ಭಾರತ ಸಂಸ್ಕೃತ ಶೋಭಾ ಯಾತ್ರೆ

ಅದು 80ರ ದಶಕ, ನಾವಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ ಸಂಧರ್ಭದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ  10 ದಿನಗಳ ಕಾಲ ಸರಳವಾಗಿ ಎಲ್ಲರೂ ಕಲಿತು ಎಲ್ಲರೊಡನೆ ಸುಂದರವಾಗಿ ಸಂಸ್ಕೃತದಲ್ಲೇ ಸಂಭಾಷಣೆ ನಡೆಸುವಂತಹ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಕರ್ನಾಟಕ ರಾಜ್ಯಾದ್ಯಂತವಲ್ಲದೇ, ದೇಶವ ವಿವಿಧ ಭಾಗಗಳಲ್ಲಿ ಏರ್ಪಡಿಸಲಾಗಿತ್ತು.  ಆ ಶಿಬಿರದಲ್ಲಿ ಅಬಾಲವೃದ್ಧರಾದಿಯಾಗಿ ಭಾಗವಹಿಸಿ ಆರಂಭದಲ್ಲಿ ಒಂದೆರಡು ದಿನಗಳು ಅರ್ಥವೇ ಆಗುತ್ತಿಲ್ಲಾ ಎನ್ನುತ್ತಿದ್ದವರು, ಶಿಬಿರ ಇನ್ನೇನು ಮುಗಿಯುತ್ತಿದೆ ಎನ್ನುವಷ್ಟರಲ್ಲಿ ದೈನಂದಿನ ಚಟುವಟಿಕೆಗೆ ಅವಶ್ಯವಾದಷ್ಟು ಸಂಭಾಷಣೆಯನ್ನು ಸಂಸ್ಕೃತದಲ್ಲೇ ಮಾಡುತ್ತಿದ್ದದ್ದಲ್ಲದೇ, ಪ್ರತೀ ದಿನ ಬೆಳಿಗ್ಗೆ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಸಂಸ್ಕೃತ ವಾರ್ತೆಯನ್ನು ಬಹುಪಾಲು ಆರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ಸಂಸ್ಕೃತವನ್ನು ಕಲಿತಿದ್ದರು.

ಆದೇ ಶಿಬಿರದಲ್ಲಿ ನಮಗೆ  ಕಲಿಸಿದ್ದ ಈ ಸಂಸ್ಕೃತ ಗೀತೆ ಇನ್ನೂ ಚೆನ್ನಾಗಿಯೇ ನೆನಪಿದೆ.

ಸುರಸ ಸುಬೋಧಾ ವಿಶ್ವಮನೋಜ್ಞಾ ಲಲಿತಾ ಹೃದಯಾ ರಮಣಿಯಾ!
ಅಮೃತವಾಣಿ ಸಂಸ್ಕೃತ ಭಾಷಾ ನೈವ ಕ್ಲಿಷ್ಟಾ ನ ಚ ಕಠಿಣ! ನೈವ ಕ್ಲಿಷ್ಟಾ ನ ಚ ಕಠಿಣಾ!!

ಈ ಗೀತೆಯ ಅರ್ಥ ಬಹಳ ಸರಳ ಮತ್ತು ಸುಂದರವಾಗಿದ್ದು,  ಸಂಸ್ಕೃತ ಎಂದರೆ, ಬಹಳ ಸುಂದರ,  ಸುಲಭವಾಗಿ ಎಲ್ಲರೂ ಅರ್ಥ ಮಾಡಿಕೊಳ್ಳುವಂತಹ, ಸಾರ್ವತ್ರಿಕವಾಗಿ ಎಲ್ಲರ  ಮನಸ್ಸಿಗೆ ಒಪ್ಪುವಂತಹ, ಸೊಗಸಾದ, ಪ್ರಿಯವಾದ, ಆನಂದಿಸಲು ಮಧುರ ಮಾತಾಗಿದ್ದು, ಇದು ಅಸ್ಪಷ್ಟವೂ ಅಲ್ಲ ಮತ್ತು ಕಷ್ಟಕರವೂ ಅಲ್ಲ. ಎಲ್ಲರೂ ಸುಲಭವಾಗಿ ಕಲಿಯಬಹುದಾದ ಭಾಷೆ ಎಂದು ಈ ಗೀತೆ ಹೇಳುತ್ತದೆ.

ದುರಾದೃಷ್ಟವಶಾತ್, ಬಹಳ ಪ್ರಾಚೀನವಾದ ಮತ್ತು ವಿಶ್ವದ ಅನೇಕ ಭಾಷೆಗಳ ಮೂಲವಾದ ಸಂಸ್ಕೃತ ಭಾಷೆಯ ಆಳ ಮತ್ತು ಅಗಲದ  ಅರಿವಿಲ್ಲದ ಮೆಕಾಲೇ ಶಿಕ್ಷಣ ಪದ್ದತಿಯಲ್ಲಿ ಅಲ್ಪಸ್ವಲ್ಪ ಕಲಿತಿರುವ ಕೆಲವರು ಸಂಸ್ಕೃತ ಒಂದು ಮೃತ ಭಾಷೆ ಮತ್ತು ಅದು ವೈದೀಕ ಭಾಷೆ ಎಂದು ತಪ್ಪು ಕಲ್ಪನೆಯನ್ನು ಜನರಲ್ಲಿ ಮೂಡಿಸುವ ಮೂಲಕ ಸಂಸ್ಕೃತ ಭಾಷೆಯನ್ನು ಕೇವಲ ಒಂದು  ಜನಾಂಗಕ್ಕೆ  ಸೀಮಿತಗೊಳಿಸುವ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಸ್ಕೃತ ಭಾಷೆಯನ್ನು ಕಲಿಯಲು/ಕಲಿಸಲು ವಿರೋಧ ವ್ಯಕ್ತಪಡಿಸುತ್ತಿರುವುದು  ನಿಜಕ್ಕೂ  ವಿಷಾಧನೀಯವಾಗಿದೆ.  ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಸಂಸ್ಕೃತ ಕಲಿಯುವವರಿಗೆ ಕನ್ನಡವಿರೋಧಿ ಮತ್ತು  ಕೋಮುವಾದಿ ಪಟ್ಟವನ್ನು ಕಟ್ಟುವ ಮೂಲಕ ವಿಕೃತಿಯನ್ನು ಮೆರೆಯುತ್ತಿದ್ದಾರೆ.

ಈ ರೀತಿಯಾಗಿ  ಸಂಸ್ಕೃತ ಭಾಷೆಯ ವಿರೋಧವೂ ಸಹಾ ಪಾಶ್ಚಾತ್ಯರ ಅಂಧಾನುಕರಣವಾಗಿದ್ದು, ನಮಗಿಂತಲೂ ಬ್ರಿಟೀಷರಿಗೂ ಮತ್ತು ಯೂರೋಪಿನ ಇತರೇ ದೇಶದವರಿಗೂ ಸಂಸ್ಕೃತ ಭಾಷೆ ಮತ್ತು  ನಮ್ಮ ಸನಾತನ ಧರ್ಮದ ವೇದ ಪುರಾಣ, ಶಾಸ್ತ್ರ, ಆಯುರ್ವೇದಗಳಲ್ಲಿರುವ ಸಾರದ ಬಗ್ಗೆ ಸಂಪೂರ್ಣ ಅರಿವಿದ್ದು  ಭಾರತದಲ್ಲಿ ನಿಧಾನವಾಗಿ ಸಂಸ್ಕೃತ ವಿರುದ್ಧ ಜನಾಕ್ರೋಶವನ್ನು ಮಾಡುವ ಮೂಲಕ ಭಾರತೀಯರು ಸಂಸ್ಕೃತ ಕಲಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ನಂತರ ಆ ದೇಶಗಳಲ್ಲಿ ನಮ್ಮ ಸಂಸ್ಕೃತವನ್ನು ಕಲಿಸಿ ನಮ್ಮ ಸನಾತನ ಧರ್ಮದಲ್ಲಿರುವ ಸಾರವನ್ನು ಅವರು ಕದಿಯುವ ಪ್ರಯತ್ನ ಸತತವಾಗಿ ನಡೆಯುತ್ತಿರುವುದು  ಗೊತ್ತಿದ್ದರೂ,  ನಮ್ಮ ತಥಾಗಥಿತ ಕೆಲವು ಸ್ವಘೋಷಿತ ಬುದ್ದಿ ಜೀವಿಗಳು ಪದೇ ಪದೇ ಸಂಸ್ಕೃತ ಭಾಷೆಯ ಕಲಿಕೆಯ ವಿರುದ್ಧ ಅಡ್ಡಿ ಪಡಿಸುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ.

ಯಾರು ಏನೇ ಹೇಳಿದರೂ ಇನ್ನೂ ನಮ್ಮ ಬಹುತೇಕ ಹಿಂದೂಗಳು, ಮಠ ಮಾನ್ಯಗಳು ಮತ್ತು ಧಾರ್ಮಿಕ ಕೇಂದ್ರಗಳು ಅರ್ಥಾತ್ ದೇವಾಲಯಗಳಲ್ಲಿ ವೇದ, ಸಂಸ್ಕೃತ, ಸಂಸ್ಕೃತಿ, ಸಂಗೀತ, ಸಾಹಿತ್ಯ, ನೃತ್ಯ ಮತ್ತು ಯೋಗಗಳನ್ನು ಶಾಸ್ತ್ರೀಯವಾಗಿ ಕಲಿಸಿಕೊಡುವ ಮೂಲಕ ಸನಾತನ ಧರ್ಮದ  ಸದ್ವಿಚಾರಗಳನ್ನು ಮುಂದುವರೆಸಿಕೊಂಡು ಹೋಗುವ ಕೆಲಸದಲ್ಲಿ ನಿರಂತವಾಗಿ ನಿರತವಾಗಿರುವುದು ಶ್ಲಾಘನೀಯವಾದ ಕೆಲಸವಾಗಿದೆ.

ಈ ದಿಸೆಯಲ್ಲಿ  ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ನಂತಹ ಭಾರತೀಯ ಭಾಷೆಗಳ ಕಲಿಕೆಯಂತೆಯೇ ಸಂಸ್ಕೃತ ಭಾಷೆಯ ಕಲಿಕೆಗೂ ಸಹ ಅವಕಾಶ ಮತ್ತು ಆದ್ಯತೆ ನೀಡುವ ಕುರಿತು ಜನಜಾಗೃತಿ ಮೂಡಿಸುವ ಆಶಯದಿಂದ ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ  ಶ್ರೀ ಸುರವಾಣೀ ಸಂಸ್ಕೃತ ಫೌಂಡೇಶನ್ ಸಹಯೋಗದೊಂದಿಗೆ  ಸೋಮವಾರ 28, ಜುಲೈ 2025ದಂದು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಿಂದ ವಿದ್ಯಾರಣ್ಯಪುರ ಮುಖ್ಯರಸ್ತೆಯ ಮೂಲಕ ವಿದ್ಯಾರಣ್ಯಪುರ ಸುವರ್ಣ ಕ್ರೀಡಾಂಗಣ ಅರ್ಥಾತ್ ಎನ್.ಟಿ.ಐ.ಮೈದಾನದವರೆಗೆ  ಭಾರತ ಸಂಸ್ಕೃತ ಶೋಭಾಯಾತ್ರೆಯ ಮೂಲಕ  ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನಲ್ಲಿರುವ ಹತ್ತು ಹಲವಾರು ಶಾಲೆಗಳ ನೂರಾರು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಸಂಸ್ಕೃತ ಭಾಷಾ ಕಲಿಕೆಯ ಕುರಿತಾಗಿ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹವಾಗಿದೆ.  ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಜನರೂ ಸಹಾ ಈ  ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರಲ್ಲಿಯೂ ಸಂಸ್ಕೃತದ ಬಗ್ಗೆ ಜಾಗೃತಿ ಮೂಡಿರುವುದು ಸಂತಸದ ಸಂಗತಿಯಾಗಿದೆ.

ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಾಲಯ ಪ್ರಧಾನ ಅರ್ಚಕರಾದ ಶ್ರೀ ವಸಂತ್ ಕುಮಾರ್, ಶ್ರೀ ಸುರವಾಣೀ ಸಂಸ್ಕೃತ ಫೌಂಡೇಶನ್ ಸಯೋಯೋಗದೊಂದಿಗೆ ನಡೆದ ಈ  ಭಾರತ ಸಂಸ್ಕೃತ ಶೋಭಾಯಾತ್ರೆಯ ಸಾರಥ್ಯವನ್ನು ಅವಹಿಸಿದ್ದಲ್ಲದೇ, ಮೈದಾನದಲ್ಲಿ ನಡೆದ ಸಭೆಯ ಮುಖ್ಯ ವಕ್ತಾರರಾಗಿದ್ದ ಬೆಂಗಳೂರಿನ ಯಲಹಂಕದ ಶ್ರೀ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮಶ್ರೀ ಅಭಯಾನಂದ ಸ್ವಾಮೀಜಿ ಅವರು ಮಾತನಾಡಿ ಸಂಸ್ಕೃತ ಭಾಷೆ ಭಾರತದ ಭವ್ಯ ಪರಂಪರೆಯ ಆಧಾರ ಶಕ್ತಿಯಾಗಿದೆ. ಸಂಸ್ಕೃತ ಭಾಷೆಯ ಪ್ರಚಾರದಿಂದ ನಮ್ಮ ಒಟ್ಟಾರೆ ಭವ್ಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಭಾರತ ದೇಶವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿಸುವ ಸಾಧ್ಯವಿದೆ.  ಎಲ್ಲರ ವಿರೋಧಾಭಾಸದ ನಡುವೆಯೂ ಇಂದಿನ ಮಕ್ಕಳೇ ನಾಡಿನ ಭಾವೀ ಪ್ರಜೆಗಳು ಎಂಬುದನ್ನು ಮನಗಂಡು ಬಾಲ್ಯದಲ್ಲೇ  ಈ ರೀತಿಯಾಗಿ ಸಂಸ್ಕೃತವನ್ನು ಕಲಿಸುವ ಮೂಲಕ ನಮ್ಮ ಸನಾತನ ಧರ್ಮದಲ್ಲಿರುವ  ಸದ್ವಿಚಾರಗಳನ್ನು  ಕಲಿಸಿದಲ್ಲಿ  ಮುಂದೆ ಯೌವನ ಮತ್ತು ಮುಪ್ಪಾದರೂ ಮರೆಯಲಾಗಂತೆ ಶಾಶ್ವತವಾಗಿ  ಅಚ್ಚುಳಿಯುವಂತಹ ಸ್ದದ್ದುದ್ಧಿಯನ್ನು ಪಡೆಯುವ ಸಲುವಾಗಿ  ಶ್ರೀ ಸುರವಾಣೀ ಸಂಸ್ಕೃತ ಫೌಂಡೇಶನ್ ಮತ್ತು ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಯೋಗದಲ್ಲಿ ಚಿಕ್ಕ ಮಕ್ಕಳಲ್ಲಿ ಸಂಸ್ಕೃತ ಭಾಷಾ ಪ್ರೇಮ ಜಾಗೃತಗೊಳಿಸುವ ಮೂಲಕ ಸಂಸ್ಕೃತ ಭಾಷೆಯ ಕಲಿಕೆಗೆ ಪ್ರೋತ್ಸಾಹ, ಉತ್ತೇಜನ ನೀಡುತ್ತಿರುವುದು ನಿಜವಾಗಿಯೂ ಸಮಯೋಚಿತ ಮತ್ತು ಸಕಾಲಿಕವಾದ ಕಾರ್ಯವಾಗಿದೆ ಎಂದು ಶ್ಲಾಘಿಸಿರುವುದು ಅಭಿನಂದನಾರ್ಹವಾಗಿದೆ.

ವರ್ಷದ 365 ದಿನಗಳಲ್ಲೂ ಒಂದಲ್ಲಾ ಒಂದು ಧಾರ್ಮಿಕ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ, ಸನಾತನ ಧರ್ಮದ ಪ್ರಚಾರದಲ್ಲಿ  ಅಗ್ರೇಸರರಾಗಿರುವ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು  ಈ ಭಾರತ ಸಂಸ್ಕೃತ ಶೋಭಾಯಾತ್ರೆಯ ಆಯೋಜಕರಲ್ಲಿ ಒಬ್ಬರಾದ ಶ್ರೀ ವಸಂತ ಕುಮಾರ್ ಶಾಸ್ತ್ರಿಗಳು ಮಾತನಾಡಿ ಭಾರತೀಯ ಸಂಸ್ಕೃತಿಗೂ ಸಂಸ್ಕೃತ ಭಾಷೆಗೂ ಅವಿನಾಭಾವ ಸಂಬಂಧವಿದ್ದು, ಅವರೆಡೂ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಈ ದಿಸೆಯಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೇಗೆ ನಮ್ಮ ಮಾತೃ ಭಾಷೆಗಳನ್ನು ಆಡು ಭಾಷೆಯಾಗಿ ಬಳಸುತ್ತೇವೆಯೋ ಅದೇ ರೀತಿಯಲ್ಲೇ ಸಂಸ್ಕೃತ ಭಾಷೆಯನ್ನು ಸಹ ಆಡು ಭಾಷೆಯಾಗಿ ಕಲಿಸುವಂತಾಗಬೇಕು. ಅದು ಸಾಧ್ಯವಾಗದೇ ಹೋದಲ್ಲೀ ಕನಿಷ್ಠ ಪಕ್ಷ ಸರಳವಾಗಿಯಾದರೂ ಸಂಸ್ಕೃತ ಭಾಷೆಯನ್ನು ಅರ್ಥಮಾಡಿಕೊಳ್ಳುವಷ್ಟರ ಮಟ್ಟಿಗೆ ಮಕ್ಕಳು ಸಂಸ್ಕೃತವನ್ನು ಕಲಿಯುವಂತಾದರೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಅರ್ಥೈಸಿಕೊಂಡು ನಮ್ಮ ಭವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತಾಗುತ್ತದೆ ಎಂಬ ಆಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ  ಬಿಜೆಪಿಯ ಹಿರಿಯ ಮುಖಂಡರಾದ ಶ್ರೀ ಎ. ರವಿಯವರು ಮಾತನಾಡಿ, ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿಯವರ ಆಸ್ಥೆಯಿಂದಾಗಿ ಇಂದು ಭಾರತದ ಸನಾತನ ಪರಂಪರೆಯ ಯೋಗ, ಜಾಗತಿಕ‌ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವಂತೆಯೇ, ಸನಾತನ ಭಾಷೆಯಾಗಿರುವ ಸಂಸ್ಕೃತವು ಸಹಾ ಜಗತ್ತಿನ ಎಲ್ಲಾ ಜನರ ಕಲಿಕೆಯ ಭಾಷೆಯಾದಲ್ಲಿ,  ಸನಾತನ ಧರ್ಮದಲ್ಲಿರುವ ಅಪಾರ ಜ್ಞಾನ ಭಂಢಾರಗಳಾದ  ವೇದ, ಆಗಮ, ಉಪನಿಷತ್ ಗಳನ್ನು ಬಾಲ್ಯದಿಂದಲೇ ಸಂಸ್ಕೃತವನ್ನು ಕಲಿಯುವ ಮೂಲಕ ಮಕ್ಕಳ ಜ್ಞಾನ ವಿಕಸಿತ ಗೊಳಿಸಬಹುದಾಗಿದೆ ಎಂದು ತಿಳಿಸಿದರು.

ಈ ಶೋಭಾಯಾತ್ರೆಯಲ್ಲಿ ದೇವ್ ಇನ್ ಶಾಲೆಯ ಸರ್ವಮಂಗಳ ಸೇರಿದಂತೆ ದೇವ್ ಇನ್ ಶಾಲೆಯ ಮಕ್ಕಳ ಜೊತೆಯಲ್ಲಿ ವಿದ್ಯಾರಣ್ಯಪುರ ಮತ್ತು  ಅಕ್ಕಪಕ್ಕದಲ್ಲಿರುವ ಇತರೇ ಶಾಲೆಗಳ ಸುಮಾರು 600 ಕ್ಕೂ ಹೆಚ್ಚು ಮಕ್ಕಳ ಜೊತೆ ಸುರವಾಣೀ ಫೌಂಡೇಶನ್ ನ ಅಧ್ಯಕ್ಷರಾದ ಶ್ರೀ ಸದಾಶಿವ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ಬಸವರಾಜ ಡೊಂಕಬಳ್ಳಿ, ಸ್ಥಳೀಯ ಸಮಾಜ ಸೇವಕರಾದ ಎಚ್.ರವೀಂದ್ರ, ವೆಂಕಟಾಚಲಪತಿಯವರೂ ಸಹಾ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು. ಕಾರ್ಯಕ್ರಮದ ನಂತರ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಕ್ಕಳಿಗೂ ಭಗವಧ್ವಜದ ಪ್ರತೀಕವಾದ ಕೇಸರಿ ಬಣ್ಣದ ಟಿ ಶರ್ಟ್ ಜೊತೆಗೆ ಶ್ರೀಮದ್ ರಾಮಾಯಣ ಚಿತ್ರಮಂಜರಿ ಪುಸ್ತವನ್ನು ವಿತರಿಸಿದ್ದಲ್ಲದೇ, ಕಡೆಯದಾಗಿ ಶ್ರೀ ದುರ್ಗಾ ಪರಮೇಶ್ವರೀ ದೇವಾಲಯದ ವತಿಯಿಂದ ಬಂದಿದ್ದ ಎಲ್ಲರಿಗೂ ಅಚ್ಚುಕಟ್ಟಾಗಿ ಶುಚಿ ರುಚಿಯಾದ ಪ್ರಸಾದ ವಿತರಣೆಯ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.

ಸಂಸ್ಕೃತವೂ ಸೇರಿದಂತೆ ನಮ್ಮ ಇತರೇ ಭಾರತೀಯ ಭಾಷೆಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಈ ರೀತಿಯ ಕಾರ್ಯಕ್ರಮಗಳು ಕೇವಲ ಕಾರ್ಯಕ್ರಮಗಳಾಗಿಯೇ ಉಳಿಯದೇ ಅದು ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾದಲ್ಲಿ ಮಾತ್ರವೇ ನಮ್ಮ ಭಾಷೆಗಳು ಉಳಿಯುತ್ತವೆ ಮತ್ತು ತನ್ಮೂಲಕ ನಮ್ಮ ಸನಾತನ ಧರ್ಮವೂ ಸಹಾ ಆಚಂದ್ರಾರ್ಕವಾಗಿ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಯುತ್ತದೆ. ದುರಾದೃಷ್ಟವಷಾತ್ ಹೆಚ್ಚು ಹೆಚ್ಚು ಹಣಗಳಿಸುವ ಹಪಾಪಪಿ ಮತ್ತು ಇಂಗ್ಲೀಷ್ ಭಾಷೆ ಕಲಿತಲ್ಲಿ ಮಾತ್ರವೇ  ಸಮಾಜದಲ್ಲಿ ಗೌರವ ಮತ್ತು ಮನ್ನಣೆ ದೊರೆಯುತ್ತದೆ ಎಂಬ ಅಪನಂಬಿಕೆಯಿಂದಾಗಿ ಇಂದು ಸಂಸ್ಕೃತ, ಹಿಂದಿ ಸೇರಿದಂತೆ  ನಮ್ಮ ಭಾರತೀಯ ಭಾಷೆಗಳ ವಿರುದ್ಧ ಹೋರಾಟ ನಡೆಸುವ ಮೂಲಕ ನಮಗೇ ಅರಿವಿಲ್ಲದಂತೆ  ಮತ್ತೆ ಪರಕೀಯರ ಗುಲಾಮೀತನಕ್ಕೆ ಒಗ್ಗಿ ಹೋಗುವುದಲ್ಲದೇ, ಇನ್ನು ಕೆಲವೇ ಕಲವು ವರ್ಷಗಳಲ್ಲಿ ನಮ್ಮ ಸಂಪದ್ಭರಿತವಾದ ಭಾಷೆಗಳನ್ನೇ ಮರೆತು ಹೋಗುವ ಸಂಭವವೇ ಹೆಚ್ಚಾಗಿರುವ ಕಾರಣ, ದಯವಿಟ್ಟು, ಭಾಷಾ ವಿರೋಧಿ, ದೇಶ ವಿರೋಧಿ ಮನಸ್ಥಿತಿಯವರಿಂದ ಆದಷ್ಟೂ ದೂರವಿದ್ದು, ನಮ್ಮ ನಿಮ್ಮ ಮಕ್ಕಳಿಗೆ ಆದಷ್ಟೂ ಹೆಚ್ಚು ಹೆಚ್ಚು  ಭಾರತೀಯ ಭಾಷೆಗಳನ್ನು ಕಲಿಸುವ ಮೂಲಕ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ಧಾರಿ ನಮ್ಮ ನಿಮ್ಮ ಮೇಲೆಯೇ ಇದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment