ದಿಲೀಪ್ ದೋಷಿ

ಅಪಾರವಾದ ಪ್ರತಿಭೆ ಇದ್ದರೂ, ದೇಶಕ್ಕಾಗಿ ಆಡುವ ಅವಕಾಶಕ್ಕಾಗಿ ಬಹಳ ವರ್ಷಗಳ ಕಾಲ ಕಾದ ನಂತರ ಸಿಕ್ಕ ಸಣ್ಣ ಅವಕಾಶವನ್ನೇ ಬಳಸಿಕೊಂಡು ತಕ್ಕ ಮಟ್ಟಿಗೆ ಪ್ರದರ್ಶನ ನೀಡಿದ್ದ  ಭಾರತ ಕ್ರಿಕೆಟ್ ತಂಡದ ಕನ್ನಡಕಧಾರಿ ಎಡಗೈ ಸ್ಪಿನ್ನರ್ ದಿಲೀಪ್ ದೋಷಿ  2025ರ ಜೂನ್ 23ರಂದು ತಮ್ಮ ಲಂಡನ್‌ನಲ್ಲಿ 77 ನೇ ವಯಸ್ಸಿನಲ್ಲಿ ನಿಧನರಾಗಿದ್ದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಕ್ರಿಕೆಟ್ ಸಾಧನೆಗಳು ಇದೋ ನಿಮಗಾಗಿ

22 ಡಿಸೆಂಬರ್ 1947 ರಲ್ಲಿ ರಾಜ್‌ಕೋಟ್ ನಲ್ಲಿ ಜನಿಸಿದ ದಿಲೀಪ್ ರಸಿಕ್ಲಾಲ್ ದೋಷಿ ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್ ಬಗ್ಗೆ ಹೆಚ್ಚಿನ ಅಸಕ್ತಿ  ಹೊಂದಿದ್ದು, ಎಡಗೈ ಸ್ಪಿನ್ನರ್ ಆಗಿ ರೂಪುಗೊಂಡು ಪ್ರಥಮ ದರ್ಜೆ ಕ್ರಿಕೆಟ್‌ಗೆ ಸೌರಾಷ್ಟ್ರದ ಪರವಾಗಿ ಪಾದಾರ್ಪಣೆ ಮಾಡಿದರೂ ನಂತರದ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ವಲಸೆ ಹೋಗಿ ಆ ತಂಡದ ಪರವಾಗಿಯೇ ಹೆಚ್ಚಿನ ರಣಜಿ ಟ್ರೋಫಿ ಕ್ರಿಕೆಟ್  ಪಂದ್ಯಗಳನ್ನಾಡಿದರು. 1974 ರಲ್ಲಿ ಬಂಗಾಳ ಪರವಾಗಿ  ಅಸ್ಸಾಂ ವಿರುದ್ಧ 6 ​​ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದ ದೋಷಿ ತಮ್ಮ ಸುದೀರ್ಘ ರಣಜಿ ಟ್ರೋಫಿ ವೃತ್ತಿ ಜೀವನವು 18.33 ರ ಪ್ರಭಾವಶಾಲಿ ಸರಾಸರಿಯಲ್ಲಿ 318 ವಿಕೆಟ್‌ಗಳನ್ನು  ಪಡೆದು ಭಾರತ ತಂಡದ ಪರವಾಗಿ ಆಡಲು ಕದ ತಟ್ಟ ತೊಡಗಿದರು.

ನಮಗೆಲ್ಲರಿಗೂ ತಿಳಿದಿರುವಂತೆ 1960 ಮತ್ತು 1970ರ ದಶಕದಲ್ಲಿ ಭಾರತದ ಪರ ಎರಪಳ್ಳಿ ಪ್ರಸನ್ನ ಮತ್ತು ಶ್ರೀನಿವಾಸ್ ವೆಂಕಟರಾಘವನ್ (ಇಬ್ಬರೂ ಆಫ್ ಸ್ಪಿನ್ನರ್‌ಗಳು ), ಭಗವತ್ ಚಂದ್ರಶೇಖರ್ ( ಲೆಗ್ ಸ್ಪಿನ್ನರ್ ), ಮತ್ತು ಬಿಷನ್ ಸಿಂಗ್ ಬೇಡಿ ( ಎಡಗೈ ಸ್ಪಿನ್ನರ್ ).  ಆವರುಗಳು ಭಾರತೀಯ ಸ್ಪಿನ್ ಕ್ವಾರ್ಟೆಟ್ ಎಂದೇ ಪ್ರಸಿದ್ದರಾಗಿದ್ದರು. ಈ ಭಾರತೀಯ ಸ್ಪಿನ್ ಬೌಲರ್‌ಗಳು ತಾವು ಆಡಿದ  231 ಟೆಸ್ಟ್ ಪಂದ್ಯಗಳಲ್ಲಿ  853 ವಿಕೆಟ್‌ಗಳನ್ನು ಕಬಳಿಸುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಮಾರಕ ಸ್ಪಿನ್ ಸಂಯೋಜನೆಗಳಲ್ಲಿ ಒಂದಾಗಿದ್ದಲ್ಲದೇ, ಅನೇಕ ವಿಶ್ವ ದರ್ಜೆಯ ದಾಂಡಿಗರಿಗೆ ಸಿಂಹಸ್ವಪ್ನವಾಗಿದ್ದರು.  ಇವರ ಮಧ್ಯೆ ಕರ್ಸನ್ ಘಾವ್ರಿ ಸಹಾ ಇದ್ದದ್ದು ಗಮನಾರ್ಹವಾಗಿತ್ತು.

ಇಂತಹ ಘಟಾನುಘಟಿಗಳಿರುವಾಗ ಸಹಜವಾಗಿಯೇ ದಿಲೀಪ್ ದೋಷಿಯವರಿಗೆ ಭಾರತದ ಪರ ಆಡಲು ಅವಕಾಶವೇ ಸಿಗದೇ ವಯಸ್ಸು  ಮೂವತ್ತು ದಾಟಿ, ಭಾರತದ ಪರ ಆಡುವುದು ಮರೀಚಿಕೆಯಾಗಿಯೇ ಉಳಿಯಬಹುದು ಎಂದು ಎಲ್ಲರೂ ಭಾವಿಸುತ್ತಿರುವಾಗಲೇ, ಚಂದ್ರಶೇಖರ್ ಅವರ ಬದಲಾಗಿ 1979 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಟೆಸ್ಟ್ ಪಂದ್ಯಕ್ಕೆ  ದೋಷಿ ಆಯ್ಕೆ ಆದಾಗ ದೋಷಿಯವರ ವಯಸ್ಸು 32 ಆಗಿತ್ತು.  ವಯಸ್ಸು  30+ ಆದ ನಂತರ  ಟೆಸ್ಟ್ ಕ್ರಿಕೆಟ್ಟಿಗೆ ಪಾದರ್ಪಣೆ ಮಾಡಿದ ವಿಶ್ವದ  ನಾಲ್ವರು ಟೆಸ್ಟ್ ಬೌಲರ್‌ಗಳಲ್ಲಿ ದೋಷಿಯವರು ಒಬ್ಬರಾಗಿದ್ದು ಉಳಿದ ಮೂವರು ಕ್ಲಾರಿ ಗ್ರಿಮೆಟ್ , ಸಯೀದ್ ಅಜ್ಮಲ್ ಮತ್ತು ರಯಾನ್ ಹ್ಯಾರಿಸ್  ಅಗಿದ್ದಾರೆ.

ಬಹಳಷ್ಟು ದಿನಗಳ ಕಾಲ ಭಾರತದ ತಂಡ ಪರ ಆಡಲು  ಕಾಯುತ್ತಿದ್ದ  ದೋಷಿ ತಮ್ಮ ಕೈಚಳಕವನ್ನು ತೋರಿಸಲು ಹೆಚ್ಚಿನ ಸಮಯ ವ್ಯರ್ಥ ಮಾಡದೇ, ತಮ್ಮ ಚೊಚ್ಚಲು ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ   6/103 ಮತ್ತು ಎರಡನೇ ಇನ್ನಿಂಗ್ಸಿನಲ್ಲಿ 2/64  ಹೀಗೆ ಒಟ್ಟು 8 ವಿಕೆಟ್ಟುಗಳನ್ನು ಪಡೆಯುವ ಮೂಲಕ ಆ ಪಂದ್ಯದಲ್ಲಿ ಭಾರತದ ಅತ್ಯುತ್ತಮ ಬೌಲರ್ ಆಗಿದ್ದಲ್ಲದೇ ತಮ್ಮ ಚೊಚ್ಚಲು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರೆಸಿದರು.  ಬಾಂಬೆಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ  ಅವರು 5/43 ಮತ್ತು 3/60  ಹೀಗೆ ಮತ್ತೆ8 ವಿಕೆಟ್ಟುಗಳನ್ನು ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 1979ರಲ್ಲಿ ಆಸ್ಟ್ರೇಲಿಯ ವಿರುದ್ಧ  ಕಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ 70,000 ತವರಿನ ಪ್ರೇಕ್ಷಕರ ಮುಂದೆ ಅಕ್ಟೋಬರ್ 26 ರಿಂದ 31ರ ಮಧ್ಯೆ ನಡೆದ 5ನೇ  ಟೆಸ್ಟ್ ಪಂದ್ಯದಲ್ಲಿ  4/92 & 50/2 ಒಟ್ಟು 6 ವಿಕೆಟ್ ಪಡೆದು ತಂಡದ ಗೆಲುವಿನ ಹತ್ತಿರಕ್ಕೆ ತಂದು  ಅಂತಿಮವಾಗಿ ಡ್ರಾ ದಲ್ಲಿ ಮುಕ್ತಾಯ ಮಾಡಿದ್ದು ಅವರ ಅತ್ಯಂತ ಸಂತೋಷಕರವಾದ ಕ್ಷಣವಾಗಿತ್ತು.

ಎಡಗೈ ಸ್ಪಿನ್ನರ್ ದಿಲೀಪ್ ದೋಷಿ ದೋಷಿ, 1979 ರಿಂದ 1983 ರವರೆಗಿನ ಸಣ್ಣ ಅವಧಿಯಲ್ಲಿ ಭಾರತ ಪರ 33 ಟೆಸ್ಟ್ ಗಳಲ್ಲಿ 114 ವಿಕೆಟ್‌ (ಆರು ಬಾರಿ ಐದು ವಿಕೆಟ್ ಗೊಂಚಲು) ಮತ್ತು 15 ಏಕದಿನ ಪಂದ್ಯಗಳ 22 ವಿಕೆಟ್‌ಗಳನ್ನು ಕಬಳಿಸಿದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಯಮಿತವಾಗಿ ಪಂದ್ಯ ಗೆಲ್ಲಿಸುವ ಬೌಲರ್ ಆಗಿ ಹೊರಹೊಮ್ಮಲು ವಿಫಲರಾಗಿದ್ದರು. ಕೇವಲ ಬೋಲಿಂಗ್ ಮಾತ್ರವೇ ಸೀಮಿತರಾಗಿ ಆವರ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಅಷ್ಟೇನೂ ಉತ್ತಮವಾಗಿರಲಿಲ್ಲ. 11ನೇ ಕ್ರಮಾಂಕದಲ್ಲಿ 38 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ ಕೇವಲ 4.6 ಬ್ಯಾಟಿಂಗ್ ಸರಾಸರಿಯೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಳಪೆ ಬ್ಯಾಟ್ಸ್‌ಮನ್‌ಗಳಲ್ಲಿ   ದೋಷಿ ಕೂಡ ಒಬ್ಬರಾಗಿ ಪರಿಗಣಿಸಲ್ಪಟ್ಟಿದ್ದು ಬೇಸರದ ಸಂಗತಿಯಾಗಿತ್ತು. ಇದೇ ಕಾರಣಕ್ಕಾಗಿಯೇ 1983ರ ಇಂಗ್ಲೇಂಡಿನಲ್ಲಿ ನಡೆದ ಪ್ರುಡೆನ್ಷಿಯಲ್ ವಿಶ್ವಕಪ್‌ ನಲ್ಲಿ  ದೋಷಿಯವರ ಬದಲಾಗಿ  ಆಲ್‌ರೌಂಡರ್ ಆಗಿ ರವಿಶಾಸ್ತ್ರಿ ಅವರಿಗೆ ಆದ್ಯತೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಮಣೀಂದರ್ ಸಿಂಗ್ ಸಹಾ ಪ್ರಭಲ ಸ್ಪಿನ್ನರ್ ಆಗಿ ಹೊರ ಹೊಮ್ಮಿದ ಕಾರಣ ದೋಷಿಯವರಿಗೆ ಭಾರತ ತಂಡ ಪರ ಆಡುವ ಬಾಗಿಲು ಶಾಶ್ವತವಾಗಿ ಮುಚ್ಚಿಹೋಯಿತು.

1960 ಅಂತ್ಯ ಮತ್ತು 1970ರ ದಶಕದಲ್ಲಿ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಬಾಂಬೆಯ ಪದ್ಮಾಕರ್ ಶಿವಾಳ್ಕರ್ ಹರಿಯಾಣ ಮತ್ತು ದೆಹಲಿಯ ರಾಜಿಂದರ್ ಗೋಯಲ್ ಮತ್ತು ಬಂಗಾಲದ ದಿಲೀಪ್ ದೋಷಿ ಈ  ಮೂವರು ಎಡಗೈ ಸ್ಪಿನ್ನರ್‌ಗಳು ಮಹಾನ್ ಸಾಧನೆ ಗೈದಿದ್ದರು. ಇಂದಿಗೂ ಸಹಾ ರಣಜಿ ಟ್ರೋಫಿಯಲ್ಲಿ ಗೋಯಲ್ ಅವರು ಪಡೆದ 640 ವಿಕೆಟ್ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯಾಗಿಯೇ ಉಳಿದಿದೆ. ಅದೇ ರೀತಿ  ಶಿವಾಳ್ಕರ್ ಸಹಾ ಬಾಂಬೆ ತಂಡ ಹತ್ತಾರು ಬಾರಿ ರಣಜಿ ಚಾಂಪಿಯನ್ಸ್ ಗಳಾಗಲು ಪ್ರಮುಖ ಪಾತ್ರ ವಹಿಸಿದ್ದರೂ, ಬಿಎಸ್ ಬೇಡಿ ಅವರ ಉಪಸ್ಥಿತಿಯಿಂದಾಗಿ ಭಾರತ ಪರ ಆಡಲು ಅವಕಾಶವೇ ಸಿಗದೇ ಹೋದಾಗ ಕನಿಷ್ಠ ಪಕ್ಷ  33 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳಲ್ಲಿ ದೋಷಿಯವರಿಗೆ  ಆಡುವ ಅವಕಾಶ ಸಿಕ್ಕಿದ್ದೇ  ಅತ್ಯಂತ ಅದೃಷ್ಟ ಎಂದರೂ ತಪ್ಪಾಗದು.

ಭಾರತೀಯ ಕ್ರಿಕೆಟ್ ತಂಡಕ್ಕೆ ತಮಗೆ ಆಡಲು ಅವಕಾಶ ಸಿಗದು  ಎಂಬುದನ್ನು ಮನಗಂಡ  ದಿಲೀಪ್ ದೋಷಿ 1980 ರ ದಶಕದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿ ಭಾರತದಿಂದ ಶಾಶ್ವತವಾಗಿ ಇಂಗ್ಲೇಂಡಿಗೆ ವಲಸೆ ಹೋಗಿದ್ದಲ್ಲದೇ ಅಲ್ಲಿನ ಕೌಂಟಿ ಕ್ರಿಕೆಟ್ಟಿನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಮತ್ತು ವಾರ್ವಿಕ್‌ಷೈರ್ ತಂಡಗಳನ್ನು ಸಹ ಪ್ರತಿನಿಧಿಸಿದ್ದರು. ಹೀಗೆ ಇಂಗ್ಲೇಂಡ್ ಮತ್ತು  ಭಾರತದಲ್ಲಿ ಸೌರಾಷ್ಟ್ರ ಮತ್ತು ಬಂಗಾಳ ಪರ ಅಡಿದ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಒಟ್ಟಾರೆಯಾಗಿ 898 ವಿಕೆಟ್‌ಗಳನ್ನು ಪಡೆದಿದ್ದಾರೆ.

ಬಹಳ ಜನರಿಗೆ ತಿಳಿದಿಲ್ಲದಿರುವ ವಿಷಯವೆಂದರೆ ದೋಷಿಯವರು ನಾಟಿಂಗ್ ಹ್ಯಾಮ್ ಶೈರ್ ಆಡುತ್ತಿದ್ದಾಗ  ವೆಸ್ಟ್ ಇಂಡೀಸ್  ಮತ್ತು ವಿಶ್ವ ಕ್ರಿಕೆಟ್ ದಂತಕಥೆಯಾಗಿದ್ದಂತಹ ಗಾರ್ಫೀಲ್ಡ್ ಸೋಬರ್ಸ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು, ಗಾರ್ಫೀಲ್ಡ್ ಸೋಬರ್ಸ್  ಅವರಿಗೆ ದೋಷಿಯವರ ಬಗ್ಗೆ ಅಪಾರವಾದ  ಅಭಿಮಾನವಿತ್ತು ಎನ್ನುವುದಕ್ಕೆ ಅವರು ಆಡಿರುವ ಈ ಮಾತುಗಳೇ ಸಾಕ್ಷಿ. ಪ್ರಪಂಚದಾದ್ಯಂತ ಎಲ್ಲಾ ಹಂತಗಳಲ್ಲಿ ಆಡಿರುವ ದೋಷಿಯವರು  ಸ್ಪಿನ್ ಬೌಲಿಂಗ್ ಕಲೆಯ ಬಗ್ಗೆ ಮಾತನಾಡಲು ಅವರಿಗಿಂತ ಅರ್ಹರು ಯಾರೂ ಇರಲು ಸಾಧ್ಯವಿಲ್ಲ. ವೃತ್ತಿಪರ ಕ್ರಿಕೆಟ್‌ಗೆ ತಮ್ಮ ಹಾದಿಯನ್ನು ಅನುಸರಿಸಲು ಬಯಸುವವರಿಗೆ ದಿಲೀಪ್ ದೋಷಿಯವರ ಸಾಧನೆ ನಿಜಕ್ಕೂ ಪ್ರೇರಣೆ ಎಂದಿರುವುದು ಶ್ವಾಘನೀಯವಾಗಿದೆ.

ಚಿಂತನಶೀಲ ಕ್ರಿಕೆಟಿಗ ಎಂದು ಪ್ರಸಿದ್ಧರಾಗಿದ್ದ ದೋಶಿಯವರು ತಮ್ಮ ಕ್ರಿಕೆಟ್ ದಿನಗಳ ಕುರಿತಾಗಿ ಸ್ಪಿನ್ ಪಂಚ್ ಎಂಬ ಹೆಸರಿನಲ್ಲಿ ಬರೆದಿರುವ  ಆತ್ಮಚರಿತ್ರೆಯ ಬಹಳ ಪ್ರಖ್ಯಾತವಾಗಿತ್ತು ಅದರಲ್ಲಿ ಬಹಳ ಪ್ರಾಮಾಣಿಕಯಿಂದ  ಮತ್ತು ಅಷ್ಟೇ ಪ್ರಭಾವಶಾಲಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸ್ಪಿನ್ ಬೌಲಿಂಗ್ ಎನ್ನುವುದು ಬುದ್ಧಿವಂತಿಕೆಯ ಹೋರಾಟ ಎಂದು ಅದರಲ್ಲಿ ಹೇಳಿದ್ದಾರೆ.  ಅವರೇ ಹೇಳಿಕೊಂಡಂತೆ 1981 ರಲ್ಲಿ ಮೆಲ್ಬೋರ್ನ್‌ನಲ್ಲಿ ಕರ್ಸನ್ ಘಾವ್ರಿ ಜೊತೆಗೂಡಿ ಭಾರತಕ್ಕೆ ಪ್ರಸಿದ್ಧ ಗೆಲುವನ್ನು ತಂದುಕೊಟ್ಟಿದ್ದು ಅವರ ವೃತ್ತಿಜೀವನದ ಅತ್ಯುತ್ತಮ ಕ್ಷಣ ಎಂದು ನೆನಪಿಸಿಕೊಂಡಿದ್ದಾರೆ. ಆ ಪಂದ್ಯದಲ್ಲಿ ದೋಶಿ ಐದು ವಿಕೆಟ್‌ಗಳನ್ನು ಪಡೆದಿದ್ದಲ್ಲದೇ,  ಕರ್ಸನ್ ಘಾವ್ರಿ ಅವರ ಜೊತೆಗೂಡಿ ಆಸ್ಟ್ರೇಲಿಯನ್ನರನ್ನು ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಕಟ್ಟಿಹಾಕಿದರೆ, ಅಂತಿಮವಾಗಿ ಭಾರತದ ಮತ್ತೊಬ್ಬ ಶ್ರೇಷ್ಠ ಆಲ್ ರೌಂಡರ್ ಕಪಿಲ್  ಪಂದ್ಯವನ್ನು ಮುಗಿಸಿದರು ಹಾಗಾಗಿ  ನಾನು ಆ ಪಂದ್ಯದ ಗೆಲುವಿನ ಶ್ರೇಯವನ್ನು ಕಪಿಲ್ ಅವರಿಗೆ ನೀಡುತ್ತೇನೆ. ಅದು ನನ್ನ ಏಕೈಕ ಶ್ರೇಷ್ಠ ಕ್ರಿಕೆಟ್ ಕ್ಷಣ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.  ಚಿಕ್ಕ ವಯಸ್ಸಿನಿಂದಲೇ ಕಣ್ಣಿನ ತೊಂದರೆಯಿಂದಾಗಿ ದಪ್ಪನೆಯ ಸೋಡಾ ಗ್ಲಾಸ್ ರೀತಿಯ ಕನ್ನಡಕವನ್ನು ಧರಿಸಿ ಬೌಲಿಂಗ್ ಮಾಡುತ್ತಿದ್ದ ದೋಷಿ, ಅದೊಮ್ಮೆ ಟೆಸ್ಟ್ ಪಂದ್ಯದಲ್ಲಿ ತಮ್ಮ ಮುರಿದ ಕಾಲ್ಬೆರಳಿನಿಂದ ಆಡಿದರು. ಪ್ರತೀದಿನವೂ ಕಾಲಿನ ಊತವನ್ನು ಕಡಿಮೆ ಮಾಡಲು ಚಿಕಿತ್ಸೆ ಪಡೆದಯುತ್ತಿದ್ದರೂ ಭಾರತದ ಪರ ಆಡಬೇಕು ಮತ್ತು ಏನನ್ನಾದರೂ ಸಾಧಿಸಬೇಕು ಎನ್ನುವ ಅವರ ಛಲ ಮೆಚ್ಚುವಂತಹದ್ದಾಗಿತ್ತು.  ಭಾರತದ ಕ್ರಿಕೆಟ್ ಗಾಗಿ ತಮ್ಮ ಕೈಲಾದ ಮಟ್ಟಿನ ಕೊಡುಗೆ ನೀಡಿದ್ದ ದೋಷಿಯವರಿಗೆ  2020 ರಲ್ಲಿ, ಬಿಸಿಸಿಐ ಕೊಡುವ ವಾರ್ಷಿಕ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಹಲವು ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದ ದೋಷಿಯವರಿಗೆ ಹೃದಯ ಸಂಬಂಧಿತ ಕಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದು ಅದೇ ಹೃದಯ ಸಂಬಂಧಿತ ಸಮಸ್ಯೆಗಳಿಂದ 2025ರ ಜೂನ್ 23ರಂದು ತಮ್ಮ ಲಂಡನ್‌ನಲ್ಲಿ 77 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ ಕಾಳಿಂದಿ, ಮಗ ನಯನ್ ಮತ್ತು ಮಗಳು ವಿಶಾಖಾ ಅಲ್ಲದೇ ಅಪಾರ ಅಭಿಮಾನಿಗಳನ್ನು  ಅಗಲಿದ್ದಾರೆ. ಸರ್ರೆ ಮತ್ತು ಸೌರಾಷ್ಟ್ರ ಪರ ಆಡಿದ್ದ ಅವರ ಮಗ ನಯನ್ ದೋಷಿ, ಆರಂಭದ ದಿನಗಳಲ್ಲಿ  RCB ತಂಡ ಭಾಗಿಯಾಗಿದ್ದು ಅವರ ತಂದೆಯಂತೆಯೇ  ಪಂದ್ಯಗಳಲ್ಲಿ ಆಡಲು ಅವಕಾಶ ವಂಚಿತರಾಗಿದ್ದು ಮಾತ್ರಾ ವಿಪರ್ಯಾಸ.

ಭೌತಿಕವಾಗಿ ದೋಷಿಯವರು ಅಗಲಿದ್ದರೂ, ತಮ್ಮ ಛಲ, ಕ್ರೀಡಾ ಮನೋಭಾವ, ಸಾಹಸ,  ಬದ್ಧತೆ ಮತ್ತು ಶ್ರೇಷ್ಠತೆಯ ಶ್ರೀಮಂತ ಪರಂಪರೆಯ ಮೂಲಕ ಸಕಲ ಕ್ರಿಕೆಟ್ ಅಭಿಮಾನಿಗಳ ಹೃದಯಗಳಲ್ಲಿ ಆಚಂದ್ರಾರ್ಕವಾಗಿ ನೆಲಿಸಿರುತ್ತಾರೆ  ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ದಿಲೀಪ್ ದೋಷಿ

  1. ಡಿಲೀಪ್ ದೋಷಿ ಯವರ ಹೆಸರು ಆಗಾಗ ಪತ್ರಿಕೆಯಲ್ಲಿ ಓದುತ್ತಿದ್ದ ಬಾಲ್ಯದ ನೆನಪು ಹಸಿರಾಯ್ತು

    Liked by 1 person

Leave a comment