ಒಟ್ಟು ಜನಸಂಖ್ಯೆ 676 ಮತ್ತು ಈ ಗ್ರಾಮದಲ್ಲಿರುವ ಮನೆಗಳ ಸಂಖ್ಯೆ ಸರಿ ಸುಮಾರು 170. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಅಲ್ಲಿನ ಜನಸಂಖ್ಯೆಯಲ್ಲಿ  ಅರ್ಧಕ್ಕೂ ತುಸು ಹೆಚ್ಚಾಗಿಯೇ (50.3%)  ಇರುವ ಈ ಪ್ರಮೀಳಾ ಪ್ರಧಾನ ಗ್ರಾಮದ ಸಾಕ್ಷರತಾ ಪ್ರಮಾಣ 76.0% ಅದರಲ್ಲೂ  ಮಹಿಳಾ ಸಾಕ್ಷರತಾ ಪ್ರಮಾಣ 35.7% ಎಂದರೆ ನಿಜಕ್ಕೂ ಅಚ್ಚರಿ ಎನಿಸುತ್ತದೆ.

 

ಈ ಗ್ರಾಮದಲ್ಲಿ  ಈ ಪ್ರಮಾಣದ ಅಚ್ಚರಿಯ ಸಾಕ್ಷರತಾ ಸಂಖ್ಯೆ ಹೆಚ್ಚಾಗಲು  ಮುಖ್ಯ ಕಾರಣ ಎಂದರೆ,  ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದರೂ ತಪ್ಪಾಗದು. ದಾಖಲೆಗಳ ಪ್ರಕಾರ ಈ ಶಾಲೆ ಜುಲೈ 1, 1924 ರಂದು ಆರಂಭವಾಗಿ ಪ್ರಸ್ತುತ ಬರೊಬ್ಬರೀ ನೂರು ವರ್ಷಳನ್ನು ಪೂರೈಸಿ 101ನೇ ವರ್ಷದತ್ತ ಧಾಪುಗಾಲು ಹಾಕಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಅಂದಿನ ಮೈಸೂರು ಸಂಸ್ಥಾನದ ರಾಜರುಗಳ ಕೊಡುಗೆ ಅಪಾರವಾಗಿದೆ. ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ  ಅವರ ಸಂಸ್ಥಾನದ ಎಲ್ಲಾ ಕಡೆಗಳಲ್ಲೂ  ಶಾಲೆಗಳನ್ನು ಆರಂಭಿಸುವ ಅಭಿಯಾನ ಪ್ರಾರಂಭವಾಗಿ ಅವರ ಕಾಲದಲ್ಲಿ ಸುಮಾರು 6000 ಶಾಲೆಗಳು ಆರಂಭವಾಯಿತು ಎನ್ನಲಾಗಿದ್ದು ಬಹುಶಃ ಅದೇ ಯೋಜನೆಯಡಿಯಲ್ಲಿ ಆರಂಭವಾದ ಶಾಲೆಗಳಲ್ಲಿ ಈ ಕುಡುಮಲ್ಲಿಗೆ ಶಾಲೆಯೂ ಒಂದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದ್ದು, ಈಗಲೂ ಅವಶ್ಯವಿರುವ ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಸರಕಾರಿ ಶಾಲೆಗಳಲ್ಲಿ ಒಂದಾಗಿದೆ.

 

ಮಹಾರಾಜರ ಒತ್ತಾಸೆಗೆ ಸ್ಥಳೀಯರೂ ಕೈ ಜೋಡಿಸಿದ ಕಾರಣ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಶಾಲೆಗೆ ಶಾಶ್ವತವಾದ ಸೂರನ್ನು ಕಟ್ಟಿಕೊಟ್ಟ ಕೀರ್ತಿ ಹುಗುಳವಳ್ಳಿ ಶ್ರೀ ರಂಗೇಗೌಡರ ಕುಟುಂಬಕ್ಕೆ ಸಲ್ಲುತ್ತದೆ. ದಾನಗಳಲ್ಲಿ ಅತ್ಯಂತ ಶ್ರೇಷ್ಠದಾನ ವಿದ್ಯಾದಾನ ಎಂಬುದನ್ನು ಮನಗಂಡಿದ್ದ ರಂಗೇಗೌಡರು, ತಮ್ಮ ಸ್ವಂತ ಜಮೀನಿನಲ್ಲಿ ತಮ್ಮದೇ ಸ್ವಂತ ಖರ್ಚಿನಲ್ಲಿ ಕಟ್ಟಿಸಿಕೊಟ್ಟಿದ್ದ ಶಾಲೆಯ ಕಟ್ಟಡ ನಂತರದ ದಿನಗಳಲ್ಲಿ ಅನೇಕ ದಾನಿಗಳು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಈ ಪರಿಯಾಗಿ ದೊಡ್ಡದಾಗಿ ಬೆಳೆದಿದ್ದು, ಈಗಿನ ಆಂಗ್ಲ ಮಾಧ್ಯಮ ಶಿಕ್ಷಣ ಆಕರ್ಷಣೆಯ ನಡುವೆಯೂ ಖಾಸಗೀ ಶಾಲೆಗಳ ಭರಾಟೆಗಳ ಮಧ್ಯೆಯೂ ಈ ಸರ್ಕಾರೀ ಕನ್ನಡ ಶಾಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸುಸ್ಥಿತಿಯಲ್ಲಿರುವುದು ನಿಜಕ್ಕೂ ಹೆಮ್ಮೆ ಪಡುವಂತಹ ವಿಷಯವಾಗಿದೆ.  ಅಷ್ಟೇ ಅಲ್ಲದೇ ಸರ್ಕಾರೀ ಶಾಲೆಯಾಗಿದ್ದರೂ, ಕನ್ನಡ ಮಾಧ್ಯಮದ ಜೊತೆ ಆಂಗ್ಲ ಮಾಧ್ಯಮದ ಶಿಕ್ಷಣವನ್ನೂ ಇಲ್ಲಿ ನೀಡಲಾಗುತ್ತಿರುವುದು ಅತ್ಯಂತ ಗಮನಾರ್ಹವಾದ ಸಂಗತಿಯಾಗಿದೆ.

ಈ ನೂರು ವರ್ಷಗಳಲ್ಲಿ  ಜಾತಿ, ಧರ್ಮ, ಮತ, ಗಂಡು, ಹೆಣ್ಣು ಎಂಬ ಯಾವುದೇ ಬೇಧವಿಲ್ಲದೇ ಕುಡುಮಲ್ಲಿಗೆಯ ಸುತ್ತಲಿನ ಹತ್ತಾರು ಹಳ್ಳಿಗಳ ಲಕ್ಷಾಂತರ ವಿದ್ಯಾರ್ಧಿಗಳಿಗೆ ಜ್ಞಾನವನ್ನು ನೀಡಿರುವ ಈ ಪ್ರಾಥಮಿಕ ಶಾಲೆಯಲ್ಲಿ  ಶಿಕ್ಷಣವನ್ನು ಕಲಿತವರು ಮುಂದೆ ದೊಡ್ಡ ಡಾಕ್ಟರ್, ಇಂಜೀನಿಯರ್, ವಕೀಲರು, ಅಕೌಂಟೆಟ್, ಹಿರಿಯ ಸರ್ಕಾರಿ ಅಧಿಕಾರಿಗಳಾಗಿ  ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದಾರೆ. ಸಾಗರದ ಮುಂದೆ ನಿಂತಿದ್ದರೂ ನಮ್ಮ ಬೊಗಸೆಯಷ್ಟು  ನೀರನ್ನು ಮಾತ್ರವೇ ತೆಗೆದುಕೊಳ್ಳಲು ಸಾಧ್ಯ ಎನ್ನುವಂತೆ, ಈ ಶಾಲೆಯಲ್ಲಿ ಕಲಿತ ಕೆಲವರನ್ನು ನೆನಪಿಸಿಕೊಳ್ಳಬೇಕೆಂದರೆ, ಕರ್ನಾಟಕದ  ಕಂಡ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ  ಮತ್ತು ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿದ್ದ ಶ್ರೀ ಎಸ್. ಎಂ. ಕೃಷ್ಣ ಅವರ ಧರ್ಮಪತ್ನಿ ಶ್ರೀಮತಿ ಪ್ರೇಮ ಕೃಷ್ಣ ಅವರು ಇದೇ ಶಾಲೆಯಲ್ಲೇ ಕಲಿತವರು. ಅದೇ ರೀತಿ ಕರ್ನಾಟಕ ಕಂಡ ಅತ್ಯಂತ ಸೌಮ್ಯ ಗೃಹಮಂತ್ರಿಗಳಾಗಿದ್ದ ಮತ್ತು ಪ್ರಸ್ತುತ ತೀರ್ಥಹಳ್ಳಿಯ ಶಾಸಕರಾದ ಶ್ರೀ ಅರಗ ಜ್ಞಾನೇಂದ್ರ ಅವರ ಮಡದಿ ಶ್ರೀಮತಿ ಪ್ರಫುಲ್ಲಾ ಜ್ಞಾನೇಂದ್ರ ಮತ್ತು ಮಲ್ನಾಡ್ ಪ್ರಾದೇಶಿಕ ಆಭಿವೃದ್ಧಿ ಪ್ರಾಧಿಕಾರ ಮಂಜುನಾಥ್ ಗೌಡರ ಶ್ರೀಮತಿಯವರೂ ಸಹಾ ಕಲಿತಿದ್ದೂ ಇದೇ ಶಾಲೆಯಲ್ಲೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆಯ ಪಾತ್ರ ಇರುತ್ತದೆ ಎಂಬ ಆಂಗ್ಲ ಗಾದೆ ಮಾತಿಗೆ ಈ ಎಲ್ಲಾ ಮಹಿಳಾಮಣಿಗಳೇ ಸಾಕ್ಷಿಗಳಾಗಿದ್ದಾರೆ ಎಂದರೂ ತಪ್ಪಾಗದು.

ಅದೇ ರೀತಿ ಇದೇ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಯೊಬ್ಬರು ಪ್ರಸ್ತುತವಾಗಿ ತುಮಕೂರಿನಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದು ತಮ್ಮದೇ ಆದ ಕಾರ್ಖಾನೆ ಮೂಲಕ  ಮೂಲಕ ಸುಮಾರು 700ಕ್ಕೂ ಅಧಿಕ ಕೆಲಸಗಾರರಿಗೆ ಆಶ್ರಯದಾತರಾಗುವಷ್ಟ್ರ ಮಟ್ಟಿಗೆ ಬೆಳೆದಿದ್ದಾರೆ.  ಇನ್ನು ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯಲ್ಲಿ ಹಾಸ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡು ನಂತರದ ದಿನಗಳಲ್ಲಿ ಯಾವುದೇ ಪಾತ್ರ ಕೊಟ್ಟರೂ ಪಾತ್ರದಲ್ಲಿ ಪರಕಾಯ ಪ್ರವೇಶಮಾಡಿ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಹುಲಿ ಕಾರ್ತಿಕ್ ಸಹಾ ತೀರ್ಥಹಳ್ಳಿಯ ಚಿಕ್ಕಳ್ಳಿಯವರಾಗಿದ್ದೂ ಅವರೂ ಸಹಾ  ಇದೇ ಶಾಲೆಯಲ್ಲಿ ಕೆಲ ಕಾಲ ಸಮಯ ಕಳೆದಿದ್ದಾರೆ. ಆನಂತರ  ಗಿಚ್ಚಿ ಗಿಲಿ ಗಿಲಿ ಎಂಬ ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ  ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದು ಈಗ ಕಿರುತೆರೆ ಮತ್ತು ಸಿನಿಮಾಗಳಲ್ಲಿಯೂ ಸಹಾ ವೈವಿಧ್ಯಮಯ ಪಾತ್ರಗಳಲ್ಲಿ  ನಟಿಸುತ್ತಿರುವುದು ಗಮನಾರ್ಹವಾಗಿದೆ.

ಇನ್ನು ಈ ಶಾಲೆಯಲ್ಲಿ ಪಾಠ ಮಾಡಿದ ಅನೇಕ ಶಿಕ್ಷಕರುಗಳು ವರ್ಗಾವಣೆಯಾಗಿ ಬೇರೆ ಊರಿಗಳಿಗೆ ಹೋದರೂ ಸಹಾ ಈ ಕುಡುಮಲ್ಲಿಗೆಯ ಮತ್ತು ಅವರ ಕಲಿಸುತ್ತಿದ್ದ  ಶಾಲೆಯ ನಂಟನ್ನು ಬಿಟ್ಟಿರಲಾಗದೇ, ಸಮಯ ಸಿಕ್ಕಾಗಲೆಲ್ಲಾ ಬಂದು ಹೋಗುವುದೋ ಇಲ್ಲವೇ ಪರಿಚಯಸ್ಥರ ಬಳಿ ಸಾಲೆಯ ಆಗು ಹೋಗುಗಳ ಕುರಿತಾಗಿ ವಿಚಾರಿಸುತ್ತಾರೆ ಎಂದರೆ  ಈ ಶಾಲೆಯ ಆಕರ್ಶಣೆ ಯಾವ ಪರಿ ಎಂದು ಅರ್ಥವಾಗುತ್ತದೆ.

 

ಹೀಗೆ  ಒಂದು ನೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಶಾಲೆಯನ್ನು ಮುಂದಿನ ಪೀಳಿಗೆಯವರಿಗೂ ಉಳಿಸಿಕೊಂಡು ಹೋಗುವ ಸಂಕಲ್ಪವನ್ನು ತೊಟ್ಟ ಇದೇ ಶಾಲೆಯಲ್ಲಿ ಕಲಿತ ಕೆಲವು ಯುವಕರುಗಳು ಈ ಶಾಲೆಯನ್ನು ಮಾದರೀ ಶಾಲೆಯನ್ನಾಗಿರುವ ನೀಲನಕ್ಷೆಯನ್ನು ತಯಾರಿಸಿ ನಾನು ಕಲಿತ ಶಾಲೆಗ ನನ್ನದೊಂದು ಕೊಡುಗೆ ಎಂಬ ಅಭಿಯಾನವನ್ನು ಆರಂಭಿಸಿ, ಶಾಲೆಗೆ ಆವಶ್ಯಕವಿರುವ ವಸ್ತುಗಳ ಪಟ್ಟಿಯನ್ನು ತಯಾರಿಸಿ  ಈ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳಿಂದ ಸಹಾಯವನ್ನು ಕೋರುತ್ತಿದ್ದಾರೆ.  ಅದಕ್ಕಾಗಿಯೇ ಈ ಹಿಂದೆ ಇದೇ ಶಾಲೆಯಲ್ಲಿ ಓದಿದವರ ಸುಮಾರು 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಮಾಹಿತಿ ದೊರೆತಿದ್ದು ಅವರೆಲ್ಲರನ್ನೂ ಅವರ ಓದಿದ ವರ್ಷ ಮತ್ತು ಊರಿನ ಅನುಗುಣವಾಗಿ ವಿಂಗಡನೆ ಮಾಡಿದ್ದು ಅವರ ಮೂಲಕ  ಅವರೊಂದಿಗೆ ಓದಿದವರ ಮಾಹಿತಿಗಳನ್ನು ಕಲೆಹಾಕಿ ಎಲ್ಲರಿಗೂ ಈ ಮಹತ್ತರ ಕಾರ್ಯದವನ್ನು ತಿಳಿಸಿ ಅವರೆಲ್ಲರೂ ಭಾಗಿಗಳಾಗುವಂತೆ ಕೋರಿರುವುದು ಅತ್ಯಂತ ಸಂತಸದ ವಿಷಯವಾಗಿದೆ.

ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ ಎಂಬ ಶೀರ್ಷಿಕೆ ಅಡಿಯಲ್ಲಿ ತಮ್ಮ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಹಿನ್ನಲೆಯಲ್ಲಿ ಮೂರು ಉದ್ದೇಶಗಳನ್ನು ಹೊಂದಿದ್ದು ಸಂಗ್ರಹವಾದ ಹಣವನ್ನು ಈ ರೀತಿಯಾಗಿ ವಿನಿಯೋಜಿಸಲು ನಿರ್ಧರಿಸಲಾಗಿದೆ.

  • ವಿಜೃಂಭಣೆಯಿಂದ ಶತಮಾನೋತ್ಸವದ ಆಚರಣೆಗೆ 25% ಮೀಸಲು
  • ಮಾದರಿ ಶಾಲೆಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ 25% ಮೀಸಲು
  • ಉಳಿದ 50% ಹಣವನ್ನು ಶತಮಾನೋತ್ಸವ ದತ್ತಿ ನಿಧಿ ಎಂಬ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಶಾಲೆಯನ್ನು ಮುನ್ನಡೆಸಬೇಕು ಎಂಬ ಸುಂದರ ಕಲ್ಪನೆಯನ್ನು ಹಾಕಿಕೊಂಡಿದ್ದಾರೆ.

ಈ ರೀತಿಯಾದ ಶತಮಾನೋತ್ಸವದ ಆಚರಣೆಗೆ ಸುಮಾರು  ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಉದ್ದೇಶವನ್ನು ಹೊಂದಿದ್ದು, ಶತಮಾನೋತ್ಸವ ದತ್ತಿನಿಧಿ ಕೊಡುವವರು 50,000 ಮೇಲ್ಪಟ್ಟು ಎಷ್ಟಾದರೂ ತಮ್ಮ ಹೆಸರಿನಲ್ಲಾಗಲೀ ಅಥವಾ ತಮ್ಮ ತಂದೆ ತಾಯಿ, ಇಲ್ಲವೇ ಅಜ್ಜನ ಹೆಸರಿನಲ್ಲಿ ಇಲ್ಲವೇ ಅವರ ಕುಟುಂಬದ  ಹೆಸರಿನಲ್ಲಿ ನೀಡಲು ಕೋರಲಾಗಿದೆ. 10 ಸಾವಿರಕ್ಕೂ ಅಧಿಕ ಮೊತ್ತವನ್ನು ಕೊಟ್ಟವರ ಹೆಸರುಗಳನ್ನು ಶಾಶ್ವತವಾಗಿ ಶಾಲಾ ಫಲಕದ ಮೇಲೆ ಹಾಕಿಸಲೂ ಸಹಾ ನಿರ್ಧರಿಸಲಾಗಿದೆ. ಈ ರೀತಿಯಾಗಿ ನೇರವಾಗಿ ಹಣವನ್ನು ನೀಡಲು ಸಾಧ್ಯವಾಗದೇ ಹೋದಲ್ಲಿ, ಶಾಲೆಗೆ ಅಗತ್ಯವಿರುವ ಯಾವುದೇ ವಸ್ತುವನ್ನು ಬೇಕಾದರೂ ನೀಡಬಹುದಾಗಿದೆ.  ಇದು ಕೇವಲ ಶಾಲೆಯ ಹಿರಿಯ ವಿದ್ಯಾರ್ಥಿಗಳಿಗಷ್ಟೇ ಮೀಸಲಾಗದೇ, ವಿದ್ಯಾದಾನ ಮಹಾದಾನ ಎಂದು ಪರಿಭಾವಿಸಿ  ಇತರೇ ದಾನಿಗಳಿಂದಲು ಸಹಾ ದೇಣಿಕೆಯನ್ನು ಸಂಗ್ರಹಿಸಲು ಕೋರಲಾಗಿದೆ.

ಇಷ್ಟು ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿ ಅದು ಎಲ್ಲಿಯಾದರೂ ದುರುಪಯೋಗವಾಗಬಹುದುದು ಎಂಬ ಆತಂಕ ಅನೇಕರಲ್ಲಿ ಮನೆ ಮಾಡಿ,  ಅಂತಹವರು ದಾನ ಮಾಡಲು ಹಿಂದೇಟು ಹಾಕಬಹುದು  ಎಂಬ ವಿಷಯವನ್ನು ಮನಗಂಡ ಆಯೋಜಕರು, ಈ ವಿಷಯದಲ್ಲಿ ಸಂಪೂರ್ಣವಾದ ಪಾರದರ್ಶಕತೆಯನ್ನು ತಂದಿದ್ದು, ದಾನಿಗಳು ಯಾವೇದೇ ರೀತಿಯಲ್ಲಿ  ಕೊಟ್ಟಂತಹ ಹಣ/ ವಸ್ತುಗಳು  ದುರುಪಯೋಗ ಆಗಬಾರದು ಎಂಬ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ದು, ನಗದು ರೂಪದ ಬದಲಾಗಿ ನೇರವಾಗಿ ಅಕೌಂಟ್ ಮುಖಾಂತರವೇ ತೆಗೆದುಕೊಳ್ಳುವ ಮೂಲಕ ಪ್ರತಿಯೊಂದು ರೂಪಾಯಿ ಹಣಕ್ಕೂ ಲೆಖ್ಖವನ್ನು ಇಡಲಾಗಿದೆ.

ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ ನೀಡಲು ಇದೊಂದು ಸುಸಂದರ್ಭ. ಎಲ್ಲರೂ ಒಟ್ಟಾಗಿ ಸೇರಿದಾಗಲೇ ತಾವು ಓದಿದ ಶಾಲೆಯನ್ನು  ಒಂದು ಮಾದರಿ ಶಾಲೆಯನ್ನಾಗಿ ಮಾಡಿ ಮುನ್ನಡೆಸಲು ಸಾಧ್ಯ ಎಂಬ ಸುಂದರ ಕಲ್ಪನೆಗೆ ಈಗಾಗಲೇ ಅನೇಕ ಹೃದಯವಂತರು ಮುಂದಾಗಿದ್ದು  ಯಥಾ ಶಕ್ತಿ ತನು ಮನ ಧನಗಳ ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಶಾಲೆಯ ಶತಮಾನೋತ್ಸವ  ಆಚರಣಾ ಸಮಿತಿಗೆ ಎಲ್ಲರೀತಿಯ ಸಹಾಯವನ್ನು ನೀಡುತ್ತಿದ್ದಾರೆ. ಇನ್ನೂ ಅನೇಕರು ಕುಡುಮಲ್ಲಿಗೆಯ ಸುತ್ತಮುತ್ತಲಿನ ಹಳ್ಳಿಗಳ  ಮನೆ ಮನೆಗಳಿಗೆ ಎಡತಾಕಿ ಅವರಿಗೆ ಈ ಮಹತ್ತರವಾದ ಕಾರ್ಯವನ್ನು ವಿವರಿಸಿದ್ದು ಅವರೆಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರು ಕೊಟ್ಟಂತಹ ದಾನವನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದಾರೆ.

ಕುಡುಮಲ್ಲಿಗೆ ಶಾಲೆಯ ಶತಮಾನೋತ್ಸವದ ಕಾರ್ಯಕ್ರಮವು ಇದೇ 2025ರ ಏಪ್ರಿಲ್ ತಿಂಗಳ 11, 12 ಹಾಗೂ 13 ರಂದು ಮೂರು ದಿನಗಳ ಕಾಲ ಅದ್ದೂರಿಯಾಗಿ ಮತ್ತು ಅಷ್ಟೇ ಅರ್ಥ ಪೂರ್ಣ ಸುಂದರವಾದ ಸಮಾರಂಭವನ್ನು ಆಯೋಜಿಸಿದ್ದಾರೆ. ಈ ಸಮಾರಂಭದಲ್ಲಿ ಶಾಲೆಯ ಮುಂದಿನ ಒಂದು ದಶಕದ ನೀಲ ನಕ್ಷೆಯನ್ನು ಎಲ್ಲರ ಮುಂದೆ ತೆರೆದಿಟ್ಟು ಅದನ್ನು ಸಾಕಾರಗೊಳಿಸಲು ಎಲ್ಲರ ಸಲಹೆ, ಸೂಚನೆಗಳು ಮತ್ತು ಸಹಾಯವನ್ನು ಕೋರುವುದರ ಜೊತೆಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಒಂದು ಕಡೆ ಒಗ್ಗೂಡಿಸಿ ಅವರ ಸವಿ ಸವಿ ನೆನಪು ಸಾವಿರ ನನಪುಗಳ ಬುತ್ತಿಯನ್ನು ಬಿಚ್ಚಿಡಲು ಮುಂದಾಗಿದ್ದಾರೆ. ಅದೇ ಸಮಯದಲ್ಲಿ ಈ ಶಾಲೆಯಲ್ಲಿ ಪಾಠವನ್ನು ಹೇಳಿಕೊಟ್ಟ ಕೆಲವು ಹಿರಿಯ ಶಿಕ್ಷಕರಿಗೆ ಗೌರವ ಸಮರ್ಪಣೆ ಗುರುವಂದನಾ ಕಾರ್ಯಕ್ರಮದ ಜೊತೆ, ನೂತನವಾಗಿ ನಿರ್ಮಿಸಲಾಗಿರುವ ರಂಗಮಂದಿರ ಉದ್ಭಾಟನೆ, ವಸ್ತು ಪ್ರದರ್ಶನ, ವಿಚಾರ ಸಂಕೀರ್ಣದ ಜೊತೆಗೆ ಪ್ರಸ್ತುತ ಇದೇ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ಈ ಹಿಂದೆ ಕಲಿತಂತಹ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೇ, ಗ್ರಾಮೀಣ ಕ್ರೀಡಾಕೂಟ, ಹಾಸ್ಯ ನಾಟಕಗಳ ಜೊತೆ ಜನಪ್ರಿಯ ಗಿಚ್ಚಿ ಗಿಲಿ ತಂಡದಿಂದ ಹಾಸ್ಯಕಾರ್ಯಕ್ರಮ ಮತ್ತು ಮಜಾ ಟಾಕೀಸ್ ಖ್ಯಾತಿಯ ಗಾಯಕಿ ರೇಮೋ ಅವರ ತಂಡದಿಂದ ಸಂಗೀತ ನೃತ್ಯ ರಸಮಂಜರಿಯಂತಹ ಭರಪೂರ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕುಡುಮಲ್ಲಿಗೆ ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಗ್ರಾಮದವರು ಹೆಚ್ಚಿನ ಸಂಖ್ಯೆಯಲ್ಲಿ ಮೂರೂ ದಿನಗಳ ಕಾಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಡುಮಲ್ಲಿಗೆ ಸರ್ಕಾರೀ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

ಕೇವಲ 1 ಕೊಠಡಿ. ಮತ್ತು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಆರಂಭಗೊಂಡಿರುವ ಶಾಲೆ ಇಂದು 100 ವರ್ಷಗಳಲ್ಲಿ ಹಲವು ಏಳು ಬೀಳುಗಳ ನಡುವೆಯೂ ಪ್ರಸ್ತುತ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಆಲಯವಾಗಿದೆ. ಇಂದಿನ ಆಧುನಿಕ ಶಿಕ್ಷಣಕ್ಕೆ ಅಗತ್ಯವಿರುವ ಸ್ಮಾರ್ಟ್ ಕ್ಲಾಸ್/ಸ್ಮಾರ್ಟ್ ಬೋರ್ಡ್, ವಿದ್ಯುತ್ ವ್ಯತ್ಯಯವಗದಂತೆ ನಿರಂತವಾಗಿರಿಸುವಂತಹ ಯುಪಿಎಸ್, ಮಕ್ಕಳಿಗೆ ಕುಡಿಯಲು ಶುಧ್ಧೀಕರಿಸಿದ ನೀರು, ಉತ್ತಮ ನೈರ್ಮಲ್ಯ ಹೊದಿರುವ ಶೌಚಾಲಯ, ಒಳ್ಳೆಯ ಪುಸ್ತಕಗಳಿರುವ ಗ್ರಂಧಾಲಯ, ಗಣಕಯಂತ್ರಗಳು, ಕೈತೋಟದ ಅಭಿವೃದ್ಧಿ, ಮಕ್ಕಳಿಗೆ ಸುಸಜ್ಜಿತ ಆಟದ ಮೈದಾನ ಹೀಗೆ ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಸಾಕಾರ ಗೊಳಿಸುವ ಕನಸನ್ನು ಹೊತ್ತಿದ್ದಾರೆ.

 

ಇವೆಲ್ಲವೂ ಕೇವಲ ಏಕ್ ದಿನ್ ಕಾ ಸುಲ್ತಾನ ಎನ್ನುವಂತೆ ಕೇವಲ ಶತಮಾನೋತ್ಸವ ದಿನ ಅಥವಾ ವರ್ಷಕ್ಕೆ ಮಾತ್ರವೇ ಸೀಮಿತವಾಗದೇ ಇದೇ ಯೋಜನೆ ಶಾಶ್ವತವಾಗಿ ಮುಂದುವರೆಸಿಕೊಂಡು ಹೋಗುವ ದೃಷ್ಟಿಯಿಂದ ಒಂದು ಉತ್ತಮ ಮೊತ್ತದ ಶಾಶ್ವತ ಪುದುವಟ್ಟನ್ನು ಬ್ಯಾಂಕ್ ನಲ್ಲಿ ಇರಿಸಿ ಅದರಿಂದ ಬರುವ ಆದಾಯದಿಂದ ನಿರಂತವಾಗಿ ಶಾಲಾ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವ ಈ ಕಲ್ಪನೆಗೆ ಎಲ್ಲರ ಸಹಕಾರ ಕೋರುತ್ತಿದ್ದಾರೆ,  ಸಂಪತ್ತು ಎನ್ನುವುದು ಕ್ಷಣಿಕವಾಗಿದ್ದು ಅದು ಒಂದು ಕ್ಷಣದಲ್ಲಿ ಕ್ಷೀಣವಾಗ ಬಹುದು ಅಥವಾ ಯಾರೋ ಕದ್ದೊಯ್ಯಬಹುದು. ಆದರೆ ವಿದ್ಯೆ/ಜ್ಞಾನ ಎಂಬ ಸಂಪತ್ತು  ಎಂದಿಗೂ ಕರಗದು ಮತ್ತು ಕದಿಯಲಾಗದು ಹಾಗಾಗಿ ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಸೇರಿದರೆ ಬಳ್ಳ ಎನ್ನುವ ಮಾತಿನಂತೆ  ನಾವೂ ನೀವು ನೀಡುವ ಒಂದೊಂದು ರೂಪಾಯಿಯೂ ಸಹಾ ನಮ್ಮ  ಮುಂದಿನ ತಲೆಮಾರಿನ ಮಕ್ಕಳ ಭವಿಷ್ಯಕ್ಕೆ ಹಾಕುವ ಬುನಾದಿಯಾಗುವ ಕಾರಣ, ಈ  ಅಕೌಂಟಿಗೆ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡೋಣ ಅಲ್ವೇ? ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಪ್ರಜೆಗಳು ಅವರನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮ ನಿಮ್ಮ ಮೇಲೆಯೇ ಇದೇ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

 

Leave a comment