ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ! ಎಂಬುದು ಭಗವದ್ಗೀತೆಯ ಒಂದು ಶ್ಲೋಕವಾಗಿದ್ದು, ಯಾವಾಗಾ ಧರ್ಮಕ್ಕೆ ಕ್ಷೀಣತೆ ಉಂಟಾಗಿ ಅಧರ್ಮ ಹೆಚ್ಚಾಗುತ್ತದೆಯೋ, ಆಗ ಧರ್ಮವನ್ನು ರಕ್ಷಿಸಲು ಮತ್ತು ದುಷ್ಟರನ್ನು ಸಂಹರಿಸಲು ತಾನು ಮತ್ತೆ ಮತ್ತೆ ಅವತರಿಸುತ್ತಲೇ ಇರುತ್ತೇನೆ ಎಂದು ಶ್ರೀಕೃಷ್ಣನು ಅರ್ಜನನಿಗೆ ಹೇಳಿದ ಮಾತಿದು. ಈಗ ದೇವರನ್ನು ಪ್ರತ್ಯಕ್ಷವಾಗಿ ನೋಡಲು ಅಸಾಧ್ಯವಾದರೂ, ತಮ್ಮ ಆಧ್ಯಾತ್ಮ ಸಾಧನೆಗಳಿಂದ ಪವಾಡಗಳನ್ನು ಮಾಡಿರುವ ನೂರಾರು ಸಾಧು ಸಂತರನ್ನು ನಾವು ಕಾಣಬಹುದಾಗಿದ್ದು ಅಂತಹವರಲ್ಲಿ ಶ್ರೀ ಶ್ರೀಧರ ಸ್ವಾಮಿಗಳು ಸಹಾ ಒಬ್ಬರು.
ಶ್ರೀಧರ ಸ್ವಾಮಿಗಳು ಕರ್ನಾಟಕದ ಲಾಡ್ ಚಿಂಚೋಳಿಯಲ್ಲಿ ನಾರಾಯಣ ರಾವ್ ಮತ್ತು ಕಮಲಾಬಾಯಿ ದೆಗ್ಲೂರ್ಕರ್ ಅವರ ಮಗನಾಗಿ 1908 ರ ಡಿಸೆಂಬರ್ 7 ರಂದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ಎನ್ನುವುದಕ್ಕಿಂತಲೂ ಅವತರಿಸಿದರು ಎನ್ನುವುದೇ ಸೂಕ್ತ ಏಕೆಂದರೆ ಆ ದಂಪತಿಗಳು ಆದಿ ಗುರು ದತ್ತಾತ್ರೇಯರನ್ನು ಬಹಳವಾಗಿ ಪ್ರಾರ್ಥಿಸಿ ದತ್ತಾತ್ರೇಯರೇ ತಮ್ಮ ಮಗುವಾಗಿ ಜನಿಸುವಂತೆ ಬೇಡಿಕೊಂಡಿದ್ದ ಪರಿಣಾಮವೋ ಏನೋ? ದತ್ತ ಜಯಂತಿಯಂದು ಶ್ರೀ ಗುರುದತ್ತರ ರಥ ಅವರ ಮನೆಯ ಮುಂದೆ ಹಾದು ಹೋಗುತ್ತಿದ್ದಾಗಲೇ, ಶ್ರೀ ದತ್ತಾತ್ರೇಯರ ವರವಾಗಿ ಅವರು ಜನಿಸಿದರು.
ಅವರಿಗೆ 3 ವರ್ಷ ವಯಸ್ಸಾಗಿದ್ದಾಗಲೇ ತಂದೆಯವರು ವಿಧಿವಶರಾದಾಗ, ಸೋದರ ಮಾವ ತ್ರಯಂಬಕ್ ಅವರ ಆಶ್ರಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಹೈದರಾಬಾದ್‌ನ ಶಾಲೆಯಲ್ಲಿ ಆರಂಭಿಸಿದರೂ ಅವರಿಗೆ ಲೌಕಿಕಕಿಂತಲೂ, ಆಧ್ಯಾತ್ಮದತ್ತಲೇ ವಿಶೇಷ ಒಲವು. ಅದೊಮ್ಮೆ ಶಾಲೆಯಲ್ಲಿ ಪರೀಕ್ಷೆಗೂ ಮುನ್ನಾ ವಿಪರೀತ ಅನಾರೋಗ್ಯಕ್ಕೆ ತುತ್ತಾಗಿ ಶಾಲೆಗೆ ಹೋಗಲಾಗದೇ, ಈ ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದು ನಿಶ್ಚಿತ ಎಂದೇ ಎಲ್ಲರೂ ಭಾವಿಸಿದ್ದಾಗ, ಅವರ ತಾಯಿ ಅವರಿಗೆ ನಿರಂತರವಾಗಿ ರಾಮ ಜಪವನ್ನು ಮಾದಿಸುತ್ತಿದ್ದರ ಫಲವಾಗಿ ಅನಾರೋಗ್ಯದ ನಡುವೆಯೂ ಏನನ್ನೂ ಓದದೇ ಕೇವಲ ರಾಮ ಜಪದ ಪರಿಣಾಮವಾಗಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದು ಉತ್ತೀರ್ಣನಾಗುವ ಮೂಲಕ ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ತಮ್ಮ ಪವಾಡವನ್ನು ಬಾಲ್ಯದಲ್ಲೇ ಪ್ರಚುರ ಪಡಿಸಿದ್ದರು.
ಶ್ರೀಧರ ಸ್ವಾಮಿಗಳಿಗೆ ಹತ್ತು ವರ್ಷದವಾಗಿದ್ದಾಗ ಅವರ ಅಣ್ಣ ನಿಧನರಾದಾಗ ಪುತ್ರಶೋಕ ನಿರಂತರಂ ಎನ್ನುವಂತೆ ಅದೇ ಕೊರಗಿನಲ್ಲಿ ಅವರ ತಾಯೂ ಸಹಾ ನಿಧನರಾದಾಗ, ಶ್ರೀಧರ ಸ್ವಾಮಿಯವರು ಗುಲ್ಬರ್ಗದಲ್ಲಿದ್ದ ತಮ್ಮ ಚಿಕ್ಕಮ್ಮನ ಮನೆಗೆ ಹೋಗಿ ತಮ್ಮ ಶಿಕ್ಷಣವನ್ನು ಮುಂದುವರಿಸಿ, ಆನಂತರ ಆಧ್ಯಾತ್ಮಿಕ ಜ್ಞಾನೋದಯದ ಬಯಕೆಯಿಂದ ಪುಣೆಗೆ ಹೋಗಿ ಅಲ್ಲಿನ ಅನಾಥಾಶ್ರಮದಲ್ಲಿ ತಂಗಿ, ಶ್ರೀ ಪಳ್ನಿಟ್ಕರ್ ಅವರ ಸಲಹೆಯಂತೆ ಶ್ರೀ ಸಮರ್ಥ ರಾಮದಾಸರು ತಮ್ಮ ಅಂತಿಮ ದಿನಗಳು ಕಳೆದಿದ್ದ ಸಜ್ಜನಗಡಕ್ಕೆ ಹೋಗಿ ಅಲ್ಲಿ ಸ್ವಾಮಿಗಳ ಕುರಿತಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಅಧ್ಯಯನ ಮಾಡುತ್ತಿದ್ದಾಗ, ಸಮರ್ಥ ರಾಮದಾಸರು ಸ್ವತಃ ಶ್ರೀಧರ ಸ್ವಾಮಿಗಳನ್ನು ಆಶೀರ್ವದಿಸಿ, ದಕ್ಷಿಣಕ್ಕೆ ಕರ್ನಾಟಕಕ್ಕೆ ಹೋಗಿ ಸನಾತನ ವೈದಿಕ ಧರ್ಮದ ನಿಜವಾದ ಸಂದೇಶವನ್ನು ಹರಡಲು ನಿರ್ದೇಶಿಸಿದರು.
ಶ್ರೀ ಸಮರ್ಥ ರಾಮದಾಸರಿಂದ ಆಶೀರ್ವಾದ ಪಡೆದು ಸುಮಾರು 13 ವರ್ಷಗಳ ಕಾಲ, ಕಾಲ್ನಡಿಗೆಯಲ್ಲಿ ದಕ್ಷಿಣ ಭಾರತದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಪಯಣಿಸಿ ಅಲ್ಲಿನ ದೇವಾಲಯಗಳು ಮತ್ತು ಮಠಗಳಲ್ಲಿ ಧಾರ್ಮಿಕ ಕ್ರಾಂತಿಗಾಗಿ ಸನಾತನ ವೈದಿಕ ಧರ್ಮದ ಕುರಿತು ಪ್ರವಚನಗಳನ್ನು ನೀಡುತ್ತಿದ್ದದ್ದಲ್ಲದೇ, ಸ್ಥಳೀಯ ಹಿಂದೂ ಧಾರ್ಮಿಕ ಮುಖಂಡರು ಮತ್ತು ಸಂತರೊಂದಿಗೆ ಸಂವಾದ ನಡೆಸುತ್ತಿದ್ದಂತಹ ಸಂಧರ್ಭದಲ್ಲಿ ಅವರಿಗೆ ಶೀಗೆಹಳ್ಳಿಯ ಶಿವಾನಂದ ಸ್ವಾಮಿಗಳ ಪರಿಚಯವಾಗಿ ಅವರೊಂದಿಗೆ ಕನ್ಯಾಕುಮಾರಿಯ ಶ್ರೀ ವಿವೇಕಾನಂದ ಸ್ಮಾರಕ ಬಂಡೆಗೆ ಭೇಟಿ ನೀಡಿ ಅಲ್ಲಿ ಧ್ಯಾನ ಮಾಡಿದ್ದರು. 1942 ರಲ್ಲಿ, ಶ್ರೀಧರ ಸ್ವಾಮಿಗಳು ಶೀಗೆಹಳ್ಳಿಯಲ್ಲಿ ಸನ್ಯಾಸ ಸ್ವೀಕರಿಸಿದಾಗ, ಅವರಿಗೆ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಭಗವಾನ್ ಶ್ರೀಧರ ಸ್ವಾಮಿ ಎಂಬ ಬಿರುದನ್ನು ನೀಡಲಾಯಿತು.
ಸನ್ಯಾಸತ್ವ ಸ್ವೀಕರಿಸಿದ ನಂತರ 1967 ರವರೆಗೆ, ಅವರು ಭಾರತದಾದ್ಯಂತ ವ್ಯಾಪಕವಾಗಿ ಪ್ರವಾಸ ಮಾಡಿ,ತಮ್ಮ ಭಾಷಣಗಳು, ಬರಹಗಳು ಮತ್ತು ಆಧ್ಯಾತ್ಮಿಕ ಉಪಕ್ರಮಗಳ ಮೂಲಕ ಸಾಮಾನ್ಯ ಜನರಲ್ಲಿ ವೇದಗಳ ಮೂಲ ಸಂದೇಶಗಳನ್ನು ಹರಡಿ, ಅಂತಿಮವಾಗಿ 1967 ರ ಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ವರದಾ ನದಿ ತಟದಲ್ಲಿರುವ ವರದಪುರಕ್ಕೆ ಬಂದು ಆಶ್ರಮವೊಂದನ್ನು ಕಟ್ಟಿ ಚಾತುರ್ಮಾಸದ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮಧ್ವಜವನ್ನು ಸ್ಥಾಪಿಸಿ ಆ ಆಶ್ರಮಕ್ಕೆ ಶ್ರೀಧರಾಶ್ರಮ ಎಂಬ ನಾಮಕರಣ ಮಾಡಿದರು. ಅಲ್ಲಿ ತಮ್ಮ ಮಂತ್ರ ದಂಡದ ಮೂಲಕ ನಾನಾ ಪವಾಡಗಳಿಂದ ಅಪಾರ ಭಕ್ತರನ್ನು ಆಶೀರ್ವದಿಸಿದರು.
ಶ್ರೀ ಶ್ರೀಧರ ಸ್ವಾಮಿಗಳು ವರದಹಳ್ಳಿಗೆ ಬಂದು ಶ್ರೀಧರಾಶ್ರಮ ಕಟ್ಟಿ ಬೆಳೆಸಿದ ನಂತರ ಸಾಧಾರಣ ಹಳ್ಳಿಯಾಗಿದ್ದ ವರದಹಳ್ಳಿ ಪುಣ್ಯಭೂಮಿಯಾಗಿ ಶಕ್ತಿ ಮತ್ತು ಭಕ್ತಿಯ ಕೇಂದ್ರವಾಗಿ ಭಕ್ತರ ಅನೇಕ ಸಂಕಷ್ಟಗಳನ್ನು ನಿವಾರಿಸುವ ಕೇಂದ್ರವಾಯಿತು. ಮಾತು ಬಾರದ ಅದೆಷ್ಟೋ ಜನರಿಗೆ ಮಾತು ಬರಿಸಿದ, ಹತ್ತಾರು ಖಾಯಿಲೆಯಿಂದ ನರಳುತ್ತಿರುವವರಿಗೆ ಆ ಖಾಯಿಲೆನ್ನು ಸಂಪೂರ್ಣವಾಗಿ ವಾಸಿ ಮಾಡಿರುವುದು, ಮಕ್ಕಳಾಗದವರಿಗೆ ಮಕ್ಕಳ ಭಾಗ್ಯವನ್ನೂ ಸಹಾ ಶ್ರೀಧರ ಸ್ವಾಮಿಗಳು ತಮ್ಮ ನಂಬಿದ ಭಕ್ತರಿಗೆ ಕರುಣಿಸಿರುವ ಉದಾಹರಣೆಗಳು ಸಾಕಷ್ಟಿವೆ.
ವರದಹಳ್ಳಿಯಲ್ಲಿ ದುರ್ಗಾಂಬಾ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ನೆಲೆನಿಂತ ನಂತರ, ಗುಡ್ಡದ ಮೇಲೆ ನಿಂತು ತಮ್ಮ ತಪೋಶಕ್ತಿಯಿಂದ ನೀರನ್ನು ಉದ್ಭವಿಸಿದ್ದನ್ನು ಗೋವಿನ ಬಾಯಿಂದ ನೀರು ಎಂದು ಕರೆಯಲಾಗುತ್ತದೆ. ಈ ನೀರು ಬಹಳ ಔಷಧೀಯ ಗುಣಗಳನ್ನು ಹೊಂದಿದ್ದು ಈ ನೀರಿನಲ್ಲಿ ಸ್ನಾನ ಮಾಡಿದಲ್ಲಿ ಅನೇಕ ಚರ್ಮರೋಗಗಳು ನಿವಾರಣೆ ಆಗುತ್ತದೆ ಎನ್ನುವ ಪ್ರತೀತಿಯಿದೆ. ಇಂದಿಗೂ ಸಹಾ ಗೋವಿನ ಬಾಯಿಯಲ್ಲಿ ಈ ರೀತಿಯಾಗಿ ನೀರು ಎಲ್ಲಿಂದ ಬರುತ್ತದೆ ಎನ್ನುವುದೇ ಯಾರಿಗೂ ತಿಳಿಯದಾಗಿರುವುದುದೇ ವಿಶೇಷವಾಗಿದೆ. ಶ್ರೀಧರಾಶ್ರಮದಲ್ಲಿ ಪ್ರತಿನಿತ್ಯವೂ ಗುರುಗಳ ಪಾದುಕಾ ಪೂಜೆ ನಡೆಯುತ್ತಿದ್ದು, ಪಾದುಕಾಪೂಜೆ ಮಾಡಿಸಿ ನಮಃ ಶಾಂತಾಯ, ದಿವ್ಯಾಯ ಸತ್ಯಧರ್ಮ ಸ್ವರೂಪಿಣಿ, ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ಎಂಬ ಶ್ಲೋಕವನ್ನು ನಿತ್ಯವೂ ಜಪಿಸಿದರೆ ಕಷ್ಟಗಳು ನಿವಾರಣೆಯಾಗಿ ಅಂದುಕೊಂಡದ್ದೆಲ್ಲವೂ ನಡೆಯುತ್ತದೆ ಎನ್ನುವುದು ಅವರ ಭಕ್ತರ ನಂಬಿಕೆಯಾಗಿದ್ದು ಅದೆಷ್ಟೋ ಪವಾಡಗಳು ಇಂದಿಗೂ ಸಹಾ ನಿರಂತವಾಗಿ ನಡೆಯುತ್ತಲೇ ಇದ್ದು, ಇಂದಿಗೂ ಶ್ರೀಧರಾಶ್ರಮದಲ್ಲಿ ಗುರುಗಳ ಚಲನವಲನಗಳು ನಡೆಯುತ್ತಿದ್ದು ಅದನ್ನು ಸಾಕಷ್ಟು ಭಕ್ತರು ಕಂಡಿದ್ದಾರೆ ಎನ್ನಲಾಗುತ್ತದೆ.
ಏಪ್ರಿಲ್ 19, 1973 ರಂದು ಎಂದಿನಂತೆ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಧ್ಯಾನ ಮಾಡುತ್ತಿರುವಾಗಲೇ ಎರಡು ಬಾರಿ ‘ಓಂ, ಓಂ’ ಎಂದು ಹೇಳುತ್ತಲೇ ಸುಮಾರು ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಸ್ವಾಮೀಜಿಗಳು ಅಂತಿಮ ಸಮಾಧಿಯನ್ನು ಪಡೆದರು. ಆಧ್ಯಾತ್ಮದಲ್ಲಿ ಬಹಳ ಸಾಧನೆ ಮಾಡಿ ಪ್ರತಿಭಾನ್ವಿತರಾಗಿದ್ದ ಸ್ವಾಮಿಗಳಿಗೆ ಸಂಸ್ಕೃತ ಕನ್ನಡ,ಮರಾಠಿ, ಹಿಂದಿ ಮತ್ತು ವಿಶೇಷವಾಗಿ ಇಂಗ್ಲಿಷ್ ಭಾಷೆಯಲ್ಲಿಯೂ ಒಳ್ಳೆಯ ಜ್ಞಾನವಿದ್ದು ಈ ಎಲ್ಲಾ ಭಾಷೆಗಳಲ್ಲಿಯೂ ನಿರರ್ಗಳವಾಗಿ ತಮ್ಮ ವ್ಯಾಪಕ ಪ್ರಯಾಣದ ಉದ್ದಕ್ಕೂ ಪ್ರವಚನ ಮತ್ತು ಧಾರ್ಮಿಕ ಬರವಣಿಗಳ ಮೂಲಕ ವೇದ ಬೋಧನೆಯ ಸಂಕೀರ್ಣ ಸೂಕ್ಷ್ಮ ವ್ಯತ್ಯಾಸಗಳನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ರೂಪದಲ್ಲಿ ಸರಳೀಕರಿಸಿ ತಿಳಿಸಿದ್ದಲ್ಲದೇ, ಮರಾಠಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರು. ಶ್ರೀಧರಸ್ವಾಮಿಗಳಂತಹ ದೈವಾಂಶ ಸಂಭೂತರರನ್ನು ಅವರ ಜನ್ಮದಿನದಂದು ನೆನಪು ಮಾಡಿಕೊಂಡು ಅವರ ಆದರ್ಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ 2025ರ ಡಿಸೆಂಬರ್ 4ರ ವರ್ತಮಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.
