ಗರ್ತಿಕೆರೆ ರಾಘಣ್ಣ

ಭಾರತದ ಉಳಿದ ಯಾವುದೇ ಭಾಷೆಗಳಿಂಗಲೂ ವಿಭಿನ್ನವಾಗಿ ಕರ್ನಾಟಕದ  ಕವಿಗಳು ರಚಿಸಿರುವ ಗೀತೆಗಳಿಗೆ ಭಾವಪೂರ್ಣವಾಗಿ ರಾಗ ಹಾಕಿ ಅರ್ಥಪೂರ್ಣವಾಗಿ  ಎಲ್ಲರೂ ತಲೆದೂಗುವಂತೆ ಹಾಡುವ ಮೂಲಕ ಕವಿಗಳ ಕೃತಿಗಳಿಗೆ ಸೂಕ್ತ ಸನ್ಮಾನವನ್ನು ಒದಗಿಸುವಂತಹ ಭಾವಗೀತೆ  ಎಂಬ ಪ್ರಾಕಾರವಿದೆ.  ಪಿ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ ಅಶ್ವಥ್, ರತ್ನಮಾಲಾ ಪ್ರಕಾಶ್, ಬಿ.ಕೆ. ಸುಮಿತ್ರ, ಕಸ್ತೂರಿ ಶಂಕರ್, ಶಿವಮೊಗ್ಗ ಸುಬ್ಬಣ್ಣ, ಮುಂತಾದವರುಗಳ ಸಾಲಿಗೆ ಸೇರುವವರೇ ನಮ್ಮ ಇಂದಿನ ಕಥಾ ನಾಯಕರಾದ ಶ್ರೀ ಹೊಸನಗರ ನಾಗಪ್ಪ ರಾಘವೇಂದ್ರ ರಾವ್ ಅರ್ಥಾತ್ ಎಲ್ಲರ ಪ್ರೀತಿಯ ಗರ್ತಿಗೆರೆ ರಾಘಣ್ಣ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಅವಿಭಜಿತ ದಕ್ಷಿಣ ಕನ್ನಡದ ಕುಂದಾಪುರ ತಾಲ್ಲೂಕಿನ ನಾವುಂದದ ಸಮೀಪದ ಬಡಕೆರೆ ಗ್ರಾಮದಲ್ಲಿ (ಇನ್ನೂ ಕೆಲವರು ಶಿವಮೊಗ್ಗ ಜಿಲ್ಲೆಯ ಹೊಸ ನಗರದ ಸಮೀಪ ಎನ್ನುತ್ತಾರೆ) ಸಣ್ಣದಾಗಿ ಹೋಟೆಲ್ ವ್ಯಾಪಾರ ನಡೆಸುತ್ತಿದ್ದ ಸಂಪ್ರದಾಯಸ್ಥ ಕುಟುಂಬದ ಶ್ರೀ ನಾಗಪ್ಪಯ್ಯ ಮೂಕಾಂಬಿಕಮ್ಮ ದಂಪತಿಗಳಿಗೆ  ನವೆಂಬರ್ 2, 1936ರಂದು ಜನಿಸಿದ ಮುದ್ದು ಮಗುವಿಗೆ ಹೊಸನಗರ ನಾಗಪ್ಪ ರಾಘವೇಂದ್ರ ರಾವ್  ಎಂದು ನಾಮಕರಣ ಮಾಡಿದರೂ ಪ್ರೀತಿಯಿಂದ ಎಲ್ಲರೂ ರಾಘಣ್ಣ ಎಂದೇ ಕರೆಯಲಾರಂಭಿಸಿದರು. ಮನೆಯ ಮೊದಲ ಪಾಠಶಾಲೆ ತಂದೆ ತಾಯಿಯರೇ ಮೊದಲ ಗುರು ಎನ್ನುವಂತೆ ಪ್ರತೀ ದಿನ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆಯೇ ಮನೆಯ ಹತ್ತಿರವೇ  ಅವರ ಕುಟುಂಬದವರೇ ಸಣ್ಣದಾಗಿ ನಿರ್ಮಿಸಿದ್ದ  ದೇವಾಲಯದಲ್ಲಿ ಮನೆಯ ಮಕ್ಕಳೆಲ್ಲರೂ ಕೂಡಿ ತಾಯಿಯ ನೇತೃತ್ವದಲ್ಲಿ ಬಾಯಿ ಪಾಠ ಮತ್ತು ಭಜನೆಯನ್ನು ಪ್ರತಿನಿತ್ಯವೂ ಮಾಡುವ ರೂಢಿ ಅವರ ಮನೆಯಲ್ಲಿದ್ದದ್ದದಿಂದ ಸಹಜವಾಗಿಯೇ ರಾಘಣ್ಣನವರಿಗೆ ಭಜನೆ ಮತ್ತು ಸಂಗೀತದ ಕಡೆ ಆಸಕ್ತಿ ಮೂಡಿತ್ತು. ಅದಕ್ಕೆ ಪೂರಕವಾಗಿ ಮನೆಯ ಮಕ್ಕಳೆಲ್ಲರಿಗೂ ಶ್ರೀ ನಾರಾಯಣ ಶಾಸ್ತ್ರಿ ಅವರಿಂದ ಔಪಚಾರಿಕ ಶಾಸ್ತ್ರೀಯ ಸಂಗೀತ ತರಬೇತಿಯನ್ನೂ ಸಹಾ ಕೊಡಿಸಲಾಗಿತ್ತು.  ಭಜನೆಯು ಅವರ ಮನೆಯಲ್ಲಿ ಯಾವ ರೀತಿ ಅವಿಭಾಜ್ಯ ಅಂಗವಾಗಿತ್ತು ಎಂದರೆ,  ವಿನಾ ಕಾರಣ ಭಜನೆಯನ್ನು ತಪ್ಪಿಸಿಕೊಂಡರವರಿಗೆ ಅವರ ಮನೆಯಲ್ಲಿ ಊಟ ಹಾಕದೇ ಇರುವಂತಹ ಪರಿಸ್ಥಿತಿ ಇತ್ತು ಎಂದು ರಾಘಣ್ಣನವರೇ ಸಂದರ್ಶನವೊಂದರಲ್ಲಿ ತಿಳಿದ್ದಾರೆ.

ಸಂಗೀತ ಭಜನೆಯಂತೆಯೇ ಆಟ ಪಾಠಗಳಲ್ಲಿಯೂ ಚುರುಕಾಗಿದ್ದ ರಾಘಣ್ಣ, ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಶಾಲೆಯ ಪಠ್ಯ ಪುಸ್ತಕಗಳಲ್ಲಿರುತ್ತಿದ್ದ ಪದ್ಯಗಳಿಗೆ ರಾಗ ಹಾಗಿ ಭಾವಪೂರ್ಣವಾಗಿ ಹಾಡುತ್ತಿದ್ದದ್ದನ್ನು ಗಮನಿಸಿದ  ಅವರ ಶಿಕ್ಷರುಗಳೂ ಸಹಾ ಪೋಷಿಸಿದ್ದಲ್ಲದೇ, ಹಾಡಿನ ಜೊತೆ ನಾಟಕಗಳಲ್ಲೂ ಅಭಿನಯಿಸುವ ಅವಕಾಶ ಪಡೆದದ್ದಲ್ಲದೇ, ಊರಿನ ಸುತ್ತಮುತ್ತಲಿನ ಪರಿಸರದಿಂದಾಗಿ ಯಕ್ಷಗಾನವಲ್ಲದೇ, ಕಲಾರಸಿಕರಾಕರು ಮತ್ತು ಆಶ್ರಯದಾತರಾಗಿದ್ದಂತಹ  ಅವರ  ನೂರಾರು ಮಹಾನ್ ಕಲಾವಿದರುಗಳು ಆಗ್ಗಾಗ್ಗೆ ಬಂದು ಹತ್ತಾರು ದಿನಗಳ ಕಾಲ ಅಲ್ಲಿಯೇ ಇರುತ್ತಿದ್ದ ಕಾರಣವಲ್ಲದೇ, ಶಿವರಾತ್ರಿ, ನವರಾತ್ರಿ,  ಶ್ರೀರಾಮನವಮಿ ಹಬ್ಬಗಳಲ್ಲಿ ಮನೆಯಲ್ಲಿ ಮತ್ತು ಊರಿನ ದೇವಾಲಯಗಳಲ್ಲಿ ನಡೆಯುತ್ತಿದ ಸಮಾರಂಭಗಳಲ್ಲಿ ಭಾಗವಹಿಸುತ್ತಲೇ ಸುಶ್ರಾವ್ಯವಾಗಿ ಕೊಳಲು, ಹಾರ್ಮೋನಿಯಂ ಮತ್ತು ತಬಲ ನುಡಿಸುವುದನ್ನೂ ಕರಗತ ಮಾಡಿಕೊಂಡು ಅನೇಕ ಸಂಗೀತ ದಿಗ್ಗಜರುಗಳಿ ಪಕ್ಕವಾದ್ಯವನ್ನು ನುಡಿಸುತ್ತಲೇ ಚಿಕ್ಕವಯಸ್ಸಿನಲ್ಲೇ ಸಂಗೀತ ಕ್ಷೇತ್ರದ ಸಕಲ ಕಲಾ ವಲ್ಲಭ ಎನಿಸಿಕೊಂಡಿದ್ದರು.

ಕಾಲ ಹೀಗೇ ಇರುವುದಿಲ್ಲ ಎಂಬ ಹಿರಿಯರ ಮಾತಿನಂತೆ ನೂರಾರು ಕಲಾವಿದರುಗಳಿಗೆ ಅನ್ನ ನೀರು ನೆರಳು ನೀಡುವಂತಹವರಾಗಿದ್ದ ರಾಘಣ್ಣನವರ ತಂದೆ ನಾಗಪ್ಪಯ್ಯನವರ ವ್ಯವಹಾರದಲ್ಲಿ ಭಾರೀ ಪ್ರಮಾಣದ ನಷ್ಟವುಂಟಾದ ಪರಿಣಾಮ ಒಂಬತ್ತನೆ ತರಗತಿಗೇ ತಮ್ಮ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡುವಂತಾಗಿ ಇಷ್ಟರ ಮಧ್ಯೆ ಅವರ ತಂದೆಯವರ ನಿಧನರಾದ ನಂತರ ರಾಘಣ್ಣನವರು ಗರ್ತಿಕೆರೆಯಲ್ಲಿದ್ದ ತಮ್ಮ ಸೋದರಮಾವನ ಆಶ್ರಯಕ್ಕೆ ಬಂದ ನಂತರ ಅವರ ಹೆಸರಿನೊಂದಿಗೆ ಗರ್ತಿಕೆರೆ ಶಾಶ್ವತವಾಗಿ ಜೋಡಣೆಯಾಗಿ ಗರ್ತಿಕೆರೆ ರಾಘಣ್ಣ ಎಂದೇ ಸುಪ್ರಸಿದ್ದರಾದರು. ಇಪ್ಪತ್ತನೆಯೆ ವಯಸ್ಸಿನಲ್ಲಿ ಮನೆಯವರ ಒತ್ತಾಯಕ್ಕೆ ಮಣಿದು ೨೦ನೇ ವಯಸ್ಸಿನಲ್ಲಿಯೇ ವಸಂತಿ ಶೆಣೈ  (ಅಕೆಯೂ ಸಹಾ ಸುಪ್ರಸಿದ್ಧ ಭಾವಗೀತೆಯ ಗಾಯಕಿ) ಅವರನ್ನು ವಿವಾಹವಾದ ನಂತರ, ಜೀವನೋಪಾಯಕ್ಕಾಗಿ ಗಾಯನದ ಜೊತೆ,  ನಾಟಕಕ್ಕೆ ಸಂಗೀತ ನಿರ್ದೇಶನ, ಗೀತರಚನೆ, ಹಾರ್ಮೋನಿಯಂ ವಾದನ, ಪ್ರಸಾದನ, ಹರಿಕಥೆ, ತಬಲಾವಾದನ, ಕೊಳಲು ವಾದನ ಹೀಗೆ ವಿವಿಧ ರೀತಿಯ ಕೆಲಸಗಳನ್ನು ಮಾದಿ ಕೆಲ ಸಮಯ ಸೈಕಲ್‌ ಶಾಪ್‌ ಸಹಾ ಇಟ್ಟಿದ್ದರಂತೆ

ಹಾಡುಗಳನ್ನು ಬರೆದುಕೊಳ್ಳಲು ಅವರ ಬಳಿ ಪುಸ್ತಕವನ್ನು ಕೊಳ್ಳಲೂ ಆಗದಂತಹ ಪರಿಸ್ಥಿತಿ ಇದ್ದದ್ದರಿಂದ ಪುಸ್ತಗಳಿಗಿಂತಲು ಅವರ ಮಸ್ತಕದಲ್ಲಿಯೇ ಸಾವಿರಾರು ಹಾಡುಗಳನ್ನು ತುಂಬಿಸಿಕೊಂಡ ರಾಘಣ್ಣನವರು ಹೆಗಲ ಮೇಲೆ ಹಾರ್ಮೋನಿಯಂ ಪೆಟ್ಟಿಗೆ ಹೊತ್ತುಕೊಂಡು ಊರೂರು ಸುತ್ತುತ್ತಾ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದರೂ ಸಿಗುತ್ತಿದ್ದ ಸಂಭಾವನೆ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲವಾದ್ದರಿಂದ  1972ರಲ್ಲಿ ಭಾರತ ಸರಕಾರದ ಸಂಗೀತ ನಾಟಕ ಅಕಾಡೆಮಿಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದರು. ರಾಜ್ಯ ಸರ್ಕಾರದ ವಾರ್ತಾ ಇಲಾಖೆ, ಕುಟುಂಬ ಕಲ್ಯಾಣ, ವಯಸ್ಕರ ಶಿಕ್ಷಣ, ನೀರಾವರಿ ಮುಂತಾದ ಇಲಾಖಾ ಪ್ರಚಾರ ಕಾರ್ಯಗಳಲ್ಲಿ ಹಾಡುಗಾರರಾಗಿ ಇಪ್ಪತ್ತು ವರ್ಷಗಳ ಸತತ ಸೇವೆ ಸಲ್ಲಿಸಿದರು ಅದರ ಜೊತೆ ಅಂದಿನ ಪ್ರಧಾನ ಮಂತ್ರಿಗಳಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳೆಲ್ಲವನ್ನೂ ಸೇರಿಸಿ ತಾವೇ ಗೀತೆಯನ್ನು ರಚಿಸಿ ಎಲ್ಲಾ ಕಡೆಯಲ್ಲಿಯೂ ತಮ್ಮ ಹಾಡಿನ ಮೂಲಕ ಪ್ರಚಾರ ಮಾಡುತಿದ್ದರು

ನಿಂತಲ್ಲಿ ಕೂತಲ್ಲಿ ಸಂಗೀತ ಮತ್ತು ಸುಗಮ ಸಂಗೀತವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ರಾಘಣ್ಣವರ ಕೈಯ್ಯಲ್ಲಿ ಯಾವುದೇ ಪದ್ಯ ಸಿಕ್ಕರೂ ಅದಕ್ಕೆ ಕ್ಷಣ ಮಾತ್ರದಲ್ಲೇ ಚಂದನೆಯ ರಾಗ ಸಂಯೋಜಿಸಿ ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡನ್ನು ಹಾಡುತ್ತಿದ್ದ ಕಾರಣ ಅನೇಕ ಶ್ರೀ ಲಕ್ಷೀ ನಾರಾಯಣ ಭಟ್ಟರು, ಆನಂದ ಕಂದ, ಮೈಸೂರು ಮಲ್ಲಿಗೆ ಕೆ. ಎಸ್. ನರಸಿಂಹ ಸ್ವಾಮಿ, ಹೆಚ್ ಎಸ್. ವೆಂಕಟೇಶ ಮೂರ್ತಿ, ಕಯ್ಯಾರ ಕಿಞ್ಞಣ್ಣ ರೈ ಮುಂತಾದ ಕವಿಗಳಿಗೆ ರಾಘಣ್ಣ ಎಂದರೆ ಬಲು ಪ್ರೀತಿ ಹಾಗಾಗಿಯೇ ಅವರಂತಹ ಹತ್ತಾರು ಮಹಾನ್ ಸಾಹಿತಿಗಳು ತಮ್ಮ ಕೃತಿಗಳನ್ನು  ರಾಘಣ್ಣನವರಿಗೆ ಯಾವುದೇ ಷರತ್ತಿಲ್ಲದೇ ಕ್ಯಾಸೆಟ್ ಮಾಡುವುದಕ್ಕೆ ಅನುಮತಿ ನೀಡುತ್ತಿದ್ದದ್ದಲ್ಲದೇ ಅವರ ಸಮ್ಮುಖದಲ್ಲೇ ಗಂಟೆ ಗಟ್ಟಲೆ ರಾಘಣ್ಣನವರಿಂದ ಹಾಡಿಸಿ ಆನಂದ ಪಡುತ್ತಿದ್ದರು. 1993ರಲ್ಲಿ ರಾಘಣ್ಣನಿಗೆ ಲಘು ಹೃದಯಘಾತವಾದಾಗ ಅವರು ಇದ್ದ ಆಸ್ಪತ್ರೆಯ ದಾದಿಯವರಿಗೆ ರಾಘಣ್ಣನವರು ಸಂಗೀತಗಾರರು  ಎಂದು ತಿಳಿದ ನಂತರ ಅವರಿಗಾಗಿ ಹಾಡಲು ಒತ್ತಾಯಿಸಿದಾಗ, ಇಂದು ಬೇಡ ನಾಳೆ  ಹಾಡುವೆನೆಂದು ಹೇಳಿ, ಮಾರನೆಯ ದಿನ ಆ ದಾದಿಯರ ಮೇಲೆಯೇ ಸುಂದರವಾದ ಹಾಡನ್ನು ಬರೆದು ಅದಕ್ಕೆ ರಾಗ ಸಂಯೋಜಿಸಿ ಆಸ್ಪತ್ರೆಯ ಹಾಸಿಗೆ ಮೇಲೇ  ಆ ಹಾಡನ್ನು ಹಾಡಿ ಇಡೀ ಆಸ್ಪತ್ರೆಯ ಸಿಬ್ಬಂಧಿವರ್ಗದವರ ಮನರಂಜಿಸಿದ್ದರು.

ರಾಘಣ್ಣನವರು ಮಲೆನಾಡಿನ ಪ್ರಾಂತ್ಯದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ ಕಾರಣ  ಅವರ ಪರಿಚಯ ಬೆಂಗಳೂರಿವಗೆ ಇಲ್ಲದೇ ಇದ್ದಾಗ, 1993ರಲ್ಲಿ ಬಿ. ಕೆ. ಸುಮಿತ್ರ ಅವರೊಂದಿಗೆ ರಾಘಣ್ಣನವರಿಗೂ  ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಬಂದದ್ದಕ್ಕಾಗಿ ಅವರೆಲ್ಲರನ್ನೂ ಅಭಿನಂದಿಸುವ ಸಲುವಾಗಿ ಬೆಂಗಳೂರಿನಲ್ಲಿ ಕನ್ನಡ ಮತ್ತೊಬ್ಬ ಹೆಸರಾಂತ ಸುಗಮ ಸಂಗೀತ ಗಾಯಕ ದಿವಂಗತ ಜಿ.ವಿ ಅತ್ರಿಯವರು ಹಮ್ಮಿಕೊಂಡಿದ್ದ ಅಭಿನಂದನಾಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದ ರಾಘಣ್ಣನವರು ಬರಲಾಗದೇ ಹೋದರೂ, ಸ್ವಲ್ಪ ಸಮಯದಲ್ಲೇ, ಅತ್ರಿಯವರು ಹಮ್ಮಿಕೊಂಡಿದ್ದ ಸಂಗೀತ ಸಮ್ಮೇಳನಕ್ಕೆ ರಾಘಣ್ಣನವರನ್ನು ಮತ್ತೊಮ್ಮೆ ಆಹ್ವಾನಿಸಿ ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್‌, ಜಿ.ಎಸ್‌. ಶಿವರುದ್ರಪ್ಪ ಮುಂತಾದ ದಿಗ್ಗಜರು ಇದ್ದ ಆ ಕಾರ್ಯಕ್ರಮದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಹಾಡಲು ಅವಕಾಶ ಮಾಡಿಕೊಟ್ಟಾಗಲೇ ಬೆಂಗಳೂರಿಗರಿಗೆ ರಾಘಣ್ಣನವರ ಶಾರೀರದ ಪರಿಚಯವಾಗಿ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎನ್ನುವಂತೆ  ಅನಂತಸ್ವಾಮಿಯವರು ಅಲ್ಲೇ ರಾಘಣ್ಣನವರನ್ನು ಪ್ರಶಂಸಿಸಿದ್ದರಂತೆ

1994ರಲ್ಲಿ ಎನ್‌. ಎಸ್‌. ಲಕ್ಷ್ಮೀನಾರಾಯಣಭಟ್ಟರು ತಮ್ಮ ಕವಿತೆಗಳ ಧ್ವನಿಸುರಳಿಯೊಂದಕ್ಕೆ ರಾಗ ಸಂಯೋಜಿಸಿ ಆ ಹಾಡುಗಳನ್ನು ನಾಡಿನ ಖ್ಯಾತ ಸುಗಮ ಸಂಗೀತ ಹಾಡುಗಾರರಾಗಿದ್ದಂತಹ ಅನಂತಸ್ವಾಮಿ, ಸಿ. ಅಶ್ವಥ್‌, ನರಸಿಂಹ ನಾಯಕ್‌, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲ ಪ್ರಕಾಶ್‌ ಅಂತಹವರ ಸಿರಿಕಂಠದಲ್ಲಿ ಹಾಡಿಸಲು ರಾಘಣ್ಣನವರನ್ನು ಕೋರಿಕೊಂಡಾಗ ಅದನ್ನು ಸಂತೋಷದಿಂದ ಒಪ್ಪಿಕೊಂಡ ರಾಘಣ್ಣನವರು ಖ್ಯಾತ ಕಲಾವಿದರಾದ ದಿ. ಎಸ್‌. ಬಾಲಿ ಮತ್ತು ಮ್ಯಾಂಡೋಲಿನ್ ವಾದಕರಾದ ಶ್ರೀ ಎನ್‌. ಎಸ್‌. ಪ್ರಸಾದ್‌ ಅವರೊಂದಿಗೆ ಸೇರಿಕೊಂಡು ಹೊರತಂದ ಅಭಿನಂದನ ಎಂಬ ಧ್ವನಿಸುರುಳಿ ಭಾರೀ ಜನಮೆಚ್ಚಿಗೆ ಪಡೆದದ್ದಲ್ಲದೇ, ಆ ಧ್ವನಿಸುರುಳಿ ಬಿಡುಗಡೆಯ ಸಂಧರ್ಭದಲ್ಲಿ ರಾಘಣ್ಣನವರೇ ಆಶ್ಚರ್ಯ ಪಡುವಂತೆ  ಸುಮಾರು 30 ಸಾವಿರ ರೂ.ಗಳ ನಿಧಿಯನ್ನು ಸಂಗ್ರಹಿಸಿ ನೀಡಲಾಗಿತ್ತು.

ದೇಶಸೇವೆಯೇ ಈಶ ಸೇವೆ ಎನ್ನುವಂತೆ ಇಷ್ಟೆಲ್ಲಾ ಕಾರ್ಯಚಟುವಟಿಕೆಗಳ ಮಧ್ಯೆಯೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದಲ್ಲದೇ ಘೋಘ್ ಟೋಳಿಯಲ್ಲಿಯೂ ಸಹ ಗುರುತಿಸಿಕೊಂಡಿದ್ದಕ್ಕಾಗಿಯೇ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ನಾಡಿನ ಖ್ಯಾತ ಸಂಗೀತಗಾರರನ್ನು ಅಭಿನಂದಿಸಿದ ಸಂಧರ್ಭದಲ್ಲಿ ಮೊದಲ ಅಭಿನಂದನೆಯನ್ನು ರಾಘಣ್ಣನವರಿಗೇ ಸಲ್ಲಿಸಿದ್ದು ಗಮನಾರ್ಹವಾಗಿದೆ.

ಸುಗಮ ಸಂಗೀತ ಕ್ಷೇತ್ರದಲ್ಲಿ ರಾಘಣ್ಣನವರ ಸೇವೆಯನ್ನು ಪರಿಗಣಿಸಿ ಸರ್ಕಾರ ಮತ್ತು ಅನೇಕ ಸಂಘ ಸಂಸ್ಥೆಗಳು ಅವರಿಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿ ಅವುಗಳಲ್ಲಿ ಪ್ರಮುಖವಾದವು ಹೀಗಿವೆ.

  • 1991ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • 1993ರಲ್ಲಿ ಜಿ.ವಿ. ಅತ್ರಿಯವರಿಂದ ಬೆಂಗಳೂರಿನ ಸುಗಮ ಸಂಗೀತ ಸಮ್ಮೇಳನದಲ್ಲಿ ಸನ್ಮಾನ
  • 1993ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವೇದಿಕೆಯಿಂದ ಭಾರ್ಗವ ಪ್ರಶಸ್ತಿ,
  • ಕಲಾಚೇತನ ಪ್ರಶಸ್ತಿ, ಗದಗ
  • 2003ರಲ್ಲಿ ಕರ್ನಾಟಕ ಸರ್ಕಾರದ ಸುಗಮ ಸಂಗೀತ ಕ್ಷೇತ್ರದ ಅತ್ಯುನ್ನತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ

ಹೀಗೆ ಒಬ್ಬ ಸುಗಮ ಸಂಗೀತ ಗಾಯಕರಾಗಿ, ಗಮಕಿಗಳಾಗಿ, ಸುಗಮ  ಸಂಗೀತ ಸಂಯೋಜಕರಾಗಿ, ಗೀತ ರಚನಕಾರರಾಗಿ, ವಿವಿಧ ವಾದ್ಯಗಾರರಾಗಿ ಸುಮಾರು 1000ಕ್ಕಿಂತಲೂ ಹೆಚ್ಚಿನ ಭಾವಗೀತೆಗಳಿಗೆ ರಾಗ ಸಂಯೋಜಿಸಿ ಕವಿಗಳ ಭಾವನೆಗಳಿಗೆ ಜೀವ ತುಂಬುವ ಮೂಲಕ  ಸುಗಮ ಸಂಗೀತದ ಹರವನ್ನು ದೇಶ ವಿದೇಶಗಳಲ್ಲಿ  ವಿಸ್ತರಿಸಲು ರಾಘಣ್ಣನವರು ಬಹಳ ಪರಿಶ್ರಮಿಸಿರುವ ಕಾರಣ  ಅವರು ನಿಸ್ಸಂದೇಹವಾಗಿಯೂ ನಮ್ಮ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a comment