ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ

ನಮ್ಮ ಸನಾತನ ಧರ್ಮದಲ್ಲಿ ದೇವನೊಬ್ಬ ನಾಮ ಹಲವು ಎಂದು ಸಾರಿ ಸಾರಿ ಅನೇಕ ಧರ್ಮಗುರುಗಳು ಹೇಳಿದ್ದರೂ,  ಅವರ  ಅನುಯಾಯಿಗಳು ಮಾತ್ರಾ,  ನಮ್ಮ ಹರಿಯನ್ನು ಬಿಟ್ಟರೆ ಬೇರೆ ಇನ್ನು ಯಾವ ದೈವ ಇಲ್ಲ. ಹರಿಯೇ ಸರ್ವೋತ್ತಮ ಎಂದರೆ, ಇನ್ನು ಕೆಲವರು ಹರನನ್ನು ಬಿಟ್ಟು ಅನ್ಯದ್ಯೆವವೇ ಇಲ್ಲಾ. ಹರನೇ ಸಕಲ ಜೀವರಾಶಿಗಳನ್ನು ಪೊರೆಯುವವನು ಎಂದೂ ಹೇಳುತಾರೆ. ಈ ರೀತಿಯ ಜಿಜ್ಞಾಸೆಗಳನ್ನು ಹೋಗಲಾಡಿಸುವ ಸಲುವಾಗಿಯೇ  ಬೆಣ್ಣೆ ನಗರಿ ದಾವಣಗೆರೆಯಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಹರಿಹರದಲ್ಲಿ  ದಕ್ಷಿಣ ಕಾಶಿ ಎಂದೂ ಕರೆಯಲ್ಪಡುವ  ಹರಿಹರೇಶ್ವರ, ಪುಷ್ಪಾದ್ರಿ, ಹರಿಶಿನಾಚಲ ಮತ್ತು ಬ್ರಹ್ಮಾದ್ರಿ ಬೆಟ್ಟಗಳಿಂದ ಸುತ್ತುವರೆದಿರುವ ಶ್ರೀ ಹರಿಹರೇಶ್ವರ ಸ್ವಾಮಿಯ ದೇವಸ್ಥಾನವು ಈ ಪ್ರದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.   ಹರಿ ಮತ್ತು ಹರ ಇಬ್ಬರ ಸಮಾಗಮದಿಂದ ಹರಿಹರೇಶ್ವರ ದೇವಾಲಯವೂ ಪ್ರಾಚೀನ ಕಾಲದಿಂದಲೂ ಇದ್ದು, ಆ ಸುಂದರ ದೇವಾಲಯವನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ಮಾಡೋಣ ಬನ್ನಿ.

ದಾವಣಗೆರೆ ಜಿಲ್ಲೆಯ ಹರಿಹರ  ಬಹಳ ಪ್ರವಿತ್ರವಾದ ಯಾತ್ರಾಸ್ಥಳವಾಗಿದ್ದು  ಅಲ್ಲಿನ ದೇವಾಲಯದ ಶಾಸನದಲ್ಲೇ ಇರುವಂತೆ  ಈ ಊರನ್ನು ಹರೀಶಪುರ, ಗುಹಾರಣ್ಯ ಕ್ಷೇತ್ರ, ಕೂಡಲೂರು, ಕೂಡೂರು, ಹರಿಹರ ಎಂದು ಕರೆಯಲಾಗುತ್ತದೆ.  ಹರಿ ಮತ್ತು ಹರರು ಕೂಡಿ ಹರಿಹರೇಶ್ವರ ಆಗಿರುವುದರಿಂದ ಈ ಊರಿಗೆ ಹರಿಹರ ಎಂಬ ಹೆಸರು ಬಂದಿರಬಹುದು ಎಂದು ಸುಲಭವಾಗಿ ಹೇಳಬಹುದು. ಅದೇ ರೀತಿಯಲ್ಲಿ  ಹರಿಹರರು ಸಮಾಗಮವಾಗಿರುವ ಊರಿಗೆ ಹರೀಶಪುರ ಎಂಬ ಹೆಸರು ಬಂದಿರಬಹುದು. ಇನ್ನು  ಗುಹಾಸುರ ಎಂಬ ರಾಕ್ಷಸನು ಈ ಪ್ರದೇಶದಲ್ಲಿದ್ದ ಕಾರಣ ಇದಕ್ಕೆ ಗುಹಾರಣ್ಯ ಕ್ಷೇತ್ರ ಎಂಬ ಹೆಸರು ಬಂದಿದ್ದರೆ, ಇಲ್ಲಿ ಹರಿಯುವ ತುಂಗಭದ್ರಾ ನದಿಗೆ  ಅಲ್ಲೇ ಸಮೀಪದಲ್ಲೇ  ಮತ್ತೊಂದು ಉಪನದಿಯಾದ ಹರಿದ್ರಾ ನದಿ ಸೇರುವುದರಿಂದ ಇದಕ್ಕೆ ಕೂಡೂರು ಅಥವಾ  ಕೂಡಲೂರು ಎಂಬ ಹೆಸರು  ಬಂದಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಇನ್ನು ದಂತಕಥೆಯೊಂದರ  ಪ್ರಕಾರ  ಗುಹ ಎಂಬ ರಾಕ್ಷಸನು ಇದೇ ಸ್ಥಳದಲ್ಲಿ  ಬ್ರಹ್ಮನ ಕುರಿತಾಗಿ ಕಠೋರವಾದ ತಪಸ್ಸನ್ನು ಮಾಡಿ ಆತನನ್ನು ಒಲಿಸಿಕೊಂದು,  ದೇವಾನು ದೇವತೆಗಳಲ್ಲಿ ಅಗ್ರಗಣ್ಯರಾದ  ಶಿವ (ಹರ) ಅಥವಾ ವಿಷ್ಣು (ಹರಿ) ಇಬ್ಬರಿಂದಲೂ ಪ್ರತ್ಯೇಕವಾಗಿ ತನ್ನನ್ನು ನಾಶ ಮಾಡದೇ ಇರುವಂತಾಗಲಿ ಎಂದು ಕೋರಿ ಕೊಂಡಿದ್ದಕ್ಕೆ ಬ್ರಹ್ಮ ದೇವನೂ ತಥಾಸ್ತು ಎಂದಿದ್ದೇ ತಡಾ, ಗುಹ ಬಹಳ ಅಟ್ಟಹಾಸದಿಂದ ಪ್ರಜಾಪೀಡಕನಾಗಿದ್ದಲ್ಲದೇ ಆಗ್ಗಾಗ್ಗೆ ದೇವತೆಗಳ ಮೇಲೂ ಹರಿಹಾಯುತ್ತಿದ್ದದ್ದನ್ನು ತಡೆಯಲಾರದೇ, ಬ್ರಹ್ಮನೂ  ಸೇರಿದಂತೆ ದೇವಾನು ದೇವತೆಗಳೆಲ್ಲರೂ ಗುಹನನ್ನು ಸಂಹರಿಸಬೇಕೆಂದು ಹರಿ ಮತ್ತು ಹರನಲ್ಲಿ  ಕೇಳಿಕೊಂಡಾಗ,  ಬ್ರಹ್ಮನ ವರವನ್ನು ನೆನಪಿಸಿಕೊಂಡ  ಹರಿ ಮತ್ತು ಹರರು ಅವರಿಬ್ಬರೂ ಸೇರಿಕೊಂಡು ಹರಹರಿರಾಗಿ  ಸಮಾಗಮಗೊಂಡು ಗುಹ ಎಂಬ ರಾಕ್ಷಸನನ್ನು ನಾಶಮಾಡಿದ ಫಲವಾಗಿ ಇಲ್ಲಿ ಹರಿಹರೇಶ್ವರ ದೇವಾಲಯಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ.

 

 

ಇಂತಹ ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಹೊಯ್ಸಳ ರಾಜವಂಶದ ರಾಜ ವೀರ ನರಸಿಂಹ II ರ ಸೇನಾಧಿಪತಿ ಮತ್ತು ಮಂತ್ರಿಯಾಗಿದ್ದ ಪೋಲವ ದೇವನು 1224 CE ರಲ್ಲಿ ಹರಿಹರೇಶ್ವರ ಈ ದೇವಾಲಯವನ್ನು ನಿರ್ಮಿಸಿದನು ಎಂದು ಹೇಳಲಾದರೇ, ರಾಜ ನರಸಿಂಹ IIIರ ಕಾಲ 1268 CE ರಲ್ಲಿೀ ದೇವಾಲಯವನ್ನು ಮತ್ತಷ್ಟು ನವೀಕರಿಸಲಾಯಿತು ಎನ್ನಲಾಗುತ್ತದೆ. ನಂತರದ ದಿನಗಳಲ್ಲಿ  ಮೊಘಲರ ಧಾಳಿಗೆ ತುತ್ತಾಗಿ  ತೀವ್ರವಾಗಿ  ಈ ದೇವಾಲಯ  ಹಾನಿಗೊಳಗಾದಾಗ,  ವಿಜಯನಗರ ಸಾಮ್ರಾಜ್ಯರ  ಕಾಲದಲ್ಲಿ ಈ ದೇವಾಲಯವ ಮತ್ತಷ್ತು ನವೀಕರಣಗೊಂಡಿತು. ಈ ದೇವಾಲಯವನ್ನು ಹಾಳು ಗೆಡವುದರಲ್ಲಿ ಟಿಪ್ಪುವಿನ ಪಾತ್ರವೂ ಇರುವುದು ನಿಜಕ್ಕೂ ಶೋಚನೀಯವಾಗಿದೆ.  ಹೀಗೆ ಪದೇ ಪದೇ ಪರಕೀಯರ ದಾಳಿಗೆ ಸಿಕ್ಕು ನಲುಗಿ  ಅಲ್ಲಲ್ಲಿ ದೇವಾಲಯದ ಹೊರಗೋಡೆಯ ಶಿಲ್ಪಗಳು ಭಿನ್ನಗೊಂಡಿದ್ದರೂ  ಸಕಲ  ಆಸ್ತಿಕರ ಸಂರಕ್ಷಣೆಯಿಂದ  ಇಂದಿಗೂ ಈ ದೇವಾಲಯ ತಕ್ಕ ಮಟ್ಟಿಗೆ ಸುಭದ್ರವಾಗಿರುವುದು ಮೆಚ್ಚ ತಕ್ಕಂತಹದ್ದಾಗಿದೆ.

ಹೊಯ್ಸಳರ ಬೇಲೂರು ಮತ್ತು ಹಳೇ ಬೀಡು  ದೇವಾಲಯಗಳಲ್ಲಿ ಇರುವಂತೆಯೇ ಈ ದೇವಾಲಯವೂ ಅತ್ಯಂತ ಸುಂದರವಾದ ಶಿಲ್ಪಕಲೆಯಿಂದ  ಕೂಡಿದ್ದು, ಇಡೀ ದೇವಾಲಯವನ್ನು ಸುಮಾರು ಅರವತ್ತೆಂಟು ಕಂಬಗಳ ಸಹಾಯದಿಂದ ನಿರ್ಮಾಣ ಮಾಡಲಾಗಿದೆ.  ಇಂದಿನ ಆಧುನಿಕ ತಂತ್ರಜ್ಞಾನಕ್ಕೂ ಸವಾಲು ಹಾಕುವಂತೆ ಅಲ್ಲಿನ ಕಂಬಗಳು ನುಣುಪಾಗಿ ಮತ್ತು  ಸೌಂದರ್ಯಯುತವಾಗಿದ್ದು, ಅಂದು ನಿಸ್ಸಂದೇಹವಾಗಿ ಆ  ಕಂಬಗಳನ್ನು ಕೆತ್ತಿರುವ ಶಿಲ್ಪಿಗಳ ಕೈಚಳಕವನ್ನು ಎತ್ತಿ ತೋರಿಸುತ್ತದೆ.  ಈ ರಂಗಮಂಟಪದಲ್ಲಿ ನೂರಾರು ಮಂದಿ ಕುಳಿತುಕೊಂಡು ಮಧ್ಯಭಾಗದಲ್ಲಿ  ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನೋಡುವಷ್ಟರ ಮಟ್ಟಿಗಿದ್ದು, ಹೊಯ್ಸಳರ ವಾಸ್ತುಶಿಲ್ಪಕ್ಕೆ ಇದೊಂದು ಮಾದರಿಯಾಗಿದೆ ಎಂದರೂ ತಪ್ಪಾಗದು.

ದೇವಾಲಯದ ಮುಂದುಗಡೆಯ ಬಲಭಾಗದಲ್ಲಿ ಕಂಬದ ಆಂಜನೇಯನಿಗೆ ನಮಸ್ಕರಿಸಿಕೊಂಡು ಒಳಗೆ ಹೋಗುತ್ತಿದ್ದಂತೆಯೇ  ದೇವಾಲಯ ಸಂಕೀರ್ಣದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರವೇಶ ದ್ವಾರಗಳಿವೆ. ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಎಡ ಮತ್ತು ಬಲ ಭಾಗದಲ್ಲಿ  ಬನಶಂಕರಿ ದೇವಾಲಯದ ಮುಂಭಾಗದಲ್ಲಿರುವ ದೀಪದ ಕಂಭದಂತೆ   ಎರಡು ದೀಪ ಸ್ತಂಭಗಳು (ದೀಪ ಕಂಬಗಳು) ಇದ್ದು ಅವುಗಳು ನೋಡಲು ನಯನ ಮನೋಹರವಾಗಿದೆ.  ಗರ್ಭಗುಡಿಯ ಕಡೆಗೆ ಮುಖ ಮಾಡಿರುವ ಕುಳಿತ ಭಂಗಿಯಲ್ಲಿ ಗರುಡ ಮತ್ತು ನಂದಿಯೂ ಸಹಾ ಇದ್ದಾರೆ. ಹರಿಹರೇಶ್ವರ ದೇವಾಲಯದಲ್ಲೂ ಹೊಯ್ಸಳರ ಶೈಲಿಯಂತೆ  ಗರ್ಭಗುಡಿ, ಅಂತರಾಳ ಮತ್ತು ನವರಂಗವನ್ನು ಹೊಂದಿದ್ದು, ಮೂರು ಪ್ರವೇಶದ್ವಾರಗಳು ಮತ್ತು ಮುಖ ಮಂಟಪವನ್ನು ಹೊಂದಿದೆ. ಮೂಲ ವಿಮಾನ ಗೋಪುರ ಧಾಳಿಯಿಂದ ನಾಶವಾದ ಕಾರಣ  ನಂತರದ ದಿನಗಳಲ್ಲಿ ಇಟ್ಟಿಗೆ ಮತ್ತು ಗಾರೆಗಳಿದ ನವೀಕರಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಅತ್ಯಂತ ನಯನಮನೋಹರ ವಿಸ್ತಾರವಾದ ನವರಂಗವನ್ನು ಹೊಂದಿದ್ದು ಅದಕ್ಕೆ  ಉತ್ತರ ಮತ್ತು ದಕ್ಷಿಣದಲ್ಲಿ ಪ್ರವೇಶದ್ವಾರಗಳು ಇದ್ದು,  ಉತ್ತರದ ಮುಖಮಂಟಪವು ಸ್ವಲ್ಪ ವಿಸ್ತರಿಸಲ್ಪಟ್ಟಿದ್ದು,  ಮತ್ತೊಂದು ದೇವಾಲಯದ ಅಂತರಾಳವಾಗುತ್ತದೆ . ನವರಂಗದ ದ್ವಾರವು ಹೆಚ್ಚು ಅಲಂಕೃತವಾಗಿದ್ದರೂ, ಅಂತರಾಳ  ಮತ್ತು  ಗರ್ಭಗೃಹದ ಪ್ರವೇಶ ದ್ವಾರಗಳು  ತುಂಬಾ ಸರಳವಾಗಿದೆ. ಅಲ್ಲಿರುವ ೬೮ ಕಂಬಗಳನ್ನು  ಇಂದಿನ ಕಾಲದ ಲೇತ್ ಯಂತ್ರಗಳನ್ನು ಬಳಸಿಯೂ ಅಷ್ಟು ನಿಖರವಾದ ಮತ್ತು ನಯವಾದ ಕಂಬಗಳು ನಿರ್ಮಿಸುವುದು ಅಸಾಧ್ಯ ಎನಿಸಿಕೊಳ್ಳುವಾಗ ಅಂದಿನ ಕಾಲದಲ್ಲೇ  ಒಂದಕ್ಕೊಂದು ವಿಭಿನ್ನ ರೀತಿಯಿರುವ ಕಂಬಗಳು ಎಲ್ಲರ ಮನಸ್ಸನ್ನು ಸೆಳೆಯುತ್ತವೆ. ದೇವಾಲಯದ ಸತ್ತಲೂ ವಿವಿಧ ದೇವಾನು ದೇವತೆಗಳು, ಮಂಗಳಕರ ಹಿಂದೂ ಪ್ರತಿಮಾಶಾಸ್ತ್ರ, ಎಲೆಗಳು ಮತ್ತು ಹೂವಿನ ಲಕ್ಷಣಗಳು ಮತ್ತು ಚಿಕಣಿ ಗೂಡುಗಳೊಂದಿಗೆ ಸಂಕೀರ್ಣವಾಗಿ ಕೆತ್ತಿದ ಗೋಡೆಯ ಪ್ಯಾರಪೆಟ್‌ಗಳನ್ನು ಹೊಂದಿರುವ ಸಭಾ ಮಂಟಪವು ಒಂದು ದೃಶ್ಯ ಕಾವ್ಯವಾಗಿದೆ ಎಂದರೂ ತಪ್ಪಾಗದು  ದ್ವಾರದ ಲಿಂಟಲ್‌ನಲ್ಲಿ ಗಜಲಕ್ಷ್ಮಿಯನ್ನು ನೋಡಬಹುದಾಗುದ್ದು ಐದು ಗೋಪುರಗಳು ಗಜಲಕ್ಷ್ಮಿಯ ಕೆತ್ತನೆಯನ್ನು ಅಲಂಕರಿಸುತ್ತವೆ. ನಾಲ್ಕು ಭಾರವಾದ ಕಂಬಗಳು ನವರಂಗದ ಛಾವಣಿಯನ್ನು ಬೆಂಬಲಿಸುತ್ತವೆ. ಇನ್ನು  ಛಾವಣಿಯಲ್ಲಿಯೂ ಸಹಾ ಅದ್ಭುತವಾದ ಕೆತ್ತನೆಗಳಿದ್ದು ಅದು  ಹಿಮ್ಮುಖ ಛಾವಣಿ ವಿನ್ಯಾಸಗಳಾಗಿದ್ದು, ಕೇಂದ್ರೀಕೃತ ಕಮಲದ ಲಕ್ಷಣಗಳು ಮತ್ತು ಪುನರಾವರ್ತಿತ ಮಾದರಿಗಳೊಂದಿಗೆ ಅದ್ಭುತವಾಗಿವೆ. ಇಡೀ ದೇವಾಲಯವನ್ನು  ಸ್ಥಳೀಯವಾಗಿ ಲಭ್ಯವಿರುವ ಅತ್ಯಂತ ನುಣುಪಾದ ಬಳಪದ ಕಲ್ಲು (ಸೋಪ್‌ಸ್ಟೋನ್) ಬಳಸಿ ನಿರ್ಮಿಸಲಾಗಿದೆ. ಬಹಳ ಸಮೃದ್ಧವಾಗಿ ಅಲಂಕರಿಸಲ್ಪಟ್ಟ  ಗೋಪುರವನ್ನು ಹೊಂದಿದ ಈ ದೇವಾಲಯವನ್ನು ಶಾಂತಿಪ್ರಿಯ ಜನಾನುರಾಗಿ ಮತ್ತು ಕರ್ನಾಟಕದ ಹುಲಿ ಎಂದು ತನ್ನ ವಂದಿಮಾಗಧರಿಂದ  ಕರೆಸಿಕೊಳ್ಳುವ ಟಿಪ್ಪುಸುಲ್ತಾನ್  ಹಾಳು ಗೆಡವಿ ಅದರ ಭಾಗವನ್ನು ಅಲ್ಲೇ ಹತ್ತಿರದಲ್ಲೇ ಆತನೇ ನಿರ್ಮಿಸಿದ ಮಸೀದಿಗೆ ಬಳಸಿಕೊಂಡ ಕಾರಣ ನಂತರದ ದಿನಗಳಲ್ಲಿ ಆ ಗೋಪುರವನ್ನು ಗಾರೆ ಮತ್ತು ಇಟ್ಟಿಗೆ ಬಳಸಿ ಪುನರ್ ನಿರ್ಮಾಣ ಮಾಡಿರುವ  ವಿಷಯ ಕೇಳಿ ಮನಸ್ಸಿಗೆ  ಬಹಳ ನೋವಾಗಿದ್ದಂತೂ ಸತ್ಯ.

ಗರ್ಭಗುಡಿಯಲ್ಲಿರುವ ಸುಮಾರು 6 ಅಡಿ ಎತ್ತರದ ಹರಿಹರನ  ಸ್ವಯಂಭು ವಿಗ್ರಹವಿದ್ದು, ಈ ವಿಗ್ರಹದ ಎಡಭಾಗದಲ್ಲಿ ಕಿರೀಟವನ್ನು ಧರಿಸಿರುವ ಶಂಖು ಚ್ರಕ್ರವನ್ನು ಹಿಡಿದಿರುವ ವಿಷ್ಣುವಿನಂತೆಯೂ ಬಲಭಾಗದಲ್ಲಿ  ಜಡೆ ಕೂದಲಿನೊಂದಿಗೆ ಕೈಯಲ್ಲಿ ಜಪಮಾಲೆ ಮತ್ತು  ತ್ರಿಶೂಲವನ್ನು ಹಿಡಿದಿರುವ  ಶಿವನಂತೆ ಕಾಣುವ  ಬಹಳ ಸುಂದರವಾದ ವಿಗ್ರಹವಿದೆ.  ಬಹಳ ಕುತೂಹಲಕಾರಿಯಾದ ಅಂಶವೆಂದರೆ ಈ ವಿಗ್ರಹದ ಮೊಣಕಾಲುಗಳ ಕೆಳಗಿನ ಭಾಗವು ಭೂಮಿಯ ಒಳಗೇ ಉಳಿದಿದ್ದು ಹರಿಹರರ ಕಾಲುಗಳ ಭಕ್ತಾದಿಗಳಿಗೆ ಕಾಣಿಸುವುದಿಲ್ಲಾ.  ಮುಖಮಂಟಪದ ಉತ್ತರದಲ್ಲಿ ಕಾಲಭೈರವನ ಸಣ್ಣ ದೇವಾಲಯವಿದ್ದು ಅದರ ಮುಂದೆಯೂ  ಸುಂದರವಾದ  ಕುಳಿತಿರುವ ಭಂಗಿಯಲ್ಲಿರುವ ನಂದಿಯನ್ನು ಕಾಣಬಹುದಾಗಿದೆ.  ದೇವಾಲಯದ  ಹೊರ ಗೋಡೆಗಳ ಮೇಲೆ ಹಿಂದೂ  ದೇವತೆಗಳಾದ ಈಶ್ವರನ ಲಿಂಗ, ಗಣೇಶ, ಆಂಜನೇಯ, ಶ್ರೀಕೃಷ್ಣ  ಮುಂತಾದವುಗಳಲ್ಲದೇ, ವಿವಿ  ಪ್ರಾಣಿಗಳು ಮತ್ತು ಪೌರಾಣಿಕ ಶಿಲಾಬಾಲಿಕೆಯರಕೆತ್ತನೆಗಳು ಹಿಂದೂ ಪುರಾಣದ ದೃಶ್ಯಗಳನ್ನು ಮೂಡಿಸುವುದಲ್ಲದೇ, ಹೊಯ್ಸಳ ಕುಶಲಕರ್ಮಿಗಳ ಕಲಾತ್ಮಕತೆಗೆ ಸಾಕ್ಷಿಯಾಗಿದೆ.

ಗರ್ಭಗುಡಿಯಲ್ಲಿ ಹರಿ ಹರ ಇರುವಂತೆಯೇ,  ದೇವಾಲಯದ ಉತ್ತರ ಭಾಗದಲ್ಲಿ ಮೂಲ ದೇವಾಲಯವನ್ನೇ ಹೋಲುವ ಗರ್ಭಗುಡಿ ಮತ್ತು ಮುಖ ಮಂಟಪವಿರುವ ಸುಂದರವಾದ ಶಿಲ್ಪ ಕಲೆಯನ್ನು ಹೊಂದಿರುವ  ಮತ್ತೊಂದು ಸಣ್ಣ ದೇವಾಲಯವಿದ್ದು   ಅಲ್ಲಿ ಹರಿ ಮತ್ತು ಹರನ ಅರ್ಧಾಂಗಿಯರಾದ ಶ್ರೀ ಮಹಾಲಕ್ಷ್ಮಿ ಮತ್ತು ಮಹಿಷಮರ್ಥಿನಿಯರಿಗೆ ಸಮರ್ಪಿಸಲಾಗಿದೆ.  ಮೂಲ ಲಕ್ಷ್ಮಿ ದೇವಿಯ ವಿಗ್ರವು ಮೊಗಲರ ಕಾಲದಲ್ಲಿ ನಾಶವಾಗಿ ಹೋದ  ಕಾರಣ, ಪ್ರಸ್ತುತ ಅಲ್ಲಿನ  ಗರ್ಭಗುಡಿಯಲ್ಲಿ ನಾಡದೇವತೆ ಮಹಿಷಾಸುರ ಮರ್ಧಿನಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ದೇವಾಲಯ ಪ್ರಾಂಗಣದ ಸುತ್ತಲೂ ಅನೇಕ  ಬೃಹದಾಕಾರದ ಹಳೆಯ ಕನ್ನಡ ಶಿಲಾ ಶಾಸನಗಳು ಮತ್ತು ವೀರಗಲ್ಲುಗಳನ್ನು ಕಾಣಬಹುದಾಗಿದ್ದು, ಹಳೇಗನ್ನಡದಲ್ಲಿ ಇರುವ ಕಾರಣ  ಮತ್ತು ಭಕ್ತಾದಿಗಳು ಆ ಶಾಸನಗಳನ್ನು ಮುಟ್ಟಿ ಅವುಗಳು ಸವೆಸಿರುವ ಕಾರಣ ಸುಲಭವಾಗಿ ಜನಸಾಮಾನ್ಯರಿಗೆ ಆ ಶಾಸನವನ್ನು ಓದಲು ಕಷ್ಟವಾಗುತ್ತದೆ. ಇನ್ನು ಮಾಸ್ತಿಗಲ್ಲು ಮತ್ತು ವೀರಗಲ್ಲು ಇಟ್ಟಿರುವ ಜಾಗದಲ್ಲೇ ಈ ದೇವಾಲಯದ ಗೋಪುರ ಮತ್ತು ದೇವಾಲಯದ ಇಡೀ ಪ್ರತಿಕೃತಿಯನ್ನೂ (miniature, replica) ಸಹಾ ಕೆತ್ತಿರುವುದು ಗಮನಾರ್ಹವಾಗಿದೆ.

ಹರಿಹರೇಶ್ವರ ದೇವಸ್ಥಾನವು  ವರ್ಷದ 365 ದಿನಗಳು ಬೆಳಿಗ್ಗೆ 7.00 ರಿಂದ ಮಧ್ಯಾಹ್ನ 12:30 ರವರೆಗೆ ಮತ್ತು ಸಂಜೆ ಸಂಜೆ 05:00 ರಿಂದ ರಾತ್ರಿ 8:30 ರವರೆಗೆ ಭಕ್ತಾದಿಗಳ ದರ್ಶನಕ್ಕೆ ತೆರೆದಿದ್ದು ಎಂದಿನಂತೆ ಪೂಜೆ ಪುನಸ್ಕಾರಗಳು ನಡೆದರೆ, ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ.  ಈ ದೇವಾಲಯದಲ್ಲಿ ದೇವರ ಅನುಭೂತಿಯನ್ನು ಪಡೆಯುವ ಮತ್ತು ಕಾರ್ಣಿಕವನ್ನು ಪಠಿಸುವ ಆಚರಣೆಯಾದ ಕಾರ್ಣಿಕ (ದೇವರ ಮಾತುಗಳು) ಪದ್ದತಿ ನೂರಾರು ವರ್ಷಗಳಿಂದಲೂ ರೂಢಿಯಲ್ಲಿದ್ದು  ನಾಗರ ಪಂಚಮಿ ಹಬ್ಬದ ಸಮಯದಲ್ಲಿ ವಿಶೇಷವಾಗಿ ಕಾರ್ಣಿಕವನ್ನು ಪಠಿಸಲಾಗುತ್ತದೆ. ಇನ್ನು ವರ್ಷಕ್ಕೊಮ್ಮೆ ಬಹಳ ಅದ್ದೂರಿಯಾಗಿ ಜಾತ್ರೆ ಮತ್ತು ರಥೋತ್ಸವನ್ನು  ನಡೆಸುವ ಸಂಪ್ರದಾಯವಿದ್ದು ಆ ರಥೋತ್ಸವಕ್ಕೆ ಸ್ಥಳೀಯರಲ್ಲದೇ ರಾಜ್ಯ ಮತ್ತು ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಹರಿಹರರನ್ನು ಭಕ್ತಿಯಿಂದ ಪೂಜಿಸಿ  ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುವುದು ವಿಶೇಷವಾಗಿದೆ.

ರಾಜ್ಯದ ನಾನಾ ಕಡೆಗಳಿಂದ ಹರಿಹರಕ್ಕೆ  ಬಸ್ ಮತ್ತು ರೈಲಿನ ಸಂಪರ್ಕವಿದ್ದು ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣದಿಂದ ದೇವಾಲಯವು ಕೇವಲ  1 ರಿಂದ 1.5 ಕಿ.ಮೀ ದೂರದಲ್ಲಿದೆ, ಇನ್ನೂ ಸ್ವಂತ ವಾಹನದಲ್ಲಿ ಬರುವವರು ದೇವಾಲಯ ಸುತ್ತ ಮುತ್ತಲಿನ ಪ್ರದೇಶವು ಮನೆಗಳಿಂದ ಆವೃತವಾಗಿರುವ ಕಾರಣ, ತಮ್ಮ ವಾಹನಗಳನ್ನು ತುಸು ದೂರದಲ್ಲಿ ನಿಲ್ಲಿಸಿ ದೇವಾಲಯದ ಅಕ್ಕ ಪಕ್ಕದಲ್ಲಿರುವ ಹೂವು, ಹಣ್ಣು ಕಾಯಿ ಮಾರುವ ಅಂಗಡಿಗಳಲ್ಲಿ ಪೂಜಾ ಸಾಮಗ್ರಿಗಳನ್ನು ಖರೀಧಿಸಿ ಸ್ವಾಮಿಯ ಪೂಜೆಯನ್ನು ಮಾಡಿಸಬಹುದಾಗಿದೆ.

 

ಹರಿಹರದ ಶ್ರೀ ಹರಿಹರೇಶ್ವರ ಸ್ವಾಮಿ ದೇವಾಲಯದ ಬಗ್ಗೆ  ಇಷ್ಟೆಲ್ಲಾ ಮಾಹಿತಿಗಳು ತಿಳಿದ ನಂತರ ಇನ್ನೇಕೆ ತಡಾ, ಈ ವಾರಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಹರಿಹರಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು  ಇಲ್ಲಿಂದ ಕೇವಲ 3-4 ಕಿ.ಮೀ ದೂರದಲ್ಲಿರುವ  ಅಯೋಧ್ಯಾ ಮೂಲರಾಮನ ದರ್ಶನ ಪಡೆದು, ದಾವಣಗೆರೆಗೆ ಬಂದು ಬೆಣ್ಣೆ ದೋಸೆ ತಿಂದು ಸ್ವಲ್ಪ ಬಟ್ಟೆಗಳನ್ನು ಖರೀಧಿಸಿ, ಇನ್ನೂ ಸಮಯವಿದ್ದಲ್ಲಿ ಕೋಟೆಗಳನ್ ನಾಡು ಚಿತ್ರದುರ್ಗದ ಕೋಟೆಯನ್ನೂ ನೋಡಿ, ಹತ್ತಿರದ ಖಾನಾವಳಿಯಲ್ಲಿ ರುಚಿ ರುಚಿಯಾದ ಜೋಳದ ರೊಟ್ಟಿ, ಬದನೇಕಾಯಿ ಎಣ್ಗಾಯ್ ಜೊತೆ ಮಂಡಕ್ಕಿ ಮಿರ್ಜಿ ತಿಂದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

3 thoughts on “ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ

  1. ನಿಮ್ಮ ವಿವರಣೆ ಸಾಲದು. ಈ ಬಗ್ಗೆ ಪ್ರೊಫೆಸರ್ ಎಚ್ ಎಂ ಶಂಕರನಾರಾಯಣ ರಾವ್ ಅವರು ವಿಸ್ತಾರವಾಗಿ ಬರೆದಿರುವ ( ಸುಮಾರು 200 ಪುಟಗಳು) ” ಶ್ರೀ ಹರಿಹರ ದೇವಾಲಯ ” ಕೃತಿಯನ್ನು ಓದಿ. ಹಳಗನ್ನಡ ಮತ್ತು ಸಂಸ್ಕೃತ ಶಾಸನಗಳನ್ನು ಓದಿ ಅವುಗಳ ಅರ್ಥವನ್ನು ತಿಳಿಗನ್ನಡದಲ್ಲಿ ಕೊಟ್ಟಿದ್ದಾರೆ.

    Liked by 1 person

    1. ಸರ್ ಈಗಿನ YouTube ಕಾಲದಲ್ಲಿ ಜನ 1-2‌ ನಿಮಿಷಗಳಿಗಿಂತ ಹೆಚ್ಚಿನ ‌ಸಮಯ ನೋಡೋದಿಲ್ಲ. ಹಾಗಾಗಿ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ವಿವರಗಳನ್ನು ತಿಳಿಸಲು‌ಪ್ರಯತ್ನಿಸಿದ್ದೇನೆ
      .

      Like

Leave a reply to ಶ್ರೀಕಂಠ ಬಾಳಗಂಚಿ Cancel reply