ರಾಜು ಅನಂತಸ್ವಾಮಿ

1983 ನವೆಂಬರ್ 11 ಬೆಂಗಳೂರಿನ ದೂರದರ್ಶನ ಕೇಂದ್ರದ ಉದ್ಘಾಟನಾ ದಿನದಂದು ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಮೈಸೂರು ಅನಂತಸ್ವಾಮಿಯವರ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಕಾರ್ಯಕ್ರಮದ ಕೇಂದ್ರ ಬಿಂದುವು ಶ್ರೀ ಅನಂತಸ್ವಾಮಿಯವರೇ ಆಗಿದ್ದರೂ, ಪಕ್ಕ ವಾದ್ಯದಲ್ಲಿ ತಬಲ ನುಡಿಸುತ್ತಿದ್ದ  ಒಬ್ಬ ಪುಟ್ಟ ಹುಡುಗ ಅತ್ಯಂತ ಸೂಜಿಗಲ್ಲಿನಂತೆ ಎಲ್ಲರ ಮನವನ್ನು ಸೂರೆಗೊಂಡಿದ್ದ. ಹಾಗೆ ತನ್ನ 9ನೇ ವಯಸ್ಸಿನಲ್ಲಿಯೇ ಸಂಗೀತ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿದ್ದ ಆ ಹುಡುಗ ಮುಂದೆ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ  ಸುಪ್ರಸಿದ್ಧ ಗಾಯಕ, ಸಂಗೀತ ನಿರ್ದೇಶಕ, ಪಕ್ಕವಾದ್ಯಗಾರ ಅಷ್ಟೇ ಅಲ್ಲದೇ ಕಿರು ತೆರೆ ಮತ್ತು ಸಿನಿಮಾಗಳಲ್ಲಿ ಹಾಸ್ಯ ನಟನಾಗಿಯೂ ಮಿಂಚಿ, ಸಣ್ಣ ವಯಸ್ಸಿನಲ್ಲಿಯೇ  ಮರೆಯಾದ ಶ್ರೀ ರಾಜು ಅನಂತಸ್ವಾಮಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ಸುಗಮಸಂಗೀತ ಕ್ಷೇತ್ರದಲ್ಲಿ ಅದಾಗಲೇ ಪ್ರಖ್ಯಾತರಾಗಿದ್ದ ಮೈಸೂರು ಅನಂತಸ್ವಾಮಿಗಳು ಮತ್ತು ಶಾಂತ ಅನಂತಸ್ವಾಮಿ ದಂಪತಿಗಳ ಮುದ್ದು ಕುವರನಾಗಿ  ಏಪ್ರಿಲ್ 19, 1972ರಂದು ಜನಿಸಿದ ಮಗುವಿಗೆ ಸತ್ಯಪ್ರಕಾಶ್ ಎಂದು ನಾಮಕರಣ ಮಾಡಿದರೂ, ಮನೆಯಲ್ಲಿ ರಾಜನಂತೆ ಇದ್ದ ಕಾರಣ ಎಲ್ಲರೂ ಪ್ರೀತಿಯಿಂದ ರಾಜು ರಾಜು ಎಂದು ಕರೆಯುತ್ತಿದ್ದರಿಂದ ಸಾರ್ವಜನಿಕವಾಗಿ ರಾಜು ಅನಂತಸ್ವಾಮಿ ಎಂದೇ ಹೆಸರುವಾಸಿಯಾಗುತ್ತಾರೆ. ಸಂಗೀತದ ವಾತಾವರಣದ ಮನೆಯಲ್ಲಿ ಮೀನಿಗೆ ನೀರಿನಲ್ಲಿ  ಈಜುವುದನ್ನು ಹೇಳಿಕೊಡ ಬೇಕೆ?  ಎನ್ನುವಂತೆ ತಂದೆ ಮತ್ತು ಅಕ್ಕ ಸುನಿತಾ ಅವರ ಗಾಯನವನ್ನು ಕೇಳಿ ಬೆಳೆದ ರಾಜು, ಸಣ್ಣ ವಯಸ್ಸಿನಿಂದಲೇ ಸಂಗೀತ ಕರಗತವಾಗುತ್ತದೆ.

ಆರಂಭದಲ್ಲಿ ತಬಲಾ ವಾದನದತ್ತ ಹೆಚ್ಚು ಒಲವು ತೋರಿದ ಕಾರಣ, 6 ಅಥವಾ 7 ವರ್ಷವಿದ್ದಾಗಲೇ,  ಪಂಡಿತ್ ಗುಂಡಾ ಶಾಸ್ತ್ರಿಗಳ ಬಳಿ ಶಾಸ್ತ್ರೀಯವಾಗಿ ತಬಲಾ ಪಾಠಗಳನ್ನು ಪ್ರಾರಂಭಿಸಿ  ವಿದ್ವತ್ ಪರೀಕ್ಷೆಯನ್ನು ಮುಗಿಸಿದ್ದ ಹೆಗ್ಗಳಿಕೆ ರಾಜು ಅವರದ್ದಾಗಿದೆ.  ತಬಲ ಕಲಿಯಲು  ಆರಂಭಿಸಿದ ಎರಡೇ ವರ್ಷಗಳಲ್ಲಿಯೇ ತನ್ನ 9ನೇ ವಯಸ್ಸಿನಲ್ಲಿಯೇ ತಂದೆ ಮೈಸೂರು ಅನಂತಸ್ವಾಮಿ ಅವರು ಮತ್ತು ಇತರೇ ಹಿರಿಯ ಪಕ್ಕವಾದ್ಯಗಾರರೊಂದಿಗೆ ಸಂಗೀತ ಕಛೇರಿಗಳಲ್ಲಿ ತಬಲಾ ನುಡಿಸುವಷ್ಟು ಪ್ರಾವೀಣ್ಯತೆ ಪಡೆದದ್ದಕ್ಕೆ ಈಗಾಲೇ ತಿಳಿಸಿದ ಬೆಂಗಳೂರಿನ ದೂರದರ್ಶನ ಕೇಂದ್ರದ ಉದ್ಘಾಟನೆಯ ಕಾರ್ಯಕ್ರಮವೇ ಸಾಕ್ಷಿ. ಶಾಸ್ತ್ರೀಯವಾಗಿ ತಬಲ ಅಭ್ಯಾಸದ ಜೊತೆಗೆ ಸ್ವಾಭಾವಿಕವಾಗಿಯೇ ಗಾಯನದತ್ತವೂ ಆಕರ್ಷಣೆ ಬಲವಾಗಿದ್ದ ಕಾರಣ ಭಾವಗೀತೆ ಗಾಯನದ ಜೊತೆ ಜೊತೆಯಲ್ಲೇ ಹಾರ್ಮೋನಿಯಂ  ಗಿಟಾರ್, ಮ್ಯಾಂಡೋಲಿನ್ ಹಾಗೂ ಕೀಬೋರ್ಡ್ ನಲ್ಲೂ ನಿಷ್ಣಾತರಾಗಿದ್ದ ರಾಜು ಮುಂದೆ ಆಕಾಶವಾಣಿಯಲ್ಲಿ ಎ ಗ್ರೇಡ್ ಕಲಾವಿದರಾಗಿದ್ದರು ಎಂದರೆ ಅವರ ಸಂಗೀತದ ಜ್ಞಾನ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

ಸರಸ್ವತಿ ವಿದ್ಯಾ ಮಂದಿರ ಮತ್ತು ಎವಿ ಎಜುಕೇಶನ್ ಸಂಸ್ಥೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮುಂದೆ ವಿಜಯ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದ ನಂತರ  ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ  ಬಿಎ ಪದವಿಯವರೆಗಿಗೂ ಅವರ ಶಿಕ್ಷಣ ಸಾಗಿತ್ತು. ನ್ಯಾಷನಲ್ ಶಿಕ್ಷಣ ಸಂಸ್ಥೆಯ  ಅಂದಿನ ಮುಖ್ಯಸ್ಥರಾಗಿದ್ದಂತಹ ನಾಡು ಕಂಡ ಧೀಮಂತ ವ್ಯಕ್ತಿ ಶ್ರೀ ಎಚ್. ನರಸಿಂಹಯ್ಯನವರಿಗೆ ಸತ್ಯಪ್ರಕಾಶ್ (ರಾಜು) ಎಂದರೆ ಬಹಳ ಅಚ್ಚು ಮೆಚ್ಚು. ಸಂಗೀತದೊಂದಿಗೆ ಸ್ವಲ್ಪ ಶ್ರಮವಹಿಸಿ ಓದಿನ ಕಡೆ ಗಮನ ಹರಿಸಯ್ಯಾ ಎಂದು ಸಿಕ್ಕಾಗಲೆಲ್ಲಾ ಹೇಳುತ್ತಿದ್ದರಂತೆ. ಚಿಕ್ಕವಯಸ್ಸಿನಿಂದಲೂ ರಾಜು ಇದ್ದ ಕಡೆ ಹಾಸ್ಯಕ್ಕೆ ಬರವೇ ಇರುತ್ತಿರಲಿಲ್ಲ. ಅವರ ಜೊತೆ ಇರುತ್ತಿದ್ದ  ದೊಡ್ಡವರಾಗಲೀ ಚಿಕ್ಕವರಾಗಲೀ, ಯಾವುದೇ ವಯೋಮಾನದವರನ್ನೂ  ಬಹಳ ಪ್ರೀತಿಯಿಂದ ಮಾತನಾಡಿಸುತ್ತಲೇ ಅವರಿಗೇ ಅರಿವಾಗದಂತೆ/ನೋವಾಗದಂತೆ ಕಾಲು ಎಳೆಯುತ್ತಾ, ತಾವೂ ನಗುತ್ತಾ ಎಲ್ಲರನ್ನೂ ಹೊಟ್ಟೆ ನೋಯುವವರೆಗೂ ನಗಿಸುತ್ತಿದ್ದರು.

ಜನವರಿ 9, 1995ರಲ್ಲಿ ಮೈಸೂರು ಅನಂತಸ್ವಾಮಿಯವರು ನಿಧನರಾದ ನಂತರ ಹಾರ್ಮೋನಿಯಂ ಹಿಡಿದು ಅನಂತಸ್ವಾಮಿಗಳಂತೆ ತಾನೂ ಸಹಾ ಹಾಡುತ್ತಾ, ಅನಂತಸ್ವಾಮಿಯವರು ರಾಗ ಸಂಯೋಜನೆ ಮಾಡಿದ್ದ ಹಾಡುಗಳನ್ನು ಮತ್ತಷ್ಟು ಸುಧಾರನೆ ಮಾಡುತ್ತಾ, ಅನಂತಸ್ವಾಮಿ ಅವರ ಅಮರಧ್ವನಿ ನಮ್ಮೊಂದಿಗಿಲ್ಲ ಎಂಬ ಕೊರತೆಯನ್ನು ನೀಗಿಸುವುದರಲ್ಲಿ ಯಶಸ್ವಿಯಾಗಿದ್ದರು.  ಅವರೊಂದಿಗೆ ಕೆಲಸ ಮಾಡಿದ ಮತ್ತು ಅವರ ಶಿಷ್ಯವೃಂದದವರೇ ಹೇಳುವಂತೆ, ಎಂತಹ ಕಠಿಣ ಕವಿತೆಗಳಿಗೂ ಸುಲಭವಾಗಿ  ಕೆಲವೇ ಕೆಲವು ನಿಮಿಷಗಳಲ್ಲಿ ಜನ ಮೆಚ್ಚುವಂತೆ ರಾಗ ಸಂಯೋಜನೆ ಮಾಡುತ್ತಿದದ್ದು ರಾಜು ಅವರ ವೈಶಿಷ್ಟ್ಯ.  ಅಂದಿನ ದಿನದ ದಿನಪತ್ರಿಕೆಯನ್ನು ಕೊಟ್ಟು ಆದಕ್ಕೂ ರಾಗ ಸಂಯೋಜನೆ ಮಾಡು ಎಂದರೆ ಒಂದು ಚೂರು ಬೇಸರಿಸದೇ,  ಅದಕ್ಕೂ ಚಂದನೆಯ ರಾಗ ಸಂಯೋಜನೆ ಮಾಡಿ ಹಾಡಿ ತೋರಿಸಿದ ಉದಾಹರಣೆಗಳೆಷ್ಟೋ ಇವೆ.

ಹೀಗೆ ಅಪ್ಪ ಹಾಕಿದ ಆಲದ ಮರಕ್ಕೇ ಜೋತು ಬೀಳದೇ,  ತಮ್ಮ ತಂದೆಯವರ ಒಂದು ಧ್ವನಿಯ ಛಾಯೆಯಾಗಿ ಮಾತ್ರವೇ ಉಳಿಯದೇ,  ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಸಹಾ ಅಭಿವ್ಯಕ್ತಿಸುತ್ತ ಸುಗಮ ಸಂಗೀತ ಕ್ಷೇತ್ರವನ್ನು ಬೆಳೆಸುತ್ತ ಬಂದರು. ಒಂದೆಡೆ ತಮ್ಮದೇ ಆದ ರಾಗ ಸಂಯೋಜನೆಗಳು, ಮತ್ತೊಂದೆಡೆಯಲ್ಲಿ ಅನಂತಸ್ವಾಮಿಗಳು ಮಾಡಿದ ಕೆಲಸಕ್ಕೆ ವಿಸ್ತಾರ ಇವೆರಡನ್ನೂ ಜೊತೆಜೊತೆಯಾಗಿ ನೀಡುತ್ತಾ ತಂದೆಯಂತೆಯೇ ಅಪಾರವಾದ ಜನ ಮನ್ನಣೆ ಮತ್ತು ಶಿಷ್ಯ ವೃಂದವನ್ನು ಕೆಲವೇ ವರ್ಷಗಳಲ್ಲಿ ಗಳಿಸಿದ್ದರು. ಅವರಿಂದ ತರಭೇತುಗೊಂಡ ನೂರಾರು ಪ್ರತಿಭೆಗಳು ಮುಂದೆ ಸಂಗೀತ ಕ್ಷೇತ್ರದಲ್ಲಿ ಗಾಯನ ಮತ್ತು  ಅವರುಗಳು  ಹೊರತಂದ ಧ್ವನಿಮುದ್ರಿಕೆಗಳಲ್ಲಿ ನಿಸ್ಸಂದೇಹವಾಗಿ ರಾಜು ಅನಂತಸ್ವಾಮಿಯವರ ಛಾಯೆ ಎದ್ದು ಕಾಣುತ್ತಿತ್ತು.

ರಾಜು ಅವರ ಧ್ವನಿ  ಅವರ ತಂದೆಯಂತೆಯೇ ಇದ್ದರೂ, ಅವರ ಸಂಯೋಜನೆಗಳು ಮತ್ತು ಗಾಯನ ಶೈಲಿ ತುಂಬಾ ಭಿನ್ನವಾಗಿ  ಹಳೇ ಬೇರು, ಹೊಸ ಚಿಗುರು  ಎನ್ನುವ ಗಾದೆ ಮಾತಿಗೆ  ಅನ್ವರ್ಥವಾಗಿ ಕೇವಲ ಹಳೆಯ ಸಂಯೋಜನೆಗೇ ಜೋತು ಬೀಳದೆ ಸುಮಾರು 20-30 ವರ್ಷಗಳ ಹಿಂದೆ ಅವರು ಸಂಯೋಜಿಸಿದ ಗೀತೆಗಳು ಇಂದಿನ ಪೀಳಿಗೆಯೂ ಮೆಚ್ಚುವಂತಿರುವುದು ಗಮನಾರ್ಹವಾಗಿದ್ದು ಅವರ ಸಂಗೀತ ಸಂಯೋಜನೆಯ ಕೆಲವು ಜನಪ್ರಿಯ ಗೀತೆಗಳು  ಕಲಿಸು ಗುರುವೆ, ಬೆಳ್ದಿಂಗಳ್ ರಾತ್ರಿಲಿ, ದೇವ ನಿನ್ನ ಮಾಯೆಗಂಜಿ, ಬನ್ನಿ ಹರಸಿರಿ ತಂದೆಯೇ, ನೆನೆದೆ ನೆನೆಯುತಿದೆ, ಚಿರನೂತನ ಮುಂತಾದವುಗಳಾದದರೇ, ಅವರು ಹಾಡಿರುವ ಕೆಲವು ಖ್ಯಾತ ಹಾಡುಗಳ ಪಟ್ಟಿಯಲ್ಲಿ  ರತ್ನನ ಪದಗಳು, ಹೆಂಡತಿ ಒಬ್ಬಳು, ಕೈಲಾಸಂ ಗೀತೆಗಳು, ಬೇಂದ್ರೆಯವರ  ನಾಕು ತಂತಿ, ದೇವ ನಿನ್ನ ಮಾಯೆಗಂಜಿ, ಯಾಕೆ ಅರ್ಥ ಬಾಳಿಗೆ, ಮತ್ತದೇ ಬೇಸರ, ಯಾವ ಮೋಹನ ಮುರಳಿ ಕರೆಯಿತು ಅಲ್ಲದೇ ಮಂಕುತಿಮ್ಮನ ಕಗ್ಗದಂತಹ ಕೃತಿಗಳಿಗೂ ಭಾವ ಪರವಶತೆ ತುಂಬುವ ಹಾಗೆ ಹಾಡುತ್ತಿದ್ದದ್ದು  ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ.

ಸುಗಮ ಸಂಗೀತವಲ್ಲದೇ ರಾಜು ಅನಂತಸ್ವಾಮಿ ಹತ್ತು ಹಲವಾರು  ರಂಗಭೂಮಿಯ ನಾಟಕಗಳಿಗೆ ಸಂಗೀತ ನಿರ್ದೇಶನದ ಜೊತೆ ಗಾಯಕರಾಗಿಯೇ ಗುರುತಿಸಿಕೊಂಡಿದ್ದರು.  ಇದಲ್ಲದೇ, ದೂರದರ್ಶನದ ಧಾರಾವಾಹಿಗಳು ಮತ್ತು  ಸಿನಿಮಾಗಳಿಗೂ ಗಾಯಕರಾಗಿ ಜಯಪ್ರಿಯರಾಗಿದ್ದು. ನಂತರದ ದಿನಗಳಲ್ಲಿ ನಟನೆಗೂ ಇಳಿದು ಲೀಲಾಜಾಲವಾಗಿ ಯಾವುದೇ ಮೇಧಾವಿ ಕಲಾವಿದನ ಸಾಮರ್ಥ್ಯಕ್ಕೂ ಕಡಿಮೆಯಾದಂತೆ ನಟಿಸಿದ್ದರು. ಅವರು ರಂಗಭೂಮಿಯಲ್ಲಿ ನೀಡಿದ ಸಂಗೀತ ಸಂಯೋಜನೆ ಫಣಿಯಮ್ಮದಂತಹ ರಾಷ್ಟ್ರಪ್ರಶಸ್ತಿ ಚಿತ್ರ ನಿರ್ದೇಶಿಸಿದ್ದ ಪ್ರೇಮಾ ಕಾರಂತರೂ ಸಹಾ ಅಚ್ಚರಿವ್ಯಕ್ತ ಪಡಿಸಿ ಅಭಿನಂದಿಸಿದ್ದರು ಎನ್ನುತ್ತಾರೆ ಸಿನಿಮಾ ಮತ್ತು ರಂಗಭೂಮಿಯಲ್ಲಿ ರಾಜು ಅವರೊಂದಿಗೆ ಬಹಳ ಒಡನಾಟ ಇಟ್ಟುಕೊಂಡಿದ್ದ ನಾಟಕಕಾರ, ನಟ ಮತ್ತು ನಿರ್ದೇಶಕರಾದ ಶ್ರೀ ಮಂಡ್ಯ ರಮೇಶ್.

ಕೇವಲ ಕರ್ನಾಟಕ ಮತ್ತು ಭಾರತವಲ್ಲದೇ ಆಸ್ಟ್ರೇಲಿಯಾ, ಅಬುದಾಬಿ, ಮಲೇಷಿಯಾ, ನ್ಯೂಜಿಲೆಂಡ್, ಸಿಂಗಪುರ, ಇಂಗ್ಲೇಡ್ ಮತ್ತು ಅಮೇರಿಕಾದಂತಹ ವಿದೇಶಗಳಲ್ಲಿಯೂ ನೂರಾರು ಕಾರ್ಯಕ್ರಮಗಳನ್ನು ನೀಡಿ ಯಶಸ್ಸನ್ನು ಪಡೆದಿದ್ದ ರಾಜು ಅವರು ಮೈಸೂರಿನ ತಮ್ಮ ಸಂಗೀತ ಶಾಲೆ ಶಾಂತಿನಿಕೇತನದಲ್ಲಿ ಹಲವು ವರ್ಷಗಳಿಂದ ಸಂಗೀತ ಪಾಠ ನಡೆಸುತ್ತಿದ್ದದ್ದಲ್ಲದೇ, ಅದನ್ನು ಬೆಂಗಳೂರಿನಲ್ಲಿಯೂ ಆರಂಭಿಸುವ ಮೂಲಕ ಶೈಕ್ಷಣಿಕ ವಿಭಾಗದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು ಉತ್ತಮ ಸಂಗೀತಗಾರರನ್ನು ಕನ್ನಡಕ್ಕೆ ನೀಡಬೇಕು ಎಂಬ ಅಭಿಲಾಷೆ  ಅವರಿಗೆ ಬಹಳವಾಗಿತ್ತು.

ಹಂಪಿ ಉತ್ಸವ, ಸಾರ್ಕ್ ಸಮ್ಮೇಳನ, ವಸಂತ ಹಬ್ಬ, ದಸರಾ ಹಬ್ಬ, ಅಂತಾರಾಷ್ಟ್ರೀಯ ವಾಣಿಜ್ಯ ಸಮಾವೇಶಗಳಲ್ಲದೇ ದೂರದರ್ಶನ, ಉದಯ ಟಿವಿ, ಜೀ ಕನ್ನಡ, ಈ ಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದರ ಜೊತೆಗೆ . ಸುಮಾರು 200 ಕ್ಕೂ ಹೆಚ್ಚು ಭಾವಗೀತೆಗಳಿಗೆ ಸ್ವರ ಸಂಯೋಜನೆ ಮಾಡಿದ್ದಲ್ಲದೇ ಅನೇಕರಿಗೆ ತಿಳಿಯದಿರುವ ಸಂಗತಿಯೆಂದರೆ ಕನ್ನಡದ ಮೊಟ್ಟ ಮೊದಲ ಸಂಗೀತ ರಿಯಾಲಿಟಿ ಶೋ ಝೀ ಸರಿಗಮಪದ ಮೂಲ ಕಲ್ಪನೆಯೇ ರಾಜು ಅವರದ್ದಾಗಿತ್ತು. ಆ ಮೂಲಕ ಎಲ್ಲಾ ಪ್ರಾಕಾರದಲ್ಲೂ ಹಾಡುವಂತಹ ಸಾವಿರಾರು ಸಂಗೀತಗಾರರನ್ನು ನಾಡಿಗೆ ಪರಿಚಯಿಸುವ ಹಂಬಲವಿತ್ತು.

ಸಾಮಾನ್ಯವಾಗಿ ಬಹುತೇಕ ಕಲಾವಿದರುಗಳು ಒಂದಲ್ಲಾ ಒಂದು ದುರ್ವ್ಯಸನಗಳಿಗೆ ದಾಸರಾಗುವಂತೆ ರಾಜು ಅನಂತಸ್ವಾಮಿಯವರಿಗೂ ಮದ್ಯಪಾನದ ಚಟವಿದ್ದು ಅದು ಸ್ವಲ್ಪ ಹೆಚ್ಚಾಗಿ ಒಂದೆರಡು ಬಾರಿ ಮದ್ಯಪಾನದಿಂದ ಹೊರತರುವ ಪುನರ್ವಸತಿ ಕೇಂದ್ರಗಳಲ್ಲಿ ಚಿಕಿತ್ಸೆಯನ್ನು ಕೊಡಿಸಿ ಇನ್ನೇನು ಗುಣಮುಖರಾಗಿ ಮತ್ತೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ  ಎಂದೇ ಎಲ್ಲರೂ ಭಾವಿಸಿರುವಾಗ ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ   ರಾಜು ಅನಂತಸ್ವಾಮಿಯವರಿಗೆ ಮೂತ್ರಪಿಂಡದ ತೊಂದರೆಗಳು ಉಂಟಾಗಿ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಸಿದ ನಂತರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಜನವರಿ 17, 2009 ತಮ್ಮ 35ನೇ ವಯಸ್ಸಿನಲ್ಲಿಯೇ  ಸಾಯಬಾರದಂತಹ ವಯಸ್ಸಿನಲ್ಲಿ ಸಾವನ್ನಪ್ಪಿದಾಗ ಅವರನ್ನು ಪಡವಾರಳ್ಳಿಯಲ್ಲಿ ಸಮಾಧಿ ಮಾಡಲಾಯಿತು.

ಪುತ್ರ ಶೋಕಂ ನಿರಂತರಂ ಎನ್ನುವಂತೆ  ತಾಯಿ ಶಾಂತಾ ಅನಂತಸ್ವಾಮಿಯವರು  ಮತ್ತು ಅವರ ಮೂವರು ಸಹೋದರಿಯರು ಇಂದಿಗೂ ಸಹಾ ರಾಜು ಅನಂತಸ್ವಾಮಿಯನ್ನು ನೆನೆಯದೇ ದಿನವಿಲ್ಲಾ. ಇಂದಿಗೂ ರಾಜು ಅನಂತ ಸ್ವಾಮಿಯವರ ಹೆಸರಿನಲ್ಲಿ ಅವರ ಕುಟುಂಬ ಮತ್ತವರ ಶಿಷ್ಯವೃಂದ ಗಾಯನ ಸ್ಪರ್ಧೆಗಳು ಮತ್ತು ಸುಗಮಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜು ಅನಂತಸ್ವಾಮಿಯವರ ನೆನನಪು ಸದಾಕಾಲವೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

ಪ್ರತೀ ಸಲವೂ ಹೇಳಿದಂತೆ  ಯಾವುದೇ ರೀತಿಯ ಕಲಾವಿದರುಗಳಿಗೆ ಸಾವು ಎನ್ನುವುದು ಕೇವಲ ಅವರ ನಶ್ವರವಾದ ದೇಹಕ್ಕಷ್ಟೇ ಸೀಮಿತವಾಗಿದ್ದು, ಅವರ ಸಾಧನೆಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮನಿಮ್ಮೊಂದಿಗೆ ಶಾಶ್ವತವಾಗಿ ಇರುತ್ತಾರೆ  ಎನ್ನುವವರ ಸಾಲಿನಲ್ಲಿ ಮೈಸೂರು ಅನಂತಸ್ವಾಮಿ ಮತ್ತು ಅವರ ಮಗ ರಾಜು ಅನಂತಸ್ವಾಮಿಯವರೂ ಸಹಾ ಸೇರುತ್ತಾರೆ. ಒಬ್ಬ ಪ್ರತಿಭಾನ್ವಿತ ಸಂಗೀತಗಾರ, ನಟ  ಉತ್ತಮ ಹಾಸ್ಯಪ್ರಜ್ಞೆಯವ್ಯಕ್ತಿಯಷ್ಟೇ ಅಲ್ಲದೇ ಸೂಕ್ಷ್ಮ ಕಾಳಜಿಯುಳ್ಳ ದಯಾಳು ವ್ಯಕ್ತಿಯಾಗಿದ್ದ ಸತ್ಯಪ್ರಕಾಶ್  ಎಲ್ಲರ ಪ್ರೀತಿಯ ರಾಜು  ಅನಂತಸ್ವಾಮಿ ನಮ್ಮ ನೆಚ್ಚಿನ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a comment