ವಿಮಾನವನ್ನು ಕಂಡು ಹಿಡಿದವರು ಯಾರು? ಎಂದು ಯಾರನ್ನಾದರೂ ಕೇಳಿದರೆ ಥಟ್ ಎಂದು ರೈಟ್ ಸಹೋದರು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ರೈಟ್ ಸಹೋದರರು ಹುಟ್ಟುವ ಸಹಸ್ರ ಸಹಸ್ರ ವರ್ಷಗಳ ಮುಂಚೆಯೇ ಶ್ರೀ ಭಾರದ್ವಾಜ ಮುನಿಗಳು ಸಂಸ್ಕೃತದಲ್ಲಿ ವೈಮಾನಿಕ ಶಾಸ್ತ್ರದ ಕುರಿತಾದ ಗ್ರಂಥದ ಆಧಾರದ ಮೇಲೆ ಕರ್ನಾಟಕದದ ಬೆಂಗಳೂರು ಬಳಿಯೇ ಇರುವ ಆನೇಕಲ್ಲಿನ ಶ್ರೀ ಸುಬ್ಬರಾಯ ಶಾಸ್ತ್ರಿಗಳು 1895ರಲ್ಲೇ ಮಾರುತ ಸಖ ಎಂಬ ಪ್ರಪ್ರಥಮ ಪ್ರಯೋಗಾತ್ಮಕ ವಿಮಾನದ ಹಾರಾಟವನ್ನು ಯಶಸ್ವಿಯಾಗಿ ಸಾಧಿಸಿದ್ದರು. ಈಗ ಅದೇ ಬೆಂಗಳೂನಿಂದಲೇ ಪ್ರಪ್ರಂಚಾದ್ಯಂತ ಇರುವ ಬಹುತೇಕ ವಿಮಾನಗಳಿಗೆ ಬಿಡಿಭಾಗಗಳನ್ನು ಪೂರೈಸುತ್ತಿರುವ ಕನ್ನಡಿಗ ಶ್ರೀ ಅರವಿಂದ್ ಮೆಳ್ಳಿಗೇರಿ ಅವರ ವೈಮಾನಿಕ ಕ್ಷೇತ್ರದಲ್ಲಿನ ಸಾಧನೆಗಳು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೊ ನಿಮಗಾಗಿ
ಕರ್ನಾಟಕದ ಹುಬ್ಬಳ್ಳಿಯಲ್ಲಿ 70೦ರ ದಶಕದಲ್ಲಿ ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಅರವಿಂದ್ ಅವರಿಗೆ ಚಿಕ್ಕ ವಯಸ್ಸಿನಲ್ಲೇ ತಂದೆಯವರು ವಿಧಿವಶರಾದಾಗ ತಮ್ಮ ತಾಯಿ ಮತ್ತು ಸಹೋದರರ ಆಶ್ರಯದಲ್ಲೇ ತಮ್ಮ ಹುಟ್ಟೂರಿನಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಪಡೆಯುತ್ತಾರೆ. ತಾಯಿಯವರ ನಿರಂತರ ಪ್ರೋತ್ಸಾಹದಿಂದಾಗಿ ಓದಿನಲ್ಲಿ ಬಹಳ ಚುರುಕಾಗಿದ್ದರಿಂದ ಅನಾಯಾಸವಾಗಿ ನ್ಯಾಷನಲ್ ಇನ್ಸಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್‌ಐಟಿ)ಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಲ್ಲದೇ ಸ್ಕಾಲರ್‌ಶಿಪ್ ಸಹ ಪಡೆದು ಅಮೇರಿಕಾದ ಪೆನ್ ಸ್ಟೇಟ್ ಯುನಿವರ್ಸಿಟಿಯಲ್ಲಿ ರೋಬೋಟಿಕ್ಸ್ ನಲ್ಲಿ ಮಾಸ್ಟರ್ ಡ್ರಿಗ್ರಿ ಪಡೆಯುತ್ತಾರೆ.
ಮಾಸ್ಟರ್ಸ್ ಡಿಗ್ರಿ ಪಡೆದ ಕೂಡಲೇ ಅವರಿಗೆ ಫೋರ್ಡ್‌ನಲ್ಲಿ ಹೊರ ಗುತ್ತಿಗೆದಾರ ಕೆಲಸಗಾರರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಾಗ ಬಲು ಬೇಗನೆ ಬಹುರಾಷ್ಟ್ರೀಯ ಕಂಪನಿ ಒಳ ಹೊರಗುಗಳ ಬಗ್ಗೆ ಚೆನ್ನಾಗಿ ಅರವಿಂದ್ ತಿಳಿದು ಕೊಳ್ಳುತ್ತಾರೆ. ಅಮೇರಿಕಾಕ್ಕೆ ಹೋಗುವ ಬಹುತೇಕ ಭಾರತೀಯರು ವಾರಕ್ಕೆ ಐದು ದಿನಗಳ ಕಾಲ ಕಷ್ಟ ಪಟ್ಟು ಮೈಮುರಿದು ಕೆಲಸ ಮಾಡಿದ್ದಕ್ಕೆ ಕೈ ತುಂಬಾ ಸಂಬಳ ಪಡೆಯುತ್ತಿದ್ದಂತೆಯೇ ವಾರಾಂತ್ಯದಲ್ಲಿ ಮೋಜು ಮಸ್ತು ಮಾಡಿ ಮಜಾ ಉಡಾಯಿಸುತ್ತಾರೆ. ಹೀಗೆ ಐದಾರು ವರ್ಷಗಳ ಕಾಲ ಅಮೇರಿಕಾದ ಐಶಾರಾಮಿ ಜೀವನಕ್ಕೆ ಒಗ್ಗಿ ಹೋದನಂತರ ಮತ್ತೆ ಭಾರತಕ್ಕೆ ಹಿಂದಿರುಗುವವರ ಸಂಖ್ಯೆ ಬಹಳ ವಿರಳ. ವಿರಳ ಎನ್ನುವುದಕ್ಕಿಂತಲೂ ಇಲ್ಲವೇ ಇಲ್ಲಾ ಎನ್ನುವುದೇ ಸರಿ ಎಂದರೂ ತಪ್ಪಾಗದು. ಆದರೆ ಅಮೆರಿಕದಲ್ಲಿ ಓದುವಾಗಲೇ ನವೋದ್ಯಮದ ಕನಸು ಚಿಗುರಿಸಿಕೊಂಡಿದ್ದ ಅರವಿಂದ್ ಇದಕ್ಕೆ ಅಪವಾದ ಎಂಬಂತೆ ಭಾರತಕ್ಕೆ ಹಿಂದಿರುಗಿ, ತಮ್ಮ ಬಾಲ್ಯದ ಗೆಳೆಯ ಅಜಿತ್ ಪ್ರಭು ಅವರೊಂದಿಗೆ ಸೇರಿಕೊಂಡು ಬೆಂಗಳೂರಿನಲ್ಲಿ 1997 ರಲ್ಲಿ ಕ್ವೆಸ್ಟ್ ಗ್ಲೋಬಲ್ ಎಂಬ ಕಂಪನಿಯನ್ನು ಸ್ಥಾಪಿಸಿ, ಅದರ ಮೂಲಕ ಎಂಜಿನಿಯರಿಂಗ್ ಸೇವೆಗಳ ಪೂರೈಕೆದಾರರಾಗಿ ಪ್ರಾರಂಭಸಿದಲ್ಲದೇ ಈಗ ಏಕ್ವಸ್ ಎಂಬ ಮತ್ತೊಂದು ಭಾರತೀಯ ಬಹುರಾಷ್ಟ್ರೀಯ ಕಂಪನಿಯಿ ಮೂಲಕ ವಿಮಾನಗಳ ಬಿಡಿಭಾಗಗಳನ್ನು ಇಡೀ ಪ್ರಪಂಚಾದ್ಯಂತ ರಫ್ತು ಮಾಡುವ ಮೂಲಕ ವಿಶ್ವ ವಿಖ್ಯಾತಿಯನ್ನು ಪಡೆದಿದೆ.
ನೀವು ಜಗತ್ತಿನ ಯಾವ ಮೂಲೆಯಲ್ಲಿರುವ ವಿಮಾನವನ್ನು ಹತ್ತಿದರೂ. ಆ ವಿಮಾನದಲ್ಲಿ ನಮ್ಮ ಕಂಪನಿ ತಯಾರಿಸಿದ ಬಿಡಿಭಾಗಗಳು ಇಲ್ಲದ ವಿಮಾನಗಳೇ ಇಲ್ಲ ಎಂದು ಏಕ್ವಸ್ ಕಂಪನಿಯ ಸ್ಥಾಪಕ ಅರವಿಂದ ಮೆಳ್ಳಿಗೇರಿ ಅವರಾಡುವ ಮಾತುಗಳು ದುರಹಂಕಾರ ಎನ್ನುವುದಕ್ಕಿಂತಲೂ ಸ್ವಾಭಿಮಾನದ ಪ್ರತೀಕ ಎಂದರೂ ಅತಿಶಯವಾಗದು. ಸಾಮಾನ್ಯವಾಗಿ ಭಾರತೀಯರು Software ತಯಾರಿಕೆಯಲ್ಲಿ ವಿಶ್ವಕ್ಕೇ ಅಗ್ರಗಣ್ಯರಾಗಿದ್ದರೂ ಅದೇಕೋ ಏನೋ ಇನ್ನೂ hardware ಜಗತ್ತಿನಲ್ಲಿ ಅಂಬೆಗಾಲಿನ ಸ್ಥಿತಿಯಲ್ಲೇ ಇರುವುವು ನಿಜಕ್ಕೂ ಶೋಚನೀಯವಾಗಿದೆ. ಅಕಸ್ಮಾತ್ ಬೆರಳೆಣಿಕೆಯಷ್ಟು hardware ಕಂಪನಿಗಳು ಭಾರತದಲ್ಲಿ ಇದ್ದರೂ ಮೂಲ ಉತ್ಪನ್ನಕ್ಕೆ ಬೇಕಾಗುವ ಬಹುತೇಕ ಬಿಡಿ ಭಾಗಗಳಿಗೆ ವಿದೇಶಗಳನ್ನೇ ಆಶ್ರಯಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿದೆ.
ಇಂದು ಭಾರತದಲ್ಲಿ ಸ್ಮಾಟ್‌ಫೋನ್, ಚಿಪ್, ಕಂಪೂಟರ್ ಸರ್ವರ್, ಲ್ಯಾಪ್ ಟ್ಯಾಪ್, ಆಟಿಕೆಗಳು, ಗಡಿಯಾರಗಳು, ವಿಮಾನಗಳು ತಯಾರಿಕೆ ಆಗುತ್ತಿದ್ದರೂ, ಆದಕ್ಕೆ ಬೇಕಾದ ಬಿಡಿಭಾಗಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಹೀಗೆ ಪ್ರಪಂಚದ ಬಹುತೇಕ ಕಂಪನಿಗಳ ಉತ್ಪನ್ನಗಳ ತಯಾರಿಕೆಯ ಬಿಡಿ ಭಾಗಗಳಿಗೆ ಚೀನಾ ದೇಶವನ್ನೇ ಆಶ್ರಯಿಸಿದೆ. ಇದಕ್ಕೆ ಉದ್ಯಮ ಕ್ಷೇತ್ರದಲ್ಲಿ ಚೀನಾ ಅಪ್ರೋಚ್ ಎಂದು ಕರೆಯಲಾಗುತ್ತದೆ. ಹೀಗೆ ಚೀನಾದ ಅವಲಂಬನಾ ಸುಳಿಯಿಂದ ಭಾರತ ಹೊರಬರುವ ಅವಶ್ಯಕತೆ ಇದೆ ಎಂಬುದನ್ನು ಮನಗಂಡ ಅರವಿಂದ್ ಅವರು ಮೇಕ್ ಇನ್ ಇಂಡಿಯಾ ಕಲ್ಪನೆಯಲ್ಲಿ ಸ್ವದೇಶದಲ್ಲಿ ತಯಾರಾದ ಉತ್ಪನ್ನಗಳು ಇಲ್ಲಿಂದಲೇ ವಿದೇಶಗಳಿಗೆ ರಫ್ತಾಗಬೇಕು ಎಂಬ ಮಹದಾಸೆಯಿಂದ 2007ರಲ್ಲಿ ಪ್ರಮುಖವಾಗಿ ವಿಮಾನಗಳ ಬಿಡಿಭಾಗಗಳನ್ನು ತಯಾರಿಸುವ ಕ್ವೆಸ್ಟ್ ಗ್ಲೋಬಲ್ ಎಂಬ ಕಂಪನಿಯನ್ನು ಅರವಿಂದ ಮೆಳ್ಳಿಗೇರಿ ಆರಂಭಿಸುತ್ತಾರೆ.
ಬೆಂಗಳೂರಿನಲ್ಲಿ ಸಣ್ಣ ಇಂಜಿನಿಯರಿಂಗ್ ಆಫೀಸಿನಿಂದ ಇಡೀ ಜಗತ್ತೇ ಹಿಂದಿರುಗಿ ನೋಡುವಂತಹ ಕಂಪನಿಯನ್ನು ಕಟ್ಟಿ ಬೆಳಸಿದ ನಂತರ 2014 ರಲ್ಲಿ, ಕ್ವೆಸ್ಟ್ ಗ್ಲೋಬಲ್‌ನ ಉತ್ಪಾದನೆ ಮತ್ತು SEZ (ವಿಶೇಷ ಆರ್ಥಿಕ ವಲಯ) ವ್ಯವಹಾರಗಳನ್ನು ಎಂಜಿನಿಯರಿಂಗ್ ಸೇವೆಗಳ ವ್ಯವಹಾರದಿಂದ ಪ್ರತ್ಯೇಕಿಸಲು ಏಕ್ವಸ್ ಎಂದು ಮರುಬ್ರಾಂಡ್ ಮಾಡಲಾಯಿತು. ಈ ಎರಡು ಕಂಪನಿಗಳು ವಿಭಿನ್ನ ವ್ಯಾಪಾರ ಸಂಸ್ಕೃತಿಗಳು, ಗ್ರಾಹಕರು ಮತ್ತು ಹೂಡಿಕೆದಾರರನ್ನು ಹೊಂದಿರುವ ಪ್ರತ್ಯೇಕ ಘಟಕಗಳಾಗಿದ್ದರೂ ಆ ಎರಡೂ ಕಂಪನಿಗಳನ್ನು ಅರವಿಂದ್ ಮೆಲ್ಲಿಗೇರಿಯವರೇ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.
ಕ್ವೆಸ್ಟ್ ಗ್ಲೋಬಲ್ ಜಾಗತಿಕ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ (ER&D) ಸೇವೆಗಳ ಕಂಪನಿಯಾಗಿ ಏರೋಸ್ಪೇಸ್ ಮತ್ತು ರಕ್ಷಣೆ, ಆಟೋಮೋಟಿವ್, ಇಂಧನ ಮತ್ತು ಆರೋಗ್ಯ ರಕ್ಷಣೆಯಂತಹ ವಿವಿಧ ಕೈಗಾರಿಕೆಗಳಲ್ಲಿ ಪರಿಹಾರಗಳನ್ನು ಒದಗಿಸುತ್ತದೆ. ಏಕ್ವಸ್ ಕಂಪನಿಯು ಆಟೋಮೋಟಿವ್ ಮತ್ತು ತೈಲ ಮತ್ತು ಅನಿಲದಂತಹ ಕೈಗಾರಿಕೆಗಳಿಗೆ ನಿಖರವಾದ ಯಂತ್ರ, ಶೀಟ್ ಮೆಟಲ್ ಫ್ಯಾಬ್ರಿಕೇಶನ್ ಮತ್ತು ಜೋಡಣೆಯಲ್ಲಿ ಪರಿಣತಿ ಹೊಂದಿರುವ ಜಾಗತಿಕ ಉತ್ಪಾದನಾ ಕಂಪನಿಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಸಾವಿರಾರು ಬಹುರಾಷ್ಟ್ರೀಯ ಕಂಪನಿಗಳು ಇದ್ದು, ಇಲ್ಲಿನ ರಿಯಲ್ ಎಸ್ಟೇಟ್ ಬೆಲೆ ಮತ್ತು ಉತ್ಪಾದನಾ ವೆಚ್ಚಗಳು ಹೆಚ್ಚಾಗಿರುವ ಕಾರಣ, ಏರ್‌ಬಸ್ ಮತ್ತು ಬೋಯಿಂಗ್ ಮುಂತಾದ ವೈಮಾನಿಕಾ ಸಂಸ್ಥೆಗಳಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡಲು ಬೆಂಗಳೂರಿಗಿಂತಲೂ ಉತ್ತರ ಕರ್ನಾಟಕವೇ ಉತ್ತಮ ಎಂದು ಆರಂಭದಲ್ಲೇ ಗ್ರಹಿಸಿದ ಅರಂವಿಂದ್ ತಮ್ಮ ಏಕ್ವಸ್ ಕಂಪನಿಯ ಕೇಂದ್ರ ಕಚೇರಿ ಮತ್ತು ಉತ್ಪಾದಕ ಘಟಕ ಸ್ಥಾಪನೆಗೆ ಕುಂದಾನಗರಿ ಬೆಳಗಾವಿಯನ್ನು ಆಯ್ದುಕೊಳ್ಳುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು.
ಉತ್ಪಾದನಾ ಉದ್ಯಮದಲ್ಲಿ ಕಚ್ಚಾವಸ್ತುಗಳಂತೆಯೇ ಮಾನವ ಸಂಪನ್ಮೂಲವೂ ಸಹಾ ಅತ್ಯಂತ ಪ್ರಮುಖವಾಗಿದೆ ಮತ್ತು ಇದಕ್ಕೆ ಜಗತ್ತಿನಾದ್ಯಂತ ಅಂತ್ಯಂತ ಹೆಚ್ಚಿನ ಬೇಡಿಕೆ ಇದೆ. ಜಾಗತಿಕವಾಗಿ ವಿವಿಧ ಬಲಾಢ್ಯ ದೇಶಗಳಲ್ಲಿ ಕಾರ್ಮಿಕರಿಗೆ ವಯಸ್ಸಾಗುತ್ತಾ ಇದ್ದು ಯುವ ಜನರ ಸಂಖ್ಯೆ ತಗ್ಗುತ್ತಿದೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಭಾರತದಲ್ಲಿ 15-29 ವಯಸ್ಸಿನ ಯುವ ಜನಸಂಖ್ಯೆಯು ಸುಮಾರು 371.4 ಮಿಲಿಯನ್ ಅರ್ಥಾತ್ ಒಟ್ಟು ಜನಸಂಖ್ಯೆಯ ಸರಿಸುಮಾರು 27.3% ರಷ್ಟಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡ ಯುವ ಸಮುದಾಯವಾಗಿದೆ. ಅದೇ ರೀತಿಯಲ್ಲಿ ಮತ್ತೊಂದು ಅಂಕಿ ಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ 66% ಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವ ಕಾರಣ, ಅರವಿಂದ್ ಮೆಳ್ಳಿಗೇರಿ ಅವರ ಏಕ್ವಸ್ ಸಂಸ್ಥೆಯು ಈ ಉದ್ಯಮದ ಬೇಡಿಕೆ ಪೂರೈಸಲು ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಸೌಕರ್ಯಗಳ ವ್ಯವಸ್ಥೆಗೆ ಭಾರತವನ್ನೇ ಆಯ್ಕೆ ಮಾಡಿಕೊಂಡಿದೆ.
ಕರ್ನಾಟಕವಲ್ಲದೇ ಪ್ಯಾರಿಸ್, ಟೆಕ್ಸಾಸ್ ಸೇರಿದಂತೆ ವಿದೇಶಗಳಲ್ಲಿಯೂ ಏಕ್ವಸ್ ಕಂಪನಿಯ ಕಛೇರಿಗಳಿದ್ದು, ಬಿಡಿ ಭಾಗಗಳನ್ನು ತಯಾರಿಸಲು ದೇಶ ಮತ್ತು ಹೊರದೇಶದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಸಹ ಉತ್ತರ ಕರ್ನಾಟಕವನ್ನು ಮ್ಯಾನುಫ್ಯಾಕ್ಚರಿಂಗ್ ಹಬ್ ಮಾಡಬೇಕೆಂದು ನಿರ್ಧರಿಸಿದ ಅರವಿಂದ್ ಬೆಳಗಾವಿಯಲ್ಲಿ 260 ಎಕರೆ ವಿಸ್ತೀರ್ಣದಲ್ಲಿ ಏರೋಸ್ಪೇಸ್ ಘಟಕವನ್ನು ಆರಂಭಿಸಿದ್ದಲ್ಲದೇ, ಚೀನಾ ದೇಶಕ್ಕೇ ಸಡ್ಡು ಹೊಡೆಯುವಂತೆ ಕೊಪ್ಪಳದ ಕುಕನೂರು ಸಮೀಪದಲ್ಲಿ 400 ಎಕರೆ ವಿಸ್ತೀರ್ಣದಲ್ಲಿ ಟಾಯ್ ಕ್ಲಸ್ಟರ್ ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕ ಭಾಗದ ಸುಮಾರು 40,000 ಜನರಿಗೆ ನೇರ ಉದ್ಯೋಗ ಮತ್ತು ಸುಮಾರು 2 ಲಕ್ಷಕ್ಕೂ ಅಧಿಕ ಜನರಿಗೆ ಗುತ್ತಿಗೆ ಆಧಾರದಲ್ಲಿಯೋ ಇಲ್ಲವೇ ಪರೋಕ್ಷವಾಗಿ ಉದ್ಯೋಗ ನೀಡಿದ ಶೇಯಸ್ಸು ಅರವಿಂದ ಮೆಳ್ಳಿಗೇರಿ ಅವರಿಗೆ ಸಲ್ಲುತ್ತದೆ. ಹೀಗೆ ಸ್ಥಳೀಯ ಕಾರ್ಮಿಕರು, ಸ್ಥಳೀಯ ವಸ್ತುಗಳು, ಸ್ಥಳೀಯವಾಗಿ ತಯಾರಿಕೆಯ ಮೂಲಕ ಫೋರ್ಜಿಂಗ್, ಮೆಷಿನಿಂಗ್, ಸರ್ಫೇಸ್ ಟ್ರೀಟ್ಮೆಂಟ್, ಟೆಸ್ಟಿಂಗ್ ಘಟಕಗಳಿವೆ. ಅಲೂಮಿನಿಯಂ ಬ್ಲಾಕ್ಗಳನ್ನು ವಿಮಾನದ ಬಿಡಿಭಾಗಗಳಾಗಿ ಅಚ್ಚಿಳಿಸಬಲ್ಲ 10,000 ಟನ್ ಹೈಡ್ರಾಲಿಕ್ ಪ್ರೆಸ್ ಇತ್ಯಾದಿ ಸೌಲಭ್ಯ ಹೊಂದಿರುವ ಏಕ್ವಸ್ ಕಂಪನಿಯ ವಿವಿಧ ಘಟಕಗಳಿಂದ ಕಚ್ಛಾವಸ್ತುಗಳಿಂದ ಹಿಡಿದು ಅಗತ್ಯ ಇರುವ ಪ್ರತಿಯೊಂದೂ ಬಿಡಿಭಾಗಗಳನ್ನೂ ಬಹಳ ಕ್ಷಿಪ್ರವಾಗಿ ಸಿದ್ಧಪಡಿಸಿ ಕೊಡುವ ಸಾಮರ್ಥ್ಯ ಏಕ್ವಸ್ಗೆ ಇದ್ದು ಮೇಕ್ ಇನ್ ಇಂಡಿಯಾಗೆ ಸೂಕ್ತವಾದ ಮಾದರಿಯಾಗಿ ಭಾರತೀಯ ಕಂಪನಿಗಳಿಗೆ ಪ್ರೇರಣೆಯಾಗಿದೆ.
ಬೆಳಗಾವಿಯಲ್ಲಿರುವ ಏಕ್ವಸ್ ಕಂಪನಿಯು ವಿಮಾನದ ಬಾಗಿಲುಗಳಿಂದ ಹಿಡಿದು ಎಂಜಿನ್ ಸ್ಪಿನ್ನರ್ಗಳವರೆಗೆ ವಿಮಾನಗಳಿಗೆ ಅವಶ್ಯವಿರುವ ಬಹುತೇಕ ಬಿಡಿ ಭಾಗಗಳನ್ನು ತಯಾರಿಸುವ ಮೂಲಕ ವಿಶ್ವದ ಅಗ್ರಗಣ್ಯ ವಿಮಾನ ತಯಾರಕರಾದ ಏರ್‌ಬಸ್ ಮತ್ತು ಬೋಯಿಂಗ್ ಸಂಸ್ಥೆಗಳಿಗೆ ಬಿಡಿಭಾಗಗಳನ್ನು ಸರಬರಾಜು ಮಾಡುವ ಪ್ರಮುಖ ಕಂಪನಿಯಾಗಿ ಬೆಳೆದಿರುವ ಪರಿ ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.
ಹೀಗೆ ಅಕ್ವಸ್ ಎಂಬ ಭಾರತೀಯ ಕಂಪನಿಯು ಇಂದು ಬಹುರಾಷ್ಟ್ರೀಯ ಕಂಪನಿ (MNC)ಯಾಗಿ ಅಂತರರಾಷ್ಟ್ರೀಯವಾಗಿ ಕಾರ್ಯನಿರ್ವಹಿಸುತ್ತದೆ ಅಲ್ಲದೇ, ಇಂದು ಬೋಯಿಂಗ್, ಏರ್‌ಬಸ್ ಮತ್ತು ಸಾಬ್‌ನಂತಹ ಜಾಗತಿಕ ದೈತ್ಯರೊಂದಿಗೆ ಪಾಲುದಾರಿಕೆ ಹೊಂದಿದ್ದು, ಭಾರತದಲ್ಲಿ ವ್ಯಾಪಕ ಕಾರ್ಯಾಚರಣೆಗಳ ಜೊತೆಗೆ ಫ್ರಾನ್ಸ್ ಮತ್ತು ಯುಎಸ್‌ನಂತಹ ದೇಶಗಳಲ್ಲಿ ಉತ್ಪಾದನಾ ಘಟಕಗಳು ಮತ್ತು ಜಂಟಿ ಉದ್ಯಮಗಳನ್ನು ಹೊಂದಿದ್ದು ತನ್ನ ಉತ್ಪನ್ನಗಳನ್ನು ವಿಶ್ವಾದ್ಯಂತ ರಫ್ತು ಮಾಡಲಾಗುತ್ತದೆ. ಇದರ ಜೊತೆಗೆ ಏಕ್ವಸ್ ಕಂಪನಿಯು ಸ್ವೀಡನ್‌ನ ಸಾಬ್ ಎಬಿ ಮತ್ತು ಡಸಾಲ್ಟ್‌ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಜಂಟಿ ಉದ್ಯಮಗಳನ್ನು ಸ್ಥಾಪಿಸಿರುವುದರ ಜೊತೆಗೆ ಕೆನಡಾದ ಮೆಲ್ಲನ್ ಏರೋಸ್ಪೇಸ್ ಜೊತೆ ಮೇಲ್ಮೈ ಸಂಸ್ಕರಣೆಗಾಗಿ ಪಾಲುದಾರಿಕೆಯನ್ನು ಹೊಂದಿದೆ.
ಕೇವಲ ಉದ್ಯಮ ಕ್ಷೇತ್ರಕ್ಕಷ್ಟೇ ತಮ್ಮನ್ನು ತಾವು ಸೀಮಿತಗೊಳಿಸಿ ಕೊಳ್ಳದ ಅರವಿಂದ್, ಕೆಎಲ್‌ಇ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಅವರ ಧರ್ಮಪತ್ನಿಯವರಾದ ಶ್ರೀಮತಿ ಅಕ್ಕಮಹಾದೇವಿ ಮೆಳ್ಳಿಗೇರಿ ಅವರ ಮೂಲಕ ಆಲ್ಟಮ್ ಟ್ರಸ್ಟ್ ನ ಮೂಲಕ ಗುಣಮಟ್ಟದ ಶಿಕ್ಷಣ ನೀಡುವ ಆಶಯದಿಂದ ಇಂಡಸ್ ಆಲ್ಟಮ್ ಅಂತರರಾಷ್ಟ್ರೀಯ ಶಾಲೆಯನ್ನು ಆರಂಭಿಸಿರುವುದಲ್ಲದೇ, ಏಕ್ವಸ್‌ನ ಸಿಎಸ್‌ಆರ್ ಮತ್ತು ಲೋಕೋಪಕಾರ ಕಾರ್ಯಕ್ರಮಗಳ ಮೂಲಕ ಏಕ್ವಸ್ ಫೌಂಡೇಶನ್ ಬೆಳಗಾವಿ ಮತ್ತು ಸುತ್ತಮುತ್ತಲಿನ ವಿವಿಧ ಶಾಲೆಗಳ ಹಿಂದುಳಿದ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯವನ್ನು ಒದಗಿಸಲು ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಅದೇ ರೀತಿ ಅಕ್ಕಮಹಾದೇವಿ ಮೆಳ್ಳಿಗೇರಿಯವರು ಟೆಕ್ಸಾಸ್‌ನ ವುಡ್‌ಲ್ಯಾಂಡ್ಸ್‌ನಲ್ಲಿರುವ ಹಿಂದೂ ದೇವಾಲಯದ ಶಾಶ್ವತ ಟ್ರಸ್ಟಿಯಾಗುವ ಮೂಲಕ ಸನಾತನ ಧರ್ಮಕಾರ್ಯದಲ್ಲೂ ದಂಪತಿಗಳು ಆಸಕ್ತಿ ಹೊಂದಿರುವುದು ಗಮನಾರ್ಹವಾಗಿದೆ.
ಹೀಗೆ ಬೆಳಗಾವಿಯಿಂದ-ಬೋಯಿಂಗ್‌ವರೆಗೆ, ಜಗತ್ತೇ ತಿರುಗಿ ನೋಡುವಂತಹ ಕ್ವೆಸ್ಟ್ ಗ್ಲೋಬಲ್ ಮತ್ತು ಏಕ್ವಸ್ ಕಂಪನಿಯ ಸ್ಥಾಪಕರಾದ ಮತ್ತು ಕನ್ನಡಿಗರಾದ ಅರವಿಂದ್ ಮೆಳ್ಳಿಗೇರಿಯವರ ಯಶೋಗಾಥೆ ಭಾರತದಲ್ಲಿ ಓದಿ ಇಲ್ಲಿ ತಮ್ಮ ಸಾಮರ್ಥ್ಯಕ್ಕೆ ಇಲ್ಲಿ ಕೆಲಸವಿಲ್ಲಾ ಎಂದು ವಿದೇಶಕ್ಕೆ ಪ್ರತಿಭಾಪಲಾಯನ ಮಾಡುವಂತಹ ಲಕ್ಷಾಂತರ ಯುವಕರಿಗೆ ಪ್ರೇರಣಾದಾಯಿ ಆಗಿರುವ ಕಾರಣ, ಅರವಿಂದ್ ಮೆಳ್ಳಿಗೇರಿ ಅವರು ನಿಸ್ಸಂದೇಹವಾಗಿ ನಮ್ಮ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ