ಮೈಸೂರು ಮತ್ತು ತಂಜಾವೂರು ಕಲಾಕೃತಿಗಳ ಮೇರೋತ್ಸವ

ಕಲೆ ಯಾರದ್ದೇ ಸ್ವತ್ತಲ್ಲಾ. ಯಾರು ಆಸಕ್ತಿವಹಿಸಿ ಶ್ರದ್ಧೆಯಿಂದ ಕಲೆಯನ್ನು ಅಭ್ಯಸಿಸುತ್ತಾರೋ ಅವರಿಗೆ ಖಂಡಿತವಾಗಿಯೂ ಕಲೆ ಒಲಿಯುತ್ತದೆ. ಕಲೆಗೆ ಜಾತಿ, ಧರ್ಮ, ಮತ, ಬಡವ, ಶ್ರೀಮಂತ, ಚಿಕ್ಕವ, ದೊಡ್ಡವ ಇದಾವುರದರೂ ಪರಿವಿಲ್ಲದೇ, ಆಬಾಲವೃದ್ಧರಾದಿಯಾಗಿ ಯಾರೂ ಬೇಕಾದರೂ ಕಲೆಯಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಕಲಾವಿದೆ ಶ್ರೀಮತಿ ತಿರುಮಲ ಶ್ರೀಕಾಂತ್ ಅವರ ತಮ್ಮ  ಮೇರು ಚಿತ್ರ ಕಲಾಶಾಲೆ ಮತ್ತು ಅವರ ವಿದ್ಯಾರ್ಥಿಗಳಿಂದ 2026ರ ಜನವರಿ  9-11ರವರೆಗೆ 3ದಿನಗಳ ಕಾಲ ಆಯೋಜಿಸಲಾಗಿರುವ ಮೇರೋತ್ಸವ ಇದೆ ಎಂದರೂ ತಪ್ಪಾಗದು.

ಸಂಗೀತ, ಸಾಹಿತ್ಯ, ಮತ್ತು ಕಲೆ ಎಂದ ಕೂಡಲೇ ಥಟ್ ಅಂತಾ  ಎಲ್ಲರ ಮನಸ್ಸಿಗೆ ಮೂಡುವೇ ನಮ್ಮ ಕರ್ನಾಟಕವಾಗಿದ್ದು ಅದರಲ್ಲೂ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಸಹಾ ನೆನಪಾಗುತ್ತದೆ.  ಈ ಮೇರೋತ್ಸವದಲ್ಲಿ  ಮೇರು ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು (6-60+ ವಯಸ್ಸು) ಶ್ರದ್ಧೆಯಿಂದ ಬಿಡಿಸಿದಂತ ಮೈಸೂರು ಮತ್ತು ತಂಜಾವೂರು ಶೈಲಿಯ ಕಲಾಕೃತಿಗಳು ಪ್ರದರ್ಶನಕ್ಕೆ ಮತ್ತು ಕೆಲವು ಆಯ್ದ ಕೃತಿಗಳು ಮಾರಟಕ್ಕೆ ಲಭ್ಯವಿದ್ದು, ಚಿತ್ರ ಕಲಾಸಕ್ತರು ಖಂಡಿತವಾಗಿಯೂ ಭೇಟಿ ನೀಡಲೇ ಬೇಕಾದ ಪ್ರದರ್ಶನವಾಗಿದೆ. 

ನಮ್ಮ ದೇಶ ಭಾರತ ತನ್ನ ಹೆಸರಿಗೆ ತಕ್ಕಂತೆ ಅನ್ವಯವಾಗಿ  ಭಾವ, ರಾಗ, ತಾಳದ ಸಮ್ಮಿಳಿನವಾಗಿದೆ. ಭಾವ ಎಂದರೆ ಭಾವನೆ ಅಥವಾ ಅಭಿವ್ಯಕ್ತಿ, ರಾಗ ಎಂದರೆ ಸಂಗೀತದ ಸ್ವರ ಮತ್ತು ಮಧುರತೆ, ಮತ್ತು ತಾಳ ಎಂದರೆ ಲಯಬದ್ಧ ಚೌಕಟ್ಟು. ಈ ಮೂರರ ಸಮ್ಮಿಲನವೇ ಭಾರತದ ಎಲ್ಲಾ ಕಲೆಗಳ ಸಂಪೂರ್ಣ ಪರಿಕಲ್ಪನೆಯಾಗಿದ್ದು  ಅದು ಪ್ರದರ್ಶನಕ್ಕೆ ಆಳ ಮತ್ತು ಅರ್ಥವನ್ನು ನೀಡುತ್ತದೆ ಮತ್ತು ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕಾಕತಾಳೀಯವೆಂದರೆ,  ಕಲಾವಿದರ ಆಂತರಿಕ ಭಾವನೆ ಮತ್ತು ಅಭಿವ್ಯಕ್ತಿಯನ್ನು  ಎಲ್ಲರ  ಮನಸ್ಸಿಗೆ ನಾಟುವವಂತೆ ಕುಂಚದಲ್ಲಿ ವ್ಯಕ್ತಪಡಿಸುವಂತಹ ಗುರುಗಳಾದ  ಚಿತ್ರ ಕಲಾವಿದೆ ಶ್ರೀಮತಿ ನೀಲಪಂಚ್ ಮತ್ತು ಚಿತ್ರ ಕಲಾವಿದ ಡಾಕ್ಟರ್ ದುಂಡರಾಜ್ ಅವರುಗಳ ಜೊತೆ ಅಂಕಣಕಾರ ಶ್ರೀಕಂಠ ಬಾಳಗಂಚಿ ಮತ್ತು ಚಲನಚಿತ್ರ ಸಾಹಿತಿಗಳು ಮತ್ತು ಚಿತ್ರ ನಿರ್ದೇಶಕರಾದ ಶ್ರೀ ಕೆ ರಾಮನಾರಾಯಣ್ ಅವರುಗಳು  ಭಾವವನ್ನು ಪ್ರತಿನಿಧಿಸುವ ಅತಿಥಿಗಳಾಗಿ ಆಗಮಿಸಿದ್ದರೆ,  ಶುದ್ಧವಾದ ಸಂಗೀತದ ಸ್ವರ ಸಂಯೋಜನೆಯ ಮೂಲಕ ಒಂದು ನಿರ್ದಿಷ್ಟ ಮನೋಭಾವವನ್ನು ರೂಪಿಸುವ ಮಧುರತೆಯನ್ನು ಹೊಂದಿರುವ ಗಾಯಕಿ ಶ್ರೀಮತಿ ಶಮಿತಾ ಮಲ್ನಾಡ್ ರಾಗದ ಪ್ರತಿನಿಧಿಯಾದರೆ, ಇನ್ನು ಲಯ ಮತ್ತು ತಾಳದ ಚೌಕಟ್ಟಿನಲ್ಲಿ ಸಂಗೀತ ಮತ್ತು ಸಾಹಿತ್ಯಕ್ಕೆ ತಕ್ಕಂತೆ ಲಯಬದ್ಧ ನೃತ್ಯವನ್ನು ಮಾಡುವ ನೃತ್ಯಗಾರ್ತಿಯಾಗಿ ಚಲನಚಿತ್ರ ನಟಿ ಶ್ರೀಮತಿ ಅನುಪ್ರಭಾಕರ್ ಮುಖರ್ಜಿಯವರು  ಅತಿಥಿಗಳಾಗಿ ಆಗಮಿಸಿ, ಭಾವ, ರಾಗ  ಮತ್ತು ತಾಳ ಈ ಮೂರು ಅಂಶಗಳು ಒಟ್ಟಾಗಿ ಸೇರಿರುವ ಭಾರತವೇ ಆ ವೇದಿಕೆಯ ಮೇಲೆ ಅತಿಥಿಗಳಾಗಿದದ್ದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತ್ತು.

ಬಹುತೇಕ ಎಲ್ಲಾ ಅತಿಥಿಗಳೂ  ಕಾರ್ಯಕ್ರಮದ ಆರಂಭಕ್ಕಿಂತಲೂ ಸಾಕಷ್ಟು ಮುಂಚೆಯೇ ಬಂದ ಕಾರಣ,  ಅವರೆಲ್ಲರಿಗೂ ಪ್ರತಿಯೊಬ್ಬ ಕಲಾವಿದರುಗಳೂ ಸಹಾ ವೈಯಕ್ತಿಕವಾಗಿ ತಮ್ಮ ತಮ್ಮ ಕಲಾಕೃತಿಗಳನ್ನು ತೋರಿಸಿ ಅದರ ಪ್ರಾಮುಖ್ಯತೆ,  ಆ ಕೃತಿಯ ರಚನೆಯ ಹಿನ್ನಲೆ, ಅದಕ್ಕೆ  ಅವರುಗಳು ತೆಗೆದುಕೊಂಡ ಸಮಯ ಮತ್ತು  ಆ ಕೃತಿಗಳ ರಚಿಸುವಾಗ  ಅವರಿಗಾದ ಅನುಭವಗಳನ್ನು ಹಂಚಿಕೊಂಡಿದ್ದು ಕಾರ್ಯಕ್ರಮದ ಆಕರ್ಷಣೀಯವಾದ ಅಂಶವಾಗಿತ್ತು. ಚಿಕ್ಕ ಚಿಕ್ಕ  ಮಕ್ಕಳು ರಚಿಸಿದ್ದ, ದಶಾವತಾರದ ಕೃತಿಗಳು, ವಿವಿಧ ಶೈಲಿಯ ಮತ್ತು ಭಂಗಿಗಳ ಗಣೇಶನ ಕೃತಿಗಳು, ಶ್ರೀಕೃಷ್ಣನೇ ನಮ್ಮ ಕಣ್ಣ ಮುಂದೆಯೇ ಇದ್ದಾನೇನೋ ಎನ್ನುವಂತೆ ಭಾಸವಾಗುವ ವಿವಿಧ ಕೃಷ್ಣ ರಚನೆಗಳಲ್ಲದೇ, ಹಯಗ್ರೀವ, ಸರಸ್ವತಿ, ಲಕ್ಷ್ಮೀ, ಪಾರ್ವತಿ, ಶಾರದೆ, ಬ್ರಹ್ಮ, ವಿಷ್ಣು, ಮಹೇಶ್ವರವಲ್ಲದೇ, ಅರ್ಧ ನಾರೀಶ್ವರದ ಚಿತ್ರಗಳು ಮೈಸೂರು ಮತ್ತು ತಂಜಾವೂರು ಶೈಲಿಯ ಚಿತ್ರಗಳು  ಮನಸ್ಸನ್ನು ಸೂರೆಗೊಂಡಿದ್ದವು.

ಉಳಿದ ಎಲ್ಲಾ ಚಿತ್ರಗಳ ಹಿನ್ನಲೆಗಳ ಅರಿವಿರುವವರಿಗೆ ಆ ಚಿತ್ರಗಳು ಮನಸ್ಸಿಗೆ ನಾಟುವಂತಿದ್ದರೆ, ಕೇವಲ ಚಿತ್ರಕಲಾವಿದರ ಹೊರತಾಗಿ  ಬಹತೇಕರಿಗೆ ಪರಿಚಯವೇ ಇರದ ನವಗುಂಜರ (Navagunjara) ಚಿತ್ರ ಅಚ್ಚರಿಯನ್ನು ಮೂಡಿಸುವಂತಿತ್ತು. ನವಗುಂಜರ ಎಂದರೆ ಒಂಬತ್ತು ವಿಭಿನ್ನ ಪ್ರಾಣಿಗಳ ಅಂಗಗಳಿಂದ ರೂಪುಗೊಂಡ ಒಂದು ಪೌರಾಣಿಕ ಜೀವಿ ಇದನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ.   ಇದು ವಿಶೇಷವಾಗಿ ಒಡಿಶಾ ಮಹಾಭಾರತದಲ್ಲಿ ಕಂಡು ಬರುತ್ತದೆ ಮತ್ತು ಇದು ಭಗವಾನ್ ಕೃಷ್ಣನ ವಿರಾಟ್ ರೂಪದ ಒಂದು ಭಾಗವಾಗಿದೆ. ಈ ರೂಪವು ಹುಂಜ, ಆನೆ, ಕುದುರೆ, ಎತ್ತು, ನವಿಲು, ಹಾವು, ಜಿಂಕೆ, ಹುಲಿ ಮತ್ತು ಮನುಷ್ಯನ ಅಂಗಗಳನ್ನು ಒಳಗೊಂಡಿದ್ದು,  ದೈವಿಕ ಏಕತೆ ಮತ್ತು ಸಂಘಟಿತ ಶಕ್ತಿಯನ್ನು ಸಂಕೇತಿಸುತ್ತದೆ. ಮಹಾಭಾರತದ ವನವಾಸದಲ್ಲಿದ್ದ ಅರ್ಜುನನಿಗೆ ಶ್ರೀ ಕೃಷ್ಣನು ತನ್ನ ನಿಜವಾದ ರೂಪವನ್ನು ತೋರಿಸಲು ಈ ನವಗುಂಜರ ರೂಪದಲ್ಲಿ ಕಾಣಿಸಿಕೊಂಡು, ಅದರಲ್ಲಿ ಒಂಬತ್ತು ಪ್ರಾಣಿಗಳ ಪ್ರತಿನಿಧಿಸುವ  ಪ್ರೀತಿ, ಧೈರ್ಯ, ಬುದ್ಧಿವಂತಿಕೆ, ಶಕ್ತಿ, ಇತ್ಯಾದಿ  ಸಂಕೇತವಾಗಿದ್ದು, ದೇವರು ಎಲ್ಲರಲ್ಲೂ ಎಲ್ಲಾ  ರೂಪದಲ್ಲಿ ಕಾಣಬಹುದು ಎಂಬುದರ ಪ್ರತೀಕವಾಗಿದೆ, ಈ ಚಿತ್ರದ ಮೂಲಕ  ದೇವರು ಎಲ್ಲೆಡೆಯಲ್ಲೂ ಮತ್ತು ಎಲ್ಲರಲ್ಲೂ  ಇದ್ದಾನೆ ಸಂದೇಶವನ್ನು ನೀಡುವುದಲ್ಲದೇ, ಭಯ ಮತ್ತು ಒತ್ತಡದ ಮನಸ್ಥಿತಿಯಲ್ಲಿರುವವರು ಈ ಚಿತ್ರವನ್ನು ನಿರಂತವಾಗಿ ನೋಡಿದಲ್ಲಿ ಅವರಲ್ಲಿ ನವೋತ್ಸಾಹದ ಚೈತನ್ಯ ಮೂಡುತ್ತದೆ ಎನ್ನಲಾಗುತ್ತದೆ ಎಂದು  ಒಡಿಶಾ ಸಂಸ್ಕೃತಿಯಲ್ಲಿ ಅದರಲ್ಲೂ ವಿಶೇಷವಾಗಿ ಜಗನ್ನಾಥ ಸಂಪ್ರದಾಯದಲ್ಲಿ ಕಂಡುಬರುತ್ತದೆ

ನಿಗಧಿತ ಸಮಯಕ್ಕೆ ಸರಿಯಾಗಿ ಎಲ್ಲಾ ಅತಿಥಿಗಳು, ಕಲಾವಿದರು, ಕಲಾಸಕ್ತರು ಮತ್ತು ಕಲಾ ಪೋಷಕರ ಸಮ್ಮುಖದಲ್ಲಿ ಚಿತ್ರಕಲಾ ಪರಿಷತ್ತಿನ  ಚಿತ್ರಕಲಾ ಪರಿಷತ್ತಿನ ಶ್ರೀ ದೇವರಾಜ್ ಅರಸ್ ಗ್ಯಾಲರಿಯಲ್ಲಿ ಚಿಕ್ಕ ಮಕ್ಕಳ ಶ್ಲೋಕ ಪ್ರಾರ್ಥನೆ ಮತ್ತು ಅತಿಥಿಗಳಿಂದ ದೀಪ ಪ್ರಜ್ವಲನೆಯ ಮೂಲಕ ಮೂರು ದಿನಗಳ ಮೇರೋತ್ಸವ ಅಧಿಕೃತವಾಗಿ ಉದ್ಭಾಟಿಸಲ್ಪಟ್ಟಿತು. ಕಾರ್ಯಕ್ರಮದ ಆರಂಭದಲ್ಲಿ ಮೇರು ಚಿತ್ರಕಲಾ ಶಾಲೆಯ ಸಂಸ್ಥಾಪಕರು ಹಾಗೂ ಚಿತ್ರಕಲಾವಿದೆಯಾದ ಶ್ರೀಮತಿ ತಿರುಮಲ ಶ್ರೀಕಾಂತ್  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮದು ಹಾಗಾಗಿ  ಮೇರು ಚಿತ್ರಕಲೆ ಶಾಲೆಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಚಿತ್ರಗಳನ್ನು ಮೊದಲ ಬಾರಿಗೆ ಆಯೋಜಿಸಲಾಗಿದ್ದು,  ಇಲ್ಲಿ ಸಿಕ್ಕುವ ಸಲಹೆ ಮತ್ತು ಪ್ರೋತ್ಸಾಹಗಳಿಗೆ ಅನುಗುಣವಾಗಿ  ಮುಂದಿನ ದಿನಗಳಲ್ಲಿ ಈ ರೀತಿಯ ಚಿತ್ರಪ್ರದರ್ಶನ ನಿರಂತರವಾಗಿ ನಡೆಸುವ ಯೋಜನೆ ಇದ್ದು, ಅದಕ್ಕೆ  ಎಲ್ಲರ ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಆದಾದ ನಂತರ ಬಂದ ಅತಿಥಿಗಳನ್ನು ಎಲ್ಲರಿಗೂ ಪರಿಚಯಿಸಿ ಅವರಿಗೆ ಗೌರವ ಸನ್ಮಾನಗಳನ್ನು ನೀಡಿದ ನಂತರ ಅವರುಗಳಿಂದಲೇ ತಮ್ಮ ಎಲ್ಲಾ ಶಿಷ್ಯಂದರಿಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ವಿತರಿಸಿದ್ದಲ್ಲದೇ, ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದ ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ತಿಳಿಸಲು ಕೋರಲಾಯಿತು.

ಮಾತು ಬೆಳ್ಳಿ ಮೌನ ಬಂಗಾರ ಎನ್ನುವಂತೆ, ಮಾತಿಗಿಂತಲೂ ಕೃತಿಯಲ್ಲಿಯೇ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ  ಗುರುಗಳಾದ ಶ್ರೀಮತಿ ಶ್ರೀಮತಿ ನೀಲ ಪಂಚ್ ಮತ್ತು ಚಿತ್ರ ಕಲಾವಿದರಾದ ಡಾಕ್ಟರ್ ದುಂಡರಾಜ್  ಅವರು  ತಮ್ಮ ವಿದ್ಯಾರ್ಥಿನಿ ತಿರುಮಲ ಶ್ರೀಕಾಂತ್  ಅವರು ಮತ್ತು ಅವರ ವಿದ್ಯಾರ್ಥಿಗಳು ಸೇರಿಕೊಂಡು ಇಷ್ಟು ದೊಡ್ಡ ಮಟ್ಟದಲ್ಲಿ ಮೇರೋತ್ಸವದಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ  ಹೆಮ್ಮೆಯಾಗುತ್ತಿದೆ ಮತ್ತು ಇಂತಹ ಶಿಷ್ಯೆಯನ್ನು ಪಡೆದಿರುವುದಕ್ಕೆ ಬಹಳ  ಸಂತೋಷವಾಗುತ್ತಿದೆ ಎಂದು ಹೇಳಿದ್ದಲ್ಲದೇ,  ಪ್ರತೀ ಕೃತಿಗಳನ್ನು ಸೂಕ್ಷ್ಮವಾಗಿ ನೋಡಿದ್ದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ತಪ್ಪುಗಳು ಇದ್ದರೂ, ಮೊದಲ ಬಾರಿಯ ಸಾಹಸ ನಿಜಕ್ಕೂ ಮೆಚ್ಚುವಂತಾಗಿದ್ದು ಮುಂದಿನ ಬಾರಿ ಅಂತಹದ್ದಲ್ಲೆವನ್ನೂ ತಿದ್ದಿಕೊಂಡು ಇನ್ನೂ ದೊಡ್ದ ಪ್ರಮಾಣದಲ್ಲಿ ಪ್ರದರ್ಶನ ಮಾಡುವಂತಾಗಬೇಕು ಎಂದು ಹೊಗಳಿ ಹಾರೈಸಿದರು.

ಅಂಕಣಕಾರ ಶ್ರೀಕಂಠ ಬಾಳಗಂಚಿಯವರು, ಭಾರತದ ಶಕ್ರಿಯೇ ಕಲೆಯಾಗಿದ್ದು, ಕಲೆ ಎಂಬುದು ನಮ್ಮ ಮಕ್ಕಳಿಗೆ  ಅಮ್ಮನ ಜೋಗುಳ,  ಅಜ್ಜಿ,ತಾತಂದಿರು ಹೇಳುತ್ತಿದ್ದ ರಾಮಾಯಣ, ಮಹಾಭಾರತದಂತಹ ಪೌರಾಣಿಕ ಕಥೆಗಳಿಂದಲೇ ಸಣ್ಣ ವಯಸ್ಸಿನಿಂದಲೇ ರಕ್ತಗತವಾಗಿ ಬರುತ್ತಿತ್ತು. ಅಂದು ಅಮ್ಮಂದಿರು ಚಂದಾಮಾಮನನ್ನು ತೋರಿಸಿ ಮಕ್ಕಳಿಗೆ ಮುಗಿಲೆತ್ತರಕ್ಕೆ  ಆಲೋಚಿಸುವ ಮತ್ತು ಕಲ್ಪಿಸಿಕೊಳ್ಳುವುದನ್ನು ಕಟ್ಟಿಕೊಡುತ್ತಿದ್ದರೆ, ಇಂದು ಅಳುವ  ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಆಲೋಚನಾ ಲಹರಿಯನ್ನು  ಕೇವಲ ಮೊಬೈಲ್ ಅಳತೆ ಮತ್ತು ಗಾತ್ರಕ್ಕೆ ಸಂಕುಚಿತಗೊಳಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಪ್ರತಿದಿನ ಬೆಳಗ್ಗೆ ಎಲ್ಲರ ಮನೆಗಳ ಮುಂದೆ ಇಡುತ್ತಿದ್ದ ರಂಗೋಲಿಯೇ ನಮ್ಮ ಹೆಣ್ಣುಮಕ್ಕಳ ಕಲಾವಂತಿಕೆಗೆ ಸಾಕ್ಷಿಯಾಗಿತ್ತು. ರಾವಣನಿಂದ  ಅಪಹರಿಸಲ್ಪಟ್ಟು ಲಂಕೆಯ ಅಶೋಕವನದಲ್ಲಿ ಬಂಧಿತಳಾಗಿದ್ದ ಸೀತಾದೇವಿ, ಕೇವಲ ರಾವಣನ ಕಾಲಿನ ಹೆಬ್ಬೆರಳನ್ನು ಮಾತ್ರಾ ನೋಡಿ ಮತ್ತು ಎಲ್ಲರಿಂದಲೂ ಆತನ ಶಾರೀರ ಮತ್ತು ಶರೀರದ  ಆಗಾಧೆಯನ್ನು  ಕೇಳಿ ಮನಸ್ಸಿನಲ್ಲಿ ರಾವಣನ ಕಲ್ಪನೆ ಮಾಡಿಕೊಂಡು ರಚಿಸಿದ್ದ ಚಿತ್ರಕ್ಕೆ ಜೀವಕಳೆ ಬಂದಿತ್ತು. ಅದೇ ರೀತಿಯಾಗಿ ಮಹಾಭಾರತದಲ್ಲಿ ಪಾಂಡವರು ಮಾಡುತ್ತಿದ್ದ ಯಾಗದ ಸಮಯದಲ್ಲಿ ಕೊಳ ಎಂದು ಭಾವಿಸಿ (3D Art ಪ್ರತೀಕ) ಚಿತ್ರದ ಮೇಲೆ ಕಾಲಿಟ್ಟು ಜಾರಿ ಬಿದ್ದಾಗ ದ್ರೌಪತಿ ನೋಡಿ ಅಪಹಾಸ್ಯ ಮಾಡಿದ್ದ ಪ್ರಸಂಗವನ್ನು ನೆನಪಿಸಿ ಹೀಗೆ ನಮ್ಮ ಪುರಾಣಗಳು ಮತ್ತು ಸಂಪ್ರದಾಯಗಳಲ್ಲಿ  ಚಿತ್ರಕಲೆ ಎನ್ನುವುದು ಜೀವನದಲ್ಲಿ ಹಾಸು  ಹೊಕ್ಕಾಗಿದ್ದು ದುರಾದೃಷ್ಟವಾಷಾತ್ ಇಂದು ಅದೆಲ್ಲವೂ ಮಾಯವಾಗುತ್ತಿದೆ ಎನ್ನುವಂತಹ ಸಂಧರ್ಭದಲ್ಲಿ ತಿರುಮಲ ಮತ್ತು ಅವರ ವಿದ್ಯಾರ್ಥಿಗಳ ಈ ಕಲಾ ಪ್ರದರ್ಶನದಿಂದ ನಮ್ಮ ಕಲೆಗೆ ಸಾವಿಲ್ಲಾ ಮತ್ತು ಅದು ಆಚಂದ್ರಾರ್ಕವಾಗಿ ಸೂರ್ಯ ಚಂದ್ರರು ಇರುವವರೆಗೂ ನಿರಂತವಾಗಿ ಇರುತ್ತದೆ  ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ತಿರುಮಲ ಮತ್ತು ಅವರ ವಿದ್ಯಾರ್ಥಿಗಳ ಸಾಧನೆಯನ್ನು ಮುಕ್ತ ಕಂಠದಿಂದ ಅಭಿನಂಧಿಸಿದರು.

ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಅನುಪ್ರಭಾಕರ್ ರವರು ಚಿಕ್ಕಂದಿನಲ್ಲಿ ನನ್ನಲ್ಲೂ ಚಿತ್ರ ಕಲಾವಿದೆ ಆಗಬೇಕೆಂಬ ಆಸಕ್ತಿ ಇತ್ತು. ಈಗ  ಅದನ್ನು ಅವರ ಏಳು ವರ್ಷದ ಮಗಳು ಸಾಕಾರ ಗೊಳಿಸುತ್ತಿರುವುದು ನಿಜಕ್ಕೂ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಲ್ಲದೇ, ತಾವು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರಣಕರ್ತೆಯಾದ ಮೇರು ಕಲಾಶಾಲೆಯ ವಿದ್ಯಾರ್ಥಿನಿ ಮತು  ತಮ್ಮ ಬಾಲ್ಯದ ಗೆಳತಿ/ ಸಹಪಾಠಿಯ ಚಿತ್ರಕಲಾ ಸಾಧನೆಯನ್ನು ಮುಕ್ತ ಕಂಠದಿಂದ ಹೊಗಳಿದ್ದಲ್ಲದೇ, ಪ್ರತಿಯೊಬ್ಬರೂ ಶಾಸ್ತ್ರಿಯವಾಗಿ ಗುರುಮುಖೇನ ವಿದ್ಯಾಭ್ಯಾಸ ಮಾಡಬೇಕೆಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಹಾಗೆ ಗಾಯಕಿ ಶಮಿತಾ ಮಲ್ನಾಡ್ ಅವರೂ ಸಹಾ  ಎಲ್ಲರಂತೆ ಚಿಕ್ಕವಯಸ್ಸಿನಲ್ಲಿ  ಬೆಟ್ಟ ಗುಡ್ಡದ ನಡುವೆ ಸೂರ್ಯ, ಅದರ ಸುತ್ತಲೂ  ಮರ, ಮರದ ಸುತ್ತ ಕಾಗೆಗಳನ್ನು ಬರೆಯುತ್ತಲೇ ಚಿತ್ರಕಲೆಯ ಬಗ್ಗೆ ಆಸಕ್ತಿಯನ್ನು ಹೊಂದಿದರೂ ನಂತರ ಅದು ಅಲ್ಲಿಗೆ ನಿಂತು ಹೋಗಿದೆ. ಆದರೆ ಇಲ್ಲಿ ಸಣ್ಣ ವಯಸ್ಸಿನಿಂದ ಹಿಡಿದು ದೊಡ್ಡವರೂ ಸಹಾ ರಚಿಸಿರುವ ಇಂತಹ ಚಿತ್ರಗಳನ್ನು ನೋಡುವಾಗ ತಮಗೂ ಸಹಾ ಇಂತಹ ಚಿತ್ರಗಳನ್ನು ಕಲಿತು ಬರೆಯಬೇಕೆಂಬ ತಮ್ಮ ಆಸೆಯಾಗುತ್ತಿದೆ ಎಂದು ಹೇಳಿದ್ದಲ್ಲದೇ, ಎಲ್ಲರ  ಪ್ರೀತಿ ಪೂರ್ವಕ ಒತ್ತಾಯದ ಮೇರೆಗೆ ಶೀತದಿಂದ ಗಂಟಲು ಬೇನೆಯಿಂದ ನರಳುತ್ತಿದ್ದರೂ, ಮಧುರಾ ಪಿಸುಮಾತಿಗೆ ಹಾಡಿನ ಚರಣವನ್ನು ಇಂಪಾಗಿ ಹಾಡಿ ಎಲ್ಲರನ್ನೂ ರಂಜಿಸಿದರು

ವೈದ್ಯಕೀಯ ರಂಗದಿಂದ ರಂಗಭೂಮಿ ಮತ್ತು ಸಂಗೀತದ ಹಿನ್ನಲೆಯನ್ನು ಹೊಂದಿದ್ದರಿಂದ ಕಲೆಯ ಮೇಲಿನ ಆಸಕ್ತಿಗಾಗಿ ಕಳೆದ ಮೂರ್ನಾಲ್ಕು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ, ನಟ, ನಿರ್ದೇಶಕ, ಸಂಭಾಷಣೆಗಾರ, ಚಿತ್ರ ಸಾಹಿತಿ, ಗೀತರಚನೆಕಾರ, ಸಂಗೀತ ನಿರ್ದೇಶಕ ಮತ್ತು ಚಲನ ಚಿತ್ರ ನಿರ್ದೇಶಕರಾಗಿ ದಕ್ಷಿಣ ಭಾರತದ ಅದರಲ್ಲೂ ವಿಶೇಷವಾಗಿ ಕನ್ನಡ ಬಹುತೇಕ ನಟ ನಟಿಯರೊಂದಿಗೆ ಕೆಲಸ ಮಾಡಿರುವ ಮತ್ತು ಮೇರು ಕಲಾಶಾಲೆಯ ಸಂಸ್ಥಾಪಕಿ ಶ್ರೀಮತಿ ತಿರುಮಲ ಅವರ  ಸಹೋದರರಾಗಿರುವ ಶ್ರೀ  ರಾಮನಾರಾಯಣ್ ಅವರು ತಮ್ಮ ಒಡಹುಟ್ಟಿದ ತಂಗಿಯಾದ ಶ್ರೀಮತಿ ತಿರುಮಲ ಶ್ರೀಕಾಂತ್ ಅವರ ಈ ಪರಿಯ ಸಾಧನೆ ನಿಜಕ್ಕೂ ಅವರಿಗೆ ಅಚ್ಚರಿಯಾಗಿದೆ ಎಂದರು. ಮನೆಯ ಮುದ್ದಿನ ಮಗಳಾಗಿ ಒಂದು ಸಾಮಾನ್ಯ ರಂಗೋಲಿಯನ್ನು ಇಡಲು ಬಾರದಿದ್ದಂತಹ ತಮ್ಮ ತಂಗಿ ಮದುವೆಯಾಗಿ ಗಂಡನ ಮನೆಗೆ ಹೋಗಿ ಉತ್ತಮ ಗೃಹಣಿಯಾಗಿ, ಮುದ್ದಿನ ಮಕ್ಕಳಿಗೆ ತಾಯಿಯಾಗಿ ಅದೊಮ್ಮೆ  ತಮ್ಮ ಜನ್ಮದಿನದಿಂದ ಉಡುಗೊರೆಯಾಗಿ ನೀಡಿದ ಚಿತ್ರವನ್ನು ನೋಡಿ, ಪ್ರೀತಿಯಿಂದ ಯಾಕಮ್ಮಾ!  ಇಷ್ಟು ದುಬಾರಿ ಉಡುಗೊರೆಯನ್ನು ನೀಡಿದೆ? ಎಂದು ಕೇಳಿದಾಗ, ಅಣ್ಣಾ ಇದು ನಾನೇ ರಚಿಸಿದ್ದು ಎಂದು ಹೇಳಿದಾಗ ಅವರಿಗೆ ಅಚ್ಚರಿಯಾಗಿತ್ತಂತೆ. ಅಂದು ಹವ್ಯಾಸವಾಗಿ ತಮ್ಮ ತಂಗಿ ಆರಂಭಿಸಿದ ಚಿತ್ರಕಲೆಯನ್ನು ಇಂದು ಕರಗತ ಮಾಡಿಕೊಂಡು ನೂರಾರು ಕಲಾವಿದರುಗಳಿಗೆ online/offline ಮೂಲಕ ಹೇಳಿಕೊಡುತ್ತಿರುವುದಲ್ಲದೇ ಇಂದು ಇಷ್ಟು ದೊಡ್ಡ ಮಟ್ಟದ ಮೇರೋತ್ಸವವನ್ನು ಆಯೋಜಿಸಿರುವುದು ಆಕೆಯ ಶಿಸ್ತು ಮತ್ತು ಶ್ರದ್ದೆಯೇ ಕಾರಣವಾಗಿದ್ದು, ಅದಕ್ಕೆ  ತಮ್ಮ ಭಾವ ಶ್ರೀಕಾಂತ್  ಮತ್ತು ಆವರ ಕುಟುಂಬದ ಸಹಕಾರವನ್ನು ಹೃದಯಪೂರ್ವಕವಾಗಿ ಅಭಿನಂದಿಸಿದರು.

ಕಾರ್ಯಕ್ರಮವಿಡೀ ಅದರಲ್ಲೂ ವಿಶೇಷವಾಗಿ ಸ್ಪಷ್ಟ ಕನ್ನಡದಲ್ಲಿ ಉತ್ತಮವಾದ ನಿರೂಪಣೆಯೊಂದಿಗೆ ಆರಂಭವಾಗಿ ಆಷ್ಟೇ ಚಂದವಾಗಿ ಕಾರ್ಯಕ್ರಮದ ಆಯೋಜನೆ ಮಾಡಲು ಸಹಕರಿಸಿದ ಆಯೋಜಕರಿಗೂ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದಾರ್ಪಣೆ ಮಾಡಿ ಸೃಗ್ರಾಸ ಭೋಜನದೊಂದಿಗೆ  ಉದ್ಘಾಟನಾ ಕಾರ್ಯಕ್ರಮ ಮುಗಿದರೂ, ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ ಎಂಬ ರೀತಿಯಂತೆ ಕಲಾಸಕ್ತ ಕಲಾಭಿಮಾನಿಗಳು ಒಬ್ಬರ ನಂತ ಮತ್ತೊಬ್ಬರು ನಿರಂತವಾಗಿ ಬರುತ್ತಿದ್ದರೆ, ಅವರೆಲ್ಲರಿಗೂ ಬಹಳ ತಾಳ್ಮೆಯಿಂದ ತಮ್ಮ ತಮ್ಮ ಕೃತಿಗಳ ಪರಿಚಯ ಮಾಡಿಕೊಡುತ್ತಾ, ಅವರ ಅಭಿಪ್ರಾಯಗಳನ್ನು ಪುಸ್ತಕದಲ್ಲಿ ವ್ಯಕ್ತಪಡಿಸಲು ತಿಳಿಸುತ್ತಾ ಅತ್ಯಂತ ಯಶಸ್ವಿಯಾಗಿ ಮೇರೋತ್ಸವವನ್ನು  ನೆಡೆಸಿಕೊಂಡು ಹೋಗುತ್ತಿದ್ದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಮೇರೋತ್ಸವದ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ನಂತರ, ಕಲಾವಿದರಾಗದೇ ಸಾಧ್ಯವಾಗದೇ ಹೋದರೂ, ಕಲಾಸಾಧಕರು ಮತ್ತು ಕಲಾ ಪೋಷಕರಾಗಲು ಖಂಡಿತವಾಗಿಯೂ ಸಾಧ್ಯವಿರುವ ಕಾರಣ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಮೇರು ಕಲಾಶಾಲೆಯವರ ಕಲಾಸಾಧನೆಯನ್ನು ಕಣ್ತುಂಬಿಸಿಕೊಂಡು ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸ್ತೀರಿ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment