ಉಪರಾಷ್ಟ್ರಪತಿಗಳ ಹೆಸರು ಸಿ.ಪಿ. ರಾಧಾಕೃಷ್ಣನ್ ಎಂದೇಕಿದೇ?

ಮಕ್ಕಳಿಗೆ ನಾಮಕರಣ ಮಾಡುವಾಗ, ಯಾವುದೋ ಒಂದು ಅನುಕೂಲಕರ ಹೆಸರನ್ನಿಟ್ಟರೆ ಸಾಕು.  ಅಯ್ಯೋ ಹೆಸರಿನಲ್ಲಿ ಏನಿದೇ? ಎಂದು ಪ್ರಶ್ನಿಸುವವರಿಗೆ ನೂತನವಾಗಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿ ಶುಕ್ರವಾರ 12.09/2025 ಅಧಿಕಾರವನ್ನು ಸ್ವೀಕರಿಸಿದ ಸಿ. ಪಿ. ರಾಧಾಕೃಷ್ಣನ್ ಅವರ ಹೆಸರೇ ಸಾಕ್ಷಿಯಾಗಿದ್ದು ಅ ಹೆಸರಿನ ಹಿಂದಿರುವ ರೋಚಕತೆಯನ್ನು ತಿಳಿಯೋಣ ಬನ್ನಿ.

ಕಳೆದ ತಿಂಗಳು ಅನಾರೋಗ್ಯದಿಂದಾಗಿ ಉಪರಾಷ್ಟ್ರಪತಿಗಳ ಸ್ಥಾನಕ್ಕೆ ಜಗದೀಪ್ ಧನ್ಕರ್ ಅವರು ರಾಜೀನಾಮೆ ನೀಡಿದ ನಂತರ ಮುಂದಿನ ರಾಷ್ಟ್ರಪತಿಗಳು ಯಾರಾಗಬಹುದು?  ಎಂಬ ಕುತೂಹಲ ಅನೇಕರಿಗೆ ಇತ್ತು.  ಏಕೆಂದರೆ ಸಂಘಪರಿವಾದ ಮೂಲದವರಲ್ಲದ ಕೆಲ ವರ್ಷಗಳ ಹಿಂದಯಷ್ಟೇ ಬಿಜೆಪಿಗೆ ಸೇರಿದ್ದ ಜಗದೀಪ್ ಧನ್ಕರ್ ಅವರು ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿ ಮಮತಾ ಬ್ಯಾನರ್ಜಿಯವರನ್ನು ಸಂಭಾಳಿಸಿದ ರೀತಿ ಮತ್ತು ಉಚ್ಚನ್ಯಾಯಾಲಯದಲ್ಲಿ ವಕೀಲರಾಗಿದ್ದ ಅನುಭವವನ್ನು ಪರಿಗಣಿಸಿ ಅವರನ್ನು  ಉಪರಾಷ್ಟ್ರಪತಿಗಳನ್ನಾಗಿ ಮಾಡಿದರೆ, ಉಂಡ ಮನೆಗೇ ಕನ್ನಾ ಹಾಕಲು ಮುಂದಾಗಿದ್ದನ್ನು ಗ್ರಹಿಸಿದ  ಕೇಂದ್ರ ಸರ್ಕಾರ ಕೂಡಲೇ ಅವರಿಂದ ರಾಜೀನಾಮೆ ಪಡೆದು ಮನೆಗೆ ಕಳುಹಿಸಿದ ನಂತರ ಈ ಬಾರಿ ಖಂಡಿತವಾಗಿಯೂ ಸಂಘ ಪರಿವಾರದ ಅಥವಾ ಸಂಘ ಪರಿವಾರಕ್ಕೆ ನಿಷ್ಟರಾದವರನ್ನೇ ಉಪರಾಷ್ಟ್ರಪತಿಗಳನ್ನಾಗಿ ಮಾಡುತ್ತಾರೆ ಎಂದೇ ಎಲ್ಲರೂ ತಿಳಿದಿದ್ದರು.

ಎಲ್ಲರ ನಿರೀಕ್ಷೆಗೆ ಅನುಗುಣವಾಗಿ ಬಾಲ್ಯದಿಂದಲೂ ಸಂಘದ ಸ್ವಯಂಸೇವಕರಾಗಿ ನಂತರ ಬಿಜೆಪಿ ಪಕ್ಷಕ್ಕೆ ಸೇರಿಕೊಂಡು ಹಂತ ಹಂತವಾಗಿ ಮೇಲೇರುತ್ತಾ  ತಮಿಳು ನಾಡಿನ ಬಿಜೆಪಿ ಅಧ್ಯಕ್ಷರಾಗಿ ಆನಂತರ ಎರಡು ಬಾರಿ ತಮಿಳುನಾಡಿನಲ್ಲಿ ಸಾಂಸದರಾಗಿ ಪ್ರಸ್ತುತ  ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರನ್ನು ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದಾಗ ಯಾರಿಗೂ ಅದರ ಬಗ್ಗೆ  ಅಚ್ಚರಿಯಾಗಲೀ ಬೇಸರವಾಗಲೀ ಆಗದೇ, ಎಲ್ಲರಿಗೂ ಅರ್ಹ ವ್ಯಕ್ತಿಯೊಬ್ಬರಿಗೆ ಸಂದ ಗೌರವ ಎಂದು ಭಾವಿಸಿದರೆ, ಇನ್ನೂ ಕೆಲವರು ಮುಂದಿನ ವರ್ಷದ ತಮಿಳುನಾಡಿನ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತ್ತು ದಕ್ಷಿಣ ಭಾರತಕ್ಕೆ ಪ್ರಾತಿನಿಧ್ಯ ನೀಡುವ ಸಲುವಾಗಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿಗಳಾಗಿ ಆಯ್ದೆ ಮಾಡುತ್ತಿದ್ದಾರೆ ಎಂದು ಹೇಳಿದ್ದೂ ಸಹಾ ತಪ್ಪಾಗಿರಲಿಲ್ಲ

ದಕ್ಷಿಣಕ್ಕೆ ದಕ್ಷಿಣದಿಂದಲೇ ಉತ್ತರ ನೀಡೋಣ ಎಂದು ಇಂಡಿ ಒಕ್ಕೂಟ ಭಾವಿಸಿದ್ದ ಪರಿಣಾಮ ವಿಪಕ್ಷಗಳ ಸರ್ವ ನಿರ್ಧಾರಿತ ಅಭ್ಯರ್ಧಿಯಾಗಿ   ಸರ್ವೋಚ್ಚ ನ್ಯಾಯಾಲಯದ ಮಾಜೀ ನ್ಯಾಯಾಧೀಶರಾಗಿದ್ದಂತಹ ಆಂಧ್ರ ಪ್ರದೇಶ ಮೂಲದ ಸುದರ್ಶನ್ ರೆಡ್ಡಿಯವರನ್ನು ಆಯ್ಕೆಮಾಡಿದ್ದರು. ಸಂಖ್ಯಾಬಲವನ್ನು ಆಧರಿಸಿ ರಾಧಾಕೃಷ್ಣನ್ ಅವರು ನಿಶ್ಚಯವಾಗಿ  ಆಯ್ಕೆ ಆಗುತ್ತಾರೆ ಎಂದು ಭಾವಿಸಿದ್ದರೂ ಇಂಡಿ ಒಕ್ಕೂಟದ ಅಬ್ಬರ ಪ್ರಚಾರ ಮತ್ತು ಓಟ್ ಚೋರಿ ಆರೋಪದಿಂದಾಗಿ  ಸಾಂಸದರು  ಪಕ್ಷದ ಹೊರತಾಗಿ ಆತ್ಮಸಾಕ್ಷಿಯಾಗಿ ಮತ ಚಲಾಯಿಸಿ ಸುದರ್ಶನ್ ರೆಡ್ಡಿಯವರೇ ಉಪರಾಷ್ಟ್ರ ಪತಿಗಳಾಗಿ ಆಯ್ಚೆಯಾಗಿ ಮೋದಿ ಮತ್ತು ಶಾ ಅವರಿಗೆ ಭಾರೀ ಮುಖಭಂಗ ಆಗುತ್ತದೆ  ಎಂದೇ ಇಂಡಿ ನಾಯಕರುಗಳು ಹೋದ ಬಂದ ಕಡೆಯಲೆಲ್ಲಾ ಹೇಳಿಕೊಂಡು ತಿರುಗಾಡುತ್ತಿದರು.

ಸೆಪ್ಟೆಂಬರ್ 9, 2025 ರಂದು ಮತಪತ್ರಗಳ ಮೂಲಕ ಯಾವುದೇ ವಿಪ್ ಇಲ್ಲದೇ ನಡೆದ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ (ಇಂಡೀ ಒಕ್ಕೂಟದ ಅಡ್ಡ ಮತದಾನದ ಲಾಭದಿಂದ) ಹೆಚ್ಚುವರಿ ಮತಗಳನ್ನು ಪಡೆದು ರಾಧಾಕೃಷ್ಣನ್ 452 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದರೆ, ನ್ಯಾಯಮೂರ್ತಿ ರೆಡ್ಡಿ ಅವರಿಗೆ ಕೇವಲ 300 ಮತಗಳನ್ನು ಪಡೆದರೆ ಅಚ್ಚರಿಯ ವಿಷಯವಾಗಿ ಸುಮಾರು ಹದಿನೈದು ಮತಗಳು ಅಮಾನ್ಯವಾಗಿತ್ತು, (ಸಾಂಸದರ ಮತಗಳೇ ಕುಲಗೆಟ್ಟ ಮತಗಳಾಗಿದ್ದರೂ ನಮ್ಮ ಸಿದ್ದರಾಮಯ್ಯನವರ ಸರ್ಕಾರಕ್ಕೆ EVM ಮೇಲೆ ಅಪನಂಬಿಕೆಯಂತೇ!) ಬಿಜು ಜನತಾದಳದ 7, ಭಾರತ ರಾಷ್ಟ್ರ ಸಮಿತಿಯ 4, ಶಿರೋಮಣಿ ಅಕಾಲಿ ದಳದ ಒಬ್ಬರು ಮತ್ತು ಒಬ್ಬ ಸ್ವತಂತ್ರ ಸಂಸದ ಸೇರಿದಂತೆ 13 ಸಂಸದರು ಉಪರಾಷ್ಟ್ರಪತಿ ಚುನಾವಣೆಗೆ ಗೈರುಹಾಜರಾಗಿದ್ದರು.

12.09.2025ರಂದು ತಮ್ಮ  ಮಗನಾದ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪತಿ ಮುರ್ಮು ಅವರಿಂದ ಪ್ರಮಾಣವಚನ ಸ್ವೀಕರಿಸುವುದನ್ನು ಕಣ್ತುಂಬಿಸಿಕೊಳ್ಳಲು ಬಂದಿದ್ದ ಅವರ ತಾಯಿ  ಶ್ರೀಮತಿ  ಜಾನಕಿ ಅಮ್ಮಾಳ್ ಅವರನ್ನು  ಸುದ್ದಿಗಾರರು ಮಾತನಾಡಿಸಿದಾಗ, ತಮ್ಮ ಮಗ ಉಪರಾಷ್ಟ್ರಪತಿಯಾಗಿ  ಆಯ್ಕೆ ಆಗಿರುವುದು ಬಹಳ ಸಂತೋಷವಾಗಿದೆ.  ದೇವರ ಕೃಪೆ ಮತ್ತು  ಪ್ರಧಾನಿ ಮೋದಿ ಅವರು ತಮ್ಮ ಮಗನ ಕಠಿಣ ಪರಿಶ್ರಮವನ್ನು ಗುರುತಿಸಿ ಈ ಪದವಿಗೆ ಆಯ್ಕೆ ಮಾಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಚಿಕ್ಕಂದನಿಂದಲೂ ಸಂಘ ಮತ್ತು ನಂತರ ತಮಿಳುನಾಡಿನಲ್ಲಿ ಬಿಜೆಪಿಗೆ ಅಷ್ಟೊಂದು ಶ್ರಮಿಸಿದ್ದರೂ ಅವರಿಗೆ ಸಲ್ಲಬೇಕಾದ ಗೌರವ ಸಿಗುತ್ತಿಲ್ಲವಲ್ಲಾ! ಎಂಬ ಬೇಸರವಿತ್ತು. ಆದರಿಂದ ಆ ಬೇಸರ ದೂರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹಾಗೆ ಮಾತನ್ನು ಮುಂದುವರೆಸುತ್ತಾ, ತಮ್ಮ ಮಗ ಜನಿಸಿದಾಗ, ಅಂದಿನ ದೇಶದ ರಾಷ್ಟ್ರಪತಿಗಳಾಗಿ ಸರ್ವಪಲ್ಲಿ ಶ್ರೀ ರಾಧಾಕೃಷ್ಣನ್ ಅವರು ಅಧಿಕಾರದಲ್ಲಿದ್ದರು.  ಆ ಸಮಯದಲ್ಲಿ ನಾನು ಶಿಕ್ಷಕಿಯಾಗಿದ್ದೆ. ರಾಧಾಕೃಷ್ಣನ್ ಅವರೂ ಸಹಾ ಶಿಕ್ಷಕರಾಗಿ ಅಷ್ಟು ದೊಡ್ಡ ಹುದ್ದೆಯನ್ನೇರಿದ್ದರು ಹಾಗಾಗಿ ನಮ್ಮ ಮಗನೂ ಅವರಂತೆಯೇ ದೊಡ್ಡ ವ್ಯಕ್ತಿಯಾಗಲಿ  ಎಂದು  ಮಾಜಿ ರಾಷ್ಟ್ರಪತಿಗಳ ನೆನಪಿಗಾಗಿ ನಮ್ಮ ಮಗನಿಗೆ  ರಾಧಾಕೃಷ್ಣನ್ ಎಂಬ ಹೆಸರನ್ನಿಟ್ಟೆ ಎಂಬ ಸತ್ಯವನ್ನು ಮಾಧ್ಯಮದವರ ಮುಂದಿಟ್ಟರು

ಆಗ  ನನ್ನ ಪತಿಯವರು, ನಿನ್ನ ಮಗ ಮುಂದೊಂದು ದಿನ ರಾಷ್ಟ್ರಪತಿಯಾಗಬೇಕೆಂದು ಬಯಸಿ ಈ ಹೆಸರು ಇಡುತ್ತಿದ್ದೀಯಾ? ಎಂದು ನನ್ನನ್ನು  ಕೇಳಿದಾಗ, ನಾನು ಉತ್ತರಿಸಲಾಗದೇ ಸುಮ್ಮನಾಗಿದ್ದೆ. ಆದರೆ  ದೇವರ ಕೃಪೆಯಿಂದಾಗಿ  62 ವರ್ಷಗಳ ನಂತರ, ನನ್ನ ಪತಿಯವರು  ಹೇಳಿದ್ದು ನಿಜವಾಗಿ, ರಾಷ್ಟ್ರಪತಿಗಳಲ್ಲದೇ ಹೋದರೂ ನಮ್ಮ ಮಗ ಭಾರತದಂತಹ ದೊಡ್ಡ ರಾಷ್ಟ್ರಕ್ಕೆ  ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ನನಗೆ ವಯಕ್ತಿಕವಾಗಿ ತುಂಬಾ ಸಂತೋಷವಾಗಿದೆ ಎಂದ್ದಿದ್ದಾರೆ.  ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆಯಗುತ್ತಿದ್ದಂತೆಯೇ  ತಮ್ಮ ಮಗನ ಯಶಸ್ಸನ್ನು ಸಂಭ್ರಮಿಸುತ್ತಾ, ತಮ್ಮ ನೆರೆ ಹೊರೆ  ಮತ್ತು ಊರಿನವರಿಗೆ ಸಿಹಿ ತಿಂಡಿಗಳನ್ನು ಹಂಚುವ ಮೂಲಕ ಸಂಭ್ರಮಿಸಿದೆ ಎಂದು ಹೇಳುವಾಗ  ಅವರ ಮುಖದ ಮೇಲಿದ್ದ ಮಂದಹಾಸ ನಿಜಕ್ಕೂ ಅದ್ಭುತವಾಗಿತ್ತು.

ಭಗವಂತನ ಅನುಗ್ರಹ ಮತ್ತು ತಂದೆ ತಾಯಿಯವರ ಆಶೀರ್ವಾದ ಮತ್ತು ಆಶಯದಿಂದ ಸಿ ಪಿ ರಾಧಾಕೃಷ್ಣನ್  ಅವರು ಉಪರಾಷ್ಟ್ರಪತಿಗಳಾಗಿ ಒಳ್ಳೆಯ ಕೆಲಸವನ್ನು ಮಾಡಲಿ  ಎಂದು ನಾವೂ ನೀವೂ ಹಾರೈಸುವುದರ ಜೊತೆಗೆ ಮುಂದೆ ನಮ್ಮ ಮನೆಯಲ್ಲಿ ಮಕ್ಕಳಿಗೆ ಹೆಸರನ್ನು ಇಡುವಾಗ  ಈ ಪ್ರಸಂಗವನ್ನು ನೆನಪಿನಲ್ಲಿ ಇಟ್ಟುಕೊಂಡು ಒಳ್ಳೆಯ ವ್ಯಕ್ತಿಗಳ ಹೆಸರನ್ನು ಇಡುವ ಮೂಲಕ ಮನೆಗೆ ಮತ್ತು ದೇಶಕ್ಕೆ ಒಳ್ಳೆಯ ಕೀರ್ತಿತರುವಂತವನಾಗಲಿ ಎಂದು ಆಶಿಸೋಣ ಅಲ್ವೇ? ಏಕೆಂದರೆ ನಮ್ಮ ಸನಾತನ ಧರ್ಮದಲ್ಲಿ ಯಾವಾಗಲೂ ಧನಾತ್ಮಕವಾಗಿಯೇ ಯೋಚಿಸುತ್ತಾ ಮತ್ತೊಬ್ಬರ ಬಗ್ಗೆ ಒಳ್ಳೆಯದ್ದನೇ ಹೇಳುತ್ತಿದ್ದರೆ ಮೇಲೆ ಕುಳಿತಿರುವ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎನ್ನುತ್ತಿರುತ್ತಾರಂತೆ ಇದನ್ನೇ ಅಲ್ವೇ ಇತ್ತೀಚಿನ ವಯೋಮಾನದವರು ಅರ್ಥಾತ್ jen zeeಗಳು  manifestation ಅಂತಾ ಹೇಳೋದು?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment