ಪಶ್ಚಿಮ ಬಂಗಾಳದಲ್ಲಿ 1838ರಲ್ಲಿ ಜನಿಸಿದ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ಬಂಗಾಳಿ ಭಾಷೆಯ ಕಾದಂಬರಿಕಾರ, ಕವಿ, ಪ್ರಬಂಧಕಾರ ಮತ್ತು ಪತ್ರಕರ್ತರಾಗಿ ಆಧುನಿಕ ಬಂಗಾಳಿ ಮತ್ತು ಭಾರತೀಯ ಸಾಹಿತ್ಯದ ಹೆಗ್ಗುರುತುಗಳಲ್ಲಿ ಒಬ್ಬರಾಗಿದ್ದು, ಬಂಗಾಳದ ಸಾಹಿತ್ಯ ಪುನರುಜ್ಜೀವನದಲ್ಲಿ ಹಾಗೂ ವಿಶಾಲ ಭಾರತೀಯ ಉಪಖಂಡದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಅವರ ಸಾಂಪ್ರದಾಯಿಕ ಪದ್ಯಗಳು, ಬರಹಗಳ ಮೂಲಕ ಭಾರತದಾದ್ಯಂತ ಲಕ್ಷಾಂತರ ಲೇಖಕರಿಗೆ ಸ್ಫೂರ್ತಿಯನ್ನು ನೀಡಿವೆ ಎಂದರೂ ತಪ್ಪಾಗದು. ಅರೇ ಇಷ್ಟೇನಾ ಅವರ ಸಾಧನೆ ಎಂದರೆ, ವಿವಿಧ ಸಣ್ಣ ಸಣ್ಣ ರಾಜ್ಯಗಳಾಗಿ ಹರಿದು ಹಂಚಿ ಹೋಗಿದ್ದ ಬ್ರಿಟೀಷರ ವಸಾಹತುವಾಗಿದ್ದ ಭಾರತವನ್ನು ಸ್ವಾತ್ರಂತ್ರ್ಯದ ಹೋರಾಟಕ್ಕೆ ಪ್ರೇರಣೆ ನೀಡಿದ್ದೇ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ವಂದೇ ಮಾತರಂ ಎಂಬ ಗೀತೆ. ವಂದೇ ಮಾತರಂ ಎಂಬ ಘೋಷವಾಕ್ಯ ಇಡೀ ದೇಶಾದ್ಯಂತ ಕಿಚ್ಚು ಹಬ್ಬಿಸಿದ್ದಲ್ಲದೇ, ಆ ಘೋಷವಾಕ್ಯವನ್ನು ಕೇಳಿದ ತಕ್ಷಣ ಬ್ರಿಟೀಷ್ ಅಧಿಕಾರಿಗಳ ಕಿವಿಗೆ ಕಾದ ಸೀಸವಾಗಿ ಹೋಗಿದ್ದದ್ದು ಈಗ ಇತಿಹಾಸ.
ಹಾಗೇ ನೋಡಿದರೆ, ಬಂಕಿಮ್ ಚಂದ್ರ ಚಟರ್ಜಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವೀಧರರಾದ ಆರಂಭಿಕ ವಿದ್ಯಾರ್ಥಿಯಾಗಿದ್ದು, ಅಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಮುಗಿಸಿದ ನಂತರ, ಬ್ರಿಟೀಷ್ ಸರ್ಕಾರದಲ್ಲಿ ನಾಗರಿಕ ಸೇವಕರಾಗಿ ಸೇರಿ, ತಮ್ಮ ಕೆಲಸದ ಮೂಲಕ ಹಂತ ಹಂತವಾಗಿ ಬೆಳೆಯುತ್ತಾ ಡೆಪ್ಯೂಟಿ ಕಲೆಕ್ಟರ್ ಆನಂತರ ಡೆಪ್ಯೂಟಿ ಮ್ಯಾಜಿಸ್ಟ್ರೇಟ್ ವರೆಗೂ ಬೆಳೆದರು. 1857ರಲ್ಲಿ ಮಂಗಲ ಪಾಂಡೆ ಅವರಿಂದ ಆರಂಭವಾದ ದಂಗೆಯನ್ನು ಬ್ರಿಟೀಷರು ಸಿಪಾಯಿ ದಂಗೆ ಎಂದು ಕರೆದರೆ ಅದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೇ ಭಾರತೀಯರ ಮನದಲ್ಲಿ ಮೂಡಿದಾಗ ಸಹಜವಾಗಿ ಆ ಕುರಿತಾಗಿ ಚಟರ್ಜಿ ಬಹಳ ಆಸಕ್ತಿ ಹೊಂದಿದ್ದರು ಅದೇ ಸಮಯದಲ್ಲಿ, ಬ್ರಿಟೀಷ್ ಸರ್ಕಾರವು, ಗಾಡ್ ಸೇವ್ ದಿ ಕಿಂಗ್ ಎಂಬ ಗೀತೆಯನ್ನು ಭಾರತೀಯರ ಮೇಲೆ ಹೇರಲು ಮುಂದಾದಾಗ, ಭಾರತೀಯ ರಾಷ್ಟ್ರೀಯವಾದಿಗಳು ಅದಕ್ಕೆ ಪ್ರತಿರೋಧ ವ್ಯಕ್ತವಾದಾಗಲೇ ಬಂಕಿಮ್ ಚಂದ್ರ ಚಟರ್ಜಿಯವರಿಗೆ 1876 ರ ನವೆಂಬರ್ 7 ರಂದು ವಂದೇ ಮಾತರಂನ ಪರಿಕಲ್ಪನೆಯು ಮೂಡಿ ವಂದೇ ಮಾತರಂ ರಚಿಸಿ ಅದನ್ನು ಸಾಹಿತ್ಯಿಕ ನಿಯತಕಾಲಿಕೆ ಬಂಗದರ್ಶನ್‌ನಲ್ಲಿ ಪ್ರಕಟಿಸಿದ ನಂತರ 1882 ರಲ್ಲಿ ಸನ್ಯಾಸಿ ದಂಗೆಯ ಹಿನ್ನೆಲೆಯ ವಿರುದ್ಧ ರಚಿಸಲಾದ ಆನಂದಮಠದ ಎಂಬ ಕಾದಂಬರಿಯಲ್ಲಿ ಈ ಪದ್ಯವನ್ನು ಸೇರಿಸಲಾಯಿತು. ತಮ್ಮ ಮಾತೃಭೂಮಿಯನ್ನು ಸ್ವತಂತ್ರಗೊಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸನ್ಯಾಸಿಗಳನ್ನು ಕಲ್ಪಿಸಿಕೊಂಡು ಬರೆದಿದ್ದ ಆ ಕಾದಂಬರಿಗೆ ಈ ಹಾಡು ಪ್ರಬಲವಾದ ನಿರೂಪಣೆಯನ್ನು ಒದಗಿಸಿತು.
ಚಟ್ಟೋಪಾಧ್ಯಾಯರು ಈ ವಂದೇ ಮಾತರಂ ಗೀತೆಯನ್ನು ಸಂಸ್ಕೃತ ಮತ್ತು ಬಂಗಾಳಿ ಭಾಷೆಯ ಪದಗಳನ್ನು ಬಳಸಿಕೊಂಡು ಸ್ವಪ್ರೇರಿತರಾಗಿ ಬರೆದ ಈ ಕವಿತೆಯನ್ನು 1882 ರಲ್ಲಿ ತಮ್ಮ ಆನಂದಮಠ ಪುಸ್ತಕದಲ್ಲಿ ಪ್ರಕಟವಾದ ಕೆಲವೇ ದಿನಗಳಲ್ಲಿ ಬಹಳ ಪ್ರಸಿದ್ಧವಾಗಿ, ಈ ಕವಿತೆಗೆ ಶ್ರೀ ಜದುನಾಥ ಭಟ್ಟಾಚಾರ್ಯರು ರಾಗ ಸಂಯೋಜಿಸಿ ಆ ಹಾಡು ಮತ್ತಷ್ಟೂ ಜನ ಜಾಗೃತಿ ಮೂಡಿಸುವಂತೆ ಮಾಡಿತು. ನೋಡ ನೋಡುತ್ತಿದ್ದಂತೆಯೇ, ವಂದೇ ಮಾತರಂ ಗೀತೆ ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಅತ್ಯಂತ ಜನಪ್ರಿಯ ಪ್ರತಿಭಟನಾ ಗೀತೆಗಳಲ್ಲಿ ಒಂದಾಗುತ್ತಿದ್ದಂತೆಯೇ, ಬ್ರಿಟೀಷ್ ಸರ್ಕಾರವು ಈ ಪುಸ್ತಕವನ್ನು ನಿಷೇಧಿಸಿದ್ದಲ್ಲದೇ, ಈ ಹಾಡನ್ನು ಸಾರ್ವಜನಿಕವಾಗಿ ಹಾಡುವುದು ಅಪರಾಧವೆಂದು ಪರಿಗಣಿಸಿತು. ಅಕಸ್ಮಾತ್ ಈ ಆದೇಶವನ್ನು ಉಲ್ಲಂಘನೆ ಮಾಡಿದವರನ್ನು ಜೈಲಿಗೆ ಹಾಕಿತು. ಇಷ್ಟೇಲ್ಲಾ ಆದರೂ. ಬ್ರಿಟೀಷರ ಈ ದಬ್ಬಾಳಿಕೆಗೆ ಬಗ್ಗದೇ ಜಗ್ಗದೇ, ಕೇವಲ ಸ್ವಾತ್ರಂತ್ರ ಹೋರಾಟಗಾರಷ್ಟೇ ಅಲ್ಲದೇ ಸಾರ್ವಜನಿಕರೂ ಸಹಾ ಬ್ರಿಟೀಷ್ ಅಧಿಕಾರಿಗಳ ಸಮ್ಮುಖದಲ್ಲೇ ಒಟ್ಟಾಗಿ ಸೇರಿ ವಂದೇ ಮಾತರಂ ಹಾಡುವ ಮೂಲಕ ಪದೇ ಪದೇ ನಿಷೇಧವನ್ನು ಉಲ್ಲಂಘಿಸುತ್ತಿದ್ದರು.
ರವೀಂದ್ರನಾಥ ಟ್ಯಾಗೋರ್ ಅವರು 1896 ರಲ್ಲಿ ಬೀಡನ್ ಚೌಕದಲ್ಲಿ ನಡೆದ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡಿದರೆ, ನಂತರ 1901ರಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್‌ನ ಮತ್ತೊಂದು ಅಧಿವೇಶನದಲ್ಲಿ ದಖಿನಾ ಚರಣ್ ಸೇನ್ ಇದನ್ನು ಹಾಡಿದರು. ಕವಿ ಸರಳಾ ದೇವಿ ಚೌದುರಾನಿ 1905 ರಲ್ಲಿ ಬನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡನ್ನು ಹಾಡಿದರು. ಲಾಲಾ ಲಜಪತ್ ರಾಯ್ ಲಾಹೋರ್‌ನಿಂದ ವಂದೇ ಮಾತರಂ ಹೆಸರಿನಲ್ಲಿಯೇ ಪತ್ರಿಕೆಯನ್ನೇ ಪ್ರಾರಂಭಿಸಿದರೆ ಅದೇ ಹೆಸರಿನಲ್ಲಿಯೇ 1905 ರಲ್ಲಿ ಹಿರಾಲಾಲ್ ಸೇನ್ ಭಾರತದ ಮೊದಲ ರಾಜಕೀಯ ಚಲನಚಿತ್ರವನ್ನು ನಿರ್ಮಿಸಿದ ನಂತರವಂತೂ ಯಾವುದೇ ರಾಜಕೀಯ ಸಭೆ ಸಮಾರಂಭಗಳ ಆರಂಭ ಇಲ್ಲವೇ ಕೊನೆಯಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂಬ ಅಲಿಖಿತ ನಿಯಮವಾಗಿ ಹೋಗಿತ್ತು ಎಂದರೆ ಆ ಗೀತೆಯ ಶಕ್ತಿಯನ್ನು ತೋರಿಸುತ್ತದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರಲ್ಲಿ ತಾಯ್ನಾಡಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಚಿಸಿದ ವಂದೇ ಮಾತರಂ ಗೀತೆಯಲ್ಲಿ ಭಾರತ ದೇಶವನ್ನು ಒಂದು ತಾಯಿ ಎಂದು ಸಂಬೋಧಿಸಿತ್ತಾ, ತಾಯಿ ನಿನಗೆ ವಂದಿಸುವೆ ಎಂಬರ್ಥ ಬರುವ ಈ ಗೀತೆಯ ಶೀರ್ಷಿಕೆ ವಂದೇ ಮಾತಂ ಘೋಷಣೆಯಾಗಿ ಪರಿವರ್ತನೆಗೊಂಡು ದೇಶಾದ್ಯಂತ ಕೋಟ್ಯಾಂತರ ಸ್ವಾತ್ರಂತ್ರ್ಯ ಹೋರಾಟಗಾರ ರಣ ಘೋಷಣೆಯಾಗಿ ಅವರನ್ನೆಲ್ಲಾ ಸ್ವಾತ್ರಂತ್ರ್ಯ ಹೋರಾಟಕ್ಕೆ ಧುಮುಕಲು ಪ್ರೇರೇಪಣಾ ಮಂತ್ರವಾಗಿ ಲಕ್ಷಾಂತರ ಜನರ ವಂದೇ ಮಾತರಂ.. ವಂದೇ ಮಾತರಂ. ಉಧ್ಘೋಷ ಬ್ರಿಟೀಷರ ಕಿವಿಗೆ ಸೀಸ ಹುಯ್ಯುವಂತಾಗುತ್ತಿತ್ತು. ಇದು ಭಾಷೆ ಮತ್ತು ಪ್ರದೇಶಗಳ ಗಡಿಗಳನ್ನು ಮೀರಿ ಭಾರತದಾದ್ಯಂತ ಪ್ರತಿಧ್ವನಿಸಿತು. ತಮಿಳುನಾಡಿನಲ್ಲಿ ಸುಬ್ರಹ್ಮಣ್ಯ ಭಾರತಿ ಅವರು ಇದನ್ನು ತಮಿಳಿನಲ್ಲಿ ಹಾಡಿದರು ಮತ್ತು ಪಂಜಾಬಿನಲ್ಲಿ ಕ್ರಾಂತಿಕಾರಿಗಳು ಬ್ರಿಟಿಷ್ ಆಳ್ವಿಕೆಯನ್ನು ಧಿಕ್ಕರಿಸಿ ಹಾಡಿದರು. 1905ರಲ್ಲಿ ಬಂಗಾಳ ವಿಭಜನೆಯ ಸಮಯದಲ್ಲಿ, ಪ್ರಾಂತ್ಯದಾದ್ಯಂತ ದಂಗೆ ಭುಗಿಲೆದ್ದಾಗ, ಬ್ರಿಟಿಷರು ವಂದೇ ಮಾತರಂ ಅನ್ನು ಸಾರ್ವಜನಿಕವಾಗಿ ಹಾಡುವುದನ್ನು ನಿಷೇಧಿಸಿದರು. ಆದಾಗ್ಯೂ, ಏಪ್ರಿಲ್ 14, 1906ರಂದು, ಬಾರಿಸಾಲ್‌ನಲ್ಲಿ, ಸಾವಿರಾರು ಜನರು ಈ ಆದೇಶವನ್ನು ಧಿಕ್ಕರಿಸಿದರು. ಪೊಲೀಸರು ಶಾಂತಿಯುತ ಜನಸಮೂಹದ ಮೇಲೆ ದಾಳಿ ಮಾಡಿದಾಗ, ರಕ್ತಸಿಕ್ತ ಪುರುಷರು ಮತ್ತು ಮಹಿಳೆಯರು ಬೀದಿಗಳಲ್ಲಿ ಒಟ್ಟಾಗಿ ನಿಂತು ವಂದೇ ಮಾತರಂ ಎಂದು ಕೂಗಿದರು.
ಅಲ್ಲಿಂದ ಈ ಪವಿತ್ರ ಘೋಷಣೆಯು ಗದರ್ ಪಕ್ಷದ ಕ್ರಾಂತಿಕಾರಿಗಳೊಂದಿಗೆ ಕ್ಯಾಲಿಫೋರ್ನಿಯಾವನ್ನು ತಲುಪಿತು. ನೇತಾಜಿಯವರ ಆಜಾದ್ ಹಿಂದ್ ಫೌಜ್ ಪಡೆಗಳು ಸಿಂಗಾಪುರದಲ್ಲಿ ನಡೆಸಿದ ಪರೇಡ್‌ನಲ್ಲಿ ಅದು ಪ್ರತಿಧ್ವನಿಸಿತು. 1946ರ ರಾಯಲ್ ಇಂಡಿಯನ್ ನೇವಿ ದಂಗೆಯ ಸಮಯದಲ್ಲಿ, ಭಾರತೀಯ ನಾವಿಕರು ಬ್ರಿಟಿಷ್ ಯುದ್ಧನೌಕೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದಾಗಲೂ ಇದು ಪ್ರತಿಧ್ವನಿಸಿತು. ಖುದಿರಾಮ್ ಬೋಸ್ ಅವರಿಂದ ಅಶ್ಫಾಕುಲ್ಲಾ ಖಾನ್ ವರೆಗೆ, ಚಂದ್ರಶೇಖರ್ ಆಜಾದ್ ಅವರಿಂದ ತಿರುಪ್ಪೂರು ಕುಮಾರನ್‌ವರೆಗೆ, ಈ ಘೋಷಣೆಯು ಒಂದೇ ರೀತಿಯಲ್ಲಿ ಪ್ರತಿಧ್ವನಿಸಿತು. ಅದು ಕೇವಲ ಹಾಡಾಗಿ ಉಳಿಯಲಿಲ್ಲ; ಅದು ಭಾರತದ ಆತ್ಮದ ಸಾಮೂಹಿಕ ಧ್ವನಿಯಾಗಿ ಮಾರ್ಪಟ್ಟು, ಉದಾರವಾದಿಗಳು, ಕ್ರಾಂತಿಕಾರಿಗಳು, ವಿದ್ವಾಂಸರು ಮತ್ತು ಸೈನಿಕರು ಹೀಗೆ ಎಲ್ಲರನ್ನೂ ಒಗ್ಗೂಡಿಸಿತು. ಮಹರ್ಷಿ ಅರಬಿಂದೋ ರಂತೂ ಇದು ಭಾರತದ ಪುನರ್ಜನ್ಮದ ಮಂತ್ರ ಎಂದು ಘೋಷಿಸಿದ್ದರು.
ವಸಾಹತುಶಾಹಿ ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವ ಸಲುವಾಗಿ ರಾಷ್ಟ್ರಗೀತೆಯೊಂದರ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಮೌಲಾನಾ ಆಜಾದ್, ನೆಹರು, ಬೋಸ್, ಆಚಾರ್ಯ ದೇವ ಮತ್ತು ರವೀಂದ್ರನಾಥ ಟ್ಯಾಗೋರ್ ಅವರನ್ನೊಳಗೊಂಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯು 1937 ರಲ್ಲಿ ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಿತು ಆದರೆ ವಂದೇ ಮಾತರಂ ಗೀತೆಯಲ್ಲಿ ಮಾತೃಭೂಮಿಯನ್ನು ದುರ್ಗೆ ಮತ್ತು ಲಕ್ಷ್ಮಿಯಂತಹ ದೇವತೆಗಳೊಂದಿಗೆ ಸಮೀಕರಿಸಿದ್ದಾರೆ. ಆದರೆ ಇಸ್ಲಾಂ ಧರ್ಮದಲ್ಲಿ ಅಲ್ಲಾಹ್ ನನ್ನು ಹೊರತುಪಡಿಸಿ ಬೇರೆಯ ದೇವರನ್ನು ಆರಾಧಿಸುವುದನ್ನು ನಿಷೇಧಿಸಿದ್ದು ಇದನ್ನು ತೌಹೀದ್ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೇ ವಿಗ್ರಹಾರಾಧನೆಯೂ ತಪ್ಪು ಎಂದು ಮುಸ್ಲಿಂ ಧರ್ಮದಲ್ಲಿರುವ ಕಾರಣ, ಮಾತೃ ಭೂಮಿಯನ್ನು ತಾಯಿಯ ರೂಪದಲ್ಲಿ ಕಂಡು ತಾಯೇ ನಿನ್ನ ಪಾದಗಳಿಗೆ ನಮಸ್ಕರಿಸುತ್ತೇನೆ ಎಂಬ ಅರ್ಥವಿರುವ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಒಪ್ಪಿಕೊಳ್ಳಲು ಅಖಿಲ ಭಾರತ ಮುಸ್ಲಿಂ ಲೀಗ್ ಮತ್ತು ಮುಹಮ್ಮದ್ ಅಲಿ ಜಿನ್ನಾ ಈ ಹಾಡನ್ನು ವಿರೋಧಿಸಿದರು. ನಂತರ, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಬೆಂಬಲದೊಂದಿಗೆ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಾರ್ವಜನಿಕ ಸಭೆಗಳಲ್ಲಿ ಹಾಡಲು ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಳ್ಳಲು ನಿರ್ಧರಿಸಿತು ಮತ್ತು ದುರ್ಗಾ ಮತ್ತು ಲಕ್ಷ್ಮಿಯ ಉಲ್ಲೇಖಗಳನ್ನು ಒಳಗೊಂಡಿರುವ ಇತರ ಪದ್ಯಗಳನ್ನು ತೆಗೆದುಹಾಕಲಾಯಿತು.
ಮುಂದೆ 1947ರಲ್ಲಿ ಬ್ರಿಟೀಷರಿಂದ ಸ್ವಾತ್ರಂತ್ಯ್ರ ದೊರೆತು ಧರ್ಮಧಾರಿತವಾಗಿ ಈ ದೇಶ ವಿಭಜನೆಯಾಗಿ ಹಿಂದೂಗಳಿಗೆಂದೇ ಹಿಂದೂಸ್ಥಾನ ಆದಾಗ ಈ ದೇಶದ ರಾಷ್ಟ್ರಗೀತೆ ಯಾವುದು ಆಗಬೇಕು? ಎಂಬ ಚರ್ಚೆ ಮತ್ತೊಮ್ಮೆ ಬಂದಾಗ ಸ್ವಾತ್ರಂತ್ರ್ಯ ಹೋರಾಟದ ಸಮಯದಲ್ಲಿ ರಾಷ್ಟ್ರ ಜನತೆಯನ್ನು ಒಗ್ಗೂಡಿಸಿ, ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ವಂದೇಮಾತರಂನ್ನೇ ಎಲ್ಲರೂ ಒಕ್ಕೊರಿಲಿನಿಂದ ಇದೇ ನಮ್ಮ ರಾಷ್ಟ್ರಗೀತೆಯಾಗಲಿ ಎಂದು ಹೇಳಿದಾಗ, ನನ್ನ ಹೆಣವನ್ನು ದಾಟಿಕೊಂಡು ಪಾಕೀಸ್ಥಾನಕ್ಕೆ ಹೋಗಿ ಎಂದು ಮುಸಲ್ಮಾನರಿಗೆ ಬೆದರಿಕೆ ಹಾಕಿ ಪಾಕೀಸ್ಥಾನಕ್ಕೆ ಗುಳೇ ಹೊರಟಿದ್ದ ಲಕ್ಷಾಂತರ ಮುಸಲ್ಮಾನರನ್ನು ಈ ದೇಶದಲ್ಲೇ ಉಳಿಸಿಕೊಂಡ ಮಹಾತ್ಮರು ವಂದೇಮಾತರಂ ಗೀತೆಯಲ್ಲಿ ದೇಶವನ್ನು ದುರ್ಗಾಮಾತೆಗೆ ಹೋಲಿಸಿರುವ ಕಾರಣ ವ್ಯಕ್ತಿಪೂಜೆಯನ್ನು ಸಹಿಸಿದ ಮುಸಲ್ಮಾನರಿಗೆ ಬೇಸರ ಆಗುವ ಕಾರಣ ವಂದೇ ಮಾತರಂ ಬದಲು ಬೇರೆಯ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿಸ ಬೇಕೆಂಬ ಫರ್ಮಾನು ಹೊರಡಿಸಿದರು.
ಮಹಾತ್ಮರ ಅಹಿಂಸಾ ಹೋರಾಟದ ಪರಿಣಾಮದಿಂದಾಗಿಯೇ ಈ ದೇಶಕ್ಕೆ ಸ್ವಾತ್ರಂತ್ರ ಬಂದಿದೆ ಎಂದು ನಂಬಿದ್ದ ಅಥವಾ ನಂಬಿಸಲಾಗಿದ್ದ ಕಾರಣ, ಅಂದಿನ ಬಹುತೇಕ ರಾಜಕೀಯ ನಾಯಕರು ಅದಕ್ಕೆ ವಿರೋಧ ವ್ಯಕ್ತ ಪಡಿಸದ ಕಾರಣ, 1911ರ ಡಿಸೆಂಬರ್‌ನಲ್ಲಿ ಬ್ರಿಟಿಷ್ ರಾಜ ಐದನೇ ಜಾರ್ಜ್ ಮತ್ತು ರಾಣಿ ಮೇರಿಯವರ ಭಾರತದ ಭೇಟಿಯ ಸಮಯದಲ್ಲಿ ಅವರನ್ನು ಹೊಗಳುವುದಕ್ಕಾಗಿಯೇ ಆತನನ್ನು ಅಧಿನಾಯಕ (ಭಗವಂತ ಅಥವಾ ಆಡಳಿತಗಾರ) ಎಂದು ಪ್ರಶಂಸಿರುವ ಭಾರತ ಭಾಗ್ಯ ವಿಧಾತ (ಭಾರತದ ಹಣೆಬರಹವನ್ನು ಬರೆಯುವವ) ಎಂದೇ ಹಾಡಿ ಹೊಗಳಿದ್ದ ಮತ್ತು ಕೇವಲ ಆ ಗೀತೆಯಲ್ಲಿ ಪಂಜಾಬ, ಸಿಂಧು, ಗುಜರಾತ, ಮರಾಠಾ, ದ್ರಾವಿಡ, ಉತ್ಕಲ, ವಂಗ, ವಿಂಧ್ಯ, ಹಿಮಾಚಲ ಎಂದು ಭಾರತದ ಕೆಲವು ಪ್ರಾಂತ್ಯಗಳ ಹೆಸರಿದ್ದ ಕಾರಣ, ರಾಷ್ಟ್ರಕವಿ ರವೀಂದ್ರನಾಧ್ ಠಾಗೋರ್ ಅವರ ಜನಗಣಮನ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದು ನಿಜಕ್ಕೂ ದಾಸ್ಯದ ಸಂಕೇತವೇ ಸರಿ. ಇಷ್ಟಾಗಿಯೂ ಸ್ವಾತ್ರಂತ್ರ್ಯ ಸಂಗ್ರಾಮದ ಈ ಗೀತೆಯನ್ನು 1947 ರ ಆಗಸ್ಟ್ 15 ರಂದು ಸ್ವತಂತ್ರ ಭಾರತದ ಮೊದಲ ಸೂರ್ಯೋದಯದ ಸಮಯದಲ್ಲಿ ಶ್ರೀಯುತ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಕೋರಿಕೆಯ ಮೇರೆಗೆ ಪಂಡಿತ್ ಓಂಕಾರನಾಥ್ ಠಾಕೂರ್ ಅವರು ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಿದ್ದರು. ಈ ಗಾಯನವು ಬೆಳಿಗ್ಗೆ 06:30ಕ್ಕೆ ಆಕಾಶವಾಣಿಯಲ್ಲಿಯೂ ಸಹ ಪ್ರಸಾರವಾಯಿತು. ಪಂಡಿತ್ ಓಂಕಾರನಾಥ್ ಅವರು ಸಂಪೂರ್ಣ ಆಧ್ಯಾತ್ಮಿಕ ಗೌರವದೊಂದಿಗೆ ನಿಂತುಕೊಂಡೇ ಹಾಡಿದ್ದದ್ದು ವಿಶೇಷವಾಗಿತ್ತು. ಅಂದು ಆರಂಭವಾದ ಈ ಪದ್ದತಿ ಇಂದಿಗೂ ಸಹಾ ಪ್ರತೀ ದಿನ ಆಕಾಶವಾಣಿ ಆರಂಭವಾಗುವುದೇ ವಂದೇ ಮಾತರಂ ಗೀತೆಯೊಂದಿಗೇ ಎನ್ನುವುದು ಗಮನಾರ್ಹವಾಗಿದೆ.
ಅದೇ ರೀತಿಯಾಗಿ ಜನವರಿ 24, 1950 ರಂದು ಸಂವಿಧಾನ ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾರತದ ಮೊದಲ ರಾಷ್ಟ್ರಪತಿಗಳಾಗಿದ್ದ ಶ್ರೀ ರಾಜೇಂದ್ರ ಪ್ರಸಾದ್ ಅವರು ಜನ ಗಣ ಮನ ಎಂದು ಕರೆಯಲ್ಪಡುವ ಪದಗಳು ಮತ್ತು ಸಂಗೀತವನ್ನು ಒಳಗೊಂಡಿರುವ ಸಂಯೋಜನೆಯು ಭಾರತದ ರಾಷ್ಟ್ರಗೀತೆಯಾಗಿದ್ದು, ಸರ್ಕಾರವು ಸಂದರ್ಭ ಬಂದಾಗ ಪದಗಳಲ್ಲಿ ಬದಲಾವಣೆಗಳನ್ನು ಮಾಡಬಹುದು; ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರ ವಹಿಸಿರುವ ವಂದೇ ಮಾತರಂ ಗೀತೆಯನ್ನು ಜನ ಗಣ ಮನದೊಂದಿಗೆ ಸಮಾನವಾಗಿ ಗೌರವಿಸಲಾಗುತ್ತದೆ ಮತ್ತು ಅದರೊಂದಿಗೆ ಸಮಾನ ಸ್ಥಾನಮಾನವನ್ನು ಹೊಂದಿರುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದನ್ನೇ ಗ್ಗೆ ಅಂತಿಮ ನಿರ್ಧಾರವಾಗಿ ಅಂಗೀಕರಿಸಲಾಯಿತಾದರೂ, ದೇಶದ ಐಕ್ಯತೆಯ ಪ್ರತೀಕವಾಗಿದ್ದ ವಂದೇ ಮಾತರಂ ಗೀತೆಗೆ ಸಿಗಬೇಕಾದ ಗೌರವ ಆ ಗೀತೆ ಬರೆದ ಇಂದಿಗೆ ಸರಿಯಾಗಿ 150 ವರ್ಷಗಳಾದರೂ ಸಿಗದೇ ಇರುವುದು ನಿಜಕ್ಕೂ ವಿಷಾಧದ ಸಂಗತಿಯಾಗಿದೆ.
ಇಷ್ಟೆಲ್ಲಾ ಅಪಸವ್ಯಗಳ 2025ರ ಅಕ್ಟೋಬರ್ 26ರಂದು ಪ್ರಧಾನ ಮಂತ್ರಿ ಶ್ರೀ ಮೋದಿಯವರು ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ವಂದೇ ಮಾತರಂನ ಅದ್ಭುತ ಪರಂಪರೆಯನ್ನು ರಾಷ್ಟ್ರಕ್ಕೆ ನೆನಪಿಸಿ, ರಾಷ್ಟ್ರದಾದ್ಯಂತ ದೇಶಭಕ್ತಿಯ ಚೈತನ್ಯವನ್ನು ಹೊತ್ತಿಸಿದ ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸ್ಮರಣಾರ್ಥ, ಭಾರತ ಸರ್ಕಾರವು ನವೆಂಬರ್ 7ರಿಂದ ಒಂದು ವರ್ಷದವರೆಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ. ಈ ಆಚರಣೆಗಳ ಮೂಲಕ, ವಂದೇ ಮಾತರಂನ ಪೂರ್ಣ ಆವೃತ್ತಿಯು ಮತ್ತೊಮ್ಮೆ ದೇಶಾದ್ಯಂತ ಪ್ರತಿಧ್ವನಿಸುತ್ತದೆ ಮತ್ತು ಯುವಜನರು ಸಾಂಸ್ಕೃತಿಕ ರಾಷ್ಟ್ರೀಯತೆಯ ಕಲ್ಪನೆಯನ್ನು ಸ್ವೀಕರಿಸಲು ಪ್ರೇರೇಪಿಸುತ್ತದೆ. ಸರ್ದಾರ್ ಪಟೇಲ್ ಅವರ ಭಾರತದ ಏಕೀಕರಣವು ವಂದೇ ಮಾತರಂನ ಚೈತನ್ಯದ ಸಾಕಾರವಾಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಈ ಹಾಡು ಭೂತಕಾಲದ ಸ್ಮರಣೆ ಮಾತ್ರವಲ್ಲದೆ ಭವಿಷ್ಯದ ಕರೆಯೂ ಆಗಿದೆ. ಇಂದಿಗೂ, ವಂದೇ ಮಾತರಂ ಆತ್ಮವಿಶ್ವಾಸದ, ಸ್ವಾವಲಂಬಿಯಾದ ಮತ್ತು ಪುನರುತ್ಥಾನಗೊಂಡ 2047ರ ವಿಕಸಿತ ಭಾರತದ ನಮ್ಮ ದೃಷ್ಟಿಕೋನವನ್ನು ಪ್ರೇರೇಪಿಸುತ್ತದೆ. ಇದು ನಮ್ಮ ನಾಗರಿಕತೆಯ ಆತ್ಮ ವಿಶ್ವಾಸದ ಗೀತೆಯಾಗಿದೆ ಮತ್ತು ಈಗ ಆ ಚೈತನ್ಯವನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳುವ ಮೂಲಕ ವಂದೇ ಮಾತರಂ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಆಚರಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು, ಈ ಭಾರತ ಮಾತೆಯನ್ನು ಪ್ರೀತಿಸುವ ಪ್ರತಿಯೊಬ್ಬ ಭಾರತೀಯರೂ ಈ ಕಾರ್ಯದಲ್ಲಿ ತೊಡಗಿಕೊಳ್ಳುವುದು ಆದ್ಯ ಕರ್ತವ್ಯ ಆಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ