ಕಾಮಾತುರಾಣಾಂ ನ ಭಯಂ ನ ಲಜ್ಜಾ

ನಮ್ಮ ಸನಾತನ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ಅತ್ಯಂತ ಗೌರವವಾಗಿ ಕಾಣುತ್ತೇವೆ.  ಹಾಗಾಗಿಯೇ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ| ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ ||  ಎಲ್ಲಿ  ಮಹಿಳೆಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೈವತ್ವವು ಅರಳುತ್ತದೆ ಮತ್ತು  ಎಲ್ಲಿ  ಮಹಿಳೆಯರನ್ನು ಅವಮಾನಿಸಕಾಗುತ್ತದೆಯೋ ಅಲ್ಲಿ ಮಾಡುವ ಯಾವ ಕ್ರಿಯೆಗಳಳೂ ಫಲಪ್ರದವಾಗುವುದಿಲ್ಲ ಎಂಬ ಬಹಳ ಒಳ್ಳೆಯ ಸುಭಾಷಿತವಿದೆ.  ಇನ್ನು ಗಂಡು ಮಕ್ಕಳೂ ಸಹಾ, ಪರಸ್ತ್ರೀಯರನ್ನು ತಮ್ಮ ತಾಯಿ ಅಥವಾ ಸಹೋದರಿಯ ರೂಪದಲ್ಲಿ ಗೌರವದಿಂದಲೇ ಕಾಣಬೇಕು ಎಂಬುದನ್ನು ಚಿಕ್ಕವಯಸ್ಸಿನಿಂದಲೇ ನಮ್ಮ ಮಕ್ಕಳಿಗೆ ಶ್ರದ್ದೇಯ ತಾಯಂದಿರು ಕಲಿಸಿಕೊಡುತ್ತಾರೆ. ದುರಾದೃಷ್ಟವಷಾತ್ ಅಂಧ ಪಾಶ್ಚಾತ್ಯೀಕರಣ, ಸಿನಿಮಾ ಮತ್ತು ಟಿವಿ ಧಾರಾವಾಹಿಯ ಪ್ರಭಾವ, ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯ ತಪ್ಪು ಗ್ರಹಿಕೆಯಿಂದಾಗಿ ಪುರುಷ ಮತ್ತು ಮಹಿಳೆಯರ ನಡುವಿದ್ದ ಪವಿತ್ರ  ಗೌರವಗಳೆಲ್ಲವೂ ಮಾಯವಾಗಿ ಅನೇಕ ದುರಂತಗಳಿಗೆ ಕಾರಣವಾಗುತ್ತಿರುವ ಕಳವಳಕಾರಿ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

2025ರ ಮೇ 11ರಂದು ಮಧ್ಯಪ್ರದೇಶದ ಇಂದೋರಿನ ಸುಪ್ರಸಿದ್ಧ ಟ್ರಾನ್ಸ್ ಪೂರ್ಟ್ ಕಂಪನಿಯ ಮಾಲಿಕನ ಮಗ ರಾಜಾ ರಘುವಂಶಿ ಮತ್ತು ಅದೇ ನಗರದ ಪ್ರಸಿದ್ಧ ಪೈವುಡ್ ತಯಾರಿಕಾ ಘಟಕದ ಮಾಲಿಕರ ಮಗಳಾದ ಸೊನಂಳೊಂದಿಗೆ ಬಹಳ ಅದ್ದೂರಿಯಾಗಿ ಮದುವೆಯಾಗಿತ್ತು. ಮದುವೆಯಾದ ನಂತರ ದಂಪತಿಗಳಿಬ್ಬರೂ ಮೇ 23ರಂದು ಮೇಘಾಲಯದ ಚಿರಾಪುಂಜಿಗೆ ಮಧುಚಂದ್ರಕ್ಕೆ ಪ್ರಯಾಣಿಸಿದಾಗ ಎರಡೂ ಕುಟುಂಬದವರೂ ಕ್ಷೇಮವಾಗಿ ಹೋಗಿ ಬನ್ನಿ ಎಂದು ಶುಭ ಹಾರೈಸಿ ಕಳುಹಿಸಿದ್ದರು. ತಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ  ಮಧುಚಂದ್ರಕ್ಕೆ ಹೋದ ದಂಪತಿಗಳಿಂದ ಎರಡು ಮೂರು ದಿನಗಳ ನಂತರ ಯಾವುದೇ ಕರೆಗಳು ಬಾರದೇ ಹೋದದ್ದರಿಂದ ಆತಂಕಗೊಂಡ ಪೋಷಕರು  ಅಲ್ಲಿನ ಪೋಲೀಸರಿಗೆ ದೂರನ್ನಿತ್ತಾಗ ಪೋಲೀಸರ ತಪಾಸಣೆಯಲ್ಲಿ ಮಧುಮಗ ರಾಜಾ ರಘುವಂಶಿ ಅವರ ಮೃತದೇಹ ಮೇಘಾಲಯದಲ್ಲಿ ಕಂದಕದಲ್ಲಿ ಪತ್ತೆಯಾಗಿತ್ತು ಮತ್ತು ಎಷ್ಟೇ ಹುಡುಕಿದರೂ ಮಧುಮಗಳ ಪತ್ತೆ ಆಗದ ಕಾರಣ  ಇದು ಯಾರದ್ದೋ ಕುಕುತ್ಯ ಎಂದು ಭಾವಿಸಿ ತನಿಖೆಯನ್ನು ಮುಂದುವರಿಸಿದ ಪೋಲೀಸರಿಗೆ ಕೆಲವೇ ದಿನಗಳಲ್ಲಿ  ಉತ್ತರ ಪ್ರದೇಶದ ಘಾಜಿಪುರದಲ್ಲಿ ಮಧು ಮಗಳು ಸೋನಂ ತನ್ನ ಪ್ರಿಯಕರನೊಂದಿಗೆ ಪೋಲೀಸರಿಗೆ ಸಿಕ್ಕಿ ಬಿದ್ದಿದ್ದು, ವಿಚಾರಣೆಯ ವೇಳೆಯಲ್ಲಿ ತಾನೇ ಸುಪಾರಿ ಕೊಟ್ಟು ತನ್ನ ಗಂಡನ ಹತ್ಯೆ ಮಾಡಿಸಿರುವುದಾಗಿ ಒಪ್ಪಿಕೊಂಡಿರುವುದು ಅಚ್ಚರಿಯ ಸಂಗತಿಯಾಗಿದೆ.

ಪತಿಯ ಜೊತೆ ಮಧುಚಂದ್ರಕ್ಕೆ ಶಿಲ್ಲಾಂಗ್‌ ಬಂದು ಅಲ್ಲಿನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಿಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿ  ಹೋಗಿದ್ದರು.  ಮೇ 23ರಂದು ಮೌಲಾಖಿಯಾತ್ ಗ್ರಾಮದ ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದ ದಂಪತಿಗಳು ನಂತರ ನಿಗೂಢವಾಗಿ ನಾಪತ್ತೆಯಾಗಿದ್ದರು.  ಇದಾದ 1 ದಿನದ ನಂತರ ಅವರ ಬಾಡಿಗೆ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿದ್ದು ಪೋಲಿಸರಿಗೆ ಅನುಮಾನ ಬಂದು ಸುಧೀರ್ಘವಾಗಿ ಸುಮಾರು 11 ದಿನಗಳ ಕಾಲದ ಹುಟುಕಾಟದ ನಂತರ ಆಳವಾದ ಕಂದಕವೊಂದರಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಹಾಕಲ್ಪಟ್ಟಿದ್ದ ರಾಜಾ ರಘುವಂಶಿ ಅವರ ಮೃತದೇಹವನ್ನು ಪೋಲಿಸರು ಪತ್ತೆ ಹಚ್ಚಿದ್ದರು.

ಪೋಲೀಸರ ತನಿಖೆಯಲ್ಲಿ ಸೋನಮ್‌ಗೆ ಘಾಜಿಪುರದ ನಂದಗಂಜ್‌ನಲ್ಲಿರುವ ತಮ್ಮ ಪೈವುಡ್ ಕಾರ್ಖಾನೆಯಲ್ಲೇ ಕೆಲಸ ಮಾಡುತ್ತಿದ್ದ ರಾಜ್ ಕುಶ್ವಾಹ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿದ್ದು, ಪೋಷಕರ ಬಲವಂತದಿಂದಾಗಿ ಒಲ್ಲದ ಮನಸ್ಸಿನಿಂದ ರಾಜಾ ರಘುವಂಶಿಯನ್ನು ಮದುವೆಯಾಗಿದ್ದ ಕಾರಣ, ಆಕೆಯೇ ಪತಿಯ ಕೊಲೆಗೆ ಸಂಚು ರೂಪಿಸಿ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿ, ತಾವು  ಮೇಘಾಲಯಕ್ಕೆ ತೆರಳಿದ್ದ ವೇಳೆಯಲ್ಲಿ ಸೊಹ್ರಾ ಪ್ರದೇಶದಲ್ಲಿ ಆಕೆಯ ಮಾಹಿತಿಯ ಆಧಾರವಾಗಿಯೇ ಬಾಡಿಗೆ ಹಂತಕರು ಆಕೆಯ ಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವು ಪತ್ತೆಯಾಗಿದ್ದು ಇದು ಈ ಹಿಂದೆ  ಐ.ಎ.ಎಸ್. ಅಧಿಕಾರಿ ಶಿವರಾಮ್ ನಟಿಸಿದ್ದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾವನ್ನು ನೆನಪಿಸುವಂತಿದೆ.

ಮಧ್ಯಪ್ರದೇಶದ ರಾಜಾ ರಘುವಂಶಿ ದೂರದ ಮೇಘಾಲಯದಲ್ಲಿ ತನ್ನ ಪತ್ನಿಯಿಂದಲೇ ಹತನಾಗಿದ್ದರೆ, ಬೆಂಗಳೂರಿನ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಓಯೋ ರೂಮಿನಲ್ಲಿ ವಯಸ್ಸು 35 ಆಗಿದ್ದರೂ ನೋಡುವುದಕ್ಕೆ ಇನ್ನೂ ರೂಪವತಿಯಾಗಿಯೇ ಇದ್ದ  ಕೋಟಿ ಕೋಟಿ ಆಸ್ತಿ ಇರುವ ಸ್ಥಿತಿವಂತೆಯಾಗಿದ್ದ ಎರಡು ಮಕ್ಕಳ ತಾಯಿಯಾಗಿದ್ದ ಗೃಹಿಣಿ ಹರಿಣಿ ತನ್ನ ಪ್ರಿಯಕರನಿಂದಲೇ ಚಾಕುವಿನಿಂದ ಇರಿತಕ್ಕೊಳಗಾಗಿ ಸಾವನ್ನಪ್ಪಿರುವ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ.

ಹೆಮ್ಮಿಗೆಪುರದ ಜಮಿನ್ದಾರ ಕುಟುಂಬ ದಾಸೇಗೌಡರ ಪತ್ನಿಯಾದ ಹರಿಣಿಗೆ ಒಳ್ಳೆಯ ಪತಿ ಮತ್ತು ಸುಂದರವಾದ ಇಬ್ಬರು ಹೆಣ್ಣು ಮಕ್ಕಳಿದ್ದು ಪತಿಯೂ ಸಹಾ ಬಹಳ ಐಶಾರಾಮೀ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು.  ಇತ್ತಿಚೇಗಷ್ಟೇ ದೊಡ್ಡ ಮನೆಯನ್ನು ಕಟ್ಟಲು ಭೂಮಿ ಪೂಜೆಯನ್ನೂ ಮಾಡಿದ್ದರು. ಇಂತಹ ಹರಿಣಿಗೆ ತಮ್ಮ ಊರ ಜಾತ್ರೆಯಲ್ಲಿ 25 ವರ್ಷದ  ಯಶಸ್ ಎಂಬ ತರುಣ ಪರಿಚಯವಾಗಿ, ಮೊದಲ ನೋಟದಲ್ಲೇ ಅದು ಆ ಸ್ನೇಹ ಪ್ರೀತಿಗೆ ತಿರುಗಿ ಪರಸ್ಪರ ಮೊಬೈಲ್ ನಂಬರ್ ಪಡೆದುಕೊಂಡು ಚಾಟಿಂಗ್‌ ಮತ್ತು ಡೇಟಿಂಗ್‌ ನಿಂದ ಆರಂಭವಾಗಿ  ಅಂತಿಮವಾಗಿ ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು.

ಪತ್ನಿ ಹರಿಣಿ ಹಾಗೂ ಯಶಸ್ ನಡುವಿನ ಅನೈತಿಕ ಸಂಬಂಧ ಪತಿ ಮತ್ತು ಹರಿಣಿಯವರ ಅಣ್ಣ ತಮ್ಮಂದಿರಿಗೆ ತಿಳಿಯುತ್ತಿದ್ದಂತೆಯೇ ಹರಿಣಿಯವರ ಪತಿ ತಮ್ಮ ಪತ್ನಿಗೆ ಬುದ್ಧಿ ಹೇಳಿ ಆಕೆಯ ಮೊಬೈಲ್ ಕಸಿದುಕೊಂಡು ಕೆಲ ಕಾಲ ಗೃಹಬಂಧನದಲ್ಲಿ ಇರಿಸಿದ್ದರಂತೆ. ಬಹಳ ದಿನಗಳಿಂದಲೂ ಹರಿಣಿಯ ಸಂಪರ್ಕಕ್ಕೆ  ಸಿಗದೇ  ಹುಚ್ಚನಂತಾಗಿದ್ದ ಯಶಸ್, ಆಕೆ ಸಿಕ್ಕರೇ ಸಾಯಿಸಲು ನಿರ್ಧರಿಸಿ ಚಾಕು ಕೂಡ ಖರೀದಿಸಿದ್ದಾನೆ.   ಇದಾದ ಕೆಲವು ದಿನಗಳ ನಂತರ ಹೆಂಡತಿ ಸರಿ ಹೋಗಬಹುದು ಎಂಬ ನಂಬಿಕೆಯಿಂದ ತಮ್ಮ ಪತ್ನಿಗೆ ಹೊರಗೆ ಹೋಗಲು ಬಿಟ್ಟಿದ್ದಾರೆ. ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಹರಿಣಿ ತನ್ನ ಪ್ರಿಯಕರ ಯಶಸ್‌ನನ್ನು ಮತ್ತೆ ಸಂಪರ್ಕಿಸಿದ್ದಾಳೆ.

ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಹರಿಣಿಯೇ ಯಶಸ್‌ಗೆ  ಕರೆ ಮಾಡಿದಾಗ ಇಬ್ಬರೂ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಗೆ ಬರುವ  ಪೂರ್ಣಪ್ರಜ್ಞ ಬಡಾವಣೆಯಲ್ಲಿರುವ  ಓಯೋ ರೂಮ್‌ನಲ್ಲಿ ಬೇಟಿಯಾಗಲು ನಿರ್ಧರಿಸಿದ್ದಾರೆ. ಜೂನ್ 5 ಶುಕ್ರವಾರ ಇಬ್ಬರೂ ಸೇರಿ, ಲೈಗಿಂಕ ಸಂಪರ್ಕ ಮುಗಿಸಿದ ನಂತರ ಹರಿಣಿ ನಮ್ಮಿಬ್ಬರ ಭೇಟಿ ಇದೇ ಕೊನೆಯಾಗಿದ್ದು, ಮನೆಯವರ ಒತ್ತಡ ಹೆಚ್ಚಾಗಿರುವ ಕಾರಣ, ನಾವಿಬ್ಬರೂ ಇನ್ನೆಂದಿಗೂ ಸೇರಲಾಗದು ಎಂಬ ವಿಷಯ ತಿಳಿಸುತ್ತಿದ್ದಂತೆಯೇ, ನನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದು ಎಂದು  ಪೂರ್ವ ನಿರ್ಧಾರದಂತೆಯೇ, ತಾನು ಖರೀಧಿಸಿದ್ದ ಚಾಕುನಿಂದ ಆಕೆಯನ್ನು  ಬರ್ಬರವಾಗಿ  20 ಬಾರಿ ಇರಿದು ಕೊಂದಿದ್ದಲ್ಲದೇ, ತಾನೂ ಸಹಾ ಎದೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿ ವಿಫಲನಾಗಿ ನೇರವಾಗಿ ಕೆಂಗೇರಿ ಪೋಲೀಸ್ ಠಾಣೆಗೆ ಹೋಗಿ ಎಲ್ಲ ವಿಷಯ ತಿಳಿಸಿ ಪೋಲೀಸರಿಗೆ ಶರಣಾಗಿದ್ದಾನೆ.

2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ಇಂಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಬಿ.ವಿ ಗಿರೀಶ್  ಆಗಷ್ಟೇ ತಮ್ಮದೇ ರಸ್ತೆಯಲ್ಲಿ ಚಿಕ್ಕವಯಸ್ಸಿನಿಂದಲೂ ಒಟ್ಟಿಗೆ ಆಡಿ ಬೆಳೆದಿದ್ದ 21 ವರ್ಷದ ಕಾನೂನು ವಿದ್ಯಾರ್ಥಿನಿ ಶುಭ ಶಂಕರನಾರಾಯಣ್ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥವಾದ ಕೇವಲ ಮೂರು ದಿನಗಳ ನಂತರ ಇಬ್ಬರೂ ಒಟ್ಟಿಗೆ ಊಟಕ್ಕೆಂದು ಹೋಗಿ ನಂತರ HAL ವಿಮಾನ ನಿಲ್ದಾಣದಲ್ಲಿ ವಿಮಾನಗಳು ಇಳಿಯುವುದನ್ನು ನೋಡಲು ಬಯಸಿದ್ದರಿಂದ ಕೋರಮಂಗಲ  ರಿಂಗ್ ರಸ್ತೆಯ ಏರ್ ವ್ಯೂ ಪಾಯಿಂಟ್‌ನಲ್ಲಿ  ರಾತ್ರಿ 9.30 ರ ಸುಮಾರಿಗೆ ಅವರು ವಿಮಾನಗಳನ್ನು ನೋಡುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ಯಾರೋ ಗಿರೀಶ್ ಅವರ ತಲೆಗೆ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದಾಗ,  ಶುಭಳೇ  ಗಿರೀಶ್ ಅವರನ್ನು ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದರೂ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದ ಕಾರಣ ಮಾರನೇ ದಿನ ಬೆಳಿಗ್ಗೆ 8.05  ಅವರು ಮೃತರಾಗಿದ್ದರು.

ಈ ಅಸಹಜ ಸಾವಿನ ಪ್ರಕರಣದ ತನಿಖೆಗೆ ಮುಂದಾದ ಪೋಲೀಸರು 2003ರ ನವೆಂಬರ್ 30ರಂದು ಜರುಗಿದ್ದ ಅವರ ನಿಶ್ಚಿತಾರ್ಥ ಸಮಾರಂಭದ ವೀಡಿಯೊಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಶುಭಾಳ ನಡವಳಿಕೆ ಕೊಂಚ ವಿಭಿನ್ನವಾಗಿರುವುದನ್ನು ಗಮನಿಸಿ ಆಕೆಯ ಮೊಬೈಲ್ ಫೋನ್‌ನ ಕರೆ ವಿವರಗಳನ್ನು ಪರಿಶೀಲಿಸಲೀಸಿದಾಗ,  ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಅವಳಿಗಿಂತ ಎರಡು ವರ್ಷ ಜೂನಿಯರ್ ಆಗಿದ್ದ ಅರುಣ್ ವರ್ಮಾ (19) ಜೊತೆ ಅವಳು ನಿರಂತರ ಕರೆ ಮಾಡಿದ್ದನ್ನು ಗಮನಿಸಿ  ಮೊದಲ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ವರ್ಮಾನನ್ನು ತೀವ್ರವಾಗಿ ತನಿಖೆ ನಡೆಸಿದಾಗ ಆರಂಭದಲ್ಲಿ ನಾನಾ ಕತೆಗಳನ್ನು ಹೇಳಿದರೂ ಅಂತಿಮವಾಗಿ ಶುಭ ಮತ್ತು ವರ್ಮ ಮತ್ತಿಬ್ಬರು ಸೇರಿಕೊಂಡೇ ಗಿರೀಶ್ ನನ್ನು ಹೆದರಿಸುವ ಸಲುವಾಗಿ ಮಾಡಿದ ಪ್ರಯತ್ನ ಕೊಲೆಯಾಗಿ ಮಾರ್ಪಟ್ಟಿದ್ದನ್ನು ಒಪ್ಪಿಕೊಂಡು ನಂತರ ಪೋಲಿಸರ ತನಿಖೆಯಲ್ಲೂ ಅದು ಧೃಢ ಪಟ್ಟು ಪ್ರಮುಖ ಆರೋಪಿ ಶುಭಾ ಮತ್ತು ಆಕೆಯ ಸಹಚರ ವರ್ಮ ಮತ್ತು ಆತನ ಸ್ನೇಹಿತರಿಗೆ  ಜೀವಾವಧಿ ಶಿಕ್ಷೆಯಾಗಿ ಅವರೆಲ್ಲರೂ ಜೈಲಿನಲ್ಲಿ ಮುದ್ದೇ ಮುರಿಯುತ್ತಿದ್ದಾರೆ.

ಈ ಎಲ್ಲಾ ಪ್ರಕರಣಗಳೂ ಅನೈತಿಕ ಸಂಬಂಧಗಳಿಂದ ಆದದ್ದಾದರೇ, ಇನ್ನು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ  ಹೈಸ್ಕೂಲ್ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಲವ್ ಜಿಹಾದ್ ಗಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಕಳವಳಕಾರಿಯಾದ ವಿಷಯವಾಗಿದೆ.  ಶಾಲಾ ಕಾಲೇಜುಗಳಿಗೆ ಒಂಟಿಯಾಗಿ ಹೋಗುವ ಹೆಣ್ಣು ಮಕ್ಕಳನ್ನು ಬೈಕ್ ಮೇಲೆ ಕರೆದುಕೊಂಡು ಹೋಗುವ ಇಲ್ಲವೇ  ಸಣ್ಣ ಪುಟ್ಟ ತಿಂಡಿ ಇಲ್ಲವೇ ಉಡುಗೊರೆಗಳನ್ನು ಕೊಡಿಸುವ ಮೂಲಕ ತಮ್ಮ ಬುಟ್ಟಿಗೆ ಬೀಳಿಸಿಕೊಳ್ಳುತ್ತಿರುವ  ಮುಸ್ಲಿಂ ಯುವಕರುಗಳು ನಂತರ ದಿನಗಳನ್ನು ಆಕೆಯನ್ನು ತಮ್ಮ ಲೈಂಗಿಕ ತೃಷೆಗೆ ಬಳಸಿಕೊಂಡು ಆದನ್ನು ಅಕ್ರಮವಾಗಿ ಫೋಟೋ ಇಲ್ಲವೇ ವೀಡಿಯೋ ಮಾಡಿಕೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರವಾಗದೇ ಹೋದಲ್ಲಿ ಈ ವೀಡಿಯೋ ಮತ್ತು  ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡುವುದಕ್ಕೆ ಹೆದರಿ ನೂರಾರು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ಇದೆ.

ಗಂಡು ಹೆಣ್ಣು ಎಂಬ ಸಂಬಂಧಗಳು ಕೇವಲ ವಯಕ್ತಿಯ ತೆವಲನ್ನು ತೀರಿಸಿ ಕೊಳ್ಳುವ ಕಾಮಕಷ್ಟೇ ಸೀಮಿತವಾಗಿವಾರದೇ ಅದಕ್ಕಿಂತಲೂ ಪವಿತ್ರವಾದ ಬಂಧನವಿದೆ.  ನೀನಿಲ್ಲದೇ ನನ್ನ ಜೀವನವೇ ಇಲ್ಲಾ! ನೀನೊಬ್ಬಳು ನನ್ನೊಂದಿಗೆ ಇದ್ದರೇ ಇಡೀ ಜಗತ್ತನ್ನೇ ಗೆಲ್ಲಬಲ್ಲೇ! ಎಂದು ಬಣ್ಣ ಬಣ್ಣದ ಮಾತುಗಳಿಂದ ಮರಳು ಮಾಡುತ್ತಾ, ತನ್ನ  ವಾಂಛೆಯನ್ನು ತೀರಿಸಿಕೊಳ್ಳುವವನು ಇದೇ ಮಾತುಗಳನ್ನು ಇದೇ ರೀತಿ ನಿಮ್ಮಂತೆಯೇ ಇರುವ ಹತ್ತಾರು ಅಮಾಯಕ ಹೆಣ್ಣು ಮಕ್ಕಳಿಗೆ ಹೇಳಿರುತ್ತಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದೇ ರೀತಿ   ಹೆತ್ತು ಹೊತ್ತು  ಕಷ್ಟ ಪಟ್ಟು ಬೆಳಸಿ  ಸಾಕಿ ಸಲಹಿ ಮದುವೆ ಮಾಡಿರುವಾಗ,  ಕೇವಲ  ಅವನು ಹಾಕಿಕೊಳ್ಳುವ ಸುಂಗಧ ದ್ರವ್ಯಕ್ಕೆ, ಬಟ್ಟೆಗೆ, ಇಲ್ಲವೇ ಓಡಿಸುವ ಬೈಕ್ ಗಳಿಗೆ ಮರುಳಾಗಿ, ಅನೈತಿಕ ಹಾದಿಯನ್ನು ಹಿಡಿದು ಕಡೆಗೆ ಕೊಲೆಗಳಲ್ಲಿ ಅವಸಾನವಾಗುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.  ಹೆಣ್ಣು ಮಕ್ಕಳಾಗಲೀ ಗಂಡು ಮಕ್ಕಳಾಗಲೀ ನಾವೀಗ ವಯಸ್ಕರು ನಮಗೆ ಯಾರ ಹಂಗಿಲ್ಲಾ ಎಂದು ತಂದೆ ತಾಯಿಯರ ಬಂಧನವನ್ನು ಧಿಕ್ಕರಿ ಮನೆ ಬಿಟ್ಟು ಓಡಿ ಹೋದಾಗ, ಸಮಾಜಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವ ಪೋಷಕರ ಉದಾಹರಣೆಯೂ  ಕಣ್ಣ ಮುಂದಿದೆ. ಇನ್ನೂ ಕೆಲವು ಬಾರಿ ಮರ್ಯಾದಾ ಹತ್ಯೆಗೂ ಕೈ ಹಾಕಿರುವುದನ್ನೂ ನೋಡಿದ್ದೇವೆ.

ನೋ ಸೆಕ್ಸ್‌ ಪ್ಲೀಸ್‌, ವಿ ಆರ್‌ ಇಂಡಿಯನ್ಸ್‌ ಎಂದು ಹೇಳುತ್ತಿದ್ದ ಕಾಲವೆಲ್ಲವೂ ಮರೆಯಾಗಿ, ಜಗತ್ತಿಗೇ ಕಾಮಸೂತ್ರ ನೀಡಿದವರು ನಾವು, ಕಾಮ ಎಂಬುದು ಬಹಳ ಮುಖ್ಯವಾದ ಪುರುಷಾರ್ಥ. ಹಾಗಾಗಿ ಕಾಮಾತುರಾಣಾಂ ನ ಲಜ್ಜಾ ನ ಭಯಂ ಎನ್ನುವುದು ಭಾರತದಲ್ಲಿಯೇ  ಜಾಸ್ತಿ ಎಂದು ವಿದೇಶೀ ಕಾಂಡೋಮ್ ಕಂಪನಿಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿರುವುದೂ ಸಹಾ ಕಳವಳಕಾರಿಯಾದ ಅಂಶವಾಗಿದೆ.  ನಗರ ಪ್ರದೇಶಗಳ 28% ಕ್ಕೂ ಅಧಿಕ ಭಾರತೀಯರು ಫೋನ್‌ ಗಳ ಮೂಲಕ  ಕಾಮದ ಕುರಿತಾಗಿ ಸಂಭಾಷಣೆ ನಡೆಸಿರುತ್ತಾರೆ. 17% ರಷ್ಟು ಜನರು ವೇಶ್ಯೆಯರ ಸಹವಾಸಕ್ಕೆ ಬಿದ್ದರೆ, ಇನ್ನು  ಹಣ, ಅಧಿಕಾರ ಇಲ್ಲವೇ  ಬಡ್ತಿಯ ಆಸೆಗೆ ಬಿದ್ದು ಸುಮಾರು 4% ಭಾರತೀಯ ಯುವತಿಯರು ತಮ್ಮ ಕಛೇರಿಯ ಸಹೋದ್ಯೋಗಿಗಳೊಂದಿಗೆ ಅಕ್ರಮ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ. ಎಲ್ಲದ್ದಕ್ಕಿಂತಲೂ   ಅಚ್ಚರಿಯ ವಿಷಯವೆಂದರೆ 10% ರಷ್ಟು ಹದಿ ಹರೆಯದವರು ತಮ್ಮ  ಗೆಳೆಯ/ಗೆಳತಿಯರೊಂದಿಗೆ ಮದುವೆಗೆಗೂ ಮುಂಚೆ ದೈಹಿಕ ಸಂಬಂಧ ಹೊಂದುವ ಮೂಲಕ  ಭಾರತೀಯ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ, ಪಾಶ್ಚಾತ್ಯರಂತೆ  ಮುಕ್ತ ಕಾಮಾಟಕ್ಕೆ ಇಳಿಯುತ್ತಿವೆ ಎನ್ನುತ್ತಾರೆ ಎಂದು ತಿಳಿಸಿರುವುದು ಆಘಾತಕಾರಿಯಾಗಿದ್ದು ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ ಎಂಬುದನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಮೂಲಕ  ಇದಕ್ಕೆಲ್ಲಾ  ಇತಿಶ್ರೀ  ಹಾಕಬೇಕಾಗಿರುವುದು ನಮ್ಮ ನಿಮ್ಮ ಜವಾಬ್ದಾರಿ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಕಾಮಾತುರಾಣಾಂ ನ ಭಯಂ ನ ಲಜ್ಜಾ

  1. ಕಾಮ ಕ್ರೋಧ ಮನುಷ್ಯರನ್ನು ಯಾವ ಅದೋಗತಿಗೆ ಇಳಿಸುತ್ತದೆ, ಕಣ್ಣು ತೆರೆಸುವ ಲೇಖನ

    Liked by 1 person

Leave a comment