ಥ್ರೋಡೌನ್ ಸ್ಪೆಷೆಲಿಸ್ಟ್ ರಾಘವೇಂದ್ರ ದೀವಿಗಿ (ರಾಘು)

ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ಆಟಗಾರರು 140-150+ ಕಿಮೀ ವೇಗದ ಚಂಡುಗಳನ್ನು ಸುಲಭವಾಗಿ ಎದುರಿಸುವಾಗ, ತಲೆಯ ಮೇಲೆ ಬರುವ ಬೌನ್ಸರ್ ಗಳಿಗೆ ತಲೆ ಬಗ್ಗಿಸಿ ಚಂಡನ್ನು ಬಿಡುವ ಬದಲು ಅಂತಹ ಎಸೆತಗಳನ್ನು ಸಲೀಸಾಗಿ ಸಿಕ್ಸರ್‌ಗಳಿಗೆ ರೋಹಿತ್ ಶರ್ಮಾ ಬಾರಿಸಿದಾಗ, ವಿರಾಟ್ ಕೊಹ್ಲಿಯ ವೇಗದ ಮತ್ತು ಪುಟಿಯುವ ಚೆಂಡುಗಳನ್ನು ಲೀಲಾಜಾಲವಾಗಿ ಬೌಂಡರಿಗೆ ಕಳುಹಿಸಿದಾಗ, ವೇಗದ ಚಂಡುಗಳನ್ನು ಸೂರ್ಯಕುಮಾರ್ ಯಾದವ್ ಅಟ್ಟಿಸಿಕೊಂಡು 360 ಡಿಗ್ರಿ ಹೊಡೆಯುವಾಗ ವಾವ್!!  ಅದ್ಭುತ!! ಎಂದು ಚಪ್ಪಾಳೆ ತಟ್ಟುವಾಗ ಇವೆಲ್ಲದರ ಹಿಂದೆ ಎಲೆಮರೆ ಕಾಯಿಯಂತೆ ಒಬ್ಬ ವ್ಯಕ್ತಿ ಇದ್ದು ಆತನೇ ಥ್ರೋಡೌನ್ ಸ್ಪೆಷೆಲಿಸ್ಟ್ ರಾಘವೇಂದ್ರ ದೀವಿಗಿ ಅರ್ಥಾತ್ ಎಲ್ಲರ ಪ್ರೀತಿಯ ರಾಘು, ರಾಘು ಬಯ್ಯಾನ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಅದು 1999-2000ರ ಆಸು ಪಾಸು. ಕುಮಟಾ ತಾಲ್ಲೂಕಿನ ವಿವೇಕ್ ನಗರ  ಸಂಪ್ರದಾಯಸ್ಥ ಶಿಕ್ಷಕರಿಗೆ ತಮ್ಮ ಮಗ ರಾಘವೇಂದ್ರನನ್ನು ಚೆನ್ನಾಗಿ ಓದಿಸಿ ದೊಡ್ಡ ಹುದ್ದೆಯಲ್ಲಿ ಕಾಣುವಾಸೆ. ಆದರೆ ಆಗ ತಾನೇ 10ನೇ ತರಗತಿ ಪರೀಕ್ಷೆ ಮುಗಿಸಿದ್ದ 15-16ರ ಮೀಸೆ ಚಿಗುರೊಡೆಯುತ್ತಿದ್ದ ರಾಘುವಿಗೆ ಕ್ರಿಕೆಟರ್ ಆಗುವ ಆಸೆ. ಈ ವಿಷಯಕ್ಕಾಗಿ ತಂದೆ ಮಗನ ಜೊತೆ ಜಟಾಪಟಿ ನಡೆದು ಕೇವಲ ಕೇವಲ 21  ರೂಪಾಯಿಗಳನ್ನು ಹಿಡಿದುಕೊಂಡು ಕುಮಟಾದಿಂದ ಸುಮಾರು 175 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿಗೆ ಬಂದಾಗ ಅಲ್ಲಿ ಎಲ್ಲಿ ಇರುವುದು? ಎಂದು ತಿಳಿಯದೇ ಸುಮಾರು ಒಂದೆರಡು ವಾರಗಳ ಕಾಲ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಆಶ್ರಯಿಸಿದ್ದನ್ನು ಗಮನಿಸಿದ ಪೊಲೀಸರು ಅಲ್ಲಿಂದ ಓಡಿಸಿದಾಗ,  ಅಲ್ಲೇ ಸಮೀಪದ  ಹನುಮಾನ್ ದೇವಸ್ಥಾನದಲ್ಲಿ  ಕೆಲದಿನಗಳ ಕಾಲ ಕಳೆದಾಗ, ಅಲ್ಲಿಂದಲೂ ಅವರನ್ನು ಎತ್ತಂಗಡಿ ಮಾಡಿಸಿದಾಗ, ತಮ್ಮ ವಾಸ್ತವ್ಯವನ್ನು  ಬಿವಿಬಿ ಇಂಜಿನಿಯರಿಂಗ್ ಕಾಲೇಜು ಬಳಿ ಇರುವ ಸ್ಮಶಾನವೊಂದಕ್ಕೆ ಬದಲಿಸಿಕೊಂಡ ರಾಘು ಅಲ್ಲಿಂದ  ಸುಮಾರು 4 ವರ್ಷಗಳ ಕಾಲ ಸ್ಮಶಾನವೇ ರಘು ಅವರಿಗೆ ಮನೆ, ಕ್ರಿಕೆಟ್ ಮ್ಯಾಟೇ ಹಾಸಿಗೆ ಮತ್ತು ಹೊದಿಕೆ. ಊಟ ತಿಂಡಿ ಇಲ್ಲದೇ ಎಷ್ಟೋ ದಿನಗಳ ಕಾಲ ಉಪವಾಸದಲ್ಲೇ ಮಲಗಿದಿದರೂ, ತಾನು ಬಂಧ ಧ್ಯೇಯವನ್ನು ಮರೆಯದೇ ಪ್ರತೀ ದಿನವೂ ಕ್ರಿಕೆಟ್ ಮೈದಾನಕ್ಕೆ ಹೋಗಿ ವೇಗದ ಬೌಲಿಂಗ್ ಮಾಡುತ್ತಾ ಎಲ್ಲರನ್ನೂ ಅಕರ್ಷಿಸಿದ್ದ ರಾಘು  ದಯಾನಂದ್ ಶೆಟ್ಟಿಯವರ ಕಣ್ಣಿಗೆ ಬಿದ್ದು ಅವರು ಈತನ ಧೃಢಸಂಕಲ್ಪ ಮತ್ತು ಕಠಿಣ ಪರಿಶ್ರಮವನ್ನು ನೋಡಿ ಬೆಂಗಳೂರಿನಲ್ಲಿದ್ದ ತಮ್ಮ ಸ್ನೇಹಿತ ಮತ್ತು ಕ್ರಿಕೆಟ್ ಕೋಚ್ ಇರ್ಫಾನ್ ಅವರನ್ನು ಪರಿಚಯಿಸಿ ಅವರ ಬಳಿ ತರಭೇತಿ ಪಡೆಯಲು ತಿಳಿಸಿದಾಗ ರಾಘುವಿಗೆ ಸ್ವರ್ಗಕ್ಕೆ ಮೂರೇ ಗೇಣು. ಎನ್ನುವಷ್ಟರ ಮಟ್ಟಿಗಿನ ಆನಂದ.  ಅದೇ ರಾತ್ರಿ ಹುಬ್ಬಳ್ಳಿಯ ಬಸ್ ಹತ್ತಿ ಮಾರನೇ ದಿನ ಬೆಳಿಗ್ಗೆ ಇರ್ಫಾನ್ ಅವರ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ)ಗೆ ಬಂದು ಅವರನ್ನು ಭೇಟಿಯಾಗುತ್ತಾರೆ.

ಕೆಐಒಸಿಗೆ ಸೇರಿದಾಗ ಉಳಿದು ಕೊಳ್ಳಲು ಮನೆಯೇ ಇಲ್ಲದ್ದದ್ದನು ಗಮನಿಸಿದ ಇರ್ಫಾನ್ ಅಭ್ಯಂತರ ಇಲ್ಲದೇ ಹೋದಲ್ಲಿ,  ಅದೇ  ಕಛೇರಿಯಲ್ಲಿ ಉಳಿದು ಕೊಳ್ಳಲು  ತಿಳಿಸಿದಾಗ ಅದಕ್ಕೆ ಸಂತೋಷದಿಂದ ಒಪ್ಪಿಕೊಂಡ ರಾಘು, ಅಲ್ಲಿ  ಅಭ್ಯಾಸಕ್ಕೆಂದು ಬರುತ್ತಿದ್ದ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಬೌಲಿಂಗ್ ಮಾಡುತ್ತಾ, ಸಮಯ ಸಿಕ್ಕಾಗ ತಾನು ಸಹಾ ಆಟವಾಡುತ್ತಾ, ನಿಧಾನವಾಗಿ ಬೆಂಗಳೂರಿನ ಡಿವಿಜನ್ ಕ್ರಿಕೆಟ್ಟಿನಲ್ಲಿ ಅಗ ಸಣ್ಣ ವಯಸ್ಸಿನವರಾಗಿದ್ದ, ಇನ್ನೂ ಪ್ರವರ್ಧಮಾನಕ್ಕೆ ಬಾರದಿದ್ದ ರಾಬಿನ್ ಉತ್ತಪ್ಪ, ಮನೀಷ್ ಪಾಂಡೆಯಂತಹವರ ಜೊತೆ ಲೀಗ್ ಕ್ರಿಕೆಟ್ ಆಟವಾಡುವಾಗಲೇ ದುರದೃಷ್ಟವಷಾತ್ ಅಪಘಾತಕ್ಕೆ ಈಡಾಗಿ ಬೌಲಿಂಗ್ ಮಾಡಲು ಸಾಧ್ಯವಿಲ್ಲದ ಹಾಗೆ  ಆದಾಗ, ತಾನು  ಪ್ರಾಣಕ್ಕಿಂತಲೂ ಪ್ರೀತಿಸಿದ ಕ್ರಿಕೆಟ್ ಆಟವನ್ನು ಇನ್ನು ಮುಂದೆ ಆಡಲು ಸಾಧ್ಯವಾಗುವುದಿಲ್ಲಾ ಎಂದು ತಿಳಿದು ಬಹಳಷ್ಟು ನೊಂದು ಕೊಳ್ಳುತ್ತಾರೆ.

ಆದರೂ ಛಲ ಬಿಡದ ತ್ರಿವಿಕ್ರಮನಂತೆ ಕ್ರಿಕೆಟ್ ಆಟಗಾರನಲ್ಲದೇ ಇದ್ದರೂ ಕ್ರಿಕೆಟ್ ತಂಡದೊಂದಿಗಾದರೂ ಇರಬೇಕೆಂದು ನಿರ್ಧರಿಸಿ ನಂತರ ಬೆಂಗಳೂರಿನ NCA ನಲ್ಲಿ ಪ್ರತೀ ದಿನವೂ ಯಾವುದೇ ಸಂಬಳ ವಿಲ್ಲದೇ, ಉಚಿತವಾಗಿ ಬೌಲಿಂಗ್ ಮಿಷಿನ್ ನಂತೆ ಅಷ್ಟೇ ವೇಗವಾಗಿ   ಥ್ರೋಡೌನ್ ಕಲೆಯನ್ನು ಕರಗತ ಮಾಡಿಕೊಂಡು ರಾಜ್ಯ ತಂಡಕ್ಕೆ ಥ್ರೋಡೌನ್ ಬೌಲರ್ ಆಗುವ ಅವಕಾಶ ಸಿಗುತ್ತದೆ. ಅದೇ ಸಮಯದಲ್ಲಿ ನಿರಂತವಾಗಿ ಥ್ರೋ ಮಾಡುತಿದ್ದ ರಾಘು ನನ್ನು ಅಂದಿನ ಕರ್ನಾಟಕ ತಂಡದ ವಿಕೆಟ್ ಕೀಪರ್ ಆಗಿದ್ದ ತಿಲಕ್ ನಾಯ್ಡು ಅವರು ಗಮನಿಸಿ ರಾಘುವಿಗೆ ಕರ್ನಾಟಕ ರಣಜಿ ತಂಡಕ್ಕೆ ಟ್ರೈನಿಂಗ್ ಆಸಿಸ್ಟೆಂಟ್ ಆಗಿ ಸೇರಿಸುತ್ತಾರೆ. ಅದೇ ಸ್ಥಳಕ್ಕೆ ಅದೊಮ್ಮೆ  ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ಬಂದಿದ್ದಾಗ ತಿಲಕ್ ಜೊತೆ ರಘು ತಮ್ಮ ಕ್ರಿಕೆಟ್ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದುದನ್ನು ಗಮನಿಸಿದ ಶ್ರೀನಾಥ್  ಯಾರೀ ಹುಡುಗ ಎಂದು ಕೇಳಿದಾಗ, ಅತನ ಸಂಪೂರ್ಣ ವಿವರಗಳನ್ನು ಶ್ರೀನಾಥ್ ಗೆ ತಿಳಿಸಿದ ತಿಲಕ್ ಅವರಿಗೆ ಸಹಾಯ ಮಾಡಲು ಕೋರಿದಾಗ,  ಕೇಳಿದರು. ಆಗ ರಘು ಬಗ್ಗೆ ಹೇಳಿದ ತಿಲಕ್ ನಾಯ್ಡು, ಶ್ರೀನಾಥ್ ಅವರ ಸಹಾಯವನ್ನು ಕೋರಿದರು.

ಅದಕ್ಕೆ ಸೂಕ್ತವಾಗಿ ಸ್ದಂದಿಸಿದ ಶ್ರೀನಾಥ್  ರಘು ಅವರನ್ನು KSCAಯಿಂದ ಅಧಿಕೃತವಾಗಿ NCAಯ ಭಾಗವಾಗುವಂತೆ ಮಾಡಿ, ಕರ್ನಾಟಕ ರಣಜಿ ಆಡುವಾಗ KSCA ಪರವಾಗಿ  ಉಳಿದ ಸಮಯದಲ್ಲಿ NCAನಲ್ಲಿ ಕೆಲಸ ಮಾಡುವಂತೆ ಮಾಡಿದರು. ಹೀಗೆ NCAದಲ್ಲಿದ್ದಾಗಲೇ, ರಾಘು  BCCI ಲೆವೆಲ್-1 ಕೋಚಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದರು. ಅದೇ ಸಮಯದಲ್ಲೇ  ಭಾರತ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ಮತ್ತು ಅವರ ತಂಡ NCAನಲ್ಲಿ ಆಭ್ಯಾಸ ಮಾಡಲು ಬಂದಾಗ ರಘು ಅವರ ಪ್ರತಿಭೆಯನ್ನು ಗುರುತಿಸಿದರು. ಆಗ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಬಳಿ ಕೆಲ ಕಾಲ ರಘು ಅವರು ಕಲಿತ ಬಂದ ನಂತರ ಸಚಿನ್ ತೆಂಡುಲ್ಕರ್ ಅವರು ಅತ್ಯಂತ ಇಷ್ಟ ಪಡುವ ವ್ಯಕ್ತಿಯಾಗಿ  ರಘು ಬೆಳೆದು, 2011ರಲ್ಲಿ ಮೊದಲ ಬಾರಿ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯಾಗಿ ರಾಷ್ಟ್ರೀಯ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದಕ್ಕೆ  ಸಚಿನ್ ಮತ್ತು ದ್ರಾವಿಡ್ ಅವರ ಪಾತ್ರ ಮಹತ್ವದ್ದಾಗಿತ್ತು. ಅದೇಕೋ ಏನೋ, ಒಂದೇ ಪ್ರವಾಸದ ನಂತರ ಮತ್ತೆ  ರಘು NCAಗೆ ಮರಳ ಬೇಕಾಯಿತು.

2011ರಲ್ಲಿ ಎಂ.ಎಸ್ ಧೋನಿ ನಾಯಕತ್ವದ ತಂಡ ವಿಶ್ವಕಪ್ ಪೂರ್ವ ಸಿದ್ಧತಾ ಶಿಬಿರದ ಭಾಗವಾಗಿ NCAಗೆ ಬಂದಿದ್ದಾಗ ಮತ್ತೇ ಅ ತಂಡದ ಆಭ್ಯಾಸಕ್ಕೆ  ರಘು ನೆರವಾಗಿದ್ದಾಗ 28 ವರ್ಷಗಳ ನಂತರ T20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.  ಇದರ ಫಲವಾಗಿಯೋ  ಏನೋ, 2014ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ತರಬೇತಿ ಸಹಾಯಕರಾಗಿ ಭಾರತೀಯ ತಂಡಕ್ಕೆ ಮರಳಿದ ರಘು  ಅಂದಿನಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಸುಮಾರು ಮೂರು ಗಂಟೆಗಳ ತರಬೇತಿ ಅವಧಿಯಲ್ಲಿ ರಘು ಸುಮಾರು 1,000 ಎಸೆತಗಳನ್ನು ಸತತವಾಗಿ 150+ ಕಿಲೋ ಮೀಟರ್ ವೇಗದಲ್ಲಿ ಎಸೆಯುತ್ತಾರೆ. ರಘು ಅವರ  ವಿಶ್ವಶ್ರೇಷ್ಠ ಗುಣಮಟ್ಟದ ಅಭ್ಯಾಸದ ಪರಿಣಾಮ, ವಿರಾಟ್ ಕೊಹ್ಲಿ, ರೋಹಿತ್ ಸೇರಿದಂತೆ ಬಹುತೇಕ ಭಾರತೀಯ ಬ್ಯಾಟ್ಸ್‌ಮನ್‌ಗಳು ಜಗತ್ತಿನ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುವಂತಾಗಿದೆ. 2017 ರ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ  ನನ್ನ ಇಂದಿನ ಯಶಸ್ಸಿನಲ್ಲಿ ಈ ಮನುಷ್ಯನ ಪಾತ್ರ  ದೊಡ್ಡದಿದೆ. ಆದರೆ ದುರಾದೃಷ್ಟವಷಾತ್ ಅವರ ಕಠಿಣ ಪರಿಶ್ರಮ ಕೆಲವೊಮ್ಮೆ ಜಗತ್ತಿಗೆ ಗಮನಕ್ಕೆ ಬಾರದೆ ಹೋಗುತ್ತದೆ ಎಂದು  ಎಂದು  ಕೊಹ್ಲಿಯೇ  ಹೇಳಿದ್ದರೆ, ಅದೇ ಮಾತನ್ನು ಅನೇಕ ಆಟಗಾರರು ಸಾಕಷ್ಟು ಬಾರಿ ರಘು ಅವರನ್ನು ಹೊಗಳಿರುವುದು  ರಘು ಅವರ ಏಕಾಗ್ರತೆ, ಪರಿಶ್ರಮ. ಪ್ರಾಮಾಣಿಕ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ.

ಸದಾ ಕಾಲವೂ ಹಣೆಯ ಮೇಲೆ ಚೆಂದನೆಯ ಕುಂಕುಮ ಧರಿಸಿರುವ ಹಸನ್ಮುಖಿ ರಾಘು ಕೈಯ್ಯಲ್ಲಿ ವೇಗವಾಗಿ ಚಂಡನ್ನು ಎಸೆಯುವ ಸಾಧನವನ್ನು ಹಿಡಿದು ಅದರಲ್ಲಿ ಚೆಂಡನ್ನಿಟ್ಟು, ಸ್ಲಿಂಗಿ ಲಸಿತ್ ಮಲಿಂಗನ ತರಹ ಸ್ಲಿಂಗಿ ಆಕ್ಷನ್ ಅಥವಾ ರೌಂಡ್-ಆರ್ಮ್ ಆಕ್ಷನ್ ಮೂಲಕ ಬ್ರೆಟ್ ಲೀ, ಶೋಯಬ್ ಅಖ್ತರ್ ಎಸೆಯುವಷ್ಟರ ವೇಗದಲ್ಲಿ ರಾಘು ಎಸೆಯುತ್ತಿದ್ದರೆ ಅದು ಬೆಂಕಿ ಉಗುಳುವಷ್ಟರ ಮಟ್ಟಿಗೆ ಇರುತ್ತದೆ. ರಘು ಕೊಹ್ಲಿ ಅಥವಾ ಸಚಿನ್ ರಂತೆ ಬ್ಯಾಟ್ ಹಿಡಿದು ದಾಖಲೆ ಬರೆದಿಲ್ಲ. ಕಪಿಲ್ ಅಥವಾ ಕುಂಬ್ಳೆಯಂತೆ ಹೆಚ್ಚು ವಿಕೆಟ್ ತೆಗೆದವರ ಪಟ್ಟಿಯಲ್ಲಿಲ್ಲ. ಫೀಲ್ಡಿಂಗ್, ಕೀಪಿಂಗ್ ಇನ್ಯಾವುದರಲ್ಲೂ ಈತನ ಹೆಸರು ಕೇಳಿಲ್ಲ. ಕಡೇಪಕ್ಷ ಬೌಲಿಂಗ್ ಕೋಚ್ ಬ್ಯಾಟಿಂಗ್ ಕೋಚ್ ಥರದ ಪಾತ್ರವೂ ಇವನದಲ್ಲ. ಆದರೂ ಆತನ ಬಗ್ಗೆ ಕೇವಲ ಭಾರತ ಕ್ರಿಕೆಟ್ ತಂಡವಲ್ಲದೇ ಇಡೀ ಕ್ರಿಕೆಟ್ ಜಗತ್ತು ರಘುನನ್ನು ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುತ್ತದೆ.

ಸಾದಾ ಸೀದಾ ಹಳ್ಳಿ ಹೈದನಂತಹ ಹೇರ್ ಸ್ಟೈಲ್, ಹಣೆಯಲ್ಲೊಂದು ಕುಂಕುಮ ಇಟ್ಟುಕೊಂಡು ಭಾರತ ಕ್ರಿಕೆಟ್ ತಂಡದಲ್ಲಿ ಎಲೆಮರೆ ಕಾಯಿಯಂತೆ ಅವಿಭಾಜ್ಯ ಅಂಗವಾಗಿದ್ದರೂ  ರಾಘುನನ್ನು ಯಾರೂ ಸಹಾ ಗಮನಿಸಿರುವುದಿಲ್ಲ ಎನ್ನುವುದಕ್ಕೆ ಇತ್ತೀಚೆಗೆ ಭಾರತದ ಕ್ರಿಕೆಟ್ ತಂಡದೊಂದಿಗೆ ಹೊಟೆಲ್ಲಿನಿಂದ ಮೈದಾನಕ್ಕೆ ತೆರಳಲು ಬಸ್ ಏರಲು ಹೊರಟಿದ್ದ ರಘುನನ್ನು ರಕ್ಷಣಾ ಸಿಬ್ಬಂದಿ ತಡೆದು ನಿಲ್ಲಿಸಿದಾಗಲೂ ಅದಕ್ಕೆ ಕೊಂಚವೂ ಸಿಡಿಮಿಡಿಗೊಳ್ಳದೇ, ನಗುನಗುತ್ತಲೇ  ಸಾವಧಾನವಾಗಿ ತಂಡದಲ್ಲಿ ತನ್ನ ಸ್ಥಾನ ಮಾನವನ್ನು ವಿವರಿಸುತ್ತಿದ್ದದ್ದನ್ನು ಗಮನಿಸಿದ ಭಾರತ ತಂಡ  ಅಧಿಕಾರಿಯೊಬ್ಬರು  ಅತನ ಹೆಸರು ಮತ್ತು ಅತನ ಕರ್ತವ್ಯವನ್ನು ತಿಳಿಸಿದಾಗ ರಘುವಿನ ಕ್ಷಮೆಯಾಚಿಸಿ ತಂಡದೊಂದಿಗೆ ಹೋಗಲು ಬಿಟ್ಟಿದ್ದರಂತೆ.

ಪ್ರತಿಭೆ ದೇವರು ಕೊಟ್ಟದ್ದು, ವಿನಮ್ರನಾಗಿರಿ. ಖ್ಯಾತಿ ಮನುಷ್ಯ ಕೊಟ್ಟದ್ದು, ಕೃತಜ್ಞರಾಗಿರಿ. ಏಕಾಗ್ರತೆ ಸ್ವಯಂ ಕೊಟ್ಟದ್ದು, ಬಹಳ ಜಾಗರೂಕರಾಗಿರಿ. ಪ್ರೇರಣೆ ತಾತ್ಕಾಲಿಕ. ಶಿಸ್ತು ಶಾಶ್ವತ. ಈ ಆಟದಲ್ಲಿ ಯಾರೂ ಪರಿಪೂರ್ಣರಲ್ಲ. ನೀವು ಕಲಿಯುತ್ತಲೇ ಇರಬೇಕು ಮತ್ತು ಮುಂದುವರಿಯುತ್ತಲೇ ಇರಬೇಕು. ಎಲ್ಲಾ ಖ್ಯಾತಿಯು ದೇವರನ್ನು ತಲುಪುತ್ತದೆ. ದೇವರು ಶ್ರೇಷ್ಠ ಎಂದು ಭಾರತೀಯ ಡ್ರೆಸ್ಸಿಂಗ್ ಕೋಣೆಯಲ್ಲಿ ರಘು ಮಾಡಿದ್ದ ಭಾಷಣವು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು ಅವರ ಭಾಷಣವು ನಮ್ರತೆ, ಕೃತಜ್ಞತೆ, ಶಿಸ್ತು ಮತ್ತು ಸ್ವಯಂ ಸುಧಾರಣೆಯ ನಿರಂತರ ಅಗತ್ಯದ ಮೇಲೆ ಕೇಂದ್ರೀಕರಿಸುವಂತಿದೆ.

ಬಹುಶಃ ಈ ವಿನಯ, ವಿಧೇಯತೆ, ಶಿಸ್ತುಪಾಲನೆ ಮತ್ತು ಕರ್ತವ್ಯಪಾಲನೆಯಿಂದಾಗಿಯೇ, ಬುಮ್ರಾನಂತಹ ಬೌಲರ್ ತಲೆ ಬಾಗಿ ನಮಿಸಿದರೆ, , ತಿಲಕ್ ವರ್ಮ, ಯಶಸ್ವೀ ಜೈಸ್ವಾಲ್ ಆತನ ಕಾಲು ಮುಟ್ಟಿ ನಮಸ್ಕರಿಸುತ್ತಾನೆ, ಈಗಾಗಲೇ ತಿಳಿಸಿದಂತೆ ಕೊಹ್ಲಿ ತನ್ನ ಯಶಸ್ಸಿನ ಸಿಂಹಪಾಲು ರಘುವಿಗೆ ನೀಡುತ್ತಾನೆ. ಕೆ ಎಲ್ ರಾಹುಲ್ ಚಾಂಪಿಯನ್ ಟ್ರೋಫಿಯಲ್ಲಿ ತನಗೆ ಹಾಕಿದ್ದ ಚಾಂಪಿಯನ್ ಬ್ಲೇಜರನ್ನು ರಾಘುವಿಗೆ ಕೊಟ್ಟು ಗೌರವಿಸುತ್ತಾನೆ. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಗಾವಸ್ಕರ್ ಇವರೆಲ್ಲ  ರಾಘು ಬಗ್ಗೆ ಸಂದರ್ಭ ಬಂದಾಗಲೆಲ್ಲ ಮಾತಾಡಿ ಹೊಗಳುತ್ತಾರೆ. ಅಂದು ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರನ್ನು ತಮ್ಮ ಪರವಾಗಿ ಆಡಲು ಕೋರಿದ್ದಂತೆ ಇಂದು ರಘು ಅವರನ್ನು  ವಿದೇಶಿ ತಂಡಗಳು, ಕೋಟ್ಯಂತರ ರುಪಾಯಿಯ ಆಫರ್ ಎದುರಿಟ್ಟು ತಮ್ಮ ತಂಡಕ್ಕೆ ಬನ್ನಿ  ಎಂದು ಕರೆದರೂ,  ಅದೆಲ್ಲವನ್ನೂ ಕೊಂಚವೂ ತಲೆಗೆ ಏರಿಸಿಕೊಳ್ಳದೇ, ಕಳೆದ 13 ವರ್ಷಗಳಿಂದ, ತಂಡ ಯಶಸ್ವಿಗಾಗಿ ರಾಘವೇಂದ್ರ ದೀವಗಿ ತಾನಾಯಿತು ತನ್ನ ಕೆಲಸವಾಯಿತು ಎಂದು ಭಾರತ ತಂಡದ ಪರವಾಗಿ ಮಹತ್ತರ ಪಾತ್ರವಹಿಸಿದ್ದರ ಶ್ರಮದಿಂದಾಗಿಯೇ ಭಾರತ T20 ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿ ಗಳಿಸಿತು ಎಂದರೂ ಅತಿಶಯವಾಗದ ಕಾರಣ,  ಕರ್ನಾಟಕದ ಈ ಅಸಾಧಾರಣ ಪ್ರತಿಭೆ ನಿಸ್ಸಂದೇಹವಾಗಿ ಕನ್ನಡದ ಕಲಿಗಳು ಎಂದರೆ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment