ಲೇಕ್ ಮ್ಯಾನ್ ಶ್ರೀ ಆನಂದ್ ಮಲ್ಲಿಗವಾಡ್

ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ದೂರದ ಕಾವೇರಿಯಿಂದ ನೀರನ್ನು ಹರಿಸಿದರೂ, ಲಕ್ಷಾಂತರ ಕೊಳವೇ ಭಾವಿಗಳಿದ್ದರೂ, ಪ್ರತೀ ದಿನ ಸುಮಾರು 66.25 ಕೋಟಿ ಲೀಟರ್‌ಗಳಷ್ಟು ನೀರಿನ ಕೊರತೆಯನ್ನು ಎದುರಿಸುತ್ತಿದ್ದು 2030ರ ಅಂತ್ಯದ ವೇಳೆಗೆ ಈ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆಯಿದ್ದರೂ, ಇದಕ್ಕೆ ಶಾಶ್ವತ ಪರಿಣಾಮವನ್ನು ಕಂಡು ಹಿಡಿಯಲು ನಮ್ಮನ್ನು ಆಳುತ್ತಿರುವ ರಾಜಕಾರಣಿಗೆಳು ಗಮನವೇ ಹರಿಸದೇ ಇರುವ ಸಂಧರ್ಭದಲ್ಲಿ, ಬತ್ತಿ ಹೋದ ಕೆರೆಗಳ ಪುನರುಜ್ಜೀವನವೇ ಇದಕ್ಕೆ ಶಾಶ್ವತ ಪರಿಹಾರ ಎಂದು ಮನಗಂಡ  ದೂರದ ಕೊಪ್ಪಳ ಜಿಲ್ಲೆಯಿಂದ ಬೆಂಗಳೂರಿಗೆ ಉದ್ಯೋಗಕ್ಕೆಂದು ಬಂದ ಮೆಕ್ಯಾನಿಕಲ್ ಇಂಜೀನಿಯರ್ ಇಂದು ಬೆಂಗಳೂರಿನ ಸುತ್ತಮುತ್ತಲಿನ 50ಕ್ಕೂ ಹೆಚ್ಚಿನ ಕರೆಗಳು ಮತ್ತು ದೇಶಾದ್ಯಂತ ನೂರಾರು ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಲೇಕ್ ಮ್ಯಾನ್ ಎಂದೇ ಸುಪ್ರಸಿದ್ಧರಾಗಿರುವ ಶ್ರೀ ಆನಂದ್ ಮಲ್ಲಿಗವಾಡ್ ಅವರ ರೋಚಕ ಕಥನವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಪ್ರಪಂಚದ ಎಲ್ಲಾ ನಾಗರೀಕತೆಗಳು ಇಲ್ಲವೇ ದೊಡ್ಡ ದೊಡ್ಡ ನಗರಗಳನ್ನು ಗಮನಿಸಿದರೆ ಅವುಗಳೆಲ್ಲವೂ ಯಾವುದೋ ಒಂದು ನದಿಯ ಪಾತ್ರದಲ್ಲೇ ಆರಂಭವಾಗಿ ಬಹುತೇಕ ನಾಗರೀಕತೆಗಳ ಅವಸಾನವೂ ನದಿಯು ಬತ್ತಿ ಹೋಗಿರುವುದೇ ಆಗಿರುತ್ತದೆ. ಹಾಗಾಗಿಯೇ  ಕೆಂಪೇಗೌಡರು ಬೆಂಗಳೂರನ್ನು ಕಟ್ಟುವಾಗ ಬೆಂಗಳೂರಿನ ಸುತ್ತಮುತ್ತಲೂ ನೀರಿಗಾಗಿ ಯಾವುದೇ ದೊಡ್ಡ ನದಿ ಇಲ್ಲದಿದ್ದದ್ದನ್ನು ಮನಗಂಡು ಜನರ ಕೃಷಿ ಮತ್ತು ದೈನಂದಿನದ ಅನುಕೂಲಕ್ಕಾಗಿ ಧರ್ಮಾಂಬುಧಿ ಕೆರೆ, ಸಂಪಂಗಿ ಕೆರೆ, ಕೆಂಪಾಂಬುಧಿ ಕೆರೆ, ಕಾರಂಜಿ ಕೆರೆ, ಚೆನ್ನಮ್ಮ ಕೆರೆ, ಶೂಲೆ ಕೆರೆ, ಅಕ್ಕಿ ತಿಮ್ಮನ ಹಳ್ಳಿ ಕೆರೆ, ಚಲ್ಲಘಟ್ಟ ಕೆರೆ, ಹಲಸೂರು ಕೆರೆ, ಗಂಧದಕೋಟಿ ಕೆರೆ, ಕೋರಮಂಗಲದ ಕೆರೆ, ಯಡೆಯೂರು ಕೆರೆ, ಲಾಲ್ಭಾಗ್ ಕೆರೆ, ನಾಗಶೆಟ್ಟಿಹಳ್ಳಿ ಕೆರೆ, ಹೆಬ್ಬಾಳ ಕೆರೆ, ಬೆಳ್ಳಂದೂರು ಕೆರೆ, ವರ್ತೂರು ಕೆರೆ ಹೀಗೆ ನೂರಾರು ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದರು.

ಕೆಲವು ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ 1,850 ಕೆರೆಗಳಿದ್ದು ಅವುಗಳ ಪೈಕಿ ಈಗ ಕೇವಲ 465 ಕೆರೆಗಳು ಮಾತ್ರ ಉಳಿದಿದ್ದು ಅದರಲ್ಲೂ ಕೇವಲ ಶೇ.10ರಷ್ಟು ಕೆರೆಗಳಲ್ಲಿ ಮಾತ್ರ ಶುದ್ಧ ನೀರು ಇದೆ ಎನ್ನುವುದೇ ವಿಷಾಧನೀಯವಾಗಿದ್ದು, ಬೆಂಗಳೂರು ನಗರ ಬೆಳೆಯುತ್ತಾ ಹೋದಂತೆಲ್ಲಾ, ಹೆಚ್ಚು ಹೆಚ್ಚು ವಲಸಿಗರು ವಿವಿಧ ಕಾರಣಗಳಿಗೆ ಬೆಂಗಳೂರಿಗೆ ಬಂದ ಕಾರಣ ಅವರೆಲ್ಲರ ವಸತಿಗಳಿಗಾಗಿ ರಾಜ ಕಾಲುವೆಗಳನ್ನು ಮುಚ್ಚಿ ಅದರ ಮೇಲೆ ದೊಡ್ಡ ದೊಡ್ಡ ಗಗನಚುಂಬಿ ಕಟ್ಟಡಗಳನ್ನು ಕಟ್ಟಿದ ಪರಿಣಾಮ, ಸುರಿದ ಮಳೆಯ ನೀರು ಕೆರೆಗೆ  ಹೋಗದೇ ಕೆರೆಗಳು ಸಹಾ ಬತ್ತಿ ಹೋದ ಪರಿಣಾಮ ಅಂತರ್ಜಲದ ಮಟ್ಟವೂ ಕುಸಿದು ಹೋದ ಪರಿಣಾಮ ನೂರಾರು ಏಕೆ ಸಾವಿರಾರು ಅಡಿಗಷ್ಟು ಆಳದ ವರೆಗೂ ಕೊರೆದರೂ ನೀರು ಸಿಗದೇ ಹೋಗಿ ನೀರಿಗೆ ಹಾಹಾಕಾರವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರೂ ಸಹಾ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಂತೆಯೇ ನೀರಿಲ್ಲದ ನಗರ ಎಂದು ಆಗುವ ಲಕ್ಷಣಗಳು ಬಹಳ ದೂರ ಇಲ್ಲಾ ಎಂದೆನಿಸುವ ಅಪಾಯ ಹತ್ತಿರದಲ್ಲೇ ಇದೆ.

ಮೂಲತಃ ಕೊಪ್ಪಳ ಜಿಲ್ಲೆಯ ಕರಮುಡಿ ಗ್ರಾಮದವರಾದ 1981ರಲ್ಲಿ ಜನಿಸಿದ್ದ ಮೆಕ್ಯಾನಿಕಲ್ ಇಂಜಿನಿಯರ್ ಆದ ಆನಂದ್ ಮಲ್ಲಿಗವಾಡ್  ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ಅವರು ಭಾರತದ ದೊಡ್ಡ ವಾಹನ ಬಿಡಿಭಾಗಗಳ ತಯಾರಕ  ಸನ್ಸೆರಾ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. 2017ರಲ್ಲಿ ಬೆಂಗಳೂರಿನ ಜಲ ಸಮಸ್ಯೆಗಳ ಕುರಿತಾದ ಪತ್ರಿಕಾ ವರದಿಯೊಂದು  ಓದಿ, ಈ  ಸಮಸ್ಯೆಗೆ ಶಾಶ್ವತವಾದ ಪರಿಹಾರವೇನು? ಎಂಬ ಜಿಜ್ಞಾಸೆಯಲ್ಲಿರುವಾಗಲೇ ಅವರು ಇದ್ದ ಬಡಾವಣೆಯಲ್ಲಿಯೂ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್ ಗಳ ನೀರನ್ನೇ ಆಶ್ರಯಿಸಿದ್ದದ್ದು ಗಮನಕೆ ಬಂದಿತು. ಅದೇ  ಸಮಯದಲ್ಲೇ ಅವರ ಕಛೇರಿಯ ಸಮೀಪದಲ್ಲೇ ಇದ್ದ ಸುಮಾರು 36 ಎಕರೆ ವಿಸ್ತೀರ್ಣದ ಕ್ಯಾಲಸನಹಳ್ಳಿ ಕೆರೆಯು ಬತ್ತಿ ಹೋಗಿ ಕೆಲವು ಭಾಗ ಮಕ್ಕಳ ಆಟದ ಮೈದಾನವಾಗಿ, ಬಹುಭಾಗ ಕಸದ ತೊಟ್ಟಿಯಾಗಿ ಹಾಳುಬಿದ್ದಿದ್ದ ಕೆರೆ ಕಣ್ಣಿಗೆ ಬಿತ್ತು. ಹೇಗಾದರೂ ಮಾಡಿ ಈ ಕೆರೆಯನ್ನು ಪುರಜ್ಜೀವನ ಗೊಳಿಸಿದರೆ, ಅಲ್ಲಿನ ನೀರನ್ನು ಗೃಹಬಳಕೆ ಉದ್ದೇಶಗಳಿಗಾಗಿ ಬಳಸಲು ಸಾಧ್ಯವಾಗಬಹುದು ಎಂದು ಯೋಚಿಸಿದರು.

ಯೋಜನೆಯೇನೋ ಚೆನ್ನಾಗಿದೆ  ಆದರೆ ಇದಕ್ಕೆಲ್ಲಾ ಲಕ್ಷಾಂತರ ಹಣ ಖರ್ಛಾಗುತ್ತದೆ ಮತ್ತು ಸಾವಿರಾರು ಜನರ ಶ್ರಮದಾನ ಬೇಕಾಗುವುದರಿಂದ ಅದನ್ನೆಲ್ಲಾ ಹೇಗೆ ನಿಭಾಯಿಸುವುದು ಎಂದು ಯೋಚಿಸುತ್ತಿರುವಾಗಲೇ,  ನಮ್ಮ ದೇಶದ ಪ್ರತಿಯೊಂದು ಕಂಪನಿಗಳೂ ತಮ್ಮ ಲಾಭದ ಸ್ವಲ್ಪ ಪ್ರಮಾಣವನ್ನು  CSR (Corporate Social Responsibility) ಅರ್ಥಾತ್  ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ ಸಮಾಜದಲ್ಲಿನ  ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಬಳಸಲೇ ಬೇಕೆಂಬ ನಿಯಮವಿದೆ ಎಂಬುದನ್ನು ತಿಳಿದು, ತಮ್ಮ ಸಹದ್ಯೋಗಿಗಳ ಸಹಾಯದಿಂದ ತಮ್ಮ ಕಂಪೆನಿಯ ಮೇಲಧಿಕಾರಿಗಳೊಂದಿಗೆ ದೀರ್ಘ ಕಾಲ ಚರ್ಚಿಸಿ, ಕ್ಯಾಲಸನಹಳ್ಳಿ ಕೆರೆ ಅಭಿವೃದ್ಧಿಯ ನೀಲ ನಕ್ಷೆಯನ್ನು ತಯಾರಿಸಿ ತಮ್ಮ ಕಂಪನಿಯಿಂದ ಒಂದು ಕೋಟಿ ರೂಪಾಯಿ ಮಂಜೂರು ಮಾಡಿಸಿಕೊಂಡರು.

ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಅಷ್ಟು ದೊಡ್ಡ ಕೆಲಸಕ್ಕೆ ಒಂದು ಕೋಟಿ ಹಣ ಸಾಲದು ಮತ್ತು ಇದಕ್ಕಾಗಿ ಹಲವರ ಸಹಾಯದ ಅವಶ್ಯಕತೆಯನ್ನು ಮನಗಂಡ ಆನಂದ್ ಅವರಿಗೆ ಅದೇ ಬಡಾವಣೆಯಲ್ಲಿ 2009ರಲ್ಲಿ ಮನೆಯನ್ನು ಕಟ್ಟಿ 2014ರಲ್ಲಿ ವಾಸಕ್ಕೆ ಬಂದ 73 ವರ್ಷದ, ಟಾಟಾ ಸ್ಟೀಲ್ಸ್ ಕಂಪನಿಯ ಮಾಜಿ ಉಪಾಧ್ಯಕ್ಷರಾದ ಶ್ರೀ ಬಿ. ಮುತ್ತುರಾಮನ್ ಅವರ ಪರಿಚಯವಾಗಿ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ  ಅವರಿಬ್ಬರೂ ಸ್ಥಳೀಯರನ್ನು ಭೇಟಿ ಮಾಡಿ ಅವರಿಲ್ಲರಿಗೂ ತಮ್ಮ ಕಾರ್ಯದ ಬಗ್ಗೆ ಮನದಟ್ಟು ಮಾಡಿಸಿದರು.

ಮೂರು ಮಣ್ಣು ಸಾಗಣೆದಾರರು ಮತ್ತು ಆರು ಟ್ರಕ್‌ಗಳು ಮತ್ತು  ಸ್ಥಳೀಯ ಸ್ವಯಂಸೇವಕರುಗಳ ಸಹಾಯದಿಂದ ಮಲ್ಲಿಗವಾಡ್ ಅವರು  ಸುಮಾರು 400,000 ಘನ ಮೀಟರ್ ಮಣ್ಣು, ಇತರೇ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಅನ್ನು ತೆಗೆದು ಹಾಕಿಸಿದ್ದಲ್ಲದೇ, ಸುತ್ತಮುತ್ತಲಿನ ರಾಜ ಕಾಲುವೆಗಳನ್ನೂ ಶುಚಿ ಗೊಳಿಸಿ ಕೆರೆಗಳಿಗೆ ಅದಾಗಲೇ ಇದ್ದ  ತಡೆಗೋಡೆಗಳನ್ನು ಭದ್ರಗೊಳಿಸಿದರು. ಕೆರೆಯ ಒಳಗಿನ ಭಾಗದಲ್ಲಿ ಅಗೆದ ಮಣ್ಣನ್ನು ಮತ್ತೆಲ್ಲೋ ಹಾಕುವ ಮೂಲಕ   ಆ ಪ್ರದೇಶಗಳನ್ನೂ ಹಾಳು ಮಾಡದೇ, ಅದೇ ಮಣ್ಣನ್ನು ಬಳಿಸಿಕೊಂಡು ಅದೇ ಕೆರೆಗಳ ಮಧ್ಯೆಯೇ  ಐದಾರು ಕೃತಕ ದ್ವೀಪಗಳು ಮತ್ತು ಕೆರೆಯ ಸುತ್ತಲೂ ಏರಿಗಳನ್ನು ನಿರ್ಮಿಸಿ, ತಮ್ಮ ಕಂಪನಿಯ ಸಹೋದ್ಯೋಗಿಗಳು ಮತ್ತಿತರೇ ಸ್ವಯಂಸೇವಕರುಗಳ ಸಹಾಯದಿಂದ, ಕೃತಕವಾಗಿ ನಿರ್ಮಿಸಿದ ದ್ವೀಪಗಳಲ್ಲಿ ಸುಮಾರು 3,000 ಹಣ್ಣಿನ ಮರಗಳು, 3,000 ಸ್ಥಳೀಯ ಸಸ್ಯಗಳು ಮತ್ತು 2,000 ಔಷಧೀಯ ಸಸ್ಯಗಳನ್ನು ಒಳಗೊಂಡಂತೆ 18,000 ಸ್ಥಳೀಯ ಮರಗಳ ಸಸಿಗಳನ್ನು ನೆಡುವ ಕೆಲಸ  ಕೇವಲ 45 ದಿನಗಳಲ್ಲಿ ಸಂಪೂರ್ಣವಾಗಿ  ಆ ಪ್ರದೇಶವು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ರೂಪಾಂತರಗೊಂಡಿತು.

ಸ್ವಾತಿ ಮುತ್ತಿನ ಮಳೆ ಹನಿಯೇ ಮೆಲ್ಲ ಮೆಲ್ಲನೇ ಧರೆಗಿಳಿಯೇ ಎನ್ನುವಂತೆ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸುತ್ತಮುತ್ತಲೂ ಬಿದ್ದ  ಅಪಾರ ಪ್ರಮಾಣದ ನೀರು ಹಾಗೆ ಹರಿದು ಪೋಲಾಗದೇ ನೇರವಾಗಿ  ಇವರು ಪುನಶ್ಚೇತನ ಗೊಳಿಸಿದ  ಕೆರೆಯಲ್ಲಿ ಸಂಗ್ರಹಗೊಂಡಿತಲ್ಲದೇ, ಅವರು ನೆಟ್ಟ ಗಿಡಗಳಿಗೂ ಯಥೇಚ್ಚವಾಗಿ ನೀರು ದೊರೆತು ಗಿಡಗಳೆಲ್ಲವೂ ದೊಡ್ಡದಾಗಿ ಎಲ್ಲಡೆಯೂ ಹಸಿರು ಹಸಿರು ನಳನಳಿಸತೊಡಗಿದವು. ಬತ್ತಿ ಹೋಗಿದ್ದ ಕೆರೆಯಲ್ಲಿ ಸಂಮೃದ್ಧವಾದ ನೀರು ಸಂಗ್ರಹವಾಗುತ್ತಿದ್ದಂತೆಯೇ, ಆ ನೀರನ್ನು ಶುದ್ಧೀಕರಣದ ಭಾಗವಾಗಿ ಬಗೆ ಬಗೆಯ ಮೀನುಗಳನ್ನು ಅಲ್ಲಿಗೆ ತಂದು ಬಿಡಲಾಯಿತು.

ನೋಡ ನೋಡುತ್ತಿದ್ದಂತೆಯೇ ಕೇವಲ ಐದಾರು ತಿಂಗಳಿನಲ್ಲಿಯೇ ಆ ಕೆರೆಯಲ್ಲಿ ಬಾತುಕೋಳಿಗಳು ಸ್ವಚ್ಚಂದವಾಗಿ ಈಜತೊಡಗಿದರೆ, ಅಲ್ಲಿ ನೆಟ್ಟ ಗಿಡ ಮರಗಳು ವಲಸೆ ಬಂದ ಹಕ್ಕಿಗಳ ಆಶ್ರಯ ತಾಣವಾಗಿ ಅವುಗಳ ಚಿಲಿಪಿಲಿ ಕಲರವ ಎಲ್ಲರ ಕಿವಿಗಳಿಗೆ ಇಂಪಾಗಿ ಕೇಳತೊಡಗಿದವು. ಕೆರೆಯ ಸುತ್ತಲೂ ನಿರ್ಮಿಸಿದ್ದ ಪಾದಚಾರಿ ರಸ್ತೆಯು ವಾಕಿಂಗ್ ಹಾಗೂ ಜಾಗಿಂಗ್ ತಾಣವಾದಾರೆ, ಸಂಜೆ ತಂಪಾದ ಹೊತ್ತಿನಲ್ಲಿ ಅದೇ ಕೆರೆ ನೀರಿನಲ್ಲಿ ದೋಣಿ ವಿಹಾರ ಪ್ರಾರಂಭವಾಗಿ ಇಡೀ ಪರಿಸರವೇ ಕೇವಲ ಒಂದು ವರ್ಷದಲ್ಲಿ ಸಂಫೂರ್ಣವಾಗಿ ಬದಲಾಯಿತು.

ಈ ಯಶಸ್ಸಿನಿಂದ ಉತ್ತೇಜಿತರಾದ ಮಲ್ಲಿಗವಾಡ್ ತಾವು ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ  ಪೂರ್ಣ ಸಮಯವನ್ನೂ ಕೆರೆ ಪುನರುಜ್ಜೀವನಕ್ಕಾಗಿಯೇ ಮೀಸಲಾಗಿಸಿ ಪರಿಸರವಾದಿ ಅಕ್ಷಯ ದೇವೇಂದ್ರ ಅವರೊಂದಿಗೆ ಸೇರಿಕೊಂಡು ಸುತ್ತ ಮುತ್ತಲಿನ ಹತ್ತಾರು ಕೆರೆಗಳ ಪುನರುಜ್ಜೀವನಗೊಳಿಸಲು ಮುಂದಾದರು. ಕ್ಯಾಲಸನಹಳ್ಳಿ ಕೆರೆಯು ಅಭಿವೃದ್ಧಿಯ ಕೆಲಸ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಪರಿಣಾಮ ಅವರ ಕಾರ್ಯಕ್ಕೆ  ಸ್ಥಳೀಯ ಕಾರ್ಪೊರೇಟ್‌ ಸಂಸ್ಥೆಗಳು ಹಣಕಾಸು ಒದಗಿಸಲು ಮುಂದಾದರೆ, ನೂರಾರು ಸ್ವಯಂಸೇವಕರು ವಾರಾಂತ್ಯದಲ್ಲಿ ಪರಿಸರದ ಪರಿವರ್ತನಾ ಕಾರ್ಯಕ್ಕೆ ತಮ್ಮ ಸಮಯವನ್ನು ದಾನ ಮಾಡಲು ಮುಂದಾದ ಪರಿಣಾಮ ಹತ್ತಾರು ಕೆರಗಳು ಪುನರುಜ್ಜೀವ ಗೊಂಡಿತು. ಇಷ್ಟೇ ಅಲ್ಲದೇ ಕೋನಸಂದ್ರದ ಕೆರೆಯ ಹತ್ತಿರದ ಔಷಧ ಕಂಪನಿಗಳ ತ್ರಾಜ್ಯವು ನೇರವಾಗಿ ಕೆರೆಯನ್ನು ಸೇರುತ್ತಿದ್ದರೆ, ಅ ಹಳ್ಳಿಯ ಸುತ್ತಮುತ್ತಲಿನ ಒಳಚರಂಡಿಯೂ ಸಹಾ ಕೆರೆಗೆ ಬಂದು ಸೇರುತ್ತಿದ್ದ ಪರಿಣಾಮ ಆ ಕೆರೆಯ ನೀರು ಗಬ್ಬು ನಾರುತ್ತಿದ್ದನ್ನು ಗಮನಿಸಿದ  ಆನಂದ್ ಅವರು ಆ ಎಲ್ಲಾ ಔಷಧ ಕಂಪನಿಗಳಿಗೂ ಭೇಟಿ ಮಾಡಿ ಅಲ್ಲಿನ ಅಧಿಕಾರಿಗಳಿಗೆ ಪರಿಸರ ಮಾಲಿನ್ಯದ ಬಗ್ಗೆ  ಅರಿವು ಮೂಡಿಸಿ ಅಲ್ಲಿನ ತ್ರಾಜ್ಯಗಳನ್ನು ಶುದ್ಧೀಕರಿಸುವ ಯೋಜನೆಯನ್ನು ಆರಂಭಿಸಿದ್ದಲ್ಲದೇ ಅವರು ನೀಡಿದ ಸಿ.ಎಸ್.ಆರ್. ನಿಧಿಯಿಂದ ಕೇವಲ ಮೂರು ತಿಂಗಳೊಳಗೆ ಕೋನಸಂದ್ರ ಕೆರೆಯನ್ನು ಸ್ವಚ್ಛಗೊಳಿಸಿದ್ದಲ್ಲದೇ ಇದೇ ರೀತಿಯ ತಮ್ಮ ಕಾರ್ಯವನ್ನು ಮುಂದುವರಿಸಿದ ಪರಿಣಾಮ ಇಂದು ನಂಜಾಪುರ ಕೆರೆ, ವಾಬಸಂದ್ರ ಕೆರೆ, ಬಿಂಗಿಪುರ ಕೆರೆ, ಕೋನಸಂದ್ರ ಕೆರೆ, ಗವಿ ಕೆರೆ, ಮಾಣೆ ಕೆರೆ, ಹಾಡೋ ಸಿದ್ದಾಪುರ ಕೆರೆ, ಚಿಕ್ಕನಾಗಮಂಗಲ ಕೆರೆ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಗೊಂಡವು. ಶಿಕಾರಿಪಾಳ್ಯ ಕೆರೆಯಲ್ಲಂತೂ 20 ವರ್ಷಗಳ ನಂತರ ಮೊದಲ ಬಾರಿಗೆ, ಸ್ಥಳೀಯ ಮಕ್ಕಳು ಅ ಕೆರೆಯಲ್ಲಿ ಸ್ವಚ್ಚಂದವಾಗಿ ಈಜುವಂತಾಗಿದೆ.

ಆನಂದ್ ಮಲ್ಲಿಗವಾಡ್ ಅವರ ಈ ಸಾಹಸದಿಂದಾಗಿ ಬೆಂಗಳೂರಿನ ಸುತ್ತಮುತ್ತಲೂ ಇದುವರೆವಿಗೂ 35ಕ್ಕೂ ಹೆಚ್ಚು ಕೆರೆಗಳು ಪುನಶ್ಚೇತನಗೊಳ್ಳುವ ಮೂಲಕ 40.13 ಕೋಟಿ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಲ್ಲದೇ, ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು ಸಹ ಏರಿಕೆಯಾಗಿದೆ. ರಿಡ್ಜ್ ಟು ರಿವರ್ ಎಂದು ಕರೆಯಲ್ಪಡುವ ಚೋಳರ ಕಾಲದ ಜಲಸಂಗ್ರಹಣಾ ವಿಧಾನವನ್ನು ಬಳಸಿಕೊಂಡ ಆನಂದ್ ಅವರು ಮಣ್ಣಿನ ಗೋಡೆಗಳನ್ನು ಕ್ಯಾಸ್ಕೇಡಿಂಗ್ ಆಕಾರದಲ್ಲಿ ನಿರ್ಮಿಸಿ, ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ಹರಿದು ಬರುವ ಚರಂಡಿ ತ್ಯಾಜ್ಯ ಕೆರೆಯ ನೀರಿಗೆ ಸೇರುವುದನ್ನು ತಪ್ಪಿಸುವ ಸಲುವಾಗಿ ಅಲ್ಲಲ್ಲಿ ಕೆಲವು ಕಿರು ಕೆರೆಗಳನ್ನು ನಿರ್ಮಿಸಿ ಮೊದಲ ಹಂತದಲ್ಲಿ ತ್ಯಾಜ್ಯವನ್ನು ತಡೆಯುವ ವ್ಯವಸ್ಥೆ ಇದಾಗಿದ್ದು, ಇದರ ಜೊತೆಗೆ ಕೆರೆಗೆ ಹೂಳು ಸೇರುವುದನ್ನು ಸಹಾ ಇದು ನಿಯಂತ್ರಿಸುತ್ತದೆ.

ಕೆರೆಗಳನ್ನು ಪುನಶ್ಚೇತನ ಗೊಳಿಸುವ ಕಾರ್ಯ ನಾವು ತಿಳಿದಿರುವಷ್ಟು ಸುಲಭದ್ದಲ್ಲ. ಏಕೆಂದರೆ ಅನೇಕ ಕೆರೆಗಳನ್ನು ಈಗಾಗಲೇ ಉಳ್ಳವರು ಒತ್ತರಿಸಿಕೊಂಡು ನಿವೇಶನಗಳನ್ನು ಮಾಡಿ ಮಾರಿಕೊಂಡಿದ್ದರೆ, ಇನ್ನೂ  ಕೆಲವು ಕೆರೆಗಳು ಆಟದ ಮೈದಾನಗಳಾಗಿದ್ದು, ಅಂತಹ ಕೆರೆಗಳನ್ನು ಪುನಶ್ಚೇತನಗೊಳಿಸುವಾಗ ಸಹಜವಾಗಿಯೇ  ಅನೇಕ ಅಡೆತಡೆಗಳನ್ನು ಎದುರಿಸಬೇಕಾಯಿತು. ನಮ್ಮೂರಿನ ವಿಷಯಕ್ಕೇ ಬರಲು ನೀವು ಯಾರು? ಎಂದು ಆನಂದ್ ಅವರ ಮೇಲೆ  ಕೆಲವು ಕಡೆಗಳಲ್ಲಿ  ಮೇಲೆ ಹಲ್ಲೆಗಳೂ ನಡೆದರೆ, ಅವರ ಕೆಲಸ ಕಾರ್ಯಗಳಿಗೆ ಸ್ಥಳೀಯ ಆಡಳಿತ ಮಂಡಳಿ ಅನುಮತಿ ನೀಡಲು ಅಸಹಕಾರ ಮತ್ತು ಸರ್ಕಾರ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಯ ಅಪ್ಪಣೆ ಇಲ್ಲದೇ  ಕೆರೆಗಳನ್ನು ಪುನಶ್ಚೇತನ ಗೊಳಿಸುವ ಮೂಲಕ ಪರಿಸರದ ಮೇಲೆ  ಹಾನಿಯನ್ನು  ಉಂಟು ಮಾಡುತ್ತಿದ್ದಾರೆ ಎಂಬ ದೂರುಳು  ಸ್ಥಳಿಯ ಪೋಲೀಸ್ ಠಾಣೆ ಮತ್ತು ನ್ಯಾಯಾಲಯಗಳಲ್ಲಿ ದೂರು ಧಾಖಲಾದರೂ, ಅವೆಲ್ಲವನ್ನೂ ಸಹಿಸಿಕೊಂಡು ಕೆರೆಗಳ ಅಭಿವೃದ್ಧಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆನಂದ್ ಮಲ್ಲಿಗವಾಡ್ ಅವರು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನದಲ್ಲಿ ಯಾವುದೇ ತಾಂತ್ರಿಕ ತರಬೇತಿಯನ್ನು ಪಡೆಯದೇ ಇದ್ದರೂ, ಕೆರೆಗಳನ್ನು ಮುಚ್ಚಿ ಹಾಕುವ ಮೂಲಕ  ಈಗಾಗಲೇ ಪರಿಸರ ಮತ್ತು ಅಂತರ್ಜಲದ ಮೇಲೆ ಮಾಡಿರುವ ಹಾನಿಯನ್ನು ಸರಿಪಡಿಸದಿದ್ದರೆ ಮುಂದಿನ ಪೀಳಿಗೆಗೆ ಭಾರೀ ಪ್ರಮಾಣದ ಪರಿಣಾಮ ಬೀರುತ್ತದೆ ಎಂಬ ಪ್ರಜ್ಞೆ ಅವರಲ್ಲಿರುವ ಕಾರಣ, ಲೇಕ್ ರಿವೈವರ್ಸ್ ಕಲೆಕ್ಟಿವ್ ಎಂಬ ದತ್ತಿ ಸಂಸ್ಥೆಯನ್ನು ಕಟ್ಟಿಕೊಂಡು ಅದರ ಮೂಲಕ  ದೇಶಾದ್ಯಂತ  ನೂರಾರು ಕೆರೆಗಳ ಪುನರುಜ್ಜೀವನ, ಜಲಸಂಕ್ಷಣೆ ಕುರಿತು ಅವರಿಗಿರುವ ಬದ್ಧತೆ, ಕಾಳಜಿ ಮತ್ತು ಇದುವರೆವಿಗೂ ಅವರು ಮಾಡಿ ತೋರಿಸಿದ ಕೆಲಸಗಳನ್ನು ನೋಡಿ ಅವರ ಅನುಭವಗಳು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗದೇ, ಕರ್ನಾಟಕವೂ ಸೇರಿದಂತೆ ಉತ್ತರ ಪ್ರದೇಶ, ಮಧ್ಯಪ್ರದೇಶ ಒಡಿಶಾ ಮುಂತಾದ  ಮತ್ತು ಮೇಘಾಲಯದಂತಹ ಒಂಭತ್ತಕ್ಕೂ ಹೆಚ್ಚಿನ ರಾಜ್ಯಗಳು ಬಳಸಿಕೊಂಡ ಪರಿಣಾಮ  ಆ ರಾಜ್ಯಗಳಲ್ಲಿಯೂ ಸಹಾ ಸುಮಾರು 80ಕ್ಕೂ ಹೆಚ್ಚು ಕೆರೆಗಳು ಪುನರುಜ್ಜೀವನಗೊಂಡು ಆ ಎಲ್ಲಾ ಕೆರೆಗಳು ಸಮೃದ್ಧ ನೀರಿನ ಆಗರಗಳಾಗಿರುವ ಕಾರಣ ಆನಂದ್ ಮಲ್ಲಿಗವಾಡ್ ಅವರ ಯಶಸ್ಸು ಅವರನ್ನು ಭಾರತದಾದ್ಯಂತ ಹೆಚ್ಚು ಬೇಡಿಕೆಯಿರುವ ಪರಿಸರವಾದಿ ಮತ್ತು ಜಲ ಸಂರಕ್ಷಣಾ ತಜ್ಞರನ್ನಾಗಿಸಿದೆ.

ನಮ್ಮ ಪರಿಸರದ ಶ್ವಾಸಕೋಶಗಳಾದ ಕೆರೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕಿದೆ. ನಮ್ಮ ಬಳಿ ಹಣವಿದ್ದರೆ ಅದನ್ನು ಕೆರೆಗಳಿಗೆ ಖರ್ಚು ಮಾಡುವುದು ಉತ್ತಮ. ದಶಕಗಳ ನಂತರ ಅದು ನಮಗೆ ಫಲವನ್ನು ನೀಡಲು ಆರಂಭಿಸುತ್ತವೆ ಎಂದು ಹೇಳುವ ಮಲ್ಲಿಗವಾಡ್ ಅವರ ಸಾಮಾಜಿಕ ಕಳಕಳಿ ಮತ್ತು  ಜಲದ ಮೂಲಕ ಈ ನೆಲದ ಋಣ ತೀರಿಸುವ ತವಕ ನಿಜಕ್ಕೂ ಅನನ್ಯ ಮತ್ತು ಅದ್ಭುತವಾಗಿದ್ದು ಎಲ್ಲರಿಗೂ ಪ್ರೇರಣಾದಾಯಿಯಾಗಿರುವ ಪರಿಣಾಮ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಮನುಷ್ಯರು ಸತ್ತಾಗ ಅವರ ದೇಹವನ್ನು ಮಣ್ಣು ಮಾಡಿ ಅವರ ಸವಿನೆನಪಿಗಾಗಿ ಗೋರಿಗಳನ್ನು ಕಟ್ಟಿದರೆ. ಅದೇ ಬತ್ತಿದ ಕೆರೆಗಳ ಜಾಗದಲ್ಲಿ ಗಗನಚುಂಬಿ ಕಟ್ಟಡಗಳನ್ನು ಕಟ್ಟುವ ಮೂಲಕ ಜಲದೇವತೆಗೇ ಗೋರಿ ಕಟ್ಟಿದಂತಿದೆ ಎಂದು ಹಿರಿಯ ಕವಿಗಳಾಗಿದ್ದ ಶ್ರೀ ಚನ್ನವೀರ ಕಣವಿ ಅವರು ಅದೆಂದೋ ಹೇಳಿರುವುದು ನಿಜಕ್ಕೂ ಎಷ್ಟು ಮಾರ್ಮಿಕವಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment