ಸಾಮಾನ್ಯ ಜನರುಗಳ ಮೇಲೆ ಚಲನ ಚಿತ್ರಗಳು ಬಹಳ ಪ್ರಭಲವಾದ ಪರಿಣಾಮಗಳನ್ನು ಬೀರುತ್ತದೆ. ಚಲನ ಚಿತ್ರದಲ್ಲಿ ನಟ ನಟಿಯರು ಕೇವಲ ಅಭಿನಯಿಸಿರುತ್ತಾರೆ ಎಂಬುದನ್ನು ತಿಳಿದಿದ್ದರೂ, ಜನರು ಮಾತ್ರಾ ಅವರ ಪಾತ್ರಗಳಿಂದಲೇ ಗುರುತಿಸುತ್ತಾರೆ. ಉದಾಹರಣೆಗೆ ರಾಘವೇಂದ್ರ ಸ್ವಾಮಿಗಳು ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಥಟ್ ಅಂತಾ ಮೂಡುವುದೇ ವರನಟ ರಾಜಕುಮಾರ್ ಎಂದರೂ ತಪ್ಪಾಗದು. ಅದೇ ರೀತಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮಾ ಎಂದ ಕೂಡಲೇ, ಕಪ್ಪ.. ಕಪ್ಪ… ಕಪ್ಪ ಯಾರನ್ನು ಕೇಳುತ್ತಿದ್ದೀ ಕಪ್ಪ ಕೊಡಲು! ಯಾತಕ್ಕೆ ಕೇಳುತ್ತಿ? ಮೋಡ ಮಳೆ ಸುರಿಸುತ್ತದೆ, ಭೂಮಿ ಬೆಳೆಯುತ್ತದೆ, ನಿನಗೇಕೆ ಕೊಡಬೇಕು ಕಪ್ಪ? ನೀವೇನು ನೆಂಟರೆ, ಸೋದರರೇ, ದಾಯಾದಿಗಳೇ? ನಿಮಗೇಕೆ ಕೊಡಬೇಕು ಕಪ್ಪ? ನೀವೇನು ಉತ್ತಿರಾ, ಬಿತ್ತಿರಾ, ಬೆಳೆದಿರಾ, ನೀರು ಹಾಯಿಸಿ ಕಳೆಕಿತ್ತಿರಾ? ನಿಮಗೇಕೆ ಕೊಡಬೇಕು ಕಪ್ಪ..!? ಎಂದು ಬಿ.ಆರ್.ಪಂತುಲು ನಿರ್ಮಿಸಿ, ನಿರ್ದೇಶಿಸಿದ್ದ ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ರಾಣಿ ಚನ್ನಮ್ಮಳಾಗಿ ಅಬ್ಬರಿಸಿ ಬೊಬ್ಬಿರಿದು ನಟಿಸಿದ್ದ ಬಿ. ಸರೋಜಾ ದೇವಿಯವರೇ ಕಣ್ಣ ಮುಂದೆ ಬರುತ್ತಾರೆ. ಚರ್ತುಭಾಷಾ ಕಲಾವಿದೆಯಾಗಿದ್ದ ಸರೋಜಾದೇವಿಯವರು ಸೋಮವಾರ, 14 ಜುಲೈ 2025ರಂದು ವಿಧಿವಿಶರಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ
ಅಭಿನಯ ಸರಸ್ವತಿ ಎಂದೇ ಪ್ರಖ್ಯಾತರಾಗಿದ್ದ ಶ್ರೀಮತಿ ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಾಗಿ ಮಹಾಕವಿ ಕಾಳಿದಾಸ ಎಂಬ ಕನ್ನಡ ಚಿತ್ರದ ಮೂಲಕ ತಮ್ಮ 17ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪ್ರವೇಶಿಸಿ ನಂತರ ಸುಮಾರು 6 ದಶಕಗಳ ಕಾಲ ಚರ್ತುಭಾಷಾ ತಾರೆಯಾಗಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಅನಭಿಷಕ್ತ ರಾಣಿಯಾಗಿ ಚಿತ್ರರಂಗದಕದಲ್ಲಿ ತನ್ನ ಛಾಪನ್ನು ಮೂಡಿಸಿದ್ದರು.
ಸರೋಜಾ ದೇವಿಯವರು ಮೂಲತಃ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದವರಾಗಿದ್ದು ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ದ ಪರಿಣಾಮ ಕುಟುಂಬದೊಡನೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದಂತಹ ಸಮಯದಲ್ಲಿ ಭೈರಪ್ಪನವರು ಮತ್ತು ರುದ್ರಮ್ಮ ದಂಪತಿಗಳ ನಾಲ್ಕನೇ ಮಗಳಾಗಿ 1938 ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದರು. ನೋಡಲು ಬಹಳ ಮುದ್ದಾಗಿ ಎಲ್ಲರ ಮನಸ್ಸೂರೆಗೊಳ್ಳುವಂತಿದ್ದ ಸರೋಜಾ ದೇವಿಯವರಿಗೆ ಬಾಲ್ಯದಿಂದಲೇ ಅವರ ತಂದೆಯವರ ಪ್ರೋತ್ಸಾಹದಿಂದಾಗಿ ಲಲಿತಕಲೆಗಳ ಮೇಲೆ ಬಹಳ ಆಸಕ್ತಿ ಮೂಡಿ ಸಣ್ಣ ವಯಸ್ಸಿನಲ್ಲೇ ನೃತ್ಯಾಭ್ಯಾಸವನ್ನು ಆರಂಭಿಸಿದರು. ಅವರ ತಂದೆ ಭೈರಪ್ಪನವರಿಗೆ ತಮ್ಮ ಮಗಳು ಒಬ್ಬಳು ಪ್ರಸಿದ್ಧ ನೃತ್ಯ ಕಲಾವಿದೆ ಮತ್ತು ಅಭಿನೇತ್ರಿ ಆಗಬೇಕು ಎಂಬ ಆಸೆ ಇದ್ದ ಕಾರಣ, ಸಮಯ ಸಿಕ್ಕಾಗಲೆಲ್ಲಾ ಆಕೆಯನ್ನೂ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಂತಹ ಸ್ಟುಡಿಯೋಗಳಿಗೆ ಕರೆದೊಯ್ಯುತ್ತಿದ್ದಂತಹ ಸಂಧರ್ಭದಲ್ಲಿ ಅವರ ತಾಯಿ ಸರೋಜಾ ದೇವಿಯವರ ಬಟ್ಟೆಗಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ ಕಳುಹಿಸಿದ್ದ ಕಾರಣ, ಮುಂದೆ ಅವರು ನಟಿಯಾದಾಗಲೂ ಸಹಾ, ಈಜುಡುಗೆಗಳು ಮತ್ತು ತೋಳಿಲ್ಲದ ರವಿಕೆಗಳನ್ನು ಧರಿಸದೆಯೂ ಜನರ ಮನ್ನಣೆಯನ್ನು ಪಡೆಯುವ ಮೂಲಕ ತಾಯಿ ಆಜ್ಞೆಯನ್ನು ಪಾಲಿಸಿದ್ದದ್ದು ವಿಶೇಷವಾಗಿತ್ತು. ತಮ್ಮ 13ನೇ ವಯಸ್ಸಿನಲ್ಲಿಯೇ ಸಮಾರಂಭವೊಂದರಲ್ಲಿ ಹಾಡುತ್ತಿದ್ದ ಪುಟ್ಟ ಬಾಲಕಿ ಸರೋಜಾಳನ್ನು ಕಂಡ ಬಿ.ಆರ್. ಕೃಷ್ಣಮೂರ್ತಿಯವರು ಚಿತ್ರದಲ್ಲಿ ನಟಿಸುವ ಪ್ರಸ್ತಾಪವನ್ನು ಎತ್ತಿದಾಗ ಇನ್ನೂ ಸಣ್ಣ ವಯಸ್ಸು ಎಂದು ಆಕೆಯ ಪೋಷಕರು ನಿರಾಕರಿಸಿದ್ದರು.
ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಹೀಗೆ ಚಿತ್ರದಲ್ಲಿ ನಟಿಸುವ ಆಸೆಯನ್ನು ನಿರಾಕರಿಸಿದ ಕೇವಲ ನಾಲ್ಕೇ ವರ್ಷಗಳಲ್ಲಿ ಅರ್ಥಾತ್ ಸರೋಜಾ ದೇವಿಯವರ 17ನೇ ವಯಸ್ಸಿನಲ್ಲಿ 1955ರಲ್ಲಿ ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಶ್ರೀ ಹೊನ್ನಪ್ಪ ಭಾಗವತರ್ ಅವರ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೇವಲ ಎರಡೇ ವರ್ಷದಲ್ಲೇ 1957ರಲ್ಲಿ ಪಾಂಡುರಂಗ ಮಹಾತ್ಯಂ ಎಂಬ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಒಂದು ವರ್ಷದ ನಂತರ 1958ರಲ್ಲಿ ನಾಡೋಡಿ ಮನ್ನನ್ ಎಂಬ ಚಿತ್ರದ ಮೂಲಕ ತಮಿಳುರಂಗಕ್ಕೆ ಪಾದಾರ್ಪಣೆ ಮಾಡಿದ್ದಲ್ಲದೇ 1959ರಲ್ಲಿ ಪೈಘಮ್ ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನೂ ಪ್ರವೇಶಿಸಿದ್ದಲ್ಲದೇ, ನೋಡ ನೋಡುತ್ತಿದ್ದಂತೆಯೇ ಚರ್ತುಭಾಷಾ ತಾರೆ ಎಂದು ಪ್ರಸಿದ್ಧರಾಗಿದ್ದಲ್ಲದೇ, ಅಂದಿನ ಬಹುತೇಕ ಎಲ್ಲಾ ಸೂಪರ್ ಸ್ಟಾರ್ ನಟರೊಂದಿಗೆ ನಟಿಸುವ ಮೂಲಕ ಆಕೆಯೂ ಸೂಪರ್ ಸ್ಟಾರ್ ನಟಿ ಎಂದೇ ಖ್ಯಾತರಾದರು.
1967 ರಲ್ಲಿ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಲ್ಲಿ ಇಂಜೀನಿಯರ್ ಆಗಿದ್ದಂತಹ ಶ್ರೀ ಹರ್ಷ ಎಂಬುವರನ್ನು ಮದುವೆಯಾಗಿ ಒಂದೆರಡು ವರ್ಷಗಳ ಕಾಲ ಚಲನ ಚಿತ್ರರಂಗದಿಂದ ದೂರವಿದ್ದು ನಂತರ ಮತ್ತೆ ಎರಡನೇ ಇನ್ನಿಂಗ್ಸಿನಲ್ಲಿಯೂ ನಾಯಕಿಯಾಗಿಯೇ ಮರಳಿದ ನಂತರ 1970 ರವರೆಗೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 1977ರಲ್ಲಿ ಭಾರ್ಗವ ನಿರ್ದೇಶಿಸಿದ ತಮಿಳು ಚಿತ್ರ ಧೀರ್ಘಸುಮಂಗಲಿಯ ರೀಮೇಕ್ ಚಿತ್ರವಾದ ಡಾ. ರಾಜ್ಕುಮಾರ್ ಮತ್ತು ಅಶೋಕ್ ಜೊತೆಯಲ್ಲಿ ನಟಿಸಿದ ಸರೋಜಾ ದೇವಿಯವರ ಮನೋಜ್ಞವಾದ ಭಾಗ್ಯವಂತರು ಚಿತ್ರದಲ್ಲಿನ ಅಭಿನಯ ಕನ್ನಡಿಗರ ಮನಸ್ಸಿನಲ್ಲಿ ಸದಾಕಾಲವೂ ಅಚ್ಚೊತ್ತಿದೆ ಎಂದರೂ ತಪ್ಪಾಗದು.
ಕನ್ನಡದಲ್ಲಿ ಡಾ.ರಾಜ್ಕುಮಾರ್, ಕಲ್ಯಾಣ್ಕುಮಾರ್, ಉದಯಕುಮಾರ್, ತೆಲುಗಿನಲ್ಲಿ ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್, ತಮಿಳಿನಲ್ಲಿ ಜೆಮಿನಿ ಗಣೇಶನ್ ಮತ್ತು ಶಿವಾಜಿಗಣೇಶನ್ ಜೊತೆಗೆ ಸುಮಾರು 22 ಹಿಟ್ ಚಿತ್ರಗಳಲ್ಲಿ ನಟಿಸಿದರೆ, ಎಂ.ಜಿ. ರಾಮಚಂದ್ರನ್ ಜೊತೆ ಜಯಲಲಿತ 28 ಚಿತ್ರಗಳಲ್ಲಿ ನಟಿಸಿದರೆ, ನಂತರದ ಸ್ಥಾನ 26 ಹಿಟ್ ಚಿತ್ರಗಳಲ್ಲಿ ಸರೋಜ ದೇವಿ ಅವರದ್ದಾಗಿರುವುದು ಗಮನಾರ್ಹವಾಗಿದೆ. ಇನ್ನು ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್ದತ್ ಅವರ ಜೊತೆಯಲ್ಲಿ ಸರೋಜಾದೇವಿಯವರು ನಟಿಸಿದ್ದಾರೆ.
ಮಲ್ಲೇಶ್ವರದ ರೈಲ್ವೇ ನಿಲ್ದಾಣದ ಹತ್ತಿರ ಇರುವ ಹವ್ಯಕ ಮಹಾ ಸಭಾ ರಸ್ತೆಯಲ್ಲಿ ವಿಶಾಲವಾದ ಮನೆಯಲ್ಲಿ ತಮ್ಮ ಕುಟುಂಬದೊಡನೆ ವಾಸಿಸುತ್ತಿದ್ದ ಸರೋಜಾ ದೇವಿಯವರು ವಯಸ್ಸಾದ ನಂತರ ನಟನೆಯಿಂದ ದೂರವಿದ್ದರೂ, 2019ರಲ್ಲಿ ಪುನೀತ್ ರಾಜ್ಕುಮಾರ್ ಅವರೊಂದಿಗೆ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದರೆ, ಆಗ್ಗಾಗ್ಗೆ ಕೆಲವರ ಬಲವಂತದ ಒತ್ತಾಯಕ್ಕೆ ಮಣಿದು ಅಲ್ಲೊಂದು ಇಲ್ಲೊಂದು ಕನ್ನಡ ಚಿತ್ರರಂಗದಲ್ಲಿ ನಟಿಸುವ ಮೂಲಕ ಸಕ್ರೀಯವಾಗಿದ್ದರು. ಕೆಲವೊಂದು ಬಾರಿ ಸ್ವಲ್ಪ ಅತಿಯಾದ ನಟನೆ ಇಲ್ಲವೇ ಮುದ್ದು ಮುದ್ದಾದಾಗಿ ಮಾತನಾಡುತ್ತಾರೆ ಎಂಬ ಆರೋಪಗಳ ನಡುವೆಯೂ ಆಕೆಯನ್ನು ಕನ್ನಡದಲ್ಲಿ ಅಭಿನಯ ಸರಸ್ವತಿ ಮತ್ತು ತಮಿಳಿನಲ್ಲಿ ಕನ್ನಡತು ಪೈಂಗಿಲಿ (ಕನ್ನಡದ ಗಿಳಿ) ಎಂಬ ಹೆಸರಿನಿಂದ ಕರೆಯುತ್ತಿದ್ದರು.
ಬಹಳಷ್ಟು ಜನರಿಗೆ ತಿಳಿಯದಿರುವ ವಿಚಾರವೆಂದರೇ, ಶ್ರೀಕೃಷ್ಣಾ ಅವರನ್ನು ಮದುವೆ ಆಗುವ ಮುನ್ನಾ ಅವರ ಹೆಸರು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎಸ್. ಎಂ ಕೃಶ್ಣ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ವಿದೇಶದಲ್ಲಿ ಉನ್ನತ ವ್ಯಾಸಂಗವನ್ನು ಮಾಡಿ ಕರ್ನಾಟಕಕ್ಕೆ ಹಿಂದಿರುಗಿ ರಾಜಕೀಯದತ್ತ ಮುಖ ಮಾಡಿದ್ದ ತರುಣ ಎಸ್. ಎಂ ಕೃಷ್ಣ ಅವರಿಗೆ ಅವರ ಊರಿನ ಹತ್ತಿರದವರೇ ಮತ್ತು ಅವರ ಒಕ್ಕಲಿಗ ಮತಸ್ಥರೇ ಆಗಿದ್ದ ಬಿ. ಸರೋಜಾದೇವಿಯವರ ಮೇಲೆ ಪ್ರೀತಿ ಉಂಟಾಗಿತ್ತು. ಆನಂತರ ಎಸ್. ಎಂ ಕೃಷ್ಣ ಅವರು ತೀರ್ಥಹಳ್ಳಿಯ ಕುಡುಮಲ್ಲಿಗೆಯ ಪ್ರೇಮ ಎಂಬುವರನ್ನು ಮದುವೆಯಾದರೆ ಸರೋಜ ದೇವಿಯವರು ಶ್ರೀ ಹರ್ಷ ಅವರನ್ನು ಮದುವೆಯಾಗಿ ಅ ವಿಷಯ ಹೊರ ಜಗತ್ತಿಗೆ ತಿಳಿಯದಾಗಿತ್ತು.
ಕರ್ನಾಟಕದ ಮಾಜೀ ಮಂತ್ರಿ ಹೆಚ್. ವಿಶ್ವನಾಥ್ ಅವರು 2008ರಲ್ಲಿ ತಮ್ಮ ಹಳ್ಳಿ ಹಕ್ಕಿ ಹಾಡು ಎಂಬ ಆತ್ಮ ಕಥನದಲ್ಲಿ ಕೃಷ್ಣ ಮತ್ತು ಸರೋಜಾ ದೇವಿಯವರ ಪ್ರಣಯದ ಕುರಿತಾಗಿ ಬರೆದ ನಂತರ ಬಹಳ ಗದ್ದಲವನ್ನು ಮಾಡಿತಾದರೂ, ಇದೇ ಸಂಧರ್ಭದಲ್ಲಿ ಪ್ರೇಮಾ ಕೃಷ್ಣ ಅವರು ಬಿ.ಸರೋಜಾದೇವಿ ಮತ್ತು ಎಸ್.ಎಂ.ಕೃಷ್ಣ ಅವರ ಜೊತೆ ಮದುವೆ ಮಾಡುವ ಪ್ರಸ್ತಾಪ ಬಂದಿದ್ದು ಸತ್ಯವಾಗಿದ್ದು, ಎಸ್.ಎಂ.ಕೃಷ್ಣ ಅವರ ಮನೆಯ ಹಿರಿಯರು ಸಿನಿಮಾ ಹಿನ್ನಲೆಯವರನ್ನು ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಒಪ್ಪದೇ ಹೋದ ಕಾರಣ, ಆ ಸಂಬಂಧ ಮುಂದುವರಿಯಲಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳಿಯಲು ಪ್ರಯತ್ನಿಸಿದ್ದರು. ಇನ್ನು ಒಂದು ಹೆಜ್ಜೆ ಮುಂದೆ ಹೋದ ಹೆಚ್. ವಿಶ್ವನಾಥ್ ತಮ್ಮ ಪುಸ್ತಕವನ್ನು ಆ ಸಮಯದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಂತಹ ಪ್ರಜ್ಞಾವಂತರಾದ ಕೃಷ್ಣಾ ಅವರಿಗೆ ಕಳುಹಿಸಿ ನಂತರ ಕರೆ ಮಾಡಿ, ಸರ್ ನಿಮಗೇನಾದರೂ ಬೇಜಾರಾಯಿತಾ?’ ಎಂದು ಕೇಳಿದಕ್ಕೆ, ಕೃಷ್ಣಾ ಅವರು ಅರೇ ಬೇಜಾರು ಏಕೆ? ಇರೋ ವಿಚಾರ ಬರೆದಿದ್ದೀಯಾ! ಮತ್ತೇನಿದೆ ಅದರಲ್ಲಿ? ಎಂದರೆ, ಬಿ. ಸರೋಜಾ ದೇವಿಯರು ಮಾತ್ರಾ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಸುದ್ದಿಯನ್ನು ತಣ್ಣಗಾಗಿಸುವುದರಲ್ಲಿ ಯಶಸ್ವಿಯಾಗಿದ್ದರು.
ನಟನೆಯಿಂದ ನಿವೃತ್ತಿ ಹೊಂದಿದ್ದರೂ, 1998ರಲ್ಲಿ ಸರೋಜಾದೇವಿಯವರು ಸೆನ್ಸಾರ್ ಬೋರ್ಡಿನ ರಿವೈಸಿಂಗ್ ಕಮಿಟಿ ಆಧ್ಯಕ್ಷರಾಗಿದ್ದಂತಹ ಸಮಯದಲ್ಲಿ ಪ್ರಸ್ತುತ ಕನ್ನಡ ಖ್ಯಾತ ನಟ, ಸಂಭಾಷಣೆಕಾರ, ಗೀತರಚನಕಾರ ಗಾಯಕ, ನಿರ್ದೇಶಕರಾಗಿರುವ ಉಪೇಂದ್ರವರು ನಾಯಕನಾಗಿ ನಟಿಸಿದ್ದ ಚೊಚ್ಚಲು ಎ ಚಿತ್ರಕ್ಕೆ ಸುಲಭವಾಗಿ ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ, ಅ ಚಿತ್ರ ರಿವೈಸಿಂಗ್ ಕಮಿಟಿಗೆ ಹೋಗಿದ್ದಂತಹ ಸಂಧರ್ಭದಲ್ಲಿ, ರಿವೈಸಿಂಗ್ ಕಮಿಟಿ ಆಧ್ಯಕ್ಷರಾಗಿದ್ದ ಸರೋಜಾದೇವಿಯವರು ಎ ಚಿತ್ರದ ಪರವಾಗಿ ವಾದ ಮಾಡಿ ಸಿನಿಮಾ ಸೆನ್ಸಾರ್ ಆಗುವ ಹಾಗೆ ಮಾಡುವ ಮೂಲಕ ಉಪೇಂದ್ರ ಎಂಬ ಕಲಾವಿದ ಕನ್ನಡ ಚಿತ್ರರಂಗದಲ್ಲಿ ಅನಭಿಶಕ್ತದೊರೆಯಾಗಿ ಮಾಡುವುದಕ್ಕೆ ಪರೋಕ್ಷವಾಗಿ ಕಾರಣವಾಗಿದ್ದನ್ನು ಉಪೇಂದ್ರ ಅವರು ಸದಾಕಾಲವೂ ನೆನಪಿಸಿಕೊಳ್ಳುತ್ತಾರೆ.
ಸರೋಜದೇವಿಯವರು ಚಿತ್ರರಂಗದಲ್ಲಿ ಸಕ್ರೀಯವಾಗಿರುವಾಗಲೇ ಬೆಂಗಳೂರಿನ ಶಿವಾಜಿನಗರದಲ್ಲಿ ಹರ್ಷಾ ಎಂಬ ಹೋಟೇಲನ್ನು ಆರಂಭಿಸಿ ಕೆಲ ವರ್ಷಗಳ ಕಾಲ ಹೋಟೆಲ್ ಉದ್ಯಮಿಯಾಗಿಯೂ ಹೆಸರುವಾಸಿಯಾಗಿದ್ದರು ಎಂಬುದನ್ನು ಬಹಳ ಹಿಂದೆ ಓದಿದ್ದ ನೆನಪು. ಚಿತ್ರರಂಗದಲ್ಲಿ ಬಂದ ಹಣವನ್ನು ಸ್ವಲ್ಪವೂ ಪೋಲು ಮಾಡದೇ ಆಸ್ತಿ ಅಂತಸ್ತುಗಳ ರೂಪದಲ್ಲಿ ಭಧ್ರ ಮಾಡಿದ್ದ ಸರೋಜಾ ದೇವಿಯವರಿಗೆ ಸಹಕಾರ ನಗರದ ಬಳಿಯ ಕೊಡಿಗೇ ಹಳ್ಳಿಯಲ್ಲಿ ದೊಡ್ಡದಾದ ತೋಟವಿದ್ದು ಅಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಚಿತ್ರರಂಗದ ಕಲಾವಿದರುಗಳಿಗೆ ಹಂಚುತ್ತಿದ್ದರು ಎಂದು ನಟ ಶ್ರೀ ಜಗ್ಗೇಶ್ ನೆನಪಿಸಿಕೊಂಡಿದ್ದಾರೆ. ಕೊಡಿಗೇ ಹಳ್ಳಿಯ ತೋಟದ ಪಕ್ಕದಲ್ಲೇ ತಮ್ಮ ಪತಿಯ ಹರ್ಷ ಅವರ ಹೆಸರಿನಲ್ಲಿ ದೊಡ್ಡದಾದ ಬಹು ಅಂತಸ್ತಿನ ಕಟ್ಟಡವನ್ನೂ (appartment) ಕಟ್ಟಿಸಿದ್ದಾರೆ.
ಸರೋಜಾ ದೇವಿಯವರ ಕಲಾ ಸಾಧನೆಗಾಗಿ 1969 ರಲ್ಲೇ ಪದ್ಮಶ್ರೀ, ಮತ್ತು 1992 ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಲ್ಲದೇ, ಭಾರತದ 60 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರದಿಂದ 2008ರ ಜೀವಮಾನ ಸಾಧನೆ ಪ್ರಶಸ್ತಿಯನ್ನೂ ಪಡೆದಿದ್ದರು. ಇದಲ್ಲದೇ ಕರ್ನಾಟಕ ಸರ್ಕಾರದ ಕೆಂಪೇಗೌಡ ಪ್ರಶಸ್ತಿಯಲ್ಲದೇ ಉತ್ತಮ ಅಭಿನಯಕ್ಕಾಗಿ ಕರ್ನಾಟಕ, ಅವಿಭಜಿತ ಆಂಧ್ರ ಮತ್ತು ತಮಿಳು ನಾಡಿನ ಸರ್ಕಾರದ ರಾಜ್ಯ ಪ್ರಶಸ್ತಿಗಳಲ್ಲದೇ, ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯ ಜೊತೆಗೆ ಹತ್ತು ಹಲವಾರು ಸಂಘ ಸಂಸ್ಥೆಗಳಿಂದ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದರು.
ಸರೋಜಾ ದೇವಿಯವರ ಕಲಾಸಾಧನೆ ಶಾಶ್ವತವಾಗಿ ನೆನಪಿನಲ್ಲಿ ಉಳಿಸುವ ಆಸೆಯಿಂದ ಭಾರತೀಯ ವಿದ್ಯಾ ಭವನದವರು 2000ರಲ್ಲಿ, ಪದ್ಮಭೂಷಣ ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಎಂಬುದನ್ನು ಆರಂಭಿಸಿ , ಪ್ರತಿ ವರ್ಷ ಕಲಾ ಜಗತ್ತಿನಲ್ಲಿ ನಾಡಿನಲ್ಲಿ ಖ್ಯಾತಿ ಗಳಿಸಿದ ಹಿರಿಯ ಕಲಾವಿದರನ್ನು ಗೌರವಿಸುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಕೆ.ಜೆ.ಯೇಸುದಾಸ್, ವೈಜಯಂತಿಮಾಲಾ, ಅಂಜಲಿದೇವಿ, ಅಂಬರೀಶ್, ಜಯಂತಿ ಮುಂತಾದವರುಗಳಿಗೆ ಈ ಪ್ರಶಸ್ತಿಯನ್ನು ಇದುವರೆಗೂ ನೀಡಲಾಗಿದ್ದು, ಒಬ್ಬ ಕಲಾವಿದೆಗೆ ಇದಕ್ಕಿಂತಲೂ ಹೆಚ್ಚಿನ ಮನ್ನಣೆ ಬೇರೆ ಏನಿದೆ? ಎಂದರೂ ಅತಿಶಯವಾಗದು.
ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆ ಸುಂದರವಾದ ಜೀವನವನ್ನು ನಡೆಸುತ್ತಿದ್ದ ಚರ್ತುಭಾಷಾ ನಟಿ ಬಿ.ಸರೋಜಾದೇವಿಯವರು 14 ಜುಲೈ 2025 ಸೋಮವಾರದಂದು ಎಂದಿನಂತೆ ಬೆಳಗ್ಗೆ ಎದ್ದು ಪೇಪರ್ ಓದಿದ ನಂತರ ಸ್ನಾನ ಮಾಡಿ ಪೂಜೆ ಮಾಡಿ ತಿಂಡಿ ತಿನ್ನುವ ಮುನ್ನಾ ಬೆಳಗ್ಗೆ 9 ಗಂಟೆಯ ಆಸುಪಾಸಿನ ಸಮಯದಲ್ಲಿ ಟಿವಿ ಆನ್ ಮಾಡಿಡುವ ಸಮಯದಲ್ಲಿ ವಯೋಸಹಜವಾಗಿ ಬಹಳ ಸುಸ್ತಾಗಿ ಕುಸಿದು ಬಿದ್ದು ಅರೆಪ್ರಜ್ಞಾವಸ್ಥೆಗೆ ಹೋಗಿದ್ದಾರೆ. ಕೂಡಲೇ ಅವರ ಮನೆಯಿಂದ ಕೂಗಳತೇ ದೂರದಲ್ಲಿರುವ ಮಣಿಪಾಲ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ತಮ್ಮ 87ನೇ ವಯಸ್ಸಿನಲ್ಲಿ ಮೃತರಾಗುವ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಿದೆ.
ಮೃತರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಅವರ ಮಲ್ಲೇಶ್ವರದ ನಿವಾಸದಲ್ಲಿ ಇಟ್ಟಿದ್ದು ಮಂಗಳವಾರ ಕೊಡಿಗೆಹಳ್ಳಿಯಲ್ಲಿರುವ ಅವರ ತೋಟದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಬಿ. ಸರೋಜಾ ದೇವಿಯವರು ಭೌತಿಕವಾಗಿ ನಮ್ಮೊಂದಿಗೆ ಇರುವುದಿಲ್ಲವಾದರೂ, ಅವರು ನಟಿಸಿರುವ ನೂರಾರು ಚಿತ್ರಗಳ ಮೂಲಕ ಜನಮಾನಸದಲ್ಲಿ ಇದ್ದೇ ಇರುತ್ತಾರೆ. ಹಾಗಾಗಿ ಕಲಾವಿದರುಗಳಿಗೆ ಸಾವಿಲ್ಲ ಎನ್ನುವುದು ಎಷ್ಟು ಸತ್ಯ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಸೂಕ್ತ ಶ್ರದ್ಧಾಂಜಲಿಯಾಗಿ ಈ ಲೇಖನ ಮೂಡಿ ಬಂದಿದೆ
LikeLike
ಧನ್ಯೋಸ್ಮಿ
LikeLike
ಇವರು ಒಂದು ಧಾರವಾಹಿಯಲ್ಲಿ ಮಾನಸಿಕ ತಜ್ಞೆಯಾಗಿ, ಒಬ್ಬ ಮರಣ ದಂಡನೆಗೊಳಗಾದ ಖೈದಿಯನ್ನು ನೀರಿನ ಇಂಜೆಕ್ಷನ್ ಕೊಟ್ಟು ಮರಣವನೈದಿಸುವ ಕತೆ ನೋಡಿದ ನೆನಪು. ಅದು ಮಾತ್ರ ಎಲ್ಲಿಯೂ ದಾಖಲಾಗಿದ್ದು ಕಾಣಿಸಲಿಲ್ಲ.
LikeLiked by 1 person
ನೀವು ಹೇಳಿದ ಪ್ರಸಂಗ ನನಗೂ ಸಹಾ ತಿಳಿದಿಲ್ಲ
LikeLike