ಕರ್ನಲ್ ವಸಂತ್ ವೇಣುಗೋಪಾಲ್

ಎಲ್ಲಾ ತಂದೆಯಂದಿಗೂ ತಮ್ಮ ಮಕ್ಕಳು ತಮಗಿಂತಲೂ ದೊಡ್ಡದಾಗಿ ಬೆಳೆದು ಪ್ರಖ್ಯಾತರಾಗಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ ಇಂತಹವರ  ಮಕ್ಕಳು ಎಂದು ಕರೆಸಿಕೊಳ್ಳುವುದಕ್ಕಿಂತಲೂ ಇಂತಹವರ ತಂದೆ ಎಂದು ಹೇಳಿಸಿ ಕೊಳ್ಳಲು ಇಚ್ಚಿಸುತ್ತಾರೆ. ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಎಂದರೆ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಈ ಚಿತ್ರಗಳಲ್ಲಿನ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದು ಈಗ ಕಾಂತಾರ-1 ಸಿನಿಮಾದಲ್ಲಿ ಕನಕವತಿ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ಸಿನಿಮಾದ ಪ್ರಚಾರದ ಸಮಯದಲ್ಲಿ ಹಿಂದಿ ಛಾನೆಲ್ಲುಗಳ ಬಳಿ ಅತ್ಯಂತ ಸುಸ್ಪಷ್ಟವಾಗಿ ಹಿಂದಿ ಮತ್ತು ಇಂಗ್ಲೀಷ್ ಮಾತನಾಡುತ್ತಿದ್ದದ್ದನ್ನು ಕಂಡು/ಕೇಳಿ ಅರೇ ಇದೇನು ಆಕೆ ಇಷ್ಟು ಚೆನ್ನಾಗಿ ಹಿಂದಿ ಮಾತಿನ ಹಿಂದಿರುವ ರಹಸ್ಯವನ್ನು  ಹುಡುಕಿಕೊಂಡು  ಹೋದಾಗಲೇ ನಮಗೆ ಇಂದಿನ ಕಥಾ ನಾಯಕ ಕರ್ನಲ್ ವಸಂತ್ ವೇಣುಗೋಪಾಲ್  ಆವರ ಪರಿಚಯವಾಗಿ  ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಕರ್ನಲ್ ವಸಂತ್ ವೇಣುಗೋಪಾಲ್, ಎಸಿ (25 ಮಾರ್ಚ್ 1967 – 31 ಜುಲೈ 2007) ಒಬ್ಬ ಭಾರತೀಯ ಸೇನಾಧಿಕಾರಿ. ಅವರು 9 ನೇ ಬೆಟಾಲಿಯನ್, ಮರಾಠಾ ಲೈಟ್ ಕಾಲಾಳುಪಡೆಯ ಕಮಾಂಡಿಂಗ್ ಅಧಿಕಾರಿಯಾಗಿದ್ದರು. ಜುಲೈ 31, 2007 ರಂದು, ಉರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನ ಗಡಿಯನ್ನು ದಾಟದಂತೆ ಭಾರಿ ಶಸ್ತ್ರಸಜ್ಜಿತ ಒಳನುಸುಳುವವರನ್ನು ತಡೆಯುವಾಗ ಅವರು ಕಾರ್ಯದಲ್ಲಿ ಕೊಲ್ಲಲ್ಪಟ್ಟರು.ಇದರ ಪರಿಣಾಮವಾಗಿ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಲಾಯಿತು, ಇದು ಶಾಂತಿಕಾಲದ ಶೌರ್ಯಕ್ಕಾಗಿ ಭಾರತದ ಅತ್ಯುನ್ನತ ಮಿಲಿಟರಿ ಗೌರವವಾಗಿದೆ.

ಕರ್ನಾಟಕ ರಾಜ್ಯದ ಸರ್ಕಾರಿ ಉದ್ಯೋಗಿಯಾಗಿದ್ದಂತಹ ಎನ್. ಕೆ. ವೇಣುಗೋಪಾಲ್ ಮತ್ತು  ಪ್ರಫುಲ್ಲಾ ಎಂಬ ದಂಪತಿಗಳ ಎರಡನೆಯ ಮಗನಾಗಿ 25 ಮಾರ್ಚ್ 1967ರಂದು ಬೆಂಗಳೂರಿನಲ್ಲಿ ವಸಂತ್ ಅವರು ಜನಿಸುತ್ತಾರೆ. ತಂದೆಯವರಿಗೆ  ಉದ್ಯೋಗದ ನಿಮಿತ್ತ ಕರ್ನಾಟಕ ರಾಜ್ಯದಾದ್ಯಂತ ವರ್ಗಾವಣೆ ಆಗುತ್ತಿದ್ದ ಕಾರಣ, ವಸಂತ್ ಅವರ ಕುಟುಂಬ ಉಡುಪಿ, ಶಿವಮೊಗ್ಗ ಬೆಂಗಳೂರು ಮುಂತಾದ ಕಡೆಯಲ್ಲಿ ಶಿಕ್ಷಣವನ್ನು ಮಾಡಬೇಕಾದ ಅನಿವಾರ್ಯವಾಗಿ ಅಂತಿಮವಾಗಿ 1988 ರಲ್ಲಿ ಬೆಂಗಳೂರಿನ ಎಂಇಎಸ್ ಕಾಲೇಜಿನಿಂದ ಪದವಿ ಆರ್ಟ್ಸ್ ನಲ್ಲಿ ಪದವಿ ಪಡೆದರು. ಮನೆಯಲ್ಲಿ  ಕಡೆಯ ಮಗನಾಗಿದ್ದರಿಂದ ಬಲು ಮುದ್ದಾಗಿ ಸಾಕಿದ್ದರೂ, ಆಟ ಪಾಠಗಳಲ್ಲಿ ಬಹಳ ಚುರುಕಾಗಿದ್ದ ವಸಂತ್  ಕಾಲೇಜಿನಲ್ಲಿದ್ದಾಗ NCC ಬಹಳ ಸಕ್ರೀಯರಾಗಿದ್ದ ಕಾರಣ, NCC ಮೂಲಕವೇ ವಸಂತ್ 1986-87ರ ಇಂಡೋ-ಕೆನಡಾ ವಿಶ್ವ ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಸಹಜವಾಗಿ  ಸೇನೆಯಲ್ಲಿ ಸೇವೆ ಸಲ್ಲಿಸುವ ಹಂಬಲ ಹೊಂದಿದ್ದರು.

1988 ರಲ್ಲಿ ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಆಯ್ಕೆಯಾಗಿ ಅಲ್ಲಿ  ತರಬೇತಿಯನ್ನು ಪ್ರಾರಂಭಿಸಿ, ಜೂನ್ 10, 1989 ರಂದು ಅವರು ಮರಾಠಾ ಲೈಟ್ ಕಾಲಾಳುಪಡೆಯ 9 ನೇ ಬೆಟಾಲಿಯನ್‌ಗೆ ನಿಯೋಜಿಸಿಸಲ್ಪಟ್ಟರು. ತಮ್ಮ ಹದಿನೆಂಟು ವರ್ಷಗಳ ಮಿಲಿಟರಿ ವೃತ್ತಿ ಜೀವನದಲ್ಲಿ, ವಸಂತ್ ಅವರು ಪಠಾಣ್‌ಕೋಟ್, ಸಿಕ್ಕಿಂ, ಗಾಂಧಿನಗರ, ರಾಂಚಿ, ಬೆಂಗಳೂರು ಮತ್ತು ಜಮ್ಮು ಮತ್ತು ಕಾಶ್ಮೀರದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದರು. ಕರ್ನಲ್ ವಸಂತ್ ಅವರ ಕಾರ್ಯತತ್ಪರತೆ ಮತ್ತು ಕರ್ತವ್ಯ ಪ್ರಜ್ಞೆ  ಯಾವ ರೀತಿ ಇತ್ತು ಎನ್ನುವುದಕ್ಕೆ ಅದೊಮ್ಮೆ ಯಾರೋ ಒಬ್ಬರು    ಒಬ್ಬ ಕರ್ನಲ್ ಆಗಿ ನೀವು ನಿಮ್ಮ ತಂಡ ನಡೆಸುವ  ಎಲ್ಲಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಬೇಕೇ? ಎಂದು ಪ್ರಶ್ನಿಸಿದಾಗ ಅದಕ್ಕವರು ಒಬ್ಬ ತಾಯಿ  ತನ್ನ  ಮಕ್ಕಳು ಎಲ್ಲಿಗೆ ಹೋಗುತ್ತಾರೋ ಅಲ್ಲಿಗೆ ಹೋಗುವ ಹಾಗೆ, ತಾನೂ ಸಹಾ ಅಲ್ಲಿಗೆ ಹೋಗುತ್ತೇನೆ ಎಂದು ಹೇಳುವ ಮೂಲಕ ತನ್ನ ತಂಡದ ಪ್ರತಿಯೊಂದು ಕಾರ್ಯಾಚರಣೆಯಲ್ಲಿಯೂ ತಾನು ಮುಂದಾಳತ್ವ ವಹಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದರು.

ಕಾಕತಾಳೀಯವೆಂದರೆ ಕರ್ನಲ್ ವಸಂತ್ ಅವರ ಹೇಳಿಕೆಯಂತೆಯೇ, ಜುಲೈ 30, 2007 ರಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿನ ಒರಟಾದ ಮತ್ತು ಪ್ರವೇಶಿಸಲಾಗದ ದುರ್ಗಮ ಭೂಪ್ರದೇಶದಲ್ಲಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾದ ಬೆಟಾಲಿಯನ್‌ಗೆ ಕಮಾಂಡಿಂಗ್ ಮಾಡುತ್ತಿದ್ದಂತಹ ಸಂಧರ್ಭದಲ್ಲಿ ಗಡಿ ನಿಯಂತ್ರಣ ರೇಖೆಯ ಆಚೆಯಿಂದ ಭಯೋತ್ಪಾದಕರ ನುಸುಳುವಿಕೆಯ ಮಾಹಿತಿ ಪಡೆದ ಕೂಡಲೇ, ಸ್ವತಃ ಕರ್ನಲ್ ವಸಂತ್ ವೇಣುಗೋಪಾಲ್ ಅವರೇ ವೈಯಕ್ತಿಕವಾಗಿ ಒಂದು ಪಡೆಗಳ ನೇತೃತ್ವ ವಹಿಸಿಕೊಂಡು ಅತ್ಯಂತ ತ್ವರಿತವಾಗಿ ಆ ಭೂಭಾಗಕ್ಕೆ ತಂಡದೊಂದಿಗೆ ತೆರಳಿ  ನಿಯಂತ್ರಣ ರೇಖೆಯ ಆಚೆಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರ ಗುಂಪನ್ನು ತಡೆಯುವ ಸಲುವಾಗಿ ತಮ್ಮ ದೃಢನಿಶ್ಚಯದ ನಾಯಕತ್ವವನ್ನು ಪ್ರದರ್ಶಿಸುತ್ತಾ, ವಿದ್ರೋಹಿಗಳು ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ತಡೆಯುವ ಸಲುವಾಗಿ ತಮ್ಮ  ಸೈನ್ಯವನ್ನು ಚತುರವಾಗಿ ಸಂಘಟಿಸುತ್ತಿರುವಾಗಲೇ, ಅಲ್ಲಿನ ಕಾಡುಗಳಲ್ಲಿದ್ದ ದಟ್ಟವಾದ ಎಲೆಗಳ ಲಾಭವನ್ನು ಪಡೆದುಕೊಂಡ ಭಯೋತ್ಪಾದಕರು ಅದರ ಹಿಂದೆ ಅಡಗಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಭಯೋತ್ಪಾದಕರ ಈ ನಡೆಯನ್ನು ಅರಿತ ವಸಂತ್ ಅವರ ಸೈನ್ಯ ಭಯೋತ್ಪಾದಕರ. ಜೊತೆ ಭೀಕರವಾದ ಗುಂಡಿನ ಚಕಮಕಿಯಲ್ಲಿ ಆರಂಭಿಸಿದರು, ಈ  ಕಾರ್ಯಾಚರಣೆಯು ಇಡೀ ಹಗಲು ರಾತ್ರಿಯವರೆಗೂ ಮುಂದುವರೆದು, ರಾತ್ರಿಯಲ್ಲಿ ಕತ್ತಲೆ ಮತ್ತು ಎಲೆಗಳ ಹೊದಿಕೆಯನ್ನು ಬಳಸಿಕೊಂಡು ತಪ್ಪಿಸಿಕೊಳ್ಳಲು ಭಯೋತ್ಪಾದಕರು ಮಾಡಿದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ವಸಂತ್  ಯಶಸ್ವಿಯಾದರು.

ಜುಲೈ 31, 2007 ರಂದು ಬೆಳಗಿನ ಜಾವದ ಬೆಳಕಿನ ಲಾಭವನ್ನು ಪಡೆಯಲು ಬಯಸಿ, ಸುಮಾರು  40 ಸೈನಿಕರನ್ನು ಒಟ್ಟುಗೂಡಿಸಿ, ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾದ ಭಯೋತ್ಪಾದಕರನ್ನು ಹೊರದಬ್ಬಲು ಕಾರ್ಯಾಚರಣೆಯನ್ನು ವೈಯಕ್ತಿಕವಾಗಿ ಮುನ್ನಡೆಸಿದರು. ಭಯೋತ್ಪಾದಕ ಸ್ಥಳವನ್ನು ಮೀರಿ, ಕರ್ನಲ್ ವಸಂತ್, ಭಯೋತ್ಪಾದಕರನ್ನು ಹತ್ತಿರದಿಂದ ಎದುರಿಸಿ, ಒಬ್ಬ ಭಯೋತ್ಪಾದಕನನ್ನು ಯಶಸ್ವಿಯಾಗಿ ಕೊಲ್ಲುವ ಸಂಧರ್ಭದಲ್ಲಿ ಭಯೋತ್ಪಾದಕನೊಬ್ಬ ಹಾರಿಸಿದ ಗುಂಡು ವಸಂತ್ ಅವರ ಹೊಟ್ಟೆಗೆ ತಾಕಿ ವಸಂತ್ ತೀವ್ರವಾಗಿ ಗಾಯಗೊಂಡರೂ, ತನಗಾದ ಗಾಯ ಮತ್ತು ರಕ್ತಸ್ರಾವವನ್ನೂ ಲೆಕ್ಕಿಸದೆ, ಭಯೋತ್ಪಾದಕರು ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲು ತನ್ನ ಸೈನಿಕರನ್ನು ಪ್ರಚೋದಿಸುತ್ತಲೇ, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮತ್ತೊಬ್ಬ ಭಯೋತ್ಪಾದಕನನ್ನು ಕೊಂದು ಹಾಕಿದರು. ದುರಾದೃಷ್ಟವಷಾತ್ ಈ ಮಧ್ಯೆ ಮತ್ತೊಬ್ಬ  ಭಯೋತ್ಪಾದಕನೊಬ್ಬ ಸಿಡಿಸಿದ ಗುಂಡು, ಕರ್ನಲ್ ವಸಂತ್ ಅವರನ್ನು  ಮತ್ತಷ್ಟು ಘಾಸಿ ಗೊಳಿಸಿದರೂ, ತಮ್ಮ ಎಲ್ಲಾ ಶಕ್ತಿಯನ್ನೂ ಒಟ್ಟುಗೂಡಿಸಿ ಶತ್ರುಗಳನ್ನು ನಿಗ್ರಹಿಸಲು ತಮ್ಮ ಸೇನೆಯನ್ನು ಪ್ರೇರೇಪಿಸುತ್ತಲೇ  ಧೈರ್ಯದಿಂದ ಮತ್ತೊಬ್ಬ  ಭಯೋತ್ಪಾದಕನ ಮೇಲೆ ಗುಂಡು ಹಾರಿಸಿ ಅವನನ್ನು ಕೊಂದುಹಾಕಿದಾಗಲೇ, ಪ್ರಜ್ಞೆ ಕಳೆದುಕೊಂಡ ಕಾರಣ ಆ  ಹಿಮಾಚ್ಛಾದಿತ ಬೆಟ್ಟದಿಂದ ಸುಮಾರು 20 ಮೀಟರ್ ಇಳಿಜಾರಿನ ಕೆಳಗೆ ಜಾರಿ ಬಿದ್ದದ್ದನ್ನು ಗಮನಿಸಿದ ಅವರ ಸಯೋದ್ಯೋಗಿಗಳು ಅವರನ್ನು ಹರಸಾಹಸದಿಂದ  ಹೆಚ್ಚಿನ ಚಿಕಿತ್ಸೆಗಾಗಿ ಅಸ್ಪತ್ರೆಗೆ ಸೇರಿಸಿದರಾದರೂ ಆದಾಗಲೇ ಅವರಿಗಾಗಿದ್ದ ತೀವ್ರವಾದ ಗಾಯದ ಪರಿಣಾಮ ಅವರು ಆಸ್ಪತ್ರೆಯಲ್ಲಿ ಅಸುನೀಗುವ ಮೂಲಕ ತಾಯಿ ಭಾರತಿಗೆ ತಮ್ಮನ್ನೇ ತಾವು ಸಮರ್ಪಿಸಿಕೊಂಡಿದ್ದರು.

ಕರ್ನಲ್ ವೇಣುಗೋಪಾಲ್ ಅವರ ಪಾರ್ಥೀವ ಶವವನ್ನು  ಆಗಸ್ಟ್ 1, 2007 ರಂದು ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಬೆಂಗಳೂರಿಗೆ ತಂದು ಅಂತ್ಯಕ್ರಿಯೆ ಮಾಡಲಾಯಿತಲ್ಲದೇ, ಶೌರ್ಯ ಅಥವಾ ಕೆಲವು ಧೈರ್ಯಶಾಲಿ ಅಥವಾ ಪ್ರಖ್ಯಾತ ಶೌರ್ಯ ಅಥವಾ ಆತ್ಮತ್ಯಾಗಕ್ಕಾಗಿ ಮಿಲಿಟರಿಯಲ್ಲಿ ಕೊಡಬಹುದಾದ ಅತ್ಯುತ್ತಮ ಪ್ರಶಸ್ತಿಗಳಲ್ಲಿ ಒಂದಾದ ಅಶೋಕ ಚಕ್ರವನ್ನು  ಕರ್ನಲ್ ವಸಂತ್ ಅವರಿಗೆ ಮರಣೋತ್ತರವಾಗಿ ನೀಡಿ ಗೌರವವಿಸಲಾಯಿತು. ಕರ್ನಾಟಕ ರಾಜ್ಯದಿಂದ ಈ ರೀತಿಯ ಗೌರವವನ್ನು ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕರ್ನಲ್ ವಸಂತ್ ವೇಣುಗೋಪಾಲ್ ಪಾತ್ರರಾದರು.  ಅವರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವ ಮುನ್ನಾ ಎಲ್ಲಾ  ಎಂಟು ಒಳನುಸುಳುಕೋರರನ್ನು ಕೊಂದು ಹಾಕಿದ್ದನ್ನು ಖಚಿತ ಪಡಿಸುವ ಮೂಲಕ  ಅವರು ದೇಶ ಮತ್ತು ಅವರ ಬಲಕ್ಕೆ ಸಮರ್ಪಿತವಾದ ನಿಜವಾದ ಸೈನಿಕರಾಗಿದ್ದರು ಅವರ ಅಂತಿಮ ಸಂಸ್ಕಾರದ ಸಮಯದಲ್ಲಿ ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಜೋಗಿಂದರ್ ಜಸ್ವಂತ್ ಸಿಂಗ್ ಅವರು ಹೊಗಳಿದ್ದು ಇಲ್ಲಿ ಅಭಿನಂದನಾರ್ಹವಾಗಿದೆ.

ಕೆಲಸದ ನಿಮಿತ್ತ ಬಹಳ ಕಾಲ ಕುಟುಂಬದಿಂದ ದೂರವಿದ್ದರೂ ಸಮಯ ಸಿಕ್ಕಾಗಲೆಲ್ಲಾ ತಮ್ಮ ಕುಟುಂಬದೊಡನೆ ಮಾತನಾಡುತ್ತಿದ್ದ ವಸಂತ್ ಅವರು ಅಂದು ಕಾರ್ಯಾಚರಣೆ ಆರಂಭದ ಮುನ್ನಾ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಕೆಲವು ದಿನಗಳವರೆಗೆ ತಾನು ಫೋನ್‌ನಲ್ಲಿ ಸಂಪರ್ಕಕ್ಕೆ ಸಿಗದಿದ್ದರೆ ಚಿಂತಿಸಬೇಡಿ ಎಂದು ಹೇಳುತ್ತಿರುವಾಗಲೇ ತಾಂತ್ರಿಕ ದೋಷದಿಂದ ಸಂಪರ್ಕ ಕಡಿತಗೊಂಡಿತ್ತು. ಆದರೆ ಆ ಅಪೂರ್ಣ ಕರೆಯೇ ಅವರ ಅಂತಿಮ ಸಂಭಾಷಣೆ ಆದ್ದದ್ದು ನಿಜಕ್ಕೂ ಆಘಾತಕಾರಿ ಎಂದು ಪತ್ನಿ ಸುಭಾಷಿಣಿಯವರು ಹೇಳಿದಾಗ ಎಂತಹ ಕಲ್ಲು ಗುಂಡಿಗೆಯ ವ್ಯಕ್ತಿಯ ಕಣ್ಣಂಚಿನಲ್ಲೂ ನೀರೂರದೇ ಇರಲಾರದು.

ಆನೆ ಇದ್ದರೂ ಲಕ್ಷ. ಸತ್ತರೂ ಲಕ್ಷ ಎನ್ನುವಂತೆ ಕೆಲವರು ಬದುಕಿದ್ದಾಗ ಮತ್ತು ಸತ್ತ ನಂತರವೂ ತಮ್ಮ ಅಸ್ತಿತ್ವವನ್ನು ಸಾಭೀತು ಪಡಿಸುತ್ತಾರೆ ಎನ್ನುವುದಕ್ಕೆ ಕರ್ನಲ್ ವಸಂತ್ ಅವರು ಜ್ವಲಂತ ಉದಾಹರಣೆಯಾಗಿದ್ದಾರೆ ಎಂದರೂ ತಪ್ಪಾಗದು. ಶಾಲಾ ದಿನಗಳಿಂದಲೇ ಪರಿಚಿತಳಾಗಿದ್ದ ತಮ್ಮ ಸಹಪಾಠಿಯ ತಂಗಿಯಾಗಿದ್ದ, ಭರತನಾಟ್ಯ ಪ್ರವೀಣೆ ಸುಭಾಷಿಣಿಯವರನ್ನು ಮದುವೆಯಾಗಿ ಯಶೋದ ವಸಂತ್ ಮತ್ತು  ರುಕ್ಮಿಣಿ ವಸಂತ್ ಎಂಬ ಮುದ್ದಾದ ಇಬ್ಬರು ಹೆಣ್ಣುಮಕ್ಕಳ ಅಕ್ಕರೆಯ ತಂದೆಯಾಗಿದ್ದು ಅವರು ವರ್ಗಾವಣೆ ಆದ ಕಡೆಯಲ್ಲೆಲ್ಲಾ ಕುಟುಂಬದ ಸಮೇತ ಹೋಗುತ್ತಿದ್ದ ಕಾರಣ ನಟಿ ರುಕ್ಮಿಣಿಯ ವಿದ್ಯಾಭ್ಯಾಸ ಉತ್ತರ ಭಾರತದಲ್ಲೇ ಆಗಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸುಲಲಿತವಾಗಿದ್ದರೂ ಮಾತೃಭಾಷೆ ಕನ್ನಡವನ್ನು ತಮ್ಮ ಮಕ್ಕಳಿಗೆ ತಪ್ಪದೇ ಕಲಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು  ಅದರ ಜೊತೆ ತಾಯಿಯಿಂದ ಸಂಗೀತ ಮತ್ತು ನೃತ್ಯವನ್ನೂ ಸಹಾ ಅಭ್ಯಾಸ ಮಾಡಿಸಿದ್ದಾರೆ.

ಪತಿಯವರ ಅಕಾಲಿಕ ಮರಣವಾದಾಗ,  ಪುಟ್ಟ ಪುಟ್ಟ ಇಬ್ಬರು ಮಕ್ಕಳನ್ನು ಹೇಗಪ್ಪಾ ಸಾಕಿ ಬೆಳೆಸುವುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ, ಬಹಳ ಧೈರ್ಯದಿಂದ ಎದುರಿಸಿದ ಸುಭಾಷಿಣಿ  ಅವರು ತನ್ನ ಪತಿಯ ಕೈಬರಹವಿರುವ ಸುಮಾರು 400 ಪತ್ರಗಳನ್ನು ಒಟ್ಟುಗೋಡಿಸಿ  ಅದರನ್ನು ತಮ್ಮ ಮಕ್ಕಳಿಗೆ ತಂದೆಯ ಪರಂಪರೆಯ ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದಲ್ಲದೇ ಕರ್ನಲ್ ವಸಂತ್ ಅವರ ಸೋದರಸಂಬಂಧಿ ವೀಣಾ ಪ್ರಸಾದ್  ಅರರೊಂದಿಗೆ ಸೇರಿ ಭಾರತೀಯರಿಗೂ ಪ್ರೇರಣಾದಾಯಿ ಆಗುವಂತಹ ಫಾರೆವರ್ ಫಾರ್ಟಿ (Forever Forty)  ಎಂಬ ಕರ್ನಲ್ ವಸಂತ್ ಆವರ ಜೀವನ ಚರಿತ್ರೆಯ ಪುಸ್ತಕವನ್ನು ಬರೆದು ಅದನ್ನು  ಜನರಲ್ ಜೋಗಿಂದರ್ ಜಸ್ವಂತ್ ಸಿಂಗ್ ಮತ್ತು ಸಂತೋಷ್ ಹೆಗ್ಡೆ ಅವರ ನೇತೃತ್ವದಲ್ಲಿ ಜುಲೈ 10, 2011 ರಂದು ಬೆಂಗಳೂರಿನ ಕ್ರಾಸ್‌ವರ್ಡ್ ಪುಸ್ತಕದಂಗಡಿಯಲ್ಲಿ ಬಿಡುಗಡೆ ಮಾಡಿದರು. Forever Forty ಎಂಬ ಶೀರ್ಷಿಕೆಯ ಹಿಂದೆಯೂ ಸುಂದರವಾದ ಕಲ್ಪನೆ ಇದ್ದು, ವಸಂತ್ ಅವರ  ಅಂತಿಮ ಕಾರ್ಯಾಚರಣೆಯಲ್ಲಿದ್ದವರ ಸಂಖ್ಯೆ 40  ಮತ್ತು ವಸಂತ್ ಅವರು ಅಸುನೀಗಿದಾಗ ಅವರ ವಯಸ್ಸು ಕೇವಲ 40 ಆಗಿತ್ತು. ಹಾಗಾಗಿ ಭೌತಿಕವಾಗಿ ವಸಂತ್ ಅವರು ಎಲ್ಲರನ್ನೂ ಅಗಲಿದ್ದರೂ ಮಾನಸಿಕವಾಗಿ  40ರ ಪ್ರಾಯದವರಾಗಿಯೇ ವಸಂತ್ ತಮ್ಮೊಂದಿಗೆ ಇರುತ್ತಾರೆ ಎಂಬ ಸುಂದರವಾದ ಕಲ್ಪನೆ ಇರುವುದು ನಿಜಕ್ಕೂ ಅದ್ಭುತವೇ ಸರಿ.

ಸುಭಾಷಿಣಿಯವರು ತಮ್ಮ ಪತಿಯ ಹುತಾತ್ಮತೆಯನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಯೋಚಿಸಿ, ವಸಂತ್ ಅವರ ಹುತಾತ್ಮತೆಯ ನಂತರ, ತುಂಬಾ ಪರಿಪೂರ್ಣ ಆದರ್ಶ ಮತ್ತು ಜೀವನಕ್ಕಿಂತ ದೊಡ್ಡವರಾದರು. ಆ ಹೊರೆ ತಮ್ಮ ಮಕ್ಕಳ ಮೇಲೆ ಬೀಳಬಾರದು ಎಂದು ನಿರ್ಧರಿಸಿ, ತನ್ನ ಮಕ್ಕಳಿಗೆ ಮೊದಲನೆಯಗಾಗಿ ತಮ್ಮ ತಂದೆಯವರ ಹುತಾತ್ಮತೆಯ ವೈಭವ ಅಥವಾ  ಅವರ ಹೆಸರಿನ ಅನಗತ್ಯ ಪ್ರಯೋಜನ ಪಡೆಯಬಾರದು ಮತ್ತು   ಎರಡನೆಯದಾಗಿ, ತಂದೆಯವರನ್ನು ಕಳೆದುಕೊಂಡಾಗ ಎಂದಹ ಪರಿಸ್ಥಿತಿಯನ್ನೂ ಸ್ವಾವಲಂಭಿಗಳಾಗಿ  ಸುಲಭವಾಗಿ ನಿಭಾಯಿಸುವಂತಹ ಶಕ್ತಿಯನ್ನು ತುಂಬಿದ ಕಾರಣದಿಂದಾಗಿ ಇಬ್ಬರು ಮಕ್ಕಳು ಈಗ ಪ್ರಬುದ್ಧರಾಗಿ ಬಹಳ ವೇಗವಾಗಿ ಬಹಳಷ್ಟು  ಬೆಳೆದಿದ್ದಾರೆ.

ತಮ್ಮಂತೆಯೇ ಸೇನಾ ಕಾರ್ಯಾಚರಣೆಯಲ್ಲಿ ಧೈರ್ಯ ಮತ್ತು ಶೌರ್ಯದಿಂದ ಮಡಿದ ಸೈನಿಕರ ಕುಟುಂಬಗಳಿಗೆ ಸಹಾಯ ಮಾಡುವ ಸಲುವಾಗಿ ಸಮಾಜ ಸೇವಕಿಯಾಗಲು ನಿರ್ಧರಿಸಿದ ಸುಭಾಷಿಣಿಯವರು,  ವೀರರತ್ನ ಫೌಂಡೇಶನ್ ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ   ಆರಂಭಿಸಿ ಅದರ ಮೂಲಕ ಮನೆಯ ಯಜಮಾನರನ್ನು ಕಳೆದುಕೊಂಡರೂ ಪರಿಸ್ಥಿತಿಯನ್ನು ಹೇಗೆ ನಿಭಾಯಿಸ ಬಹುದು ಎಂಬುದನ್ನು ತಮ್ಮದೇ ಅನುಭವಗಳ ಮೂಲಕ  ತಿಳಿಸಿ ಅ ಕುಟುಂಬಗಳೂ ತಮ್ಮಂತೆಯೇ ಸ್ವಾವಲಂಭಿಗಳಾಗುವಂತೆ ಪ್ರೇರೇಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಉತ್ತಮರು ತಮ್ಮ ಪ್ರಯತ್ನದಿಂದಲೇ ಪ್ರಸಿದ್ಧಿ ಹೊಂದುತ್ತಾರೆ; ಮಧ್ಯಮರು ತಂದೆಯ ಹೆಸರಿನಿಂದ ಪ್ರಸಿದ್ಧಿ ಹೊಂದುತ್ತಾರೆ; ಅಧಮರು ಮಾವನ ಹೆಸರಿನಿಂದಲೂ ಪ್ರಸಿದ್ಧಿ ಪಡೆದರೆ, ಕರ್ನಲ್ ವಸಂತ್ ತಮ್ಮ ಸ್ವಪ್ರಯತ್ನದಿಂದ ಮಹಾನ್ ಸಾಧನೆ ಮಾಡಿ  ಅಮರರಾದರೆ, ಅವರ ಆ ಪರಂಪರೆ ಈಗ ಅವರ ಪತ್ನಿ ಸುಭಾಷಿಣಿಯವರ ವೀರರತ್ನ ಫೌಂಡೇಶನ್ ಮೂಲಕ ಮತ್ತು ಮಗಳು ರುಕ್ಮಿಣಿ ವಸಂತ್ ಅವರ ಕಲಾ ಸಾಧನೆಯ ಮೂಲಕ ಆಚಂದ್ರಾರ್ಕವಾಗಿ ಉಳಿಯುವಂತಾಗಿರುವ ಕಾರಣ  ಅವರು ನಿಸ್ಸಂದೇಹವಾಗಿ ನಮ್ಮ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a comment