ಬೇಲೂರಿನ ಕನ್ನಡದ ಅಂಗಡಿ ಶ್ರೀ ತೀರ್ಥಂಕರ್

ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವ  ಆಚರಣೆಗಾಗಿ  ಕನ್ನಡಾಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ಅರ್ಜಿ ಹಾಕಿ, ದೊಡ್ಡ ಮೊತ್ತದ ಜನರ ತೆರಿಗೆ ಹಣವನ್ನು ಪಡೆದು ಕಾಟಾಚಾರಕ್ಕೊಂದು  ಕಿತ್ತೋದವರಿಂದ ಹಾಡಿಸಿ ರಾಜ್ಯೋತ್ಸವ ಆಚರಿಸಿದೆವು ಎಂದು ತೋರಿಸಿ ಹಣ ತಿನ್ನುವುದೇ ಕನ್ನಡ ಹೋರಾಟ ಎಂದು ಭಾವಿಸಿರುವವರ ಮಧ್ಯೆ ಸ್ವಂತ ಖರ್ಚಿನಲ್ಲಿ ಕನ್ನಡ ರಾಜ್ಯೋತ್ಸವವನ್ನು  ಅರ್ಥಪೂರ್ಣವಾಗಿ ಹೇಗೆ ಆಚರಿಸಬೇಕು ಎಂಬುದಕ್ಕೆ ಬೇಲೂರಿನ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ   ಅಧ್ಯಕ್ಷರಾದ  ಶ್ರೀ ತೀರ್ಥಂಕರ್ ಅವರೇ ಪ್ರತ್ಯಕ್ಷ ಉದಾಹರಣೆಯಾಗಿದ್ದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಹೇಳಿ ಕೇಳಿ ಹೊಯ್ಸಳರ ರಾಜ ವಿಷ್ಣುವರ್ಧನ ಮತ್ತು ಶಿಲ್ಪಿ ಜಕಣಾಚಾರಿಯಿಂದಾಗಿ  ಬೇಲೂರು ಮತ್ತು ಹಳೇಬೀಡು ಶಿಲ್ಪ ಕಲೆಗಳ ತವರೂರಾಗಿ ಸಾಂಸ್ಕೃತಿಕ ಬೀಡಾಗಿ ವಿಶ್ವವಿಖ್ಯಾತವಾಗಿದೆ. ಈಗ ಅದೇ ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯದ ಮುಖ್ಯರಸ್ತೆಯಲ್ಲೇ ಇರುವ  ಶ್ರೀ ಮಾರುತಿ ಸ್ಟೋರ್ಸ್ ನಲ್ಲಿ  ಸಂಪೂರ್ಣ ಅಂಗಡಿಯೇ ನವೆಂಬರ್ ಮತ್ತು ಡಿಸಂಬರ್ ತಿಂಗಳಿನಾದ್ಯಂತ ಕನ್ನಡದ ಬಾವುಟವಾದ ಹಳದಿ ಕೆಂಪು ಮಯವಾಗಿದ್ದು ನೋಡಲು ನಯನ ಮನೋಹರವಾಗಿರುತ್ತದೆ.

ಮೂಲತಃ ಬೇಲೂರಿನವರೇ ಆದ ಮತ್ತು ಬೇಲೂರಿನ ಮುಖ್ಯರಸ್ತೆಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಶ್ರೀ ಬಿ.ಎಸ್. ರಾಮಲಿಂಗಶೆಟ್ಟಿ ಮತ್ತು  ಶ್ರೀಮತಿ ಲೇಟ್ ಶಂಕರಮ್ಮ ಅವರ ಎರಡನೇ ಮಗನಾಗಿ ಡಿಸೆಂಬರ್ 05 1961ರಂದು ಜನಿಸಿದ ಮಗುವಿಗೆ ಜನ್ಮ ನಕ್ಷತ್ರ ನಾಮದ ಪ್ರಕಾರ ತಿಮ್ಮಪ್ಪ ಎಂದು ಹೆಸರಿಡುತ್ತಾರೆ. ಈ ತಿಮ್ಮಪ್ಪ ಎಂಬ ಹೆಸರು ತೀರ್ಥಂಕರ ಎಂದು ಹೆಸರಾದ ಹಿಂದಿನ ರೋಚಕತೆಯೇ ನಿಜಕ್ಕೂ ಅದ್ಬುತವೇ ಸರಿ. ಭಾರತ ಹೆಸರಿಗಷ್ಟೇ ಜಾತ್ಯಾತೀತ ರಾಷ್ಟ್ರವಾದರೂ ಇಲ್ಲಿ  ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಜಾತಿಯೇ ಪ್ರಾಮುಖ್ಯತೆ ಪಡೆಯುತ್ತದೆ. ಹೆಸರಿಗಷ್ಟೇ ಸರ್ವಜನಾಂಗದ ಶಾಂತಿಯ ತೋಟ ಎಂದಿದ್ದರೂ, ಆಶಾಂತಿಯಿಂದಲೇ ತುಂಬಿರುವುದರ ಕುರಿತಾಗಿ ಹೆಚ್ಚಿನದ್ದೇನೂ ಹೇಳಬೇಕಿಲ್ಲ. ಮೂಲತಃ  ಹಿಂದೂ ದೇವಾಂಗದವರಾದ ರಾಮಲಿಂಗಶೆಟ್ಟಿಯರ ಮಗನಿಗೆ ತಮ್ಮ ಕುಲದೈವ ತಿಮ್ಮಪ್ಪನ ಹೆಸರಿಟ್ಟಿದ್ದರೂ, ಆ ಮಗು ಹುಟ್ಟಿದ ದಿನ ಬೇಲೂರಿನಲ್ಲಿ ಜೈನ ಮಂದಿರದ ಶಂಕುಸ್ಥಾಪನೆಗೆಂದು ಜೈನ ಮುನಿಗಳಾದ ತೀರ್ಥಂಕರರೊಬ್ಬರು ಬಂದಿದ್ದರಂತೆ. ಕಾಕತಾಳೀಯ ಎನ್ನುವಂತೆ ಆ ದೇವಾಲಯ ಅವರ ಮನೆಯ ರಸ್ತೆಯಲ್ಲೇ ಇದ್ದ ಕಾರಣ ಅದರ ನೆನಪಿಗಾಗಿ  ತಮ್ಮ ಮಗನಿಗೆ ನಕ್ಷತ್ರ ನಾಮಕ್ಕೆ ಸರಿ ಹೊಂದುತ್ತದೆ ಎಂದು ತೀರ್ಥಂಕರ ಎಂದು ಹೆಸರಿಟ್ಟರಂತೆ. ಹೀಗೆ ಜಾತಕದಲ್ಲಿ ತಿಮ್ಮಪ್ಪನಾದರೆ, ಶಾಲೆಯ ಸರ್ಟಿಫೀಕೇಟ್ ನಲ್ಲಿ ತೀರ್ಥಂಕರ ಎಂದಿದ್ದರೂ ಮನೆಯವರೆಲ್ಲರೂ ಮುದ್ದಿನಿಂದ ರವಿ ಎಂದು ಕರೆಯುವ ಮೂಲಕ ದೇವ ನೊಬ್ಬ ನಾಮ ಹಲವು ಎನ್ನುವಂತೆ  ಒಬ್ಬರೇ ಮೂರು ಹೆಸರಿನಿಂದ ಖ್ಯಾತಿ ಪಡೆಯುತ್ತಾರೆ.

ತಮ್ಮ ಶಿಕ್ಷಣವನ್ನೆಲ್ಲಾ ಬೇಲೂರಿನ ಸರ್ಕಾರಿ ಹಿರಿಯ ಪ್ರಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಮಾಡಿದ ತೀರ್ಥಂಕರರಿಗೆ ಓದಿಗಿಂತಲೂ ಆಟ ಮತ್ತು ನಾಟಕಗಳಲ್ಲೇ ಹೆಚ್ಚು ಆಸಕ್ತಿಅಲ್ಪ ಸ್ವಲ್ಪ ಹಣ ಸಿಕ್ಕರೂ ಸಾಕು ಗೆಳೆಯರೊಡನೆ ಸಿನಿಮಾ ನೋಡುವ ಹುಚ್ಚು.  ಅದರಲ್ಲೂ   ಅಣ್ಣಾವ್ರ ಸಿನಿಮಾ (ಡಾ. ರಾಜಕುಮಾರ್)   ಎಂದರೆ ಸಾಕು ಎರಡು ಮೂರು ಸಲಾ ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ.  ಅವರು SSLC ಮುಗಿಸುವಷ್ಟರಲ್ಲಿ ಅವರ ಅಣ್ಣ ಸರ್ಕಾರಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಕಾರಣ, ಊರಿನಲ್ಲಿ ಅಂಗಡಿ ನೋಡಿಕೊಳ್ಳುವವರು ಯಾರೂ ಇರುವುದಿಲ್ಲಾ ಎಂದು ಸಣ್ಣ ವಯಸ್ಸಿನಲ್ಲಿಯೇ ತೀರ್ಥಂಕರರನ್ನು ಅವರ ತಂದೆ ಅಂಗಡಿ ಕೆಲಸಕ್ಕೆ ಹಾಕಿಕೊಂಡ ನಂತರವೇ ಅವರ ಜೀವನದ ಎರಡನೇ ಮಗ್ಗಲು ಆರಂಭವಾಗುತ್ತದೆ.

ಬಿಸಿ ರಕ್ತದ ಯುವಕರಾಗಿದ್ದ ರವಿ ಅವರಿಗೆ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತದಿಂದಾಗಿ  ಶ್ರೀ ಮಾರುತಿ ಯುವಜನ ಸಂಘದ ಮೂಲಕ ಸಂಘಟನೆಗೆ ಪಾದಾರ್ಪಣೇ ಮಾಡುತ್ತಾರೆ. ಈಗಾಗಲೇ ತಿಳಿಸಿದಂತೆ  ಡಾ. ರಾಜ್‌ ಕುಮಾರ್ ಅವರ ಪರಮ ಭಕ್ತರಾಗಿದ್ದ ಕಾರಣ ರಾಜಕುಮಾರ್ ಅಭಿಮಾನಿ  ಸಂಘದ ಸದಸ್ಯತ್ವ ಪಡೆದುಕೊಂಡು ಅದರ ಮೂಲಕ  ವಿವಿಧ ಜನಪರ ಹೋರಾಟಗಳಲ್ಲಿ ಪಾಲ್ಗೊಂಡು  ಕೆಲವೇ ವರ್ಷಗಳಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. 1982 ರಲ್ಲಿ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯ ಭಾಷೆಯನ್ನಾಗಿ ಮಾಡುವ ಕುರಿತಾಗಿ ಆರಂಭವಾದ ಗೋಕಾಕ್ ಚಳವಳಿಯನ್ನು ಬೆಂಬಲಿಸಿ ವರನಟ ಡಾ. ರಾಜ್‌ಕುಮಾರ್ ಧುಮುಕುತ್ತಿದ್ದಂತೆಯೇ ಚಳುವಳಿಯ ಸ್ವರೂಪವೇ ಬದಲಾಗಿ ಸರ್ಕಾರದ ಮೇಲೆ ಬಹಳ ಒತ್ತಡ  ಹೇರತೊಡಗಿತು.  ಗೋಕಾಕ್ ಚಳುವಳಿಗಾಗಿ ರಾಜ್ ಅವರ ನೇತೃತ್ವದಲ್ಲಿ ಚಿತ್ರರಂಗದ ನಟ ನಟಿಯರು ಊರಿಂದ ಊರಿಗೆ ಪ್ರಚಾರಕ್ಕೆಂದು  ಹೋಗುತ್ತಿದ್ದಾಗ,  ಅದೊಮ್ಮೆ ಚಿಕ್ಕಮಗಳೂರಿನ ಪ್ರವಾಸದ ವಿಷಯ ಕೇಳಿ ಬೇಲೂರಿನ ರಾಜಕುಮಾರ್ ಸಂಘದವರಿಗೆ ಮಾರ್ಗದ ಮಧ್ಯೆ ಡಾ. ರಾಜ್ ಅವರನ್ನು ಬೇಲೂರಿಗೆ ಕರೆತಬೇಕೆಂಬ ಆಸೆ ಉಂಟಾಗಿ ರಾಜಕುಮಾರ್  ಅವರನ್ನು ಭೇಟಿಯಾಗಿ ಅವರನ್ನು ಒಪ್ಪಿಸಿ ಕರೆತರುವ ಜವಾಬ್ಧಾರಿಯನ್ನು  ಯುವಕರಾಗಿದ್ದ ರವಿ ಅವರಿಗೆ ವಹಿಸುತ್ತಾರೆ

ದಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದಂತಹ ಸಾ.ರಾ. ಗೋವಿಂದ್ ಅವರ ನೆರವಿನಿಂದ ರಾಜ ಕುಮಾರ್ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಸದಾಶಿವನಗರದಲ್ಲಿದ್ದ  ಅಣ್ಣಾವ್ರ ಮನೆಗೆ ಹೋದಾಗ ಅಣ್ಣಾವ್ರ ಭೇಟಿಯಾಗಲೂ ಸಾಧ್ಯವಾಗದೇ ಹೋದಾಗಾ  ಹೇಗಾದರೂ ಮಾಡಿ ಅಣ್ಣಾವ್ರ ಭೇಟಿ ಆಗಿ, ಅವರನ್ನು ಒಪ್ಪಿಸಿಯೇ ಊರಿಗೆ ಹೋಗಬೇಕೆಂದು ನಿರ್ಧರಿಸಿದ ರವಿ ಅವರು ಬೆಂಗಳೂರಿನಲ್ಲೇ ರೂಮ್ ಮಾಡಿಕೊಂಡು ಸುಮಾರು ಮೂರು ದಿನಗಳ ಕಾಲ ಸತತವಾಗಿ  ಅಣ್ಣಾವ್ರ ಮನೆಗೆ ಎಡತಾಕುತ್ತಿದ್ದದ್ದನ್ನು ಗಮನಿಸಿ ಅಂತಿಮವಾಗಿ ಅವರಿಗೆ ಬೆಳ್ಳಂಬೆಳ್ಳಿಗೆ ತಿಂಡಿಯ ಸಮಯದಲ್ಲಿ ಅಣ್ಣಾವ್ರ ಭೇಟಿ ಆಗಲು ಅವಕಾಶ ಸಿಕ್ಕಾಗ ರವಿಯವರಿಗೆ ಸ್ವರ್ಗಕ್ಕೆ ಮೂರೇ ಗೇಣು ಅಂತರ ಎನ್ನುವಂತಾಗುತ್ತದೆ.  ಅವತ್ತು ಬೆಳಿಗ್ಗೆ ಬೇಗ ಎದ್ದು ಶುಚಿರ್ಭೂತರಾಗಿ ಅಣ್ಣಾವ್ರ ಮನೆಗೆ ಹೋದಾಗ, ಆಗಿನ್ನೂ ಬಾಲಕನಾಗಿದ್ದ ಲೋಹಿತ್ (ಪುನೀತ್)  ಅವರನ್ನು ಮನೆಯ  ಒಳಗೆ ಕರೆದು ಕೂರಿಸಿ ಅಪ್ಪಾಜೀ ನಿಮ್ಮನ್ನು ನೋಡಲು ಯಾರೋ ಬಂದಿದ್ದಾರೆ ನೋಡಿ ಎಂದು ಹೇಳಿದ್ದು  ಇನ್ನೂ ನನ್ನ ಕಿವಿಯಲ್ಲಿ ಗುಂಯ್ ಗುಟ್ಟುತ್ತಿದೆ ಎಂದು ರವಿಯವರು ಹೇಳುವಾಗ ಅವರ  ಕಣ್ಗಳಲ್ಲಿ ಪುನೀತ್ ಅವರನ್ನು ಕಳೆದುಕೊಂಡ ನೋವು ಕಾಣುತ್ತಿತ್ತು.

ಅಷ್ಟರಲ್ಲಾಗಲೇ ತಮ್ಮ ದೈನಂದಿನ ವ್ಯಾಯಾಮ, ಯೋಗಾಭ್ಯಾಸಗಳನ್ನೆಲ್ಲಾ ಮುಗಿಸಿ ರವಿಯವರೊಂದಿಗೆ  ಉಪಹಾರಕ್ಕಾಗಿಯೇ ಕಾಯುತ್ತಿದ್ದ ಅಣ್ಣಾವ್ರು ಬಂದಾಗ ರವಿಯವರಿಗೆ. ಇದು ಕನಸೋ ನನಸೋ ಎಂದು ತಮ್ಮನ್ನೇ ತಾವು ಜಿಗುಟಿಕೊಂಡು ನೋಡುವ ಹಾಗಾಗಿತ್ತು. ನಮಸ್ಕಾರ!! ಬೇಲೂರಿನಿಂದ ಬಂದು ನನ್ನನ್ನು ಭೇಟಿಯಾಗಲು ಮೂರು ದಿನಗಳಿಂದಲೂ ಬರುತ್ತಿದ್ದೀರಂತೇ!! ಎಂದು ಬಹಳ ಅಪ್ಯಾಯಮಾನವಾಗಿ ಮಾತನಾಡಿಸಿ ಅವರನ್ನು  ಒಮ್ಮೆ ಅಪ್ಪಿಕೊಂಡು ತಮ್ಮೊಂದಿಗೆ ಉಪಹಾರ ಮಾಡಲು ಕರೆದಾಗ ರವಿ ಅವರಿಗೆ ನಿಜಕ್ಕೂ ಭಗವಂತನ ಪದದಡಿಯಲ್ಲಿ ಕುಳಿತ  ಭಕ್ತನಂತಾಗಿತ್ತು. ಚಿಕ್ಕಮಗಳೂರಿಗೆ ಹೋಗುವಾಗ ಮಾರ್ಗದ ಮಧ್ಯದಲ್ಲಿ ಬೇಲೂರಿಗೂ ಬಂದು ಹೋಗ ಬೇಕೆಂದು ಕೇಳಿದ್ದಕ್ಕೆ ಸಂತೋಷದಿಂದ ಒಪ್ಪಿಕೊಂಡು ಬಹಳ  ಹಿಂದೆ ತಾವು ಬೇಲೂರಿಗೊಮ್ಮೆ ಬಂದಿದ್ದೆ ಎಂದು ನೆನಪಿಸಿ ಕೊಂಡಿದ್ದೇ ತಡಾ.. ಹೌದು  ಅಂದು ನೀವು ಕಪ್ಪು ಬಣ್ಣದ ಅಂಬಾಸೆಡರ್ ಕಾರಿನಲ್ಲಿ ಬಂದಿದ್ದ ವಿಷಯ ಸಣ್ಣ ಹುಡುಗರಾಗಿದ್ದ ನಮಗೆ ತಿಳಿದು ನಿಮ್ಮನ್ನು ನೋಡಲು ದೇವಾಲಯದ ಬಳಿ ಬಂದಾಗ ನೀವಾಗಲೇ ಕಾರಿನಲ್ಲಿ ಕುಳಿತು ಹೋಗಲು ಸಿದ್ದವಾಗಿದ್ದಾಗ, ಕೈ ಬೀಸುತ್ತಿದ್ದ ನಮ್ಮನ್ನು ಗಮನಿಸಿ ಕಾರಿನ ಕಿಟಕಿಯನ್ನು ಸ್ವಲ್ಪ ಸರಿಸಿ ನಮ್ಮ ಕೈಗೆ ನಿಮ್ಮ ಕೈ ತಾಗಿಸಿದ್ದಿರಿ. ಹಾಗೆ ನಿಮ್ಮ ಕೈ ಸ್ಲರ್ಶ ಪಡೆದ ಹುಡುಗರಲ್ಲಿ ನಾನೂ ಒಬ್ಬನಾಗಿದ್ದೆ ಎಂದು ರವಿಯವರು ಹೇಳಿದಾಗಅಣ್ಣಾವ್ರು ಬಹಳ ಸಂತೋಷ ಪಟ್ಟಿದ್ದಂತೆ.

ಮುಂದೆ ಒಪ್ಪಿಕೊಂಡಂತೆ ರಾಜ್ ಅವರು ಚಿಕ್ಕಮಗಳೂರಿಗೆ ಹೋಗುವ ಮಾರ್ಗದಲ್ಲಿ ಬೇಲೂರಿಗೆ ಬಂದಾಗ ಅವರಿಗೆ ರವಿ ಅವರ ಸಾರಥ್ಯದಲ್ಲಿ ಪೂರ್ಣಕುಂಭ ಸ್ವಾಗತ ನೀಡಿದ ನಂತರವಂತೂ ಡಾ. ರಾಜಕುಮಾರ್ ಅವರ ಚಲನಚಿತ್ರದ ಬಿಡುಗಡೆಯಾದ ದಿನದಂದೇ  ಕಡ್ಡಾಯ ವೀಕ್ಷಣೆ ಮಾಡುವುದಲ್ಲದೇ ಅಣ್ಣಾವ್ರು  ಬದುಕ್ಕಿದ್ದ ಸಮಯದ ವರೆಗೂ ತಪ್ಪದ್ದೇ ಆಗ್ಗಾಗ್ಗೆ ಅವರ ಮನೆಗೆ ಹೊಗಿ ಅವರ ಆಶೀರ್ವಾದ ಪಡೆಯುವ ಸಂಪ್ರದಾಯವನ್ನು ರೂಢಿಸಿ ಕೊಂಡಿದ್ದರು. ಹೀಗೆ ಆರಂಭವಾದ ಅವರ ಕನ್ನಡ ಪ್ರೇಮದ ಕುರುಹಾಗಿ ತಮ್ಮ ಅಂಗಡಿಯ ನಾಮಫಲಕವನ್ನು  ಕನ್ನಡದ ಬಾವುಟ ಕೆಂಪು ಮತ್ತು ಹಳದಿ ಬಣ್ಣಗಳಲ್ಲಿ ಬರೆಯಿಸಿದ್ದಲ್ಲದೇ, ಸುಮಾರು 40 ವರ್ಷಗಳ ಹಿಂದೆಯೇ ತಮ್ಮ ಬಜಾಜ್ ಸ್ಕೂಟರಿನ ಬಣ್ಣವನ್ನೂ ಹಳದಿ ಮತ್ತು ಸೀಟಿನ ಬಣ್ಣ ಕೆಂಪು ಬಣ್ಣವಾಗಿಸಿ ಕನ್ನಡ ಕಂದ ತೀರ್ಥಂಕರ ಎಂದೇ ಪ್ರಖ್ಯಾತರಾಗುತ್ತಾರೆ. ಈಗಂತೂ ವೆಸ್ಪಾ ಕಂಪನಿಯ ಹಳದೀ ಬಣ್ಣದ್ದೇ ಸ್ಕೂಟರ್ ಇರುವಾಗ  ಅದರ ಸೀಟನ್ನು ಕೆಂಪು ಬಣ್ಣಕ್ಕೆ ಮಾರ್ಪಾಟು ಮಾಡಿರುವುದಲ್ಲದೇ ಇಡೀ ಸ್ಕೂಟಲ್ ತುಂಬಾ ಕನ್ನಡದ ಘೋಷಣಾ ವಾಕ್ಯಗಳನ್ನು ಬರೆಸಿರುವುದು ಗಮನಾರ್ಹವಾಗಿದೆ.

ಮುಂದೆ ಬೇಲೂರು ಹಾಸನ ಮತ್ತು  ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಚಳುವಳಿ ಆದರೂ ಅದಕ್ಕೆ ರವಿಯವರದ್ದೇ ನೇತೃತ್ವ. ಇದಕ್ಕೆ  ರಾಜ್‌ಕುಮಾರ್ ಮತ್ತು ರವಿಯವರೊಂದಿಗಿದ್ದ ಗೆಳೆತನವೂ ಅವರಿಗೆ ಸಾರ್ವಜನಿಕರ ಬೆಂಬಲ  ಜನಪ್ರಿಯತೆಯನ್ನು ಶರವೇಗದಲ್ಲಿ ಪಡೆದುಕೊಂಡರು ಹೀಗೆ ನೆಲ, ಜಲ, ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ವಿಚಾರದಲ್ಲಿ ಕ್ರಿಯಾಶೀಲರಾಗಿ ಹೋರಾಟದಲ್ಲಿ ತೊಡಗಿಕೊಂಡವರು. ಯಗಚಿ ಹಳೆ ಸೇತುವೆ ದುರಸ್ತಿಗಾಗಿ ಉರುಳುಸೇವೆ, ಹಳೇಬೀಡು ಮಾದಿಹಳ್ಳಿ ಯಗಚಿ ನೀರು ಕೊಡುವ ವಿಚಾರದಲ್ಲಿ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಯಾವುದೆ ಪದವಿ ಪಡೆಯದೆ ಇದ್ದರೂ ಪದವಿಗಿಂತ ಅನುಭವ ಹೆಚ್ಚು ಪಡೆದವರಾಗಿದ್ದಾರೆ. ಪಟ್ಟಣದಲ್ಲಿ ಯಾವುದೇ ಹೋರಾಟ ನಡೆದರೂ ಅದರಲ್ಲಿ ಇವರ ಪಾಲ್ಗುಳ್ಳುವಿಕೆ ಕಡ್ಡಾಯ.

ಇವೆಲ್ಲಾ ಸಮಾಜ ಸೇವೆಯ ನಡುವೆಯೂ ಮಂಜುಳ ಡಿ.ಎ ಅವರನ್ನು ವರಿಸಿ ಅವರಿಬ್ಬರ ಸುಂದರವಾದ ದಾಂಪತ್ಯದ ಕುರುಹಾಗಿ ಮುದ್ದಾದ  ಇಬ್ಬರು ಹೆಣ್ಣು ಮಕ್ಕಳ ತಂದೆಯಾದ ರವಿಯವರು ತಮ್ಮ ಮಕ್ಕಳಿಗೂ ಅವರ ಕನ್ನಡ ಪ್ರೇಮವನ್ನು ಧಾರೆ  ಎರೆದ ಪರಿಣಾಮ, ಅವರ ಮಗಳು ಬಿ.ಟಿ. ಯಶಸ್ವಿನಿ ತಮ್ಮ 10ನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ 100ಕ್ಕೆ100 ಅಂಕಗಳನ್ನು ಪಡೆಯುವ ಮೂಲಕ ಅಪ್ಪನಿಗೆ ತಕ್ಕ ಮಗಳಾಗಿ ಈಗ ಇಬ್ಬರು ಮಕ್ಕಳೂ ಇಂಜಿನೀಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ  ದೊಡ್ಡ ಮಟ್ಟದ ಸಂಬಳ ಪಡೆಯುತ್ತಿದ್ದು, ದೊಡ್ಡ ಮಗಳಿಗೆ ಮದುವೆಯಾಗಿ ಸುಂದರವಾದ ಮಗುವಿದ್ದರೆ, ಚಿಕ್ಕ ಮಗಳೂ ಸಹಾ  ಸದ್ಯದಲ್ಲಿ ಹಸೆಮಣೆ ಏರಲಿದ್ದಾರೆ.

ಕಳೆದ 15 ವರ್ಷಗಳಿಂದ ಡಾ. ರಾಜ್‌ಕುಮಾರ್ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದಲ್ಲದೇ, ಬೇಲೂರು ವೈ.ಡಿ.ಡಿ. ಪ್ರಥಮ ದರ್ಜೆ ಕಾಲೇಜಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ನಂತರ  ಬೇಲೂರು ಪುರಸಭೆಯ ನಾಮನಿರ್ದೇಶಿತ  ಸದಸ್ಯರಾಗಿ, ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ ನಿರ್ದೆಶಕರಾಗಿ, ವರ್ತಕರ ಸಂಘದ ಕಾರ್ಯದರ್ಶಿಯಾಗಿ, ಪ್ರಸನ್ನ ಗಣಪತಿ ಸೇವಾ ಸಮಿತಿಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಆನಂತರ ಅಧ್ಯಕ್ಷರಾಗಿ ಸತತ 30 ವರ್ಷ ಸೇವೆ, ಕಾರು ಮಾಲೀಕರ ಸಂಘದ ಅಧ್ಯಕ್ಷರಾಗಿದ್ದರು ಹೀಗೆ ಆಡು ಮುಟ್ಟದ ಸೊಪ್ಪಿಲ್ಲಾ ರವಿಯವರು ಕೆಲಸ ಮಾಡದ ಸಂಘಟನೆ ಇಲ್ಲಾ ಎಂಬತಾಗಿದೆ.

ಇಷ್ಟೇ  ಅಲ್ಲದೇ, ಜನಮಿತ್ರ, ಸಂಜೆವಾಣಿ, ಪೋಲೀಸ್ ನ್ಯೂಸ್, ಈ ಸಂಜೆ ಪತ್ರಿಕೆಯ ಸ್ಥಳೀಯ ವರದಿಗಾರನಾಗಿ ಸತತ 16 ವರ್ಷಗಳ ಕಾಲ  ಪತ್ರಕರ್ತರಾಗಿ  ಸೇವೆ ಸಲ್ಲಿಸುತ್ತಿರುವುದಲ್ಲದೇ, ಪ್ರಸ್ತುತ ಕಾರ್ಯನಿರತ ಪತ್ರಕರ್ತರ ತಾಲ್ಲೂಕು ಸಂಘದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದಲ್ಲದೇ, ವಿದ್ಯಾರ್ಥಿಪರ ಹಲವಾರು ಪ್ರತಿಭಟನೆ, ರೈತರ ಪರವಾಗಿ ಪ್ರತಿಭಟನೆ, ಊರಿನ ಕುಂದು ಕೊರೆತೆಯ  ಸಲುವಾಗಿ ಪ್ರತಿಭಟನೆ, ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಆಸ್ತಿ  ಉಳಿವಿಗಾಗಿ  ಪ್ರತಿಭಟನೆ ಹೀಗೆ  ನೂರಾರು  ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಜನಮೆಚ್ಚುಗೆ ಪಡೆದಿದ್ದಾರೆ.

ಇನ್ನು ಹಳೆ ತಹಸೀಲ್ದಾರ್ ಕಛೇರಿ ಮುಂಭಾಗದಲ್ಲಿ ಪ್ರಥಮ ಬಾರಿಗೆ 60 ಅಡಿ ಎತ್ತರದ ಕನ್ನಡ ಧ್ವಜಸ್ಥಂಭ ನಿರ್ಮಿಸಿದ ನಂತರವಂತೂ ತೀರ್ಥಂಕರ ಖ್ಯಾತಿ ಮತ್ತಷ್ಟು ಹೆಚ್ಚಾಯಿತು.  ಇನ್ನು ಡಾ. ರಾಜ್ ಅವರ ಹುಟ್ಟು ಹಬ್ಬದಂದು ಸಾರ್ವಜನಿಕರಿಗೆ ಮತ್ತು ಯಾತ್ರಾರ್ಥಿಗಳಿಗೆ ಧಾನಿಗಳ ನೆರವಿನೊಂದಿಗೆ ಉಪಹಾರ ವ್ಯವಸ್ಥೆ ಕಲ್ಪಿಸಿರುವುದಲ್ಲದೇ, ಇದುವರೆಗೆ 52 ಬಾರಿ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿರುವುದಲ್ಲದೇ, ತಮ್ಮ ಮರಣಾ ನಂತರ ಅವರ ಪಾರ್ಥೀವ ಶರೀರವನ್ನು ಧರ್ಮಸ್ಥಳ ಆಯುರ್ವೆದಿಕ್ ಆಸ್ಪತ್ರೆಗೆ  ಕುಟುಂಬದವರ ಮನವೊಲಿಸಿ ದಾನ ಮಾಡಲು ನಿರ್ಧರಿಸಿದ್ದಾರೆ. 

ಇವೆಲ್ಲವನ್ನು ಬಹುತೇಕ ಕನ್ನಡ ಪರ ಹೋರಾಟಗಾರು ಮಾಡುತ್ತಿರುವಾಗ ತೀರ್ಥಂಕರ  ಅವರದ್ದೇನು ವಿಶೇಷ? ಎಂದರೆ  ಅದುವೇ ಅವರ ಅಪ್ಪಟ ಕನ್ನಡ ಪ್ರೇಮ. ಕನ್ನಡ ರಾಜ್ಯೋತ್ಸವವನ್ನು ಸ್ವಾಗತಿಸಲು ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳು ಒಂದೊಂದು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನಡೆಸಿದರೆ ತೀರ್ಧಂಕರ ಅವರು ಕಳೆದ ಎಂಟು ವರ್ಷಗಳಿಂದ ನವೆಂಬರ್ ಮತ್ತು ಡಿಸೆಂಬರ್ ಹೀಗೆ ಎರಡು  ತಿಂಗಳುಗಳ ಕಾಲ ಅವರು ತಮ್ಮ ಅಂಗಡಿಯಲ್ಲಿ ಮಾರಾಟ ಮಾಡುವ  ಕನ್ನಡ ಧ್ವಜ, ಕೃಷಿ ಹಾಗೂ ಗೃಹೋಪಯೋಗಿ ವಸ್ತುಗಳಲ್ಲದೇ ಪ್ರತಿ ವಸ್ತುವಿನ ಬಣ್ಣವೂ ಕನ್ನಡದ ಧ್ವಜವಾದ ಕೆಂಪು ಹಾಗೂ ಹಳದಿ ಬಣ್ಣದ್ದಾಗಿರುವುದೇ ಬಹಳ ವಿಶೇಷವಾಗಿದೆ.

ಇದಕ್ಕಾಗಿ ಮೂರು ತಿಂಗಳುಗಳ  ಮುಂಚೆಯೇ 5-6 ಲಕ್ಷಗಳ ಸಾಮಾಗ್ರಿಗಳನ್ನು ಪ್ರತಿಯೊಂದು ಕಾರ್ಖಾನೆಗಳೊಂದಿಗೆ ವ್ಯವಹರಿಸಿ ಅವರಿಗಾಗಿ ವಿಶೇಷವಾಗಿ ಹಳದಿ ಮತ್ತು ಕೆಂಪುಬಣ್ಣದ ಸಾಮಾಗ್ರಿಗಳನ್ನೇ ತಯಾರಿಸಿಕೊಡಲು ತಿಳಿಸುತ್ತಾರೆ. ಈ ದಿನಬಳಕೆಯ ವಸ್ತುಗಳನ್ನು ಆ ಎರಡೂ ತಿಂಗಳು ತಮ್ಮ ಗ್ರಾಹಕರಿಗೆ ಶೇ 20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಕನ್ನಡದ ಮೇಲಿನ ಪ್ರೇಮವನ್ನು ಸಾರುತ್ತಿದ್ದಾರೆ. ಹೀಗೆ ಹಳದಿ ಮತ್ತು ಕೆಂಪು ಬಣ್ಣದ ಮೇಲಿನ ಪ್ರೀತಿ ಏಕೆ? ಎಂದು ಕೇಳಿದಾಗ, ಹಳದಿ ಮತ್ತು ಕೆಂಪು ಬಣ್ಣ ನಮ್ಮ ಅರಿಶಿನ ಮತ್ತು ಕುಂಕುಮದ ಪ್ರತೀಕವಾಗಿದ್ದು ಅವು ನಮ್ಮ ಶ್ರದ್ದೇಯ ತಾಯಂದಿರ ಸೌಭಾಗ್ಯವತಿಯ ಸಂಕೇತವಾಗಿದ್ದು, ನಾವು ಹೇಗೆ ನಮ್ಮ ಹೆತ್ತ ತಾಯಿಗೆ ಗೌರವ ನೀಡುತ್ತೇವೆಯೋ ಅದೇ ರೀತಿಯಾಗಿ ನಮ್ಮ ಹೊತ್ತ ತಾಯಿಗೂ ಗೌರವ ನೀಡಲೆಂದೇ ಈ ರೀತಿಯ ಆಚರಣೆಯನ್ನು ರೂಢಿಗೆ ತಂದೆ ಎಂದು ಹೇಳುವಾಗ  ಅವರಲ್ಲಿ ಹೆಮ್ಮೆ ಮತ್ತು ಒಂದು ರೀತಿಯ ಧನ್ಯತಾ ಭಾವನೆ ಮೂಡುತ್ತದೆ. ಇವರ ಕನ್ನಡ ಪ್ರೇಮಕ್ಕೆ ಬೇಲೂರಿನ ಜನರೂ ಮತ್ತು ಯಾತ್ರಾರ್ತಿಗಳೂ ಸಹಾ ತುಂಬು ಹೃದಯದಿಂದ ಸ್ಪಂದಿಸಿ ಅವರಲ್ಲಿದ್ದ ಕೆಂಪು ಮತ್ತು ಹಳದೀ ಬಣ್ಣದ  ಶೇ 70-80 ರಷ್ಟು ವಸ್ತುಗಳನ್ನು ಖರೀದಿಸುವ ಮೂಲಕ ಬೆಂಬಲ ಸೂಚಿಸುತ್ತಿರುವುದೂ ಸಹಾ ಅಭಿನಂದನಾರ್ಹವಾಗಿದೆ.

ಇವರ ಕನ್ನಡ ಮತ್ತು ಜನಪರ ಹೋರಾಟಗಳು, ಸೇವಾ ಕಾರ್ಯಗಳನ್ನು ಗುರುತಿಸಿ ವರ್ತಕರ ಸಂಘ, ದೇವಾಂಗ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದು ಅವುಗಳಲ್ಲಿ ಪ್ರಮುಖವಾಗಿ

  • 2015 ರಲ್ಲಿ ಸಮಾಜ ಸೇವೆಗಾಗಿ ಗಣರಾಜ್ಯೋತ್ಸವ ಪ್ರಶಸ್ತಿ
  • 2017 ರಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  • 2022ರಲ್ಲಿ  ಜನಪರ ಕಾಳಜಿ ಸೇವಾ ಕಾರ್ಯಗಳ ಗುರುತಿಸಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಸಂಸ್ಥೆಯ ಪ್ರಶಸ್ತಿ
  • ಇವರ ಕನ್ನಡ ಪ್ರೇಮವನ್ನು ಗುರುತಿಸಿ  ಸ್ಥಳೀಯ ಪತ್ರಿಕೆಗಳು ಇವರಿಗೆ ಬೇಲೂರು ವಾಟಾಳ್ ಮತ್ತು ಜನ ಮೆಚ್ಚಿದ ಮಗ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.

ಹೀಗೆ ಕನ್ನಡ ನಾಡು, ನುಡಿ, ನೆಲ, ಜಲದ ಸಂರಕ್ಷಣೆಯ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದಲ್ಲದೇ, ಕನ್ನಡ ರಾಜ್ಯೋತ್ಸವವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಬಹಳ ವೈಶಿಷ್ಟ್ಯಪೂರ್ಣವಾಗಿ ತಮ್ಮ ಇಡೀ ಅಂಗಡಿ ಮತ್ತು ಅಂಗಡಿಯ ವಸ್ತುಗಳನ್ನು ಕನ್ನಡದ ಬಾವುಟದ ರೂಪದ ಕೆಂಪು ಮತ್ತು ಹಳದಿ ಜೋಡಿಸುವ ಮೂಲಕ ಜನಾಕರ್ಷಣೆಗೆ ಪಾತ್ರರಾಗಿರುವುದಲ್ಲದೇ. ತನ್ಮೂಲಕ  ಕನ್ನಡ ಪರ ಪ್ರೇಮದ ಕುರಿತಾಗಿ ಎಲ್ಲರಿಗೂ ಅರಿವು ಮೂಡಿಸುವಂತಹ ಶ್ಲಾಘನೀಯವಾದ ಕಾಯಕದಲ್ಲಿ ತೊಡಗಿರುವ ಶ್ರೀ ತೀರ್ಥಂಕರ(ರವಿ) ಅವರು ನಿಸ್ಸಂದೇಹವಾಗಿ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a comment