ಇಡೀ ಭೂಮಂಡಲದ ಎಲ್ಲಾ ಚಟುವಟಿಕೆಗಳೂ ಸೂರ್ಯ ಮತ್ತು ಚಂದ್ರನ ಮೇಲೆಯೇ ಅವಲಂಭಿತವಾಗಿದ್ದು, ಅವುಗಳ ಚಲನ ವಲನದ ಆಧಾರಿತವಾಗಿ ಪ್ರತೀ ಸಂವತ್ಸರ(ವರ್ಷ)ವನ್ನು ಎರಡು ಅಯನಗಳಾಗಿ ವಿಂಗಡಿಸಲಾಗಿದೆ. ಉತ್ತರಾಯಣ (ಪುಷ್ಯಮಾಸದಿಂದ ಆಷಾಢಮಾಸದವರೆಗೆ) ಮತ್ತು ದಕ್ಷಿಣಾಯನ (ಆಷಾಡ ಮಾಸದಿಂದ ಪುಷ್ಯಮಾಸದವರೆಗೆ) ಹೀಗೆ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಉತ್ತರ ಧ್ರುವರೇಖೆಯಲ್ಲಿ ಕಾಣಿಸುವ ಕಾಲವನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಸೂರ್ಯನು ಪ್ರತೀ ರಾಶಿಯಲ್ಲಿಯೂ ಒಂದೊಂದು ತಿಂಗಳ ಕಾಲವಿದ್ದು, ಧನುರ್ ರಾಶಿಯಿಂದ ಮಕರ ರಾಶಿಗೆ ಸಾಧಾರಣವಾಗಿ ಪ್ರತೀ ವರ್ಷ ಜನವರಿ 14 ಅಥವಾ 15ರಂದು ಪ್ರವೇಶ ಮಾಡುವ ಮೂಲಕ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುವುದ ಕಾಲವನ್ನೇ ಉತ್ತರಾಯಣ ಪುಣ್ಯಕಾಲ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ದಕ್ಷಿಣಾಯನದಲ್ಲಿ ಹಗಲು ಕಡಿಮೆ ಇದ್ದು ರಾತ್ರಿ ಜಾಸ್ತಿ ಇರುತ್ತದೆ ಹಾಗಾಗಿಯೇ ಇದು ದೇವರುಗಳು ನಿದ್ರಿಸುವ ಸಮಯ ಎಂಬ ನಂಬಿಕೆಯಿದ್ದು ಅದೇ ಉತ್ತರಾಯಣದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಕತ್ತಲು ಕಡಿಮೆ ಇದ್ದು, ಬೆಳಕು ಹೆಚ್ಚಾಗಿರುವ ಕಾರಣ, ದೇವಾನು ದೇವತೆಗಳೂ ಸಹಾ ನಿದ್ದೆಯಿಂದ ಎದ್ದು ಜಾಗೃತರಾಗಿರುತ್ತಾರೆ ಎನ್ನಲಾಗುತ್ತದೆ. ಹಾಗಾಗಿಯೇ, ನಮ್ಮ ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆ ಇದ್ದು, ಈ ಸಮಯದಲ್ಲಿ ಮೃತರಾದವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇರುವ ಕಾರಣದಿಂದಲೇ, ಕುರುಕ್ಷೇತ್ರದ ಯುದ್ದದಲ್ಲಿ ತೀವ್ರವಾಗಿ ಗಾಯಗೊಂಡು ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ಅದು ದಕ್ಷಿಣಾಯನವಾಗಿದ್ದರಿಂದ, ಇಚ್ಚಾಮರಣಿಯಾದ ಭೀಷ್ಮರು, ಅರ್ಜುನ ನಿರ್ಮಿಸಿದ ಬಾಣಗಳ ಮಂಚದ ಮೇಲೆ ದಿನಗಳನ್ನು ಕಳೆದು ಪಾಂಡವರಿಗೆ ವಿಷ್ಣು ಸಹಸ್ರನಾಮವನ್ನು ಬೋಧಿಸಿ ನಂತರ ಉತ್ತರಾಯಣ ಪುಣ್ಯಕಾಲ ಬರುವವರೆಗೂ ಕಾದಿದ್ದು, ನಂತರ ಅಷ್ಟಮಿ ದಿನದಂದು ಇಚ್ಛಾ ಮರಣಿಯಾಗಿ ದೇಹತ್ಯಾಗ ಮಾಡುತ್ತಾರೆ ಎಂದು ಮಹಾಭಾರತದಲ್ಲಿ ತಿಳಿಸಲಾಗಿದೆ. ಅದೇ ರೀತಿಯಾಗಿ ಶ್ರೀಕೃಷ್ಣನೂ ಸಹಾ ಭಗದ್ಗೀತೆಯಲ್ಲಿ ಆಯಣಗಳಲ್ಲಿ ಉತ್ತರಾಯಣವೇ ಅತಿ ಶ್ರೇಷ್ಠ ಎಂದಿದ್ದಾನೆ.
ಇವಷ್ಟೇ ಅಲ್ಲದೇ, ಉತ್ತರಾಯಣ ಪುಣ್ಯಕಾಲದಲ್ಲೇ ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು, ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು, ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಾಹ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಎಲ್ಲವೂ ಸಹ ಈ ಉತ್ತರಾಯಣ ಕಾಲದಲ್ಲಿಯೇ ಎನ್ನುವ ನಂಬಿಕೆ ಇರುವ ಕಾರಣ, ಈ ಕಾಲದಲ್ಲೇ ಹಿಂದೂ ಸಂಪ್ರದಾಯದ ಬಹುತೇಕ ವಿವಾಹಗಳು, ನಾಮಕರಣ, ಚೌಲ, ಉಪನಯನ ಮತ್ತು ಗೃಹಪ್ರವೇಶಗಳಂತಹ ಶುಭ ಸಮಾರಂಭಗಳು ಹೆಚ್ಚಾಗಿ ಮಾಡಲ್ಪಡುತ್ತದೆ.
ಉತ್ತರಾಯಣದ ಪ್ರಾರಂಭ ಕಾಲ ಮಾಘ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಸೂರ್ಯನು ತನ್ನ ಪಥವನ್ನು ಬದಲಿಸಿ ಮತ್ತಷ್ಟೂ ಪ್ರಖರನಾಗಿ ಪ್ರಜ್ವಲಿಸುವುದಲ್ಲದೇ, ಇದು ಬೇಸಿಗೆಯ ಆರಂಭ ಸೂಚಕವಾಗಿದೆ. ಆರೋಗ್ಯಂ ಭಾಸ್ಕರಾದಿಚ್ಛೇತ್… ಎಂಬ ಶ್ಲೋಕದಂತೆ ಸೂರ್ಯನಿಂದಾಗಿ ಆರೋಗ್ಯವು ವೃದ್ಧಿಯಾಗುತ್ತದೆ ಮತ್ತು ಆಡು ಭಾಷೆಯಲ್ಲಿ ಸೂರ್ಯ ತನ್ನ ಹಳೆಯ ರಥವನ್ನು ಬಿಟ್ಟು ಹೊಸ ರಥ ಏರುತ್ತಾನೆ ಎಂದು ಹೇಳುವ ಕಾರಣ ಈ ದಿನವನ್ನು ಕೆಲವರು ಸೂರ್ಯನ ಜನ್ಮದಿನವೆಂದರೆ ಇನ್ನೂ ಹಲವರು ಇದನ್ನು ಅಚಲ ಸಪ್ತಮಿ ಅಥವಾ ರಥಸಪ್ತಮಿ ಎಂದು ಕರೆಯಲಾಗುತ್ತದೆ. ಉತ್ತರಾಯಣ ಆರಂಭ ಕಾಲದಲ್ಲಿ ವೈದಿಕರು ಸ್ನಾನ, ಆರು ರೀತಿಯ ತಿಲ ತರ್ಪಣ ಮೊದಲಾದವನ್ನು ಮಾಡುವುದಿದೆ. ಇನ್ನು ಸಪ್ತಮಿಯ ಸೂರ್ಯೋದಯ ಕಾಲದಲ್ಲಿ ಸೂರ‍್ಯಗ್ರಹಣದ ದಿನದಂತೆಯೇ ಆಸ್ತಿಕರು ತಲೆಗೆ ಸ್ನಾನ ಮಾಡಿ, ಅರ್ಘ್ಯ ಪ್ರದಾನ ಮಾಡಿದರೆ ಆರೋಗ್ಯ ಸಂಪತ್ತುಗಳು ಇಮ್ಮುಡಿಯಾಗುತ್ತವೆ ಎಂದು ಹಲವಾರು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮ ರಾವಣರ ಯುದ್ಧದ ಸಂಧರ್ಭದಲ್ಲಿ ಅಗಸ್ತ್ಯ ಮಹರ್ಷಿಗಳ ಉಪದೇಶದಂತೆ ಶ್ರೀ ರಾಮಚಂದ್ರನೂ ಕೂಡ ಆದಿತ್ಯ ಹೃದಯದ ಮೂಲಕ ಸೂರ್ಯ ಭಗವಾನನ ಉಪಾಸನೆ ಮಾಡಿದ್ದ ಎಂದು ರಾಮಾಯಣದಲ್ಲಿ ಉಲ್ಲೇಖವಿದೆ.
ದ್ವಾಪರ ಯುಗದಲ್ಲಿ ಪಾಂಡವರ ಅಜ್ಞಾತವಾಸ ವಾಸದ ಸಮಯದಲ್ಲಿ ಶ್ರೀ ಕೃಷ್ಣನು ಅವರಿಗೆ ರಥಸಪ್ತಮಿ ಬಗ್ಗೆ ತಿಳಿಸಿ ದ್ರೌಪತಿಯು ಶ್ರಧ್ಧಾ ಭಕ್ತಿಗಳಿಂದ ಸೂರ್ಯಾಧನೆ ಮಾಡಿದ ಪರಿಣಾಮವಾಗಿಯೇ ಸೂರ್ಯನಿಂದ ಅಕ್ಷಯಪಾತ್ರೆಯನ್ನು ಪಡೆದು ಅಂತಹ ಗೊಂಡಾರಣ್ಯದಲ್ಲಿಯೂ ಪ್ರತೀ ದಿನವು ಮೃಷ್ಟಾನ್ನ ಭೋಜನ ಮಾಡುತ್ತಿದ್ದರು ಎಂದು ಹೇಳುತ್ತದೆ ಪುರಾಣಗಳು. ಅದೇ ರೀತಿ ಯಶೋವರ್ಮನೆಂಬ ರಾಜನಿಗೆ ಜನಿಸಿದ ಮಗುವು ಹುಟ್ಟಿನಿಂದಲೇ ಖಾಯಿಲೆಗೆ ತುತ್ತಾಗಿ, ಕುಲಪುರೋಹಿತರನ್ನು ಈ ಕುರಿತು ವಿಚಾರಿಸಲು, ಸಂಚಿತಕರ್ಮದಿಂದ ಬಂದಿರುವ ಈ ರೋಗವು ರಥಸಪ್ತಮಿ ವ್ರತ ಆಚರಿಸಿದರೆ ಪರಿಹಾರವಾಗುತ್ತದೆ ಎಂಬುದಾಗಿ ಸೂಚಿಸಿದರು. ಅದೇ ಪ್ರಕಾರವಾಗಿ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದ ಪರಿಣಾಮವಾಗಿ ಮಗುವು ಆಯುರಾರೋಗ್ಯವಂತನಾದ ಎಂದು ಮತ್ತೊಂದು ದೃಷ್ಟಂತ ಹೇಳುತ್ತದೆ.
ಉತ್ತರಾಯಣದ ಪುಣ್ಯಕಾಲದ ಬಗ್ಗೆ ಇಷ್ಟೆಲ್ಲಾ ತಿಳಿದ ಮೇಲೆ, ಇನ್ನೇಕೆ ತಡಾ ಮಕರ ಸಂಕ್ರಮಣದಂದು ಸಡಗರಗಳಿಂದ ಸಂಕ್ರಾಂತಿ ಆಚರಿಸಿ, ರಥಸಪ್ತಮಿಯಂದು ಸೂರ್ಯನಮಸ್ಕಾರಗಳನ್ನು ಮಾಡುವ ಮೂಲಕ ಸೂರ್ಯನ ಕೃಪಾಶೀರ್ವಾದವನ್ನು ಪಡೆದು, ಮಾಘ ಮಾಸದಲ್ಲಿ ಹತ್ತಿರದ ನದಿ/ಸಮುದ್ರದಲ್ಲಿ ಮಾಘಸ್ನಾನ ಮಾಡಿ, ಚೈತ್ರಮಾಸದ ಯುಗಾದಿಯಂದು ಹೊಸಾ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿ, ಜೇಷ್ಠಮಾಸದಲ್ಲಿ ಮನೆಯಲ್ಲಿ ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶದಂತಹ ಶುಭಕಾರ್ಯಗಳನ್ನು ನೆರೆವೇರಿಸಿ ಉತ್ತರಾಯಣ ಪುಣ್ಯಕಾಲದ ಪುಣ್ಯಗಳನ್ನು ಪಡೆಯೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ 2026ರ ಜನವರಿ 15ರಂದು ತುಮಕೂರು ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾಗಿದೆ
