ಮನಸ್ಸಿದ್ದರೆ ಮಾರ್ಗ ಎಂಬ ಸುಂದವಾದ ಗಾದೆ ಮಾತು ಕನ್ನಡದಲ್ಲಿದೆ. ಯಾವುದೇ ಕೆಲಸವನ್ನು ಮಾಡಲೇ ಬೇಕೆಂಬ ಧೃಢ ಸಂಕಲ್ಪ ಇದ್ದಲ್ಲಿ ಯಾವುದೇ ಕೆಲಸವನ್ನು ಮಾಡಬಹುದು ಎನ್ನುವುದಕ್ಕೆ 650 ಬಗೆಯ ಭತ್ತದ ಬೀಜಗಳ ಸಂರಕ್ಷಿಸುತ್ತಾ, 2024ರ ಮೇ 9ರಂದು ರಾಷ್ಟ್ರಪತಿ ಶ್ರೀಮತಿ ದ್ರೌಪತಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಕಾಸರಗೋಡಿನ ಕನ್ನಡಿಗ ರೈತ ಶ್ರೀ ಸತ್ಯನಾರಾಯಣ ಬೇಲೇರಿ ಅವರ ಸಾಧನೆಗಳ ಬಗ್ಗೆ ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಆಡಳಿತಾತ್ಮಕವಾಗಿ ಕೇರಳದ ಕಾಸರಗೋಡಿಗೆ ಸೇರಿರುವ ಆದರೆ ದಕ್ಷಿಣ ಕನ್ನಡಕ್ಕೆ ಹತ್ತಿರವಿರುವ ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಮಪಂಚಾಯತ್‌ನ ನೆಟ್ಟಿಂಗೆ ಎಂಬ ಗ್ರಾಮದ ಕಸಿ ಕಟ್ಟುವಿಕೆ, ಜೇನು ಸಾಕಣಿಕೆ, ಗಾರೆ ಕೆಲಸ, ಮರದ ಕೆಲಸ, ಎಲೆಕ್ಟ್ರಿಕ್ ಮತ್ತು ಮೋಟಾರ್ ರಿವೈಂಡಿಂಗ್ ಕೆಲಸಗಳಲ್ಲೂ ಪರಿಣಿತರಾದ ಸಾಹಿತ್ಯದ ಅಭಿರುಚಿಯೂ ಇರುವ ಸಾವಯವ ಕೃಷಿಕರಾದ ರೈತ ಸತ್ಯನಾರಾಯಣ ಅವರು 2006 ರಲ್ಲಿ ಉಡುಪಿಯ ಚೇರ್ಕಾಡಿಯ ಗಾಂಧಿವಾದಿ ಶ್ರೀ ರಾಮಚಂದ್ರ ರಾವ್ ಎಂಬುವರಿಂದ ಪಡೆದ ಒಂದು ಹಿಡಿ (100 ಗ್ರಾಂ ಬೀಜ) ರಾಜಕಾಯಮೆ ಎಂಬ ಭತ್ತದ ಬೀಜಗಳನ್ನು ಜತನದಿಂದ ತಮ್ಮೂರಿಗೆ ತೆಗೆದುಕೊಂಡು ಹೋಗಿ ಆ ತಳಿಯ ಭತ್ತದ ಬೀಜಗಳನ್ನು ಸಂರಕ್ಷಣೆಗೆ ಆರಂಭಿಸಿದವರು ನಂತರ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶದ ಒಂದೊಂದೇ ಭತ್ತದ ತಳಿಗಳನ್ನು ಸಂರಕ್ಷಿಸುತ್ತಾ ಪ್ರಸ್ತುತ ಅವರ ಬಳಿ ಸುಮಾರು 650 ಬಗೆಯ ಭತ್ತದ ಬೀಜಗಳಿದ್ದು ಅದರಲ್ಲಿ ಕೇವಲ ಭಾರತವಷ್ಟೇ ಅಲ್ಲದೇ, ಅಕ್ಕಿಗೆ ಹೆಸರುವಾಸಿಯಾದ ಜಪಾನ್ ಮತ್ತು ಫಿಲಿಪೈನ್ಸ್‌ನಂತಹ ದೇಶಗಳ ತಳಿಗಳು ಸೇರಿರುವುದು ಗಮನಾರ್ಹವಾಗಿದೆ.
ಕೇವಲ ಮಾಧ್ಯಮಿಕ ಶಿಕ್ಷಣವನ್ನು ಪಡೆದಿದ್ದ ಸತ್ಯನಾರಾಯಣ ಸುಮಾರು 50 ವರ್ಷದ ರೈತರಾದ ಸತ್ಯನಾರಾಯಣರು ಇತ್ತೀಚೆಗಷ್ಟೇ ಸಾಕ್ಷರತಾ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ದಕ್ಷಿಣ ಕನ್ನಡದ ಬೆಳ್ತಂಗಡಿಯ ಪ್ರಸಿದ್ಧ ಭತ್ತ ಸಂರಕ್ಷಕ ಬಿ.ಕೆ. ದೇವರಾಯ ಅವರೊಂದಿಗಿನ ಸಂವಹನವೇ ಬೇಲೇರಿ ಆವರ ಭತ್ತ ಸಂರಕ್ಷಣೆಗೆ ಸ್ಫೂರ್ತಿಯಾಗಿದೆ. ಅಚ್ಚರಿಯ ವಿಷಯವೆಂದರೆ ಅವರು ಭತ್ತದ ಕೃಷಿಕರಲ್ಲ. ಪಿತ್ರಾರ್ಜಿತವಾಗಿ ತಮ್ಮ ಒಟ್ಟು ಕುಟುಂಬಕ್ಕೆ ಸೇರಿರುವ ನಾಲ್ಕು ಎಕರೆ ಭೂಮಿಯಲ್ಲಿ ರಬ್ಬರ್ ಮತ್ತು ಅಡಿಕೆಯನ್ನು ಬೆಳೆಯುತ್ತಾರೆ. ಅವರ ಜಮೀನಿನ ಭೂಪ್ರದೇಶವು ಜೌಗು ಪ್ರದೇಶವಾಗಿರುವ ಕಾರಣ ಭತ್ತದ ಕೃಷಿಗೆ ಸೂಕ್ತವಲ್ಲವಾದ ಕಾರಣ, ಅವರು ತಮ್ಮ ಮನೆಯ ಮುಂದಿರುವ ಸುಮಾರು 25 ಸೆಂಟ್ಸ್ ಭೂಮಿಯಲ್ಲಿ ಕೃತಕ ಭತ್ತದ ಗದ್ದೆಯನ್ನು ನಿರ್ವಹಿಸುವ ಮೂಲಕ ಅದರ ಮೂಲಕ ಇದುವರೆವಿಗೂ ಸುಮಾರು 650 ತಳಿಗಳನ್ನು ಸಂರಕ್ಷಿಸಿದ್ದಾರೆ. ಎಲ್ಲಾ ರೀತಿಯ ಬೀಜಗಳನ್ನು ಈ ಸಣ್ಣ ಭೂಮಿಯಲ್ಲಿ ವರ್ಷವಿಡೀ ಒಂದರ ನಂತರ ಒಂದರಂತೆ ಬೆಳೆಸಲಾಗುವುದಲ್ಲದೇ, ಹಾಗೆ ಬೆಳೆದ ಭತ್ತದ ತಳಿಗಳನ್ನು ಆಸಕ್ತ ರೈತರಿಗೆ ಬೀಜಗಳನ್ನು ಉಚಿತವಾಗಿ ನೀಡುತ್ತಿರುವುದು ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ.
ಸರ್ಕಾರದಿಂದ ಅಥವಾ ಖಾಸಗೀ ಸಂಸ್ಥೆಗಳ ಯಾವುದೇ ರೀತಿಯ ಸಹಕಾರವನ್ನು ಅಪೇಕ್ಷಿಸದೇ ತಮ್ಮ ಪಾಡಿಗೆ ತಾವು ಏಕಾಂಗಿಯಾಗಿ ಭತ್ತದ ತಳಿಗಳನ್ನು ಉಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ನಮ್ಮ ಬಳಿ ಇರುವ ವೈವಿದ್ಯಮಯವಾದ ಮತ್ತು ಅಮೂಲ್ಯವಾದ ಭತ್ತದ ತಳಿಗಳನ್ನು ಈಗ ನಾವು ಉಳಿಸದೇ ಕಳೆದುಕೊಂಡಲ್ಲಿ ನಮ್ಮ ಮುಂದಿನ ತಲೆಮಾರಿಗೆ ಉತ್ತಮವಾದ ಅಕ್ಕಿಯೇ ಇರುವುದಿಲ್ಲಾ ಹಾಗಾಗಿ ಈ ಕಾಯಕದಲ್ಲಿ ತೊಡಗಿದ್ದೇನೆ ಎಂದು ಹೇಳುವಾಗ ಅವರ ಮುಗ್ಧ ಮನಸ್ಸಿನ ತೊಳಲಾಟದ ಜೊತೆಗೆ ಅವರ ಹೋರಾಟ ಕಣ್ಣಿಗೆ ಕಟ್ಟುವಂತಾಗುತ್ತದೆ.
ಇನ್ನು ಸತ್ಯನಾರಾಯಣ ಅವರು ಪಡೆದು ಕೊಳ್ಳುವ ಜೀಜವೂ ಸಹಾ ರೈತರಿಗೆ ತೊಂದರೆ ಆಗದಿರಲೆಂದು ಭತ್ತದ ಕೊಯ್ಲಿನ ನಂತರ ಭತ್ತದ ಗದ್ದೆಗಳಲ್ಲಿ ಉಳಿದ ಬೀಜಗಳನ್ನು ಸಂಗ್ರಹಿಸಲು ಸಣ್ಣ ಪ್ರಮಾಣದಲ್ಲಿ ಮೊದಲು ಕೇರಳ ಕರ್ನಾಟಕದಿಂದ ಆರಂಭಿಸಿ ನಂತರ ದಕ್ಷಿಣ ಭಾರತ ಆನಂತರ ದೇಶಾದ್ಯಂತ ನಂತರ ಶ್ರೀಲಂಕಾ, ಫಿಲಿಪೈನ್ಸ್, ಜಪಾನ್, ಇಂಡೋ-ಅಮೆರಿಕಾ ಮತ್ತಿತರ ದೇಶಗಳ ಭತ್ತದ ಪ್ರಭೇದಗಳನ್ನು ಸಂಗ್ರಹಿಸಿ ಆ ಭತ್ತದ ತಳಿಯ ಬೀಜವನ್ನು ನಮ್ಮ ಮುಂದಿನ ಪೀಳಿಗೆಗೆ ಧಾನ್ಯಗಳನ್ನು ಸಂರಕ್ಷಿಸುವ ಸಲುವಾಗಿ ಮೊದಲು ತಿ ವಿಧದ ಭತ್ತದ ಸುಮಾರು 10-20 ಬೀಜಗಳನ್ನು ಪ್ರತ್ಯೇಕ ಕಾಗದದ ಕಪ್‌ಗಳಲ್ಲಿ ಬಿತ್ತಲಾಗುತ್ತದೆ. ಈ ಕಾಗದದ ಕಪ್‌ಗಳನ್ನು ಮಡಕೆ ಮಿಶ್ರಣದಿಂದ ತುಂಬಿಸಲಾಗುತ್ತದೆ ಮತ್ತು ಸರಿಯಾಗಿ ಲೇಬಲ್ ಮಾಡಲಾಗುತ್ತದೆ. ಬೀಜಗಳ ಮೊಳಕೆಯೊಡೆಯಲು ಸಹಾಯ ಮಾಡಲು, ಹತ್ತನೇ ದಿನದವರೆಗೆ ಗರಿಷ್ಠ ತೇವಾಂಶವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. 10 ದಿನಗಳ ನಂತರ, ಈ ಸಸಿಗಳನ್ನು ಕಾಂಪೋಸ್ಟ್ ಮಿಶ್ರಣದಿಂದ ತುಂಬಿದ ಪಾಲಿಬ್ಯಾಗ್‌ಗಳಿಗೆ ಸ್ಥಳಾಂತರಿಸಲಾಗುತ್ತದೆ ಮತ್ತು ಸೂರ್ಯನ ಬೆಳಕು ಬೀಳುವ ತೆರೆದ ಜಾಗದಲ್ಲಿ ಇಡಲಾಗುತ್ತದೆ. ಹೂಬಿಡುವವರೆಗೆ ಸಸಿಗಳಿಗೆ ನೀರುಣಿಸಲಾಗುತ್ತದೆ ಮತ್ತು ಪ್ರತಿ ವಾರ 100 ಮಿಲಿ ಜೀವಾಮೃತವನ್ನು ನೀಡುವ ಮೂಲಕ ಪೋಷಕಾಂಶಗಳನ್ನು ಒದಗಿಸಲಾಗುತ್ತದೆ . ಹೂಬಿಡುವ ಪ್ರಕ್ರಿಯೆಯು ಪ್ರಾರಂಭವಾದ ನಂತರ, ಈ ಪಾಲಿಬ್ಯಾಗ್‌ಗಳನ್ನು ಟಾರ್ಪಾಲಿನ್ ಹಾಳೆಯಿಂದ ಮುಚ್ಚಿದ ಆಳವಿಲ್ಲದ ನೀರಿನ ಕೊಳಕ್ಕೆ ಸ್ಥಳಾಂತರಿಸಲಾಗುತ್ತದೆ ಮತ್ತು ಪಕ್ಷಿಗಳಿಂದ ರಕ್ಷಿಸುವ ಸಲುವಾಗಿ ಅದರ ಮೇಲೆ ಬಲೆಯನ್ನು ಹಾಕಲಾಗುತ್ತದೆ. ಬೆಳೆಗಳನ್ನು ನಾಟಿ ಮಾಡುವಾಗ ಈ ಪ್ರಭೇದಗಳ ಅಡ್ಡ-ಪರಾಗಸ್ಪರ್ಶವನ್ನು ತಡೆಗಟ್ಟಲು ಬೇಲೇರಿ ಸಹ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅವರ ನವೀನ ವಿಧಾನಕ್ಕೆ ಕಡಿಮೆ ಸಂಪನ್ಮೂಲಗಳು ಮತ್ತು ಶ್ರಮ ಬೇಕಾಗುತ್ತದೆ. ಪಾಲಿಬ್ಯಾಗ್ ವಿಧಾನದ ಮೂಲಕ, ಈ ರೈತ ಸ್ಥಳೀಯ ಮತ್ತು ಅಪರೂಪದ ಭತ್ತದ ತಳಿಗಳನ್ನು ಮಾತ್ರವಲ್ಲದೆ ಜಾಯಿಕಾಯಿ, ಅಡಿಕೆ ಮತ್ತು ಕರಿಮೆಣಸಿನ ಸಾಂಪ್ರದಾಯಿಕ ಬೀಜಗಳನ್ನು ಸಹ ಸಂರಕ್ಷಿಸಲು ಸಾಧ್ಯವಾಗಿದೆ.
ಬೇಲೇರಿಯವರ ಸಂಗ್ರಹದಲ್ಲಿ ವಿವಿಧ ಬಣ್ಣಗಳ ಭತ್ತದ ತಳಿಗಳು, ಉಪ್ಪುನೀರಿನಲ್ಲಿ ಬೆಳೆಯುವ ಭತ್ತ ಮತ್ತು 13 ಅಡಿ ಎತ್ತರದವರೆಗೆ ಬೆಳೆಯುವ ಭತ್ತಗಳು ಸೇರಿವೆ. ಬೇಲೇರಿ ಅವರು ಸಂರಕ್ಷಿಸಿರುವ ಭತ್ತದ ತಳಿಗಳಲ್ಲಿ ಚಿಟ್ಟೇಣಿ, ಅಕ್ರಿಕಾಯ, ನರಿಕೇಲ, ಸುಗ್ಗಿ ಕಾಯಿಮೆ, ವೆಳ್ಳಾತುವೆನ್, ಗಂಧಸಾಲೆ, ಜೀರಿಗೆ ಸಣ್ಣ, ಘಂಗಡಲೆ, ಕುಂಕುಮಸಾಲೆ, ಕಾಳಮೆ, ಕೊಟ್ಟಂಬರಸಾಲೆ, ಮೈಸೂರು ಮಲ್ಲಿಗೆ, ಕಾರಿಗಜವಿಲೆ, ರಾಜಮುಡಿ, ಜುಗಲ್ ಕಗ್ಗ, ಮೈಯೂರು ಉಚ್ಚನ್, ಕರಿಜೇಡು ಮಂಚ, ಕರಿಜೇಡು ಮಚ್ಚನ್ ಹೀಗೆ ಪ್ರತಿಯೊಂದು ಭತ್ತದ ತಳಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿವೆ. ಹಲವು ಔಷಧೀಯ ಗುಣಗಳನ್ನು ಹೊಂದಿರುವ ತಳಿಗಳು ಸಹಾ ಅವರಲ್ಲಿದ್ದು, ಸುಮಾರು ನೂರಾರು ವರ್ಷಗಳ ಹಿಂದಿನ ತಳಿಗಳು ಸಹಾ ಅವರ ಭತ್ತದ ಕಣಜದಲ್ಲಿದೆ. ಈ ರೀತಿಯ ಅಪರೂಪದ ಭತ್ತದ ತಳಿಯ ಸಂರಕ್ಷಣೆ ಸುಲಭದ ಮಾತಲ್ಲ ಇದನ್ನು ವರ್ಷ ಪೂರ್ತಿಯೂ ರಾತ್ರಿ ಹಗಲು ಎನ್ನದೆ ಹುಳ ಹುಪ್ಪಟ್ಟೆಗಳು ತಾಗದಂತೆ, ಹೆಗ್ಗಣಗಳು ಅಥವಾ ಇತರೇ ಪ್ರಾಣಿ ಪಕ್ಷಿಗಳಿಂದ ಕಾಪಾಡಿಕೊಂಡು ಸಂರಕ್ಷಿಸುವುದು ಅತೀ ದೊಡ್ಡ ಸವಾಲಾಗಿದ್ದು ಹಾಗಾಗಿಯೇ ಸಂರಕ್ಷಿತವಾದ ಡಬ್ಬಗಳಲ್ಲಿ ಸಂಗ್ರಹಣೆ ಮಾಡುತ್ತಾರೆ, ಕೃಷಿ ವಿಜ್ಞಾನಿಗಳು ರೈತರುಗಳು ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು ಮಾಡಬೇಕಾದ ಕೆಲಸವನ್ನು ಸತ್ಯನಾರಾಯಣ ಅವರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ಬೇಲೇರಿಯವರ ಅಕ್ಕಿ ಸಂರಕ್ಷಣಾ ಚಟುವಟಿಕೆಗಳಿಂದ ಪ್ರಭಾವಿತರಾದ, ದೆಹಲಿಯ ರಾಷ್ಟ್ರೀಯ ಜೀನ್ ಬ್ಯಾಂಕ್ ಅವರಿಗೆ 30 ಬಗೆಯ ಅಕ್ಕಿಯನ್ನು ನೀಡಿದ್ದಾರೆ. ವಿವಿಧ ಬೀಜಗಳನ್ನು ಬೆಳೆಯುವಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಬೇಲೇರಿಯವರ ನಿಸ್ವಾರ್ಥ ಸೇವೆಯನ್ನು ಮನಗಂಡ ದೇಶಾದ್ಯಂತ ಇರುವ ನೂರಾರು ಕೃಷಿ ವಿಜ್ಞಾನಿಗಳು ಮತ್ತು ರೈತರುಗಳು ತಮ್ಮಲ್ಲಿರುವ ಅಪರೂಪದ ಬೀಜಗಳನ್ನು ಹಸ್ತಾಂತರಿಸುತ್ತಿದ್ದಾರೆ ಮತ್ತು ಹಸ್ತಾಂತರಿಸಲು ಸಿದ್ಧರಿದ್ದಾರೆ. ಹೀಗೆ ಎಲ್ಲರ ಈ ರೀತಿಯ ಸಹಕಾರದಿಂದ ಪ್ರಸ್ತುತ ಬೇಲೇರಿಯವರ ಬಳಿ 650ಕ್ಕೂ ಬಗೆಯ ಭತ್ತದ ತಳಿಗಳಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಅದು ಒಂದು ಸಾವಿರವನ್ನು ದಾಟಿದರೂ ಅಚ್ಚರಿ ಪಡಬೇಕಿಲ್ಲ. ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ಅವರಿಗೆ ಒಂದು ಹಿಡಿ ಬೀಜಗಳು ಕೊಟ್ಟರೂ ಸಾಕು, ಅದು ಅವರಿಂದ ಸಂರಕ್ಷಣೆಗೊಂಡು ಮುಂದಿನ ಪೀಳಿಗೆಯವರಿಗೂ ಉಳಿಯುತ್ತದೆ ಎಂಬ ಸತ್ಯ ಈಗ ಎಲ್ಲರಿಗೂ ತಿಳಿದಿದೆ. ಬೇಲೆರಿಯವರ ಈ ಮಹತ್ತರ ಕಾರ್ಯದಿಂದ ಉತ್ತೇಜಿತರಾದ ಕೇರಳದ ವಯನಾಡಿನ ಮತ್ತೊಬ್ಬ ರೈತ ಚೆರುವಾಯಲ್ ರಾಮನ್ ಪ್ರಸ್ತುತ 50 ಕ್ಕೂ ಹೆಚ್ಚಿನ ಭತ್ತದ ತಳಿಗಳನ್ನು ಸಂರಕ್ಷಿಸಿದ್ದಾರೆ.
ಬೇಲೇರಿಯವರು ಇಂದು ನೀರಿನ ಕೊರತೆಯಿರುವ ಹೊಲದಲ್ಲಿ ಅಥವಾ ಲವಣಯುಕ್ತ ಮಣ್ಣಿನಲ್ಲಿ ಬೆಳೆಯಬಹುದಾದ ಕಗ್ಗದಲ್ಲಿ ಉತ್ತಮ ಇಳುವರಿಯನ್ನು ನೀಡುತ್ತದೆ . ಅವರ ಬಳಿ ಎಡಿ ಕುಣಿ ಎನ್ನುವ ಭತ್ತದ ತಳಿಯಿದ್ದು, ಇದು ಪ್ರವಾಹವನ್ನು ತಡೆದುಕೊಂಡು ಬದುಕುವ ಸಾಮರ್ಥ್ಯವನ್ನು ಹೊಂದಿದೆ ಮನಿಲಾ ವಿಧವು ಉಪ್ಪುನೀರು ಸಹಿಷ್ಣು ಸಾವಯವ ಅಕ್ಕಿ ಎಂದು ತಿಳಿದುಬಂದಿದೆ. ಈಗಾಗಲೇ ತಿಳಿಸಿದಂತೆ ಬೇಲೇರಿಯವರ ಬಳಿ ಔಷಧೀಯ ಮೌಲ್ಯವನ್ನು ಹೊಂದಿರುವ ಸಾಂಪ್ರದಾಯಿಕ ಅಕ್ಕಿ ಪ್ರಭೇದಗಳನ್ನು ಸಹ ಹೊಂದಿದ್ದು, ಉದಾಹರಣೆಗೆ, ಕರ್ನಾಟಕದ ಬೆಳಗಾವಿ ಪ್ರದೇಶದ ಕರಿಗಜವಲಿ (ಕಪ್ಪು ಬಾಸ್ಮತಿ ಎಂದೂ ಕರೆಯುತ್ತಾರೆ) ಕಬ್ಬಿಣದ ಸಮೃದ್ಧ ಮೂಲವಾಗಿದ್ದು ಅದರ ಗಂಜಿಯನ್ನು ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡಿದರೆ ಬಹಳ ಆರೋಗ್ಯಕರ ಎನ್ನಲಾಗುತ್ತದೆ.
ಎಲ್ಲದ್ದಕ್ಕಿಂತಲೂ ಗಮನಾರ್ಹವಾದ ವಿಷಯವೆಂದರೆ ಈ ಕುರಿತಂತೆ ಬೇಲೇರಿಯವರ ಬಳಿ ಯಾರೇ ಬಂದು ಕೇಳಿದರೂ, ಸಹಾ ತನ್ನ ಅನುಭವವನ್ನು ಯಾವುದೇ ಮುಚ್ಚುಮರೆ ಇಲ್ಲದೇ ಹಂಚಿಕೊಳ್ಳುತ್ತಾರೆ. 2021 ರ ದಿ ಬೆಟರ್ ಇಂಡಿಯಾ ವರದಿಯ ಪ್ರಕಾರ, ವೈವಿಧ್ಯಮಯ ಭತ್ತದ ಪ್ರಭೇದಗಳನ್ನು ಬೆಳೆಸುವಲ್ಲಿ ಬೇಲೇರಿ ಅವರ ಆಸಕ್ತಿಯು ಅಸ್ಸಾಂ, ಕರ್ನಾಟಕ ಮತ್ತು ಮಣಿಪುರದಂತಹ ರಾಜ್ಯಗಳಿಂದ ಮತ್ತು ಜಪಾನ್ ಮತ್ತು ಫಿಲಿಪೈನ್ಸ್‌ನಂತಹ ದೇಶಗಳಿಂದ ಬೀಜಗಳನ್ನು ಸಂಗ್ರಹಿಸಲು ಮತ್ತು ಈ ಪ್ರಭೇದಗಳನ್ನು ತಮ್ಮ ಅಸ್ತಿತ್ವದಲ್ಲಿರುವ ಭತ್ತದ ತಳಿ ದಾಸ್ತಾನುಗಳಿಗೆ ಶ್ರಮವಹಿಸಿ ಸೇರಿಸಲು ಕಾರಣವಾಗಿದೆ. ಪ್ರತಿ ವರ್ಷವೂ ತಾವು ಸಂರಕ್ಷಿಸಿದ 200 ರಿಂದ 300 ಪ್ರಬೇಧಗಳನ್ನು ಅನೇಕ ಕೃಷಿ ವಿಶ್ವವಿದ್ಯಾಲಯಗಳು ಮತ್ತು ರೈತರಿಗೆ ಉಚಿತವಾಗಿ ವಿತರಿಸುತ್ತಾರೆ.
- ಕೃಷಿ ಜೀವವೈವಿಧ್ಯ ಸಂರಕ್ಷಣೆಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ, ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು ಅವರಿಗೆ 2018–19ನೇ ಸಾಲಿನ ಸಸ್ಯ ಜೀನೋಮ್ ಸಂರಕ್ಷಕ ರೈತ ಸಮುದಾಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
- ಅದೇ ರೀತಿಯಲ್ಲಿ 2024 ರಲ್ಲಿ, ಕೃಷಿ ಕ್ಷೇತ್ರದಲ್ಲಿ ಅವರು ಮಾಡಿದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನೂ ಸಹಾ ನೀಡಲಾಗಿದೆ.
ಪದ್ಮಶ್ರೀ ಪ್ರಶಸ್ತಿ ಪಡೆದ ನಿಮ್ಮ ಅನುಭವ ಹೇಗಿತ್ತು? ಎಂದು ಕೇಳಿದ್ದಕ್ಕೆ ಪದ್ಮ ಪ್ರಶಸ್ತಿ ನನಗೆ ಅನಿರೀಕ್ಷಿತವಾಗಿದ್ದಲ್ಲದೇ, ಈ ಮೂಲಕ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದು ಈ ಮೂಲಕ ನನ್ನ ಧ್ಯೇಯವನ್ನು ಗಟ್ಟಿ ಮಾಡಿಕೊಂಡು ಮತ್ತಷ್ಟು ಹೆಚ್ಚಿನ ಬೀಜಗಳನ್ನು ಸಂಗ್ರಹಿಸಿ ಸಂರಕ್ಷಿಸುತ್ತೇನೆ ಎಂದು ಮುಗ್ಧವಾಗಿ ತಿಳಿಸುತ್ತಾರೆ. ಅದೇ ರೀತಿಯಲ್ಲಿ ಭತ್ತವಿಲ್ಲದೆ ಜೀವನ ಅಸಾಧ್ಯ. ಹಾಗಾಗಿ ಶಾಲಾ ಪಠ್ಯಪುಸ್ತಕಗಳಲ್ಲಿ ಈ ವಿಷಯವನ್ನು ಸೇರಿಸುವುದರಿಂದ ವಿದ್ಯಾರ್ಥಿಗಳು ಮಾತ್ರವಲ್ಲದೆ ಇತರರಿಗೂ ಸಹಾ ಭತ್ತದ ಸಂರಕ್ಷಣೆ ಮಾಡಲು ಪ್ರೇರೇಪಿಸುತ್ತದೆ. ಇದು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಮತ್ತು ಭವಿಷ್ಯದ ಪೀಳಿಗೆಗೆ ಜೀವನವನ್ನು ಉಳಿಸಿಕೊಳ್ಳುವಲ್ಲಿ ಭತ್ತದ ಮಹತ್ವದ ಬಗ್ಗೆ ಶಿಕ್ಷಣ ನೀಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಇಂದು ಮಿಶ್ರ ತಳಿಗಳನ್ನು ನಾವು ಬಳಸುತ್ತಿದ್ದೇವೆ ಮತ್ತು ಪಾಲೀಷ್ ಮಾಡಿದ ಅಕ್ಕಿಗಳನ್ನು ತಿನ್ನುವುದರಿಂದ ಅದರ ನಿಜವಾದ ಸತ್ವವೇ ಇಲ್ಲವಾಗುತ್ತದೆ. ಹಾಗಾಗಿ ಪಾಲೀಷ್ ಮಾಡದ ಅಕ್ಕಿಯನ್ನು ಮಣ್ಣಿನ ಪಾತ್ರೆಯಲ್ಲಿ ಅನ್ನ ಮಾಡಿ ಸವಿದರೆ ಅದರ ಗಮ್ಮತ್ತೇ ಬೇರೆ ಎನ್ನುವಾಗ ಅವರ ತುಟಿಯಂಚಿನ ಆಪ್ಯಾಯಮಾನದ ನಗು ನಿಜಕ್ಕೂ ಎಲ್ಲರಿಗೂ ಮುದ ನೀಡುತ್ತದೆ.
ತಮ್ಮ ಪುಟ್ಟದಾದ ಮನೆಯಲ್ಲಿ ಸರಳವಾಗಿ ಜೀವನ ನಡೆಸುತ್ತಾ ಇಂತಹ ಮಹತ್ಕಾರ್ಯ ಮಾಡುತ್ತಿರುವ ಸತ್ಯನಾರಾಯಣ ಬೇಲೇರಿಯವರು ನಮ್ಮ ನಿಮ್ಮ ನಡುವಿನಲ್ಲಿರುವ ಅಪರೂಪದ ಕೃಷಿಕರು ಎನ್ನುವುದಕ್ಕಿಂತಲೂ ಭತ್ತದ ತಳಿಗಳನ್ನು ಸಂರಕ್ಷಿಸುವುದನ್ನೇ ಕಾಯಕ ಮಾಡಿಕೊಂಡಿರುವ ಹೋರಾಟಗಾರ ರೈತರಷ್ಟೇ ಅಲ್ಲದೇ, ನಮ್ಮ ಕೃಷಿ ಪರಂಪರೆಯ ರಕ್ಷಕನಾಗಿಯೂ ಸ್ಮರಣೀಯರಾಗಿದ್ದಾರೆ. ಏಕೆಂದರೆ ಅವರ ಕೈಯಲ್ಲಿ ಕೇವಲ ಬೀಜಗಳಲ್ಲ ಬದಲಾಗಿ ಎಲ್ಲರಿಗೂ ಹಸಿರು, ಹೆಚ್ಚು ಸುಸ್ಥಿರ ಭವಿಷ್ಯದ ಭರವಸೆಯೂ ಇರುವ ಕಾರಣ ಅವರ ಕಾರ್ಯ ಸದಾ ಸ್ಮರಣೀಯ ಹಾಗೂ ಪ್ರತಿಯೊಬ್ಬರು ಗೌರವಿಸಬೇಕಾದ ಸಂಗತಿಯಾಗಿದ್ದು, ಅವರ ಕಾಳಜಿ ಪರಿಶ್ರಮ ಎಲ್ಲರಿಗೂ ಪ್ರೇರಣೆ ಅಗಿರುವ ಕಾರಣ ಅವರು ನಮ್ಮ ನೆಚ್ಚಿನ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ