ಪ್ರಾಚೀನ ವಸ್ತುಗಳ ಸಂಗ್ರಹಕಾರ, ಕೆ. ಟಿ. ಹನುಮಂತ‌ರಾಜು

ಚರಿತ್ರೆಯನ್ನು ಅರಿಯದವರು ಚರಿತ್ರೆಯನ್ನು ನಿರ್ಮಿಸಲಾರರು ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರ  ಪ್ರಸಿದ್ಧ ಹೇಳಿಕೆಗಳಲ್ಲಿ ಒಂದಾಗಿದೆ. ಇದರರ್ಥ ಗತಕಾಲದ ಘಟನೆಗಳು ಮತ್ತು ಪಾಠಗಳನ್ನು ತಿಳಿದುಕೊಳ್ಳದ ವ್ಯಕ್ತಿಗಳು ಭವಿಷ್ಯದ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಗತಕಾಲದ ಅನುಭವಗಳು ಮತ್ತು ತಿಳುವಳಿಕೆಗಳು ಭವಿಷ್ಯದ ನಿರ್ಧಾರಗಳಿಗೆ ಮಾರ್ಗದರ್ಶನ ನೀಡುತ್ತವೆ. ಗತ ಕಾಲದ ಇತಿಹಾಸವನ್ನು ತಿಳಿಯಲು  ಅಂದಿನ ಕಾಲದವರು ಬಳಸುತ್ತಿದ್ದ ಗೃಹೋಪಯೋಗಿ ವಸ್ತುಗಳು, ಆಯುಧಗಳು ನಾಣ್ಯಗಳು  ಇತ್ತೀಚಿನ ಕಾಲದ ಅಂಚೆ ಚೀಟಿಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾಣ್ಯಗಳನ್ನು ಟಂಕಿಸುವ ಮುನ್ನವೇ ಬಳಸುತ್ತಿದ್ದ ಲೋಹದ ತುಂಡುಗಳು, ವಿಜಯನಗರ ಸಾಮ್ರಾಜ್ಯದ ನಾಣಗಳಿಂದ ಹಿಡಿದು ಪ್ರಸ್ತುತ ಚಲಾವಣೆಯಲ್ಲಿರುವ ನಾಣ್ಯಗಳನ್ನು  ಸಂಗ್ರಹಿಸಿರುವ ದೊಡ್ಡಬಳ್ಳಾಪುರದ ಕೃಷಿಕರು ಮತ್ತು ಕಾರ್ ಡ್ರೈವರ್ ಆಗಿರುವ ಶ್ರೀ ಕೆ. ಟಿ. ಹನುಮಂತರಾಜು  ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಹಳೆಯ ನಾಣ್ಯಗಳ ಸಂಗ್ರಹಣೆಯು (Numismatics) ಒಂದು ಜನಪ್ರಿಯ ಹವ್ಯಾಸವಾಗಿದ್ದು, ವಿತ್ತೀಯ ಮೌಲ್ಯದ ನಾಣ್ಯಗಳನ್ನು ಸಂಗ್ರಹಿಸುವುದು, ವ್ಯಾಪಾರ ಮಾಡುವುದು ಮತ್ತು ಅಧ್ಯಯನ ಮಾಡುವುದನ್ನು ಒಳಗೊಂಡಿದೆ. ಇದರ ಮೂಲಕ ಹಣವು ಕಾಲಾ ನಂತರದಲ್ಲಿ ಹೇಗೆ ಬದಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಲ್ಲದೇ ಅಂದಿನ ಕಾಲದ ಆರ್ಥಿಕ ಪರಿಸ್ಥಿತಿ ತಾಂತ್ರಿಕ ಕೌಶಲ್ಯಗಳನ್ನೂ ಪರೋಕ್ಷವಾಗಿ ಎತ್ತಿ ಹಿಡಿಯುತ್ತದೆ. ಚಿನ್ನ, ಬೆಳ್ಳಿ ಮತ್ತು ತಾಮ್ರಗಳಿಂದ ಮಾಡಿದ ನಾಣ್ಯಗಳು ಆ ರಾಜ್ಯದ ಸಿರಿಸಂಪತ್ತನ್ನು  ಎತ್ತಿ ಹಿಡಿದರೆ ಚರ್ಮದಿಂದ ಮಾಡಿದ್ದ ನಾಣ್ಯಗಳು ಆ ದೇಶದ ಆರ್ಥಿಕ ದೌರ್ಬಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿರುತ್ತದೆ.

ರೇಷ್ಮೇ ನಾಡು ದೊಡ್ಡಬಳ್ಳಾಪುರ ಬಳಿಯ ಕಾಡನೂರು ಗ್ರಾಮದ  ಕೃಷಿಕರಾದ ಶ್ರೀ ತಿಮ್ಮೇಗೌಡ ಮತ್ತು ಶ್ರೀಮತಿ ಕರಗಮ್ಮ ದಂಪತಿಗಳಿಗೆ 24 ಜುಲೈ 1975ರಲ್ಲಿ ಜನಿಸಿದ ಮುದ್ದಾದ ಮಗುವಿಗೆ ತಮ್ಮ ಮನೆದೇವರು ಆಂಜನೇಯನ ನೆನಪಿನಾರ್ಥ ಹನುಮಂತ ರಾಜು ಎಂದು ನಾಮಕರಣ ಮಾಡುತ್ತಾರೆ. ಬಹುಶಃ ಆ ಹೆಸರು ಇಡುವಾಗ ಅವರ ಮಗ ಆಂಜನೇಯನಷ್ಟು ಎತ್ತರಕ್ಕೆ ಬೆಳೆದು ರಾಜನಂತೆ ಮೆರೆಯಲಿ ಎಂಬ ಆಸೆ ಇದ್ದಿರಬಹುದು.  ರಾಜನಂತೆ ಎತ್ತರಕ್ಕೆ ಬೆಳೆಯಲು ಕೇವಲ  ಆರ್ಥಿಕವಾಗಿ ಸಧೃಢರಾಗಿ ಇರಬೇಕು ಎಂದೇನಿಲ್ಲಾ, ತಮ್ಮ  ಸಣ್ಣ ಪುಟ್ಟ ಸಾಧನೆಗಳ ಮೂಲಕವೂ ಪ್ರಖ್ಯಾತಿಯನ್ನು ಪಡೆದು ದೊಡ್ಡ ಮಟ್ಟಕ್ಕೆ ಬೆಳೆಯಬಹುದು ಎನ್ನುವುದಕ್ಕೆ ಕೆ. ಟಿ. ಹನುಮಂತ ರಾಜು ಅವರೇ ಜ್ವಲಂತ ಉದಾಹರಣೆಯಾಗಿದ್ದಾರೆ.

ಬಹುಶಃ ಜೀವನದಲ್ಲಿ ಹವ್ಯಾಸಗಳು ಇಲ್ಲದೇ ಇರುವ ವ್ಯಕ್ತಿಗಳೇ ಇಲ್ಲಾ ಎಂದರೂ ತಪ್ಪಾಗದು. ಕೆಲವರಿಗೆ ಓದು/ಬರೆಯುವುದು, ಇನ್ನು ಕೆಲವರಿಗೆ ಚಾರಣ ಮಾಡುವುದು, ಇತಿಹಾಸ/ಪುರಾಣ ಪ್ರಸಿದ್ಧ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿಸುವುದು ಹೀಗೆ ನಾನಾ ರೀತಿಯ ಹವ್ಯಾಸಗಳು ಇರುತ್ತವೆ. ಅದೇ ರೀತಿ ಹನುಮಂತರಾಜು ಅವರೂ ಸಹಾ ಸಣ್ಣ ವಯಸ್ಸಿನಿಂದಲೇ ತಮ್ಮ ಗೆಳೆಯರೊಂದಿಗೆ ಸೇರಿಕೊಂಡು  ಅಂಚೆ ಚೀಟಿಗಳು ಮತ್ತು ಹಳೆಯ ನಾಣ್ಯಗಳ ಸಂಗ್ರಹಣೆ ಮಾಡುವ ಹವ್ಯಾಸಗಳನ್ನು ರೂಡಿಸಿಕೊಂಡರು. ಮನೆಯಲ್ಲಿನ ಆರ್ಥಿಕ ಪರಿಸ್ಥಿತಿಯಿಂದಾಗಿ  10ನೇ ತರಗತಿ ಆದ ನಂತರ ಓದು ಮುಂದುವರೆಸಲಾಗಲಿಲ್ಲ.

ಜೀವನೋಪಾಯಕ್ಕಾಗಿ ತಮ್ಮ ಪಿತ್ರಾರ್ಜಿತ ಕೃಷಿ ಭೂಮಿಯಲ್ಲಿ ಕೃಷಿಕರಾಗಿ ನಂತರ ಲಾರಿ ಕ್ಲೀನರ್ ಆಗಿ ಉದ್ಯೋಗ ಆರಂಭಿಸಿದ ಹನುಮಂತ ರಾಜುವರಿಗೆ ಜ್ಞಾನ ಸಂಪಾದನೆಗಾಗಿ ದಿನ/ವಾರ/ಮಾಸ ಪತ್ರಿಕೆಗಳನ್ನು ಓದುವ ಹವ್ಯಾಸವಿದ್ದು, ಅದೊಮ್ಮೆ ಪತ್ರಕೆಯೊಂದರಲ್ಲಿ  ನಾಣ್ಯಗಳ ಕುರಿತಾಗಿ ಪ್ರಕಟವಾಗಿದ್ದ ಮಾಹಿತಿ ಆಧರಿಸಿ, ಪ್ರಾಚ್ಯ ವಸ್ತು ಸಂಗ್ರಹಗಳಿಗೂ ಮನ್ನಣೆ ಇದೆ ಎಂಬುದನ್ನು ಅರಿತು  ಹೆಚ್ಚು ಹೆಚ್ಚು  ನಾಣ್ಯಗಳು, ಅಂಚೇ ಚೀಟಿಗಳು ಮತ್ತು ಹಳೆಯ ಕಾಲದ ವಸ್ತುಗಳು, ಮಾಹಿತಿಗಳ ಜೊತೆ ತಮ್ಮ ಸುತ್ತಮುತ್ತಲಿನ ಗ್ರಾಮೀಣ ಮತ್ತು ಕೃಷಿ ಸಂಸ್ಕೃತಿಗೆ ಸಂಬಂಧಪಟ್ಟ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಮಾತ್ರಾ ನಿಲ್ಲಿಸದೇ ಮುಂದುವರೆಸುತ್ತಲೇ ಹೋದ ಅವರ ಆ ಪ್ರವೃತ್ತಿ ಈಗ ವೃತಿಯಾಗಿ ಮಾರ್ಪಟ್ಟಿದೆ.

ಯಾರ ಬಳಿಯಲ್ಲಾದರೂ ಅಪರೂಪದ ವಸ್ತುಗಳಿವೆ ಎಂದು ತಿಳಿಯುತ್ತಿದ್ದಂತೆಯೇ ಅವರ ಬಳಿಗೆ ಹೋಗಿ ಅದನ್ನು ತಮ್ಮ ಸಂಗ್ರಹಕ್ಕೆ ಸೇರಿಸದೇ ಹೋದಲ್ಲಿ ಹನುಮಂತರಾಜು ಅವರಿಗೆ ನಿದ್ದೇಯೇ ಬಾರದು.  ಇದಕ್ಕಾಗಿ ಅವರು ಅದೆಷ್ಟೋ ಕಿಮೀ ದೂರವನ್ನು ಕ್ರಮಿಸಿದ್ದಾರೆ ಮತ್ತು ಅದೆಷ್ಟೋ ಹಣವನ್ನು ಖರ್ಚು ಮಾಡಿದ್ದಾರೆ. ಆರಂಭದಲ್ಲಿ  ಅವರ ಕುಟುಂಬಕ್ಕೆ ನಾಣ್ಯಗಳ ಸಂಗ್ರಹದ ಬಗ್ಗೆ ಅರಿವಿಲ್ಲದಿದ್ದ ಕಾರಣ, ಏ ಇದರಿಂದೇನು ಹೊಟ್ಟೆ ತುಂಬುತ್ತಾ!! ಸುಮ್ಮನೇ ಹಣ ಖರ್ಚು ಮಾಡಬೇಡ ಎಂದು ಗದರಿಸಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ತಮ್ಮ ಕಾಯಕವನ್ನು ಮುಂದುವರೆಸಿದ ಹನುಮಂತರಾಜು ಅವರ ಸಾಧನೆಯನ್ನು ಗಮನಿಸಿ ಒಬ್ಬೊಬ್ಬರೇ  ಅವರನ್ನು ಅಭಿನಂದಿಸುವುದಕ್ಕೆ ಮುಂದಾದಾಗ ಸಂತಸಗೊಂಡ ಅವರ ಕುಟುಂಬ ರಾಜು ಅವರ ಹವ್ಯಾಸಕ್ಕೆ ಈಗ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ.

ಆನಂತರದ ದಿನಗಳಲ್ಲಿ ಕಾರು ಚಾಲನೆಯನ್ನು ಆರಂಭಿಸಿದ ಹನುಮಂತರಾಜು ಕೆಲಸದ ಮೇಲೆ ಊರಿಂದೂರಿಗೆ ಪ್ರಯಾಣಿಸಬೇಕಾದ ಅನಿವಾರ್ಯ ಸಂಧರ್ಭ ಒದಗಿ ಬಂದಾಗ ಅದು ಶಾಪವಾಗದೇ ರೋಗಿ ಬಯಸಿದ್ದೂ ಹಾಲು  ಅನ್ನಾ ವೈದ್ಯ ಹೇಳಿದ್ದೂ ಹಾಲು ಅನ್ನಾ ಎನ್ನುವಂತೆ ವರವಾಗಿ ಪರಿಣಮಿಸಿತು.  ಕಾರು ಚಾಲಕರಾಗಿ ಹೊರ ಊರುಗಳಿಗೆ ಹೋದಾಗ ಬಿಡುವ ಸಿಕ್ಕಾಗಲೆಲ್ಲಾ ಅಲ್ಲಿನ ವೈಶಿಷ್ಟ್ಯತೆಗಳನ್ನು ಗುರುತಿಸಿ ಅವುಗಳನ್ನು ಸಂಗ್ರಹಿಸುತ್ತಲೇ ಹೋದ ರಾಜು ಅವರ ಬಳಿ ಈಗ  ನಾಣ್ಯಗಳ ತಯಾರಿಕೆಗೂ ಪೂರ್ವದಲ್ಲಿ ಲೋಹದ ಚೂರಿನ ಮೇಲೆ ಮುದ್ರೆಗಳನ್ನು ಒಪ್ಪಿ ತಯಾರಿಸಿದ ಮುದ್ರಾಂಕಿತ ನಾಣ್ಯಗಳಲ್ಲದೇ, ವಿಜಯನಗರ ಸಾಮ್ರಾಜ್ಯ ಕಾಲದಲ್ಲಿದ್ದ ಸಾಸಿವೆ ಕಾಳಿಗಿಂತ ಚಿಕ್ಕದಾದ ಬಂಗಾರದ ಬೇಳ ನಾಣ್ಯ, ಕದಂಬರು, ತಲಕಾಡಿನ ಗಂಗರು, ವಿಜಯನಗರ ಅರಸರು, ಹೊಯ್ಸಳರು ಹಾಗೂ ಕೆಳದಿಯ ಅರಸರ ಆಳ್ವಿಕೆಯಲ್ಲಿ ಚಲಾವಣೆಗೆ ಬಂದಂತಹ ನಾಣ್ಯಗಳನ್ನು ನೋಡಲು ಎರಡು ಕಣ್ಗಳು ಸಾಲದು.

ವಿಶ್ವದ ಅತ್ಯಂತ ದೊಡ್ಡ ನೋಟಾಗಿರುವ ಥಾಯ್ಲೆಂಡ್ ಕರೆನ್ಸಿ ಸಹ ಇವರ ಬಳಿಯಲ್ಲಿದೆ. 135ಕ್ಕೂ ಅಧಿಕ ದೇಶದ ನಾಣ್ಯ ಹಾಗೂ ನೋಟುಗಳನ್ನೂ  ಸಹಾ  ಸಂಗ್ರಹಿಸಿದ್ದಾರೆ. ಪಾರ್ಲಿಮೆಂಟ್ ಚಿತ್ತವಿರುವ 50 ಪೈಸೆಯಲ್ಲಿ ಪಾರ್ಲಿಮೆಂಟ್ ಚಿತ್ರವಿರುವ ಸುಮಾರು 50,000 ನಾಣ್ಯಗಳನ್ನು ಸಂಗ್ರಹಿಸಿ ದಾಖಲೆಯನ್ನೂ ನಿರ್ಮಿಸಿದ್ದಾರೆ.  ಭಾರತಕ್ಕೆ ಸ್ವಾತಂತ್ರ್ಯ ದೊರಕಿದ  ದಿನ, ಗಣರಾಜ್ಯೋತ್ಸವ ಆದ ದಿನ, ಮೈಸೂರು ರಾಜ್ಯ ಕರ್ನಾಟಕವಾದ ದಿನ ಹೀಗೆ ನಮ್ಮ ನಾಡಿನ ಪ್ರಮುಖ ಸಂಧರ್ಭಗಳ ದಿನದ ಪೇಪರ್ ಕಟಿಂಗ್ಸ್ ಸಹಾ ಅವರ ಸಂಗ್ರಹದಲ್ಲಿದೆ.

ಅವರ ಬಳಿ ಅಮೇರಿಕಾದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳಲ್ಲದೇ, ಸ್ವತಂತ್ರ ಪೂರ್ವ ಬ್ರಿಟೀಷರ ಕಾಲದಲ್ಲಿ ಕನ್ನಡದ ಅಕ್ಷರಗಳಿರುವ ಅಂಚೆ ಚೀಟಿಗಳು ಮತ್ತು ನಾಣ್ಯಗಳಲ್ಲದೇ,  ಪರಿಮಳ ಬೀರುವ ಅಂಚೆ ಚೀಟಿಗಳು, ತ್ರೀಡಿ ಚೀಟಿಗಳು, ಪ್ಲಾಸ್ಟಿಕ್ ಮೆಟಲ್, ಟಾಕಿಂಗ್ ಅಂಚೆ ಚೀಟಿಗಳು, ಸೀಡಿ ಸ್ಟಾಂಪ್ಸ್, ಸಿಲ್ಕ್ ಮತ್ತು ಬಟ್ಟೆಯಿಂದ ತಯಾರಿಸಿದ ಅಂಚೆ ಚೀಟಿಗಷ್ಟೆ ಅಲ್ಲದೇ,1960ರಿಂದ ಇಲ್ಲಿವರೆಗಿನ ಪೋಸ್ಟ್ ಕಾರ್ಡ್‌ಗಳ ಸಂಗ್ರಹವೂ ಅವರ ಬಳಿ ಇದೆ.  ಮೈಸೂರು ಮಹಾರಾಜರ ಕಾಲದಿಂದ ಇಲ್ಲಿವರೆಗಿನ ಛಾಪಾ ಕಾಗದಗಳು, ವಿವಿಧ  ಕಾಲಘಟ್ಟದ ಬಗೆ ಬಗೆಯ ಗಡಿಯಾರಗಳು, 30-40 ವರ್ಷದ ಹಿಂದಿನ ಗ್ರೀಟಿಂಗ್ ಕಾರ್ಡ್‌ಗಳು, ಸುಮಾರು 150 ಮಾದರಿಯ ವಿವಿಧ ರೀತಿಯ ಪೆನ್ನುಗಳೂ, ಹಳೆಯ ಕಾಲದ ಬ್ಲಾಕ್ & ವೈಟ್  ಕ್ಯಾಮೆರಾಗಳಿಂದ ಹಿಡಿದು ಇಂದಿನ ಆಧುನಿಕ ಕ್ಯಾಮೆರಾಗಳು, ಬಗೆ ಬಗೆಯ ಬೈನಾ ಕ್ಯುಲರ್ ಅಲ್ಲದೇ,  1970ರಿಂದ ಇಂದಿನ ವರೆಗೆ ಮನೆ ಬಳಕೆ ಮಾಡುವ ಪಾತ್ರೆಗಳಿದ್ದು ಅವುಗಳಲ್ಲಿ ಎಲೆ ಅಡಿಕೆ ಕುಟ್ಟುವ ಕುಟಾಣಿ, ವಿವಿಧ ರೀತಿಯ ಒತ್ತು ಶ್ಯಾವಿಗೆಯ ಒರಳುಗಳಲ್ಲದೇ  ಅನೇಕ ಹಳೆಯ  ವಾದ್ಯಗಳೂ ಸಹಾ ಅವರ  ಸಂಗ್ರಹದಲ್ಲಿವೆ.

ಪ್ರಾಚ್ಯ ವಸ್ತುಗಳನ್ನು ಕೇವಲ ಸಂಗ್ರಹಿಡುದಷ್ಟೇ ಅಲ್ಲದೇ ಅವುಗಳನ್ನು ಹೇಗೆ  ಎಲ್ಲರಿಗೂ ಮೆಚ್ಚುವ ಹಾಗೆ ಪ್ರಸ್ತುತ ಪಡಿಸಬೇಕು  ಎಂಬ ಕಲೆಯನ್ನೂ ಕರಗತ ಮಾಡಿಕೊಂಡಿರುವ ಹನುಮಂತರಾಜು ಅವರು ಅವೆಲ್ಲವುದರ ಜೊತೆ ಸ್ವಲ್ಪ ಮಾಹಿತಿಯೊಂದಿಗೆ ಬಹಳ ನಾಜೂಕಿನಿಂದ ಲ್ಯಾಮಿನೇಷನ್ ಮಾಡಿಸಿ ಯಾರು ಮುಟ್ಟಿದರೂ ಹಾಳಾಗದ ರೀತಿಯಲ್ಲಿ ಸಂಗ್ರಹಿಸಿದ್ದು,  ಯಾವುದೇ ಶಾಲಾ ಕಾಲೇಜುಗಳು, ವಸ್ತು ಪ್ರದರ್ಶನಗಳು, ಗಣೇಶ ಮತ್ತು ರಾಜ್ಯೋತ್ಸವ ಮುಂತಾದ ಸಭೆ ಸಮಾರಂಭಗಳಿಗೆ ಕರೆದರೂ ಬಹಳ ಸಂತೋಷದಿಂದ ತಮ್ಮ ಸಂಗ್ರಹವನ್ನು ಪ್ರದರ್ಶನ ಮಾಡಿ ಬಹಳ  ಸರಳ ಸಜ್ಜನಿಕೆಯಿಂದ ನೇರ ನಡೆನುಡಿಗಳಿಂದ ಎಲ್ಲರೊಡನೆ ವಿಶಾಲ ಮನೋಭಾವನೆಯಿಂದ ಬೆರೆತು  ಪ್ರತಿಯೊಂದು ನಾಣ್ಯಗಳು, ಅಂಚೇ ಚೀಟಿಗಳು ಅಥಾವ ಇತರೇ ವಸ್ತುಗಳ ಬಗ್ಗೆ ತಮಗೆ ತಿಳಿದಿರುವಷ್ಟು ಮಾಹಿತಿಗಳನ್ನು ತಿಳಿದುವ ಮೂಲಕ  ಇಂತಹ ಅಪರೂಪದ ಹವ್ಯಾಸಕ್ಕೆ ಎಲ್ಲರೂ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತಿದ್ದಾರೆ

ಕೇವಲ ಪ್ರದರ್ಶನ ನೀಡರೆ ಸಾಲದು. ಸದಾಕಾಲವೂ ಹೊಸಾ ಹೊಸಾ ರೀತಿಯಲ್ಲಿ ಪ್ರಸ್ತುತ ಪಡಿಸಬೇಕು ಎಂಬ ಆಭಿಲಾಶೆಯಿಂದ ಇತ್ತೀಚೆಗೆ ಅವರು ವಿವಿಧ  ಮಠಾಧೀಶರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಕನ್ನಡ ನಾಡಿನ ಗಣ್ಯ ವ್ಯಕ್ತಿಗಳನ್ನು ಭೇಟಿ  ಮಾಡಿ ಅವರ ಜನ್ಮ ದಿನಾಂಕಕ್ಕೆ ಸರಿ ಹೊಂದುವ ಸಂಖ್ಯೆ ರೂಪಾಯಿ ನೋಟುಗಳನ್ನು ಸಂಗ್ರಹಿಸಿ ಅವರುಗಳಿಗೆ ನೀಡಿ ಅವರಿಂದ ಹಸ್ತಾಕ್ಷರ ಸಂಗ್ರಹ ಮಾಡುವ ಸಾಹಸಕ್ಕೆ ಮುಂದಾಗಿದ್ದಾರೆ.

ಇದಷ್ಟೇ ಅಲ್ಲದೇ  ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಸಮ್ಮೇಳನಗಳಿಗೆ ಸಂಬಂಧಿಸಿದಂತೆ ಸಮ್ಮೇಳನಗಳ ನಡೆದ ದಿನಾಂಕಕ್ಕೆ ಸರಿ ಹೊಂದುವ ರೂಪಾಯಿ ನೋಟುಗಳನ್ನು ಸಂಗ್ರಹಿಸಿ ಸಮ್ಮೇಳನದ ಮುಖ್ಯಸ್ಥರಿಗೆ ನೀಡಿ ಅವರಿಂದಲೂ ಹಸಾಕ್ಷರವನ್ನು ಸಂಗ್ರಹಣೆ ಮಾಡಿರುವುದಲ್ಲದೇ, ಇದೇ ರೀತಿಯಾಗಿ ವಿಭಿನ್ನವಾಗಿ  ಇತರೇ ನೋಟುಗಳ ಚಟುವಟಿಕೆಯನ್ನು ಪ್ರಾರಂಭಿಸುವ ಬಯಕೆಯನ್ನು ಹೊಂದಿದ್ದಾರೆ.

ಈ ರೀತಿಯಾಗಿ ಹಳೆಯ ನಾಣ್ಯಗಳು, ಅಂಚೆ ಚೀಟಿಗಳು, ಪ್ರಾಚ್ಯ ವಸ್ತುಗಳ ಸಂಗ್ರಹಣೆ ಮತ್ತು ಪ್ರದರ್ಶನಗಳನ್ನು ಮೆಚ್ಚಿ ಅನೇಕ ಸಂಘಸಂಸ್ಥೆಗಳು ಅವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದು, ಅವುಗಳಲ್ಲಿ ಪ್ರಮುಖವಾಗಿ.

  • ಜಿಲ್ಲಾ ಸಾಹಿತ್ಯ ಪ್ರಶಸ್ತಿ
  • ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಕ್ಯೂವರ್ ಕಾಲಂಸ್ ಬುಕ್ ಆಫ್ ರೆಕಾರ್ಡ್ಸ್,
  • ಕರ್ನಾಟಕ ಅಚೀವರ್ ಪ್ರಶಸ್ತಿ,
  • ಎಕ್ಸಲೆಂಟ್ ಕಲೆಕ್ಟರ್ ಅವಾರ್ಡ್

ಹನುಮಂತರಾಯರು ಸಂಗ್ರಹಿಸಿರುವುದನ್ನು ನೋಡುತ್ತಾ ಹೋದಂತೆಲ್ಲಾ ನಮ್ಮ ಗತಕಾಲದ ವೈಭವ ಮತ್ತು ಅಯಾಯ ದೇಶಗಳ ಸಂಸ್ಕೃತಿ, ಕಲೆ, ಪರಿಸರದ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕುತ್ತವೆ. ಹೀಗೆ ದೊಡ್ಡಬಳ್ಳಾಪುರದಿಂದ ಸಣ್ಣ ವಯಸ್ಸಿನಿಂದಲೇ ಪುಟ್ಟದಾಗಿ ಆರಂಭಿಸಿದ ಅವರ ಈ ಹವ್ಯಾಸ ಇಂದು ಅವರನ್ನು ದೊಡ್ದ ಮಟ್ಟಿಗೆ ಬೆಳೆಸಿದೆ. ಸರ್ಕಾರವಾಗಲೀ ಯಾವುದೇ ಸಂಘಸಂಸ್ಥೆಗಳಿಂದ ಯಾವುದೇ ರೀತಿಯ ಸಹಕಾರ ಮತ್ತು ಸಹಾಯವಿಲ್ಲದೇ ತಮ್ಮ ಹವ್ಯಾಸವನ್ನು ಮುಂದುವರೆಸಿಕೊಂಡು ಬಂದಿರುವ ಶ್ರೀ  ಕೆ.ಟಿ. ಹನುಮಂತರಾಜ್‌ರವರ ಈ ಮಹತ್ಕಾರ್ಯವನ್ನು ನಾಲ್ಕು ಜನರಿಗೆ ಪರಿಚಯಿಸಿ ನಮ್ಮ ಸುತ್ತಮುತ್ತಲಿನ ಶಾಲೆಗಳು ಅಥವಾ ಸಭೆ ಸಮಾರಂಭಗಳಲ್ಲಿ ಅವರ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಅವರ ಸಾಧನೆಯಲ್ಲಿ ನಮ್ಮ ಅಳಿಲು ಸೇವೆಯ ಸಹಾಯ ಹಸ್ತ ಚಾಚುವಂತಾದಲ್ಲಿ ಈ ಲೇಖನಕ್ಕೂ ಒಂದು ಸಾರ್ಥಕತೆ ದೊರೆಯುತ್ತದೆ ಎಂಬುದು  ವಯಕ್ತಿಕ ಅಭಿಪ್ರಾಯವಾಗಿದೆ. ಹನುಮಂತರಾಜು ಅವರು +91 94480 70686 ಈ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಕ್ಕೆ ಲಭ್ಯವಿದ್ದು ಯಾರೇ ಕರೆದರೂ ಲಭ್ಯತೆ ಆಧಾರದ ಮೇಲೆ ಸಮಯ ಮಾಡಿಕೊಂಡು ಕೇವಲ ದೊಡ್ಡ ಬಳ್ಳಾಪುರದಿಂದ ಹೋಗಿ ಹಿಂದಿರುಗಿ ಬರಲು ಅವಶ್ಯಕವಿರುವಷ್ಟೇ ಹಣವನ್ನು ಮಾತ್ರವೇ ಪಡೆದು ತಮ್ಮ ಸ್ಥಳಗಳಲ್ಲಿ ಆವರ ಸಂಗ್ರಹವನ್ನು ಪ್ರದರ್ಶಿಸಲು ಸಿದ್ಧರಿದ್ದು, ಆಸಕ್ತರು ಇದರ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.

ಈಗಾಗಲೇ ಪಟ್ಟಣಗಳಿರಲೀ, ಹಳ್ಳಿಗಳ ಬಹುತೇಕರ ಮನೆಗಳಲ್ಲಿ ಮಾಯವಾಗಿರುವ ತಾಮ್ರ, ಕಂಚು, ಹಿತ್ತಾಳೆ ಪಾತ್ರೆ ಪಗಡಗಳು, ದೇವರ ಪೂಜಾ ಸಾಮಾಗ್ರಿಗಳು, ಕೃಷಿ ಚಟುವಟಿಕೆಗಳಿಗೆ ಅವಶ್ಯಕವಿರುವ ಬಗೆ ಬಗೆಯ ನೇಗಿಲಗಳು, ನೊಗ, ಹಾರೆ, ಸೆನಿಕೆ, ಪಿಕಾಸಿ, ಇಸುಮುಳ್ಳು ಮುಂತಾದ ಕೃಷಿಗೆ ಸಂಬಂಧ ಪಟ್ಟ ಹೇರಳವಾದ ಸಾಮಗ್ರಿಗಳು ಅವರ ಸಂಗ್ರಹದಲ್ಲಿದ್ದು ಸದ್ಯಕ್ಕೆ ಅವುಗಳನ್ನು ಸೂಕ್ತವಾದ ರೀತಿಯಲ್ಲಿ ಸಂಗ್ರಹಿಸಿಡಲು ಅವರ ಬಳಿ ಜಾಗವಿಲ್ಲವಾಗಿದೆ. ತಮ್ಮೀ ಸಾಧನೆಯನ್ನು ಶಾಶ್ವತವಾಗಿರಿಸಲು ದೊಡ್ಡಬಳ್ಳಾಪುರದ ಸುತ್ತಮುತ್ತಲೂ ಒಂದು ಒಳ್ಳೆಯ ಜಾಗದ ಹುಡುಕಾಟದಲ್ಲಿದ್ದು, ಈಗಾಗಲೇ ಇರುವ ವಸ್ತುಗಳ ಜೊತೆ ಮತ್ತಷ್ಟು ಮಗದಷ್ಟು ಪ್ರಾಚ್ಯ ವಸ್ತುಗಳು ಸಂಗ್ರಹಿಸಿ ದೊಡ್ಡದಾದ ಪ್ರದರ್ಶನಾಲಯವನ್ನು ಮಾಡಬೇಕೆಂಬ ಆಸೆ ಇದೆ ಎಂದು ಹೇಳುವಾಗ ಅವರ ಧ್ವನಿಯಲ್ಲಿ ಆಶಾಭಾವನೆ ಇತ್ತಾದರೂ ಅವರ ಕಣ್ಗಳಲ್ಲಿ ವಿಶಾಧದ ಛಾಯೆಯನ್ನು ಕಂಡಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ದಯವಿಟ್ಟು ಆಸಕ್ತ ದಾನಿಗಳು ದೊಡ್ಡ ಮನಸ್ಸು ಮಾಡಿ ಅವರ ಆಶಯಕ್ಕೆ ಸಹಾಯ ಹಸ್ತ ನೀಡುವರೆಂಬ ಆಶಾ ಭಾವನೆ ನಮ್ಮದಾಗಿದೆ.

ಓದಿದ್ದು ಕೇವಲ 10ನೇ ತರಗತಿಯಾದರೂ ತಮ್ಮ ಪ್ರಾಚ್ಯವಸ್ತು ಸಂಗ್ರಣೆಯಿಂದ ಗಳಿಸಿದ ಜ್ಞಾನ ಯಾವ ಇತಿಹಾಸ ತಜ್ಞರಿಗೂ ಕಡಿಮೆಯಾಗಿರದೇ ಪ್ರಸ್ತುತ ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಜಗತ್ತಿನಾದ್ಯಂತ ಪಸರಿಸುತ್ತಿರುವ ಕಾರಣ  ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a comment