1956ರಲ್ಲಿ ಭಾಷೆಗಳ ಆಧಾರಿತವಾಗಿ ರಾಜ್ಯಗಳ ವಿಂಗಡನೆಯಾದರೂ ಇಂದಿಗೂ ಭಾಷೆಯ ಹೆಸರಿನಲ್ಲಿ ಕಿತ್ತಾಡೋದನ್ನು ಇನ್ನೂ ಸಹಾ ನಿಲ್ಲಿಸಿಲ್ಲಾ. ಮನೆ ಮಾತು ಮರಾಠಿಯಾದರೂ, ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಚಿತ್ರಗಳು ಮತ್ತು ಚಿತ್ರಗೀತೆಯನ್ನು ನೀಡಿ ಕನ್ನಡಿಗರ ಮನದಲ್ಲಿ ಸದಾಕಾಲವೂ ಮನೆ ಮಾಡಿರುವ ಗೀತರಚನಕಾರ ಹಾಗೂ ನಿರ್ದೇಶಕರಾದ ಶ್ರೀ ಗೀತಪ್ರಿಯ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
ನಿಜ ಹೇಳಬೇಕಂದರೆ ಗೀತಪ್ರಿಯ ಅವರದ್ದು ಸೈನಿಕ ಕುಟುಂಬವಾಗಿದ್ದು ಅವರ ತಾತ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಕನ್ನಡದ ಖ್ಯಾತ ಕವಿಗಳಾದ ಪು.ತಿ.ನ. ಅವರಿಂದ ಪ್ರಭಾವಿತರಾಗಿ ಅವರಿಂದ ಕನ್ನಡ ಕಲಿತು, ಲವ ಕುಶ ಎಂಬ ನಾಟಕವನ್ನು ಬರೆದಿದ್ದರೆ, ಅವರ ತಂದೆ ರಾಮರಾವ್ ಮೋಹಿತೆಯವರೂ ಸಹಾ ಸೈನಿಕರಾಗಿ ಮೊದಲ ಮಹಾ ಯುದ್ಧದಲ್ಲಿ ಪಾಲ್ಗೊಂಡಿದ್ದವರು. ಮಹಾಯುದ್ಧದ ನಂತರ ಅವರು ಬೆಂಗಳೂರಿನ ದಂಡು (Bangalore contonment) ಪ್ರದೇಶಕ್ಕೆ ಬಂದು ನೆಲೆಸಿದ್ದರು. ಅಂತಹ ರಾಮರಾವ್ ಮೋಹಿತೆ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ 1930ರ ಜೂನ್ 15ರಂದು ಬೆಂಗಳೂರಿನಲ್ಲಿ ಜನಿಸಿದಾಗ ಅವರಿಗೆ ಲಕ್ಷ್ಮಣರಾವ್ ಮೋಹಿತೆ ಎಂದು ನಾಮಕರಣ ಮಾಡಲಾಗಿತ್ತು.
ನಂತರದ ದಿನಗಳಲ್ಲಿ ಮಲ್ಲೇಶ್ವರಂ ಕಡೆ ವಲಸೆ ಬಂದಾಗ ಲಕ್ಷ್ಮಣರಾವ್ ಅವರು ಮಲ್ಲೇಶ್ವರಂ ಪ್ರೌಢಶಾಲೆಯಲ್ಲಿ ಓದುವ ಸಮಯದಲ್ಲಿ ಅರಿಗೆ ಕವಿಗಳಾಗಿದ್ದ ಹೊಯಿಸಳರು ಗುರುಗಳಾಗಿದ್ದರೆ, ಇನ್ನು ಕಾಲೇಜಿನಲ್ಲಿ ಜಿ.ಪಿ.ರಾಜರತ್ನಂ ಅವರಂತಹ ಸಾಹಿತ್ಯ ದಿಗ್ಗಜರುಗಳು ಗುರುಗಳಾಗಿದ್ದರಿಂದ ಅಂತಹವರ ಪರಿಚಯ ಮತ್ತು ಪ್ರಭಾವಗಳಿಂದಾಗಿ ಅವರೊಳಗೆ ಸುಪ್ತವಾಗಿದ್ದ ಸಾಹಿತ್ಯ ರಚನೆ ಹೊರಬಂದು ಪ್ರೌಢಶಾಲೆಯ ದಿನಗಳಲ್ಲೇ ಪದ್ಯ ಮತ್ತು ನಾಟಕಗಳನ್ನು ಬರೆಯಲಾರಂಭಿಸಿದರು. ಅವರು ಬರೆದಂತಹ ಕವಿತೆಗಳು ಅಂದಿನ ತಾಯಿನಾಡು ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಇನ್ನು ಆರಂಭದ ದಿನಗಳಲ್ಲಿ ದಂಡು ಪ್ರದೇಶದಲ್ಲಿ ಬೆಳಿದಿದ್ದ ಪರಿಣಾಮ ಉರ್ದು ಭಾಷೆಯೂ ಅವರಿಗೆ ಪರಿಚಯವಾಗಿದ್ದ ಕಾರಣ, ಉರ್ದು ಶಾಯರಿಗಳ ಬಗ್ಗೆ ಅವರು ಒಲವನ್ನು ಮೂಡಿಸಿ ಕೊಂಡಿದ್ದಲ್ಲದೇ, ಅವರ ಸುತ್ತಮುತ್ತಲಿನ ಹವ್ಯಾಸಿ ನಾಟಕ ಕಲಾವಿದರುಗಳ ಪರಿಚಯವಾಗಿ ಅವರ ಒಡನಾಟದಿಂದಾಗಿ ನಾಟಕಗಳ ಬಗ್ಗೆಯೂ ವಿಶೇಷ ಆಸಕ್ತಿ ಬೆಳೆದು ನಾಟಕಗಳಲ್ಲಿ ಅಭಿನಯಿಸುವುದಕ್ಕಿಂತಲೂ ನಾಟಕ ಬರೆಯುವುದು ನಿರ್ದೇಶಿಸುವುದರತ್ತ ಒಲಿಯಿತು ಚಿತ್ತ. ಹಾಗಾಗಿಯೇ ಅದೇ ಸಮಯದಲ್ಲಿಯೇ ಮದ್ವೆ ಮಾರ್ಕೆಟ್ ಎಂದು ಬರೆದು ಆಭಿನಯಿಸಿದ್ದ ನಾಟಕ ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿತ್ತು.
1943ರ ವೇಳೆ ರಾಜಕುಮಾರ್ ಅವರ ಅಭಿನಯದ ಸತ್ಯಹರಿಶ್ಚಂದ್ರ ಸಿನಿಮಾ ಬಿಡುಗಡೆಯಾಗಿ ಆ ಸಿನಿಮಾ ನೋಡಿದ ಲಕ್ಷಣರಾವ್ ಅವರಿಗೆ ಚಿತ್ರ ನಟನಾಗಲೇಬೇಕು ಎಂದು ನಿರ್ಧರಿಸಿ ಮನೆಯಲ್ಲಿ ಯಾರಿಗೂ ಹೇಳದೇ, ನಟನಾಗುವ ಉದ್ದೇಶದಿಂದಲೇ ಮದ್ರಾಸಿಗೆ ಹೋಗಿ ಹೀರಾಲಾಲ್ ಅವರ ಬಳಿ ಕಥಕ್ ಡ್ಯಾನ್ಸ್ ನೃತ್ಯವನ್ನು ಕಲಿತು ಅಲ್ಲಿನ ನಾಟಕ ಕಂಪನಿಗಳಲ್ಲಿ ಅಭಿನಯಿಸಿ ನಟನಾ ಅನುಭವವನ್ನು ಪಡೆದದ್ದಲ್ಲದೇ, ಒಂದೆರಡು ತೆಲುಗು ಚಿತ್ರಗಳಲ್ಲಿ ನೃತ್ಯಗಾರನಾಗಿ ಕಾಣಿಸಿ ಕೊಂಡಿರುವಾಗಲೇ. ಕನ್ನಡ ಖ್ಯಾತ ನಿರ್ದೇಶಕರಾದ ಶ್ರೀ ಆರ್. ನಾಗೇಂದ್ರರಾವ್ ಅವರು ಕನ್ನಡ ಸಿನಿಮಾ ತಯಾರಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ, ತನಗೊಂದು ಪಾತ್ರ ಕೊಡಿ ಎಂದು ಅವರ ಬಳಿ ಕೇಳಿದಾಗ, ಈಗಾಗಲೇ ಎಲ್ಲ ಪಾತ್ರಗಳ ಆಯ್ಕೆ ಮುಗಿದಿರುವ ಕಾರಣ ಮುಂದಿನ ಸಿನಿಮಾದಲ್ಲಿ ನೋಡೋಣ. ಹೀಗೆ ಮನೆ ಬಿಟ್ಟು ಓಡಿ ಬರುವುದು ತಪ್ಪು ಹಾಗಾಗಿ ಈ ಕೂಡಲೇ ನೀನು ಬೆಂಗಳೂರಿಗೆ ಹೋಗು ಎಂದು ತಿಳಿ ಹೇಳಿದ್ದಕ್ಕಾಗಿ ಬಹಳ ಬೇಸರದಿಂದಲೇ ಬೆಂಗಳೂರಿಗೆ ಹಿಂತಿರುಗಿದ ಕೆಲವೇ ದಿನಗಳಲ್ಲಿ ಲಕ್ಷ್ಮಣ್ ರಾವ್ ಅವರ ತಂದೆ ಅನಾರೋಗ್ಯದಿಂದ ತೀರಿಕೊಂಡಾಗ, ಅನುಕಂಪದ ಆಧಾರದ ಮೇಲೆ ಅವರ ತಂದೆಯವರು ಕೆಲಸ ಮಾಡುತ್ತಿದ್ದ ಮೈಸೂರು ಲ್ಯಾನ್ಸರ್ಸ್ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡು ಸಂಸಾರದ ನೊಗವನ್ನು ಹೊರಬೇಕಾಯಿತು.
ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಅವರು ಕೆಲಸ ಮಾಡುತ್ತಿದ್ದ ಕಂಪನಿ ಹೋದ ಕಾರಣ, ತಮ್ಮ ತಾಯಿ, ಇಬ್ಬರು ತಂಗಿಯರು ಮತ್ತು ಮೂವರು ಸೋದರರನ್ನು ಸಾಕುವ ಸಲುವಾಗಿ ಕಬ್ಬನ್ ಪಾರ್ಕ್ ಬಳಿ ಇದ್ದ ಬಾರ್ ಒಂದರಲ್ಲಿ ಬಿಲ್ ರೈಟರ್ ಆಗಿ ಸೇರಿಕೊಂಡರು. ಸಂಜೆಯಿಂದ ತಡರಾತ್ರಿಯವರೆಗೆ ಕೆಲಸವಿದ್ದು ಬೆಳೆಗ್ಗೆ ಅವರಿಗೆ ಸಮಯ ಸಿಗುತ್ತಿದ್ದ ಕಾರಣ, ಸಿನಿಮಾ ಸೇರಲೇ ಬೇಕೆಂಬ ಗೀಳಿದ್ದ ಕಾರಣ, ಸಿನಿಮಾಕ್ಕೆ ಹಾಡು, ಚಿತ್ರಕತೆ ಬರೆಯ ತೊಡಗಿದರು. ಅದೊಮ್ಮೆ ಲಕ್ಷ್ಮಣ್ ರಾವ್ ಅವರಿಗೆ ಖ್ಯಾತ ಸಂಗೀತ ನಿರ್ದೇಶಕರಾದ ವಿಜಯಭಾಸ್ಕರ್ ಅವರ ಪರಿಚಯವಾಗಿ ಇವರ ಬರವಣಿಗೆಯ ಪ್ರತಿಭೆಯನ್ನು ಕಂಡ ವಿಜಯಭಾಸ್ಕರ್, ಇಲ್ಲಿ ಎಷ್ಟು ಸಂಬಳ ಸಿಗುತ್ತದೆ ಎಂದು ಕೇಳಿ ಅದಕ್ಕಿಂತಲೂ ಹೆಚ್ಚಿನ ಸಂಬಳ ಕೊಡುತ್ತೇನೆ ನನ್ನ ಜೊತೆ ಮದ್ರಾಸಿಗೆ ಬಂದುಬಿಡು ಎಂದಾಗ, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎಂದೆಣಿಸಿ . ಕೇವಲ ಐದು ರೂಪಾಯಿ ಹೆಚ್ಚಿನ ಸಂಬಳದ ಆಸೆಗಾಗಿ 40 ರೂಪಾಯಿ ಸಂಬಳಕ್ಕೆ, ಮದ್ರಾಸಿಗೆ ಹೋಗಿ, ಅಲ್ಲಿ ತೆಲುಗು, ತಮಿಳು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಲೇ ಕನ್ನಡ ಚಿತ್ರಗಳಿಗೆ ಸಂಭಾಷಣೆ, ಗೀತರಚನೆಯಲ್ಲಿ ತೊಡಗಿಸಿಕೊಂಡರು. ಲಕ್ಷಣ್ ರಾವ್ ಅವರ ಗೀತರಚನೆಯನ್ನು ಮೆಚ್ಚಿದ್ದ ವಿಜಯಭಾಸ್ಕರ್ ಅವರು ಅವರಿಗೆ ಗೀತಪ್ರಿಯ ಎಂದು ನಾಮಕರಣ ಮಾಡಿದರು.
1954 ರಲ್ಲಿ ಶ್ರೀರಾಮ ಪೂಜಾ ಚಿತ್ರಕ್ಕೆ ಗೀತೆ ರಚಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗೀತಪ್ರಿಯ ನಂತರ 1956ರಲ್ಲಿ ಭಾಗ್ಯ ಚಕ್ರ ಎಂಬ ಸಿನಿಮಾಕ್ಕೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆಯುವ ಜವಾಬ್ಧಾರಿಯನ್ನು ನಿಭಾಯಿಸಿದ ಗೀತಪ್ರಿಯ ಅವರಿಗೆ ಮುಂದೆ ಎಂ.ಎಸ್. ನಾಯಕ್ ಅವರ ನಿರ್ದೇಶನದಲ್ಲಿ ಅಶ್ವತ್ಥ್, ರಾಜಾಶಂಕರ್, ಪಂಡರಿಭಾಯಿ, ಜಯಂತಿ ತಾರಾಗಣದ ಸಿನಿಮಾ ನಿರ್ಮಾಣಕ್ಕೆ ಮುಂದಾದ ವನಮಾಲ ಎಂಬವರ ಸಿನಿಮಾದಲ್ಲಿ ಚಿತ್ರಕಥೆ ಮತ್ತು ಹಾಡುಗಳನ್ನು ಬರೆವ ಜವಾಬ್ಧಾರಿ ಗೀತಪ್ರಿಯ ಅವರಿಗೆ ಲಭಿಸಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಒಂದೇ ಬಳ್ಳಿಯ ಹೂಗಳು ಚಿತ್ರದಲ್ಲಿ ಹಿಂದೀ ಚಿತ್ರರಂಗದ ಜನಪ್ರಿಯ ಗಾಯಕರಾಗಿದ್ದಂತಹ ಮಹಮ್ಮದ್ ರಫಿಯವರು ಕನ್ನಡದಲ್ಲಿ ಹಾಡಿರುವ ಏಕೈಕ ಕನ್ನಡ ಗೀತೆ ನೀನೆಲ್ಲಿ ನಡೆವೆ ದೂರ… ಎಂಬ ಹಾಡುನ್ನು ಬರೆದ ಹೆಗ್ಗಳಿಯೂ ಗೀತಪ್ರಿಯ ಅವರದ್ದಾಗಿದೆ.
ಹೀಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಗೀತೆ ರಚನೆಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದದ್ದನ್ನು ಗಮನಿಸಿದ ಕರ್ನಾಟಕ ಫಿಲಂಸ್ ಸಂಸ್ಥೆಯಲ್ಲಿದ್ದ ಎಂ.ವಿ. ವೆಂಕಟಾಚಲಂ ಅವರು 1968ರಲ್ಲಿ ನಿರ್ಮಿಸಿದ ಡಾ. ರಾಜಕುಮಾರ್ ಮತ್ತು ಕಲ್ಪನಾ ಅಭಿನಯದ ಮಣ್ಣಿನ ಮಗ ಚಿತ್ರದ ನಿರ್ದೇಶನದ ಹೊಣೆಯನ್ನು ಗೀತಪ್ರಿಯ ಅವರಿಗೆ ವಹಿಸುವ ಮೂಲಕ ನಿರ್ದೇಶಕರಾದರು. ಮೊದಲ ಪಂದ್ಯದಲ್ಲೇ ಶತಕ ಹೊಡೆವ ಆಟಗಾರರಂತೆ, ಅವರ ಚೊಚ್ಚಲ ಚಿತ್ರದಲ್ಲೇ ವರನಟ ರಾಜಕುಮಾರ್ ಅವರ ಚಿತ್ರವನ್ನು ನಿರ್ದೇಶಿರುವ ಅವಕಾಶ ಪಡೆದು ಆ ಚಿತ್ರವನ್ನು ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದರು. 1968ರಲ್ಲಿ ಉದ್ಘಾಟಿಸಲ್ಪಟ್ಟ, 1,465 ಆಸನಗಳುಳ್ಳ ಏಷ್ಯಾದ ಅತಿದೊಡ್ಡ ಸಿನಿಮಾ ಮಂದಿರ ಎಂಬ ಖ್ಯಾತಿಯನ್ನು ಪಡೆದಿದ್ದ ಕಪಾಲಿಯಲ್ಲಿ ಸ್ಥಳೀಯ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಹಿಂಜರಿಯುತ್ತಿದ್ದರು. ಏಕೆಂದರೆ ಅಷ್ಟು ದೊಡ್ಡ ಆಸನದ ಸಾಮರ್ಥ್ಯದ ಸಿನಿಮಾ ಮಂದಿರದಲ್ಲಿ ಸಾಕಷ್ಟು ಸಂಖ್ಯೆಯ ಪ್ರೇಕ್ಷಕರಿದ್ದರೂ ಸಹ ಚಿತ್ರಮಂದಿರ ಖಾಲಿಯಾಗಿ ಕಾಣುತ್ತದೆ ಎಂದು ಹೆದರುತ್ತಿದ್ದರೂ, ಗೀತಪ್ರಿಯ ಅವರ ಚೊಚ್ಚಲ ಚಿತ್ರ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಚಿತ್ರವಾಗಿದ್ದಲ್ಲದೇ, ತುಂಬಿದ ಗೃಹದಲ್ಲಿ 100 ದಿನಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ಪ್ರದರ್ಶನಗೊಳ್ಳುವ ಮೂಲಕ ಕಪಾಲಿ ಚಿತ್ರ ಮಂದಿರದಲ್ಲಿ ಬಿಡಿಗಡೆಯಾದ ಮತ್ತು ಶತದಿನೋತ್ಸವ ಕಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆಗೂ ಪಾತ್ರವಾಯಿತು.
ಮುಂದಿನ ವರ್ಷವೇ 1969ರಲ್ಲಿ ಎಂ.ಪಿ. ಶಂಕರ್ ನಿರ್ಮಾಣದ ಕಾಡಿನ ರಹಸ್ಯ ಗೀತಪ್ರಿಯ ಅವರ ಎರಡನೇ ನಿರ್ದೇಶನ ಚಿತ್ರವಾಗಿ ಅದೂ ಸಹಾ ಬಹಳ ಜನಪ್ರಿಯವಾಯಿತು. ಅದೇ ವರ್ಷ ಮದುವೆ, ಮದುವೆ, ಮದುವೆ, ಎಂಬ ಹಾಸ್ಯ ಚಿತ್ರ ನಿರ್ದೇಶಿಸಿದರುಲ್ ಹೀಗೆ ತಮ್ಮ ಬಹುತೇಕ ಚಿತ್ರಗಳಿಗೆ ಕಥೆ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ತಾವೇ ಬರೆಯುವ ಮೂಲಕ ಚಿತ್ರರಂಗದ ಆಲ್ರೌಂಡರ್ ಆಗಿದ್ದರು ಎಂದರೂ ಅತಿಶಯವಾಗದು.
ಗೀತಪ್ರಿಯ ತಮ್ಮ ಸಿನಿ ಪಯಣದಲ್ಲಿ ಮಣ್ಣಿನಮಗ, ಯಾವ ಜನ್ಮದ ಮೈತ್ರಿ, ಬೆಸುಗೆ, ಹೊಂಬಿಸಿಲು, ಭೂಪತಿರಂಗ, ನಾರಿ ಮುನಿದರೆ ಮಾರಿ, ಬೆಳುವಲದ ಮಡಿಲಲ್ಲಿ ಮುಂತಾದ ಕೌಟುಂಬಿಕ ಮತ್ತು ಕಾದಂಬರಿ ಆಧಾರಿತ ಸಿನಿಮಾಗಳಲ್ಲದೇ, ಪುಟಾಣಿ ಏಜೆಂಟ್ 123 ಮತ್ತು ಪ್ರಚಂಡ ಪುಟಾಣಿಗಳು ಎಂಬ ಮಕ್ಕಳ ಚಿತ್ರವೂ ಸೇರಿದಂತೆ ಸುಮಾರು 40 ಚಿತ್ರಗಳನ್ನು ಕನ್ನಡ, ಹಿಂದಿ ಮತ್ತು ತುಳು ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ಸುಮಾರು 250 ಚಿತ್ರಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಗೀತರಚನೆಕಾರರಾಗಿಯೂ ಹೆಸರು ಮಾಡಿದ್ದರು. ಅವರ ಗೀತೆಗಳಲ್ಲಿ ಅಡಗಿರುವ ಮಾನವ ಪ್ರೀತಿ, ಶೋಷಣೆಯ ಬಗ್ಗೆ ಆಕ್ರೋಶ, ಬಡವರ ಪರ ದನಿ, ಕೌಟುಂಬಿಕ ಹಿನ್ನೆಲೆ, ಜೀವನ ದೇವರ ಮೇಲೆ ಸಿಟ್ಟು ಇವೆಲ್ಲವೂ ಜನಸಾಮಾನ್ಯರ ದನಿಯೆನಿಸಿ ಪ್ರಸಿದ್ಧವಾಗಿವೆ. ಪ್ರಚಂಡ ಪುಟಾಣಿಗಳು ಚಿತ್ರವನ್ನು ಆವರು ಹಿಂದಿಯಲ್ಲಿ ಅನ್‌ಮೋಲ್ ಸಿತಾರೆ ಎಂಬ ಹೆಸರಿನಲ್ಲಿ ನಿರ್ದೇಶಿಸಿದ್ದರು.
ನೀರ ಬಿಟ್ಟು ನೆಲದ ಮೇಲೆ (ಹೊಂಬಿಸಿಲು), ರಸಿಕ ರಸಿಕ ಬಲು ಮೆಲ್ಲನೆ ತೂರಾಡು (ಭೂಪತಿ ರಂಗ), ಇದೇನು ಸಭ್ಯತೆ (ಮಣ್ಣಿನ ಮಗ), ನೀನೆಲ್ಲಿ ನಡೆವೆ ದೂರ (ಒಂದೇ ಬಳ್ಳಿಯ ಹೂಗಳು), ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ (ಬೆಳವಲದ ಮಡಿಲಲ್ಲಿ), ಇಲ್ಲೆ ಸ್ವರ್ಗ ಇಲ್ಲೆ ನರಕ, ಮೇಲೆ ಇಲ್ಲ ಸುಳ್ಳು (ನಾಗರ ಹೊಳೆ), ನಮ್ಮೊರ್ನಾಗ್ ನಾನೊಬ್ಬನೆ ಜಾಣ, ನನ್ನ ಹಾಡಂದ್ರೆ ಎಲ್ಲಾರ್ಗು ಪ್ರಾಣ (ನಾರಿ ಮುನಿದರೆ ಮಾರಿ) ಬೆಸುಗೆ ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ (ಬೆಸುಗೆ), ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ, ಪ್ರೀತಿಯ ಸವಿಮಾತೇ ಉಪಾಸನೆ (ಅನುರಾಗ ಬಂಧನ) ಮುಂತಾದವುಗಳು ಅವರು ರಚಿಸಿದ ಜನಪ್ರಿಯ ಗೀತೆಗಳಾಗಿವೆ.
ಇದಲ್ಲದೇ 2 ನಾಟಕ ಮತ್ತು 2 ಕಾದಂಬರಿಗಳಲ್ಲದೇ, ಬಾಳ ಲಹರಿ ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥನದ ಪುಸ್ತಕವನ್ನೂ ಬರೆದಿದ್ದಾರೆ. ವಯಸ್ಸಾಗುತ್ತಿದ್ದಂತೆಯೇ ಸಕ್ರೀಯ ಚಲನಚಿತ್ರಗಳ ಕೆಲಸ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಿದರೂ, ವಿಜಯ ಚಲನಚಿತ್ರ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುವ ಮೂಲಕ ಚಲನಚಿತ್ರೋದ್ಯಮಕ್ಕಾಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಲ್ಲದೇ ಆ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದನ್ನು ಮುಂದುವರೆಸಿದರು. ಅವರ ನಂತರ ಅವರ ಧರ್ಮ ಪತ್ನಿಯವರಾದ ಶ್ರೀಮತಿ ಸುಶೀಲಾ ಬಾಯಿ ಅವರಿಗೂ ಸಿನಿಮಾರಂಗದಲ್ಲಿ ಆಸಕ್ತಿ ಇದ್ದರೂ ಅವರು ಚಿತ್ರರಂಗದಲ್ಲಿ ಸಕ್ರೀಯರಾಗದೇ, ವಿಜಯ್ ಇನ್ಸ್ ಟ್ಯೂಟ್ ನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಗೀತರಚನೆ ಮತ್ತು ನಿರ್ದೇಶನಕ್ಕಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳಲ್ಲದೇ, ಅನೇಕ ಸಂಘ ಸಂಸ್ಥೆಗಳೂ ಸಹಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದು ಅವುಗಳಲ್ಲಿ ಪ್ರಮುಖವಾದವು ಹೀಗಿವೆ.
- ಮಣ್ಣಿನ ಮಗ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ(1968)
- ಯಾವ ಜನ್ಮದ ಮೈತ್ರಿಗೆ ರಾಜ್ಯ ಪ್ರಶಸ್ತಿ(1971)
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ & ಕರ್ನಾಟಕ ರಾಜ್ಯಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ (1992)
- ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಕೆ.ಸಿ.ಎನ್. ಪ್ರಶಸ್ತಿ (1993)
- ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ರಾಜಕುಮಾರ್ ಪ್ರಶಸ್ತಿ (1996-97)
- ಚಿ.ಉದಯಶಂಕರ್, ಅರ್.ಎನ್.ಅರ್. ಮತ್ತು ಇಂಡಿಯನ್ ಪೊಯಟ್ರಿಂಗ್ ರೈಟರ್ಸ್ ಪ್ರಶಸ್ತಿ (2005)
- ಸರೋಜಾ ದೇವಿ ಪ್ರಶಸ್ತಿ
ಕನ್ನಡ ಚಿತ್ರರಂಗದಲ್ಲಿ ಸುಧೀರ್ಘವಾಗಿ ತೊಡಗಿಸಿಕೊಂಡಿದ್ದ ಗೀತಪ್ರಿಯರು ವಯೋಸಹಜ ಖಾಯಿಲೆಯಿಂದಾಗಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಸೇರಿಕೊಂಡು ಅಲ್ಲಿನ ಚಿಕಿತ್ಸೆ ಫಲಕಾರಿಯಾಗದೇ, ತಮ್ಮ 84 ವರ್ಷ ವಯಸ್ಸಿನಲ್ಲಿ 2016ರ ಜನವರಿ 17ರಂದು ನಿಧನರಾಗಿ ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಹೋದರೂ, ಅವರ ಸಿನಿಮಾಗಳ ಮೂಲಕ ಮತ್ತು ಸುಮಧುರವಾದ ಗೀತೆಗಳ ಮೂಲಕ ನಮ್ಮೊಂದಿಗೆ ಆಚಂದ್ರಾರ್ಕವಾಗಿ ಇದ್ದೇ ಇರುವ ಕಾರಣ, ಆವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ