ನೀರು ಮಾರಿ ಕೋಟ್ಯಾಧೀಶನಾದ ಕನ್ನಡಿಗನ ರೋಚಕತೆ

90ರ ದಶಕದಲ್ಲಿ ಮೊದಲ ಬಾರಿಗೆ ದೆಹಲಿ ಪ್ರವಾಸಕ್ಕೆ ಹೋಗಿದ್ದಾಗ ರಸ್ತೆಯಲ್ಲಿ ಗಾಡಿಗಳ ಮೇಲೆ 25 ಪೈಸೆಗೆ  ಒಂದು ಲೋಟ ನೀರು ಮಾರುತ್ತಿದ್ದದ್ದನ್ನು ಕಂಡು ನಿಜಕ್ಕೂ ಆಚ್ಚರಿಯಾಗಿತ್ತು.  ಏಕೆಂದರೆ ಅದುವರೆಗೂ ನಾನು  ದುಡ್ಡು ಕೊಟ್ಟು ನೀರು ಕುಡಿದಿರಲಿಲ್ಲ ಮತ್ತು  ಅಂತಹ ಪ್ರಮೇಯವೂ ಬಂದಿರಲಿಲ್ಲ. ಎಲ್ಲಿ  ಬೇಕಾದರೂ, ಯಾರನ್ನೂ ಬೇಕಾದರೂ ಕುಡಿಯಲು ನೀರು ಕೊಡಿ ಎಂದರೆ ನೀರಿನ ಜೊತೆ ಬಾಯಾರಿಕೆಯನ್ನು ನಿವಾರಿಸುವ ಬೆಲ್ಲವನ್ನೂ ಕೊಡುವ ಕರುನಾಡು ನಮ್ಮದಾಗಿತ್ತು. ಆದರೆ ನಿಧಾನವಾಗಿ ಖನಿಜಯುಕ್ತ ನೀರಿನ ಹೆಸರಿನಲ್ಲಿ ಬಾಟೆಲ್ಲುಗಳಲ್ಲಿ ನೀರು ತುಂಬಿಸುವ ಉದ್ಯಮ ಬೆಳೆದಿರುವ ಪರಿ ನಿಜಕ್ಕೂ ಅಚ್ಚರಿ ಮತ್ತು ಗಾಬರಿಯನ್ನೂ ಮೂಡಿಸುತ್ತದೆ. ಅದೇ ರೀತಿಯಾಗಿ ನೀರಿನ ಜೊತೆ ಬೆಲ್ಲವನ್ನೂ ಕೊಡುತ್ತಿದ್ದ ನಾಡಿನವರೇ ಆದ ಶ್ರೀ ಸತ್ಯಶಂಕರ್ ಅವರು ಖನಿಜಯುಕ್ತ ನೀರಷ್ಟೇ ಅಲ್ಲದೇ ಜೀರಿಗೆ ನೀರನ್ನು ಮಾರುವ ಮೂಲಕ ಕೋಟ್ಯಾಧಿಪತಿಗಳಾಗಿರುವ ರೋಚಕತೆ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಮೂಲತಃ ಪುತ್ತೂರು ಬಳಿಯ ಬೆಳ್ಳಾರೆ ಗ್ರಾಮದಲ್ಲಿ ಸಾಂಪ್ರಾದಾಯಕ ಕೃಷಿಕ ಕುಟುಂಬದಲ್ಲಿ ಜನಿಸಿದರು ಜುಲೈ 1964ರಲ್ಲಿ  ಸತ್ಯ ಶಂಕರ್ ಆಟ ಪಾಠದಲ್ಲಿ ಚುರುಕಾಗಿದ್ದರೂ ಮನೆಯ  ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರದಿದ್ದ ಕಾರಣ  ಪಿಯುಸಿ ಓದುವಾಗಲೇ  ಓದನ್ನು ಅರ್ಧಕ್ಕೆ ನಿಲ್ಲಿಸಿ ಕುಟುಂಬದ ನಿರ್ವಹಣೆಗಾಗಿ ಸಣ್ಣ ಪುಟ್ಟ ಕೆಲಗಳನ್ನು ಮಾಡಲು ಪ್ರಾರಂಭಿಸುತ್ತಾರೆ.  ಅದೇ ಸಮಯದಲ್ಲಿ ಒಂದೂರಿಂದ ಮತ್ತೊಂದು ಊರಿಗೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿದ್ದದ್ದನ್ನು ಗಮನಿಸಿ, ಕೇಂದ್ರ ಸರ್ಕಾರದ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಆಟೋ ರಿಕ್ಷಾ ಖರೀದಿಸಿ ಆಟೋ ತಮ್ಮ ವೃತ್ತಿಜೀವನದನ್ನು ಆರಂಭಿಸಿ ಆಟೋ ಶಂಕರ್  ಎಂದೇ ಪ್ರಖ್ಯಾತರಾಗಿದ್ದಲ್ಲದೇ, ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಆಟೋಗಾಗಿ ಮಾಡಿದ್ದ  ಸಾಲವನ್ನು  ತೀರಿಸಿದಾಗ ಅವರಿಗೆ ಸ್ವಲ್ಪ ಧೈರ್ಯ ಬಂದು ಇದ್ದ ಆಟೋ ಮಾರಿ ಮತ್ತಷ್ಟು ಸಾಲವನ್ನು ಮಾಡಿ  ಡೀಸೆಲ್ ಅಂಬಾಸಿಡರ್ ಕಾರನ್ನು ಖರೀದಿಸಿ ಸ್ವತಃ ಅವರೇ ಸುಮಾರು ಒಂದೂವರೆ ವರ್ಷಗಳ ಕಾಲ ಓಡಿಸಿ  ಇದ್ದ ಸಾಲವನ್ನೆಲ್ಲಾ ತೀರಿಸಿ ಸುಮಾರು  1 ಲಕ್ಷ ಹಣ ತಮ್ಮ ಕೈಯಲ್ಲಿ ಇದ್ದಾಗ, ಕಾರನ್ನು ಮಾರಿ ಹೊಸಾ ವ್ಯವಹಾರವನ್ನು  ಮಾಡಲು ನಿರ್ಧರಿಸಿರುತ್ತಾರೆ.

ಈ ಬಾರಿ ತಿರುಗಾಟದ ಕೆಲಸ ಬೇಡ ಎಂದು ನಿರ್ಧರಿಸಿ ಡಿಸೆಂಬರ್ 1987 ರಲ್ಲಿ ಪುತ್ತೂರಿನಲ್ಲಿ  ಆಟೋಮೊಬೈಲ್ ಬಿಡಿಭಾಗಗಳ ಅಂಗಡಿಯನ್ನು ಪ್ರಾರಂಭಿಸಿದಾಗ,  ಅವರನ್ನು ಬೆಂಬಲಿಸಿದ್ದಕ್ಕಿಂತಲೂ,  ಏ ಈ ವ್ಯವಹಾರಗಳೆಲ್ಲವೂ ನಮ್ಮಂತಹವವರಿಗೆ ಆಗಿಬಾರದು  ಎಂದು ಭಯ ಪಡಿಸಿದವರೇ ಹೆಚ್ಚಾಗಿದ್ದರೂ, ಅದಕ್ಕೆಲ್ಲಾ  ಅಂಜದೆ ಆರಂಭಿಸಿದ ಹೊಸಾ ವ್ಯವಹಾರ  ಆವರ ಕೈ ಹಿಡಿಯುತ್ತಿದ್ದೇ ತಡಾ, 1989 ಟೈರ್ ಡೀಲರ್‌ಶಿಪ್ ಅಂಗಡಿಯನ್ನು ಸಹ ಆರಂಭಿಸುವ  ಮೂಲಕ ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ದೊಡ್ದ ಮಟ್ಟದ ಉದ್ಯಮಿಯಾಗುವ ಲಕ್ಷಣಗಳನ್ನು ತೋರಿಸುತ್ತಾರೆ.

ಈಗಾಗಲೇ ವಾಹನಗಳನ್ನು ಖರೀದಿಸುವಾಗ ಬ್ಯಾಂಕುಗಳ ಹತ್ತಾರು ಪ್ರಕ್ರಿಯೆಗಳು ಬಹಳ ಗೊಂದಲಮಯವಾಗಿದ್ದು ಸಣ್ಣ ಪುಟ್ಟವರು ವಾಹನಗಳನ್ನು ಖರೀಧಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದು ದುಸ್ಸಾಹಸವಾಗುತ್ತಿದ್ದದ್ದನ್ನು ಗಮನಿಸಿದ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಶಂಕರ್, ಅಂತಹ ಜನರಿಗೆ ಸಹಾಯ ಮಾಡಲೆಂದೇ ಈಗಾಗಲೇ ಬಳಸಿದ್ದ  ಆಟೋ ಮತ್ತು ಕಾರುಗಳನ್ನು ಕೊಂಡುಕೊಳ್ಳಲು ಬಹಳ ಸುಲಭವಾಗಿ ಮತ್ತು ಸರಳ ಬಡ್ಡಿಯಲ್ಲಿ ಸಾಲ ಕೊಡುವಂತಹ  ಪ್ರವೀಣ್ ಕ್ಯಾಪಿಟಲ್ ಎಂಬ  ಆಟೋ ಹಣಕಾಸು ಸಂಸ್ಥೆಯನ್ನು 1994 ರಲ್ಲಿ ಆರಂಭಿಸಿ ತಮ್ಮ ವ್ಯವಹಾರದ ಪರಿಧಿಯನ್ನು ವಿಸ್ತರಿಸಿಕೊಂಡ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.  ಪ್ರಸ್ತುತ ಅವರ ಪ್ರವೀಣ್ ಕ್ಯಾಪಿಟಲ್  ಕರ್ನಾಟಕ ರಾಜ್ಯದಾದ್ಯಂತ ಸುಮಾರು 9 ಶಾಖೆಗಳನ್ನು  ಹೊಂದಿದ್ದು, ವಾಹನ ಮತ್ತು ಭೂ ಸಾಲಗಳನ್ನು ಕೊಡುವ ಸಂಸ್ಥೆಯಾಗಿ ಜನರ ಮನ್ನಣೆ ಗಳಿಸಿದೆ.

ಒಮ್ಮೆ ಹಾಲಿನ ರುಚಿ ಕಂಡ ಬೆಕ್ಕು ಮತ್ತೆ ಮತ್ತೆ ಹಾಲನ್ನು  ಕುಡಿಯಲು ಪ್ರಯತ್ನ ಮಾಡುವಂತೆ,  ಸುಮಾರು ಒಂದು ದಶಕಕ್ಕೂ ಅಧಿಕ ಸಮಯ ವಿವಿಧ ವ್ಯವಹಾರಗಳನ್ನು ಮಾಡಿ ಒಳ್ಳೆಯ ಹೆಸರು ಮತ್ತು ಗ್ರಾಹಕರನ್ನು ಗಳಿಸಿದ್ದ ಸತ್ಯಶಂಕರ್ ತಮ್ಮ ವ್ಯವಹಾರನ್ನು ಮತ್ತಷ್ಟು  ಎತ್ತರಕ್ಕೆ ಹೇಗೆ ತೆಗೆದುಕೊಂಡು ಹೀಗಬೇಕು ಎನ್ನುವಷ್ಟರಲ್ಲಿ ಅವರ ಕಣ್ಣಿಗೆ ಕಾಣಿಸಿದ್ದೇ,  ಖನಿಜಯುಕ್ತ (ಮಿನರಲ್) ನೀರಿನ ಮಾರಾಟ.  ಮಿನರಲ್ ಹೆಸರಿನಲ್ಲಿ ಸ್ಥಳೀಯ ಸಾಮಾನ್ಯವಾದ ಬೋರ್ವೆಲ್ ನೀರಿಗೆ ಕೃತವಾಗಿ ಕೆಲ ಖನಿಜಗಳನ್ನು ಬೆರೆಸಿ ಬಾಟಲ್ಲುಗಳಲ್ಲಿ ಮಾರಾಟ ಮಾಡುತ್ತಿದ್ದನ್ನು ಗಮನಿಸಿ ತಮ್ಮ ಪುತ್ತೂರಿನಲ್ಲಿ  ತಮ್ಮದೇ ಜಮೀನೀನಲ್ಲಿ ಹಾಯ್ದು ಹೋಗುತ್ತಿದ್ದ  ಝರಿಯಲ್ಲಿ ನೈಸರ್ಗಿಕವಾಗಿಯೇ ಹೇರಳವಾದ ಖನಿಜಾಂಶಗಳು ಇರುವುದನ್ನು ಗಮನಿಸಿ, ಆ ನೀರನ್ನು  ಶುದ್ಧೀಕರಿಸಿ ಬಿಂದು ಮಿನರಲ್ ವಾಟರ್ ಎಂಬ ಹೆಸರಿನಲ್ಲಿ ಬಾಟಲ್ಲುಗಳಲ್ಲಿ ಮಾರಾಟ ಮಾಡಲು ಆರಂಭಿಸುತ್ತಿದ್ದಂತೆಯೇ ಅವರ ಜೀವನದ ಮತ್ತೊಂದು ಮಜಲು ಆರಂಭವಾಗುತ್ತದೆ.

ಅದಾಗಲೇ  ಅನೇಕ ಬಹುರಾಷ್ಟ್ರೀಯ ಕಂಪನಿಗಳು ಈ ವ್ಯವಹಾರಗಳಲ್ಲಿ  ತೊಡಗಿಸಿಕೊಂಡಿದ್ದು, ಅವುಗಳ ಹೆಸರಿನಲ್ಲಿ ನಕಲಿ ನೀರು ಮಾರಾಟವಾಗುತ್ತಿದ್ದಂತಹ ಸಂಧರ್ಭದಲ್ಲಿ ಸ್ಥಳೀಯವಾಗಿಯೇ ಅಸಲೀ ನೈಸರ್ಗಿಕ ನೀರು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದದ್ದನ್ನು  ವ್ಯಾಪಾರಿಗಳು ಮತ್ತು ಗ್ರಾಹಕರು ಎರಡೂ ಕೈಗಳನ್ನು ಬಾಚಿ ಅಪ್ಪಿಕೊಳ್ಳುತ್ತಿದ್ದಂತೆಯೇ, ಉತ್ಸಾಹಗೊಂಡ ಶಂಕರ್ ಕೇವಲ   ಎರಡೇ ವರ್ಷದಲ್ಲಿ 2002 ರಲ್ಲಿ ಬಿಂದು ಜೀರಾ ಮಸಾಲ ಎಂಬ ಉತ್ಪನ್ನವನ್ನು ಮಾರುಕಟ್ಟೆಗೆ ಬಿಟ್ಟಾಗ ಮತ್ತೆ  ಕೆಲವರು, ಕೋಲಾ ಅಥವಾ ಇತರೇ ಹಣ್ಣಿನ ಪಾನಕ ರೀತಿಯ ಉತ್ಪನ್ನವಾಗಿದ್ದರೆ  ಉತ್ತಮವಾಗಿರುತ್ತದೆ  ಈ ರೀತಿಯ ಜೀರಾ ಮಸಾಲ ನಿಸ್ಸಂದೇಹವಾಗಿ ಜನರು ತಿರಸ್ಕರಿಸಿ ಇಂದೊಂದು ವಿಫಲ ವ್ಯಾಪಾರವಾಗುತ್ತದೆ ಎಂದೇ ಭವಿಷ್ಯ ನುಡಿದರೂ, ಇಂತಹ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಗಮನ ಕೊಡದೇ, ಚರೈವೇತಿ ಚರೈವೇತಿ ಯಹೀತೋ  ಮಂತ್ರ ಹೈ  ಅಪನಾ!! ಎನ್ನುವಂತೆ, ಭಗವದ್ಗೀತೆಯಲ್ಲಿ ನಿನ್ನ ಕೆಲಸವನ್ನು ನೀನು ಶ್ರದ್ಧೆಯಿಂದ ಮಾಡು. ಫಲಾ ಫಲಗಳನ್ನು ನನ್ನ ಮೇಲೆ ಬಿಡು ಎಂದು ಶ್ರೀಕೃಷ್ಣ ಪರಮಾತ್ಮನೇ ಹೇಳಿರುವಂತೆ ತಮ್ಮ ಕಾರ್ಯವನ್ನು ಮುಂದುವರೆಸಿಕೊಂಡು ಹೋದರು. ಆರಂಭದ ಕೆಲ ವರ್ಷಗಳ ಕಾಲ ನಿರೀಕ್ಷಿತ ಮಟ್ಟಕ್ಕೆ ಏರದೇ ಹೋದರೂ ಧೃತಿಗೆಡದೇ ತಮ್ಮ ನಂಬಿಕೆಯನ್ನು ಮುಂದವರಸಿ ಕೊಂಡು ಹೋದ ಪರಿಣಾಮ ಇಂದು ಅವರ ಜೀರಾ ಮಸಾಲಾ ಪಾನೀಯ ಎಲ್ಲಾ ವರ್ಗದ ಜನರ ಮೆಚ್ಚುಗೆಯನ್ನು ಪಡೆದಿರುವುದಲ್ಲದೇ ಅಂದು ಕೇವಲ ಪುತ್ತೂರಿನ ಆಸುಪಾಸಿನಲ್ಲಿ ಪ್ರಖ್ಯಾತವಾಗಿದ್ದು ಬಿಂದು ಉತ್ಪನ್ನಗಳು ಇಂದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮಾರಾಟವಾಗುವ ಉತ್ಪನ್ನವಾಗಿ ಬೆಳೆದು ನಿಂತಿದೆ.

ಕೇವಲ ಮಿನರಲ್ ವಾಟರ್ ಮತ್ತು ಬಿಂದು ಜೀರಾಗಳಿಗಷ್ಟೇ ಸೀಮಿತಗೊಂಡಲ್ಲಿ ಕೆಲ ಸಮಯದ ನಂತರ ಜನರು ತಮ್ಮ ಉತ್ಪನ್ನಗಳ ಮೇಲೆ ಭ್ರಮನಿರಸನಗೊಳ್ಳಬಹುದು ಎಂಬುದನ್ನು ಚೆನ್ನಾಗಿ ಅರಿತಿರುವ ಸತ್ಯಾಶಂಕರ್ ತಮ್ಮ ನೀರಿನ ವ್ಯವಹಾರದ ಜೊತೆಗೆ ಸಾವಯವ ಕೃಷಿಯನ್ನೂ ಸಹಾ ಮಾಡುತ್ತಲೇ ಅದರ ಜೊತೆ ಹಣ್ಣು ಸಂಸ್ಕರಣೆಯಿಂದ ಪ್ಯಾಕೇಜ್ ಮಾಡಿದ ಆಹಾರ ಉತ್ಪನ್ನಗಳನ್ನೂ ಜನರಿಗೆ ತಲುಪಿಸುವ ಸಲುವಾಗಿ  SG ಕಾರ್ಪೊರೇಟ್‌ ಎಂಬ ಸಂಸ್ಥೆಯನ್ನು  ಆರಂಭಿಸಿ ಅದರ ಮೂಲಕ ಈ ಕೆಳಕಂಡ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

  • ಬಿಂದು ಪ್ಯಾಕೆಜ್ಡ್ ವಾಟರ್
  • ಬಿಂದು ಫಿಜ್ ಜೀರಾ ಮಸಾಲ
  • ಜ್ಞಾನ ಸೋಡಾ
  • ಫ್ರೂಜಾನ್- ಫಿಜ್ಜಿ ಕ್ಲೌಡಿ ಲೆಮನ್, ಫಿಜ್ಜಿ ಆರೆಂಜ್, ಫಿಜ್ಜಿ ಗ್ರೀನ್ ಆಪಲ್… ಇತ್ಯಾದಿ
  • ಸೈಪಾನ್ ಮಾವಿನ ಪಾನೀಯ
  • ಸೀಬೆ ಹಣ್ಣಿನ ಪಾನೀಯ
  • ಚಿಪ್ಸ್, ಭುಜಿಯಾಸ್, ಪಫ್ಸ್, ಹೆಸರು ಬೇಳೆ ಇತ್ಯಾದಿ  ಕುರುಕಲು ತಿಂಡಿಗಳು
  • ಬಿಂದು ಗೋಲ್ಡ್ ಅಡುಗೆ ಎಣ್ಣೆ

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ  ಆಂಗ್ಲ ಉಕ್ತಿ ಎಲ್ಲರಿಗೂ ತಿಳಿದಿರುವಂತೆ ಸತ್ಯಶಂಕರ್ ವಿಷಯದಲ್ಲೂ ಇದು ಸತ್ಯವಾಗಿದ್ದು, 1992 ರಲ್ಲಿ ರಂಜಿತಾ ಅವರನ್ನು ವಿವಾಹವಾಗಿ, ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ  ಮೇಘಾ ಮತ್ತು ಮಹಿಮಾ ಎಂಬ ಇಬ್ಬರು  ಮುದ್ದಾದ ಹೆಣ್ಣುಮಕ್ಕಳು ಮತ್ತು ಮನಸ್ವಿತ್ ಎಂಬ ಮಗನಿದ್ದಾನೆ. ಕಂಪನಿಯು ಬಹಳ ಸಣ್ಣ ಪ್ರಮಾಣದಲ್ಲಿದ್ದಾಗ ಅವರ ಪತ್ನಿ ರಂಜಿತಾ, ದಿ ಹೌಸ್ ಆಫ್ ಬಿಂದುವಿನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಕುಟುಂಬವನ್ನು ನಿರ್ವಹಿಸುವುದರ ಜೊತೆ ಜೊತೆಗೆ ಸತ್ಯ ಅವರ ವ್ಯವಹಾರಗಳ ಅವಿಭಾಜ್ಯ ಅಂಗವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿಕೊಂಡು ಹೊದ ಪರಿಣಾಮ ಕಂಪನಿ ಈಗ ಈ ಮಟ್ಟಿಗೆ ಬೆಳೆದು ನಿಂತಿದೆ. ಪ್ರಸ್ತುತ ತಾಯಿ ರಂಜಿತಾ ಅವರ ಜೊತೆ  ಅವರ ಮಕ್ಕಳು ಸಹ ಸತ್ಯ ಅವರ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಅಪ್ಪನ ಕನಸನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ.

2001ರಲ್ಲಿ ಕೇವಲ 35 ಲಕ್ಷ ರೂ.ಗಳಷ್ಟು ವಹಿವಾಟು ನಡೆಸುತ್ತಿದ್ದ ಸತ್ಯಾ ಅವರ ಕಂಪನಿ 2006ರಲ್ಲಿ 6 ​​ಕೋಟಿಗಳಾಗಿ, 2010 ರ ವೇಳೆಗೆ 100 ಕೋಟಿಗಳಾದರೆ, 2013 ರಲ್ಲಿ 250 ಕೋಟಿಗಳಾಗಿದ್ದು ಪ್ರಸ್ತುತ ವಾರ್ಷಿಕ 800 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುವ ಕಂಪನಿಯಾಗಿದೆ. ಅಂದು ಆಟೋ ಮತ್ತು ಅಂಬಾಸೆಡರ್ ಕಾರನ್ನು ಓಡಿಸುತ್ತಿದ್ದ ಸತ್ಯಶಂಕರ್ ಇಂದು ಕೋಟಿ ಕೋಟಿ ಬೆಲೆಯ  ಐಷಾರಾಮಿ ಕಾರನ್ನು ಹೊಂದಿದ್ದಾರೆ. ಸುಮಾರು 11 ಕೋಟಿ ರೂಪಾಯಿಗಳಷ್ಟು ಬೆಲೆಯುಳ್ಳ ಸತ್ಯಾ ಅವರಿಗಾಗಿಯೇ ವಿಶೇಷವಾಗಿ ಮಾರ್ಪಾಟು ಮಾಡಲ್ಪಟ್ಟ  ಐಷಾರಾಮಿ ಕಾರು ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಕಾರಿನ ಒಡೆಯರಾಗಿರುವ ಸತ್ಯಾಶಂಕರ್ ಅಸಾಧ್ಯ  ಎಂಬ ಪದದಲ್ಲಿ ಅ ಎಂಬುದನ್ನು ಗೌಣವಾಗಿಸಿ ಧೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮದ ಜೊತೆ ತಾಳ್ಮೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ಎಲ್ಲವೂ ಸಾಧ್ಯ ಎನ್ನುವುದನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ. ಶಂಕರ್ ಆವರು ಪ್ರಸ್ತುತವಾಗಿ ತಮ್ಮ ಕಂಪನಿಯನ್ನು  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಸ್ತರಣೆಯತ್ತ ಹೆಚ್ಚು ಹೆಚ್ಚು ಗಮನ ಹರಿಸುತ್ತಿದ್ದು ಮುಂಬರುವ ವರ್ಷಗಳಲ್ಲಿ IPO ಆಗಿ ತಮ್ಮ ಪರಿಶ್ರಮಕ್ಕೆ ಸಾರ್ವಜನಿಕರನ್ನೂ ಸೇರಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡಿದ್ದಾರೆ. 

ಸತ್ಯಶಂಕರ್ ಆವರ ಈ ಪರಿಯ ಬೆಳವಣಿಗೆ ಅವರ ಸಾಂಪ್ರಾದಾಯಿಕ ಬಹುರಾಷ್ಟ್ರೀಯ ಸ್ಪರ್ಧಿಗಳ ನಿದ್ದೆಗೆಡಿಸಿ ಆರಂಭದಲ್ಲೇ ಕೋಕ್ ಕಂಪನಿ ಅವರ ಕಂಪನಿಯನ್ನು ಬಾರಿ ಮೊತ್ತಕ್ಕೆ ಖರೀಧಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ ಅದನ್ನು ನಯವಾಗಿ ನಿರಾಕರಿಸಿದ್ದ ಶಂಕರ್ ಅವರಿಗೆ ಮತ್ತೆ 2022 ರಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ತನ್ನದೇ ಆದ ಳ FMCG ಉತ್ಪನ್ನಗಳನ್ನು ವಿಸ್ತರಿಸುವ ಸಲುವಾಗಿ ಬಿಂದು ಬೆವರೇಜಸ್ ಸೇರಿದಂತೆ ಹಲವಾರು ಸ್ವದೇಶಿ ಭಾರತೀಯ ಬ್ರ್ಯಾಂಡ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಾತುಕತೆ ನಡೆಸಲು ಮುಂದಾಗಿದ್ದರೂ, ಬಿಂದು ಸಂಸ್ಥೆಯ  ಆಡಳಿತ ಮಂಡಳಿಯು ಈ ಪ್ರಸ್ತಾಪವನ್ನು ತಿರಸ್ಕರಿಸುವ ಮೂಲಕ ಭಾರತೀಯ ಅದರಲ್ಲೂ ಕರ್ನಾಟಕದ ಕರಾವಳಿ ಮೂಲಕ ಕಂಪನಿ ಇಂದು ವಿಶ್ವದರ್ಜೆಯ ಉತ್ಪನ್ನಗಳನ್ನು  ನೀಡುವ ಮೂಲಕ ಇಡೀ ವಿಶ್ವವೇ ಕರ್ನಾಟಕದ ಪುತ್ತೂರಿನತ್ತ ಮುಖಮಾಡುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದು,  ಈ ಎಲ್ಲಾ ಕಾರಣಗಳಿಂದಾಗಿ ಶ್ರೀ ಸತ್ಯಶಂಕರ್ ಅವರು ನಿಸ್ಸಂದೇಹವಾಗಿ ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a comment