ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

ಕರ್ನಾಟಕದ ರಾಜಧಾನಿ ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಹೆಸರಿನಿಂದ ಪ್ರಖ್ಯಾತವಾಗುವುದಕ್ಕೆ ಮುನ್ನಾ ಗಾರ್ಡನ್ ಸಿಟಿ (ಉದ್ಯಾನ ನಗರಿ) ಎಂದೇ ಪ್ರಖ್ಯಾತವಾಗಿತ್ತು.  ಅದಕ್ಕೆ ಮುಖ್ಯ ಕಾರಣ  ಬೆಂಗಳೂರಿನ ಹೃದಯಭಾಗದಲ್ಲಿರುವ ವಿಶ್ವವಿಖ್ಯಾತ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಎಂಬ ವಿಶಾಲವಾದ ಮತ್ತು ಅಷ್ಟೇ ಅದ್ಭುತವಾದ ಉದ್ಯಾನವನ. ಎಲ್ಲರಿಗೂ  ಕಬ್ಬನ್ ಪಾರ್ಕ್ ಎಂದೇ ಚಿರಪರಿಚಿತ ಆಗಿರುವ ಈ ಉದ್ಯಾನವನಕ್ಕೆ  ಮಿಡೋಸ್ ಪಾರ್ಕ್ ಮತ್ತು ಶ್ರೀ ಚಾಮರಾಜೇಂದ್ರ ಉದ್ಯಾನವನ ಎಂಬ ಹೆಸರೂ ಸಹಾ ಇದೆ ಎಂದರೆ ಅಚ್ಚರಿಯಾದಾರೂ ಅದೇ ನಿಜವಾದ ಸಂಗತಿಯಾಗಿದೆ.

1701 ರಲ್ಲಿ ಮೈಸೂರು ಸಂಸ್ಥಾನದ ಒಡೆಯರಾಗಿದ್ದ ಶ್ರೀ ದೇವರಾಜ ಒಡೆಯರ್-II ಅವರು ಬೆಂಗಳೂರಿನ ಹೃದಯಭಾಗದಲ್ಲಿ ಜನರಿಗೆ ಅನುಕೂಲವಾಗುವಂತೆ ಹದಿನೆಂಟು ಆಡಳಿತ ವಿಭಾಗಗಳ ಸಚಿವಾಲಯವನ್ನು ಒಂದೆಡೆಯಲ್ಲಿ ಸೇರಿಸಿ ಅಟ್ಟಾರ ಕಚೇರಿ (16 ಕಛೇರಿಗಳು) ಯನ್ನು ಸ್ಥಾಪಿಸಿದರು. ಅದೇ ಕಛೇರಿಯನ್ನು ಮುಂದೆ ಬ್ರಿಟೀಷರು ಸಹಾ ಸಾರ್ವಜನಿಕ ಕಚೇರಿಗಳಾಗಿ  ಬಳಸಿಕೊಂಡು  ಶ್ರೀ ಲೆವಿನ್ ಬೆಂಥಮ್ ಬೌರಿಂಗ್ ಸರ್ ನಂತರ ಬೆಂಗಳೂರಿನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮಾರ್ಕ್ ಕಬ್ಬನ್, ಅವರು ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದ ಸೆಕ್ರೆಟರಿಯೇಟ್ ಕಟ್ಟಡವನ್ನು ಕಲ್ಪಿಸಿದರು. 1870 ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಮುಖ್ಯ ಇಂಜಿನಿಯರ್ ಆಗಿದ್ದ ಮೇಜರ್ ಜನರಲ್ ರಿಚರ್ಡ್ ಸ್ಯಾಂಕಿ ಅವರ ನೇತೃತ್ವದಲ್ಲಿ ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ಇದೇ ಅಟ್ಟಾರ ಕಛೇರಿಯ ಹಿಂಭಾಗದಲ್ಲಿ ಉದ್ಯಾನವನ್ನು ಆರಂಭಿಸಿ ಆನಂತರ ಅದು ಸುಮಾರು 300 ಎಕರೆಯಷ್ಟು ವಿಸ್ತರಣೆಗೊಂಡು ತೋಟಗಾರಿಕಾ ಇಲಾಖೆಯ ವತಿಯಿಂದ ಅದಾಗಲೇ ಇದ್ದ ಅನೇಕ ಮರಗಳ ಜೊತೆಯಲ್ಲೇ ಬೃಹತ್ ಬಿದಿರಿನ ಮೆಳೆಗಳು, ಹುಲ್ಲಿನ ಹರವು ಮತ್ತು ಹೂವಿನ ಗಿಡಗಳಲ್ಲದೇ ದೇಶ ವಿದೇಶಗಳಿಂದ ವಿವಿಧ ಬಗೆಯ ಅಪರೂಪದ ಗಿಡಗಮರಗಳನ್ನು ತರಿಸಿ ಅಲ್ಲಿ ನೆಡಿಸುವ ಮೂಲಕ ಅದಾಗಲೇ ಇದ್ದ ನೈಸರ್ಗಿಕ ಬಂಡೆಗಳೇ ಸೃಜನಾತ್ಮಕವಾಗಿ ಕಾಣುವಂತೆ ಸಂಯೋಜಿಸಿದರು.

ಪ್ರಸ್ತುತ ಈ ಉದ್ಯಾನವನದಲ್ಲಿ ಸ್ಥಳೀಯ ಮತ್ತು ವಿದೇಶೀಯ ವಿಲಕ್ಷಣ ಸಸ್ಯ ಶಾಸ್ತ್ರೀಯ ಪ್ರಭೇದಗಳೊಂದಿಗೆ ಸುಮಾರು 68 ಜಾತಿಗಳು ಮತ್ತು 96 ಜಾತಿಗಳು ಒಟ್ಟು ಸುಮಾರು 6000 ಸಸ್ಯಗಳು/ಮರಗಳನ್ನು ಕಾಣಬಹುದಾಗಿದೆ ಉದ್ಯಾನವನದ ರಸ್ತೆಗಳಲ್ಲಿ ಅಲಂಕಾರಿಕ ಮತ್ತು ಹೂಬಿಡುವ ಸಿಲ್ವರ್ ಓಕ್ ( ಇದು ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಪರಿಚಯಿಸಲಾದ ಮೊದಲ ಓಕ್ ಮರವಾಗಿದೆ) ಜೊತೆಯಲ್ಲೇ ಕೆಂಪನೆಯ ಗುಲ್ಮೊಹರ್ ಮರಗಳಿಂದ ಆಕರ್ಷಣಿಯವಾಗಿ ಕಾಣುವಂತಾಗಿದೆ.

ಈ ಕಬ್ಬನ್ ಪಾರ್ಕ್ ಕೇವಲ ಉದ್ಯಾನವನವಾಗಿಯಷ್ಟೇ ಅಲ್ಲದೇ, ಅದರ ಅವರಣದೊಳಗೆ ಅನೇಕ ಕಟ್ಟಡಗಳಿದ್ದು ಅವುಗಳಲ್ಲಿ ಪ್ರಮುಖವಾಗಿ ಅತ್ಯಂತ ಕಲಾತ್ಮಕವಾಗಿರುವ ಅಯ್ಯರ್ ಹಾಲ್ ಮತ್ತು ಅದರ ಮುಂದೆ ನೂರಾರು ಪ್ರಬೇಧದ ಗುಲಾಬಿ ಹೂವಿನ ಉದ್ಯಾನವನವಿದ್ದು, ಪ್ರಸ್ತುತ ಈ ಕಟ್ಟಡವನ್ನು ಕೇಂದ್ರ ಗ್ರಂಥಾಲಯವವನ್ನಾಗಿ ಮಾರ್ಪಡಿಸಲಾಗಿದೆ. ಇದು ರಾಜ್ಯದಲ್ಲಿಯೇ ಅತಿ ದೊಡ್ಡ ಸಾರ್ವಜನಿಕ ಗ್ರಂಥಾಲಯವಾಗಿದೆಯಲ್ಲದೇ ವಿಶ್ವದ ಅತ್ಯಂತ ವ್ಯಾಪಕವಾದ ಸುಮಾರು 2.65 ಲಕ್ಷ ಬ್ರೈಲ್ ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಹೆಗ್ಗಳಿಕೆ ಪಾತ್ರವಾಗಿದೆ. ಕಬ್ಬನ್ ಪಾರ್ಕಿನ ಆವರಣದಲ್ಲಿಯೇ ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯವಲ್ಲದೇ, ಜವಾಹರ್ ಬಾಲ ಭವನ ಮತ್ತು ಅದರ ಸುತ್ತಲೂ ಮಕ್ಕಳ ಆಟಿಕೆ ರೈಲಿನ ಮೂಲಕ 10-15 ನಿಮಿಷಗಳ ಸವಾರಿಯ ಜೊತೆಗೆ ಜಾರು ಬಂಡೆ, ಮಕ್ಕಳ ಆಕರ್ಷಣಿಯವಾದ ಕೇಂದ್ರವಾಗಿದೆ.

ಪ್ರತೀ  ಭಾನುವಾರಗಳಂದು ಕಬ್ಬನ್ ಪಾರ್ಕ್ ನಲ್ಲಿ ನಡೆಯುವ ವಿವಿಧ ಶ್ರೇಣಿಯ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಉದ್ಯಾನವನದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಐಯ್ಯರ್ ಹಾಲ್ ನಿಂದ ಕೂಗಳತೆಯ ದೂರದಲ್ಲಿರುವ ಭವ್ಯವಾದ ಬ್ಯಾಂಡ್ ಸ್ಟ್ಯಾಂಡ್ ಇದ್ದು, ಬ್ರಿಟೀಷರ ಕಾಲದಲ್ಲಿ ಪ್ರತೀ ಭಾನುವಾರವೂ ಅಲ್ಲಿ  ಅಂದಿನ ಮಿಲಿಟರಿ ಸೈನಿಕರ ವಾದ್ಯಗೋಷ್ಟಿಯ  ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಿದ್ದ ಕಾರಣ  ಅದು ಬ್ಯಾಂಡ್‌ ಸ್ಟ್ಯಾಂಡ್ ಎಂದೇ ಪ್ರಸಿದ್ದವಾಗಿದೆ. ಆ ದಿನಗಳಲ್ಲಿ ಬ್ಯಾಂಡ್ ಸ್ಟ್ಯಾಂಡ್ ಸುತ್ತಲೂ ಪ್ರವಾಸಿಗರು ಅಲಂಕಾರಿಕ ಬೆಂಚುಗಳ ಮೇಲೆ ಕುಳಿತು ವಾದ್ಯಗಾರರು ನುಡಿಸುತ್ತಿದ್ದ ಸಂಗೀತವನ್ನು ಆನಂದಿಸುತ್ತಿದ್ದರು. ಸ್ವಾತಂತ್ರ ಬಂದ ನಂತರ ಎಂಭತ್ತು ಮತ್ತು ತೊಂಭತ್ತರ ದಶಕದ ವರೆಗೂ ಬೆಂಗಳೂರಿನ ಹೆಸರಾಂತ ಆರ್ಕೆಸ್ಟ್ರಾ ತಂಡಗಳು ಇಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡುವುದು ಪ್ರತಿಷ್ಠೆಯ ಸಂಕೇತ ಎಂದು ಭಾವಿಸಿದ್ದವು.

ನಂತರ ಕೆಲವು ವರ್ಷಗಳ ಕಾಲ ಅದು ನಿಂತು ಹೋಗಿದ್ದನ್ನು ಮನಗಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವಾರಾಂತ್ಯದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಹಿಂದಿನ ಕಾಲದ ಮೆರುಗನ್ನು ತಂದು ಕೊಟ್ಟಿದೆ ಕಾರ್ಯಕ್ರಮ ನಡೆಯುವ ಸಂಧರ್ಭದಲ್ಲಿ ಬ್ಯಾಂಡ್ ಸ್ಟಾಂಡಿನ ಸುತ್ತಲೂ ಇರುವ ಹಸಿರು ಹುಲ್ಲುಹಾಸುಗಳ ಮೇಲೆ ಕುಳಿತೋ ಇಲ್ಲವೇ ಅ ರಸ್ತೆ ಉದ್ದಕ್ಕೂ ಇರುವ ಸಿಮೆಂಟ್ ಬೆಂಚುಗಳ ಮೇಲೆ ಕುಳಿತು ಕಾರ್ಯಕ್ರಮವನ್ನು ಆನಂದಿಸುತ್ತಾರೆ. ಅದೇ ರೀತಿ ವಾರಾಂತ್ಯದಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ವಿವಿಧ ತಂಡಗಳು ಮ್ಯಾರಥಾನ್ ಮತ್ತು ವಾಕಥಾನ್ ನಂತಹ ಸಾಂದರ್ಭಿಕ ಕಾರ್ಯಕ್ರಮಗಳಲ್ಲದೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಭಾನುವಾರದಂದು ಕಬ್ಬನ್ ಪಾರ್ಕ್‌ನಲ್ಲಿ ವಿಶೇಷ ಸಂದರ್ಭಗಳಲ್ಲಿ ಬಾಲ ಭವನದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ. ಹೀಗೆ ಕಬ್ಬನ್ ಪಾರ್ಕ್ ಸಂಪೂರ್ಣವಾಗಿ ಸಾರ್ವಜನಿಕ ಉದ್ಯಾನವನವಾಗಿದ್ದು ಬೆಳಿಗ್ಗೆ 06 ರಿಂದ ಸಂಜೆ 06 ರವರೆಗೆ ಎಲ್ಲಾ ಸಾರ್ವಜನಿಕರಿಗೂ ಉಚಿತವಾಗಿ ಉದ್ಯಾವನಕ್ಕೆ ಪ್ರವೇಶಿಸಬಹುದಾಗಿದೆ.

ಇಂತಹ ಸುಂದರವಾದ ಇತಿಹಾಸವಿರುವ ಕಬ್ಬನ್ ಪಾರ್ಕಿನ ಘನತೆಗೆ ಮಸಿ ಬಳಿಯುವಂತೆ ಬ್ಲೈಂಡ್ ಡೇಟಿಂಗ್ ಎಂಬ ಸಾರ್ವಜನಿಕ ಹಾದರದ ಕಾರ್ಯಕ್ರಮದ ಕುರಿತಾಗಿ ಬುಕ್ ಮೈ ಶೋ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದು, ಅದರಲ್ಲಿರುವ ಮಾಹಿತಿಯ ಪ್ರಕಾರ, 18 ವರ್ಷ ಮೇಲ್ಪಟ್ಟ ಯುವಕ ಯುವತಿಯರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದ್ದು, ಯುವತಿಯರಿಗೆ ರೂ .199/- ಮತ್ತು ಯುವಕರಿಗೆ ರೂ 1499/-ಗಳ ಪ್ರವೇಶ ಶುಲ್ಕ ನಿಗದಿಪಡಿಸಿತ್ತು. 2025ರ ಆಗಸ್ಟ್ 2ರಿಂದ ಆಗಸ್ಟ್ 31ರವರೆಗೆ  ಪ್ರತೀ ಶನಿವಾರ ಮತ್ತು ಭಾನುವಾರ ವಾರಾಂತ್ಯದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಬ್ಬನ್‌ಪಾರ್ಕ್‌ನಲ್ಲಿ ಪರಸ್ಪರ ಪರಿಚಯವಿರದ ಯುವಕ ಯುವತಿಯರ ಭೇಟಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿ ಬುಕ್ಕಿಂಗ್‌ ಮಾಡಿಕೊಳ್ಳುತ್ತಿತ್ತು. ಈ ಸಮಯದಲ್ಲಿ ಪರಸ್ಪರ ಸ್ನೇಹ, ಪ್ರೇಮ ಹಾಗೂ ಸಂಭಾಷಣೆಯ ಅವಕಾಶ ನೀಡಲಾಗುತ್ತದೆ ಎಂಬ ವಿವರಗಳನ್ನೂ ಆ ವೆಬ್  ಸೈಟ್‌ನಲ್ಲಿ ನೀಡಲಾಗಿತ್ತು.

ಇಡೀ ವಿಶ್ವದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಗಳಿಗೆ ಹೆಸರಾಗಿರುವ ನಮ್ಮ ಭಾರತದಲ್ಲಿ, ಅಂಧ ಪಾಶ್ವಾತ್ಯೀಕರಣ ಈ ರೀತಿಯ ಬ್ಲೈಂಡ್ ಡೇಟಿಂಗ್ ಶೋಗಳ ಮೂಲಕ ನಮ್ಮ ಯುವಕ ಯುವತಿಯರ ದಾರಿಯನ್ನು ತಪ್ಪಿಸುವಂತಹ ಇಂತಹ ಸಾರ್ವಜನಿಕ ಹಾದರದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಪ್ರಮಾಣದ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ  ರಾಜ್ಯ ಸರ್ಕಾರ ಮತ್ತು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ಅವರು, ಈ ಡೇಟಿಂಗ್ ಕಾರ್ಯಕ್ರಮಕ್ಕೆ ತೋಟಗಾರಿಕಾ ಇಲಾಖೆ ಯಾವುದೇ ರೀತಿಯ ಅನುಮತಿ ನೀಡಿಲ್ಲ. ಕಬ್ಬನ್ ಪಾರ್ಕ್‌ ಘನತೆಗೆ ಮಸಿ ಬಳಿಯುಂತಹ ಇಂತಹ ಕೆಟ್ಟ ಕಾರ್ಯಕ್ರಮ ಖಂಡಿತವಾಗಿ ಸಲ್ಲದು. ಡೇಟಿಂಗ್ ಹೆಸರಿನಲ್ಲಿ  ಈ ರೀತಿಯ ಸಾರ್ವಜನಿಕ ಸೌಲಭ್ಯ ದುರುಪಯೋಗವಾಗುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂಬ ಹೇಳಿಕೆಯನ್ನು ನೀಡುವ ಮೂಲಕ  ಯುವಕ ಯುವತಿಯರನ್ನು ತಪ್ಪುದಾರಿಗೆ ಎಳೆಯುವ ಮೂಲಕ ತಮ್ಮ ಜೇಬನ್ನು ತುಂಬಿಸಿಕೊಳ್ಳಲು  ಹವಣಿಸಿದ್ದ ಕಾರ್ಯಕ್ರಮದ ಆಯೋಜಕರ ಆಸೆಗೆ ತಣ್ಣೀರೆರೆಚಿದ್ದಾರೆ.

ಇದ್ದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಕಬ್ಬನ್ ಪಾರ್ಕ್ ಎಂಬುದು ಕೇವಲ ನೈಸರ್ಗಿಕ ಸಂಪತ್ತಷ್ಟೇ ಅಲ್ಲದೇ, ಬೆಂಗಳೂರಿಗರ  ಉಸಿರಾಟದ ಮೂಲ. ಇಂತಹ ಡೇಟಿಂಗ್ ಕಾರ್ಯಕ್ರಮಗಳ ಮೂಲಕ  ಪರಿಸರದ ಶಾಂತಿ ಹದಗೆಡುವ ಸಾಧ್ಯತೆಯೂ  ಇರುವುದರ  ಜೊತೆಗೆ ಯುವಜನತೆಯ ಅಕ್ರಮ ಚಟುವಟಿಕೆಗಳಿಗೆ ವೇದಿಕೆಯಾಗಿ ಪರಿವರ್ತನೆಯಾಗುವ ಆತಂಕವಿರುವ ಕಾರಣ, ತೋಟಗಾರಿಕಾ ಇಲಾಖೆಯ ಪರವಾಗಿ ಆಯೋಜಕರ ವಿರುದ್ಧ  ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದನ್ನು ಗಂಭೀರವಾಗಿ ಪರಿಗಣಿಸಿ, ಇದರ ಕುರಿತಾಗಿ ಕೂಡಲೇ ಸೂಕ್ತವಾದ ಕ್ರಮ ಕೈಗೊಳ್ಳದೇ ಹೋದಲ್ಲಿ ಕಾನೂನು ಮತ್ತು ನೈತಿಕ ಮೌಲ್ಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಬಹುದು ಎಂಬುದನ್ನು ಅರಿತು, ಪೊಲೀಸರು ಕಾರ್ಯಕ್ರಮದ ಆಯೋಜಕನಾದ  ವಿನಿತ್ ಎಂಬುವನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

ಯಥಾ ಪ್ರಕಾರ ಕಾನೂನಿನ ಅರಿವು ಇಲ್ಲದೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಲು ಮುಂದಾಗಿದ್ದೆ. ನನ್ನಿಂದ ದೊಡ್ಡ ತಪ್ಪಾಗಿದೆ. ಇಲ್ಲಿಯವರೆಗೆ ಕೇವಲ ನಾಲ್ಕು ಜನರಷ್ಟೇ  ನೋಂದಣಿ ಮಾಡಿಕೊಂಡಿದ್ದರು. ಹಾಗಾಗಿ ನಾನು ಈ ಕಾರ್ಯಕ್ರಮವನ್ನು ಈ ಕೂಡಲೇ ರದ್ದು ಮಾಡುವುದಲ್ಲದೇ, ಕಾರ್ಯಕ್ರಮ ರದ್ದಾಗಿರುವ ಕುರಿತಾಗಿ ಮೈಕ್ ಮೈ ಷೋ ವೆಬ್‌ಸೈಟ್‌ನಲ್ಲಿಯೂ ಸಹಾ ಪ್ರಕಟಿಸುತ್ತೇನೆ ಎಂದು  ಪೊಲೀಸರ ಮುಂದೆ ಕ್ಷಮಾಪಣೆ ಪತ್ರ ಬರೆದು ಕೊಡುವ  ಮೂಲಕ ತಿಪ್ಪೇ ಸಾರಿಸಿ, ಯಾವುದೇ ರೀತಿಯ ಶಿಕ್ಷೆಗೂ ಒಳಪಡದೇ, ಸುಲಭವಾಗಿ ತಪ್ಪಿಸಿಕೊಂಡಿದ್ದಾನೆ.

ಕಬ್ಬನ್ ಪಾರ್ಕಿನಲ್ಲಿ ವಿವಿಧ ಸಸ್ಯಗಳು ಮತ್ತು ಮರಗಳು ಎತ್ತರೆತ್ತರವಾಗಿದ್ದು, ವಿವಿಧ ಕಡೆಗಳಲ್ಲಿ ಬಂಡೆಗಳಿಂದ ಕೂಡಿರುವ ಕಾರಣ, ಸಾಕಷ್ಟು ಪ್ರೇಮಿಗಳು ಈಗಾಗಲೇ ಅವುಗಳ ಹಿಂದೆ ಕುಳಿತು ಸರಸ ಸಲ್ಲಾಪದಲ್ಲಿ ತೊಡಗಿಕೊಳ್ಳುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲವಾದ್ದರಿಂದ ಈಗ ಅಧಿಕೃತವಾಗಿಯೇ ನಡೆಸುವುದಲ್ಲಿ ತಪ್ಪೇನಿಲ್ಲಾ ಎಂದು  ಬ್ಲೈಂಡ್ ಡೇಟಿಂಗ್ ಶೋ ಪರ ವಾದಿಸುತ್ತಿರುವರ ಬಗ್ಗೆ ಅಚ್ಚರಿ ಮತ್ತು ಅನುಕಂಪ ಮೂಡುತ್ತಿದೆ. ಅವರ ಪ್ರಕಾರ ಅಲ್ಲಿ ಯಾವುದೇ ಕಾರ್ಯಕ್ರಮ ನಡೆಯಬೇಕಿದ್ದರೂ ಅಲ್ಲಿನ ಅಧಿಕಾರಿಗಳ ಗಮನಕ್ಕೆ ತಂದೇ ನಡೆಸಲಾಗುತ್ತದೆ ಮತ್ತು ಅವರಿಗೆ ಸಲ್ಲ ಬೇಕಾದ ಕಪ್ಪಕಾಣಿಕೆಗಳು ಪತ್ಯಕ್ಷವಾಗಿಯೋ  ಇಲ್ಲವೇ ಪರೋಕ್ಷವಾಗಿ ಸಲ್ಲಿಸಿದ ನಂತರವಷ್ಟೇ ನಡೆಯುತ್ತದೆ.   ಅಂತಹ  ಕಾರ್ಯಕ್ರಮಗಳಿಗೆ ಯಾರಾದರೂ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಂತೆಯೇ ಇದು ಅನಧಿಕೃತ ಕಾರ್ಯಕ್ರಮವಾಗಿದ್ದು ನಮ್ಮ ಗಮನಕ್ಕೆ ತಾರದೇ ನಡೆದಿದೆ ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳುವ ವ್ಯವಸ್ಥೆಯನ್ನು ರೂಢಿಸಿ ಕೊಂಡಿದ್ದಾರೆ ಇದಕ್ಕೆ  ಕಳೆದ ಡಿಸೆಂಬರ್ ನಲ್ಲಿ ಸೀಕ್ರೆಟ್ ಸಾಂಟಾ ಹೆಸರಿನಲ್ಲಿ ಸಾವಿರಾರು ಜನರನ್ನು ಕಬ್ಬನ್ ಪಾರ್ಕಿನಲ್ಲಿ ಸೇರಿಸಿ ಕಬ್ಬನ್ ಪಾರ್ಕನ್ನು ಗಬ್ಬೆಬ್ಬಿಸಿದ್ದನ್ನು ಇಲ್ಲಿ ನೆನಸಿಕೊಳ್ಳ ಬಹುದಾಗಿದೆ.

ನಿಜ ಹೇಳಬೇಕೆಂದರೆ, ಅಬಾಲವೃದ್ಧರಾದಿಯಾಗಿ ಸಾರ್ವಜನಿಕರು ಸೇರುವ  ಕಬ್ಬನ್ ಪಾರ್ಕ್ ನಲ್ಲಿ ಕೆಲವರು ತೆವಲುಗಳನ್ನು ತೀರಿಸಿಕೊಳ್ಳುವಂತಹ ದೃಶ್ಯಗಳನ್ನು ನೋಡಿ ಮುಜುಗರಕ್ಕೊಳಗಾಗುವುದನ್ನು ತಪ್ಪಿಸುವ ಸಲುವಾಗಿ, ಸಾರ್ವಜನಿಕರ ಸುರಕ್ಷತೆ ಮತ್ತು ಅನೈತಿಕ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಸುಮಾರು 120ಕ್ಕೂ ಹೆಚ್ಚಿನ ಸಿಸಿ ಟಿವಿಯನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಸುಭಧ್ರತೆಗೆ ಆದ್ಯತೆ ನೀಡಲಾಗಿದ್ದರೂ, ಪ್ರತಿದಿನವೂ ಕ್ರಿಯಾಶೀಲವಾಗಿ ಆ ಸಿಸಿ ಟಿವಿಯಲ್ಲಿ ಅಡಕವಾಗಿರುವ ದೃಶ್ಯಗಳನ್ನು ಗಮನಿಸಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ವಿಷಯ ಚಿದಂಬರ ರಹಸ್ಯವಾಗಿಯೇ ಉಳಿದಿರುವ ಕಾರಣ ಮತ್ತು ಅನಧಿಕೃತವಾಗಿ ಅಲ್ಲಿನ ಕೆಲವು ಸಿಬ್ಬಂಧಿಗಳಿಗೆ ಹಣ ನೀಡಿ ಎಂತಹ ಕಾರ್ಯಕ್ರಮಗಳನ್ನು ಬೇಕಾದರೂ ನಡೆಸಿ ಜೈಸಿ ಕೊಳ್ಳುಬಹುದು. ಅಕಸ್ಮಾತ್ ವಿರೋಧ ವ್ಯಕ್ತವಾದಲ್ಲಿ ಅಥವಾ ಸಿಕ್ಕಿ ಬಿದ್ದಲ್ಲಿ, ಸುಮ್ಮನೆ ಒಂದು ತಪ್ಪೊಪ್ಪಿಗೆಯ ಮುಚ್ಚಳಿಕೆ ಬರೆದುಕೊಟ್ಟು ನಿರಾಯಾಸವಾಗಿ ಶಿಕ್ಷೆ ಇಲ್ಲದೇ ತಪ್ಪಿಸಿಕೊಳ್ಳಬಹುದಾದ ವ್ಯವಸ್ಥೆ ಅಲ್ಲಿ ಚಾಲ್ತಿಯಲ್ಲಿರುವ ಬಹಿರಂಗ ಸತ್ಯ ಆಯೋಜಕರಿಗೆ ತಿಳಿದಿದ್ದು ಅವರ ಭಂಡತನವೇ ಇಷ್ಟೆಲ್ಲಾ ಅಪಸವ್ಯವಗಳಿಗೆ ಕಾರಣವಾಗಿದೆ ಎಂದರೂ ತಪ್ಪಾಗದು.

ಎಲ್ಲಿರವರೆಗೆ ನಮ್ಮವರಿಗೆ ನಮ್ಮ ಸಂಸ್ಕಾರ ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಮತ್ತು ಗೌರವ  ಇರುವುದಿಲ್ಲವೋ, ಯಾರೋ ಹೇಗಾದರೂ ಹಾಳಾಗಲಿ ನಮಗೆ ಹಣ ಬಂದರೆ ಸಾಕು ಎಂದು  ಬೇಲಿಯೇ ಹೊಲ ಮೆಯ್ಯುವಂತ ಮನಸ್ಥಿತಿಯವರು  ಇರುವವರೆಗೂ ಇಂತಹ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಕಷ್ಟಸಾಧ್ಯವೇ ಸರಿ! !ಬದಲಾವಣೆಯೇ ಜಗದ ನಿಯಮ. ಹಾಗಾಗಿ ಅಂತಹ ಬದಲಾವಣೆಯನ್ನು ಬೇರೊಬ್ಬರಿಂದ ನಿರೀಕ್ಷಿಸುವುದರ ಬದಲು, ನಾವೇ ಬದಲಾಗುವುದು ಉತ್ತಮ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment